ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮ್ಮಂದಿರ ದಿನದ ಕುರಿತು ಲೇಖನ– ‘ತಾಯಿ’ ಪಾತ್ರದೊಳಗಿಂದ..

Published 14 ಮೇ 2023, 1:07 IST
Last Updated 14 ಮೇ 2023, 1:07 IST
ಅಕ್ಷರ ಗಾತ್ರ

‘ತಾಯಿ’ ಎನ್ನುವ ಶಬ್ದ ಹಾಗೂ ಅದು ಹೊರಹಾಕುವ ಭಾವನೆಗಳಿಗಿರುವ ಶಕ್ತಿ ಅಗಾಧ. ಹೀಗಾಗಿಯೇ ‘ಇಂಧನ ತೀರಲು, ಬಂದೇ ಬರುವೆನು ಮತ್ತೆ ನಿನ್ನ ತೊಡೆಗೆ, ಮೂರ್ತ ಪ್ರೇಮದೆಡೆಗೆ’ ಎಂಬ ಬಿ.ಆರ್‌.ಎಲ್‌ ಅವರ ಕಾವ್ಯದ ಸಾಲುಗಳು ಆಪ್ತವೆನಿಸುತ್ತವೆ. ಕಲಾಕ್ಷೇತ್ರದಲ್ಲಿ ‘ತಾಯಿ’ ಎನ್ನುವ ಪಾತ್ರ ಮನಸ್ಸನ್ನು ಆವರಿಸಿಕೊಂಡುಬಿಡುವಷ್ಟು ಶಕ್ತ. ಆ ಪಾತ್ರದ ಪರಿಕಲ್ಪನೆ ಕಾಲಕಾಲಕ್ಕೆ ಬದಲಾಗುತ್ತಾ ಬಂದಿದೆ. ‘ತಾಯಿ’ ಎಂಬ ಪಾತ್ರ, ಪ್ರಸ್ತುತ ಸಾಂಪ್ರದಾಯಿಕ ಚೌಕಟ್ಟುಗಳನ್ನು ಮೀರಿ ಸೃಷ್ಟಿಯಾಗುತ್ತಿದೆ. ತಾವು ನಟಿಸಿದ ‘ತಾಯಿ’ ಪಾತ್ರಗಳನ್ನು ಉಲ್ಲೇಖಿಸುತ್ತಾ; ನೆನಪಿಸಿಕೊಳ್ಳುತ್ತಾ ಈ ಬದಲಾವಣೆಗಳು, ‘ತಾಯಿ’ ಪಾತ್ರಗಳಲ್ಲಾದ ಹೊಸ ಪರಿಕಲ್ಪನೆಗಳನ್ನು ತೆರೆದಿಟ್ಟಿದ್ದಾರೆ ಖ್ಯಾತ ನಟಿಯರಾದ ಅರುಂಧತಿ ನಾಗ್‌ ಹಾಗೂ ಸುಧಾ ಬೆಳವಾಡಿ.       

ಅರುಂಧತಿ ನಾಗ್‌

‘ಜೋಗಿ’ ಸಿನಿಮಾ ಹಿಟ್‌ ಆದ ಬಳಿಕ ಬಹುತೇಕ ಬರಹಗಾರರು ಅದೇ ಮಾದರಿಯ ತಾಯಿಯ ಪಾತ್ರವನ್ನು ರೂಪಿಸಿದರು, ಪಾತ್ರಗಳನ್ನು ತಂದರು. ಇವುಗಳನ್ನು ನಾನು ತಿರಸ್ಕರಿಸಿದ್ದೆ. ಹೀಗಾಗಿ 14 ವರ್ಷಗಳಿಂದ ಯಾವುದೇ ಕನ್ನಡ ಸಿನಿಮಾ ಮಾಡಿಲ್ಲ. ‘ಜೋಗಿ’ಯ ಆ ‘ತಾಯಿ’ ಪಾತ್ರ ಅದ್ಭುತವಾಗಿತ್ತು. ಆ ಪಾತ್ರದೊಳಗಿನ ನಟನೆಯನ್ನು ನಾನು ಆನಂದಿಸಿದ್ದೆ. ಆದರೆ ನನ್ನ ಮಗಳಿಗೆ ಆ ಸಿನಿಮಾ ಇಷ್ಟವಾಗಲಿಲ್ಲ. ‘ನೀನು ಅದ್ಭುತವಾಗಿ ನಟಿಸಿದ್ದೆ. ಆದರೆ ಅಷ್ಟೊಂದು ಹಿಂಸಾಚಾರ ಇರುವ ಸಿನಿಮಾದಲ್ಲಿ ನೀನೇನು ಮಾಡುತ್ತಿದ್ದೆ’ ಎಂಬ ಕಾರಣ ಆಕೆಯದ್ದು.  

ಹಿಂದಿಯ ‘ಪಾ’ ಸಿನಿಮಾದಲ್ಲಿ ನಾನು ಬಣ್ಣಹಚ್ಚಿದ್ದ ‘ತಾಯಿ’ ಪಾತ್ರವನ್ನು ಗಮನಿಸಿ. ಎಲ್ಲಿಯೂ ಆಕೆಯ ಗಂಡನ ಬಗ್ಗೆ ಉಲ್ಲೇಖವಿಲ್ಲ. ಆಕೆ, ಸಿಂಗಲ್‌ ಪೇರೆಂಟ್‌ ಅಥವಾ ವಿಚ್ಛೇದಿತೆ ಆಗಿರಬಹುದು. ತನ್ನ ಮಗಳು ಹಾಗೂ ಮೊಮ್ಮಗನ ಜೊತೆ ಆಕೆ ಕೊನೆಯವರೆಗೂ ನಿಲ್ಲುತ್ತಾಳೆ. ಆಕೆಯ ಮಗಳ ಮದುವೆ ಅಥವಾ ಗರ್ಭ ಧರಿಸಿರುವುದರ ಕಾನೂನು ಔಚಿತ್ಯದ ಬಗ್ಗೆ ಆ ‘ತಾಯಿ’ ತಲೆಕೆಡಿಸಿಕೊಂಡವಳಲ್ಲ. ಇಂತಹ ಪಾತ್ರಗಳನ್ನು ನನ್ನಂಥ ಕಲಾವಿದರು ಅಪೇಕ್ಷಿಸುತ್ತಾರೆ ಹಾಗೂ ಆನಂದದಿಂದ ಅಭಿನಯಿಸುತ್ತಾರೆ. ನನ್ನಂತಹ ಮಧ್ಯವಯಸ್ಕ ಮಹಿಳಾ ಕಲಾವಿದರು ಈ ರೀತಿ ಪಾತ್ರಗಳನ್ನು ಮಾಡಲು ಇಚ್ಛಿಸುತ್ತಾರೆ.  

ಇತ್ತೀಚೆಗೆ ‘ವಿಮ್‌ ಬಾರ್‌’ನ ಒಂದು ಜಾಹೀರಾತಿನಲ್ಲಿ ಅಭಿನಯಿಸಿದ್ದೆ. ಈ ಮಾದರಿಯಲ್ಲೂ ‘ತಾಯಿ’ ಎನ್ನುವ ಪಾತ್ರ ಬಹಳ ಮುಖ್ಯವಾಗುತ್ತದೆ. ಕೋಟ್ಯಂತರ ಜನರಿಗೆ ಒಂದು ಸಂದೇಶ ಹೋಗುವ ಮಾಧ್ಯಮವದು. ‘ಪಾತ್ರೆ ತೊಳೆಯುವುದು ಕೇವಲ ಅಮ್ಮನ ಕೆಲಸವಲ್ಲ, ನೀನೂ ಪಾತ್ರೆ ತೊಳೆಯಬಹುದು’ ಎಂದು ಮಗನಿಗೆ ಅಮ್ಮ ಹೇಳುವ ಸಂದೇಶ ನಾನು ನಟಿಸಿದ ಆ ಜಾಹೀರಾತಿನಲ್ಲಿ ಇತ್ತು. ಇದು ವಿಭಿನ್ನವಾಗಿತ್ತು. ತಾಯಿ ಎಂದರೆ ಮಗುವನ್ನು ಹುಟ್ಟಿಸುವ ತ್ಯಾಗದ ಯಂತ್ರ ಎಂದು ನಾವು ಭಾವಿಸಿದ್ದೇವೆ. ಅಥವಾ ಸಿನಿಮಾದಲ್ಲಿ ಹೀರೊ ಅಥವಾ ಹೀರೊಯಿನ್‌ಗೆ ಕಾನೂನಾತ್ಮಕ ಔಚಿತ್ಯ ನೀಡಲಷ್ಟೇ ತಾಯಿ ಎಂಬ ಪಾತ್ರವಿದೆ. ಆದರೆ ನಾನು ಕೇಳುವುದು ಈ ‘ತಾಯಿ’ ಬೇರೇನು ಮಾಡುತ್ತಾಳೆ? ಸಮಾಜದಲ್ಲಿ ಆಕೆಯ ಪಾತ್ರವೇನು? ಆಕೆ ನಾಯಕಿಯೇ ಆಗಬೇಕೆಂದಿಲ್ಲ. ಆಕೆ ರೈತಳಾಗಿರಬಹುದು ಅಥವಾ ರಂಗೋಲಿ ಬಿಡಿಸಲು ಆಸಕ್ತಿಯುಳ್ಳವಳಾಗಿರಬಹುದು. ಸಿನಿಮಾಗಳಲ್ಲಿ ‘ತಾಯಿ’ ಎಂಬ ಪಾತ್ರವನ್ನು ಸಂಪೂರ್ಣ ಶಿಥಿಲಗೊಳಿಸಿದ್ದಾರೆ. ಆಕೆ ಕೇವಲ ‘ಮಗ ಮದುವೆ ಮಾಡ್ಕೋ, ನಾನು ಸೊಸೆ, ಮೊಮ್ಮಗು ಮುಖ ನೋಡಬೇಕು’ ಎನ್ನುವಷ್ಟರ ಮಟ್ಟಿಗಷ್ಟೇ ಸೀಮಿತಗೊಂಡಿದ್ದಾಳೆ. ಆದರೆ ಅತ್ತ ಒಟಿಟಿಯಲ್ಲಿ ಮಹಿಳಾ ಪಾತ್ರಗಳನ್ನು ಬಹಳ ಗಟ್ಟಿಯಾಗಿ ಬರೆಯುತ್ತಿದ್ದಾರೆ.

ಇನ್ನು ರಂಗಭೂಮಿಯತ್ತ ಹೊರಳಿದರೆ, ಕಾರ್ತಿಕ್‌ ಹೆಬ್ಬಾರ್‌ ಅವರ ‘ಸತಿ ಸಾವಿತ್ರಿ ನಿವಾಸ’ದ ಉಲ್ಲೇಖ ಮಾಡುತ್ತೇನೆ. ತುಂಬಾ ಚೆನ್ನಾಗಿ ಇದನ್ನು ಬರೆದಿದ್ದಾರೆ. ಮಡಿತನಕ್ಕೇ ಸವಾಲು ಹಾಕಿದ್ದಾರೆ. ದಲಿತ ಕಾವ್ಯಗಳನ್ನು ಆಧರಿಸಿ ಲಕ್ಷ್ಮಣ ಕೆ.ಪಿ. ಅವರ ‘ದಕ್ಲಕಥಾ ದೇವಿಕಾವ್ಯ’ ನಾಟಕದಲ್ಲಿನ ಸ್ತ್ರೀಪಾತ್ರವೂ ಇಲ್ಲಿ ಉಲ್ಲೇಖಾರ್ಹ. ದಲಿತ ಕವನವನ್ನು ತೆಗೆದುಕೊಂಡು ಅದನ್ನು ಲಕ್ಷ್ಮಣ ಅವರು ವಿಚಾರಿಸುತ್ತಾ ಸಾಗುತ್ತಾರೆ. ಪ್ರಸನ್ನ ನಿರ್ದೇಶನದ ‘ತಾಯಿ’ ನಾಟಕದಲ್ಲಿ ಬಿ.ಜಯಶ್ರೀ ಅವರ ಪಾತ್ರ ಹಾಗೂ ನನ್ನದೇ ‘ಹುಲಗೂರ ಹುಲಿಯವ್ವ’ ನಾಟಕವನ್ನೂ ಈ ಸಂದರ್ಭದಲ್ಲಿ ನೆನಪಿಸಿಕೊಳ್ಳುತ್ತೇನೆ. ‘ತಾಯಿ’ ನಾಟಕದಲ್ಲಿ ಆ ತಾಯಿ, ತನ್ನ ಮಗನನ್ನು ಕಳೆದುಕೊಂಡರೂ ಒಂದು ವಿಪ್ಲವವನ್ನು ಮುನ್ನಡೆಸುವಾಕೆ. ‘..ಹುಲಿಯವ್ವ’ ತಾಯಿಯ ಕೆಚ್ಚು ತೋರಿಸುವ ನಾಟಕ. ಆ ತಾಯಿ ನಡೆಸುವ ‘ಯುದ್ಧ’; ಅದು ವೇದಿಕೆ ಮೇಲೆ ಕಾಣಿಸುವುದಿಲ್ಲ. ವೇದಿಕೆ ಮೇಲೆ ಕಾಣಿಸಿಕೊಳ್ಳುವುದು ಆಕೆ ಮತ್ತು ಆಕೆಯ ಮೂರು ಮಕ್ಕಳು. ಅದೂ ಬೇರೆ ಬೇರೆ ಗಂಡಸರಿಂದ ಹುಟ್ಟಿರುವ ಮಕ್ಕಳು. ಇಲ್ಲಿ ಆಕೆ ಪಿತೃಪ್ರಧಾನ ವ್ಯವಸ್ಥೆಗೇ ಸವಾಲು ಹಾಕಿದಾಕೆ. ಆಕೆ ‘hyena of the battlefield’.

ಅಕ್ಕ ಮಹಾದೇವಿ ಅವರ ವಚನಗಳನ್ನು ತೆಗೆದುಕೊಂಡು ಲಕ್ಷ್ಮಿ ಚಂದ್ರಶೇಖರ್‌ ಮಾಡಿರುವ ದೃಶ್ಯರೂಪ ಮತ್ತೊಂದು ಮಗ್ಗುಲನ್ನು ತೋರಿಸುತ್ತದೆ. ಅಕ್ಕನಿಗಿಂತ ಸ್ವತಂತ್ರ ಆಲೋಚನೆಯಿದ್ದ ಮಹಿಳೆ ಬೇರೊಬ್ಬರು ಬೇಕೇ?   

ರಂಗಭೂಮಿಯಲ್ಲಿ ‘ತಾಯಿ’ ಅಥವಾ ‘ಮಹಿಳಾ’ ಪಾತ್ರದ ಬೇರೆ ಬೇರೆ ಆವಿಷ್ಕಾರಗಳು ಆಗುತ್ತಲೇ ಇರುತ್ತವೆ. ಸಿನಿಮಾದಲ್ಲಿನ ರೂಢಮಾದರಿಯನ್ನು ತುಂಡರಿಸುವುದು ರಂಗಭೂಮಿಯ ಜವಾಬ್ದಾರಿಯಾಗಿದೆ. ಹೀಗಾಗಿ ಹೊಸ ಮಾದರಿಯ ಫೆಮಿನಿಸ್ಟ್‌ ಬರವಣಿಗೆಗಳು ಬರುತ್ತಿವೆ. 

‘ತಾಯಿ’ ಪಾತ್ರದ ಶಕ್ತಿ   

‘ನಾನು ರಂಗಶಂಕರ ಕಟ್ಟಿದ ಬೆನ್ನಲ್ಲೇ ಮಾಡಿದ್ದ ಸಿನಿಮಾ ‘ಜೋಗಿ’. ನಾನು ರಂಗಶಂಕರದ ನಿರ್ಮಾಣ ಹಾಗೂ ರಂಗಭೂಮಿಯಲ್ಲಿನ ನಟನೆಯಿಂದ ಆ ಕ್ಷಣದಲ್ಲಿ ಬೇಸತ್ತು ಹೋಗಿದ್ದೆ. ಆ ಸಂದರ್ಭದಲ್ಲಿ ‘ಮದರ್‌ ಇಂಡಿಯಾ’ದ ತಾಯಿ ಮಾದರಿಯ ಪಾತ್ರ ‘ಜೋಗಿ’ಯಲ್ಲಿ ಸಿಕ್ಕಿತು. ಈ ಪಾತ್ರದಲ್ಲಿ ನನ್ನೊಳಗಿನ ಸಾಮರ್ಥ್ಯವನ್ನು ಸಂಪೂರ್ಣವಾಗಿ ತೋರಿಸಬಹುದು ಎಂಬ ನಂಬಿಕೆ ಇತ್ತು. ಸಿನಿಮಾ ಸೂಪರ್‌ಹಿಟ್‌ ಆಯಿತು. ಇಂದಿಗೂ ‘ಜೋಗಿ ಅಮ್ಮ’ ಎಂದೇ ಹೇಳುತ್ತಾರೆ. ಆ ‘ತಾಯಿ’ಯ ಪಾತ್ರದಿಂದ ನನಗೆ ಜನರಿಂದ ಹೆಚ್ಚಿನ ಗೌರವ ಸಿಕ್ಕಿತು. ಸಿನಿಮಾದ ಶಕ್ತಿ ಏನು ಎನ್ನುವುದು ನನಗಂದು ತಿಳಿಯಿತು. 14 ವರ್ಷ ಆದರೂ ಆ ‘ತಾಯಿ’ ಪಾತ್ರದ ಶಕ್ತಿ ಕುಂದಿಲ್ಲ. ಸಿನಿಮಾ ಎಂದಿಗೂ ಅಪಪ್ರಚಾರದ ಮಾಧ್ಯಮವಲ್ಲ. ಒಳ್ಳೆಯ ಕಥೆಗಳನ್ನು ಮಾಡಿ, ಅದ್ಭುತವಾದ ಪಾತ್ರಗಳನ್ನು ಸೃಷ್ಟಿಸಿ ಅವುಗಳಲ್ಲಿ ನಟಿಸಲು ಕರೆದಾಗ ನಮಗೆ ಹೆಚ್ಚಿನ ಖುಷಿ ಆಗುತ್ತದೆ. ನಾನೇನು ಕನ್ನಡ ಸಿನಿಮಾವನ್ನು ಬಹಿಷ್ಕಾರ ಹಾಕಿಲ್ಲ. ಒಂದು ಅದ್ಭುತವಾದ ಪಾತ್ರ ಸಿಕ್ಕರೆ ಖಂಡಿತಾ ಮತ್ತೆ ನಟಿಸುತ್ತೇನೆ’ ಎನ್ನುವುದು ಅರುಂಧತಿ ಅವರ ಮಾತು.  

ಸುಧಾ ಬೆಳವಾಡಿ 

ಹಿಂದೆ ಸಿನಿಮಾಗಳಲ್ಲಿ ಬಹಳ ಸಂಪ್ರದಾಯಸ್ಥ ತಾಯಂದಿರನ್ನು ಕಾಣುತ್ತಿದ್ದೆವು. ಮನೆ, ಮಕ್ಕಳ ಬಗ್ಗೆಯಷ್ಟೇ ಚಿಂತೆ ಮಾಡುವ ಪಾತ್ರಗಳ ಸೃಷ್ಟಿಯನ್ನು ಕಾಣುತ್ತಿದ್ದೆವು. ಈಗ ಮಕ್ಕಳನ್ನು ಸ್ನೇಹಿತರ ರೀತಿ ಕಾಣುವ, ಅದೇ ರೀತಿಯಲ್ಲಿ ಮಾತನಾಡಿಸುವಂಥ ತಾಯಂದಿರ ಕಲ್ಪನೆ ಸೃಷ್ಟಿಯಾಗಿದೆ. ಹೀಗಾಗಿ ತಾಯಂದಿರೂ ಕೂಡಾ ತೀರಾ ಸಂಪ್ರದಾಯಸ್ಥ ಎನ್ನುವ ಚೌಕಟ್ಟಿನಲ್ಲಿ ಇಲ್ಲ. ಅದರಿಂದ ಅವರು ಹೊರಬಂದಿದ್ದಾರೆ. ಈವಾಗಿನ ಅಮ್ಮಂದಿರು ಹೇಗಿರುತ್ತಾರೋ ಅದೇ ಪ್ರತಿಬಿಂಬವನ್ನು ನಾವು ಸಿನಿಮಾಗಳಲ್ಲಿ ಅಥವಾ ಧಾರಾವಾಹಿಗಳಲ್ಲಿ ಕಾಣುತ್ತಿದ್ದೇವೆ. 

ಧಾರಾವಾಹಿಗಳನ್ನು ತೆಗೆದುಕೊಂಡರೆ ಇವುಗಳು ಒಂದು ಹೆಜ್ಜೆ ಮುಂದೆ ಇದೆ ಎಂದೇ ಹೇಳಬಹುದು. ಸ್ತ್ರೀ ಪ್ರಧಾನ ಪಾತ್ರಗಳ ಸೃಷ್ಟಿ ಹೆಚ್ಚಳವಾಗಿದೆ. ಒಂದು ಉದ್ಯಮ ನಡೆಸುವ, ರಾಜಕಾರಣಿಯಾಗಿರುವ, ಸ್ವಉದ್ಯೋಗಿಯಾಗಿರುವ ಪಾತ್ರಗಳು ಹೆಚ್ಚುತ್ತಿವೆ. ಉದಾಹರಣೆಗೆ ನಾನೇ ನಟಿಸುತ್ತಿರುವ ‘ಲಕ್ಷಣ’ ಎನ್ನುವ ಧಾರಾವಾಹಿಯಲ್ಲಿ ನನ್ನ ಪಾತ್ರ ಒಂದು ಚೈನ್‌ ಆಫ್‌ ಹೋಟೆಲ್‌ ಮುಖ್ಯಸ್ಥೆಯದ್ದಾಗಿದೆ. ಬರಹಗಾರರು ಈ ರೀತಿಯಲ್ಲಿ ಯೋಚನೆ ಮಾಡುತ್ತಿದ್ದಾರೆ, ಒಂದು ತಾಯಿಯ ಪಾತ್ರವನ್ನು ಈ ದೃಷ್ಟಿಯಲ್ಲಿ ಹೆಣೆಯುತ್ತಿದ್ದಾರೆ.

ಟಿ.ಎನ್‌.ಸೀತಾರಾಂ ಅವರ ಧಾರಾವಾಹಿಗಳನ್ನು ಗಮನಿಸಿ. ‘ಮನ್ವಂತರ’, ‘ಮಹಾಪರ್ವ’ ಮುಂತಾದ ಧಾರಾವಾಹಿಗಳಲ್ಲಿ ಹೆಣ್ಮಕ್ಕಳು ರಾಜಕಾರಣದಲ್ಲಿ ಸಕ್ರಿಯರಾಗಿರುವಂತೆ ಚಿತ್ರಿಸಿದ್ದಾರೆ. ಸಂಪ್ರದಾಯಸ್ಥ ರೀತಿಯಲ್ಲಿ ಬೆಳೆದು, ದಿಟ್ಟ ಹೆಣ್ಣು ಮಗಳೊಬ್ಬಳು ರಾಜಕೀಯ ಆಸಕ್ತಿ ತಳೆದು ಮುಖ್ಯಮಂತ್ರಿಯಾಗುವವರೆಗೂ ಸೀತಾರಾಂ ಅವರು ಒಂದು ಪಾತ್ರವನ್ನು ಬರೆದಿದ್ದಾರೆ. ಹಿಂದಿಯಲ್ಲಿ ಹಿಂದೆ ಬರುತ್ತಿದ್ದ ಪ್ರಿಯಾ ತೆಂಡೂಲ್ಕರ್‌ ನಟನೆಯ ‘ರಜನಿ’ ಧಾರಾವಾಹಿಯೂ ಈ ಮಾತಿಗೆ ಪೂರಕವಾಗಿದೆ. ಸಾಮಾಜಿಕ ನ್ಯಾಯ ಕೊಡಿಸುವ ಪಾತ್ರ ಪೋಷಣೆ ಅಲ್ಲಿತ್ತು. ‘ಮಹಾಪರ್ವ’ದಲ್ಲಿ ಆ ಹೆಣ್ಣು ಸಿ.ಎಂ ಕೂಡ ಹೌದು ಹಾಗೆಯೇ ಅಮ್ಮನೂ. ಹೀಗೆ ಹೆಣ್ಣಿನ ಪಾತ್ರವೊಂದು ಸಾಂಪ್ರದಾಯಿಕ ಚೌಕಟ್ಟಿನಿಂದ ಹೊರಬರುತ್ತಾ ಹೋಯಿತು. ತಾಯಿಯ ಪಾತ್ರವನ್ನು ನೋಡುವ ಆಯಾಮವೂ ಬದಲಾಗುತ್ತಾ ಹೋಯಿತು. ಧಾರಾವಾಹಿಗಳಲ್ಲಿ ಇದನ್ನು ಹೆಚ್ಚಾಗಿ ಕಾಣಬಹುದು. ಏಕೆಂದರೆ ಇವುಗಳನ್ನು ನೋಡುವ ಪ್ರೇಕ್ಷಕ ವರ್ಗದಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಿದೆ. ಹೊಸ ಯುವ ಬರಹಗಾರರು ಬರುತ್ತಿರುವುದೂ ಈ ಬದಲಾವಣೆಗೆ ಕಾರಣವಾಗಿದೆ. 

‘ಮುಂಗಾರು ಮಳೆ’ ಸಿನಿಮಾದ ಬಳಿಕ ತಾಯಿ ಒಬ್ಬ ಮಗನಿಗೆ ಸ್ನೇಹಿತೆಯಂತೆ ಇರುವ ಪಾತ್ರಗಳ ಸೃಷ್ಟಿ ಆರಂಭವಾಯಿತು. ಮನಸ್ಸು ಬಿಚ್ಚಿ ಮಾತನಾಡಿದರೆ ಅದನ್ನು ಸ್ವೀಕರಿಸುವ ಮನಸ್ಥಿತಿಯುಳ್ಳ ಅಮ್ಮಂದಿರ ಪಾತ್ರಗಳು ಅಲ್ಲಿಂದ ಜೀವತಳೆದವು. ಈ ಮಾದರಿಯ ಸೃಷ್ಟಿ ಇನ್ನೂ ಮುಂದುವರಿಯಬೇಕು ಎನ್ನುವುದು ನನ್ನ ಆಶಯ. ಏಕೆಂದರೆ ಸಮಾಜದಲ್ಲಿ ಬಹಳಷ್ಟು ಬದಲಾವಣೆ ಆಗಿದೆ. ಪ್ರಸ್ತುತ ಬಹಳಷ್ಟು ತಾಯಂದಿರು ಒಂದು ಐಟಿ ಕಂಪನಿಯಲ್ಲಿ ದುಡಿಯುತ್ತಿರುತ್ತಾರೆ, ಹಾಗೆಯೇ ಉತ್ತಮ ತಾಯಿಯಾಗಿಯೂ ಕುಟುಂಬವನ್ನು ಮುನ್ನಡೆಸುತ್ತಿದ್ದಾಳೆ. ಸ್ಟೀರಿಯೋಟೈಪ್‌ನಿಂದ(ರೂಢಮಾದರಿ) ಜನರು ಇನ್ನೂ ಹೊರಬರಬೇಕಿದೆ. 

ಸುಧಾ ಬೆಳವಾಡಿ ಹಿಂದೆ ಸಿನಿಮಾಗಳಲ್ಲಿ ಬಹಳ ಸಂಪ್ರದಾಯಸ್ಥ ತಾಯಂದಿರನ್ನು ಕಾಣುತ್ತಿದ್ದೆವು. ಮನೆ ಮಕ್ಕಳ ಬಗ್ಗೆಯಷ್ಟೇ ಚಿಂತೆ ಮಾಡುವ ಪಾತ್ರಗಳ ಸೃಷ್ಟಿಯನ್ನು ಕಾಣುತ್ತಿದ್ದೆವು. ಈಗ ಮಕ್ಕಳನ್ನು ಸ್ನೇಹಿತರ ರೀತಿ ಕಾಣುವ ಅದೇ ರೀತಿಯಲ್ಲಿ ಮಾತನಾಡಿಸುವಂಥ ತಾಯಂದಿರ ಕಲ್ಪನೆ ಸೃಷ್ಟಿಯಾಗಿದೆ. ಹೀಗಾಗಿ ತಾಯಂದಿರೂ ಕೂಡಾ ತೀರಾ ಸಂಪ್ರದಾಯಸ್ಥ ಎನ್ನುವ ಚೌಕಟ್ಟಿನಲ್ಲಿ ಇಲ್ಲ. ಅದರಿಂದ ಅವರು ಹೊರಬಂದಿದ್ದಾರೆ. ಈವಾಗಿನ ಅಮ್ಮಂದಿರು ಹೇಗಿರುತ್ತಾರೋ ಅದೇ ಪ್ರತಿಬಿಂಬವನ್ನು ನಾವು ಸಿನಿಮಾಗಳಲ್ಲಿ ಅಥವಾ ಧಾರಾವಾಹಿಗಳಲ್ಲಿ ಕಾಣುತ್ತಿದ್ದೇವೆ.  ಧಾರಾವಾಹಿಗಳನ್ನು ತೆಗೆದುಕೊಂಡರೆ ಇವುಗಳು ಒಂದು ಹೆಜ್ಜೆ ಮುಂದೆ ಇದೆ ಎಂದೇ ಹೇಳಬಹುದು. ಸ್ತ್ರೀ ಪ್ರಧಾನ ಪಾತ್ರಗಳ ಸೃಷ್ಟಿ ಹೆಚ್ಚಳವಾಗಿದೆ. ಒಂದು ಉದ್ಯಮ ನಡೆಸುವ ರಾಜಕಾರಣಿಯಾಗಿರುವ ಸ್ವಉದ್ಯೋಗಿಯಾಗಿರುವ ಪಾತ್ರಗಳು ಹೆಚ್ಚುತ್ತಿವೆ. ಉದಾಹರಣೆಗೆ ನಾನೇ ನಟಿಸುತ್ತಿರುವ ‘ಲಕ್ಷಣ’ ಎನ್ನುವ ಧಾರಾವಾಹಿಯಲ್ಲಿ ನನ್ನ ಪಾತ್ರ ಒಂದು ಚೈನ್‌ ಆಫ್‌ ಹೋಟೆಲ್‌ ಮುಖ್ಯಸ್ಥೆಯದ್ದಾಗಿದೆ. ಬರಹಗಾರರು ಈ ರೀತಿಯಲ್ಲಿ ಯೋಚನೆ ಮಾಡುತ್ತಿದ್ದಾರೆ ಒಂದು ತಾಯಿಯ ಪಾತ್ರವನ್ನು ಈ ದೃಷ್ಟಿಯಲ್ಲಿ ಹೆಣೆಯುತ್ತಿದ್ದಾರೆ. ಟಿ.ಎನ್‌.ಸೀತಾರಾಂ ಅವರ ಧಾರಾವಾಹಿಗಳನ್ನು ಗಮನಿಸಿ. ‘ಮನ್ವಂತರ’ ‘ಮಹಾಪರ್ವ’ ಮುಂತಾದ ಧಾರಾವಾಹಿಗಳಲ್ಲಿ ಹೆಣ್ಮಕ್ಕಳು ರಾಜಕಾರಣದಲ್ಲಿ ಸಕ್ರಿಯರಾಗಿರುವಂತೆ ಚಿತ್ರಿಸಿದ್ದಾರೆ. ಸಂಪ್ರದಾಯಸ್ಥ ರೀತಿಯಲ್ಲಿ ಬೆಳೆದು ದಿಟ್ಟ ಹೆಣ್ಣು ಮಗಳೊಬ್ಬಳು ರಾಜಕೀಯ ಆಸಕ್ತಿ ತಳೆದು ಮುಖ್ಯಮಂತ್ರಿಯಾಗುವವರೆಗೂ ಸೀತಾರಾಂ ಅವರು ಒಂದು ಪಾತ್ರವನ್ನು ಬರೆದಿದ್ದಾರೆ. ಹಿಂದಿಯಲ್ಲಿ ಹಿಂದೆ ಬರುತ್ತಿದ್ದ ಪ್ರಿಯಾ ತೆಂಡೂಲ್ಕರ್‌ ನಟನೆಯ ‘ರಜನಿ’ ಧಾರಾವಾಹಿಯೂ ಈ ಮಾತಿಗೆ ಪೂರಕವಾಗಿದೆ. ಸಾಮಾಜಿಕ ನ್ಯಾಯ ಕೊಡಿಸುವ ಪಾತ್ರ ಪೋಷಣೆ ಅಲ್ಲಿತ್ತು. ‘ಮಹಾಪರ್ವ’ದಲ್ಲಿ ಆ ಹೆಣ್ಣು ಸಿ.ಎಂ ಕೂಡ ಹೌದು ಹಾಗೆಯೇ ಅಮ್ಮನೂ. ಹೀಗೆ ಹೆಣ್ಣಿನ ಪಾತ್ರವೊಂದು ಸಾಂಪ್ರದಾಯಿಕ ಚೌಕಟ್ಟಿನಿಂದ ಹೊರಬರುತ್ತಾ ಹೋಯಿತು. ತಾಯಿಯ ಪಾತ್ರವನ್ನು ನೋಡುವ ಆಯಾಮವೂ ಬದಲಾಗುತ್ತಾ ಹೋಯಿತು. ಧಾರಾವಾಹಿಗಳಲ್ಲಿ ಇದನ್ನು ಹೆಚ್ಚಾಗಿ ಕಾಣಬಹುದು. ಏಕೆಂದರೆ ಇವುಗಳನ್ನು ನೋಡುವ ಪ್ರೇಕ್ಷಕ ವರ್ಗದಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಿದೆ. ಹೊಸ ಯುವ ಬರಹಗಾರರು ಬರುತ್ತಿರುವುದೂ ಈ ಬದಲಾವಣೆಗೆ ಕಾರಣವಾಗಿದೆ.  ‘ಮುಂಗಾರು ಮಳೆ’ ಸಿನಿಮಾದ ಬಳಿಕ ತಾಯಿ ಒಬ್ಬ ಮಗನಿಗೆ ಸ್ನೇಹಿತೆಯಂತೆ ಇರುವ ಪಾತ್ರಗಳ ಸೃಷ್ಟಿ ಆರಂಭವಾಯಿತು. ಮನಸ್ಸು ಬಿಚ್ಚಿ ಮಾತನಾಡಿದರೆ ಅದನ್ನು ಸ್ವೀಕರಿಸುವ ಮನಸ್ಥಿತಿಯುಳ್ಳ ಅಮ್ಮಂದಿರ ಪಾತ್ರಗಳು ಅಲ್ಲಿಂದ ಜೀವತಳೆದವು. ಈ ಮಾದರಿಯ ಸೃಷ್ಟಿ ಇನ್ನೂ ಮುಂದುವರಿಯಬೇಕು ಎನ್ನುವುದು ನನ್ನ ಆಶಯ. ಏಕೆಂದರೆ ಸಮಾಜದಲ್ಲಿ ಬಹಳಷ್ಟು ಬದಲಾವಣೆ ಆಗಿದೆ. ಪ್ರಸ್ತುತ ಬಹಳಷ್ಟು ತಾಯಂದಿರು ಒಂದು ಐಟಿ ಕಂಪನಿಯಲ್ಲಿ ದುಡಿಯುತ್ತಿರುತ್ತಾರೆ ಹಾಗೆಯೇ ಉತ್ತಮ ತಾಯಿಯಾಗಿಯೂ ಕುಟುಂಬವನ್ನು ಮುನ್ನಡೆಸುತ್ತಿದ್ದಾಳೆ. ಸ್ಟೀರಿಯೋಟೈಪ್‌ನಿಂದ (ರೂಢಮಾದರಿ) ಜನರು ಇನ್ನೂ ಹೊರಬರಬೇಕಿದೆ.  ಸುಧಾ ಬೆಳವಾಡಿ

ಅರುಂಧತಿ ನಾಗ್‌
ಅರುಂಧತಿ ನಾಗ್‌

ನಿರೂಪಣೆ: ಅಭಿಲಾಷ್‌ ಪಿ.ಎಸ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT