ಕಲಬುರಗಿ ಸಮೀಪದ ಹೊನ್ನಕಿರಣಗಿ ಗ್ರಾಮದ ಸುತ್ತಮುತ್ತ 1,600 ಎಕರೆಗಳಷ್ಟು ಬಂಜರು ಭೂಮಿ ಇತ್ತು. ಇಲ್ಲಿ ಬಿಸಿಲಿನ ತಾಪಕ್ಕೆ ನೆಲ ಬಿರುಕು ಬಿಟ್ಟಿತ್ತು; ಗಾಳಿ ಬೀಸಿದಾಗ ದೂಳು ಹಾರಾಡುತ್ತಿತ್ತು. ಮಳೆಗಾಲದಲ್ಲಿ ಸ್ವಲ್ಪ ತೇವ ಕಂಡರೂ, ಉಳಿದ ಅವಧಿಯಲ್ಲಿ ಇದು ಬರದ ಹೊಡೆತಕ್ಕೆ ಒಳಗಾಗುತ್ತಿತ್ತು. ಹಕ್ಕಿಗಳ ಕೂಗು ಇಲ್ಲ, ಮರಗಳ ನೆರಳು ಇಲ್ಲ. ಬದುಕಿನ ಯಾವುದೇ ಲಕ್ಷಣಗಳಿಲ್ಲದ ಬಂಜರು ನೆಲ.

ಇಂದು ಅದೇ ಪ್ರದೇಶ ಸಂಪೂರ್ಣ ಬದಲಾಗಿದೆ. 68 ಸಾವಿರಕ್ಕೂ ಹೆಚ್ಚು ಮರಗಳು ಬೆಳೆದಿದ್ದು, ಹಸಿರು ಹೊದಿಕೆಯಲ್ಲಿ ಈ ನೆಲ ಹೊಸ ಜೀವ ಪಡೆದಿದೆ. ಮರಗಳ ನೆರಳು, ಗಾಳಿಯ ತಂಪು, ಹಕ್ಕಿಗಳ ಕಲರವ–ಒಮ್ಮೆ ನಿರ್ಜೀವವಾಗಿದ್ದ ಈ ಪ್ರದೇಶ ಈಗ ಸಣ್ಣ ಅರಣ್ಯದ ರೂಪ ಪಡೆದಿದೆ. ಸ್ಥಳೀಯರ ಮಾತಿನಲ್ಲಿ, ಬೇಸಿಗೆಯ ಉಷ್ಣತೆಯ ತೀವ್ರತೆ ಕೂಡ ಹಿಂದಿಗಿಂತ ಕಡಿಮೆಯಾಗಿದೆ.

ಈ ಬದಲಾವಣೆಯ ಹಿಂದೆ ನಿಂತಿರುವವರು ಹೊನ್ನಕಿರಣಗಿ ಗ್ರಾಮದ 44 ವರ್ಷದ ಸದಾಶಿವ ಹೈದ್ರಾ. ಹಲವು ವರ್ಷಗಳ ಹಟ, ನಿರಂತರ ಪರಿಶ್ರಮ ಮತ್ತು ಸಮುದಾಯದ ಜೊತೆಗಿನ ಸಕ್ರಿಯ ಕಾರ್ಯ–ಈ ಮೂರೂ ಸೇರಿ ಈ ಪರಿವರ್ತನೆಯನ್ನು ಸಾಧ್ಯ ಮಾಡಿವೆ.

ಯೋಜನೆಗೆ ಜೀವ ತುಂಬಿದ ಹಸ್ತಕ್ಷೇಪ

2015ರಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ಮನರೇಗಾ) ಈ ಪ್ರದೇಶದಲ್ಲಿ ಜಾರಿಯಾಯಿತು. ಆರಂಭದಲ್ಲಿ ಈ ಯೋಜನೆ ಕಾಗದದ ಮೇಲಿನ ವ್ಯವಸ್ಥೆಯಷ್ಟೇ ಆಗಿತ್ತು; ಕಾಗದದಲ್ಲಿ ಯೋಜನೆ ಇದ್ದರೂ, ಅದರ ಲಾಭ ಜನರಿಗೆ ತಲುಪುತ್ತಿರಲಿಲ್ಲ. ಜಮೀನು ರಹಿತ ಕಾರ್ಮಿಕರು ಕೂಲಿಗಾಗಿ ಅಲೆದಾಡುತ್ತಿದ್ದರು; ಹಲವರು ಹಂಗಾಮಿ ವಲಸೆ ಹೋಗುತ್ತಿದ್ದರು. ಉದ್ಯೋಗ ಕಾರ್ಡ್ಗಳ ಬಗ್ಗೆ ಅರಿವು ಕಡಿಮೆ, ನೋಂದಣಿ ಪ್ರಕ್ರಿಯೆಯಲ್ಲಿ ಗೊಂದಲ, ಮತ್ತು ಕೆಲವೆಡೆ ದುರ್ಬಳಕೆಯ ಆರೋಪಗಳು. ಇವುಗಳಿಂದ ಯೋಜನೆ ನಿರೀಕ್ಷಿತ ಫಲಿತಾಂಶ ಕಾಣುತ್ತಿರಲಿಲ್ಲ.

ಈ ಸ್ಥಿತಿಯನ್ನು ಗಮನಿಸಿದ ಸದಾಶಿವ ಹೈದ್ರಾ, ಕಾರ್ಮಿಕರನ್ನು ಒಗ್ಗೂಡಿಸುವ ಕಾರ್ಯ ಆರಂಭಿಸಿದರು. ಮನೆಮನೆಗೆ ತೆರಳಿ ಯೋಜನೆಯ ಹಕ್ಕುಗಳು ಮತ್ತು ಅವಕಾಶಗಳ ಬಗ್ಗೆ ವಿವರಿಸಿದರು. ಉದ್ಯೋಗ ಕಾರ್ಡ್ಗಳಿಗಾಗಿ ಅರ್ಜಿ ಸಲ್ಲಿಸುವುದರಿಂದ ಹಿಡಿದು, ಕೆಲಸಕ್ಕೆ ಹಾಜರಾಗುವ ಪ್ರಕ್ರಿಯೆಯವರೆಗೆ ಕಾರ್ಮಿಕರಿಗೆ ಮಾರ್ಗದರ್ಶನ ನೀಡಿದರು. ಜೊತೆಗೆ, ಅಕ್ರಮಗಳ ಬಗ್ಗೆ ಜಿಲ್ಲಾಧಿಕಾರಿ ಗಮನ ಸೆಳೆಯಲು ಅವರು ಮುಂದಾದರು.

ಅವರ ಸಮರ್ಪಣಾ ಮನೋಭಾವನೆಯನ್ನು ಗುರುತಿಸಿದ ಅಧಿಕಾರಿಗಳು ಅವರನ್ನು ‘ಕಾಯಕ ಬಂಧು’ವನ್ನಾಗಿ ನೇಮಕ ಮಾಡಿದರು. ಕೆಲವೇ ವರ್ಷಗಳಲ್ಲಿ ಅವರು ಕ್ಷೇತ್ರ ನಿರೀಕ್ಷಕರಾಗಿ (ಫೀಲ್ಡ್ ಇನ್ಸ್ಪೆಕ್ಟರ್) ನೇಮಕಗೊಂಡರು. ಅವರ ಮೇಲ್ವಿಚಾರಣೆಯಲ್ಲಿ, ಕೆಲಸಗಳ ಹಂಚಿಕೆ, ಹಾಜರಾತಿ, ಮಾಪನ ಮತ್ತು ವೇತನ ಪಾವತಿ ಪ್ರಕ್ರಿಯೆಗಳಲ್ಲಿ ಶಿಸ್ತನ್ನು ತರಲಾಯಿತು.

ಪರಿಸರ ಪುನರ್ನಿರ್ಮಾಣದತ್ತ...

ಸದಾಶಿವ ಅವರ ದೃಷ್ಟಿ ಕೇವಲ ಉದ್ಯೋಗ ಒದಗಿಸುವುದಲ್ಲ. ಗ್ರಾಮೀಣ ಉದ್ಯೋಗವನ್ನು ಪರಿಸರ ಪುನರ್ನಿರ್ಮಾಣದೊಂದಿಗೆ ಜೋಡಿಸುವ ಪ್ರಯತ್ನಕ್ಕೆ ಅವರು ಮುಂದಾದರು.

ಅರಣ್ಯೀಕರಣದ ಭಾಗವಾಗಿ, ಸಂಬಂಧಿತ ಇಲಾಖೆಗಳ ಅನುಮತಿಯೊಂದಿಗೆ ಬಂಜರು ಭೂಮಿಯಲ್ಲಿ ಸ್ಥಳೀಯ ಜಾತಿಯ ಗಿಡಗಳನ್ನು ನೆಡುವ ಕಾರ್ಯ ಕೈಗೊಳ್ಳಲಾಯಿತು. ಕರ್ನಾಟಕ ವಿದ್ಯುತ್ ನಿಗಮಕ್ಕೆ ಸೇರಿದ 1,600 ಎಕರೆ ಪ್ರದೇಶದಲ್ಲಿ 18 ಕಿಲೋಮೀಟರ್ ಉದ್ದದ ಗಡಿಯುದ್ದಕ್ಕೂ ಆರು ಸ್ತರಗಳಲ್ಲಿ ಗಿಡಗಳನ್ನು ನೆಟ್ಟು ಪೋಷಿಸಲಾಯಿತು. ಈ ಬಹುಸ್ತರ ವಿನ್ಯಾಸವು ಗಾಳಿಯ ವೇಗವನ್ನು ಕಡಿಮೆ ಮಾಡುವುದು, ಮಣ್ಣಿನ ದೂಳು ಹರಿದುಹೋಗುವುದನ್ನು ತಡೆಯುವುದು ಮತ್ತು ಕ್ರಮೇಣ ನೆರಳನ್ನು ಹೆಚ್ಚಿಸುವುದು ಎಂಬ ಉದ್ದೇಶ ಹೊಂದಿತ್ತು.

ನೆಟ್ಟ ಗಿಡಗಳಲ್ಲಿ ಬಹುತೇಕವು ಬರನಿರೋಧಕ ಸ್ಥಳೀಯ ಪ್ರಭೇದಗಳು–ಅವುಗಳಿಗೆ ಕಡಿಮೆ ನೀರಿನಲ್ಲಿಯೇ ಉಳಿಯುವ ಸಾಮರ್ಥ್ಯವಿದೆ. ಆದರೂ ಆರಂಭಿಕ ವರ್ಷಗಳಲ್ಲಿ ಅವುಗಳ ಉಳಿವು ದೊಡ್ಡ ಸವಾಲಾಗಿತ್ತು.

ಮಳೆ ಅನಿಶ್ಚಿತವಾಗಿದ್ದ ಕಾರಣ, ನೀರಿನ ಲಭ್ಯತೆ ದೊಡ್ಡ ಸಮಸ್ಯೆಯಾಗಿತ್ತು. ಗಿಡಗಳಿಗೆ ನಿಯಮಿತವಾಗಿ ನೀರುಣಿಸುವುದು ಅಗತ್ಯವಾಗಿತ್ತು. ಈ ಹಿನ್ನೆಲೆ, ತಾತ್ಕಾಲಿಕ ನೀರಿನ ಸಂಗ್ರಹಣೆ, ಟ್ಯಾಂಕರ್ಗಳ ಬಳಕೆ ಮತ್ತು ಹತ್ತಿರದ ಮೂಲಗಳಿಂದ ನೀರು ತರಿಸುವ ವ್ಯವಸ್ಥೆ ಮಾಡಲಾಯಿತು.

ಈ ಕಾರ್ಯದಲ್ಲಿ ಭಾಗವಹಿಸಿದ ಕಾರ್ಮಿಕರಲ್ಲಿ ಬಹುತೇಕ ಮಹಿಳೆಯರು. ಅವರು ದೂರದಿಂದ ನೀರು ಹೊತ್ತು ತಂದು ಗಿಡಗಳಿಗೆ ಹಾಕುತ್ತಿದ್ದರು. ದಿನನಿತ್ಯದ ಈ ಪರಿಶ್ರಮ ಗಿಡಗಳ ಉಳಿವಿಗೆ ಪ್ರಮುಖ ಕಾರಣವಾಯಿತು. ‘ಗಿಡ ಉಳಿದರೆ ಮುಂದಿನ ವರ್ಷ ನೆರಳು ಸಿಗುತ್ತದೆ’ ಎಂಬ ನಂಬಿಕೆ ಅವರಿಗೆ ಪ್ರೇರಣೆ ನೀಡುತ್ತಿತ್ತು.

ಈ ಯೋಜನೆಯಡಿ ಸಾವಿರಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಪಡೆದರು. ಅವರಲ್ಲಿ ಶೇಕಡ 80ರಷ್ಟು ಮಹಿಳೆಯರು; ಈ ಕೆಲಸದಲ್ಲಿ 30ರಿಂದ 75 ವರ್ಷದವರವರೆಗೆ ಜನ ಭಾಗಿಯಾಗಿದ್ದಾರೆ. ನಿಯಮಿತ ಕೂಲಿ ದೊರಕುವುದರಿಂದ ಕುಟುಂಬಗಳ ಆರ್ಥಿಕ ಸ್ಥಿತಿ ಸುಧಾರಿಸಿತು.

ಭೂ ರಹಿತ ಕಾರ್ಮಿಕ ಮಹಿಳೆ ಬಾಗಮ್ಮ ಕಳೆದ ದಶಕದಿಂದ ಮನರೇಗಾ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ತಮ್ಮ ಆದಾಯವನ್ನು ಕುರಿ ಸಾಕಣೆಗೆ ಹೂಡಿಕೆ ಮಾಡಿ, ಹೆಚ್ಚುವರಿ ಆದಾಯದ ಮೂಲವನ್ನು ಕಂಡುಕೊಂಡಿದ್ದಾರೆ. ಹೀಗೆ ಹಲವು ಮಹಿಳೆಯರು ಸ್ವಾವಲಂಬಿ ಬದುಕಿನತ್ತ ಹೆಜ್ಜೆ ಇಟ್ಟಿದ್ದಾರೆ.

ಯುವ ಕಾರ್ಮಿಕ ಭಗವಂತ ಮತ್ತು ಅವರ ಪತ್ನಿ ಬಸಮ್ಮಗೂ ಈ ಯೋಜನೆ ನೆರವಾಯಿತು. ಕೆಲಸದಿಂದ ಉಳಿಸಿದ ಹಣದಿಂದ ಭಗವಂತರೇ ತಮ್ಮ ತಾಯಿಗೆ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸುವ ಸಾಧ್ಯತೆ ದೊರಕಿತು. ‘ಮನರೇಗಾದಲ್ಲಿ ದಿನಕ್ಕೆ ₹370 ಸಿಗುತ್ತಿತ್ತು. ಅದೇ ಕೆಲಸಕ್ಕೆ ಹೊರಗೆ ₹300 ಮಾತ್ರ ಕೊಡುತ್ತಿದ್ದರು’ ಎಂದು ಅವರು ಹೇಳುತ್ತಾರೆ. ಈ ಆದಾಯ ವ್ಯತ್ಯಾಸವೇ ಕುಟುಂಬಗಳ ಉಳಿವು ಮತ್ತು ಖರ್ಚಿನ ನಿರ್ವಹಣೆಗೆ ನೆರವಾಗಿದೆ.

ಪರಿಸರದಲ್ಲಿ ಬದಲಾವಣೆಗಳು

ಮರಗಳು ಬೆಳೆದಂತೆ ಪರಿಸರದಲ್ಲೂ ಗಮನಾರ್ಹ ಬದಲಾವಣೆಗಳು ಕಂಡುಬಂದಿವೆ. ಕೃಷ್ಣಮೃಗ, ನರಿಗಳು, ಮೊಲಗಳು ಸೇರಿದಂತೆ ಹಲವು ಪ್ರಾಣಿಗಳು ಈ ಪ್ರದೇಶದಲ್ಲಿ ಕಾಣಿಸಿಕೊಳ್ಳುತ್ತಿವೆ. ಹಕ್ಕಿಗಳ ವಾಸಸ್ಥಾನ ಹೆಚ್ಚಿದ ಕಾರಣ, ಜೀವ ವೈವಿಧ್ಯವೂ ವೃದ್ಧಿಯಾಗಿದೆ.

ಅರಣ್ಯ ಇಲಾಖೆ ಅಧಿಕಾರಿಗಳ ಪ್ರಕಾರ, ಮರಗಳ ಸಾಂದ್ರತೆ ಹೆಚ್ಚುವುದರಿಂದ ಸ್ಥಳೀಯ ತಾಪಮಾನದಲ್ಲಿ ಇಳಿಕೆ ಕಂಡುಬಂದಿದೆ. ಗಾಳಿಯ ತೇವಾಂಶವೂ ಸುಧಾರಿಸಿದೆ. ಇದರಿಂದ ಸುತ್ತಮುತ್ತಲಿನ ಕೃಷಿಭೂಮಿಗಳ ಮೇಲೂ ಸಕಾರಾತ್ಮಕ ಪರಿಣಾಮ ಕಂಡುಬರುತ್ತಿದೆ.

ಇದರ ಜೊತೆಗೆ, 42 ಸಾವಿರ ಇಂಗು (ಸೋಕ್) ಗುಂಡಿಗಳ ನಿರ್ಮಾಣ ಮಾಡಲಾಗಿದೆ. ಈ ಗುಂಡಿಗಳು ಮಳೆನೀರನ್ನು ನೆಲದೊಳಗೆ ಹೀರಿಸಿಕೊಂಡು ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ನೆರವಾಗುತ್ತವೆ. ಕೆರೆಗಳ ನೀರಿನ ಮಟ್ಟದಲ್ಲಿ ಏರಿಕೆ ಕಂಡುಬಂದಿರುವುದನ್ನು ಸ್ಥಳೀಯರು ಹೇಳುತ್ತಾರೆ.

ವೈಯಕ್ತಿಕ ಸಂಕಷ್ಟದಿಂದ

ಸದಾಶಿವ ಹೈದ್ರಾ ಅವರ ಜೀವನದಲ್ಲೂ ಸಂಕಷ್ಟಗಳ ಕೊರತೆ ಇರಲಿಲ್ಲ. ಮನರೇಗಾ ಯೋಜನೆಗೆ ಸೇರುವ ಮೊದಲು ಅವರು ಖಿನ್ನತೆಯಿಂದ ಬಳಲುತ್ತಿದ್ದರು ಮತ್ತು ಆತ್ಮಹತ್ಯೆಯ ಯೋಚನೆಗೂ ಒಳಗಾಗಿದ್ದರು.

ಆ ಸಂದರ್ಭದಲ್ಲಿ ಸ್ಥಳೀಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯೊಬ್ಬರು ಅವರನ್ನು ಈ ಯೋಜನೆಗೆ ಪರಿಚಯಿಸಿದರು. ಅದು ಅವರ ಜೀವನದಲ್ಲಿ ಮಹತ್ವದ ತಿರುವಾಗಿ ಪರಿಣಮಿಸಿತು. ನಂತರ ಅವರು ತಮ್ಮ ವೈಯಕ್ತಿಕ ಸಂಕಷ್ಟಗಳನ್ನು ಮೀರಿ, ಸಮುದಾಯ ಸೇವೆಯಲ್ಲಿ ತೊಡಗಿಸಿಕೊಂಡರು.

ಇಂದು ಅವರು ಕಾರ್ಮಿಕರಿಗೆ ಹಣಕಾಸು ಜಾಗೃತಿ, ಉಳಿತಾಯ ಮತ್ತು ಜೀವನ ನಿರ್ವಹಣೆ ಕುರಿತು ಸಲಹೆಗಳನ್ನು ನೀಡುತ್ತಿದ್ದಾರೆ. ಅವರ ಅನುಭವವೇ ಇತರರಿಗೆ ಮಾರ್ಗದರ್ಶನವಾಗಿದೆ.

ಸುಮಾರು 12 ಸಾವಿರ ಜನರಿರುವ ಈ ಪ್ರದೇಶದಲ್ಲಿ ಸದಾಶಿವ ಹೈದ್ರಾ ಮನೆಮನೆಗೆ ತೆರಳಿ ಉದ್ಯೋಗ ಕಾರ್ಡ್ಗಳನ್ನು ವಿತರಿಸುತ್ತಿದ್ದಾರೆ. ಕೆಲಸದ ಹಾಜರಾತಿ ಸರಿಯಾಗಿ ದಾಖಲಾಗುವಂತೆ ನೋಡಿಕೊಳ್ಳುತ್ತಾರೆ. ಕಾರ್ಮಿಕರ ವೇತನ ಸಮಯಕ್ಕೆ ಸಿಗುವಂತೆ ಸಂಬಂಧಿತ ಅಧಿಕಾರಿಗಳೊಂದಿಗೆ ಸಂಯೋಜನೆ ಮಾಡುತ್ತಾರೆ.

ವಲಸೆ ಹೋಗುತ್ತಿದ್ದ ಕುಟುಂಬಗಳು ಈಗ ಊರಲ್ಲೇ ಉಳಿಯಲು ಪ್ರೇರೇಪಿತವಾಗಿವೆ. ಸ್ಥಳೀಯವಾಗಿ ಕೆಲಸ ಲಭ್ಯವಾಗುವುದರಿಂದ ಮಕ್ಕಳ ಶಿಕ್ಷಣವೂ ವ್ಯತ್ಯಯವಾಗದೆ ಮುಂದುವರಿಯುತ್ತಿದೆ.

ಇದರ ಜೊತೆಗೆ, ಕಾರ್ಮಿಕರಿಗೆ ಕುಡಿಯುವ ನೀರು ಒದಗಿಸಲು ಪ್ರತೀ ಋತುವಿನಲ್ಲಿ ತಮ್ಮ ಖರ್ಚಿನಿಂದ ₹1.5 ಲಕ್ಷವರೆಗೆ ವೆಚ್ಚ ಮಾಡುತ್ತಿದ್ದಾರೆ. ಇದು ಅವರ ವೈಯಕ್ತಿಕ ಬದ್ಧತೆಯ ಮತ್ತೊಂದು ಉದಾಹರಣೆ.

ಹಸಿರು ಬದಲಾವಣೆಯ ಅರ್ಥ

ಒಮ್ಮೆ ಬತ್ತಿದ ನೆಲವಾಗಿದ್ದ ಹೊನ್ನಕಿರಣಗಿ ಇಂದು ಹಸಿರು ಪ್ರದೇಶವಾಗಿ ರೂಪುಗೊಂಡಿದೆ. ಆದರೆ ಈ ಬದಲಾವಣೆ ಕೇವಲ ಪರಿಸರದ ಮಟ್ಟಕ್ಕೆ ಸೀಮಿತವಾಗಿಲ್ಲ. ಇದು ಉದ್ಯೋಗ, ಜೀವನೋಪಾಯ, ಪರಿಸರ ಮತ್ತು ಸಮುದಾಯ–ಈ ನಾಲ್ಕು ಅಂಶಗಳನ್ನು ಒಟ್ಟಿಗೆ ಜೋಡಿಸಿದ ಮಾದರಿಯಾಗಿದೆ.

ಸದಾಶಿವ ಹೈದ್ರಾ ಅವರ ಪ್ರಯತ್ನವು ಬಂಜರು ನೆಲವನ್ನು ಹಸಿರಾಗಿಸಿದಷ್ಟೇ ಅಲ್ಲ, ಅನೇಕ ಕುಟುಂಬಗಳ ಬದುಕಿಗೂ ಸ್ಥಿರತೆ ಮತ್ತು ಭರವಸೆ ತಂದಿದೆ. ಗ್ರಾಮೀಣ ಅಭಿವೃದ್ಧಿಯಲ್ಲಿ ಸ್ಥಳೀಯ ನಾಯಕತ್ವ ಮತ್ತು ಸಮುದಾಯದ ಭಾಗವಹಿಸುವಿಕೆ ಹೇಗೆ ಪರಿಣಾಮಕಾರಿ ಆಗಬಹುದು ಎಂಬುದಕ್ಕೆ ಇದು ಸ್ಪಷ್ಟ ಉದಾಹರಣೆ.

ಮುಂದಿನ ಹಂತದಲ್ಲಿ, ಈ ಪ್ರದೇಶವನ್ನು ಸಮಗ್ರ ಹಸಿರು ವಲಯವಾಗಿ ಅಭಿವೃದ್ಧಿಪಡಿಸುವ ಹಾಗೂ ನೀರಿನ ನಿರ್ವಹಣೆಯನ್ನು ಇನ್ನಷ್ಟು ಬಲಪಡಿಸುವ ಯೋಜನೆಗಳೂ ಚರ್ಚೆಯಲ್ಲಿವೆ. ಈ ಪ್ರಯತ್ನಗಳು ಮುಂದುವರಿದರೆ, ಹೊನ್ನಕಿರಣಗಿ ಮಾದರಿ ಇತರ ಬರಪೀಡಿತ ಪ್ರದೇಶಗಳಿಗೂ ದಾರಿದೀಪವಾಗುವ ಸಾಧ್ಯತೆ ಇದೆ.

⇒(ಅನುವಾದ: ಸೂರ್ಯನಾರಾಯಣ ವಿ.)

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260510-51-692528846

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.