ಅದು 1924. ಮೈಸೂರಿನ ಸಂತೇಪೇಟೆಯ ಆನಂದಮಂದಿರ ಹೋಟೆಲಿನ ಉಪ್ಪರಿಗೆ ಕೊಠಡಿಯಲ್ಲಿ ಕುವೆಂಪು ತಮ್ಮ ಗೆಳೆಯರೊಂದಿಗೆ ಮೋಜಿನಾಟದಲ್ಲಿ ತೊಡಗಿದ್ದಾಗ ಬಂದಿತ್ತು ಆ ಟೆಲಿಗ್ರಾಂ. ಅದರಲ್ಲಿ ತಾಯಿ ಸೀತಮ್ಮನವರ ನಿಧನವಾರ್ತೆ ಇತ್ತು.

ಕುವೆಂಪು ಅವರ ಚೇತನವು ಶೋಕಾಘಾತದಿಂದ ಒಂದು ಕ್ಷಣ ತತ್ತರಿಸಿತ್ತು. ಒಡನೆಯೇ ಟೆಲಿಗ್ರಾಂ ಅನ್ನು ಜೇಬಿನಲ್ಲಿಟ್ಟುಕೊಂಡ ಅವರು ಏನು ಎಂತು ಎಂದು ಪ್ರಶ್ನಿಸಿದ ಮಿತ್ರರಿಗೆ ಏನೂ ವಿಶೇಷದ್ದಲ್ಲ ಎಂಬಂತೆ ಉತ್ತರಿಸಿ ಮತ್ತೆ ಆಟದಲ್ಲಿ ತೊಡಗಿದ್ದರು! ಅದಕ್ಕೆ ಕಾರಣ; ಅವರೇ ಹೇಳಿಕೊಳ್ಳುವಂತೆ ಅವರ ‘ಅದ್ವೈತ ಬುದ್ಧಿಯ ಅನಸ್ತೇಶಿಯಾ’. ಆಗ ಅವರ ವಯಸ್ಸು ಕೇವಲ ಇಪ್ಪತ್ತು. ಆ ಹೊತ್ತಿಗೆ ಅವರು ಶಂಕರಾಚಾರ್ಯರ ಅದ್ವೈತ ಸಿದ್ದಾಂತವನ್ನು ಅಪ್ಪಿಕೊಂಡಿದ್ದರು. ಆದರೆ, ಹೊರಗೆ ಕಠೋರವಾಗಿ ಕಂಡರೂ, ಅವರ ಮನೋವ್ಯಾಪಾರ ಬೇರೆಯೇ ಇತ್ತು.

ಅವರ ಆತ್ಮಕತೆ ‘ನೆನಪಿನ ದೋಣಿಯಲ್ಲಿ’ ಈ ಸನ್ನಿವೇಶವಿದೆ. ಮಹಾರಾಜ ಕಾಲೇಜಿನ ಎಂಟ್ರೆನ್ಸ್ ಎಕ್ಸಾಂ ಬರೆದು ಕೆಲವೇ ದಿನಗಳಾಗಿದ್ದವು. ಅವರು ಕಾಲೇಜಿಗೆ ಸೇರಿಕೊಳ್ಳಲು ಮೈಸೂರಿಗೆ ವಾಪಸು ಬಂದಿದ್ದರು. ಬಂದ ಮಾರನೇ ದಿನವೇ ಬಂದ ಟೆಲಿಗ್ರಾಂ ಅದು. ಆದರೆ ಅವರು ತಾಯಿಯ ಸಾವನ್ನು ಕೇಳಿ ದುಃಖಿಸಲಿಲ್ಲ. ಅಳಲಿಲ್ಲ.ಮುಖಭಾವದಲ್ಲಿ ವ್ಯಸನ ಸೂಚಿಸಲೂ ಇಲ್ಲ. ಅಂತ್ಯಸಂಸ್ಕಾರಕ್ಕೆಂದು ಊರಿನ ರೈಲು ಹತ್ತಲಿಲ್ಲ. ಎಂದಿನಂತೆ ಕಾಲೇಜಿಗೆ ಹೊರಟರು. ಸ್ನೇಹಿತರು ಕೇಳಿದಾಗ ‘ಆಗುವುದೆಲ್ಲ ಆಗಿ ಹೋಗಿರುತ್ತದೆ; ನಾನು ಹೋಗಿ ಏನು ಪ್ರಯೋಜನ’ ಎಂದು ಕೇಳಿದ್ದರು!

ದಸರಾ, ಬೇಸಿಗೆ ಬಂದರೆ ಸಾವು..

ಪ್ರವಾಸವನ್ನು ಒಲ್ಲದ ಅವರ ‘ಸ್ಥಾವರ ಪ್ರಕೃತಿ’ಯೂ ಅವರ ಆ ನಿರ್ಧಾರಕ್ಕೆ ಕಾರಣ. ಅಲ್ಲದೆ, ‘ಮೈಸೂರಿಗೆ ವಿದ್ಯಾಭ್ಯಾಸಕ್ಕಾಗಿ ಬಂದಂದಿನಿಂದ ಪ್ರತಿ ದಸರಾ ಮತ್ತು ಬೇಸಿಗೆ ರಜೆಯಲ್ಲಿ ಮನೆಗೆ ಹೋದಾಗಲೆಲ್ಲಾ ಯಾರಾದರೊಬ್ಬರು ಮನೆಯವರು ತೀರಿಹೋಗಿರುತ್ತಿದ್ದರು’. ಎಷ್ಟರ ಮಟ್ಟಿಗೆ ಎಂದರೆ, ಅವರು ಎಂಎ. ತೇರ್ಗಡೆಯಾಗಿ ಮನೆಗೆ ಹಿಂದಿರುಗಿದಂದು ಮನೆಯ ಮಂದಿ ಮುಕ್ಕಾಲು ಪಾಲಿಗಿಂತಲೂ ಹೆಚ್ಚಾಗಿಯೇ ಖಾಲಿಯಾಗಿದ್ದರು.

ಹೀಗಾಗಿ ಮನೆಯವರ ಸಾವನ್ನು ತೀವ್ರವಾಗಿ ಪರಿಭಾವಿಸುವ ಮನಸ್ಥಿತಿಯಲ್ಲಿ ಕುವೆಂಪು ಅವರು ಇರಲಿಲ್ಲವೆನ್ನಿಸುತ್ತದೆ. ‘ತಂಗಿಯಂದಿರನ್ನಾದರೂ ಸಂತೈಸಲು ಹೋಗಿ ಬನ್ನಿ‘ ಎಂಬ ಸ್ನೇಹಿತರ ಮಾತನ್ನೂ ಅವರು ತಳ್ಳಿ ಹಾಕುತ್ತಾರೆ. ಮನೆಯ ಹಿರಿಯರು, ಬಂಧು ಬಳಗದವರಿರುವಾಗ ‘ನಾನೇನು ಸಂತೈಸಲಿ’ ಎಂದೂ ಕೇಳುತ್ತಾರೆ.

ತಾಯಿ ನಿಧನರಾದ ಬಳಿಕ ಕೆಲವು ದಿನ ಕುವೆಂಪು ದಿನಚರಿಯನ್ನೂ ಬರೆಯಲಿಲ್ಲ. ತಮ್ಮೊಳಗೆ ಯಾವ ಭಾವತರಂಗಗಳು ಏಳುತ್ತಿದ್ದವು ಎಂಬುದನ್ನು ಚಿತ್ರಿಸಲು ಆಗದ ಸ್ಥಿತಿಯಲ್ಲಿ ಅವರಿದ್ದರು. ನಂತರ ಅವರು ಹೀಗೆ ಬರೆಯುತ್ತಾರೆ; ನನ್ನ ತಾಯಿ ಸತ್ತಿಲ್ಲವೆಂಬುದೇ ನನ್ನ ದೃಢ ನಂಬುಗೆಯಾಗಿತ್ತು. ಅವರ ದೇಹ ಭಸ್ಮೀಭೂತವಾಗಿದ್ದರೂ ಅವರಾತ್ಮ ಅಮೃತವಾಗಿ ನನ್ನ ತಂದೆಯ ಆತ್ಮದೊಡನೆ ಇರುತ್ತಾ, ಮಕ್ಕಳ ಯೋಗಕ್ಷೇಮಕ್ಕಾಗಿ ಆ ಲೋಕದಿಂದ ಮಾಡಬುದಾದ್ದನ್ನು ಮಾಡುತ್ತಿರುತ್ತದೆ ಎಂದು.

‘ತಾಯಿಯ ಮರಣವಾರ್ತೆಯನ್ನು ಕೇಳಿದ ನನ್ನ ಚೇತನ ತನ್ನ ದುಃಖವನ್ನು ತಾತ್ವಿಕ ಕಠೋರತೆಯಿಂದ ಮರೆಮಾಡಿಕೊಂಡು, ಅದರಿಂದ ಅತೀತವಾಗಲು ಪ್ರಯತ್ನಿಸುತ್ತಿತ್ತು’ ಎನ್ನುವ ಕುವೆಂಪು, 11ನೇ ದಿನದ ಕಾರ್ಯಕ್ಕಾಗಿ ಗೆಳೆಯರ ಒತ್ತಡದಿಂದ ಊರಿನ ರೈಲು ಹತ್ತುತ್ತಾರೆ. ಉತ್ತರಾದಿ ಕಾರ್ಯದ ಹಲವು ಆಚರಣೆಗಳನ್ನು ಸ್ಪಷ್ಟವಾಗಿ ವಿರೋಧಿಸಿ ನಿಂತು, ವೈಚಾರಿಕೆಯನ್ನೇ ಉಸಿರಾಡುತ್ತಾರೆ. ಅದು ಅತಿರೇಕ್ಕೂ ಹೋಗುತ್ತದೆ.

ಅಣ್ಣನ ಸಾಂತ್ವನಕ್ಕಾಗಿ ಕಾಯುತ್ತಿದ್ದ ಇಬ್ಬರು ತಂಗಿಯರ ಅಳುವು ಅವರಿಗೆ ‘ಬಹಿರಂಗ ದುಃಖ ಪ್ರದರ್ಶನ ಮಾಡಿ ನಮ್ಮ ಅನಾಥ ದೈನ್ಯಸ್ಥಿತಿಯನ್ನು ಎಲ್ಲರ ಮುಂದೆಯೂ ತೋರಿಸುವಂತೆ ಮಾಡುತ್ತಿದ್ದಾರಲ್ಲ’ ಎಂಬಂತೆ ಕಾಣುತ್ತದೆ. ಅವರ ಮೇಲೆ ಸಿಟ್ಟಾಗುತ್ತಾರೆ. ಆದರೆ ನಂತರ ಆ ಬಗ್ಗೆ ನಾಚಿಕೆಪಟ್ಟುಕೊಳ್ಳುತ್ತಾರೆ. ಮಮ್ಮಲ ಮರುಗುತ್ತಾರೆ.

ಪಶ್ಚಾತ್ತಾಪದ ಕವಿತೆ ‘ಜನನಿಗೆ’

ತಾಯಿಯ ಸಾವಿನ ವಾರ್ತೆ ಬಂದ ವೇಳೆ, ಏನೂ ಆಗಿಲ್ಲವೆಂಬಂತೆ ವರ್ತಿಸಲು ‘ಅದ್ವೈತ ಬುದ್ಧಿಯ ಅನಸ್ತೇಶಿಯಾ’ ಕಾರಣವಾಗಿತ್ತು ಎಂದು ಬರೆದುಕೊಳ್ಳುವ ಕುವೆಂಪು, ಅದಾಗಿ ಏಳು ವರ್ಷದ ಬಳಿಕ, 1931ರಲ್ಲಿ ‘ಜನನಿಗೆ’ ಎಂಬ ಪಶ್ಚಾತ್ತಪ ಹಾಗೂ ದೈನ್ಯತೆಯ ಭಾವವೇ ಪ್ರಧಾನವಾದ ಕವಿತೆಯೊಂದನ್ನು ಬರೆಯುತ್ತಾರೆ.

ಅವರು ಆಗ ರಾಮಕೃಷ್ಣ ಆಶ್ರಮದ ನಿವಾಸಿ. ಮೈಸೂರು ವಿವಿಯಲ್ಲಿ ಬೋಧಕ. ಅವರ ತಂಗಿಯರಿಬ್ಬರೂ ಇಹಲೋಕ ತ್ಯಜಿಸಿರುತ್ತಾರೆ. ಒಂಟಿಕೊಪ್ಪಲಿನ ಆಶ್ರಮದಿಂದ ಕುಕ್ಕನಹಳ್ಳಿಯ ಕೆರೆ ಕಡೆಗೆ ಒಬ್ಬರೇ ನಡೆದು ಬರುವ ಅವರು, ತಮ್ಮ ತಂದೆ, ತಾಯಿ, ತಂಗಿಯರನ್ನು ಸ್ಮರಿಸಿ ರೋದಿಸುತ್ತಾರೆ.

ಕವನದ ಆರಂಭ ಹೀಗೆ ಆಗುತ್ತದೆ;

ಜನನಿಯೇ, ವರುಷವೇಳರ ಹಿಂದೆ ನೀನಗಲಿ

ಹೋದೆ; ಕಣ್ಮರೆಯಾದೆ. ನಾನಂದು ಸುರಿಯಾದ

ಕಂಬನಿಗಳೆಲ್ಲವೂ ಹಿರಿಯ ಹೊಳೆಯಾಗಿಂದು

ನನ್ನೆದೆಯ ನೊಂದ ದಡಗಳ ಕೊಚ್ಚಿ ಹರಿಯುತಿದೆ.

ನೀನು ಮಡಿದಂದು ನಾನದ್ವೈತ ದರ್ಶನದ

ಮದಿರೆಯಲಿ ಮುಳುಗಿದ್ದೆ...

ಅನಸ್ತೇಶಿಯಾ ಅಥವಾ ಅರಿವಳಿಕೆ ಎಂಬುದು ಶಸ್ತ್ರಚಿಕಿತ್ಸೆ ವೇಳೆ ನೋವು ತಿಳಿಯದಂತೆ ಮಾಡುವ ತಂತ್ರ. ಚಿಕಿತ್ಸೆಗೊಳಗಾಗುವ ದೇಹದ ಭಾಗವನ್ನು ಮರಗಟ್ಟಿಸುವ, ಪ್ರಜ್ಞಾಹೀನ ಸ್ಥಿತಿಯಲ್ಲಿಡುವ ವಿಧಾನ. ಆಗ ನೋವು ಅನುಭವಕ್ಕೆ ಬರುವುದಿಲ್ಲ. ಅರಿವಳಿಕೆ ಪ್ರಭಾವ ಮುಗಿದ ಬಳಿಕ ನೋವು ಸಹಿಸಲು ಅಸಾಧ್ಯ.

ತಾಯಿಯ ನಿಧನದ ವಿಚಾರದಲ್ಲಿ ಕುವೆಂಪು ಅವರಲ್ಲಿದ್ದ ಅದ್ವೈತ ಬುದ್ಧಿಯೇ ಅನಸ್ತೇಶಿಯಾ ರೂಪದಲ್ಲಿ ಅವರನ್ನು ಪ್ರಭಾವಿಸಿತ್ತು. ಅಗಲಿಕೆಯ ನೋವು ಅದರ ಸಹಜತೆಯಲ್ಲಿ ಅರ್ಥವಾಗದಂತೆ ಹಾಗೂ ಅದನ್ನು ಅಭಿವ್ಯಕ್ತಿಸದಂತೆ ಅವರ ಪ್ರಜ್ಞೆಯನ್ನು ಆವರಿಸಿತ್ತು. ಅನಸ್ತೇಶಿಯಾ ಕೆಲವು ಗಂಟೆಗಳ ಕಾಲ ಮನುಷ್ಯ ಅರಿವನ್ನು ಕಿತ್ತುಕೊಂಡರೆ, ಈ ಅನಸ್ತೇಶಿಯಾ ಏಳು ವರ್ಷ ಅವರಿಗೆ ಮಂಕುಬಡಿಸಿತ್ತು. ‘ನಾನದ್ವೈತ ದರ್ಶನದ

ಮದಿರೆಯಲಿ ಮುಳುಗಿದ್ದೆ’ ಎಂಬ ಸಾಕ್ಷಾತ್ಕಾರವೂ ಇದನ್ನೇ ಹೇಳುತ್ತದೆ.

ಆಗಿಹೆನು ನಿಜವಾಗಿ ಅದ್ವೈತಿ!

ತಾಯಿಯ ಸಾವನ್ನು ಸುಳ್ಳೆಂದು ಬಗೆದ ತಮ್ಮ ಅಂದಿನ ಮನಸ್ಥಿತಿಗೆ ಕುವೆಂಪು ತಾವೇ ಮರುಗುತ್ತಾರೆ. ತಂಗಿಯರು ತಮಗಿಂತ ಮುಂಚೆ ಮೃತಪಟ್ಟಾಗ ಪ್ರಾರ್ಥಿಸಿದೆನೇ ಹೊರತು ಕಂಬನಿಗರೆಯಲಿಲ್ಲ ಎಂದು ಹಲುಬುತ್ತಾರೆ. ತಂದೆ ತಾಯಿ, ಸಹೋದರಿಯನ್ನು ಕಳೆದುಕೊಂಡು ಸಾಧು ಸಂಗದೊಳಗೆ ಏಕಾಂಗಿಯಾಗಿಯಾಗಿದ್ದೇನೆ ಎಂದು ಅಲವತ್ತುಕೊಳ್ಳುತ್ತಾರೆ. ‘ಆಗಿಹೆನು ನಿಜವಾಗಿ ಅದ್ವೈತಿ’ ಎನ್ನುತ್ತಾ, ತಾಯಿ ಸತ್ತಾಗಿನ ತಮ್ಮ ನಿಲುವನ್ನು ಹಾಗೂ ಏಳು ವರ್ಷಗಳ ನಂತರ ತಮ್ಮ ಪರಿಸ್ಥಿತಿಯನ್ನು ಒಟ್ಟಿಗೇ ತಂದು ತಮ್ಮನ್ನು ತಾವೇ ವ್ಯಂಗ್ಯಕ್ಕೆ ಈಡುಮಾಡಿಕೊಳ್ಳುತ್ತಾರೆ.

ತಾಯಿಯ ನಿಧನ ವಾರ್ತೆ ಬಂದಾಗ ಅವರು ಸಂತೇಪೇಟೆಯ ಹೋಟೆಲೊಂದರಲ್ಲಿ ಗೆಳೆಯರೊಂದಿಗೆ ಮೋಜಿನಾಟದಲ್ಲಿದ್ದರು. ಅನಸ್ತೇಶಿಯಾ ಪ್ರಭಾವ ಮುಗಿದ ಬಳಿಕ, ಅವರು ಅಪ್ಪಟ ಏಕಾಂಗಿ. ಸಂಕಟಗ್ರಸ್ತ ಮನಸ್ಸು. ಹುಟ್ಟಿದೂರಿಗೆ ದೂರದಲ್ಲಿರುವ ಮೈಸೂರಿನ ಕುಕ್ಕನಹಳ್ಳಿ ಕೆರೆಯಲ್ಲಿ ಕಾಡುವ ಏಕಾಂತವು ಕಣ್ಣೊರೆಸುವ ಏಕಾಂತವೂ ಆಗುತ್ತದೆ. ಅಲ್ಲಿ ಮತ್ತೆ ಅವರ ಮುಂದೆ ತಾಯಿಯ ಮೂರ್ತಿ ಹೊಳೆಹೊಳೆದು ಮೈದೋರುತ್ತದೆ.

‘ಮೊಗದಲ್ಲಿ ಮುಗುಳುನಗೆ; ಕಣ್ಗಳಲ್ಲಿ ಚಿರಶಾಂತಿ, ಕೈಯೆತ್ತಿ ಹರಸುತಿಹೆ ನಿನ್ನ ಮುದ್ದಿನ ಶಿಶುವ; ಹರಸು, ಓ ಹರಸಮ್ಮಾ’ ಎನ್ನುತ್ತಾರೆ. ‘ನನ್ನೊಳಿಹ ಶಕ್ತಿ ಯುಕ್ತಿಗಳೆಲ್ಲ, ನಿನ್ನ ಪದತೀರ್ಥದಲಿ ಭಕ್ತಿ ಬಿಂದುಗಳಾಗಿ ಸಂಗಮಿಸಲಿ’ ಎಂದು ಪ್ರಾರ್ಥಿಸುತ್ತಾರೆ. ಇದು ತಾಯಂದಿರ ಮುಂದೆ ಎಲ್ಲ ಮಕ್ಕಳ ಪ್ರಾರ್ಥನೆಯೂ ಆಗಬಹುದು.

ಅದ್ವೈತ–ದ್ವೈತಗಳ ನೆಲೆ ಮೀರಿ ನಿಂತ ‘ವೈಚಾರಿಕ ಕುವೆಂಪು’ ಅವರ ವಿರಾಟ್ ಬದುಕು–ಭಾವಗಳಿಗೆ ರೂಪು ಕೊಡುವಲ್ಲಿ ಮೈಸೂರು ಕೂಡ ತಾಯಿಯ ಪಾತ್ರವನ್ನೇ ವಹಿಸಿದೆ.

(ಇಂದು ವಿಶ್ವ ತಾಯಂದಿರ ದಿನ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.