ಬಳ್ಳಾರಿ ಜಿಲ್ಲೆ ಸಂಡೂರು ತಾಲ್ಲೂಕು ನರಸಾಪುರದ ಸರ್ಕಾರಿ ಶಾಲೆಯ ಆರನೇ ತರಗತಿ ವಿದ್ಯಾರ್ಥಿನಿ ಸಾನ್ವಿ ಕೊನೆಯ ಪ್ರಶ್ನೆಪತ್ರಿಕೆ ಬರೆದು, ಬೇಸಿಗೆ ರಜೆಯ ಖುಷಿಯನ್ನು ಹೊತ್ತು ಮನೆ ಕಡೆ ಓಡುತ್ತಿದ್ದಳು. ಆ ಓಟದ ಮಧ್ಯೆ, ಮರದ ನೆರಳಲ್ಲಿ ಬಿದ್ದಿದ್ದ ಅಳಿಲು ಮರಿ ಆಕೆಯನ್ನು ನಿಲ್ಲುವಂತೆ ಮಾಡಿತು. ಅದು ನೆಲದ ಮೇಲೆ ನಿಸ್ಸಹಾಯವಾಗಿ ಬಿದ್ದಿದ್ದರೂ, ಅದರ ಸಣ್ಣ ಎದೆ ನಿಧಾನವಾಗಿ ಏರಿಳಿಯುತ್ತಿತ್ತು. ಕಣ್ಣುಗಳು ಇನ್ನೂ ತೆರೆದು ನೋಡಲಾರದಷ್ಟು ಚಿಕ್ಕದು. ಸಾನ್ವಿ ಹತ್ತಿರ ಹೋಗಿ ಕುಳಿತುಕೊಂಡಳು. ಮರದ ಮೇಲೆ ಕಣ್ಣು ಹರಿಸಿ ‘ತಾಯಿ ಬರುತ್ತಾಳೆಯೇ’ ಎಂದು ಕಾಯತೊಡಗಿದಳು. ಗಾಳಿ ಎಲೆಗಳನ್ನು ಸದ್ದು ಮಾಡಿತು, ಆದರೆ ಅಳಿಲಿನ ತಾಯಿಯ ಸುಳಿವೇ ಇರಲಿಲ್ಲ.

ಸಮಯ ಕಳೆಯುತ್ತಿದ್ದಂತೆ ಆ ಪುಟ್ಟ ಜೀವದ ನಿಶ್ಶಬ್ದತೆ ಸಾನ್ವಿಯೊಳಗೆ ಆತಂಕ ಮೂಡಿಸಿತು.‘ಇದನ್ನು ಬಿಟ್ಟು ಹೋದರೆ…?’ ಆ ಕಲ್ಪನೆಯೇ ಅವಳಿಗೆ ತಾಳಲಾರದಂತಾಯಿತು.ನಾಯಿ, ಬೆಕ್ಕುಗಳು, ಬಿಸಿಲಿನ ತಾಪ ಇವೆಲ್ಲವೂ ಒಂದೇ ಕ್ಷಣದಲ್ಲಿ ಅವಳ ಮನಸ್ಸಿನಲ್ಲಿ ಹರಿದವು. ಒಂದು ನಿರ್ಧಾರ. ಒಂದು ಮೃದುವಾದ ಸ್ಪರ್ಶ.ಅವಳು ಅದನ್ನು ಜಾಗ್ರತೆಯಿಂದ ಕೈಗೆತ್ತಿಕೊಂಡಳು. ಆ ಕ್ಷಣದಿಂದಲೇ ಅವಳ ಬದುಕಿನಲ್ಲಿ ಮತ್ತೊಂದು ಪರೀಕ್ಷೆ ಆರಂಭವಾಯಿತು–ಈ ಬಾರಿ ಪ್ರಶ್ನೆಪತ್ರಿಕೆ ಇಲ್ಲ, ಆದರೆ ಜೀವ ಉಳಿಸುವ ಹೊಣೆ.

ಮನೆಗೆ ಬಂದ ತಕ್ಷಣ, ಅವಳ ಕೈಯಲ್ಲಿದ್ದ ಅಳಿಲು ಮರಿಯನ್ನು ನೋಡಿ ಪೋಷಕರು ಗಾಬರಿಯಾದರು. ‘ಇದು ತುಂಬ ಚಿಕ್ಕದು… ಬದುಕುವುದೇ ಕಷ್ಟ. ಇದು ಕಾಡು ಪ್ರಾಣಿ… ನಮಗೆ ಹೊಂದಿಕೊಳ್ಳಲ್ಲ…’ ಎಂಬ ಆತಂಕದ ಮಾತುಗಳು ಮನೆಯೊಳಗೆ ಕೇಳಿಬಂದವು. ಆದರೆ ಸಾನ್ವಿಯ ಕಣ್ಣುಗಳಲ್ಲಿ ಬೇರೆದ್ದೇ ದೃಢತೆ. ಅವಳು ಮಾತು ಕಡಿಮೆ, ಕಾಳಜಿ ಹೆಚ್ಚು.

ಅವಳ ಮೌನ ಹಟಕ್ಕೆ ಕೊನೆಗೆ ಪೋಷಕರ ಮನಸು ಕರಗಿತು. ಅಣ್ಣ ಗುರು ಕೂಡ ಅವಳ ಜೊತೆ ನಿಂತ. ಬೇಸಿಗೆ ರಜೆಯ ದೀರ್ಘ ದಿನಗಳು ಈಗ ಆಟಕ್ಕೆ ಅಲ್ಲ; ಈ ಪುಟ್ಟ ಜೀವದ ಆರೈಕೆಗೆ ಮೀಸಲಾದವು.

ಎಲ್ಲರ ಪ್ರೀತಿಯ ‘ರಾಮು’

ಕೆಲವು ದಿನಗಳಲ್ಲೇ ಅಳಿಲಿಗೆ ನಾಮಕರಣವಾಯಿತು–‘ರಾಮು’. ಇಂದು ‘ರಾಮು…’ ಎಂದು ಕರೆದರೆ ಸಾಕು, ಅದರ ಕಿವಿಗಳು ನಿಮಿರುತ್ತವೆ. ಚುರುಕಾಗಿ ಓಡುತ್ತಾ ಕರೆಯುವವರ ಬೆರಳಿಗೆ ತಲುಪುತ್ತದೆ. ಅದರ ಮೃದುವಾದ ಮೈಮೇಲೆ ಕೈ ಓಡಿಸಿದರೆ, ಅದು ಕಣ್ಣುಮುಚ್ಚಿ ನಿಶ್ಚಲವಾಗಿ ಕುಳಿತುಕೊಳ್ಳುತ್ತದೆ. ಅಂಗೈಯಲ್ಲಿ ಮಲಗುವಾಗ ಅದರ ಉಸಿರಿನ ತಣ್ಣನೆಯ ಸ್ಪರ್ಶವೇ ಒಂದು ವಿಭಿನ್ನ ಅನುಭವ.

ಒಮ್ಮೆ ಮೈಮೇಲೆ ಹತ್ತಿದರೆ, ಸರಸರನೆ ಭುಜದವರೆಗೂ ಓಡಿಬಂದು, ನಾಲಿಗೆಯಿಂದ ನೆಕ್ಕಿ ಕಚಗುಳಿ ಇಡುತ್ತದೆ.ಆ ಮುದ್ದಾದ ಚಲನೆಗಳು ಮನೆಯೊಳಗೆ ನಗುವಿನ ಅಲೆಗಳನ್ನು ಹರಡಿಸುತ್ತವೆ. ಈಗ ರಾಮು ಕೇವಲ ಸಾನ್ವಿಯದ್ದಷ್ಟೇ ಅಲ್ಲ, ಓಣಿಯವರದ್ದೂ ಆಗಿದೆ. ಪ್ರತಿ ಮನೆಗೆ ಹೋಗುವ ಈ ಪುಟ್ಟ ಅತಿಥಿ, ಎಲ್ಲರ ಮನಸ್ಸಿನಲ್ಲಿ ತನ್ನ ಜಾಗ ಮಾಡಿಕೊಂಡಿದೆ.

ಆರಂಭದ ದಿನಗಳಲ್ಲಿ, ‘ಇದಕ್ಕೆ ಏನು ತಿನ್ನಿಸಬೇಕು?’ ಎಂಬ ಪ್ರಶ್ನೆ ಎಲ್ಲರನ್ನೂ ಕಾಡಿತು. ಹೀಗಾಗಿ ಹಸುವಿನ ಹಾಲನ್ನು ಸಣ್ಣ ಮುಚ್ಚಳದಲ್ಲಿ ಹಾಕಿ, ಹನಿ ಹನಿಯಾಗಿ ಕುಡಿಸಲಾಯಿತು. ಆ ಪುಟ್ಟ ಬಾಯಿ ಹಾಲಿನ ಹನಿಗಳನ್ನು ತಾಕುವ ಕ್ಷಣ– ಅದೇ ಒಂದು ಗೆಲುವು.

ಈಗ ಅದು ದೊಡ್ಡದಾಗಿದೆ. ಬಿಸ್ಕತ್ತು ತುಂಡುಗಳನ್ನು ತಿನ್ನುವುದು, ಕೊಬ್ಬರಿ ತುಂಡನ್ನು ಹಿಡಿದು ಕುಳಿತೇ ಚಪ್ಪರಿಸುವುದು, ಕಲ್ಲಂಗಡಿಯ ಕೆಂಪು ತೊಳೆಯ ಮೇಲೆ ನಾಲಿಗೆ ಓಡಿಸುವುದು ಇವೆಲ್ಲ ದಿನನಿತ್ಯದ ದೃಶ್ಯಗಳು. ‘ಕಲ್ಲಂಗಡಿ ಇದಕ್ಕೆ ತುಂಬ ಇಷ್ಟ. ಎರಡು ದಿನಕ್ಕೊಮ್ಮೆ ಸ್ನಾನ ಮಾಡಿಸುತ್ತೇವೆ. ಎಳೆ ಬಿಸಿಲಿನಲ್ಲಿ ಕುಳಿತುಕೊಳ್ಳೋದನ್ನೂ ಇಷ್ಟಪಡುತ್ತದೆ’ ಎಂದು ಸಾನ್ವಿ ತಂದೆ ಬಸವರಾಜ್ ಹೇಳುತ್ತಾರೆ.

ರಾಮು ಈಗ ಮನೆಯ ಒಂದು ಭಾಗ. ಬಾಗಿಲು ತೆರೆದರೆ ಒಳಗೆ, ಹೊರಗೆ ನಿರ್ಬಂಧವಿಲ್ಲದೆ ಓಡಾಡುತ್ತದೆ. ಅಕ್ಕಪಕ್ಕದ ಮನೆಗಳೂ ಅದಕ್ಕೆ ಪರಿಚಿತ. ಮಕ್ಕಳು ಅದರ ಜೊತೆ ಆಟ ಆಡುತ್ತಾ ಕಾಲ ಕಳೆಯುತ್ತಾರೆ. ‘ಇದು ಪ್ರಾಣಿ ಅನ್ನುವ ಭಯ ಈಗ ಯಾರಿಗೂ ಇಲ್ಲ. ಸ್ವಲ್ಪ ಹೊತ್ತು ಕಾಣಿಸದಿದ್ದರೆ ಮನೆಯೇ ಖಾಲಿ ಅನ್ನಿಸುತ್ತದೆ’ ಎಂದು ಸಾನ್ವಿ ಅಮ್ಮ ವಿನೋದ ಹೇಳುತ್ತಾರೆ.

ಒಂದು ದಿನ… ಕಾಡಿನತ್ತ

ಇತ್ತೀಚೆಗೆ ರಾಮು ನೆಗೆಯುವುದನ್ನು ಆರಂಭಿಸಿದೆ. ಅದರ ಚಲನೆಗಳಲ್ಲಿ ಹೊಸ ಆತ್ಮವಿಶ್ವಾಸ ಗೋಚರಿಸುತ್ತಿದೆ. ಒಂದು ದಿನ ಅದು ಕಾಡಿನತ್ತ ಹಾರಬಹುದು. ತನ್ನ ಸ್ವಾಭಾವಿಕ ಬದುಕಿನತ್ತ ಮರಳಬಹುದು. ಆ ದಿನ ಮನೆ ಸ್ವಲ್ಪ ಖಾಲಿಯಾಗಬಹುದು. ಆದರೆ ಒಂದು ತೃಪ್ತಿ ಉಳಿಯುತ್ತದೆ. ‘ಅದರ ಪ್ರಾಣ ಉಳಿದಿದೆ–ಅದೇ ಮುಖ್ಯ. ಅದು ಎಲ್ಲೇ ಇದ್ದರೂ ಸುರಕ್ಷಿತವಾಗಿರಲಿ’ ಎಂಬ ಭಾವನೆ ಮಾತ್ರ ಉಳಿಯುತ್ತದೆ.

ಒಂದು ಪುಟ್ಟ ಅಳಿಲಿಗೆ ನೀಡಿದ ಕಾಳಜಿ, ಒಂದು ಕುಟುಂಬದ ಮಿತಿಯನ್ನು ಮೀರಿ, ಒಂದು ಓಣಿಯ ಪ್ರೀತಿಯ ಕಥೆಯಾಗಿದೆ –ಈ ‘ರಾಮು’.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260510-51-1926078892

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.