ಗಿಳಿಯೊಂದು ಮಾಗಿದ ಸಪೋಟ ಹಣ್ಣನ್ನು ಕಚ್ಚಿ, ಅದರ ಅರ್ಧ ಭಾಗವನ್ನು ಕೆಳಕ್ಕೆ ಬೀಳಿಸಿತು. ಕೊಂಬೆಯಿಂದ ಕೊಂಬೆಗೆ ಹಾರುವ ಗುಬ್ಬಚ್ಚಿಗಳದ್ದು ಬೇರೆಯದೇ ಲೋಕ. ತಣ್ಣನೆ ಗಾಳಿಗೆ ಅಲುಗಾಡುವ ಎಲೆಗಳ ಶಬ್ದವು ಹಿತವಾದ ಸಂಗೀತದಂತೆ ಭಾಸವಾಗುತ್ತಿತ್ತು. ದಟ್ಟವಾಗಿ ಆವರಿಸಿರುವ ಗಿಡ-ಮರ-ಬಳ್ಳಿಗಳ ನಡುವೆ ಹಾದು ಬರುವ ಬಿಸಿಲ ಕೋಲುಗಳು ನೆಲದ ಮೇಲೆ ಚಿತ್ತಾರ ಬಿಡಿಸಿದಂತಿತ್ತು...

ಕ್ಷಣಕಾಲ ನಾವು ಬೆಂಗಳೂರಿನಲ್ಲಿ ಇಲ್ಲ ಎನ್ನುವಂಥ ಅನುಭವ. ಅಷ್ಟರಲ್ಲಿ, ಕಾಂಪೌಂಡ್ ಹೊರಗಿನಿಂದ ಕೇಳಿಬಂದ ಬೈಕೊಂದರ ಹಾರ್ನ್ ಸದ್ದು ಈ ಮೌನವನ್ನು ಭೇದಿಸಿತು.

‘ನಾವು ನಗರದಲ್ಲಿ ಇದ್ದೇವೆ ಎನ್ನುವುದು ಅರಿವಾಗುವುದು ಆಗಲೇ’ ಎಂದು ನಕ್ಕರು ಸುಮೇಶ್ ನಾಯಕ್.

ಬೆಂಗಳೂರಿನ ಸರ್ಜಾಪುರದಲ್ಲಿರುವ ಸುಮೇಶ್ ಅವರ ಮನೆಯ ಗೇಟಿನ ಒಳಹೊಕ್ಕರೆ ನಗರದಲ್ಲಿ ಇದ್ದೇವೆ ಎಂದೇ ಗೊತ್ತಾಗುವುದಿಲ್ಲ. 1,500 ಚದರ ಅಡಿಯ ಜಾಗದಲ್ಲಿ ಸುಮೇಶ್ ಹಾಗೂ ಅವರ ಪತ್ನಿ ಮೀತು 12 ವರ್ಷಗಳಿಂದ ವಾಸಿಸುತ್ತಿದ್ದಾರೆ. ಮನೆಯ ಸುತ್ತ, ತಾರಸಿ ಮೇಲೆ 200ಕ್ಕೂ ಹೆಚ್ಚು ಗಿಡ-ಮರಗಳಿಂದ ಕೂಡಿದ ದಟ್ಟ ನಗರ ಉದ್ಯಾನ ನಿರ್ಮಿಸಿದ್ದಾರೆ. ಹಣ್ಣು ಬಿಟ್ಟ ಕೊಂಬೆಗಳು ಬಾಲ್ಕನಿಗೆ ಚಾಚಿವೆ. ಬಳ್ಳಿಗಳು ಟೆರೇಸ್ನ ರೇಲಿಂಗ್ಗಳನ್ನು ಸುತ್ತಿಕೊಂಡಿವೆ. ಪಿಕಳಾರ, ಮೈನಾ ಮತ್ತು ಸನ್ಬರ್ಡ್ಗಳಂತಹ ಪಕ್ಷಿಗಳು ಮರಗಳ ನಡುವೆ ಮುಕ್ತವಾಗಿ ಓಡಾಡುತ್ತವೆ.

ರಸ್ತೆಯಿಂದ ನೋಡಿದರೆ ಅಲ್ಲೊಂದು ಮನೆ ಇದೆ ಎಂದೆನಿಸುವುದಿಲ್ಲ. ಸಣ್ಣ ಕಾಡಿನಂತೆ ಆ ಜಾಗ ಕಾಣುತ್ತದೆ.

‘ಸಣ್ಣ ಕೈತೋಟ ಬೇಕೆಂದು ಆರಂಭಿಸಿದೆವು. ಇದೀಗ ನಮ್ಮ ಮನೆಯನ್ನು ಗಿಡಗಳೇ ಆವರಿಸಿಕೊಂಡಿವೆ’ ಎಂದರು ಮೀತು.

ಕೇರಳದ ಎರ್ನಾಕುಲಂನ ಸುಮೇಶ್ ಹಸಿರಿನ ನಡುವೆ ಬೆಳೆದವರು. ಮಾವು, ಹಲಸು, ಬಾಳೆ ಮತ್ತು ಹಿತ್ತಲ ತೋಟಗಳು ಅವರ ಬಾಲ್ಯದ ಭಾಗವಾಗಿದ್ದವು. ಕೆಲಸಕ್ಕಾಗಿ 2007ರಲ್ಲಿ ಬೆಂಗಳೂರಿಗೆ ಬಂದ ಬಳಿಕ ಅವರ ಬದುಕೂ ಕಚೇರಿ ಮತ್ತು ಟ್ರಾಫಿಕ್ ನಡುವೆ ಸಿಕ್ಕಿಹಾಕಿಕೊಂಡಿತು. ನಗರದಲ್ಲಿ ಉದ್ಯಾನಗಳಿದ್ದರೂ, ಹೂ-ಹಣ್ಣುಗಳಿಂದ ತುಂಬಿದ ಹಿತ್ತಲಿಗೆ ಕಾಲಿಡುವ ಅನುಭವ ಸಿಗುತ್ತಿರಲಿಲ್ಲ.

2012ರಲ್ಲಿ ಮನೆ ಖರೀದಿಸಲು ನಿರ್ಧರಿಸಿದಾಗ, ಇದೇ ಕಾರಣಕ್ಕೆ ಅಪಾರ್ಟ್ಮೆಂಟ್ ಬದಲು ವಿಲ್ಲಾವನ್ನು ಆರಿಸಿಕೊಂಡರು.

‘ಜಾಗ ಚಿಕ್ಕದಾಗಿದ್ದರೂ ನಮಗೆ ಒಂದು ತೋಟ ಬೇಕಿತ್ತು. ಸಣ್ಣದಾಗಿ ಆರಂಭವಾದದ್ದು, ಇದೀಗ ಈ ಮಟ್ಟಿಗೆ ಬೆಳೆದು ನಿಂತಿದೆ’ ಎಂದರು ದಂಪತಿ.

ಮೊದಲ ಬಾರಿ ನರ್ಸರಿಗೆ ಹೋದ ದಿನವನ್ನು ಅವರು ಈಗಲೂ ನೆನೆದು ನಗುತ್ತಾರೆ.

‘ಮಕ್ಕಳು ಸಿಹಿ ಅಂಗಡಿಗೆ ಹೋದಂತೆ ಹೋಗಿದ್ದೆವು. ಇಷ್ಟವಾದ ಗಿಡಗಳನ್ನೆಲ್ಲಾ ಖರೀದಿಸಿದೆವು’ ಎಂದರು ಸುಮೇಶ್.

ಗುಲಾಬಿ, ದಾಸವಾಳ, ಹಣ್ಣಿನ ಸಸಿಗಳು ಮತ್ತು ಅಲಂಕಾರಿಕ ಗಿಡಗಳನ್ನು ಕಾರಿನಲ್ಲಿ ತುಂಬಿಕೊಂಡು ಬಂದು ಮನೆಯ ಸುತ್ತ ಜೋಡಿಸಿಟ್ಟರು. ದಿನಕ್ಕೆರಡು ಬಾರಿ ನೀರು ಹಾಕಿ ಆರೈಕೆ ಮಾಡಿದರೂ, ಕೆಲವೇ ದಿನಗಳಲ್ಲಿ ಹಲವು ಗಿಡಗಳು ಒಣಗಲು ಆರಂಭಿಸಿದವು. ಗೊಬ್ಬರ ಹಾಕಿದರೂ ಪ್ರಯೋಜನವಾಗಲಿಲ್ಲ. ಬಹುತೇಕ ಗಿಡಗಳು ಸತ್ತು ಹೋದವು.

‘ಉತ್ಸಾಹದಿಂದ ಆರಂಭಿಸಿದ ನಮಗೆ ಬಹಳ ನಿರಾಸೆಯಾಯಿತು. ನಿಮ್ಮಿಂದಾಗದು ಎಂದು ಹಲವರು ತಮಾಷೆ ಮಾಡಿದರು. ಲ್ಯಾಪ್ಟಾಪ್ ಕೆಲಸ ಮಾಡದಿದ್ದರೆ ಅದನ್ನು ರಿಸ್ಟಾರ್ಟ್ ಮಾಡುವ ತಲೆಮಾರಿನವರು ನಾವು; ತೋಟಗಾರಿಕೆಯನ್ನೂ ರಿಸ್ಟಾರ್ಟ್ ಮಾಡಿದೆವು’ ಎಂದು ನಕ್ಕರು ಸುಮೇಶ್.

ಆಮೇಲೆ ಅವರು ತೋಟವನ್ನು ಗಮನಿಸಲು ಆರಂಭಿಸಿದರು. ಮನೆಯ ಸುತ್ತ ಸೂರ್ಯನ ಬೆಳಕು ಎಲ್ಲಿ ಬೀಳುತ್ತದೆ, ಯಾವ ಮೂಲೆ ಆರ್ದ್ರವಾಗಿರುತ್ತದೆ, ಮಳೆನೀರು ಎಲ್ಲಿ ಸಂಗ್ರಹವಾಗುತ್ತದೆ, ಗಾಳಿಯ ಹರಿವು ಹೇಗೆ ಬದಲಾಗುತ್ತದೆ ಎಂಬುದನ್ನು ನಿಧಾನವಾಗಿ ಅರ್ಥಮಾಡಿಕೊಂಡರು.

‘ತೋಟಗಾರಿಕೆ ಎಂದರೆ ಗಮನಿಸುವುದು ಎಂಬುದು ನಮಗೆ ಆಗ ತಿಳಿಯಿತು. ಗಿಡಗಳೇ ನಮಗೆ ಪಾಠ ಕಲಿಸಿವೆ’ ಎಂದರು.

ಈಗ ಅವರ ಮನೆಯ ಪ್ರತಿಯೊಂದು ಮೂಲೆಯಲ್ಲೂ ಹಸಿರು ಹರಡಿಕೊಂಡಿದೆ. ಅವಕಾಡೊ, ಹಿಪ್ಪುನೇರಳೆ, ಸಪೋಟ, ಬಾಳೆ, ಡ್ರ್ಯಾಗನ್ ಹಣ್ಣು, ಪೇರಳೆ ಮತ್ತು ಸೀತಾಫಲ ಮರಗಳು ಮನೆ ಸುತ್ತ ಬೆಳೆದಿವೆ. ಕಿಟಕಿ ಮತ್ತು ಬಾಲ್ಕನಿಗಳಲ್ಲಿ ಬಳ್ಳಿಗಳು ಸುರುಳಿ ಸುತ್ತಿವೆ. ನೆರಳಿರುವ ಜಾಗಗಳಲ್ಲಿ ಮಾನ್ಸ್ಟೆರಾ ಎಲೆಗಳು ಹರಡಿಕೊಂಡಿವೆ.

‘ಕಳೆದ ವರ್ಷ ಸುಮಾರು 250 ಅವಕಾಡೊಗಳನ್ನು ಕೊಯ್ಲು ಮಾಡಿದ್ದೆವು. ಸ್ನೇಹಿತರು, ನೆರೆಹೊರೆಯವರು ಮತ್ತು ಸಂಬಂಧಿಕರೊಂದಿಗೆ ಹಂಚಿಕೊಂಡೆವು. ಮಣ್ಣು ಆರೋಗ್ಯಕರವಾದಾಗ ಗಿಡಗಳು ತಾನಾಗಿಯೇ ಬಲಗೊಳ್ಳುತ್ತವೆ’ ಎಂದರು ಸುಮೇಶ್.

ಅಡುಗೆಮನೆಯ ತ್ಯಾಜ್ಯ ಮತ್ತು ಒಣ ಎಲೆಗಳೇ ಗೊಬ್ಬರವಾಗುತ್ತವೆ. ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳನ್ನು ಸಂಪೂರ್ಣ ದೂರವಿಟ್ಟಿದ್ದಾರೆ.

ಈ ಹಸಿರು ಮನೆ ಸುತ್ತಲಿನ ವಾತಾವರಣವನ್ನೂ ಬದಲಿಸಿದೆ. ಬೇಸಿಗೆಯಲ್ಲಿ ಹೊರಗಿನ ವಾತಾವರಣಕ್ಕಿಂತ ಮನೆ ತಂಪಾಗಿರುತ್ತದೆ. ಸುಮಾರು 49 ಜಾತಿಯ ಪಕ್ಷಿಗಳು ಹಾಗೂ 30ಕ್ಕೂ ಹೆಚ್ಚು ಪ್ರಭೇದದ ಚಿಟ್ಟೆಗಳು ಮತ್ತು ಪತಂಗಗಳು ಇಲ್ಲಿ ಕಾಣಿಸಿಕೊಂಡಿರುವುದನ್ನು ದಂಪತಿ ದಾಖಲಿಸಿದ್ದಾರೆ. ಹೂಬಿಡುವ ಗಿಡಗಳ ಬಳಿ ಸನ್ಬರ್ಡ್ಗಳು ಆಗಾಗ ಕಾಣಿಸುತ್ತವೆ. ಸಪೋಟ ಮರದ ಸುತ್ತ ಗಿಳಿಗಳ ಹಿಂಡು ನೋಡಬಹುದು.

ವಾರಾಂತ್ಯದಲ್ಲಿ ಗಿಡಗಳನ್ನು ಕತ್ತರಿಸುವುದು, ಗೊಬ್ಬರ ತಯಾರಿಸುವುದು, ನೀರು ಹಾಕುವುದು ಮತ್ತು ರೋಗವನ್ನು ಪತ್ತೆ ಮಾಡುವುದೇ ಇವರ ದಿನಚರಿ. ತೋಟ ಒಂದು ಹಂತಕ್ಕೆ ಬಂದ ಬಳಿಕ ಮಳೆನೀರು ಕೊಯ್ಲು ವ್ಯವಸ್ಥೆಯನ್ನೂ ಅಳವಡಿಸಿಕೊಂಡಿದ್ದಾರೆ. ತಾರಸಿ ಮೇಲಿನ ಸೋಲಾರ್ ಪ್ಯಾನಲ್ಗಳು ಮನೆಗೆ ಬೇಕಾದ ವಿದ್ಯುತ್ ಉತ್ಪಾದಿಸುತ್ತವೆ. ಹೆಚ್ಚುವರಿ ವಿದ್ಯುತ್ ಗ್ರಿಡ್ಗೆ ಸರಬರಾಜಾಗುತ್ತದೆ.

‘ಒಂದು ಒಳ್ಳೆಯ ಕೆಲಸ ಮತ್ತೊಂದಕ್ಕೆ ದಾರಿ ಮಾಡಿಕೊಟ್ಟಿತು. ತೋಟಗಾರಿಕೆ ನಮಗೆ ತ್ಯಾಜ್ಯ ನಿರ್ವಹಣೆ, ನೀರು ಮತ್ತು ಶಕ್ತಿಯ ಬಗ್ಗೆ ಹೆಚ್ಚಿನ ಅರಿವು ಮೂಡಿಸಿತು. ಕಚೇರಿಯ ಒತ್ತಡದ ನಡುವೆ ನಾನು ಹೊರಗಿನ ಪಕ್ಷಿಗಳನ್ನು ನೋಡುತ್ತಾ ಮನಸ್ಸನ್ನು ಶಾಂತಗೊಳಿಸುತ್ತೇನೆ. ವರ್ಕ್ ಫ್ರಮ್ ಹೋಮ್ ಮಾಡುವಾಗ ನನ್ನ ಮೇಜಿನ ಎದುರೇ ಹಿಪ್ಪುನೇರಳೆ ಕಾಯಿಗಳು ಕಾಣಿಸುತ್ತವೆ’ ಎಂದರು ಸುಮೇಶ್.

ಕೋವಿಡ್ ಲಾಕ್ಡೌನ್ ಸಮಯದಲ್ಲಿ ತೋಟಕ್ಕೆ ಬರುವ ಹಕ್ಕಿಗಳು, ಚಿಟ್ಟೆಗಳು ಮತ್ತು ಗಿಡಗಳ ಚಿತ್ರಗಳನ್ನು ‘1500Sqft Gardener’ ಎನ್ನುವ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಲು ಆರಂಭಿಸಿದರು. ಬೆಂಗಳೂರಿನ ಸಣ್ಣ ಜಾಗವೊಂದರಲ್ಲಿ ಇಷ್ಟೊಂದು ಜೀವವೈವಿಧ್ಯ ಕಂಡು ಜನರು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ಬಾಲ್ಕನಿ ಮತ್ತು ಅಪಾರ್ಟ್ಮೆಂಟ್ಗಳಲ್ಲಿ ಹೇಗೆ ತೋಟಗಾರಿಕೆ ಮಾಡಬೇಕು ಎಂದು ಕೇಳಿ ಅವರಿಗೆ ನೂರಾರು ಸಂದೇಶಗಳು ಬರುತ್ತಿವೆ.

‘ತೋಟ ಮಾಡಲು ದೊಡ್ಡ ಜಾಗ ಬೇಕು ಎಂದು ಹಲವರು ಭಾವಿಸುತ್ತಾರೆ. ಆದರೆ ಆರಂಭಿಸಲು ಒಂದು ಸಣ್ಣ ಜಾಗ ಸಾಕು. ಒಂದು ಗಿಡದಿಂದ ಪ್ರಾರಂಭಿಸಿ. ನಂತರ ಗಿಡಗಳೇ ನಿಮಗೆ ತೋಟದ ಪಾಠ ಕಲಿಸುತ್ತವೆ’ ಎನ್ನುವುದು ಸುಮೇಶ್ ಅವರ ಸಲಹೆ.

ಸೂರ್ಯ ಪಡುವಣದಲ್ಲಿ ಕೆಂಪಾಗುತ್ತಿದ್ದಂತೆಮನೆಯ ಮೇಲೆ ನೆರಳು ಆವರಿಸತೊಡಗಿತು. ಕಾಂಪೌಂಡ್ ಆಚೆ ಸರ್ಜಾಪುರ ರಸ್ತೆಯಲ್ಲಿ ಟ್ರಾಫಿಕ್ ಗದ್ದಲ ಹೆಚ್ಚುತ್ತಿತ್ತು. ಮನೆಯೊಳಗೆ ಮಾತ್ರ ಉಯ್ಯಾಲೆ ತಂಗಾಳಿಗೆ ಮೆಲ್ಲಗೆ ತೂಗುತ್ತಲೇ ಇತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.