ಗೋಡೆಯಿಲ್ಲದ ಗೋಡೆಗಳ ನಡುವೆ ನಾನು ನಿಂತಿದ್ದೆ. ಕಾಲಡಿಯಲ್ಲಿ ಕತ್ತಲೆ, ಎದುರು ಬೆಳಕು, ಮೇಲೆ ಅನಂತ ಮಿಂಚು. ಹೂವುಗಳು ಗೋಡೆಯ ಮೇಲೆ ಅರಳುತ್ತಿವೆ; ಚಿಟ್ಟೆಗಳು ನನ್ನ ಉಸಿರಿನ ರಭಸಕ್ಕೆ ತಕ್ಕಂತೆ ಹಾರಾಡುತ್ತಿವೆ. ನಾನು ಕೈಚಾಚಿದಾಗ ಅವು ಬದಲಾಗುತ್ತಿವೆ. ಅದು ಚಿತ್ರವಲ್ಲ. ಅದು ಕನಸೂ ಅಲ್ಲ. ಅದು ಕಲೆ; ಆದರೆ ಕಾಗದವಿಲ್ಲದ, ಕುಂಚವಿಲ್ಲದ, ಬಣ್ಣವಿಲ್ಲದ ಕಲೆ!

ಅದು ಜಪಾನ್ನ ರಾಜಧಾನಿ ಟೋಕಿಯೊದಲ್ಲಿರುವ ‘ಟೀಮ್ ಲ್ಯಾಬ್ ಬಾರ್ಡರ್ಲೆಸ್ ಮ್ಯೂಸಿಯಂ’.

ಕಲೆಯನ್ನು ನಾವು ಸಾಮಾನ್ಯವಾಗಿ ಚೌಕಟ್ಟಿನೊಳಗೆ ನೋಡುವ ಅಭ್ಯಾಸ ಮಾಡಿಕೊಂಡಿದ್ದೇವೆ. ಅಂದರೆ, ಗೋಡೆಯ ಮೇಲೆ ನೇತುಹಾಕಿದ ಚಿತ್ರ, ಅದರ ಮುಂದೆ ನಿಂತು ನೋಡುವುದು. ಆದರೆ ಇಲ್ಲಿ ಗಡಿಗಳೇ ಇಲ್ಲ. ‘ಬಾರ್ಡರ್ಲೆಸ್’ ಎಂಬ ಹೆಸರು ಸೂಚಿಸುವಂತೆ, ಇಲ್ಲಿ ಚಿತ್ರಗಳು ಚಲಿಸುತ್ತವೆ, ಒಂದರೊಳಗೆ ಇನ್ನೊಂದು ಕರಗುತ್ತವೆ, ವೀಕ್ಷಕರ ಸ್ಪರ್ಶಕ್ಕೆ ಪ್ರತಿಕ್ರಿಯಿಸುತ್ತವೆ.

ಈ ಡಿಜಿಟಲ್ ಕಲಾ ಪ್ರಪಂಚವನ್ನು ರೂಪಿಸಿದವರು ಜಪಾನಿನ ಕಲಾ ಸಮೂಹ ಟೀಮ್ಲ್ಯಾಬ್. 2001ರಲ್ಲಿ ತೋಷಿಯುಕಿ ಇನೋಕೊ ಮತ್ತು ಅವರ ಸಂಗಾತಿಗಳ ನೇತೃತ್ವದಲ್ಲಿ ಆರಂಭವಾದ ಈ ಸಂಸ್ಥೆ ವಿಜ್ಞಾನ, ತಂತ್ರಜ್ಞಾನ, ಕಲೆ ಮತ್ತು ಪ್ರಕೃತಿ–ಇವುಗಳ ಸಂಗಮವನ್ನು ಕಲೆಯಲ್ಲಿ ಅನ್ವೇಷಿಸಲು ಮುಂದಾಯಿತು.

2018 ರಲ್ಲಿ ಟೋಕಿಯೊದ ಒಡೈಬಾ ಪ್ರದೇಶದಲ್ಲಿ ಮೊದಲ ಬಾರಿಗೆ ‘ಬಾರ್ಡರ್ಲೆಸ್’ ಮ್ಯೂಸಿಯಂ ಜನತೆಗೆ ತೆರೆದಿತು. ನಂತರ 2024ರಲ್ಲಿ ಇದು ಅಜಾಬುದೈ ಹಿಲ್ಸ್ ಸಂಕೀರ್ಣಕ್ಕೆ ಸ್ಥಳಾಂತರಗೊಂಡು ಹೊಸರೂಪದಲ್ಲಿ ಮತ್ತೆ ಅರಳಿತು. ಇಂದು ಟೋಕಿಯೊ ನಗರದ ಪ್ರಮುಖ ಸಾಂಸ್ಕೃತಿಕ ಆಕರ್ಷಣೆಗಳಲ್ಲಿ ಒಂದಾಗಿದೆ.

ಹತ್ತು ಸಾವಿರ ಚದರ ಮೀಟರ್ಗೂ ಅಧಿಕ ವಿಸ್ತೀರ್ಣದ ಈ ಕಲಾ ಸಾಗರದಲ್ಲಿ ದಾರಿ ತೋರಿಸುವ ಫಲಕಗಳಿಲ್ಲ. ಗೈಡ್ಗಳಿಲ್ಲ. ಕತ್ತಲೆಯ ಕೋಣೆಗಳಲ್ಲಿ ಸಾವಿರಾರು ಪ್ರೊಜೆಕ್ಟರ್ಗಳು ಕಣ್ಣಿಗೆ ಕಾಣದಂತೆ ಕೆಲಸ ಮಾಡುತ್ತವೆ. ಅತ್ಯಾಧುನಿಕ ಕಂಪ್ಯೂಟರ್ಗಳು ರಿಯಲ್-ಟೈಮ್ ಪ್ರೋಗ್ರಾಮಿಂಗ್ ಮೂಲಕ ಪ್ರತಿ ಕ್ಷಣ ಹೊಸ ದೃಶ್ಯಗಳನ್ನು ರಚಿಸುತ್ತವೆ.

ಇದು ಮುಂಚಿತವಾಗಿ ರೆಕಾರ್ಡ್ ಮಾಡಿರುವ ವಿಡಿಯೊ ಪ್ರದರ್ಶನವಲ್ಲ. ನೀವು ಹತ್ತಿರ ಬಂದಾಗ ಸೆನ್ಸರ್ಗಳು ನಿಮ್ಮ ಚಲನವಲನವನ್ನು ಗ್ರಹಿಸುತ್ತವೆ. ನಿಮ್ಮ ಸ್ಪರ್ಶ, ನಿಮ್ಮ ನೆರಳು, ನಿಮ್ಮ ಉಸಿರಾಟ ಎಲ್ಲವೂ ಕಲೆಯ ಭಾಗವಾಗುತ್ತವೆ. ಕ್ಷಣಕಾಲದ ಹಿಂದೆ ಕಂಡ ದೃಶ್ಯ ಮತ್ತೊಮ್ಮೆ ಕಾಣುವುದಿಲ್ಲ. ನಿಜವಾಗಿ ನೋಡಿದರೆ ಅಲ್ಲಿ ಕಪ್ಪು ಗೋಡೆಗಳು ಮಾತ್ರ. ಆದರೆ ಡಿಜಿಟಲ್ ಬೆಳಕು ಅವುಗಳನ್ನು ಅನಂತ ಜಗತ್ತಾಗಿ ರೂಪಿಸುತ್ತದೆ.

ಒಂದು ಕೋಣೆಯಲ್ಲಿ ಗೋಡೆಯೆಲ್ಲ ಬಣ್ಣಬಣ್ಣದ ಹೂಗಳು. ಚಿಟ್ಟೆಗಳು ಸುತ್ತಲೂ ಹಾರಾಟ. ನಾನು ಒಂದು ನೀಲಿ ಹೂವನ್ನು ಮುಟ್ಟಿದೆ. ಅದು ತಕ್ಷಣ ಹಳದಿಯಾಗಿ ಅರಳಿತು. ಅದರ ಸುತ್ತ ಇನ್ನಷ್ಟು ಹೂಗಳು ಮಿಂಚಿದವು. ಅಲ್ಲಿಂದ ಚಿಟ್ಟೆಗಳು ಭುರ್ರನೆ ಹಾರಿದವು. ಕ್ಷಣಕಾಲದಲ್ಲಿ ದೃಶ್ಯ ಬದಲಾಯಿತು.

‘ಪರಿವರ್ತನೆ ಜಗದ ನಿಯಮ’ಎನ್ನುವ ಮಾತು ಅಚಾನಕ್ ಮನಸ್ಸಿನಲ್ಲಿ ಮಿಂಚಿತು. ಕಳೆದುಹೋದ ಹೂವಿಗಾಗಿ ಮರುಗಬೇಕಿಲ್ಲ; ಹೊಸ ಬಣ್ಣವನ್ನು ಸ್ವೀಕರಿಸಬೇಕು. ಕಲೆ ಇಲ್ಲಿ ಕೇವಲ ದೃಶ್ಯವಲ್ಲ; ಅದು ಬೋಧನೆ.

ಮತ್ತೊಂದು ಕೋಣೆಯಲ್ಲಿ ಮೇಲಿನಿಂದ ಇಳಿಬಿಟ್ಟ ನೂರಾರು ಗಾಜಿನ ದೀಪಗಳು. ಗೋಡೆಗಳೆಲ್ಲ ಕನ್ನಡಿಗಳು. ಎತ್ತ ನೋಡಿದರೂ ಬೆಳಕು, ಕೆಳ ನೋಡಿದರೂ ಬೆಳಕು–ಅನಾದಿ ಅನಂತ ಪ್ರಕಾಶ.

ಒಂದು ದೀಪಕ್ಕೆ ಬೆರಳ ತುದಿ ಸೋಕಿಸಿದೆ. ಆ ಬೆಳಕು ಪಕ್ಕದ ದೀಪಕ್ಕೆ ಹರಡಿತು. ಕ್ಷಣಕಾಲದಲ್ಲಿ ಮಹಾಪ್ರವಾಹದಂತೆ ಕೋಣೆಯೆಲ್ಲ ಮಿನುಗಿತು. ನಂತರ ನಿಧಾನವಾಗಿ ಮಂದವಾಯಿತು.

ಅದು ಪಿಸುನುಡಿಯಿತು–‘ನಿನ್ನಿಂದ ಏನು ಸಾಧ್ಯ?’ ಎಂದು ಅಲ್ಲ, ‘ನಿನ್ನಿಂದ ಏನೆಲ್ಲಾ ಸಾಧ್ಯ? ಎಂದು ಯೋಚಿಸು’. ಸಣ್ಣ ಸ್ಪರ್ಶವೂ ಇಲ್ಲಿ ದೊಡ್ಡಪ್ರಭಾವ ಬೀರುತ್ತದೆ.

ಸ್ಥಾವರಕ್ಕೆ ಅಳಿವುಂಟು... ಈ ಮ್ಯೂಸಿಯಂ ಗೋಡೆಯ ಅಂದ ಹೆಚ್ಚಿಸಲು ರಚಿಸಿದ ಚಿತ್ರಗಳಲ್ಲ. ಚಪ್ಪಾಳೆಗಾಗಿ ಸೃಷ್ಟಿಸಿದ ಪ್ರದರ್ಶನಗಳಲ್ಲ. ಇಲ್ಲಿ ನೀವು ಕೇವಲ ವೀಕ್ಷಕರಲ್ಲ; ಸಹ ಸೃಷ್ಟಿಕರ್ತರು.

ಕಲೆಯು ಇಲ್ಲಿ ನದಿಯಂತೆ ಹರಿಯುತ್ತದೆ. ನಿರಂತರ, ನೂತನ, ಸ್ವಚ್ಚ. ಕ್ಷಣಕ್ಷಣವೂ ಬದಲಾಗುತ್ತದೆ. ಅದನ್ನು ಹಿಡಿದುಕೊಳ್ಳಲು ಸಾಧ್ಯವಿಲ್ಲ. ಅನುಭವಿಸಬೇಕು. ಹೊರಬಂದಾಗ ಮನದಲ್ಲಿ ಅನುರಣಿಸಿದ ಮಾತು–‘ಸ್ಥಾವರಕೆ ಅಳಿವುಂಟು; ಜಂಗಮಕ್ಕೆ ಇಲ್ಲ.’

ಡಿಜಿಟಲ್ ಕಲೆ ಇಲ್ಲಿ ಯಾಂತ್ರಿಕತೆಯ ಪ್ರದರ್ಶನವಲ್ಲ. ಅದು ಭಾವಗಳ ಮೆರವಣಿಗೆ. ಅಲೌಕಿಕದ ಧ್ಯಾನ. ಶುದ್ಧ ಸಂತೋಷ.

ಬೆಳಕಿನ ನಡುವೆ ನಾನು ನಿಂತಿದ್ದೆ. ಆದರೆ ನಿಜವಾಗಿ ನೋಡಿದರೆ, ಬೆಳಕೇ ನನ್ನೊಳಗೆ ನಿಂತಿತ್ತು!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.