ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂದರ್ಶನ | ನಿರ್ಭೀತೆ ನಜ್ಮಾ

Published 20 ಮೇ 2023, 23:55 IST
Last Updated 20 ಮೇ 2023, 23:55 IST
ಅಕ್ಷರ ಗಾತ್ರ

ಡಾ. ಎಚ್. ಎಸ್. ಅನುಪಮಾ

ವಿಜಯಪುರದಲ್ಲಿ ಇದೇ ತಿಂಗಳ 27, 28ರಂದು ನಡೆಯಲಿರುವ ಮೇ ಸಾಹಿತ್ಯೋತ್ಸವದ ಅಧ್ಯಕ್ಷೆಯಾಗಿ ಆಹ್ವಾನಿತರಾಗಿರುವ ನಜ್ಮಾ ಬಾಂಗಿ ನಾಲ್ಕು ದಶಕಗಳ ಹಿಂದೆಯೇ ಸಾಂಪ್ರದಾಯಿಕ ಮನಸ್ಸುಗಳನ್ನೆಲ್ಲ ಎದುರು ಹಾಕಿಕೊಂಡು ಬದುಕಿದವರು. ಅವರೊಂದಿಗಿನ ಈ ಸಂವಾದ, ಹೆಣ್ಣುಮಕ್ಕಳು ಗಟ್ಟಿಯಾಗಿ ನಿಲ್ಲಲು ಸ್ಫೂರ್ತಿಯಂತಿದೆ. ಅವರ ಬದುಕಿನ ಪುಟಗಳು ಸಿನಿಮೀಯವಷ್ಟೆ ಅಲ್ಲ, ಆಸಕ್ತಿಕರವೂ ಹೌದು.

1982. ಸಮಾಜಕ್ಕಾಗಿ ಏನೂ ಮಾಡಲಾಗದೇ ಮಕ್ಕಳನ್ನು ಹೆರುವುದರಲ್ಲಿ ತಾನು ಕಳೆದುಹೋದೆನಲ್ಲ ಎಂದು ಮೂರನೆಯ ಹೆಣ್ಣುಮಗುವನ್ನು ಹೆತ್ತ ಹಾಸನದ ವಕೀಲೆಯೋರ್ವಳು ವಿಷಾದಗೊಂಡಿದ್ದಳು. ಅಕಸ್ಮಾತ್ ಅವಳ ಮನೆಗೆ ಬಂದ ’ಲಂಕೇಶ್ ಪತ್ರಿಕೆ‘ಯಲ್ಲಿ ಬಿಜಾಪುರದ ಮುಸ್ಲಿಂ ಯುವತಿಯೊಬ್ಬಳು ಥಿಯೇಟರಿಗೆ ಹೋಗಿ ಸಿನಿಮಾ ನೋಡಿದ್ದಕ್ಕೆ ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾದಳೆಂದೂ, ಅವಳ ಮೇಲೆ ಫತ್ವಾ ಹೊರಡಿಸಲಾಗಿದೆಯೆಂದೂ ಸುದ್ದಿ ಬಂದಿತ್ತು. ದಂಡಿಯಾಗಿ ಭಾರತೀಯ ಸಿನಿಮಾಗಳು ತಯಾರಾಗುತ್ತಿದ್ದ 1982ನೇ ಇಸವಿಯಲ್ಲಿ ಥಿಯೇಟರಿಗೆ ಹೋಗಿ ಸಿನಿಮಾ ನೋಡುವುದು ಅಪರಾಧವಾಗಬಹುದೇ? ಹೆಣ್ಣುಮನಸ್ಸು ಆಸ್ಫೋಟಿಸಿತು. ಮಗುವನ್ನು ಮಲಗಿಸಿ ಆಕೆ ಪೆನ್ನು ಹಿಡಿದಳು.

’ಇಸ್ಲಾಮಿನಲ್ಲಿ ಮಹಿಳೆಗೂ ಮನರಂಜನೆಗೆ ಅವಕಾಶವಿದೆ. ಒಮ್ಮೆ ಪ್ರವಾದಿಯವರ ಎದುರು ಈಜಿಪ್ಟಿನ ಬುಡಕಟ್ಟು ಜನ ಪಲ್ಟಿ ಲಾಗ ಹಾಕುತ್ತಾ ಆಟ ಪ್ರದರ್ಶಿಸಿದಾಗ ಪತ್ನಿ ಆಯೆಷಾರನ್ನು ಕರೆಸಿ, ತಮ್ಮ ಬೆನ್ನ ಹಿಂದೆ ನಿಲ್ಲಿಸಿ ಅದನ್ನು ತೋರಿಸಿದ್ದರು. ಹದೀಸಿನಲ್ಲಿಯೂ ಎರಡು ಕಡೆ ಹೆಣ್ಣಿಗೂ ಮನರಂಜನೆ ಪಡೆಯುವ ಅವಕಾಶ ಇದೆಯೆಂಬ ಉಲ್ಲೇಖವಿದೆ‘ ಎಂದು ಪಕ್ಕಾ ವಕೀಲಳಾಗಿ ದಾಖಲೆ ಸಮೇತ ಬರೆದಳು. ಅದು ಅವಳು ಬರೆದ ಮೊದಲ ಬರಹವಾಗಿತ್ತು. ಅವಳಿಗೆ ಹೆಗಲಾಗಿದ್ದ ಬಾಳಸಂಗಾತಿ ಪತ್ರಿಕೆಗೆ ಕಳಿಸಿದರು. ಬರುವ ವಾರ ಅದು ಪ್ರಕಟವಾಗಿಯೇಬಿಟ್ಟಿತು! ಆ ಯುವತಿ ಹಾಸನದ ಬಾನು ಮುಷ್ತಾಕ್.

ಅವರ ಬರಹದ ಜೊತೆಜೊತೆಗೇ ಇನ್ನೂ ಒಂದು ಬರಹ ಲಂಕೇಶ್ ಪತ್ರಿಕೆಯಲ್ಲಿ ಬಂದಿತ್ತು. ಪ್ರಜಾಪ್ರಭುತ್ವ ದೇಶ ಭಾರತದಲ್ಲಿ ಎಲ್ಲ ಸಮುದಾಯದ ಮಹಿಳೆಯರೂ ದೇಶ ತಮಗೆ ಕೊಟ್ಟ ಸ್ವಾತಂತ್ರ್ಯವನ್ನು ಧರ್ಮದ ಚೌಕಟ್ಟಿನೊಳಗೆ ಪಡೆಯಲು ಸಾಧ್ಯವಿದೆ; ಶಿಕ್ಷಣ, ಉದ್ಯೋಗ, ಮನರಂಜನೆ ಪಡೆಯುವ ಹಕ್ಕು ಮುಸ್ಲಿಂ ಹೆಣ್ಣುಮಕ್ಕಳಿಗೂ ಇದೆ ಎಂದವರು ಭಾರತೀಯ ಮುಸ್ಲಿಂ ಮಹಿಳೆಯ ಸಾಂವಿಧಾನಿಕ ಹಕ್ಕನ್ನು ಎತ್ತಿ ಹಿಡಿದಿದ್ದರು. ಆಕೆ ಮಂಗಳೂರಿನ ಸಾರಾ ಅಬೂಬಕರ್. ಇಬ್ಬರಿಗೂ ಲಂಕೇಶರು ಪತ್ರ ಬರೆದು ಪತ್ರಿಕೆಗೆ ಬರೆಯುತ್ತಿರುವಂತೆ ಸೂಚಿಸಿದರು. ಮುಂದೆ ಅವರಿಬ್ಬರೂ ಮುಸ್ಲಿಂ ಮಹಿಳಾ ಸಂವೇದನೆಯನ್ನು ಕನ್ನಡಕ್ಕೆ ಪರಿಚಯಿಸಿದ ಮಹತ್ವದ ಲೇಖಕಿಯರಾದರು.

ಇದಾವುದರ ಅರಿವೂ ಇಲ್ಲದ, ಇದಕ್ಕೆಲ್ಲ ಕಾರಣಳಾದ, ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾದರೂ ನಿರ್ಭೀತೆಯಾಗಿ ಇದ್ದ ಆ ಬಿಜಾಪುರದ ಯುವತಿ ನಜ್ಮಾ ಬಾಂಗಿ.

ಒಂದು ತಲೆಮಾರಿನ ಮಹಿಳೆಯರ ಅದರಲ್ಲೂ ಮುಸ್ಲಿಂ ಮಹಿಳೆಯರ ಗಮನ ಸೆಳೆದು ಅವರನ್ನು ಲೇಖಕಿಯರನ್ನಾಗಿಸಿದ; ದೇಶವಿದೇಶಗಳಲ್ಲೆಲ್ಲ ಸುದ್ದಿಯಾಗಿದ್ದ; ನ್ಯಾಯವಾಗಿ, ಪರಹಿತಕಾರಿಯಾಗಿ, ತನ್ನಿಷ್ಟದ ಹಾಗೆ ಬದುಕಲು ಒಂಟಿಹೆಣ್ಣಿಗೂ ಅವಕಾಶ ಇದೆಯೆಂದು ಧೃಢವಾಗಿ ನಂಬಿ ಬದುಕಿದ ನಜ್ಮಾ ಬಾಂಗಿಯ ಹೆಸರು ಆವಾಗೀವಾಗ ಕಿವಿಮೇಲೆ ಬೀಳುತ್ತಿತ್ತು. ಹೆಣ್ಣಿನ ಸ್ವಾತಂತ್ರ್ಯಹರಣ, ದಮನದ ಮಾತು ಬಂದಾಗ ಸಭೆ, ಸೆಮಿನಾರು, ಪ್ರಬಂಧಗಳಲ್ಲಿ ಸುಳಿಯುತ್ತಿತ್ತು. ಸಿನಿಮಾ ನೋಡುವಂತಹ ಒಂದು ಸಾಮಾನ್ಯ ಸಂಗತಿಯು ಕೆಲವೊಮ್ಮೆ ಎಂತಹ ಸ್ಫೋಟಕ ಪರಿಣಾಮ ಬೀರಬಹುದು ಎನ್ನಲು, ಒಂದು ತಲೆಮಾರಿನ ಮೇಲೆ ಅದರ ಪ್ರಭಾವ, ಪ್ರತಿಫಲವನ್ನು ಗುರುತಿಸಲು ಪ್ರಕರಣವನ್ನು ಉದಾಹರಿಸುತ್ತಿದ್ದೆವು. ಆದರೆ ಆಕೆ ಎಲ್ಲಿ ಹೋದಳು? ಏನು ಮಾಡುತ್ತಿರಬಹುದು? ಒತ್ತಡಕ್ಕೆ ಮಣಿದು ತಣ್ಣಗಾದಳೋ? ಫೈರ್‌ಬ್ರ್ಯಾಂಡ್ ಗುಣವನ್ನಿನ್ನೂ ಉಳಿಸಿಕೊಂಡಿರುವಳೋ? ಎಂಬ ಕುತೂಹಲವುಳಿದಿತ್ತು. ಇದೇ ಏಪ್ರಿಲ್ 30ರಂದು ಬಿಜಾಪುರದಲ್ಲಿ ಅವರನ್ನು ಭೇಟಿಯಾದ ನಂತರ ಕೊರೆಯುತ್ತಿದ್ದ ಪ್ರಶ್ನೆಯ ಹುಳಗಳು ಉತ್ತರದ ಚಿಟ್ಟೆಗಳಾಗಿ ಹಾರಿದವು.

ಅಂದು ಏಪ್ರಿಲ್ 30, ರವಿವಾರ. ಸಂಜೆ ಆರು ಗಂಟೆಯ ಮೇಲೆ ಯಾರನ್ನೂ ಭೇಟಿ ಮಾಡದ ಕಾರಣ ಬೆಳಿಗ್ಗೆಯೇ ವಿಜಯಪುರದ ಗಲ್ಲಿಗಲ್ಲಿ ಸುತ್ತಿ ಗಣೇಶಗುಡಿಯ ಬಳಿಯಿದ್ದ ನಜ್ಮಾರ ಮನೆಗೆ ಹೋದೆವು. ಹೊರಗಿನಿಂದ ಅರೆಬರೆ ಮುಗಿತಾಯವಾಗಿದ್ದ ಕಾಂಕ್ರೀಟ್ ಮನೆ. ಕೈದೋಟದಲ್ಲಿ ಬಹಳ ಕಾಲದಿಂದ ಯಾರೂ ಕೈಯಾಡಿಸಿಲ್ಲವೆಂದು ಹೇಳುವ ಗಿಡಗಂಟಿಗಳು. ಮೆಲ್ಲನೆ ಹೊರಬಂದು ಓರೆದೃಷ್ಟಿ ಬೀರಿ ಮೈಮುರಿದು ಅಲ್ಲಾಚೆ ಮೆಟ್ಟಿಲ ಮೇಲೆ ದಿಗಂತ ನೋಡುತ್ತ ಕೂತ ಮುದಿಬೆಕ್ಕು. ಒಳಗೆ ವ್ಯವಹಾರದ ಮಾತು ಕೇಳುತ್ತಿತ್ತು. ಹತ್ತು ನಿಮಿಷ ಕಾದು ಬಂದವರು ಹೊರಟ ಮೇಲೆ ಒಳಹೋದೆವು. ಮನೆಯೊಡತಿ ಮುಗುಳ್ನಕ್ಕು ಮರೆಯಾದರು. ಬೇಗ ಬಂದೆವೇನೋ, ಅವರ ಚಹಾತಿಂಡಿಯಾದರೂ ಆಗಿದೆಯೋ ಇಲ್ಲವೋ ಎಂದು ಹಿಂಜರಿದು ಕೇಳಿದೆವು. `ಆಗಿದೆ, ಆಗಿದೆ. ಪೈಲೆ ಖಾನಾಪೀನಾ. ಬಾದಮೇ ನಾಹ್ನಾ, ಕಮಾನಾ. ಸಹೀ?’ ಎಂದು ಜೋರಾಗಿ ನಕ್ಕರು. ಆ ನಗುವಿನೊಂದಿಗೆ ನಮ್ಮ ನಡುವಿದ್ದ ಅಪರಿಚಿತತೆ, ಹಿಂಜರಿಕೆಯ ಗೋಡೆ ಕುಸಿದು ಬಿತ್ತು. ಮುಂದಿನ ಎರಡೂವರೆ ತಾಸು ಅವರೊಡನೆ ಹಿಂದಿ, ಇಂಗ್ಲಿಷ್, ಕನ್ನಡಗಳಲ್ಲಿ ಬಹು(ಮಿಶ್ರ)ಭಾಷಾ ಮಾತುಕತೆ ನಡೆಯಿತು. ಅದರ ಸಾರ ಇಲ್ಲಿದೆ:

ನಿಮ್ಮ ಹೆಸರಿನ, ಮನೆತನದ ಹಿನ್ನೆಲೆ.

ನನ್ನ ತಂದೆ ಎ. ಎಸ್. ಬಾಂಗಿ. ಮೂಲತಃ ವಿಜಯಪುರದವರು. ಆದಿಲ್‌ಶಾಹಿ ಅರಸರಿಗೆ ಹತ್ತಿರವಿದ್ದ, ಶಿಕ್ಷಿತರ ಕುಟುಂಬದವರು. ಹಳೆಯ ಬಿಜಾಪುರ ಗೆಜೆಟಿನಲ್ಲಿ ಇನಾಂದಾರ್, ಜಾಗೀರದಾರ್, ಪೀರ್‌ಜಾದೆ ಅಂತೆಲ್ಲ ಎಂಟು ಕುಟುಂಬಗಳ ಉಲ್ಲೇಖವಿದೆ. ಅದರಲ್ಲಿ ನಮ್ಮದೂ ಒಂದು. 400 ವರ್ಷಗಳ ಕೆಳಗೆ ಅರಸರೊಡನೆ ನಮ್ಮ ಹಿರೀಕರೊಬ್ಬರು ಬೇಟೆಗೆ ಹೋದರು. ನಮಾಜಿನ ಸಮಯದಲ್ಲಿ ಅಜಾನ್ ಕೂಗಲು ಯಾರೂ ಇಲ್ಲದ್ದರಿಂದ ನಮ್ಮ ಹಿರೀಕ ಅಜಾನ್ ಕೂಗಿದರು. ಅರಸರಿಗೆ ಖುಷಿಯಾಗಿ ಬಾಂಗಿ ಅನ್ನುವ ಬಿರುದು ಕೊಟ್ಟು, ಹಿಟ್ಟಿನಹಳ್ಳಿಯ ಹತ್ತಿರ, ಮನಗೂಳಿಯ ಹತ್ತಿರ ನೂರಾರು ಎಕರೆ ಕೃಷಿ ಭೂಮಿಯನ್ನು ಇನಾಮು ಕೊಟ್ಟರು. ಬಾಂಗಿ ಎಂದರೆ ಅಜಾನ್ ಕೂಗುವವರು ಎಂದರ್ಥ.

ನಮ್ಮ ಮತ್ತೊಬ್ಬ ಹಿರೀಕರು ಹಕೀಂ ಆಗಿದ್ದರು. ಯಾರೂ ವಾಸಿ ಮಾಡಲಾಗದ ಖಾಯಿಲೆಗಳಿಗೆಲ್ಲ ಔಷಧ ಕೊಡುತ್ತಿದ್ದರು. ಸತಾರಾದ ಸಾಹೂ ಮಹಾರಾಜರಿಗೆ ಚಿಕಿತ್ಸೆ ನೀಡಿ ಹೊಟ್ಟೆಯಲ್ಲಿದ್ದ ಗಂಟು ಕರಗಿಸಿದ್ದರು. ಅದನ್ನು ಮೆಚ್ಚಿ ಸತಾರಾದ ರಾಜರು ದಿನಕ್ಕೊಂದು ರೂಪಾಯಿ ಭಕ್ಷೀಸು ಕಳಿಸುತ್ತಿದ್ದರು. ನನಗಿನ್ನೂ ವರ್ಷಕ್ಕೊಮ್ಮೆ 365 ರೂಪಾಯಿ ಬರುತ್ತಿದ್ದದ್ದು ನೆನಪಿದೆ. 1969 ಇರ‍್ಬೇಕು, ಇಂದಿರಾಗಾಂಧಿ ಪ್ರೈವಿ ಪರ್ಸ್ ಬಂದ್ ಮಾಡಿದಾಗ ದುಡ್ಡು ಬರುವುದು ನಿಂತಿತು.

ನನ್ನ ಓದು ಬಿಜಾಪುರದಲ್ಲೇ. ತಂದೆ ಮುಂಬಯಿಯಲ್ಲಿ ಮೆಟ್ರಿಕ್ ಮಾಡಿ ಭಾರತೀಯ ಪುರಾತತ್ವ ಇಲಾಖೆಯಲ್ಲಿ ಕೆಲಸಕ್ಕೆ ಸೇರಿ 40 ವರ್ಷ ಗೋಳಗುಮ್ಮಟದ ಕಸ್ಟೋಡಿಯನ್ ಆಗಿದ್ದರು. ದೇಶವಿದೇಶಗಳ ಗಣ್ಯರಿಗೆ ಗೋಳಗುಮ್ಮಟ ತೋರಿಸ್ತಿದ್ರು. ನಾವು ಅದನ್ನು ನೋಡ್ತಾ ಬೆಳೆದೆವು. ’ಗೋಳಗುಮ್ಮಟ ನಮ್ದೇ. ಅದನ್ನ ದೇಶಕ್ಕೆ ತೋಫಾ ಕೊಟ್ಟಿದೀವಿ‘ ಅಂತ ಅಂದುಕೊಂಡಿದ್ದೆವು.

ಅಮ್ಮ ಫಾತಿಮುನ್ನಿಸಾ ಬೇಗಂ ಹೈದರಾಬಾದಿನವರು. ಬಡಜನರ ಪ್ರೀತಿಪಾತ್ರಳು. ಮನೆಯ ಬಜೆಟ್ ಮಾಡಿ, ಖರ್ಚು ನಿಭಾಯಿಸಿ, ಬಡವರಿಗೂ ಕೊಟ್ಟು, ಆಪತ್ತಿಗೆಂದು ದುಡ್ಡು ಉಳಿಸುತ್ತಿದ್ದಳು. ನಮ್ಮ ಬಡಾವಣೆಯ ಮುದುಕರು, ಅನಾಥರು ಊಟದ ಹೊತ್ತಿಗೆ ಮನೆಗೆ ಬಂದುಬಿಡೋರು. ಅವರೆಲ್ಲ ಅಮ್ಮನ್ನ ಬೀಬೀ ಅಂತ ಕರೆಯೋದು ಕೇಳಿ ನಾವೂ ಬೀಬೀ ಅಂತನೇ ಕರೀತಿದ್ವಿ. ಅಮ್ಮನ ತಾಯಿ, ನಮ್ಮಜ್ಜಿ, ಹೈದರಾಬಾದಲ್ಲಿ ಹೆಡ್‌ಮಿಸ್ ಆಗಿದ್ದರು. ಚಿಕನ್ ಕಾಟನ್ ಸೀರೆಯುಟ್ಟು, ಶೂಸ್ ಹಾಕಿ, ಕಾಲುಮೇಲೆ ಕಾಲು ಹಾಕಿ ಕುರ್ಚೀಲಿ ಕೂತರೆ ನೋಡಬೇಕು, ರಾಣಿ ತರಹ ಕಾಣ್ತಿದ್ದರು. ಆಗ ಬಡಮಕ್ಕಳು ಜಾಣರಾಗಿದ್ರೂ ಓದಕ್ಕೆ ಆಗ್ತಿರಲಿಲ್ಲ. ಅವರಿಗೆಲ್ಲ ಅಜ್ಜಿ ಸಹಾಯ ಮಾಡೋರು. ಮನೆಮನೆಗೆ ಹೋಗಿ ಹುಡುಗ್ರಿಗೆ ಓದಿಸಿ ಅಂತ ರ‍್ಕೊಂಡು ರ‍್ತಿದ್ರು. ಅದಕ್ಕೇ ಅವರಂದ್ರೆ ಎಲ್ಲರಿಗೂ ಗೌರವ. ಕಂಡಕಂಡಲ್ಲಿ ಗುರುಮಾತೆಗೆ ನಮಸ್ಕಾರ ಮಾಡೋರು. ’ದುವಾ ಮಾಡಿ, ನಮಗೆ ಒಳ್ಳೇದೇ ಆಗುತ್ತೆ’ ಅಂತಿದ್ದರು. (ಈಗ ಶಿಕ್ಷಕರು ಮಕ್ಕಳ ಕಾಲಿಗೆ ಬಿದ್ದು ದುವಾ ಮಾಡಿ ಅನ್ಬೇಕು, ಹಾಗಾಗಿದೆ ಅಲ್ವಾ ಎಂದು ನಜ್ಮಾ ನಗಲು, ಆ ನಗುವಿನ ಹೊಡೆತಕ್ಕೆ ಬಾಬ್‌ಕಟ್ ಆದ ಬಿಳಿಕರಿ ಕೂದಲು ಅತ್ತಿತ್ತ ಓಲಾಡಿ ತಾನೂ ಬಿದ್ದುಬಿದ್ದು ನಗಾಡಿತು.) ಆದರೆ ಅಂಥ ಅಜ್ಜಿಯ ಮಗಳು ನಮ್ಮಮ್ಮ ತುಂಬ ಸಾಂಪ್ರದಾಯಿಕಳು. ಬಿಲ್‌ಕುಲ್ ಮನೆಬಿಟ್ಟು ಹೊರಗೆ ಬರಲಿಲ್ಲ. ಏಳನೇಯತ್ತೆವರೆಗೆ ಮಾತ್ರ ಓದಿದ್ದು. ಪ್ರಯಾಣಿಸುವಾಗ ಟಾಂಗಾದ ಸುತ್ತ ಚಾದರ್ ಕಟ್ಟಿ ಯಾರಿಗೂ ಕಾಣದಂತೆ ಹೋಗಿಬರುತ್ತಿದ್ದಳು.

ನನಗೆ ಇಬ್ಬರು ಸೋದರರು, ನಾಲ್ವರು ಸೋದರಿಯರು. ಒಬ್ಬ ಅಣ್ಣ ಎಸ್ಸೆಸ್ಸೆಲ್ಸಿ ತನಕ ಕನ್ನಡ ಮೀಡಿಯಂನಲ್ಲಿ ಓದಿ ಇಂಗ್ಲಿಷ್ ಎಂ.ಎ. ಮಾಡಿ ಉದ್ಯೋಗ ಹಿಡಿದ. ತಮ್ಮ ಇಂಗ್ಲಿಷ್ ಮೀಡಿಯಂನಲ್ಲಿ ಓದಿ, ಪದವಿ ಪಡೆದು ’ಟೈಮ್ಸ್ ಆಫ್ ಇಂಡಿಯಾ‘ ಸೇರಿದ. ಒಬ್ಬ ಸೋದರಿ ಮರಾಠಿ ಮೀಡಿಯಂನಲ್ಲಿ ಓದಿ, ಉಸ್ಮಾನಿಯಾದಿಂದ ಎಕನಾಮಿಕ್ಸ್ ಪದವಿ ಪಡೆದಳು. ಮತ್ತೊಬ್ಬ ಸೋದರಿ ಹಿಂದಿ ಮೀಡಿಯಂನಲ್ಲಿ ಕಲಿತು ಬಿ.ಎ. ಮಾಡಿದಳು. ನಾನು ಹೈಸ್ಕೂಲಿನವರೆಗೆ ಉರ್ದು ಮೀಡಿಯಂ. ಆಮೇಲೆ ಕೆಸಿಪಿ ಸೈನ್ಸ್ ಕಾಲೇಜಿನಲ್ಲಿ ಬಿಎಸ್ಸಿ ಸಿಬಿಜಡ್ ಓದಿದೆ. ಪ್ರವಾದಿಯವರ ಹೇಳಿಕೆಯಂತೆ ನನ್ನ ತಾಯ್ತಂದೆ ಮಕ್ಕಳೆಲ್ಲರಿಗೂ ಶಿಕ್ಷಣ ಕೊಡಿಸಿದರು. ಬೇರೆಬೇರೆ ಭಾಷಾ ಮಾಧ್ಯಮದಲ್ಲಿ ಕಲಿಸಿದರು.

ಸಾಂಪ್ರದಾಯಿಕ ರೂಢಿಗಳನ್ನು ನಿರಾಕರಿಸಿ ಬದುಕೋಕೆ ಹೇಗೆ ಸಾಧ್ಯವಾಯಿತು?

ಅಪ್ಪ ಮುಕ್ತ ಯೋಚನೆಗಳಿದ್ದೋರು. ಅಮ್ಮ ಮಾತ್ರ ಸಾಂಪ್ರದಾಯಿಕಳು. ಮೊದಲಿಂದ ನಾನು ’ಒಂಥರಾ‘. ಎಷ್ಟು ನಕ್ಕು ನಗಿಸ್ತೀನೋ ಅಷ್ಟೇ ಹಠಾ ಹಿಡೀತಿದ್ದೆ. ನನಗೇನು ಇಷ್ಟವೋ ಹಾಗೆ ಮಾಡುವುದೇ. ತುಂಬ ಜಗಳಗಂಟಿ. ವಿದ್ಯಾರ್ಥಿ ಸಂಘಟನೆಯ ಪ್ರತಿನಿಧಿ ಆಗಿದ್ದೆ. ಯೂನಿಯನ್ ಲೀಡರ್ ಆಗಿದ್ದೆ. ಅದೇನೂ ಹುಡುಗಿಯರ ಕಾಲೇಜಲ್ಲ, ಕಂಬೈನ್ಡ್. ಪರ್ದಾ ಇರಲಿಲ್ಲ. ಒಂದಿನ ಬಸ್ಸಲ್ಲಿ ತುಂಬ ರಶ್ ಇತ್ತು. ನನ್ನ ಪಕ್ಕದ ಸೀಟಲ್ಲಿ ಒಬ್ಬ ಹುಡುಗ ಬಂದು ಕೂತ. ‘ಹುಡುಗ್ರ ಸೀಟು ಅಲ್ಲಿದೆ, ಇಲ್ಯಾಕೆ ಕೂತ್ಯೋ?’ ಅಂದೆ. ಅವನು ಏಳಲಿಲ್ಲ. ಕೋಪ ಬಂದು ಬಸ್ಸಿಳಿದಿದ್ದೇ ಪ್ರಿನ್ಸಿಪಾಲ್ ಹತ್ರ ಹೋದೆ. ಅವನ್ನ ಕರೆಸಿ ಡಿಬಾರ್ ಮಾಡ್ತಿವಿ ಅಂದಾಗ ಹೆದರಿ ಕಾಲಿಗೆ ಬೀಳಕ್ಕೆ ಬಂದ. ನಾನು ಯಾರಿಗೂ, ಯಾವುದಕ್ಕೂ ಹೆರ‍್ತಾ ರ‍್ಲಿಲ್ಲ. ನಾವು ಸರಿ ದಾರೀಲಿರುವಾಗ ಯಾಕೆ ಹೆದರಬೇಕು ಅಂತ. ಒಂದ್ಸಲ ಯಾರೋ ಹಿಂದಿನಿಂದ ಚುಡಾಯಿಸಿದ್ರು. ಲೂನಾ ನಿಲ್ಲಿಸಿ, ಚಪ್ಲಿ ತಗಂಡು ಹೊಡೆದು ಬಂದಿದೀನಿ. ಹ್ಞಾಂ, ಬಿಜಾಪುರದಲ್ಲಿ ಲೂನಾ ಓಡ್ಸಿದ ಮೊದಲ ಹೆಣ್ಣುಮಗಳು ನಾನು. 20 ವರ್ಷ ಓಡಿಸಿದ್ರೂ ನಾನು ಅದನ್ನ ಬಿಡಲಿಲ್ಲ. ಕೊನೆಗೆ ಅದಕ್ಕೇ ಬೋರಾಗಿ ನನ್ನ ಬಿಟ್ಟೋಯ್ತು. (ಅಂದ್ರೆ ಪಾರ್ಕಿಂಗಿನಲ್ಲಿ ನಿಲ್ಲಿಸಿದ್ದನ್ನು ಯಾರೋ ಕದ್ದು ಒಯ್ದರಂತೆ.)

ಬಿಎಸ್ಸಿ ಆಯ್ತು, ಆಮೇಲೆ?

ಅಷ್ಟೊತ್ತಿಗೆ ತಂದೆಗೆ ಅನಾರೋಗ್ಯವಾಯ್ತು. ಬಂಗಾಳದಲ್ಲಿ ಗಲಭೆ ಆಗಿ ಕೆಲಸ ಕಳೆದುಕೊಂಡು ಒಬ್ಬ ಅಣ್ಣ ಮನೆಗೆ ಬಂದ. ನಾನು ಜಮೀನು ನೋಡ್ತೀನಿ ಅಂತ ಹಳ್ಳಿ ಕಡೆ ಹೋಗ್ಬಿಟ್ಟ. ಆಗೆಲ್ಲ ಬಿಎಸ್ಸಿ ಮಾಡಿದರೆ ಹೈಸ್ಕೂಲಲ್ಲಿ ಸುಲಭದಲ್ಲಿ ಕೆಲಸ ಸಿಗತಿತ್ತು. ಅಂಜುಮನ್ ಸಂಸ್ಥೆಯಲ್ಲಿ ಶಿಕ್ಷಕಿಯಾದೆ. ಕೆಲಸ ಮಾಡ್ತನೇ ಬಿಎಡ್ ಕಟ್ಟಿದೆ. ಎರಡು ಸಲ ರಜೆ ಬಂದಾಗ ಧಾರವಾಡಕ್ಕೆ ಹೋಗಿ ಪಾಠ ತಗೊಂಡು ಬಂದು ಬಿಎಡ್ ಮುಗಿಸಿದೆ. ಇನ್ನೂ ಏನಾದರೂ ಓದಬೇಕಲ್ಲ ಅನಿಸಿ ಎಲ್‌ಎಲ್‌ಬಿ ಕಟ್ಟಿದೆ. ಆದರೆ ಮುಗಿಸಕ್ಕೆ ಆಗಲಿಲ್ಲ. ಹೀಗೇ ಎಲ್ಲ ನಡೀತಿತ್ತು. ಪಾಠ ಮಾಡ್ತಾ, ನಗುತ್ತ, ಕೀಟಲೆ ಮಾಡ್ತಾ, ವಿದ್ಯಾರ್ಥಿಗಳಿಗೆ `ಸ್ಟ್ರಿಕ್ಟ್’ ಆದರೂ ಪೆಟ್ ಟೀಚರಾಗಿ ಆರಾಮವಾಗಿ ಇದ್ದುಬಿಟ್ಟೆ. ಇಷ್ಟಬಂದಲ್ಲಿ ಹೋದೆ, ಇಷ್ಟಬಂದದ್ದು ಖರೀದಿ ಮಾಡಿದೆ. ಮನದಿಚ್ಛೆಯಂತೆ ಉಟ್ಟೆ, ತೊಟ್ಟೆ. ಬುರ್ಖಾ ತೊಡು, ತಲೆಗೆ ಬಟ್ಟೆ ಸುತ್ತಿಕೋ ಅಂತ ಅಮ್ಮ ಒತ್ತಾಯ ಮಾಡಿದರೂ ಕ್ಯಾರೇ ಅನ್ನಲಿಲ್ಲ. ಅಪ್ಪ ನನ್ನಿಷ್ಟದಂತೆ ಇರಕ್ಕೆ ಸಪೋರ್ಟ್ ಮಾಡಿದರು.

1982ನೇ ಇಸವಿ ಬಗೆಗೆ ಹೇಳಿ.

ಏನಂತ ಹೇಳೋದು?! ಆಗ ಕೆಲವು ಹೆಣ್ಣುಮಕ್ಕಳಿಗೆ ಸಿನಿಮಾ ಹುಚ್ಚು ಹಿಡಿದಿತ್ತು. ಕದ್ದು ಮುಚ್ಚಿ ನೋಡೋರು. ಮನೆ ಕೆಲಸ ಮುಗಿಸಿ ಸೆಕೆಂಡ್ ಶೋಗೆ ಹೋಗೋರು. ಮಸಾಲೆ ಸಿನಿಮಾನೂ ನೋಡೋರು. ಪರ್ದಾ ಇಲ್ಲ ಅಂತ ತಕರಾರು ಬರಬಾರದಲ್ಲ, ಟಾಕೀಸಲ್ಲಿ ಪರ್ದಾ ಕಟ್ಟಿಸಿ ನೋಡಿಬರೋರು. ಸಿನಿಮಾ ಅಂದ್ರೆ ಹರಾಂ. ಹೆಂಗಸರು ಪಿಚ್ಚರ್ ನೋಡಿ ಹಾಳಾಗೋದನ್ನ ಹೇಗೆ ನಿಲಿಸೋದು ಅಂತ ಕೆಲವರಿಗೆ ತಲೆಬಿಸಿಯಾಗಿಬಿಟ್ಟಿತ್ತು. ’ಬಂದ್ ಕರೋಮಾ ಬಂದ್ ಕರೋ, ಪಿಚ್ಚರ್ ದೇಖನಾ ಬಂದ್ ಕರೋ‘ ಅಂತ ಹಾಡು ಹೇಳಿಸುತ್ತಿದ್ರು. ಆದ್ರೆ ಹೀರೋ ಹೀರೋಯಿನ್‌ಗಳಲ್ಲಿ ಎಷ್ಟೊಂದು ಜನ ಮುಸ್ಲಿಮರೇ ಇದ್ದರು. ’ಅರೆ, ಅವ್ರೆಲ್ಲ ಆಕ್ಟಿಂಗ್ ಮಾಡ್ತಾರಲ್ವಾ? ಸಿನಿಮಾ ತೆಗೆದಿರೋದು ಯಾಕೆ ಮತ್ತೆ, ನೋಡಕ್ಕಲ್ವ?‘ ಅಂತ ನನಗನಿಸ್ತಿತ್ತು. ಆಗ ’ಲಾ ಖುದಾ‘ ಅಂತನೋ ಏನೋ ಒಂದು ಸಿನಿಮಾ ಲಕ್ಷ್ಮಿ ಥಿಯೇಟರಿಗೆ ಬಂತು. ನೋಡೇಬಿಡಣ ಅಂತ ಹೋದೆ. ಟಿಕೆಟ್ ತಗೊಂಡೆ. ಯಾರೋ ನನ್ನ ನೋಡಿ ಫೋನ್ ಮಾಡಿ ನಮ್ಮ ಜನರನ್ನ ಕರೆಸಿದ್ರು. ಟಿಕೆಟ್ ಕೊಟ್ಟಾಂವ ಬಂದು, ’ಯವ್ವಾ, ಮನೀಗ್ ಹೋಗವ್ವ, ನೀವ್ ಬರಂಗಿಲ್ಲಂತ ಇಲ್ಲೆಲ್ಲ’ ಅಂದ. ನಾನು ಸುಮ್ನೆ ಅವನ ಕಡೆ ನೋಡಿ ಒಳಗೆ ಹೋದೆ. ತಗೋ, ಹೊರಗೆ ಗಲಾಟೆ ಶುರುವಾಯ್ತು. ಥಿಯೇಟರಿನ ಮ್ಯಾನೇಜರ್ ಬಂದು, ’ನಮ್ಮಲ್ಲಿ ಪರ್ದಾ ಸಿಸ್ಟಂ ಇಲ್ಲ, ನೀವ್ ಹೊರಗ ಹೋಗರಿ ಮೇಡಂ‘ ಅಂತ ಕೈಮುಗಿದ. ’ನಾನು ದುಡ್ ಕೊಟ್ಟು ಟಿಕೆಟ್ ತಗಂಡಿದಿನಿ. ಸಿನಿಮಾ ನೋಡೇ ನೋಡ್ತಿನಿ. ಅವ್ರು ಗಲಾಟೆ ಮಾಡ್ತಿದ್ರೆ ಪೊಲೀಸರನ್ನ ಕರೆಸಿ. ನಾ ಯಾಕೆ ಹೊರಗೆಹೋಗಲಿ’ ಅಂತ ಕೂತ್ಬಿಟ್ಟೆ. ಆರಾಮಾಗಿ ಪೂರ್ತಿ ಸಿನಿಮಾ ನೋಡಿ ಹೊರಗೆ ಬಂದ್ರೆ ಎಲ್ಲ ಕೆರಳಿ ನಿಂತಿದಾರೆ. `ಸಿನಿಮಾ ಕೆಟ್ಟದು, ನೋಡಬಾರ್ದು’ ಅಂದ್ರು. `ಕೆಟ್ಟದಾದ್ರೆ ಮುಸ್ಲಿಂ ಗಂಡಸರೆಲ್ಲ ಸಿನಿಮಾ ನೋಡತಾರಲ, ಅವರಿಗೂ ಬರಬೇಡ ಅಂತ ಹೇಳಿ’ ಅಂದೆ. ’ಉಲ್ಟಾ ಮಾತಾಡ್ಬೇಡ. ಇನ್ನು ಪಿಚ್ರ‍್ಗೆ ಬಂದ್ರೆ ಸರೀ ಇರಲ್ಲ. ಥಿಯೇಟ್ರನ್ನೇ ಬಂದ್ ಮಾಡಸ್ತೀವಿ‘ ಅಂದ್ರು. ’ಕೆಟ್ಟದನ್ನೆಲ್ಲ ಬಂದ್ ಮಾಡ್ಸದಾದ್ರೆ ಮೊದ್ಲು ಹೆಂಡದ ಅಂಗ್ಡಿ ಬಂದ್ ಮಾಡ್ಸಿ‘ ಅಂದೆ. ಅವ್ರಿಗೆ ಕೆರಳೋಯ್ತು. ’ಮರ್ಯಾದಸ್ಥರ ಮನಯೋಳಂಗೆ ಕಾಣ್ತೀ. ಜಮಾತಿಂದ ಹೊರಗಾಕಿಸ್ತೀವಿ ನೋಡು‘ ಅಂದ್ರು. ಗದ್ದಲ ಶುರುವಾಯ್ತು. ತಳ್ಳಾಟ, ನೂಕಾಟ, ಕೆಟ್ಟಕೆಟ್ಟ ಮಾತು. ಅಷ್ಟೊತ್ಗೆ ಉಂಯ್ಞ್ ಉಂಯ್ಞ್ ಅಂತ ಪೊಲೀಸ್ ವ್ಯಾನ್ ಬಂದಿದ್ದೇ ಎಲ್ಲ ಓಡೋದ್ರು. ಪೊಲೀಸ್ ಜೀಪಲ್ಲಿ ನನ್ನನ್ನ ಮನೆಗೆ ತಂದು ಬಿಟ್ಟರು.

ಮರುದಿನ ಶಾಲೆಗೆ ಹೋಗ್ಬೇಕು ಅಂತ ಹೊರಗೆ ಬಂದ್ರೆ, ’ಹೊರಗ್ಬಾ, ನಿನ್ ಸುಟ್ಟಾಕ್ತೀವಿ. ನಿನ್ ಮನೆ ಸುಡ್ತೀವಿ‘ ಅಂತ ಒಂದು ಗುಂಪೇ ಜಮಾಯಿಸಿದೆ! ಅಪ್ಪನಿಗೆ ಸಖತ್ ಸಿಟ್ಟು ಬಂತು. ’ನನ್ನ ಮನೆ ಮುಂದೆನೇ ನಿಂತು ಸುಟ್ಟಾಕ್ತೀನಿ ಅಂತೀರಾ? ನನ್ನ ಮಗಳು ಅವಳು, ನೀವ್ಯಾರ‍್ರೋ ಕೇಳೋಕೆ? ಅದೆಂಗ್ ಸುಟ್ಟಾಕ್ತೀರೋ ನೋಡೇಬಿಡ್ತೀನಿ‘ ಅಂತ ಸ್ಟೇಷನ್ನಿಗೆ ಹೋದ್ರು. ನಾನೂ ಹೋದೆ. ಕಂಪ್ಲೇಂಟ್ ಬರ‍್ದೆ. ಮನೆ ಹತ್ರ ಪೊಲೀಸ್ ಕಾವಲು ಹಾಕಿದ್ರು. ಹಿಂದೊಬ್ರು, ಮುಂದೊಬ್ರು ಪೊಲೀಸ್. ಶಾಲೆಗೆ ಹೋದ್ರೆ ನನ್ನ ಜೊತೆಗೇ ಪೊಲೀಸ್. ಡಿಸಿ ಆಫೀಸಿಗೆ ಹೋಗಿ ಬರಲಿಕ್ಕೂ ಹಿಂದೆ ಮುಂದೆಲ್ಲ ಪೊಲೀಸ್ ವೆಹಿಕಲ್. ಹೀಗೇ ನಡೀತು.

ಪತ್ರಿಕೆಯವರು, ಹೋರಾಟಗಾರರು ನಿಮಗೆ ಬೆಂಬಲ ಕೊಡಲಿಲ್ವಾ?

ಕೊಟ್ಟಿದಾರೆ. ಈ ಘಟನೆ ಬಗ್ಗೆ ಎಲ್ಲಾ ಕಡೆ ಸುದ್ದಿ ಬಂತು. ಒಂದು ಕನ್ನಡ ಪೇಪರ್ ಇಡೀ ಪುಟ ಸುದ್ದಿ ಹಾಕ್ತು. ಎಲ್ಲಾ ಬಂದ್ರು. ಬಿಬಿಸಿ, ವಾಷಿಂಗ್ಟನ್ ಪೋಸ್ಟಲ್ಲೂ ಸುದ್ದಿ ಬಂತಂತೆ. ಒಂದು ಪತ್ರಿಕೇಲಿ, (ಲಂಕೇಶ್ ಪತ್ರಿಕೆ ಅನಿಸುತ್ತೆ), `ಧರ್ಮದ ಗುತ್ತಿಗೆ ಹಿಡಿದ ಮೂಲಭೂತವಾದಿಗಳನ್ನು ಎದುರಿಸಿ, ತಾರತಮ್ಯವನ್ನು ಪ್ರತಿಭಟಿಸಿ, ಅವಿವಾಹಿತ ಯುವತಿ ಸಿನಿಮಾ ನೋಡಿಬಂದು ಹೋರಾಟ ಮಾಡಿದಳು’ ಅಂತ ಬರೆದುಬಿಟ್ಟಿದ್ರು. ಯುದ್ಧನೇ ಶುರು ಆಯ್ತು. `ಕುರಾನ್ ವಿರುದ್ಧ ಹೇಳೋವಷ್ಟು, ಧರ್ಮನೇ ಎದುರು ಹಾಕ್ಕೊಳೋವಷ್ಟು ಸೊಕ್ಕಾ ನಿಂಗೆ’ ಅಂದರು. ನಿಜವಾಗಿ ನಾನು ಧರ್ಮನ ಎದುರು ಹಾಕ್ಕೊಳಕ್ಕೆ ಅಂತ ಸಿನಿಮಾ ನೋಡಲಿಲ್ಲ. ನೋಡಬೇಕನಿಸಿ ನೋಡಿದ್ದೆ ಅಷ್ಟೆ. ಇದ್ದಕ್ಕಿದ್ದಂಗೆ ವಿಲನ್ ಆಗಿಬಿಟ್ಟಿದ್ದೆ.

ಅಷ್ಟು ಗಲಾಟೆ ಆದಮೇಲೆ ಕೆಲಸ ಮಾಡಕ್ಕೆ ಕಷ್ಟವಾಗಲಿಲ್ವಾ?

ಆಯ್ತು. ಹೆಜ್ಜೆಹೆಜ್ಜೆಗೂ ಕಷ್ಟ. ಮಕ್ಕಳನ್ನು ನನ್ನ ವಿರುದ್ಧ ಎತ್ತಿ ಕಟ್ಟಿದರು. ಈ ಮೇಡಂ ಪಾಠ ಮಾಡಲ್ಲ, ಧರ್ಮದ ವಿರುದ್ಧ ಹೇಳ್ತಾರೆ, ನಮಗವರ ಪಾಠ ಬೇಡ ಅಂತ ಸ್ಟೂಡೆಂಟ್ಸ್ ಹತ್ತಿರ ಬರೆಸಿಕೊಂಡರು. ಒತ್ತಾಯಕ್ಕೆ ಬರೆದುಕೊಟ್ಟ ಮಕ್ಕಳು ನನ್ನ ಹತ್ರ ಅಳ್ತಾ ಬಂದು ಹೇಳಿದವು. ವಸ್ತçಸಂಹಿತೆ ಬೇರೆ ಅನುಸರಿಸ್ತಾ ಇರಲಿಲ್ಲ ಅಂತ ಕೋಪವಿತ್ತು. ಸಸ್ಪೆಂಡ್ ಮಾಡಿದರು. ಆದರೆ ಒಂದೇ ತಿಂಗಳಲ್ಲಿ ಖುದ್ದು ಪ್ರಧಾನಿಯೇ ಆಸಕ್ತಿ ವಹಿಸಿ ಸಸ್ಪೆನ್ಶನ್ ರದ್ದಾಯಿತು. ಆದರೆ ನಾನಾ ರೀತಿಯ ಕಿರುಕುಳ. ಇಲ್ಲಿಂದ ಅಲ್ಲಿಗೆ, ಅಲ್ಲಿಂದ ಇಲ್ಲಿಗೆ ಫುಟ್ಬಾಲಿನಂತೆ ಓಡಾಡಿಸಿದರು. ಪಾಠ ಮಾಡಕ್ಕೆ ತರಗತಿಗಳನ್ನೇ ಕೊಡಲಿಲ್ಲ. ಟೈಂಟೇಬಲ್ ಹಾಕಲಿಲ್ಲ. ಸಂಬಳ ಸರಿಯಾಗಿ ಬರಲಿಲ್ಲ. ಪದೇಪದೇ, ರಾತ್ರೋರಾತ್ರಿ ಮನೆಯ ನೀರಿನ ಪೈಪ್ ಒಡೀತಿದ್ದರಿಂದ ನೀರಿಗೂ ಪರದಾಡಬೇಕಾಯಿತು. ಅಷ್ಟಾದರೂ 12 ವರ್ಷ ಕೆಲಸ ಮಾಡಿದೀನಿ. ಕೊನೆಗೆ ದುಡ್ಡು ಮುಖ್ಯವಲ್ಲ, ನೆಮ್ಮದಿಯಿಂದ ಬದುಕೋದು ಮುಖ್ಯ ಅಂತ ಅಪ್ಪ ಕೆಲಸ ಬಿಡಲಿಕ್ಕೆ ಹೇಳಿದರು. ವಿಆರೆಸ್ ತಗೊಂಡೆ.

ಪ್ರೀತಿ, ಪ್ರೇಮ, ಮದುವೆ ಅಂತೆಲ್ಲ..

ನೋ ನೋ ನೋ. ಲವ್ ಗಿವ್ವೆಲ್ಲ ಆಗಲಿಲ್ಲ. ಇಷ್ಟು ಜೋರಿರೋ ಹೆಂಗ್ಸನ್ನ ಯಾವ ಗಂಡಸಾದ್ರೂ ಲವ್ ಮಾಡ್ತಾನಾ? (ಕಣ್ಣು ಮಿಟುಕಿಸಿ ನಗು.) ಮನೆಯಲ್ಲಿ ಮದುವೆಯ ಮಾತು ರ‍್ತಿತ್ತು. ಅಕ್ಕಂದಿರ, ಅಣ್ಣಂದಿರ ಮದುವೆ ಆಗಿತ್ತು. ನಾನು ಮಾತ್ರ ಗಟ್ಟಿಯಾಗಿ ’ಒಲ್ಲೆ‘ ಅಂದೆ. ’ಮದುವೆಯಾದರೆ ಮುಗೀತು, ಬಾಳೆಲ್ಲ ಗುಲಾಮಗಿರಿ. ನಾನೂ ದುಡಿತೇನೆ, ಅವನೂ ದುಡೀತಾನೆ. ಆದ್ರೆ ಸಂಜೆ ಬಂದ್ಮೇಲೆ ಆರಾಮ ಕೂತು ಚಾ ಅಂದರೆ ಚಹಾ ಕೊಡಬೇಕು. ತಲೆನೋವೆಂದರೆ ಬಾಮ್ ಉಜ್ಜಬೇಕು. ನಾಕು ಸಾಮಾನು ಪಟ್ಟಿ ಬರೆದು ತರಿಸೋಕೆ ಬೆಣ್ಣೆ ಹಚ್ಚಬೇಕು. ಅವರು ಹೇಳಿದಂಗೇ ಅಡುಗೆ, ಮಾತು, ಬಟ್ಟೆ, ಯಾತ್ರೆ, ಮಕ್ಕಳುಮರಿ, ಸಂಸಾರ. ಅಬ್ಬಬ್ಬ, ನನ್ನ ಕೈಲಿ ಸಾಧ್ಯವಿಲ್ಲ. ನನಗೂ ಸೇವೆ ಮಾಡೋವಂತಾ, ಜೊತೆಯಿದ್ರೂ ನನ್ನಿಷ್ಟದಂತೆ ಇರೋಕೆ ಬಿಡೋ ಗಂಡು ಸಿಕ್ಕರಷ್ಟೇ ಮದುವೆ ಅಂದೆ. ಅವತ್ತಷ್ಟೇ ಅಲ್ಲ, ಯಾವತ್ತಿಗೂ ಅಂತಹ ಗಂಡು ಭೂಮಿ ಮೇಲೆ ಸಿಗಲ್ಲ ಅನ್ನೋದು ಗೊತ್ತಾಗಿ ಮನೆಯವರು ಸುಮ್ಮನಾದ್ರು.

ಮನೆಯಲ್ಲೇ ಇರಕ್ಕೆ ಬೇಸರ ಆಗಲಿಲ್ಲವೆ?

ಬೇಸರ ಕಳೆಯಲಿಕ್ಕೆ ಒಂದೇಸಮ ಓದಿದೆ. ಲೈಬ್ರರಿ ಪುಸ್ತಕ, ನ್ಯೂಸ್‌ಪೇಪರ್ ಓದಿದ್ದೇ ಓದಿದ್ದು. ಆಲಮಟ್ಟಿ ಅಣೆಕಟ್ಟೆ ಏರಿಸುವ ಹೋರಾಟದ ಬಹಿರಂಗ ಸಭೆಗೆ ಹೋಗಿದ್ದೆ. ಮಹಿಳಾ ಸಂಘಟನೆಗಳು ಕರೆದವು. ಸ್ವಲ್ಪಸ್ವಲ್ಪ ಪಾಲ್ಗೊಂಡೆ. ಬೆಳಗಾವಿಯ ಮಹಿಳಾ ದಿನಾಚರಣೆಯೊಂದಕ್ಕೆ ಕರೆದರು. ರಾಯಚೂರು ಬಂಡಾಯ ಸಾಹಿತ್ಯ ಸಮ್ಮೇಳನಕ್ಕೆ ಹೋಗಿಬಂದೆ. ಆದರೆ ಅದರಲ್ಲೇ ಪೂರಾ ತೊಡಗಿಕೊಳ್ಳಲಿಕ್ಕೆ ಸಾಧ್ಯವಾಗಲಿಲ್ಲ. ಯಾಕೆಂದರೆ ಪುಸ್ತಕಗಳ ನಂಟು ಹೆಚ್ಚಾಯಿತು. ಅಟ್ಟದಲ್ಲಿದ್ದ ಹಿರೀಕರ ದಫ್ತರಗಳನ್ನು ತೆಗೆದೆ. ಓಹೋ, ಅದೊಂದು ಬೇರೆಯದೇ ಜಗತ್ತು. ಆಗಲೇ ಹೇಳಿದೆನಲ್ಲ, ಒಬ್ಬ ಹಿರೀಕರು ಹಕೀಮರಾಗಿದ್ದರು ಅಂತ, ಹಕೀಮತಿಯ ಪುಸ್ತಕಗಳನ್ನ ಓದಿ ಔಷಧಿ ಕೊಡಲಿಕ್ಕೆ ಶುರು ಮಾಡಿದೆ. ಕಾಮಾಲೆ, ಸಂಧಿವಾತ, ಕಣ್ಣುಬೇನೆಯಂತಹ ಕಾಯಿಲೆಗೆ ಚೂರ್ಣ, ಮದ್ದು ಮಾಡಿ ಕೊಟ್ಟೆ. ಮನೆಯ ತಾಪತ್ರಯ ಹೇಳಿಕೊಂಡು ಬಂದವರಿಗೆ ಧೈರ್ಯ ಹೇಳಿ ತಾಯಿತ ಮಾಡಿಕೊಟ್ಟೆ. ಹಲವರಿಗೆ ಕಾಯಿಲೆ ಗುಣವಾಯಿತು, ತಾಯಿತ ದಾರಿ ತೋರಿಸಿತು. ಗಂಡ ಬಾಳಾ ತ್ರಾಸು ಕೊಡತಾನಂತ ಒಬ್ಬಳು ಬಂದಳು. ತಾಯಿತ ಮಾಡಿಕೊಟ್ಟೆ. ಅದನ್ನವಳು ಕಟ್ಟಿಕೊಂಡ ಮೇಲೆ ಗಂಡ ಕೂರು ಅಂದ್ರೆ ಕೂರ‍್ತಾನಂತೆ, ನಿಲ್ಲು ಅಂದ್ರೆ ನಿಲ್ತಾನಂತೆ! ನೆಮ್ಮದಿ ಇಲ್ಲ ಅಂತ ಬಂದೋರಿಗೆ ತಾಯಿತ ಬರೀತಾ, ಸಮಾಧಾನ ಹೇಳ್ತಾ ನಾನೂ ನೆಮ್ಮದಿ ಪಡಕೊಂಡಿದೇನೆ. (ಮದ್ವೆಯಾಗಿದೀಯಾ? ನಿನ್ಗೇನಾದ್ರೂ ಅಂಥದು ಬೇಕಾ ಎನ್ನುತ್ತ ಮುಂಬಾಗಿ ತುಂಟತನದಿಂದ ನಕ್ಕರು.)

ಅಂದು ಬುರ್ಖಾ ತೊಡದೇ ನೀವಿದ್ದದ್ದನ್ನು ಸಮಾಜ ಸಹಿಸಿತೇ?

ಅವತ್ತು ಬಾಳ ಜನ ಬುರ್ಖಾ ಹಾಕ್ತಾ ಇರಲಿಲ್ಲ. ಹೊರಗೆ ಹೋಗುವಾಗ ಮಾತ್ರ ಕೆಲವರು ಹಾಕ್ತಾ ಇದ್ದಿದ್ದು. ಕೆಳವರ್ಗದ ಹೆಣ್ಣುಮಕ್ಕಳಿಗಂತೂ ಅವೆಲ್ಲ ಗೊತ್ತೇ ಇರಲಿಲ್ಲ. ಅದನ್ನು ಕಂಪಲ್ಸರಿ ಅಂತ ಎಲ್ಲೂ ಹೇಳಿಲ್ಲ. ಈಗ ಎಷ್ಟು ಸಣ್ಣ ಹುಡುಗಿಯರಿಗೂ ಸ್ಕಾರ್ಫ್, ಗ್ಲೋವ್, ಸಾಕ್ಸ್ ಹಾಕಿ ಬುರ್ಖಾ ತೊಡಿಸ್ತಾರೆ! ನಾನು ತಮಾಷೆ ಮಾಡ್ತೀನಿ, `ಹಜ್ ಕರ‍್ಕೇ ಆಯೀ ಕ್ಯಾ ಮಾ?’ ಅಂತ. ದೇಹವನ್ನು ಸೆಕ್ಸಿ ಆಗಿ ತೋರಿಸದಂತೆ ಸಡಿಲ ಬಟ್ಟೆ ಹಾಕಬೇಕು ಎನ್ನುವುದು ಬುರ್ಖಾ ಹಿಂದಿದ್ದ ಉದ್ದೇಶ ಅಷ್ಟೇ. ಟೈಟ್ ಫಿಟಿಂಗ್ ಮಾಡಿಸಿ, ಮನಸೆಳೆಯುವಂತಹ ಡಿಸೈನ್ ಮಾಡಿ ಹಾಕೋಹಾಗಿದ್ದರೆ ಬುರ್ಖಾನೂ ಒಂದೇ, ಸಲ್ವಾರ್ ಕಮೀಜೂ ಒಂದೇ. ಬಟ್ಟೆಗಳದ್ದೇ ದೊಡ್ಡ ಬಿಸಿನೆಸ್. ಅವರದ್ದೇ ಕುಮ್ಮಕ್ಕು. ನಾನು ಅವತ್ತಿಗೂ ಇವತ್ತಿಗೂ ಬುರ್ಖಾ ತೊಟ್ಟಿಲ್ಲ, ಎಂದೆಂದೂ ತೊಡುವುದೂ ಇಲ್ಲ. ನನ್ನ ಬಟ್ಟೆ ಎಷ್ಟು ಸಡಿಲ ಇದೆಯೆಂದರೆ ಇದೇ ಬುರ್ಖಾದಂತೆ ಕವರ್ ಮಾಡತ್ತೆ. ಹಿಜಾಬ್‌ನೂ ಹಿಂದಿಂದ ಎಳೀಬಹುದು. ಆದ್ರೆ ನನ್ನ ಬಾಬ್‌ಕಟ್ ಯಾರೂ ಎಳೆಯಕ್ಕಾಗಲ್ಲ. ಪರ್ಫೆಕ್ಟ್ ಅಲ್ವಾ?

ಇಸ್ಲಾಂನಲ್ಲಿ ಮಹಿಳೆಯರಿಗೆ ಸ್ವಾತಂತ್ರ್ಯವಿಲ್ಲ, ಪರದೆಯೊಳಗೆ ಕೂಡಿ ಹಾಕಲಾಗಿದೆ ಎಂಬ ಮಾತಿದೆಯಲ್ಲ?

ಇಸ್ಲಾಮಲ್ಲಿ ಹೆಣ್ಣುಮಕ್ಕಳಿಗೆ ಲಿಬರ್ಟಿ ಇದೆ, ಆದರೆ ಕೆಲವೆಡೆ ಇಲ್ಲ. ಉದಾಹರಣೆಗೆ ಅಜಾನ್ ಕೂಗಕ್ಕಾಗಲ್ಲ, ಮಸೀದಿಗೆ ಹೋಗಕ್ಕಾಗಲ್ಲ, ಅಪರಿಚಿತ ಸ್ತ್ರೀ ಪುರುಷರು ಒಟ್ಟೊಟ್ಟಿಗೆ ಇರಕ್ಕಾಗಲ್ಲ. ಆದರೆ ಏನಿದೆ ಏನಿಲ್ಲ ಅಂತ ನಾವೇ ಓದಿ ಅರ್ಥ ಮಾಡ್ಕೋಬೇಕು. ಇದೆಯೆಂದಿರುವುದನ್ನೂ ತಪ್ಪಾಗಿ ಅರ್ಥೈಸಿ ಇಲ್ಲ ಅಂದಿರೋದು ಸಾಕಷ್ಟಿದೆ. ಅದಕ್ಕೇ ಸುಮ್ನೇ ಯಾರೋ ಹೇಳಿದ್ದನ್ನ ನಂಬಿ ಅನುಸರಿಸೋದಲ್ಲ. ನಾವೇ ಸ್ವತಃ ಓದಿ, ಯೋಚಿಸಿ ತಿಳಕೋಬೇಕು.

ಈ ಕಾಲಮಾನದಲ್ಲಿ ಹೀಗೆ ನೀವಿಬ್ರೇ ಮನೇಲಿದೀರ, ಭಯ ಅನಿಸಲ್ಲವೆ?

ನನಗೆ ಯಾವತ್ತೂ ಭಯ ಇಲ್ಲ. ಅನ್ಯಾಯ ಮಾಡಿದರಷ್ಟೇ ಭಯ ಪಡಬೇಕು. ನಾವು ಯಾರಿಗೂ ಅನ್ಯಾಯ ಮಾಡಿಲ್ಲ. ನಮ್ಮ ಜೊತೆಗೆ ಹಿರೀಕರಿಂದ ಬಂದ ಗೌರವ, ಪ್ರೀತಿ, ವಸ್ತುಗಳು ಇದಾವೆ. ಈ ಪೆಟ್ಟಿಗೆ ಕಾಣ್ತಾ ಇದೆಯಲ್ಲ, ಸಾಗವಾನಿಯದು, 200 ವರ್ಷ ಹಳೆಯದು. ಈ ಬೀಗ ಹೇಗಿದೆ ಅಂದ್ರೆ ಬಾಗಿಲು ಮುರಿದರೂ ಬೀಗ ಮುರಿಯಲ್ಲ. ಈ ಗಡಿಯಾರ ನೋಡಿ, ಕೀ ಕೊಟ್ರೆ ಇವತ್ತಿಗೂ ನಡೆಯುತ್ತೆ. ಈ ಟೇಬಲ್ಲಿನ ಕಾಲು ನೋಡಿ, ಮಜಬೂತಾಗಿದಾವೆ. ಸ್ವಲ್ಪ ಪಾಲಿಶ್ ಮಾಡಿದ್ರೆ ಭಾರಿ ಚೆನ್ನಾಗಾಗುತ್ತೆ. ಈ ಕಂಚಿನ ತಟ್ಟೆ ನೋಡಿ, `ಸೈಯದ್ ಮೆಹಬೂಬ್ ಸುಭಾನ್-1287’ ಅಂತ ಬರೆದಿದೆ. 800 ವರ್ಷ ಹಳೇದು. ಬಗದಾದಿನ ಸೂಫಿಗಳು ದುವಾ ಮಾಡುವಾಗ ಕೈಯಲ್ಲಿ ಹಿಡೀತಿದ್ದ ತಟ್ಟೆ ಅದು. ಇದನ್ನ ಹಿಡಿದು ನಾನು ಎಷ್ಟೋ ಜನರಿಗೆ ದುವಾ ಕೇಳಿದೇನೆ. ನಿಜ ಆಗಿದೆ. ಹಿರೀಕರ ಇಂಥಾ ವಸ್ತುಗಳ ಮಧ್ಯನೇ ಇರೋದಕ್ಕೋ ಏನೋ ಆ ಕಾಲದಲ್ಲೇ, ಅವರ ಮಧ್ಯನೇ ಇದೀವಿ ಅನಿಸಿದೆ. ಭಯನೇ ಇಲ್ಲ. ಆದರೆ ಸಾಕಷ್ಟು ವಸ್ತುಗಳನ್ನ ಮ್ಯೂಸಿಯಂಗೆ ಕೊಟ್ಟಿದೀವಿ. ಉಳಿದಿದ್ದು ಒಂದೊಂದೇ ಮಾರಾಟ ಮಾಡತಾ ಇದೇವೆ. ವಯಸ್ಸಾಗ್ತಾ ಇದೆ, ಸಂಬಂಧಿಕರೆಲ್ಲ ಹೈದರಾಬಾದಿನಲ್ಲಿ ಇದಾರೆ. ನಾವೂ ಅಲ್ಲಿಗೇ ಹೋಗುವ ಅಂದುಕೊಂಡಿದೇವೆ. ಹೀಗೇ ಇನ್ನೆಷ್ಟು ದಿನನೋ ಗೊತ್ತಿಲ್ಲ. ಇರುವಷ್ಟು ದಿನ, ಯಾರಿಗೂ ತೊಂದರೆ ಕೊಡದ ಹಾಗೆ, ಅಯ್ಯೋ ಹೀಗಾಯ್ತಂತ ಅಳದ ಹಾಗೆ, ಅದುಬೇಕು ಇದುಬೇಕಂತ ಆಸೆ ಪಡದ ಹಾಗೆ, ನಾಲ್ಕು ಜನರ ಕಣ್ಣೀರು ಒರೆಸಿ, ಕೊನೆಗೆ ನಡೆದುಬಿಡೋದು. ಏನಂತೀರಾ?

***

ಏನೆನ್ನುವುದು ನಾವು?

ಈಗ ಅಜಮಾಸು 75 ವಯಸ್ಸಿನವರಿರಬಹುದಾದ ಅವರು ತಮಗೆಷ್ಟು ವರ್ಷ ಎಂದು ಏನು ಮಾಡಿದರೂ ಹೇಳಲಿಲ್ಲ. `ಮೈ ಸೋಲಾ ಸಾಲ್ ಜೈಸೀ ದಿಖ್ತಾ ನಹೀ? ಸೋಲಾ ಬರಸ್ ಲಿಖೋ’ ಎಂದೇ ತುಂಟತನದಿಂದ ಬೆನ್ನು ಚಪ್ಪರಿಸಿದರು. ತಾನು ವಿಧಿಸಿದ ಚೌಕಟ್ಟನ್ನು ಮೀರಿ, ಮದುವೆಯೆಂಬ ಆತ್ಯಂತಿಕ ಹೆಣ್ಣು ಗುರಿಯನ್ನು ಮುಟ್ಟಲೊಲ್ಲದೆ ಏಕಾಂಗಿಯಾಗಿ ಸಂತೋಷವಾಗಿ ಬದುಕುವ ಹೆಣ್ಣುಗಳ ಬಗೆಗೆ ಸಮಾಜಕ್ಕೆ ತೀವ್ರ ಅಸಮಾಧಾನ, ಅಸಡ್ಡೆ ಇರುತ್ತದೆ. ಸಣ್ಣ ಕಾರಣ ಸಿಕ್ಕರೆ ಸಾಕು, ನೂರೊಂದು ಕತೆಗಳು ಹುಟ್ಟಿಕೊಳ್ಳುತ್ತವೆ. ಸಹಾಯವೆಂದೋ, ಸಾಂಗತ್ಯವೆಂದೋ ಒಬ್ಬ ಒಂಟಿ ಹೆಣ್ಣು ಗಂಡಿನೊಡನೆ ಸಂಪರ್ಕವಿಟ್ಟುಕೊಂಡರೆ ಅದಕ್ಕೊಂದು ತರಹದ ಕತೆ. ಒಂಟಿ ಹೆಣ್ಣು ಮತ್ತೊಂದು ಹೆಣ್ಣಿನೊಡನಿದ್ದರೆ ಅದು ಮಗದೊಂದು ದಿಕ್ಕಿನ ಕತೆ. ಅಂಥ ಎಲ್ಲದಕ್ಕೂ ಗ್ರಾಸವಾಗಿ, ಕೇಳಬಾರದ್ದನ್ನು ಕೇಳಿ, ಹೇಳಬೇಕಾದ್ದನ್ನು ಹೇಳಿ, ತನ್ನಿಷ್ಟದಂತೆ ಜೀವಿಸುವ ಹಕ್ಕು ತನಗಿದೆ ಎಂದು ಬದುಕಿ ತೋರಿಸುತ್ತಿರುವ ಅಪರೂಪದ ದಿಟ್ಟ ಮಹಿಳೆ ನಜ್ಮಾರ ಬದುಕೇ ಒಂದು ಹೋರಾಟದಂತಿದೆ.

ರಾಜಕಾರಣದ ಪ್ರತಿ ಆಗುಹೋಗುಗಳ ಬಗೆಗೂ ಅಪ್‌ಡೇಟ್ ಆಗಿರುವ ರಾಜಕೀಯ ಪ್ರಜ್ಞೆ, ತಮ್ಮನ್ನೇ ಲೇವಡಿ ಮಾಡಿಕೊಳ್ಳುವ ಹಾಸ್ಯ ಪ್ರಜ್ಞೆ, ಇರುವುದನ್ನು ಅದಿರುವಂತೆ ಗುರುತಿಸಬಲ್ಲ ವಾಸ್ತವ ಪ್ರಜ್ಞೆ, ಸುತ್ತಮುತ್ತಿನವರಿಗೆ ಸಾಧ್ಯವಿರುವಷ್ಟು ಸಹಾಯ ಮಾಡಬೇಕೆಂಬ ಸಮುದಾಯ ಪ್ರಜ್ಞೆ ಇರುವ ನಜ್ಮಾ ನೆನಪು-ಮರೆವುಗಳ ಸಮನ್ವಯದ ವಯೋಮಾನದಲ್ಲಿ ಬದುಕುತ್ತಿದ್ದಾರೆ. ಅವರ ದೇಹಭಾಷೆಯಲ್ಲಿ ತುಂಟತನ, ನಗೆಚಾಟಿಕೆ, ಮುಕ್ತ ಅಭಿವ್ಯಕ್ತಿ ಹಾಸುಹೊಕ್ಕಾಗಿವೆ. ಅವರಲ್ಲಿ ಹಲವು ವೈವಿಧ್ಯಗಳ ಸಮನ್ವಯವಿದೆ. ಆಧುನಿಕತೆ, ಆಂಟಿಕ್ವಿಟಿಯ ಸಮನ್ವಯವಿದೆ. ಧರ್ಮಶ್ರದ್ಧೆ, ವೈಯಕ್ತಿಕ ಸ್ವಾತಂತ್ರ್ಯಗಳ ಸಮನ್ವಯವಿದೆ. ಕನ್ನಡ, ಉರ್ದು, ಇಂಗ್ಲಿಷ್, ಮರಾಠಿ ಭಾಷೆಗಳ ಸಮನ್ವಯವಿದೆ. ತಮಾಷೆಯಿದೆ, ವಿಷಾದವಿದೆ. ಒಂಟಿತನದ ಅಸಹಾಯಕತೆಯಿದೆ; ಅದೂ ಬದುಕಿನ ಒಂದು ಮಜಲಷ್ಟೇ ಎಂದು ದಾಟಿ ಬಿಡುವ ಸ್ಫೂರ್ತಿಯಿದೆ.

ನಜ್ಮಾ ಈಗ ಅಕ್ಕನೊಡನೆ ಒಂದು ಪುಟ್ಟ ಮನೆಯಲ್ಲಿದ್ದಾರೆ. ಅವರ ತಾಯತ, ಮದ್ದು, ಔಷಧಿಗಳು ಜನರೊಡನೆ ಅಷ್ಟಿಷ್ಟು ಒಡನಾಟ ಒದಗಿಸಿ ಬದುಕನ್ನು ಸಹ್ಯಗೊಳಿಸಿರುವಂತಿದೆ. ಆದರೆ ಸಣ್ಣಪುಟ್ಟ ಸಹಾಯಕ್ಕೂ ಯಾರೂ ಇಲ್ಲದಿರುವುದು ಕಷ್ಟವಾಗಿದೆ. ನಾವು ಹೋದಾಗ ಕುಡಿಯುವ ನೀರು ಮುಗಿದುಹೋಗಿತ್ತು. ಕ್ಯಾನು ತುಂಬಿಸಿ ತರುವವರು ಕಾಣದೇ ತಳಮಳಗೊಂಡಿದ್ದರು. ಆದರೂ ಎಲ್ಲ ಇಲ್ಲಗಳ ನಡುವೆ ಮನೆಯೆದುರಿನ ಒಂಟಿಮರದ ಹಾಗೆಯೇ ಧೃಢವಾಗಿ, ಚಲನಶೀಲವಾಗಿ ಬದುಕು ಕಟ್ಟಿಕೊಂಡಿದ್ದಾರೆ. ಅವರ ನಿರಾವಲಂಬಿ, ಸರಳ, ನಿರ್ಭೀತ ಬದುಕು ಘನತೆಯ ಬದುಕಿಗೊಂದು ಒಳ್ಳೆಯ ಮಾದರಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT