ಅದು 1970ರ ದಶಕದ ಆರಂಭ ಕಾಲ. ಮೈಸೂರಿನಲ್ಲಿ ರಾಮಮನೋಹರ ಲೋಹಿಯಾ ಅವರ ಸಮಾಜವಾದಿ ಪಕ್ಷದ ಯುವಜನ ಶಾಖೆ- ಸಮಾಜವಾದಿ ಯುವಜನ ಸಭಾ ಸಣ್ಣದಾಗಿ ಕಣ್ ಬಿಡುತ್ತಿತ್ತು. ಸಭಾದ ನೇತೃತ್ವ ವಹಿಸಿದ್ದವರು ಪ್ರೊ.ಎಂ.ಡಿ.ನಂಜುಂಡಸ್ವಾಮಿ. ವಕೀಲರಾದ ಟಿ.ಎನ್.ನಾಗರಾಜ್, ವಿದ್ಯಾರ್ಥಿಗಳಾಗಿದ್ದ ಕೆ.ರಾಮದಾಸ್, ಪುಟ್ಟಯ್ಯ, ಎಂ.ಬಿ.ನಟರಾಜ್, ಪ.ಮಲ್ಲೇಶ್ ಹಾಗೂ ಮಹಾರಾಜಾ ಕಾಲೇಜು ಹಾಸ್ಟೆಲ್ ಹುಡುಗರೆಲ್ಲ ಸೇರಿ ಒಂದು ನಿರ್ಧಾರಕ್ಕೆ ಬಂದರು. ಅವರೆಲ್ಲರೂ ಆಗ, ಸಮಾಜವಾದ ತರುವ ಬದಲಾವಣೆಯನ್ನೇ ಹಂಬಲಿಸುತ್ತಿದ್ದ ಚೇತನಗಳು. ಯಾವ ರೀತಿಯಲ್ಲಿ ನೋಡಿದರೂ ಸಮಾಜವಾದವನ್ನೇ ಉಸಿರಾಡುತ್ತಿದ್ದವರು.

ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಉದ್ಯಾನದಲ್ಲಿ ಪ್ರತಿಷ್ಠಾಪಿಸಿದ್ದ ಸರ್ ಜೇಮ್ಸ್ ಡೇವಿಡ್ಸನ್ ಗಾರ್ಡನ್ನ ಅತ್ಯಂತ ಹಳೆಯ ಕಂಚಿನ ಪ್ರತಿಮೆಯನ್ನು ಉರುಳಿಸಬೇಕೆಂಬುದೇ ಆ ನಿರ್ಧಾರ! ಬ್ರಿಟಿಷರ ಕುರಿತ ಭಾರತೀಯರ ದಾಸ್ಯದ ಸಂಕೇತವಾಗಿ ಆ ಪ್ರತಿಮೆ ಅವರಿಗೆ ಕಂಡಿದ್ದೇ ಅದಕ್ಕೆ ಮುಖ್ಯ ಕಾರಣ.

ಡೇವಿಡ್ ಸನ್, ಮೈಸೂರಿನ ಬ್ರಿಟಿಷ್ ರೆಸಿಡೆಂಟ್ ಆಗಿದ್ದವರು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ತಂದೆ, ಚಾಮರಾಜೇಂದ್ರ ಒಡೆಯರ್ ಅವರ ಗಾರ್ಡಿಯನ್ ಆಗಿದ್ದವರು. ಮೈಸೂರಿನಲ್ಲಿ ಅವರ ನೆನಪಿಗಾಗಿಯೇ ಸ್ಥಾಪಿಸಿರುವ ಪ್ರತಿಮೆಯನ್ನು ಉರುಳಿಸಿಬಿಟ್ಟರೆ, ಆ ನೆನಪೇ ಉಳಿಯಲಾರದು ಎಂಬುದು ಈ ಯುವಜನರ ಪ್ರತಿಪಾದನೆಯಾಗಿತ್ತು.

ಪ್ರತಿಮೆಯ ಬಗ್ಗೆ ಎಷ್ಟೇ ಆಕ್ಷೇಪಣೆಗಳಿದ್ದರೂ ಅದನ್ನು ಸಾರ್ವಜನಿಕವಾಗಿ ಅದೂ ಹಗಲು ಹೊತ್ತಿನಲ್ಲಿ ಉರುಳಿಸುವುದು ಅಸಾಧ್ಯವಾಗಿತ್ತು. ಹೀಗಾಗಿ ಒಂದು ರಾತ್ರಿ ಅದಕ್ಕೆ ಸಮಯ ನಿಗದಿ ಮಾಡಲಾಯಿತು. ರಾತ್ರಿ 9ರ ಸುಮಾರಿಗೆ ಮಹಾರಾಜ ಕಾಲೇಜಿನ ರೂಮೊಂದರಲ್ಲಿ ಸೇರಿಕೊಂಡರು. ಹತ್ತರ ವೇಳೆಗೆ ಟ್ರ್ಯಾಕ್ಟರ್ ಬಂತು. ಎಲ್ಲರೂ ಪ್ರತಿಮೆಯ ಬಳಿಗೆ ತೆರಳಿದರು.

ಎಷ್ಟೇ ಸದ್ದಿಲ್ಲದೆ ಆ ಕೆಲಸ ಮಾಡಬೇಕೆಂದುಕೊಂಡರೂ, ಟ್ರ್ಯಾಕ್ಟರ್ ಅದಕ್ಕೆ ಸಮ್ಮತಿ ಕೊಡುವುದಿಲ್ಲವೆಂಬಂತೆ ದೊಡ್ಡ ಸದ್ದು ಮಾಡುತ್ತಲೇ ಇತ್ತು. ಅದರ ನಡುವೆಯೇ, ಪ್ರತಿಮೆಯ ಕೊರಳಿಗೆ ಹಗ್ಗ ಕಟ್ಟಿ, ಅದರ ಇನ್ನೊಂದು ತುದಿಯನ್ನು ಟ್ರ್ಯಾಕ್ಟರ್ನ ಹಿಂಭಾಗಕ್ಕೆ ಕಟ್ಟಿದರು. ಚಾಲಕ ಟ್ರ್ಯಾಕ್ಟರ್ ಅನ್ನು ಮುಂದಕ್ಕೆ ನುಗ್ಗಿಸಿದ. ಆದರೆ ಪ್ರತಿಮೆಯು ಕಿಂಚಿತ್ತೂ ಕದಲಲಿಲ್ಲ. ಮತ್ತೆ ಮತ್ತೆ ಮಾಡಿದ ಪ್ರಯತ್ನ ಕೈಗೂಡಲಿಲ್ಲ. ಬ್ರಿಟಿಷರು ಈ ನಾಡಿನಲ್ಲಿ ಬೇರೂರಿದ್ದ ಬಗೆಯನ್ನು ತೋರುವ ರೀತಿಯಲ್ಲಿ ಆ ಪ್ರತಿಮೆಯು ಟ್ರ್ಯಾಕ್ಟರ್ ಶಕ್ತಿಗೂ ಕದಲದೇ ನಿಂತಿತ್ತು. ಪ್ರಯತ್ನಗಳು ವಿಫಲವಾದವು.

ಇಂಗ್ಲಿಷ್ನವರನ್ನು ಓಡಿಸುವುದು ಬಹಳ ಕಷ್ಟ..

ಆ ದಿನಗಳ ನೆನಪನ್ನು ‘ಆ ಎಸ್ವೈಎಸ್ ದಿನಗಳು’ ಎಂಬ ತಮ್ಮ ಲೇಖನದಲ್ಲಿ ಎಂ.ಬಿ.ನಟರಾಜ್ ರೋಚಕವಾಗಿ ಹೀಗೆ ವಿವರಿಸುತ್ತಾರೆ: ನಂಜುಂಡಸ್ವಾಮಿ, ‘ಇಂಗ್ಲಿಷ್ನವರನ್ನು ಓಡಿಸುವುದು ಬಹಳ ಕಷ್ಟ; ಬೇರೆ ಪ್ಲ್ಯಾನ್ ಮಾಡಬೇಕು’ ಎಂದರು. ಈಗ ಪ್ರತಿಮೆಯ ಸುತ್ತು 3–4 ಹಗ್ಗ ಬಿಗಿದು, ಟ್ರ್ಯಾಕ್ಟರ್ಗೆ ಕಟ್ಟಿದ ಕೂಡಲೇ ಡ್ರೈವರ್, ’ಈ ಸಾರಿ ಅವರ ಕಥೆ ನೋಡಿ’ ಎನ್ನುತ್ತಾ ಆಕ್ಸಿಲರೇಟರ್ನ್ನು ಒತ್ತಿದ ಕೂಡಲೇ ಟ್ರ್ಯಾಕ್ಟರ್ ರೈಲ್ವೆ ಎಂಜಿನ್ನಂತೆ ಅಬ್ಬರಿಸತೊಡಗಿತು. ಇದ್ದಕ್ಕಿದ್ದಂತೆ ಸ್ವಾತಂತ್ರ್ಯ ಸಿಕ್ಕಂತೆ ಟ್ರ್ಯಾಕ್ಟರ್ ಮುಂದೆ ಓಡಿತು. ಎಲ್ಲರಿಗೂ ಗಾರ್ಡನ್ ಉರುಳಿಬಿದ್ದ ಎಂದು ಖುಷಿಯಾಯಿತು. ಆದರೆ ಆ ಖುಷಿ ಹೆಚ್ಚು ಕ್ಷಣ ಇರಲಿಲ್ಲ. ಕಾರಣ, ತುಂಡಾಗಿದ್ದು ಹಗ್ಗ ಮಾತ್ರ. ಅದು ಕೊರಳಿನಲ್ಲೇ ನೇತಾಡುತ್ತಿತ್ತು. ಅಷ್ಟು ಹೊತ್ತಿಗೆ ಎಲ್ಲಿದ್ದರೋ ಪೊಲೀಸರು 3–4 ಮಂದಿ ಸೀಟಿ ಊದುತ್ತಾ ಓಡಿ ಬಂದರು. ಕ್ಷಣ ಮಾತ್ರದಲ್ಲಿ ನಾವೆಲ್ಲ ದಿಕ್ಕಾಪಾಲು!’

ಈ ಅಪರೂಪದ ಅನುಭವವು ದಶಕದ ಹಿಂದೆ ಚಾಮರಾಜನಗರದ ‘ಸಮತ ಪ್ರಕಾಶನ’ವು ಪ್ರಕಟಿಸಿರುವ ‘ನಮ್ಮ ಸಮಾಜವಾದಿಗಳು’ ಕೃತಿಯಲ್ಲಿ ದಾಖಲಾಗಿದೆ. ರಾಜ್ಯದ ವಿವಿಧ ಭಾಗಗಳ ಸಮಾಜವಾದಿಗಳು ಹಾಗೂ ಅವರ ಬದುಕಿನ ನೆನಪುಗಳನ್ನು ಡಿ.ಎಸ್.ನಾಗಭೂಷಣ ಸಂಪಾದಿಸಿ ನೀಡಿದ್ದಾರೆ.

ಪ್ರತಿಮೆಯನ್ನು ಉರುಳಿಸುವ ಪ್ರಯತ್ನದ ಬಗ್ಗೆ, ಮಾರನೇ ದಿನವೇ ಪತ್ರಿಕೆಗಳಲ್ಲಿ ಸುದ್ದಿಯಾಗಿ, ಆಗ ನಡೆಯುತ್ತಿದ್ದ ವಿಧಾನಸಭೆ ಅಧಿವೇಶನದಲ್ಲೂ ಅದು ಪ್ರಸ್ತಾಪಗೊಂಡಿತ್ತು. ಉರುಳಿಸುವ ಪ್ರಯತ್ನದ ಕುರಿತ ತನಿಖೆ ನಡೆಸುವ ಸರ್ಕಾರದ ಭರವಸೆಯೂ ಮರೆಯಾಯಿತು.

ನಂಜುಂಡಸ್ವಾಮಿ ಅವರ ಅಂಥ ಉತ್ಸಾಹಕ್ಕೆ ಸಂಗಾತಿಗಳು ನಿರುತ್ಸಾಹ ತೋರುತ್ತಿದ್ದ ಘಟನೆಗಳೂ ಆಗ ನಡೆದಿವೆ. ಮೈಸೂರಿನ ಇರ್ವಿನ್ ರಸ್ತೆ, ಹಾರ್ಡಿಂಜ್ ಸರ್ಕಲ್ ಫಲಕಗಳನ್ನು ಕಿತ್ತೆಸೆಯಬೇಕೆಂಬ ಅವರ ನುಡಿಗೆ ವಿದ್ಯಾರ್ಥಿಗಳು, ‘ಸುಮ್ನಿರಿ ಸಾರ್, ಡೇವಿಡ್ ಗಾರ್ಡನ್ನನ್ನೇ ತೊಲಗಿಸ್ಲಿಕ್ಕೆ ಆಗ್ಲಿಲ್ಲ’ ಎಂದು ಹೇಳಿದ್ದನ್ನೂ ನಟರಾಜ್ ಸ್ಮರಿಸುತ್ತಾರೆ. ಇದು ಗಾರ್ಡನ್ನ ಪ್ರತಿಮೆಯನ್ನು ಬೀಳಿಸುವಲ್ಲಿ ಸಮಾಜವಾದಿ ಯುವಜನ ಸಭಾದ ವಿಫಲ ಪ್ರಯತ್ನಕ್ಕೆ ಕನ್ನಡಿ ಹಿಡಿಯುತ್ತದೆ.

ಡಾಂಬರು ಬಳಿಯಲಾಗಿತ್ತು..

ಈ ರೀತಿ ಸಂಕೇತಗಳನ್ನು ಹೊಡೆದು ಉರುಳಿಸುವ ಉದ್ದೇಶದ ಮುಂದುವರಿದ ಭಾಗ ಇನ್ನೊಂದಿದೆ. ಅದೇ ಪ್ರತಿಮೆಗೆ ಡಾಂಬರು ಎರಚಿ ವಿಕೃತಗೊಳಿಸುವ ಪ್ರಯತ್ನವೂ ಆ ಅವಧಿಯಲ್ಲೇ ನಡೆದಿತ್ತು. ಆಗ ವಿದ್ಯಾರ್ಥಿಯಾಗಿದ್ದ, ಈಗ ಮೈಸೂರು ಪರಂಪರೆ ತಜ್ಞರಾಗಿರುವ ಪ್ರೊ.ಎನ್.ಎಸ್.ರಂಗರಾಜ್ ಅವರ ನೆನಪಿನಲ್ಲಿ ಈ ಘಟನೆ ಇದೆ. ಅವರು ಕೇಳುತ್ತಾರೆ: ‘ಬ್ರಿಟಿಷರ ಸಾಮ್ರಾಜ್ಯವೇ ದೇಶದಲ್ಲಿ ಹಬ್ಬಿದ್ದು ಸತ್ಯವಾಗಿರುವಾಗ ಬ್ರಿಟಿಷ್ ಪ್ರತಿನಿಧಿಯ ಪ್ರತಿಮೆಯನ್ನು ಬೀಳಿಸುವ ಅವಶ್ಯಕತೆ ಏನಿತ್ತು?

ಮೈಸೂರಿನಲ್ಲಿ ಪ್ರತಿಮೆಯನ್ನು ಉರುಳಿಸುವಲ್ಲಿ ಯುವಜನ ಸಭಾದ ಮುಂದಾಳುಗಳು ಸೋತರೂ, ನಂತರದ ದಿನಗಳಲ್ಲಿ ಸಮಾಜವಾದದ ಜಾರಿಗಾಗಿ ಮಾಡಿದ ಪ್ರಯತ್ನಗಳು ಹಲವು. ರಾಜ್ಯದ ಹಲವೆಡೆಯಿಂದ ಮೂಡಿ ಬಂದು ನಾಯಕರಾದವರು ಸಮಾಜವಾದಿ ಹೋರಾಟದ ಗುರುತುಗಳನ್ನು ವಿಶಿಷ್ಟವಾಗಿ ಮೂಡಿಸಿ ಹೋಗಿದ್ದಾರೆ. ಇಂಥ ಸೋಲು–ಗೆಲುವಿನ ಗುರುತುಗಳನ್ನು ಈಗ ಯುದ್ಧೋನ್ಮಾದದ ಕಾಲದಲ್ಲಿ ನೋಡುವ ಬಗೆ ಹೇಗೆ ಎಂಬುದು ಸದ್ಯದ ಪ್ರಶ್ನೆ.

ಸಮಾಜವಾದಿ ಯುವಜನ ಸಭಾದಲ್ಲಿ ಸಕ್ರಿಯರಾಗಿದ್ದ, ಲೇಖಕ ದೇವನೂರ ಮಹಾದೇವ ಅವರು ‘ಪಂಚಮ’ ಪತ್ರಿಕೆಯ ‘ದ+ರೈ’ (ದಲಿತ ಮತ್ತು ರೈತ) ವಿಶೇಷಾಂಕಕ್ಕಾಗಿ ಪ್ರೊ.ನಂಜುಂಡಸ್ವಾಮಿ ಅವರ ಸಂದರ್ಶನ ಮಾಡಿದ ಸಂದರ್ಭದಲ್ಲಿ ‘ನನ್ನ ಕಣ್ಣೆದುರೇ ಕಳೆದು ಹೋದ ಸಮಾಜವಾದಿ ಪಕ್ಷ’ ಎಂಬ ಶೀರ್ಷಿಕೆಯಲ್ಲಿ ಬರೆದ ಪೀಠಿಕೆಯನ್ನು ಇಲ್ಲಿ ಸ್ಮರಿಸಬೇಕು.

ಸಮಾಜವಾದಿ ಹೋರಾಟವು ತನ್ನೊಳಗಿನ ವೈರುಧ್ಯಗಳಿಂದಲೇ ಸೋತ ಬಗೆಯನ್ನು ಹೇಳುತ್ತಾ ಪೀಠಿಕೆಯು ದಟ್ಟ ವಿಷಾದವನ್ನು ಓದುಗರೆದೆಯಲ್ಲಿ ಹಬ್ಬಿಸುತ್ತದೆ. ಆತ್ಮವಿಮರ್ಶೆಯ ಮಾದರಿಯ ಪೀಠಿಕೆಯು, ರಾಜ್ಯದ ಸಮಾಜವಾದಿ ನೇತಾರರ ಬದುಕಿನ ವೈರುಧ್ಯಗಳನ್ನು ತಣ್ಣಗೆ ವಿವರಿಸುತ್ತಾ ವಿರೋಧವನ್ನೂ ಸೂಚಿಸುತ್ತದೆ. ‘ದಲಿತ ಸಂಘ–ರೈತ ಸಂಘ ಒಟ್ಟಾಗಿ ಸಮಾಜವಾದಿ ನೆಲೆಯಲ್ಲಿ ನಾಡ ಕಟ್ಟಬಲ್ಲವೇ‘ ಎಂಬ ಪ್ರಶ್ನೆಯನ್ನೂ ಮುಂದಿಡುತ್ತದೆ. ಮಹಾದೇವರ ಈ ಬರಹ, ಸಂದರ್ಶನವು ಪ್ರಕಟವಾದಾಗ ಇದ್ದವರು ಈಗ ಬದುಕಿಲ್ಲ. ಬದುಕಿರುವವರಲ್ಲಿ ಸಮಾಜವಾದದ ಸಂವೇದನೆಯು ಹೇಗೆ, ಯಾವ ರೀತಿ ಉಳಿದಿದೆ, ಅದು ಹೊಸ ತಲೆಮಾರಿನ ರಕ್ತದಲ್ಲಿ ಹೇಗೆ ಹರಿದಿದೆ ಎಂಬುದಂತೂ ಕುತೂಹಲಕಾರಿ.

‘ಕಾಕ್ರೋಚ್ ಜನತಾ ಪಾರ್ಟಿ’ ಅಭಿಯಾನ

ಇಂಥ ಕುತೂಹಲವಿಟ್ಟುಕೊಂಡಿರುವಾಗಲೇ, ‘ಕಾಕ್ರೋಚ್ ಜನತಾ ಪಾರ್ಟಿ’ (ಜಿರಳೆ ಜನತಾ ಪಕ್ಷ) ಎಂಬ ಆನ್ಲೈನ್ ಆಂದೋಲನವು ದೇಶಾದ್ಯಂತ ಸಂಚಲನ ಮೂಡಿಸಿದೆ. ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ‘ಕೆಲಸ ಇಲ್ಲದ ಯುವಕರು ಜಿರಲೆಗಳಿದ್ದಂತೆ’ ಎಂದು ನೀಡಿದ ಹೇಳಿಕೆಯು ಆಂದೋಲನದ ಹುಟ್ಟಿಗೆ ದಾರಿ ಮಾಡಿದೆ.

ದಶಕಗಳ ಕಾಲ ಸಮತೆ–ಸಮಾನತೆಗಾಗಿ ಉಸಿರಾಡಿದ ಸಮಾಜವಾದದ ಅಲೆಗಳು ಕ್ಷೀಣಿಸುತ್ತಿರುವ ಹೊತ್ತಿನಲ್ಲಿ, ಇದು ಸಮಾಜವಾದದ ಮತ್ತೊಂದು ಪ್ರತಿಧ್ವನಿಯಾಗಿ ಕಾಣುತ್ತಿದೆ. ‘ಯುವಕರಿಂದ, ಯುವಕರಿಗಾಗಿ, ಯುವಕರೇ ಆರಂಭಿಸಿದ ಜಾತ್ಯತೀತ, ಸಮಾಜವಾದಿ, ಪ್ರಜಾತಾಂತ್ರಿಕ ರಾಜಕೀಯ ವೇದಿಕೆ’ ಎಂದು ಸ್ವಯಂ ಘೋಷಣೆ ಮಾಡಿಕೊಂಡಿದೆ. ಒಂದು ರೀತಿಯಲ್ಲಿ, ಸಮಾಜವಾದಿ ಯುವಜನ ಸಭಾದ ಆರಂಭದ ದಿನಗಳ ಘೋಷಣೆಯನ್ನೇ ಅನುಸರಿಸಿದಂತಾಗಿದೆ.

ಸಮಾಜವಾದವೇ ಮುಖ್ಯವೆಂದು ಭಾವಿಸಿದ್ದ ಯುವಜನ ಸಭಾ, ತನ್ನ ಆರಂಭಿಕ ದಿನಗಳಲ್ಲಿ, ಗಾರ್ಡನ್ ಪ್ರತಿಮೆಯು ಭಾರತೀಯರ ದಾಸ್ಯದ ಪ್ರತೀಕವೆಂದು ಅದನ್ನು ಕಿತ್ತೆಸೆಯಲು ಪ್ರಯತ್ನಿಸಿತ್ತೋ, ಅಂಥದ್ದೇ ಪ್ರಯತ್ನದಲ್ಲಿರುವಂತೆ ಕಾಕ್ರೋಚ್ ಪಾರ್ಟಿ ಕಾಣಿಸುತ್ತಿದೆ. ‘ನೀಟ್’ ಅಕ್ರಮದ ಹಿನ್ನೆಲೆಯಲ್ಲಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ತಲೆದಂಡಕ್ಕೆ ಆಗ್ರಹಿಸುತ್ತಿರುವುದು, ಜೆನ್ ಝೀ ಸ್ವಾಭಿಮಾನದ ಸಂಕೇತವಾಗಿ ಕಾಣುತ್ತಿದೆ. ಸಚಿವರು ರಾಜೀನಾಮೆ ನೀಡುತ್ತಾರೋ ಇಲ್ಲವೋ ಎಂಬುದು ಕಾಲಕ್ಕೆ ಬಿಟ್ಟ ವಿಷಯ. ಆದರೆ ಪಾರ್ಟಿಯ ಪ್ರಯತ್ನವು ಸಮಾಜವಾದಿ ಯುವ ಸಭಾದ ಆರಂಭಿಕ ಇತಿಹಾಸವನ್ನಂತೂ ನೆನಪಿಸುತ್ತಿದೆ.
.ಮೈಸೂರು ಮಲ್ಲಿಗೆ: ಶ್ಯಾನುಭೋಗನಿಂದ ಜಮೀನು ಪಡೆಯಲು ಜೀತಗಾರನ ಬಂಡಾಯ!.ಮೈಸೂರು ಮಲ್ಲಿಗೆ: ತಾಯಿಯ ಸಾವು ಮತ್ತು ಕುವೆಂಪು ಅದ್ವೈತ ಬುದ್ಧಿಯ ಅನಸ್ತೇಶಿಯಾ! .ಮೈಸೂರು ಮಲ್ಲಿಗೆ ಅಂಕಣ: ಕಸಾಪ ಮೊದಲ ಅಧ್ಯಕ್ಷರ ಇಂಗ್ಲಿಷ್ ಭಾಷಣದ ನೆನಪಲ್ಲಿ!.ಮೈಸೂರು ಮಲ್ಲಿಗೆ ಅಂಕಣ: ಡಾ.ರಾಜಕುಮಾರ್ ಕಂಡುಕೊಂಡ ‘ಸಾಕ್ಷಾತ್ಕಾರ’ದ ಅರ್ಥ!.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.