ಕಲಬುರಗಿಯ ಪ್ರೇಕ್ಷಕರು ರಂಗದ ಮೇಲೆ ಬೊಂಬೆಯಾಟದ ಕಲಾಪ್ರದರ್ಶನ ನೋಡಿ ಬಹಳ ಕಾಲವೇ ಆಗಿತ್ತು. ಕಲಬುರಗಿ ನಾಟಕೋತ್ಸವ ಇಂಥದ್ದೊಂದು ಪ್ರಯೋಗವನ್ನು ನೋಡುವ ಅವಕಾಶ ಕಲ್ಪಿಸಿತ್ತು. ದೆಹಲಿಯ ಕಟ್ ಕಥಾ ಪಪೆಟ್ ಟ್ರಸ್ಟ್ನವರ ‘ಅಬೌಟ್ ರಾಮ್’ ಪ್ರದರ್ಶನ ಬೊಂಬೆಯಾಟದ ಆಧುನಿಕ ಕಲಾ ಸಾಧ್ಯತೆಗಳನ್ನು ತೆರೆದಿಟ್ಟಿತು. ಪ್ರಸಿದ್ಧ ಬೊಂಬೆಯಾಟ ಪ್ರದರ್ಶಕಿ ಅನುರೂಪಾ ರಾಯ್ ನಿರ್ದೇಶನದಲ್ಲಿ ಇದು ಮೂಡಿಬಂತು.

ಮಾತುಗಳಿಲ್ಲದೆ ಕೇವಲ ಸಂಗೀತ ಮತ್ತು ಹಲವು ಬಗೆಯ ಸದ್ದುಗಳ ಬಳಕೆಯಿಂದ ರಾಮಾಯಣದ ಪ್ರಸಂಗಗಳನ್ನು ನಿರೂಪಿಸಿದ್ದರು. ಸಾಂಪ್ರದಾಯಿಕ ಕಲಾ ಪ್ರಕಾರ ಇಲ್ಲಿ ಕೊಲಾಜ್ ಮಾದರಿಯ ರೂಪು ಪಡೆದಿತ್ತು. ತೊಗಲ ಬೊಂಬೆ, ಚಿತ್ರಪಟದ ಬೊಂಬೆ, ಕೈಗವಸಿನ ಬೊಂಬೆ, ಸೂತ್ರದ ಬೊಂಬೆ, ಬುನ್ರಾಕ್ ಬೊಂಬೆ, ಮುಖವಾಡಗಳು, ನಟರನ್ನು ಏಕಕಾಲಕ್ಕೆ ಒಳಗೊಂಡ ಪ್ರಯೋಗವಿದು.

ಬೊಂಬೆ ಮತ್ತು ನಟರ ಮುಖಾಮುಖಿ ಅಚ್ಚರಿಗೊಳಿಸುವಷ್ಟು ಹೊಸತನದಿಂದ ಕೂಡಿತ್ತು. ಮೈಮ್ನ ಆಕರ್ಷಕ ಅಭಿವ್ಯಕ್ತಿ ಒಂದೆಡೆಯಾದರೆ, ಬೊಂಬೆಗಳ ಮಾಂತ್ರಿಕ ದೈಹಿಕ ಚಲನೆ ಇನ್ನೊಂದೆಡೆ. ರಾಮಾಯಣದ ಕತೆ, ಬೊಂಬೆಯಾಟದ ಕಲೆ, ಗ್ರಾಫಿಕ್ಸ್ ತಂತ್ರಜ್ಞಾನವನ್ನು ಸೇರಿಸಿ ಪ್ರಯೋಗವನ್ನು ಅಣಿಗೊಳಿಸಲಾಗಿತ್ತು. ಹಲವು ಕಲಾ ಸಾಧ್ಯತೆಗಳನ್ನು ಏಕಸೂತ್ರದಲ್ಲಿ ಹೊಂದಿಸುವ ಪ್ರಯತ್ನವಿದು. ಹೊಸ ಪ್ರೇಕ್ಷಕರನ್ನು ಹೊಸ ರೀತಿಯಲ್ಲಿ ತಲುಪುವ ವಿಧಾನವಿದು. ಪರಂಪರೆ ಮತ್ತು ಆಧುನಿಕತೆಗಳ ಸಂಗಮದಂತಿತ್ತು.

ರಂಗಭೂಮಿಯನ್ನು ಕ್ರಿಯಾಶೀಲಗೊಳಿಸುವ ಮಾರ್ಗಗಳಲ್ಲಿ ಇದೂ ಕೂಡ ಒಂದು. ಹಳೆಯದು ಮತ್ತು ಹೊಸದು, ಪರಂಪರೆ ಮತ್ತು ಆಧುನಿಕತೆ ಇಂಥ ಭೇದಗಳು ಅಳಿದು ಎಲ್ಲವೂ ರಂಗದ ಮೇಲೆ ರೂಪಾಂತರಗೊಳ್ಳುತ್ತಿರುವುದರ ಸೂಚನೆಯಂತಿತ್ತು. ಸ್ವಾತಂತ್ರ್ಯ, ಮುಕ್ತತೆ, ಪ್ರಯೋಗಶೀಲತೆಯಿಂದ ಹಳೆಯ ಕಲಾಪ್ರಕಾರಗಳು ಕೂಡ ಬೆಳಗಿಕೊಳ್ಳುತ್ತವೆ. ಆಧುನಿಕ ರಂಗಭೂಮಿಯ ಜಾಡ್ಯತೆಯನ್ನು ಕೊಂಚ ಅಲುಗಾಡಿಸುತ್ತವೆ. ಬೊಂಬೆಯಾಟದ ವಿಕಸಿತ ರಂಗರೂಪವಿದು.

ಸೀತೆ ಅಪಹರಣವಾದ ಮೇಲೆ ರಾಮ ದುಃಖದಲ್ಲಿ ತೊಳಲಾಡುತ್ತಿರುವುದರ ಮೂಲಕ ನಾಟಕ ಆರಂಭವಾಯಿತು. ಅಶೋಕವನದಲ್ಲಿ ಏಕಾಂಗಿ ಸೀತೆ, ಹನುಮಂತನ ಪ್ರವೇಶ, ಲಂಕೆಯನ್ನು ಬೆಂಕಿಗೆ ಆಹುತಿಯಾಗಿಸಿದ್ದು, ರಾಮ ಹಾಗೂ ರಾವಣರ ನಡುವಿನ ಯುದ್ಧ, ಸೀತೆಯ ಆಗಮನ, ಆಕೆಯ ಶೀಲದ ಕುರಿತ ಶಂಕೆ, ಸೀತೆ ಭೂಮಿಯ ಒಡಲೊಳಗೆ ಸೇರಿದ್ದು ಕೊನೆಗೆ ರಾಮ ಪಟ್ಟದ ಮೇಲೆ ವಿಷಣ್ಣನಾಗಿ ಕುಳಿತುಕೊಳ್ಳುವುದರೊಂದಿಗೆ ನಾಟಕಕ್ಕೆ ತೆರೆ ಬಿದ್ದಿತ್ತು.

ಸೀತೆಯದೂ ಕೂಡ ಅದೇ ಪಾಡು. ಅಶೋಕವನದಲ್ಲೂ ಆಕೆ ಏಕಾಂಗಿ, ಇನ್ನೇನು ರಾಮನೊಂದಿಗೆ ಜೀವನ ಆರಂಭಿಸಬೇಕೆಂದುಕೊಂಡಾಗ ಅದಕ್ಕೆ ಅವಕಾಶವಾಗದು. ರಾಮ ನಾಟಕದ ಆರಂಭದಲ್ಲೂ ಏಕಾಂಗಿ, ಮುಕ್ತಾಯದಲ್ಲೂ ಏಕಾಂಗಿ. ಒಟ್ಟಿನಲ್ಲಿ ರಾಮನಿಗೆ ಏಕಾಂಗಿ ಜೀವನ ತಪ್ಪಿದ್ದಲ್ಲ. ಹೊರಗಿನ ಎಲ್ಲಾ ಯುದ್ಧಗಳನ್ನು ಗೆದ್ದ ಮೇಲೂ ಆತನ ಮನಸ್ಸಿನಲ್ಲಿ ನಡೆಯುತ್ತಿರುವ ಯುದ್ಧ ನಿಲ್ಲುತ್ತಿಲ್ಲ. ಆತನ ಮನೋರಂಗವೂ ಒಂದು ರಣರಂಗವಾಗಿಯೇ ಪರಿವರ್ತನೆಯಾಗಿದೆ. ಅಲ್ಲಿ ಮತ್ತೆ ಮತ್ತೆ ಗಾಯಗೊಳ್ಳುತ್ತಿರುವವನು ಸ್ವತಃ ರಾಮ. ರಾಮನಿಗೆ ಅದೆಷ್ಟು ಗಾಯಗಳು. ನಾಟಕದ ಕೊನೆಯಲ್ಲಿ ಪಟ್ಟದ ಮೇಲೆ ಮೂಕವಾಗಿ ಬಂದು ಕುಳಿತ ರಾಮನ ಮೂಕವೇದನೆ ಪ್ರೇಕ್ಷಕರಿಗೆ ತಾಕಿದಂತ್ತಿತ್ತು. ಪರಿಚಿತವಿರುವ ಕತೆಯ ಎಳೆಗಳು ಬೊಂಬೆಗಳ ಮೂಲಕ ಬಿಚ್ಚಿಕೊಂಡಿತ್ತು. ಹಾಗೆ ನೋಡಿದರೆ ಕತೆ ಇಲ್ಲಿ ಮುಖ್ಯವೇ ಅಲ್ಲ. ಕತೆಯ ನಿರೂಪಣೆಯೇ ಮುಖ್ಯ ಎನ್ನುವಂತಿತ್ತು.

ಈ ಬೊಂಬೆಯ ಕಲಾ ಪ್ರದರ್ಶನದಲ್ಲಿ ನಿರ್ದೇಶಕರ ಕಲ್ಪನೆ ಒಂದೆಡೆಯಾದರೆ, ಈ ಬೊಂಬೆಗಳ ದೇಹದ ಪ್ರಮಾಣ ಕೊಡುವ ಸೂಚನೆಗಳು ಇನ್ನೊಂದೆಡೆ. ತಮ್ಮ ನಟನೆಯ ಸೂಚನೆಗಳನ್ನು ಇವುಗಳ ದೇಹಾಕೃತಿಗಳೇ ನಿರ್ಧರಿಸುತ್ತವೆ. ಅವುಗಳ ದೇಹ ಪ್ರಮಾಣದಿಂದಾಗಿ ಹಿಗ್ಗುವಿಕೆ ಮತ್ತು ಕುಗ್ಗುವಿಕೆ ನಿರ್ಧಾರಗೊಳ್ಳುತ್ತದೆ. ಯಾವ ಸ್ತರದಲ್ಲಿ ಅವುಗಳ ಚಲನೆಯನ್ನು ಕೈಗೊಳ್ಳಬಹುದು ಎಂಬುದು ನಿರ್ದೇಶಕರಿಗೆ ಹೊಳೆಯುತ್ತದೆ. ಕತೆಯ ಸಂದರ್ಭಕ್ಕೆ ತಕ್ಕಂತೆ ಇವುಗಳ ಚಲನೆಯ ಗತಿಯನ್ನು ನಿರ್ಧರಿಸಿದ್ದು ಅನುರೂಪಾ ರಾಯ್ ಅವರ ಸೂಕ್ಷ್ಮತೆಗೆ ಸಾಕ್ಷಿಯಾಗಿತ್ತು. ದುಃಖದಲ್ಲಿ ಕೂತ ರಾಮ, ವ್ಯಗ್ರತೆಯಿಂದ ಕಾದಾಡುತ್ತಿದ್ದ ರಾಮನ ನಡುವೆ ಎಷ್ಟೆಲ್ಲಾ ವ್ಯತ್ಯಾಸವಿತ್ತು. ಎರಡೂ ಕೂಡ ಒಂದೇ ಬೊಂಬೆ. ಆದರೆ ಸೂತ್ರಧಾರರ ಕೈಚಳಕ ಅವುಗಳ ಸ್ವಭಾವವನ್ನೆ ಬದಲಾಯಿಸಿತ್ತು.

ಬೊಂಬೆ ನಿರ್ಜೀವವಾದದ್ದು. ಆದರೆ ನಟರ ಸಹಾಯದಿಂದ ಅವು ಜೀವಂತಗೊಂಡು, ಜೀವಂತ ಕತೆಯನ್ನು ಮಂಡಿಸಿದವು. ಬೊಂಬೆಗಳ ಮುಖಭಾವ ಯಾವಾಗಲೂ ಸ್ಥಿರವಾದದ್ದು. ಆದರೆ ಅವುಗಳ ಆಂಗಿಕ ಚಲನೆಯ ಮುಖಾಂತರ ಅವುಗಳ ಭಾವಲೋಕ ಹೊರಹೊಮ್ಮುತ್ತಿತ್ತು. ಕೆಲವೊಂದು ಬೊಂಬೆಗಳನ್ನು ನಿರ್ವಹಿಸಲು ಒಬ್ಬ ಸೂತ್ರಧಾರ ಮಾತ್ರವಿದ್ದರೆ, ರಾಮನ ಬೊಂಬೆಯನ್ನು ನಿರ್ವಹಿಸಿಲು ಮೂವರು ಸೂತ್ರಧಾರರಿದ್ದರು.

ರಾಮ ಬುನ್ರಾಕ್ ಬೊಂಬೆಯ ರೂಪದಲ್ಲಿದ್ದ. ಬೊಂಬೆಯ ಸೊಂಟ ಮತ್ತು ಕೈ ಒಬ್ಬ ನಟನ ಕೈಯಲ್ಲಿದ್ದರೆ, ಇನ್ನೊಂದು ಕೈ ಮತ್ತು ತಲೆ ಇನ್ನೊಬ್ಬ ನಟನ ಕೈಯಲ್ಲಿತ್ತು. ಎರಡೂ ಕಾಲುಗಳನ್ನು ಆಡಿಸಲು ಹಿಮ್ಮಡಿ ಹಿಡಿದುಕೊಂಡ ಮತ್ತೊಬ್ಬ ನಟನಿದ್ದ. ಮೂವರ ಕೈಚಳಕ ಮತ್ತು ಸಮನ್ವಯತೆಯಲ್ಲಿ ಅಪೂರ್ವ ಸಿದ್ಧಿಯಿತ್ತು. ಮನುಷ್ಯರಂತೆಯೇ ಬೊಂಬೆ ವರ್ತಿಸುತ್ತಿತ್ತು. ಇದಕ್ಕಿಂತಲೂ ವಿಶೇಷವಾದದ್ದೆಂದರೆ ಮನುಷ್ಯರಿಗೆ ಸಾಧ್ಯವಾಗದ್ದನ್ನೂ ಬೊಂಬೆ ಅಭಿನಯಿಸಿ ತೋರಿಸುತ್ತಿತ್ತು. ಬೊಂಬೆಯಾಡಿಸುತ್ತಿದ್ದ ನಟರು ಯಾಂತ್ರಿಕವಾಗಿ, ಅವರ ಕೈಯಲ್ಲಾಡುತ್ತಿದ್ದ ಬೊಂಬೆ ಜೀವಂತವಾಗಿ ತೋರಹತ್ತಿದವು. ನಿರ್ದೇಶಕರು ಇನ್ನೂ ಹೊಸ ತಂತ್ರಗಳಿಗೆ ಅವಕಾಶ ಕಲ್ಪಿಸಿದ್ದರು. ಬೊಂಬೆಯಾಡಿಸುತ್ತಿದ್ದ ನಟರೇ ಒಮ್ಮೊಮ್ಮೆ ಪಾತ್ರಧಾರಿಗಳಾಗಿ ಬೊಂಬೆಗಳೊಂದಿಗೆ ಕಾದಾಟಕ್ಕಿಳಿಯುತ್ತಿದ್ದರು. ಆಡಿಸುವವನೇ ಎದುರಾಳಿಯಾದಾಗ ನಾಟಕಕ್ಕೆ ಇನ್ನಷ್ಟು ಕಳೆಗಟ್ಟಿತ್ತು. ಪರಂಪರಾಗತ ಕಲಾಪ್ರದರ್ಶನಗಳನ್ನು ಕರಗಿಸಿ ಹೊಸ ಅಚ್ಚಿಗೆ ಎರಕಹೊಯ್ಯುವ ದಾರಿಗಳನ್ನು ಈ ಪ್ರದರ್ಶನ ದಿಟ್ಟವಾಗಿ ಕಾಣಿಸಿತ್ತು.

ಬೊಂಬೆಯಾಟವು ಕೇವಲ ಪರಂಪರೆಯ ಅವಶೇಷವಲ್ಲ; ಅದು ಸಮಕಾಲೀನ ರಂಗಭಾಷೆಯ ಸಾಧ್ಯತೆಯೂ ಹೌದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.