ಮಲ್ಪೆ ಕಡಲ ತೀರದಲ್ಲಿ ಬೆಳಗಿನ ಅಲೆಗಳು ಒಂದರ ಹಿಂದೆ ಒಂದಾಗಿ ದಡಕ್ಕೆ ಅಪ್ಪಳಿಸುತ್ತಿದ್ದವು. ಸರ್ಫ್ಬೋರ್ಡ್ ಹಿಡಿದು ಕೆಲ ಯುವಕರು ನೀರಿನತ್ತ ಓಡುತ್ತಿದ್ದರು. ಮೊದಲ ಬಾರಿಗೆ ಸಮುದ್ರಕ್ಕೆ ಇಳಿಯುವವರ ಕಣ್ಣಲ್ಲಿ ಆತಂಕವೂ ಉತ್ಸಾಹವೂ ಬೆರೆತಿತ್ತು. ಅವರ ಮಧ್ಯೆ ನಿಂತಿದ್ದ ರೋಹನ್ ಆರ್. ಸುವರ್ಣ ಶಾಂತವಾಗಿ ಸೂಚನೆಗಳನ್ನು ನೀಡುತ್ತಿದ್ದರು. ಕೆಲವೇ ವರ್ಷಗಳ ಹಿಂದೆ ಗುಜರಾತ್ನ ಕಂಪನಿಯೊಂದರ ಕಚೇರಿಯಲ್ಲಿ ಕುಳಿತು ಕೆಲಸ ಮಾಡುತ್ತಿದ್ದ ಅವರು, ಇಂದು ಸಾವಿರಾರು ಮಂದಿಗೆ ಸಮುದ್ರದ ಜೊತೆ ಸ್ನೇಹ ಮಾಡಿಸುತ್ತಿದ್ದಾರೆ.

ಉಡುಪಿ ಜಿಲ್ಲೆಯ ಮಲ್ಪೆ ಕಡಲ ಕಿನಾರೆಯ ತೋಟ್ಟಂ ನಿವಾಸಿಯಾದ ರೋಹನ್, ಮಂಗಳೂರು ವಿಶ್ವವಿದ್ಯಾಲಯದಿಂದ ರಾಸಾಯನಿಕ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದ ಬಳಿಕ ಉದ್ಯೋಗಕ್ಕಾಗಿ ಗುಜರಾತ್ಗೆ ತೆರಳಿದ್ದರು. ಆದರೆ ಕಚೇರಿ ಕೆಲಸದ ಏಕತಾನತೆ ಅವರೊಳಗೆ ವಿಚಿತ್ರ ಖಾಲಿತನ ಹುಟ್ಟುಹಾಕಿತ್ತು. ಊರಿನ ನೆನಪು, ಸಮುದ್ರದ ಅಲೆಗಳ ಸದ್ದು ಅವರನ್ನು ಹಿಂಬಾಲಿಸುತ್ತಲೇ ಇತ್ತು. ‘ವಿಶಾಲ ಸಮುದ್ರದ ನಡುವೆ ಏನಾದರೂ ಸಾಧಿಸಬೇಕು’ ಎನ್ನುವ ತುಡಿತ ಹೆಚ್ಚಾಗುತ್ತಿದ್ದಂತೆ ಅವರು ಊರಿಗೆ ಮರಳಿದರು.

ಗೆಳೆಯನೊಂದಿಗೆ ಯೋಜನೆಯೊಂದರಲ್ಲಿ ತೊಡಗಿಸಿಕೊಂಡರೂ ಮನಸ್ಸಿಗೆ ಸಮಾಧಾನ ಇರಲಿಲ್ಲ. ‘ಇದು ನಿನ್ನ ದಾರಿ ಅಲ್ಲ’ ಎನ್ನುವ ಒಳದನಿ ಅವರನ್ನು ಕಾಡುತ್ತಲೇ ಇತ್ತು. ಕೊನೆಗೆ ಆ ದಾರಿ ಸಮುದ್ರದತ್ತವೇ ತೆರೆಯಿತು. ಏಳು ವರ್ಷಗಳ ಹಿಂದೆ ಮೂಡಿದ ಆ ಹೊಳಹು ಈಗ ಸಾವಿರಾರು ಮಂದಿಯನ್ನು ಜಲಸಾಹಸ ಕ್ರೀಡೆಗಳತ್ತ ಸೆಳೆದಿದೆ.

ರೋಹನ್ ಸರ್ಫಿಂಗ್ಗೆ ಕಾಲಿಡುವ ವೇಳೆಗೆ ಉಡುಪಿ ಜಿಲ್ಲೆಯ ತನ್ವಿ ಜಗದೀಶ್ ಆಗಲೇ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದರು. ಭಾರತದಲ್ಲಿ ವೃತ್ತಿಪರ ಸ್ಟ್ಯಾಂಡ್ ಅಪ್ ಪ್ಯಾಡ್ಲಿಂಗ್ (ಎಸ್ಯುಪಿ) ಕ್ಷೇತ್ರದಲ್ಲಿ ಗುರುತಿಸಿಕೊಂಡ ಮಹಿಳೆಯರ ಪೈಕಿ ಅವರು ಮೊದಲ ಸಾಲಿನಲ್ಲಿದ್ದರು. ಸಮುದ್ರದ ನೀರು ತನ್ವಿಗೆ ಹೊಸದೇನೂ ಅಲ್ಲ. ಮೀನುಗಾರಿಕೆಯನ್ನು ನೋಡುತ್ತ ಬೆಳೆದ ಅವರಿಗೆ ಅಲೆಗಳು ಬಾಲ್ಯದ ಆಟದಂಗಣದಂತಿದ್ದವು. ಹತ್ತನೇ ವಯಸ್ಸಿನಲ್ಲೇ ಸರ್ಫಿಂಗ್ ಅಭ್ಯಾಸ ಆರಂಭಿಸಿದ್ದ ಅವರು ಮೂಲ್ಕಿಯ ಮಂತ್ರ ಸರ್ಫ್ ಕ್ಲಬ್ನಲ್ಲಿ ಶಿಸ್ತುಬದ್ಧ ತರಬೇತಿ ಪಡೆದಿದ್ದರು.

ರೋಹನ್ಗೆ ಮೊದಲ ಬಾರಿಗೆ ಸರ್ಫ್ಬೋರ್ಡ್ ಮೇಲೆ ಸಮತೋಲನ ಸಾಧಿಸುವುದನ್ನು ಕಲಿಸಿದ್ದೂ ತನ್ವಿಯೇ. ಆ ಗುರು–ಶಿಷ್ಯ ಸಂಬಂಧವೇ ಮುಂದೆ ಪಶ್ಚಿಮ ಕರಾವಳಿಯ ಜಲಸಾಹಸ ಕ್ರೀಡೆಯಲ್ಲಿ ಹೊಸ ಅಧ್ಯಾಯ ಬರೆಯಿತು. ಇಬ್ಬರೂ ಸೇರಿ ಆರಂಭಿಸಿದ ‘ಕಡಲ್’ ಸಂಸ್ಥೆ ಈಗ ಏಳು ಸಾವಿರಕ್ಕೂ ಹೆಚ್ಚು ಮಂದಿಗೆ ತರಬೇತಿ ನೀಡಿದೆ.

ಇಂದು ಮಲ್ಪೆಯಲ್ಲಿರುವ ‘ಕಡಲ್’ ಸದಾ ಚಟುವಟಿಕೆಯಿಂದ ಕಂಗೊಳಿಸುತ್ತದೆ. ಸರ್ಫ್ಬೋರ್ಡ್ಗಳನ್ನು ಭುಜದ ಮೇಲೆ ಹೊತ್ತು ಆತ್ಮವಿಶ್ವಾಸದಿಂದ ಸಾಗುವವರು, ನೀರಿನ ಅಂಚಿನಲ್ಲಿ ನಿಂತು ಧೈರ್ಯ ಕೂಡಿಸಿಕೊಳ್ಳುವವರು, ಕುತೂಹಲದಿಂದ ಪ್ರಶ್ನೆಗಳ ಸುರಿಮಳೆಗೈಯುವ ಮಕ್ಕಳು; ಎಲ್ಲರಿಗೂ ಈ ಜಾಗ ಹೊಸ ಅನುಭವದ ಬಾಗಿಲಾಗುತ್ತದೆ. ರೋಹನ್, ತನ್ವಿ ಸೇರಿ ಏಳು ಮಂದಿ ತರಬೇತುದಾರರು ಇಲ್ಲಿ ಮಾರ್ಗದರ್ಶಕರಾಗಿದ್ದಾರೆ.

ಸರ್ಫಿಂಗ್ ಮಾತ್ರವಲ್ಲ, ಸ್ಟ್ಯಾಂಡ್ ಅಪ್ ಪ್ಯಾಡ್ಲಿಂಗ್ ಮತ್ತು ಪಶ್ಚಿಮ ಕರಾವಳಿಯಲ್ಲಿ ಅಪರೂಪವಾಗಿರುವ ಕಯಾಕಿಂಗ್ ತರಬೇತಿಯನ್ನೂ ಇಲ್ಲಿ ನೀಡಲಾಗುತ್ತಿದೆ. ಸ್ವರ್ಣಾ ನದಿಯಲ್ಲಿ ಕಯಾಕಿಂಗ್ ಅಭ್ಯಾಸ ನಡೆಸಲಾಗುತ್ತದೆ. ಆದರೆ ‘ಕಡಲ್’ ಚಟುವಟಿಕೆ ಕ್ರೀಡೆಗಷ್ಟೇ ಸೀಮಿತವಾಗಿಲ್ಲ. ಸಮುದ್ರದೊಂದಿಗೆ ಬೆರೆಯುವಾಗ ಅಗತ್ಯವಿರುವ ಜಾಗರೂಕತೆ ಮತ್ತು ಜೀವರಕ್ಷಣಾ ಕೌಶಲಗಳ ಕುರಿತು ಶಾಲೆಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನೂ ನಡೆಸಿಕೊಡುತ್ತಿದೆ.

ರೋಹನ್ ದೇಶದಾದ್ಯಂತ ಸಂಚರಿಸಿ ಜೀವರಕ್ಷಣಾ ತರಗತಿಗಳನ್ನು ನಡೆಸುತ್ತಿದ್ದಾರೆ. ಗೋವಾದ ರಾಷ್ಟ್ರೀಯ ಜಲಕ್ರೀಡಾ ಸಂಸ್ಥೆಯಲ್ಲಿ ಅತಿಥಿ ಉಪನ್ಯಾಸಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಎನ್ಸಿಸಿ ಮತ್ತು ಎನ್ಎಸ್ಎಸ್ ವಿದ್ಯಾರ್ಥಿಗಳಿಗೂ ತರಬೇತಿ ನೀಡುತ್ತಿದ್ದಾರೆ. ಅಂತರರಾಷ್ಟ್ರೀಯ ಸರ್ಫಿಂಗ್ ಸಂಸ್ಥೆ ಮತ್ತು ಅಂತರರಾಷ್ಟ್ರೀಯ ಜೀವರಕ್ಷಕ ಫೆಡರೇಷನ್ ಇಬ್ಬರನ್ನೂ ತರಬೇತುದಾರರಾಗಿ ಪ್ರಮಾಣೀಕರಿಸಿವೆ.

ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿಯೂ ಇವರ ಸಾಧನೆ ಗಮನಾರ್ಹ. ಪೋಲೆಂಡ್ನಲ್ಲಿ ನಡೆದ ವಿಶ್ವ ಎಸ್ಯುಪಿ ಚಾಂಪಿಯನ್ಷಿಪ್ನಲ್ಲಿ ರೋಹನ್ 33ನೇ ಸ್ಥಾನ ಗಳಿಸಿದ್ದರು. ರಾಷ್ಟ್ರೀಯ ಮಟ್ಟದಲ್ಲಿ ಕಂಚಿನ ಪದಕ ಮತ್ತು ರಾಜ್ಯ ಮಟ್ಟದಲ್ಲಿ ಎರಡು ಬೆಳ್ಳಿ ಪದಕಗಳನ್ನು ಗೆದ್ದಿದ್ದಾರೆ. ತನ್ವಿ ಈಗಾಗಲೇ ಎರಡು ಬಾರಿ ವಿಶ್ವಕಪ್ನಲ್ಲಿಪಾಲ್ಗೊಂಡು ರಾಷ್ಟ್ರಮಟ್ಟದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ.

ಆದರೆ ಈ ದಾರಿ ಸುಲಭವಾಗಿರಲಿಲ್ಲ. ಉದ್ಯೋಗ ಮತ್ತು ಸಂಪಾದನೆಯ ಮೂಲಕ ಬದುಕು ಕಟ್ಟಿಕೊಳ್ಳಬೇಕಾದ ವಯಸ್ಸಿನಲ್ಲಿ ಜಲಕ್ರೀಡೆಯನ್ನೇ ಉದ್ಯಮವನ್ನಾಗಿ ಆರಿಸಿಕೊಂಡಿದ್ದಕ್ಕೆ ಕುಟುಂಬಗಳಲ್ಲಿ ಆರಂಭದಲ್ಲಿ ಅಸಮಾಧಾನವಿತ್ತು. ‘ಸಮುದ್ರದಲ್ಲಿ ಆಟವಾಡುವುದೇ ಉದ್ಯೋಗವಾ?’ ಎನ್ನುವ ಪ್ರಶ್ನೆಗಳೂ ಎದುರಾದವು. ಆದರೆ ಇಂದು ಅವರ ಸಾಧನೆಯನ್ನು ನೋಡಿ ಕುಟುಂಬಗಳೇ ಹೆಮ್ಮೆಪಡುತ್ತಿವೆ.

‘ಈ ಭಾಗದಲ್ಲಿ ಸಾಗರ ಕ್ರೀಡೆಗಳ ಬಗ್ಗೆ ಆಸಕ್ತಿ ಮತ್ತು ಅರಿವು ಕಡಿಮೆ ಇತ್ತು. ಮಕ್ಕಳನ್ನು, ವಿಶೇಷವಾಗಿ ಹೆಣ್ಣುಮಕ್ಕಳನ್ನು ಇಂತಹ ಕ್ರೀಡೆಗಳಿಗೆ ಕಳುಹಿಸುತ್ತಲೇ ಇರಲಿಲ್ಲ. ಆದರೆ ವರ್ಷಗಳು ಕಳೆದಂತೆ ಜನರ ದೃಷ್ಟಿಕೋನ ಬದಲಾಗಿದೆ’ ಎಂದು ರೋಹನ್ ಹೇಳುತ್ತಾರೆ.

ನಾಲ್ಕು ವರ್ಷದ ಮಕ್ಕಳಿಂದ ಹಿಡಿದು ಎಪ್ಪತ್ತು ವರ್ಷದವರವರೆಗೂ ಇಲ್ಲಿ ತರಬೇತಿಗೆ ಬರುತ್ತಾರೆ ಎಂದು ತನ್ವಿ ಹೇಳುತ್ತಾರೆ. ಮಲ್ಪೆಯಲ್ಲಿ ಅಲೆಗಳ ಮೇಲೆ ನಿಂತು ಸಮುದ್ರದ ಸೌಂದರ್ಯವನ್ನು ಸವಿಯಲು ಮತ್ತು ಅದರ ಸವಾಲನ್ನು ಅನುಭವಿಸಲು ನವದೆಹಲಿ, ಪಂಜಾಬ್, ಅಸ್ಸಾಂ, ಹೈದರಾಬಾದ್ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಜನರು ಬರುತ್ತಿದ್ದಾರೆ. ಜರ್ಮನಿ, ಜಪಾನ್, ನೆದರ್ಲೆಂಡ್ಸ್, ಇಂಗ್ಲೆಂಡ್ ಮತ್ತು ಅಮೆರಿಕದಿಂದಲೂ ವಿದೇಶಿಗರು ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ.

ಸಾಹಸ ಮತ್ತು ಜಾಗೃತಿಯ ನಡುವೆ ಸೇತುವೆಯಂತೆ ‘ಕಡಲ್’ ಬೆಳೆದಿದೆ. ಜಲಕ್ರೀಡೆಗಳನ್ನು ಕಲಿಸುವುದರ ಜೊತೆಗೆ ಸಮುದ್ರದ ಬಗ್ಗೆ ಭಯವನ್ನು ಕಡಿಮೆ ಮಾಡಿ ಆತ್ಮವಿಶ್ವಾಸ ಬೆಳೆಸುತ್ತಿದೆ. ಒಮ್ಮೆ ಧಾರ್ಮಿಕ ಆಚರಣೆಗಳ ಸಂದರ್ಭದಲ್ಲಷ್ಟೇ ಸಮುದ್ರಕ್ಕೆ ಇಳಿಯುತ್ತಿದ್ದ ರೋಹನ್, ಇಂದು ಸಾವಿರಾರು ಮಂದಿಗೆ ಅದರೊಳಗೆ ಧೈರ್ಯವಾಗಿ ಇಳಿಯುವುದನ್ನು ಕಲಿಸುತ್ತಿದ್ದಾರೆ. ಅಲೆಗಳ ಜೊತೆ ಆಟವಾಡುತ್ತ ಬೆಳೆದ ತನ್ವಿ, ಈಗ ಆ ಅಲೆಗಳನ್ನೇ ಬದುಕಿನ ಪಾಠವಾಗಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260524-51-735153765

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.