ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬೇಡ್ಕರ್‌ ನೆನಕೆ... ಬಾಬಾಸಾಹೇಬರು ಯಾಕೆ ಮುಖ್ಯರು?

Last Updated 8 ಏಪ್ರಿಲ್ 2023, 22:30 IST
ಅಕ್ಷರ ಗಾತ್ರ

ಏಪ್ರಿಲ್ 14 ಅಂಬೇಡ್ಕರ್‌ ಜಯಂತಿ. ಅಂಬೇಡ್ಕರ್‌ ಅವರನ್ನು ಬೇರೆ ಬೇರೆ ಸಿದ್ಧಾಂತದವರು ಭಿನ್ನ ರೀತಿಯಲ್ಲಿ ಅರ್ಥೈಸುತ್ತಿರುವ ಹೊತ್ತಿದು. ಅವರ ಪ್ರಸ್ತುತತೆಯ ಪ್ರತಿಪಾದನೆ ಒಂದು ಕಡೆ. ಅವರ ಕುರಿತ ವಿರೋಧಾಭಾಸದ ಪ್ರತಿಕ್ರಿಯೆಗಳು ಇನ್ನೊಂದೆಡೆ. ಬಾಬಾಸಾಹೇಬರು ಯಾಕೆ ಮುಖ್ಯರು ಎಂದು ಮೂವರು ತಮ್ಮ ಅಭಿಪ್ರಾಯವನ್ನು ರಾಘವೇಂದ್ರ ಕೆ. ತೊಗರ್ಸಿ ಅವರೊಂದಿಗೆ ಹಂಚಿಕೊಂಡಿದ್ದಾರೆ.

ಧ್ವನಿಯ ಅನನ್ಯತೆ ಎತ್ತಿಹಿಡಿದ ಕಾರುಣ್ಯ: ದು. ಸರಸ್ವತಿ

ಚುನಾವಣೆಯ ಹೊತ್ತು ಇದು. ಮತದಾನಕ್ಕಾಗಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿರುವೆ. ಸಂವಿಧಾನ–ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರುವ ನಮಗೆ ಅಂಬೇಡ್ಕರ್‌ ಚಿಂತನೆ ಎಲ್ಲ ಸಂದರ್ಭದಲ್ಲೂ ಅನಿವಾರ್ಯ. ಇವತ್ತಿನ ಸಂದರ್ಭದಲ್ಲಿ ಬೇರೆ ಬೇರೆ ಬಗೆಯಲ್ಲಿ ಅಂಬೇಡ್ಕರ್‌ ಬಳಕೆಯಾಗುತ್ತಿದ್ದಾರೆ. ಬಲಪಂಥೀಯರು ಅವರನ್ನು ತಮ್ಮ ಅನುಕೂಲಕ್ಕೆ ಮಾತ್ರ ಬಳಸಿಕೊಳ್ಳುತ್ತಿದ್ದಾರೆ. ಮುಸ್ಲಿಮರಿಗಾಗಿಯೇ ಇದ್ದ ಮೀಸಲಾತಿ ಕಿತ್ತುಕೊಂಡು, ಆರ್ಥಿಕವಾಗಿ ಹಿಂದುಳಿದವರ ಪೈಕಿ ಮೀಸಲು ಕಲ್ಪಿಸಿರುವ ಸಮರ್ಥನೆ ಕೊಟ್ಟರೂ ಅದು ಸರಿ ಅಲ್ಲ. ’ಆರ್ಥಿಕವಾಗಿ ಹಿಂದುಳಿದ‘ ಎನ್ನುವ ಹೆಸರಿಗೆ ಅರ್ಥವೇ ಇಲ್ಲ. ಎಲ್ಲ ರೀತಿಯಲ್ಲೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಗುತ್ತಿದೆ.

ಸ್ವಾರ್ಥಕ್ಕೆ ಬಾಬಾ ಸಾಹೇಬರನ್ನು ಬಳಸುವವರಿಗೆ ಯಾರನ್ನು ಪ್ಲೀಸ್‌ ಮಾಡಬೇಕು, ಯಾರನ್ನು ತುಳಿಯಬೇಕು ಎನ್ನುವುದು ಚೆನ್ನಾಗಿ ಗೊತ್ತಿದೆ. ಯಾರು ಏನೇ ಹೇಳಲಿ, ಎಲ್ಲಿಯವರೆಗೆ ಅಸಮಾನತೆ ಇರುತ್ತದೆಯೋ ಅಲ್ಲಿಯವರೆಗೂ ಅಂಬೇಡ್ಕರ್‌ ಬೇಕಾಗುತ್ತಾರೆ. ಇವತ್ತಿನ ಸರ್ಕಾರಗಳು ಕಾರ್ಮಿಕ ಕಾನೂನುಗಳನ್ನು ತಿರುಚುತ್ತಿವೆ. ಅಂಬೇಡ್ಕರ್‌ ಈ ದೇಶದ ಮೊದಲ ಕಾರ್ಮಿಕ ಸಚಿವರಾಗಿದ್ದರು. ಅವರು ಮಾನವ ಹಕ್ಕು ಮತ್ತು ಕಾರ್ಮಿಕ ಹಕ್ಕುಗಳನ್ನು ಬೇರೆ ದೇಶಗಳಿಗೂ ಮಾದರಿಯಾಗುವಂತೆ ರೂಪಿಸಲು ಕಾರಣರಾಗಿದ್ದರು. ನಾನು ಪ್ರಜಾಪ್ರಭುತ್ವವನ್ನು ದೃಢವಾಗಿ ನಂಬುತ್ತೇನೆ. ಹಾಗಾಗಿ ಅಂಬೇಡ್ಕರ್‌ ಯಾವತ್ತಿಗೂ ನನಗೆ ಪ್ರಸ್ತುತ ಆಗುತ್ತಲೇ ಇರುತ್ತಾರೆ. ಭಾರತೀಯ ದಂಡ ಸಂಹಿತೆ 377ರ ಪ್ರಕಾರ ಲಿಂಗತ್ವ ಅಲ್ಪಸಂಖ್ಯಾತರನ್ನು ಅಪರಾಧಿಗಳನ್ನಾಗಿ ರೂಪಿಸಲಾಗುತ್ತಿತ್ತು. ಅವರ ದೇಹ ಅವರ ಹಕ್ಕು ಎನ್ನುವುದನ್ನು ಸಾಬೀತು ಮಾಡಲು ಅವರಿಗೆ ಮೂಲಭೂತವಾಗಿ ನೆರವಾದದ್ದು ಅಂಬೇಡ್ಕರ್‌ ಪ್ರತಿಪಾದಿಸಿದ ಸಂವಿಧಾನದ ನೈತಿಕ ಶಕ್ತಿ.

ಬಾಬಾಸಾಹೇಬರ ವ್ಯಕ್ತಿತ್ವ ಸಿನಿಮಾ, ನಾಟಕ, ಸಿನಿಮಾಗಳಿಗೆ ವಸ್ತು ಆಗುತ್ತಿದೆ. ನಾನು ನೋಡಿದ ‘ಭಾಗ್ಯವಿಧಾತ’ ನಾಟಕ ತುಂಬ ಇಷ್ಟ ಆಯ್ತು. ಅಂಬೇಡ್ಕರ್‌ ಮಾತಾಡುವ ಪ್ರಜಾಪ್ರಭುತ್ವ ನನಗೆ ಇಷ್ಟ. ಏಕೆಂದರೆ, ಅವರು ನಂಬರ್‌ ಗೇಮ್‌ ಬಗ್ಗೆ ಮಾತನಾಡುವುದಿಲ್ಲ. ಬಹುಸಂಖ್ಯಾತರೇ ಆಡಳಿತ ಮಾಡಬೇಕು, ಅವರೇ ಎಲ್ಲವನ್ನೂ ರೂಪಿಸಬೇಕು ಎನ್ನುವುದು ಅವರ ವಾದ ಅಲ್ಲ. ಪ್ರತಿಯೊಂದು ಧ್ವನಿಯೂ ಅನನ್ಯ ಎನ್ನುವುದು ಅವರ ಕಾರುಣ್ಯ.

ಲೇಖಕಿ: ಸಾಮಾಜಿಕ ಕಾರ್ಯಕರ್ತೆ

****

ಎಲ್ಲೆಡೆ ಸಲ್ಲುವವರ ಸೃಷ್ಟಿ ದ್ವಂದ್ವ: ವೀರಣ್ಣ ಮಡಿವಾಳರ

ಅಂಬೇಡ್ಕರ್‌ ಜೀವನದಿ ಇದ್ದಹಾಗೆ. ಅವರು ಎಲ್ಲ ಕಾಲಕ್ಕೂ ಪ್ರಸ್ತುತ. ಇವತ್ತು ಕ್ರಿಯಾಶೀಲ ಮಾಧ್ಯಮದಲ್ಲಿಯೂ ಅವರನ್ನು ಜನರಿಗೆ ತಲುಪಿಸುವ ಪ್ರಯತ್ನ ನಡೆಯುತ್ತಿದೆ. ಇದು ಅವರ ಮೇಲೆ ಇರುವ ಪ್ರಾಮಾಣಿಕ ಪ್ರೀತಿಯನ್ನು ತೋರಿಸುತ್ತದೆ. ಅಂಬೇಡ್ಕರ್‌ ಅವರ ಆಶಯವನ್ನು ಕಾರ್ಯರೂಪಕ್ಕೆ ತರುವ ಮಾರ್ಗದಲ್ಲಿ ಇದೂ ಒಂದು. ಅವರು ಕಂಡ ಸಮಸಮಾಜದ ಕನಸುಗಳನ್ನು ನೆರವೇರಿಸಲು ತೀವ್ರ ರೀತಿಯ ಕೆಲಸ ಆಗುತ್ತಿದೆ. ಇದೆಲ್ಲವನ್ನೂ ಆಗುಮಾಡಬೇಕಾದಂತಹವರು ಅದನ್ನು ಹಿಂದಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ. ಒಂದು ಕಡೆ ಪ್ರಾಮಾಣಿಕ ಪ್ರಯತ್ನ ಮಾಡುವವರನ್ನು ಅಂಬೇಡ್ಕರ್‌ವಾದಿಗಳು ಅಂದುಕೊಳ್ಳಿ ಇಲ್ಲವೇ ಅಂಬೇಡ್ಕರ್‌ ಚಿಂತನೆಯಲ್ಲಿ ನಂಬಿಕೆ ಇಟ್ಟವರು ಎಂದುಕೊಳ್ಳಿ. ಒಬ್ಬ ಸಾಮಾನ್ಯ ಮನುಷ್ಯನಿಂದ ಬುದ್ಧಿಜೀವಿಗಳ ತನಕ ದೊಡ್ಡಮಟ್ಟದವರೆಗೆ ಆ ಕೆಲಸ ನಡೆಯುತ್ತಿದೆ. ಅದನ್ನು ಆಗುಮಾಡಬಾರದು ಎನ್ನುವ ಪಟ್ಟಭದ್ರರು ಅಷ್ಟೇ ಶ್ರಮವಹಿಸಿ ತುಂಬ ಕ್ರಿಯಾಶೀಲವಾಗಿಯೇ ಹಿಂದಕ್ಕೆ ಎಳೆಯುತ್ತಿದ್ದಾರೆ. ಇದು ನಿಲ್ಲದ ಸಂಘರ್ಷ. ಇಂತಹ ಸಂಕೀರ್ಣ ಸಂದರ್ಭದಲ್ಲಿ ನಾವು ಮಾತ್ರ ಅಂಬೇಡ್ಕರ್‌ ಅವರ ಮೇಲಿನ ನಂಬಿಕೆಯನ್ನು ಮತ್ತಷ್ಟು ಬಲಪಡಿಸಿಕೊಳ್ಳುತ್ತಿದ್ದೇವೆ.

ಈ ಪಟ್ಟಭದ್ರರಿಗೆ ಅಂಬೇಡ್ಕರ್‌ ಚಿಂತನೆ ಬೇಕಿಲ್ಲ. ಆದರೂ ಅವರು ಬೇಕು. ಹಾಗಾಗಿಯೇ ಬಾಬಾಸಾಹೇಬರ ಚಿಂತನೆಯ ಮರುವ್ಯಾಖ್ಯಾನ, ಅಪವ್ಯಾಖ್ಯಾನವನ್ನು ಮಾಡುತ್ತಲೇ ಇರುತ್ತಾರೆ. ಅದಕ್ಕೆ ತುಂಬ ಉದಾಹರಣೆಗಳಿವೆ. ಕೋಟಗಾನಹಳ್ಳಿ ರಾಮಯ್ಯ ‘ದೃಶ್ಯ, ಮಾತು, ಶಬ್ದ ಎಲ್ಲ ಮಲಿನವಾಗಿವೆ’ ಎಂದು ಒಂದು ಕಡೆ ಹೇಳುತ್ತಾರೆ. ಏಕೆಂದರೆ ಕ್ರೌರ್ಯವನ್ನೇ ಮೈಗೂಡಿಸಿಕೊಂಡವರು ಕರುಣೆಯ ಮಾತುಗಳನ್ನು ಆಡಿದರೆ ಅದನ್ನು ಹೇಗೆ ಸ್ವೀಕರಿಸಬೇಕು? ಇವತ್ತಿನ ದ್ವಂದ್ವ ಇರುವುದೇ ಇಲ್ಲಿ.

ಭಗತ್‌ಸಿಂಗ್‌ ಆಗಲಿ, ಅಂಬೇಡ್ಕರ್‌ ಆಗಲಿ ಅನೇಕರಿಗೆ ಅನಿವಾರ್ಯವಾಗಿದ್ದಾರೆ. ಅವರನ್ನು ಮಾತಿಗಾಗಿ ಇಟ್ಟುಕೊಂಡಿರುತ್ತಾರೆ. ಅಪ್ಪಿತಪ್ಪಿಯೂ ಅಂಬೇಡ್ಕರ್‌ ಅವರ ನೈಜ ಚಿಂತನೆಯನ್ನು ಅಂಥವರು ಮಾತನಾಡುವುದಿಲ್ಲ. ಒಂದು ಕಡೆ ಕುವೆಂಪು ಅವರ ಬಗ್ಗೆ ಭಾಷಣ ಮಾಡುವವರೇ ಮತ್ತೊಂದು ಕಡೆ ಜನಾಂಗ ದ್ವೇಷದ ಮಾತುಗಳನ್ನೂ ಆಡುತ್ತಾರೆ. ಹೀಗೆ ಎಲ್ಲ ಕಡೆ ಸಲ್ಲುವವರಿಂದಲೇ ಇವತ್ತಿನ ದ್ವಂದ್ವ ಸೃಷ್ಟಿಯಾಗಿದೆ.ಇದು ಕೂಡ ಬೌದ್ಧಿಕ ಸಂಘರ್ಷಕ್ಕೆ ಕಾರಣ ಆಗುತ್ತಿದೆ.

ಲೇಖಕ: ಕವಿ, ಶಿಕ್ಷಕ

****
ಅಂಬೇಡ್ಕರ್‌ ತತ್ತ್ವ ಸಿನಿಮಾಗೂ ವಸ್ತು: ಜೀವಾ ನವೀನ್‌

ಸಿನಿಮಾದಲ್ಲಿ ಅಂಬೇಡ್ಕರ್‌ ಫೋಟೊ ತೋರಿಸಲು ಹಿಂಜರಿಯುತ್ತಿದ್ದರು. ಅಂದರೆ ತಾವು ಕೆಲವರಿಗೆ ಸೀಮಿತ ಆಗುತ್ತೇವೆ ಎನ್ನುವ ಅಳುಕು ಇದಕ್ಕೆ ಕಾರಣ. ಆದರೆ ಈಗ ಕಾಲ ಬದಲಾಗಿದೆ. ಅಂಬೇಡ್ಕರ್‌ ಅವರ ತತ್ತ್ವ ಸಿದ್ಧಾಂತಗಳೆ ಸಿನಿಮಾಗಳಿಗೆ ವಸ್ತು ಆಗುತ್ತಿವೆ. ಆ ಮೂಲಕ ಜನರಿಗೆ ಚಿಂತನಾರ್ಹ ಸಂದೇಶ ಕೊಡಲು ಸಾಧ್ಯವಾಗುತ್ತಿದೆ. ನಮ್ಮ ‘ಪಾಲಾರ್‌’ ಸಿನಿಮಾದಲ್ಲಿ ಎಲ್ಲೆಲ್ಲಿ ಸೂಕ್ತ ಅನ್ನಿಸುತ್ತೋ ಅಲ್ಲೆಲ್ಲ ಅಂಬೇಡ್ಕರ್‌ ಅವರ ಚಿತ್ರ ಮತ್ತು ಅವರ ನುಡಿಗಳನ್ನು ದುಡಿಸಿಕೊಂಡಿದ್ದೇವೆ. ಸಿನಿಮಾ ವಾಲ್‌ಪೋಸ್ಟ್‌ನಲ್ಲಿ ದೊಡ್ಡದಾಗಿ ಬಾಬಾ ಸಾಹೇಬ್‌ ಅಂಬೇಡ್ಕರ್‌ ಚಿತ್ರ ಬಳಸಿದ್ದೇವೆ. ಈ ರೀತಿ ಅವರ ಆದರ್ಶದ ಕನಸನ್ನು ಸಿನಿಮಾದಲ್ಲಿ ಬಳಸುವಂತಹ ನಿರ್ಮಾಪಕರು, ನಿರ್ದೇಶಕರು ಕನ್ನಡ ಚಿತ್ರರಂಗಕ್ಕೆ ಬರಬೇಕು.

ತಮಿಳು ಸಿನಿಮಾದಲ್ಲಿ ಅಂಬೇಡ್ಕರ್‌ ಫಿಲಾಸಫಿಯನ್ನು ಚೆನ್ನಾಗಿ ಬಳಸುತ್ತಿದ್ದಾರೆ. ಆದರೆ ನಮ್ಮಲ್ಲಿ ಹಾಗೇನಾದರೂ ಬಳಸಿದರೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಮೀಸಲಾಗುತ್ತೇವೆ ಎಂಬ ಸಂಕುಚಿತ ಆಲೋಚನೆ ಇದೆ ಎಂದು ಅನ್ನಿಸುತ್ತದೆ. ಈಗ ಆ ಮಿತಿಯನ್ನು ದಾಟಬೇಕಿದೆ. ಅಂಬೇಡ್ಕರ್‌ ಎಲ್ಲ ಧರ್ಮ, ಜಾತಿಗೆ ಬೇಕಾದವರು. ಆ ಅಂಶವನ್ನೇ ಕೇಂದ್ರವಾಗಿಟ್ಟುಕೊಂಡು ‘ಪಾಲಾರ್‌’ ಸಿನಿಮಾ ಮಾಡಿದ್ದೇವೆ.

ನಮ್ಮ ಸಮಾಜಕ್ಕೆ ನಿಧಾನವಾಗಿ ಅಂಬೇಡ್ಕರ್‌ ಅರ್ಥ ಆಗುತ್ತಿದ್ದಾರೆ. ಅವರನ್ನು ಬಿಟ್ಟು ಮುಂದಕ್ಕೆ ಹೋಗಲು ಸಾಧ್ಯ ಇಲ್ಲ ಎನ್ನುವ ಸತ್ಯ ಗೊತ್ತಾಗಿದೆ. ಸಂವಿಧಾನವನ್ನು ಗೌರವಿಸುವ ಎಲ್ಲರೂ ಬಾಬಾ ಸಾಹೇಬ್‌ ಅವರನ್ನು ಪ್ರೀತಿಸಬೇಕು.

ಈಗ ಚುನಾವಣೆ ಬಂದಿದೆ. ಪ್ರಜಾಪ್ರಭುತ್ವದ ಈ ದೇಶದಲ್ಲಿ ನಮ್ಮ ಸಂವಿಧಾನ ನೀಡಿದ ದೊಡ್ಡ ಶಕ್ತಿಯನ್ನು ನಮ್ಮ ಪ್ರತಿನಿಧಿಗಳಿಗೆ ನೀಡುತ್ತಿದ್ದೇವೆ. ವೋಟು ಎನ್ನುವುದು ಪ್ರಜಾಪ್ರಭುತ್ವದ ಮೌಲ್ಯ. ಅದನ್ನು ಎಲ್ಲ ಜಾತಿ, ವರ್ಗದವರಿಗೆ ಕಲ್ಪಿಸಿದವರು ಅಂಬೇಡ್ಕರ್‌. ಅಂತಹ ಮೌಲ್ಯದ ಹಕ್ಕನ್ನು ಹಣ–ಬಟ್ಟೆ, ಬಿರಿಯಾನಿಗೆ ಮಾರಿಕೊಳ್ಳಬಾರದು. ಒಳ್ಳೆಯ ವ್ಯಕ್ತಿಯನ್ನು ಆಯ್ಕೆ ಮಾಡುವ ನಿಲುವಿನ ಹಿಂದೆಯೂ ಅಂಬೇಡ್ಕರ್‌ ತತ್ವ ಇದೆ. ಅದನ್ನು ಅನುಷ್ಠಾನ ಮಾಡಬೇಕಿದೆ. ನಾನು ಮುಂದೆ ಯಾವ ಸಿನಿಮಾ ಮಾಡಿದರೂ ಅಂಬೇಡ್ಕರ್‌ ವಿಚಾರವನ್ನು ತೆಗೆದುಕೊಳ್ಳುತ್ತೇನೆ.

ಲೇಖಕ: ಸಿನಿಮಾ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT