ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಇದೋ... ಲ್ಯಾಮಿನೇಟೆಡ್ ಟಂಕಸಾಲ!

Published : 24 ಆಗಸ್ಟ್ 2024, 22:30 IST
Last Updated : 24 ಆಗಸ್ಟ್ 2024, 22:30 IST
ಫಾಲೋ ಮಾಡಿ
Comments

ಅದು 1895. ‘ಶ್ರೀ ವೆಂಕಟೇಶ್ವರ ಮುದ್ರಾಕ್ಷರಶಾಲ’ ಸ್ಥಾಪನೆಯಾದ ವರ್ಷ. ಟಿ.ಎನ್. ಕೃಷ್ಣಯ್ಯ ಶೆಟ್ಟಿ ಅದರ ಮಾಲೀಕರಾಗಿದ್ದರು. ಆಗ ನಮ್ಮ ರಾಜ್ಯದಲ್ಲಿ ಬೆರಳೆಣಿಕೆಯಷ್ಟು ಮುದ್ರಣಾಲಯಗಳು ಮಾತ್ರ ಇದ್ದವು.

ಕೃಷ್ಣಯ್ಯ ಶೆಟ್ಟಿ ಅವರ ಪೂರ್ವಜರು ಮೈಸೂರು ಸಂಸ್ಥಾನದಲ್ಲಿ ಟಂಕಸಾಲ ನಡೆಸುತ್ತಿದ್ದರು. ಆ ಕಾಲದಲ್ಲಿಯೇ ಸಂಸ್ಥಾನಕ್ಕೆ ಅಗತ್ಯವಿದ್ದ ನಾಣ್ಯಗಳು, ಶಾಸನಗಳು, ಓಲೆಪತ್ರಗಳನ್ನು ಟಂಕಿಸಿಕೊಡುತ್ತಿದ್ದರು. ‘ಅತ್ಯುತ್ತಮ ಟಂಕಸಾಲ’ ಗೌರವ ಕೂಡ ಅದಕ್ಕೆ ಲಭಿಸಿತ್ತು. ಕುಟುಂಬಸ್ಥರ ಹೆಸರುಗಳ ಪಕ್ಕ ‘ಟಂಕಸಾಲ’ ಎನ್ನುವ ಕ್ರಿಯಾವಿಶೇಷಣ ಪದ ಸೇರ್ಪಡೆಗೊಂಡಿದ್ದೇ ಆ ಗೌರವ ಪ್ರಾಪ್ತಿಯಾದ ನಂತರ.

ಇಂತಹ ಕುಟುಂಬದ ಕುಡಿ ಟಿ.ಎಸ್. ನಾಗರಾಜ; ಕೃಷ್ಣಯ್ಯ ಶೆಟ್ಟರ ಮೊಮ್ಮಗ. ಅವರ ಹೆಸರಿನಲ್ಲಿನ ‘ಟಿ’ ಎನ್ನುವುದರ ವಿಸ್ತೃತ ರೂಪ ಕೂಡ ‘ಟಂಕಸಾಲ’. ಬೆಂಗಳೂರಿನ ಚಾಮರಾಜಪೇಟೆಯ ‘ಗೌರಿ ಲ್ಯಾಮಿನೇಟರ್ಸ್‌’ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ನಾಗರಾಜ ಇವರೇ. ಇವತ್ತು ಮಾತೆತ್ತಿದರೆ ‘ಲ್ಯಾಮಿನೇಷನ್’ ಎನ್ನುತ್ತೇವಲ್ಲ, ಅಂತಹುದೊಂದು ತಂತ್ರಜ್ಞಾನವನ್ನು ನಮ್ಮ ರಾಜ್ಯದಲ್ಲಿ ಮೊದಲು ಪರಿಚಯಿಸಿದವರೇ ಇವರು.

ನಾಗರಾಜ ಅವರು ‘ಗೌರಿ ಲ್ಯಾಮಿನೇಟರ್ಸ್‌’ ಸ್ಥಾಪಿಸಿದ್ದು 1982ರಲ್ಲಿ. ಒಮ್ಮೆ ಅವರು ಬಾಂಬೆಗೆ ಹೋಗಿದ್ದರು. ಅಲ್ಲಿ ಆಪ್ತರೊಬ್ಬರ ಬಳಿ ಇದ್ದ ನರರೋಗಕ್ಕೆ ಸಂಬಂಧಿಸಿದ ಪುಸ್ತಕವೊಂದು ಕಣ್ಣಿಗೆ ಬಿದ್ದಿತು. ಅದರ ಮೇಲೆ ಬಿದ್ದ ಬೆಳಕು ಪ್ರತಿಫಲಿಸುತ್ತಿತ್ತು. ಥಟ್ಟನೆ ಆ ಪುಸ್ತಕ ಗಮನ ಸೆಳೆಯಿತು. ಮುಟ್ಟಿದಾಗ ಅದರ ಮೇಲೊಂದು ಪ್ಲಾಸ್ಟಿಕ್ ಹೊದಿಕೆ ಇರುವುದು ಗೊತ್ತಾಯಿತು. ಆ ಪುಸ್ತಕ ಮುದ್ರಿಸಿದ್ದ ಸಂಸ್ಥೆಯನ್ನು ಹುಡುಕಿಕೊಂಡು ಹೋದರು. ಅದು ಲ್ಯಾಮಿನೇಟ್ ಮಾಡಿರುವ ಮುಖಪುಟ ಎನ್ನುವುದು ಗೊತ್ತಾಯಿತು. ಹೀಗೆ ಲ್ಯಾಮಿನೇಟ್‌ ಮಾಡಲು ಪ್ರತ್ಯೇಕ ಯಂತ್ರ ಇತ್ತು. ಅದನ್ನು ಖುದ್ದು ನೋಡಿದರು. ತಮ್ಮ ಪ್ರಕಾಶನ ಸಂಸ್ಥೆಗೂ ಅದು ಬೇಕೆಂದು ಥಟ್ಟನೆ ನಿರ್ಧರಿಸಿದರು. ಯಂತ್ರ ತಯಾರಿಸಿಕೊಡುವ ಕಂಪನಿಗೆ ಆರ್ಡರ್‌ ಕೊಟ್ಟರು. ಎರಡು ತಿಂಗಳ ನಂತರ ಆ ಯಂತ್ರ ಬೆಂಗಳೂರಿಗೆ ತಲುಪಿತು.

1982ರಲ್ಲಿ ಆ ಯಂತ್ರದ ಬೆಲೆ 50 ಸಾವಿರದಿಂದ 55 ಸಾವಿರ ರೂಪಾಯಿ ಇತ್ತು. ಆಗ ಅದು ಬಹಳ ದೊಡ್ಡ ಮೊತ್ತ. ಅಷ್ಟೊಂದು ಹಣ ಕೈಯಲ್ಲಿ ಇರಲಿಲ್ಲ. ಬ್ಯಾಂಕ್‌ನಲ್ಲಿ ಸಾಲ ಕೇಳಲು ಹೋದರು. ಅಂತಹುದೊಂದು ಯಂತ್ರದಿಂದ ಬಂಡವಾಳ ಮರಳುತ್ತದೆ ಎನ್ನುವ ವಿಶ್ವಾಸ ಬ್ಯಾಂಕ್‌ ವ್ಯವಸ್ಥಾಪಕರಿಗೆ ಇರಲಿಲ್ಲ. ಸಾಲ ಕೊಡಲು ಒಪ್ಪಲಿಲ್ಲ. ಆಮೇಲೆ ಸಹಕಾರ ಬ್ಯಾಂಕ್‌ನಿಂದ ಸಾಲ ಪಡೆದುಕೊಂಡರು.

ಅಷ್ಟು ಕಷ್ಟಪಟ್ಟು ಖರೀದಿಸಿದ ಆ ಯಂತ್ರ ಈಗಲೂ ಕೆಲಸ ಮಾಡುವುದನ್ನು ನೋಡಿದರೆ ಕಣ್ಣರಳುತ್ತದೆ.

ನಾಗರಾಜ ಅವರು ಮುದ್ರಣ ತಂತ್ರಜ್ಞಾನದ ಆವಿಷ್ಕಾರಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಬಂದವರಷ್ಟೆ ಅಲ್ಲ, ಅಗತ್ಯಕ್ಕೆ ತಕ್ಕಂತೆ ಯಂತ್ರಗಳನ್ನೇ ಮರ್ಪಾಟು ಮಾಡುವಂತೆ ಮಾಡಿದ ಅಪರೂಪದವರು. 1985–86ರಲ್ಲಿ ಪ್ಯಾಂಕಿಂಗ್ ಉದ್ಯಮವು ಸಮಸ್ಯೆಯೊಂದನ್ನು ಎದುರಿಸುತ್ತಿತ್ತು. ಆಗೆಲ್ಲ ಒಂದು ಶೀಟ್ಅಳತೆಗೆ ಮಾತ್ರ ‘ಸ್ಟ್ರಿಪ್ ಲ್ಯಾಮಿನೇಷನ್’ ಮಾಡುವಂತಹ ಯಂತ್ರ ಇತ್ತು. ಪ್ಯಾಕಿಂಗ್‌ ಉದ್ಯಮದ ಅಗತ್ಯಕ್ಕೆ ತಕ್ಕ ರೀತಿಯಲ್ಲಿ ಅಳತೆಯನ್ನು ಬದಲಿಸಿ ಲ್ಯಾಮಿನೇಟ್‌ ಮಾಡಬಲ್ಲ ಅನುಕೂಲ ಅದರಲ್ಲಿ ಇರಲಿಲ್ಲ. ನಾಗರಾಜ ಅವರು ಯಂತ್ರ ತಯಾರಕ ಪರಿಣತರನ್ನು ಕರೆಸಿದರು. ‘ಪರ್ಫೆಕ್ಟ್‌ಬೈಡಿಂಗ್’ನ ಅಗತ್ಯ ಏನೆಂಬುದನ್ನು ಮನದಟ್ಟು ಮಾಡಿಸಿದರು. ಈ ಪ್ರಕ್ರಿಯೆಗೆ ಒಂದೂವರೆ–ಎರಡು ವರ್ಷ ಬೇಕಾಯಿತು. ಪಟ್ಟು ಬಿಡದೆ ಅವರು ಮನವೊಲಿಸಿದ್ದರಿಂದ, ಲ್ಯಾಮಿನೇಟ್‌ ಮಾಡುವ ಯಂತ್ರಗಳ ಸ್ವರೂಪದಲ್ಲೇ ಬದಲಾವಣೆ ಆಯಿತು. ಹಾಗೆ ಮಾರ್ಪಾಟುಗೊಂಡ ನೂರಾರು ಯಂತ್ರಗಳು ಕಾಲಾಂತರದಲ್ಲಿ ಮುದ್ರಕರಿಗೆ ಮಾರಾಟವಾಯಿತೆನ್ನುವುದು ನಾಗರಾಜ ಅವರಿಗೆ ಹೆಮ್ಮೆಯ ವಿಷಯ.

ಲ್ಯಾಮಿನೇಟ್‌ ಮಾಡುವ ತಂತ್ರಜ್ಞಾನವನ್ನೇನೋ ತಂದದ್ದಾಯಿತು. ಅದಕ್ಕೆ ಮಾರುಕಟ್ಟೆ ಕುದುರಿಸಬೇಕಲ್ಲ. ಬರೀ ಪುಸ್ತಕಗಳನ್ನು ನೆಚ್ಚಿಕೊಂಡು ಬದುಕುವ ಕಾಲ ಅದಾಗಿರಲಿಲ್ಲ. ಅಗರಬತ್ತಿ ತಯಾರಕರನ್ನು ನಾಗರಾಜ ಭೇಟಿ ಮಾಡಿದರು. ಅಗರಬತ್ತಿಗಳ ಪ್ಯಾಕೆಟ್‌ಗಳನ್ನು ಲ್ಯಾಮಿನೇಟ್‌ ಮಾಡಿದರೆ ಆಗುವ ಅನುಕೂಲವನ್ನು ಮನವರಿಕೆ ಮಾಡಿಕೊಡಲು ಒಂದಿಷ್ಟು ದಿನ ತೆಗೆದುಕೊಂಡರು. ಅವರು ಒಪ್ಪಿದ ನಂತರ, ಲ್ಯಾಮಿನೇಷನ್ ಇಲ್ಲದ ಅಗರಬತ್ತಿ ಕವರ್‌ಗಳೇ ಇಲ್ಲ ಎನ್ನುವ ಸ್ಥಿತಿ ಸೃಷ್ಟಿಯಾಯಿತು.

ಮುದ್ರಣ ತಂತ್ರಜ್ಞಾನದ ಬದಲಾವಣೆಗಳಿಗೆ ಸದಾ ಒಡ್ಡಿಕೊಳ್ಳುತ್ತಾ ಬಂದವರು ನಾಗರಾಜ. ಥರ್ಮಲ್‌, ಗ್ಲಾಸಿ, ಮ್ಯಾಟ್, 3ಡಿ, ವೆಲ್ವೆಟ್, ಬೆಳಕು ಮೇಲೆ ಬಿದ್ದಾಗ ಫಳಫಳ ಹೊಳೆಯುವ ಸ್ಪಾರ್ಕಲ್‌... ಈ ರೀತಿ ಹಲವು ಬಗೆಯ ಮುಖಪುಟಗಳನ್ನು ಪುಸ್ತಕಗಳಿಗೆ ಮಾಡಿಕೊಡುವಷ್ಟು ಅಪ್ಡೇಟ್ಆಗಿದೆ ‘ಗೌರಿ ಲ್ಯಾಮಿನೇಟರ್ಸ್‌’.

ಯಂತ್ರ ತರಿಸಿದ ನಂತರ ಕೆಲವು ತಾಂತ್ರಿಕ ಸಮಸ್ಯೆಗಳನ್ನು ಎದುರಿಸುವುದು ಅನಿವಾರ್ಯ. ಬಳಸುವ ಅಂಟು ಮುದ್ರಣಕ್ಕೆ ಬಳಸಿದ ಶಾಯಿಯ ಮೇಲೆ ಪರಿಣಾಮ ಮೂಡಿಸಿದಾಗ ಅಕ್ಷರಗಳು ಕಲಸಿಕೊಂಡಂತೆ ಆದದ್ದು ಸಮಸ್ಯೆಗೆ ಒಂದು ಉದಾಹರಣೆಯಷ್ಟೆ. ತಾಂತ್ರಿಕವಾಗಿ ಬಳಸುವ ಪರಿಕರಗಳಲ್ಲೇ ಆಗ ಅಗತ್ಯಕ್ಕೆ ತಕ್ಕಂತೆ ಮರ್ಪಾಟು ಮಾಡಿಕೊಂಡು, ಸಂಶೋಧನೆ ನಡೆಸಿಯೇ ಸಮಸ್ಯೆ ಪರಿಹರಿಸಿಕೊಳ್ಳಬೇಕಿತ್ತು. ಇಂತಹ ಸವಾಲುಗಳನ್ನು ಎದುರಿಸಿದ ರೀತಿಯನ್ನು ಹಂಚಿಕೊಳ್ಳುವಾಗ ನಾಗರಾಜ ಅವರು ಇನ್ನಷ್ಟು ಕುತೂಹಲಿಯಂತೆ ಕಾಣುತ್ತಾರೆ.

‘ಮುದ್ರಣ ಎನ್ನುವುದು ನಮ್ಮ ಜೀನ್ಸ್‌ನಲ್ಲೇ ಇದೆ’ ಎನ್ನುವ ನಾಗರಾಜ ಅವರ ಮಾತಿಗೆ ಅಡಿಗೆರೆ ಎಳೆಯುವಂತೆ ಅವರ ಮಕ್ಕಳು ಕಾಣುತ್ತಾರೆ. ಮಗ ವಿನಾಯಕ್ ಎನ್. ಟಂಕಸಾಲ ಅವರು ಮುದ್ರಣ ಸಂಸ್ಥೆಯ ಪ್ರೊಡಕ್ಷನ್‌ ವಿಭಾಗದ ಕಡೆಗೆ ಲಕ್ಷ್ಯ ಕೊಡುತ್ತಾ, ತಂದೆಯ ಹಾದಿಯಲ್ಲೇ ಹೆಜ್ಜೆ ಇಡುತ್ತಿದ್ದಾರೆ. ಮಗಳು ಗೌರಿ ವಹಿವಾಟಿನ ಲೆಕ್ಕ ಇತ್ಯಾದಿ ನಿರ್ವಹಿಸುತ್ತಾರೆ.

ವಯಸ್ಸು 72 ಆದರೂ ಉತ್ಸಾಹದಲ್ಲಿ ನಾಗರಾಜ ಅವರಲ್ಲಿ ಯುವಕನೊಬ್ಬ ಕಾಣುತ್ತಾನೆ. ಕಟ್ಟಿದ ಸಂಸ್ಥೆಯಲ್ಲಿ ಇರುವ 23–24 ಯಂತ್ರಗಳ ‘ನರ–ನಾಡಿ’ಗಳೆಲ್ಲ ಅವರಿಗೆ ಚಿರಪರಿಚಿತ. ಕೆಲವು ಯಂತ್ರಗಳು ಕೊರಿಯಾದಿಂದ ಆಮದು ಮಾಡಿಕೊಂಡಂಥವು. ಬೆಂಗಳೂರಿನ ಬಹುತೇಕ ಮುದ್ರಕರಿಗೆ ಇವರ ಸಂಸ್ಥೆ ಒಂದು ರೀತಿಯಲ್ಲಿ ‘ಆ್ಯಕ್ಸಸರಿ ಯೂನಿಟ್’ ಇದ್ದಹಾಗೆ. ಯಂತ್ರಕ್ಕೆ ಸಂಬಂಧಿಸಿದ ‘ಮೆಕ್ಯಾನಿಕ್’ ಸಂಗತಿಗಳನ್ನು ಕರತಲಾಮಲಕ ಮಾಡಿಕೊಂಡಿರುವ ನಾಗರಾಜ, ಅವನ್ನು ತಾವೇ ರಿಪೇರಿ ಕೂಡ ಮಾಡಬಲ್ಲರು. ಎಲೆಕ್ಟ್ರಾನಿಕ್ಸ್ ಸಮಸ್ಯೆ ಇದ್ದರಷ್ಟೆ ತಂತ್ರಜ್ಞರನ್ನು ನೆಚ್ಚಿಕೊಳ್ಳುತ್ತಾರೆ.
1973ರಲ್ಲಿ ತಾವು ಡಿಪ್ಲೊಮಾ ಕಲಿತಾಗ ಮುದ್ರಣ ತಂತ್ರಜ್ಞಾನದ ಕೆಲವು ಮೂಲ ಸಂಗತಿಗಳಷ್ಟೆ ದಕ್ಕಿದ್ದವು. ನಂತರದ ಶೋಧನಾ ಪಯಣದಲ್ಲಿ ಅವರು ಈ ತಂತ್ರಜ್ಞಾನದಲ್ಲಿ ಕಂಡುಕೊಂಡ ‘ಹೊಸತು’ಗಳು ಅಸಂಖ್ಯ.

‘ನಮ್ಮ ಸಂಸ್ಥೆಯ ಮೊದಲ ಯಂತ್ರ ಈಗಲೂ ಓಡುತ್ತಿದೆ’ ಎನ್ನುವಾಗ ಅವರಲ್ಲಿ ಆತ್ಮವಿಶ್ವಾಸದ ಹೊಳಪೊಂದು ಇಣುಕುತ್ತದೆ; ಥೇಟ್ ಸ್ಪಾರ್ಕಲ್‌ ಲ್ಯಾಮಿನೇಷನ್ ತರಹ!

1
1

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT