ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ಕ್ಯಾನ್ವಾಸ್ಗಳು ಸಾಲಾಗಿದ್ದವು. ಕುಂಚದ ತುದಿಯಲ್ಲಿ ಬಣ್ಣಗಳು ನೃತ್ಯ ಮಾಡುತ್ತಿದ್ದವು. ಆ ಬಣ್ಣಗಳ ನಡುವೆ ನಿಧಾನವಾಗಿ ಎದ್ದೇಳುತ್ತಿತ್ತು ಎಡೆದೊರೆಯ ಇತಿಹಾಸ. ಇದು ಕೇವಲ ಚಿತ್ರಕಲಾ ಶಿಬಿರವಲ್ಲ; ಜಿಲ್ಲೆಯ ಆತ್ಮವನ್ನು ಹಿಡಿದು ನಿಲ್ಲಿಸುವ ಕಲಾವಿದರ ಸಮೂಹ ಸಾಧನೆ.

ಅನ್ನ, ಚಿನ್ನ, ಬೆಳಕಿನ ನೆಲವೆಂದೇ ಕರೆಯಲ್ಪಡುವ ರಾಯಚೂರು ಜಿಲ್ಲೆಯು ಕೃಷ್ಣೆ ಮತ್ತು ತುಂಗೆ ನದಿಗಳ ಮಧ್ಯದ ಫಲವತ್ತಾದ ಭೂಮಿಯ ಕಥೆಯನ್ನು ಇತಿಹಾಸ ಹಲವು ಯುದ್ಧಗಳ ಮೂಲಕ ಬರೆದಿದೆ. ಆದರೆ ಈ ಬಾರಿ ಆ ಕಥೆಯನ್ನು ಬರೆಯಲು ಕತ್ತಿಗಳು ಇರಲಿಲ್ಲ; ಕುಂಚಗಳಿದ್ದವು.

ಮೂರು ದಿನ ಇಪ್ಪತ್ತಕ್ಕೂ ಹೆಚ್ಚು ಕಲಾವಿದರು ಶಿಬಿರದಲ್ಲಿ ಬೀಡುಬಿಟ್ಟಿದ್ದರು. ಯುವಕರಿಂದ ಹಿಡಿದು ಹಿರಿಯರ ತನಕ ಪ್ರತಿಯೊಬ್ಬರ ಕಣ್ಣಲ್ಲೂ ಒಂದೇ ಉತ್ಸಾಹ: ‘ನಮ್ಮ ಜಿಲ್ಲೆಯನ್ನು ನಮ್ಮ ಬಣ್ಣದಲ್ಲಿ ಹೇಳಬೇಕು.’

ಕ್ಯಾನ್ವಾಸ್ ಮೇಲೆ ಮೊದಲು ನೆಲೆ ನಿಂತದ್ದು ರಾಯಚೂರು ಕೋಟೆ. ಕಲ್ಲಿನ ಗಟ್ಟಿತನ, ಬೆಟ್ಟದ ಉಬ್ಬರವಿಳಿವು, ಕೋಟೆಗೋಡೆಗಳ ಬಿರುಕುಗಳವರೆಗೂ ಗಮನಿಸಿ ಚಿತ್ರಿಸಿದ ರೀತಿ–ಅದು ಕೇವಲ ಚಿತ್ರವಲ್ಲ, ಅಧ್ಯಯನ. ಬಸ್ ನಿಲ್ದಾಣದ ಬಳಿಯ ಗುಬ್ಬೇರ ಬೆಟ್ಟದ ನೈಜರೂಪ ಕಲಾವಿದರ ಸೂಕ್ಷ್ಮ ಕಣ್ಣನ್ನು ಸಾಬೀತುಪಡಿಸಿತು.

ಮುಂದೆ ಮೂಡಿಬಂದದ್ದು ಮುದಗಲ್ ಕೋಟೆ. ಗತಕಾಲದ ಘನತೆಯನ್ನು ಸ್ಮರಿಸುವ ಆ ಕೋಟೆಯ ಚಿತ್ರ, ಮೌನವಾಗಿ ಇತಿಹಾಸವನ್ನು ನಿವೇದಿಸುವಂತಿತ್ತು.

ವಿಶಾಲ ಬಯಲಿನಲ್ಲಿ ಶಿಲ್ಪಸೌಂದರ್ಯವಾಗಿ ನಿಂತಿರುವ ಮಲಿಯಾಬಾದ್ ಕೋಟೆಯ ಅಲಂಕೃತ ಕಲ್ಲಾನೆಗಳು ಕ್ಯಾನ್ವಾಸ್ ಮೇಲೆ ಜೀವಂತ ತಳೆದವು. ಬಣ್ಣದ ಹೊಳಪಿನಲ್ಲಿ ಆನೆಗಳು ನಮ್ಮತ್ತವೇ ನಡೆಯುತ್ತಿವೆ ಎನ್ನಿಸುವ ಭಾವ ಮೂಡಿತು. ಕಲಾವಿದರ ಕುಂಚ ಇಲ್ಲಿ ಕಲ್ಲಿಗೆ ಜೀವ ತುಂಬಿತ್ತು.

ದರವಾಜುಗಳ ಮೂಲಕ ಕಾಲಯಾನ

ರಾಯಚೂರು ನಗರ ಪ್ರವೇಶದ ದಾರಿಯಲ್ಲಿ ಸ್ವಾಗತಿಸುವ ಮಕ್ಕಾ ದರವಾಜ, ದೊಡ್ಡಿ ದರವಾಜ, ಕಾಂಟಿ ದರವಾಜ ಇವುಗಳ ಚಿತ್ರಗಳು ಶಿಬಿರದ ಪ್ರಮುಖ ಆಕರ್ಷಣೆ. ವಿಶೇಷವಾಗಿ ತೀನ್ ಕಂದಿಲ್ ಸಮೀಪದ ಮುಳ್ಳಿನ ದರವಾಜು ಕ್ಯಾನ್ವಾಸ್ ಮೇಲೆ ಅರಳಿದಾಗ, ಪ್ರತಿದಿನ ಅದರ ಮುಂದೆ ಹಾದುಹೋಗುವ ಜನರೂ ಹೊಸದಾಗಿ ನೋಡುವಂತಾಯಿತು.

ನವರಂಗ ದರವಾಜಿನ ಚಿತ್ರ ಇಂದು ಪ್ರಾಚ್ಯವಸ್ತು ಇಲಾಖೆಯ ಕಚೇರಿಯಾಗಿರುವ ಆ ಕಟ್ಟಡ ಗತಕಾಲ ಮತ್ತು ವರ್ತಮಾನದ ಸೇತುವೆಯಂತೆ ಕಾಣಿಸಿತು. ಕಲಾವಿದರು ಇಲ್ಲಿ ಕೇವಲ ಕಟ್ಟಡವನ್ನೇ ಬಿಡಿಸಲಿಲ್ಲ; ಅದರ ಪಾತ್ರವನ್ನೂ ಸೂಚಿಸಿದರು.

ಈ ಶಿಬಿರದ ವೈಶಿಷ್ಟ್ಯ ಎಂದರೆ, ಅದು ಕೇವಲ ಇತಿಹಾಸದ ಸ್ಮಾರಕಗಳಿಗೆ ಸೀಮಿತವಾಗಿರಲಿಲ್ಲ. ರಾಯಚೂರು ಉಷ್ಣ ವಿದ್ಯುತ್ ಸ್ಥಾವರ (ಆರ್ಟಿಪಿಎಸ್)ದ ಹೊಗೆ ಉಗುಳುವ ಚಿಮಣಿಗಳು ಕ್ಯಾನ್ವಾಸ್ ಮೇಲೆ ಮೂಡಿದವು. ಹೊಗೆ ಹಸಿರು ನೆಲವನ್ನು ಮುಸುಕುವ ಚಿತ್ರಗಳು ಪರಿಸರದ ಪ್ರಶ್ನೆಯನ್ನೂ ಮೌನವಾಗಿ ಎತ್ತಿದವು.

ಗಬ್ಬೂರಿನ ಪ್ರಾಚೀನ ದೇವಾಲಯ, ಅಶೋಕ ಶಿಲಾಶಾಸನ ಇವೆಲ್ಲವೂ ಕಲಾವಿದರ ಕಣ್ಣಲ್ಲಿ ಹೊಸ ಅರ್ಥ ಪಡೆದುಕೊಂಡವು. ಅವರು ಚಿತ್ರಿಸಿದ್ದು ಕೇವಲ ದೃಶ್ಯವಲ್ಲ; ಸಂಸ್ಕೃತಿಯ ಸ್ಮೃತಿ, ನೆಲದ ಹೆಮ್ಮೆ.

ಪಿಎಬಿ ಈಶ್ವರ್, ರಾಮಣ್ಣ ಮ್ಯಾದಾರ್, ಸಮೀರಣ ಜೋಶಿ, ಪ್ರಭಾಕರ ಮಂಕಾಲ, ಶಿವಾನಂದ ಸಾತಿಹಾಳ, ಶಾಂತಪ್ಪ, ಅಮರೇಗೌಡ, ಎ.ಎಸ್.ಕುಮಾರ್, ಶ್ರೀನಿವಾಸ ಬಂಡಿ, ಎನ್.ಹೇಮರೆಡ್ಡಿ, ರವಿ ನಾಯಕ್, ಮಲ್ಲಿಕಾರ್ಜುನ ಆಲೂರ್, ಪ್ರಕಾಶ ಆನೆಗುಂದಿ, ಮಲ್ಲಯ್ಯ ಕೆಂಭಾವಿ, ರುದ್ರಪ್ಪ ತಳವಾರ, ಸಿದ್ದಪ್ಪ ನಾಯಕ್, ಪಿ. ಅಮರೇಶ್, ಸಿ.ಎಚ್.ಗೋಪಿ, ಪ್ರಿಯಾ, ಉಮೇಶ್ ಪತ್ತಾರ್, ಉಸ್ಮಾನ ಅಲಿ, ತಿಮ್ಮಪ್ಪ, ವೀರೇಶ, ಶಿವುಕುಮಾರ, ಪವನಕುಮಾರ–ಹೀಗೆ ಅನೇಕರು ತಮ್ಮ ತಮ್ಮ ಶೈಲಿಯಲ್ಲಿ ಜಿಲ್ಲೆಯ ಕಥೆ ಹೇಳಿದರು.

ವಾಟರ್ ಕಲರ್ನ ನಾಜೂಕು, ಆಯಿಲ್ ಕಲರ್ನ ಗಾಢತೆ, ಪೋಸ್ಟರ್ ಕಲರ್ನ ಪ್ರಖರತೆ, ಮಿಕ್ಸ್ ಮೀಡಿಯಾದ ಪ್ರಯೋಗಶೀಲ ಮಾಧ್ಯಮವೂ ವಿಭಿನ್ನ ಸ್ತರ ನೀಡಿತು. ಆದರೆ ಎಲ್ಲ ಚಿತ್ರಗಳಲ್ಲೂ ಒಂದೇ ಹೃದಯ ದನಿ ಕೇಳಿಸಿತು: ‘ಇದು ನಮ್ಮ ಎಡೆದೊರೆ.’

ಆಡಳಿತದ ಬೆಂಬಲ, ಕಲಾವಿದರ ದೃಢನಿಶ್ಚಯ

ಜಿಲ್ಲಾಡಳಿತದ ನೇತೃತ್ವದಲ್ಲಿ ಆಯೋಜಿತವಾದ ರಾಯಚೂರು ಜಿಲ್ಲಾ ಉತ್ಸವದಲ್ಲಿ ನಡೆದ ಈ ಶಿಬಿರಕ್ಕೆ ಹಿರಿಯ ಕಲಾವಿದರಾದ ಎಚ್.ಎಚ್. ಮ್ಯಾದಾರ್ ಮತ್ತು ಪಿ. ಚಂದ್ರಶೇಖರ ಅವರ ಸಲಹೆ ದಿಕ್ಕು ತೋರಿಸಿತು. ಆದರೆ ಯಶಸ್ಸಿನ ಮೂಲ ಕಲಾವಿದರ ಪರಿಶ್ರಮ. ಬಿಸಿಲಿನ ನಡುವೆಯೂ ಅವರು ಕ್ಯಾನ್ವಾಸ್ ಮುಂದೆ ಗಂಟೆಗಟ್ಟಲೆ ನಿಂತರು. ಪ್ರತಿಯೊಂದು ರೇಖೆ, ಪ್ರತಿಯೊಂದು ನೆರಳು ಅವರ ಏಕಾಗ್ರತೆಯ ಸಾಕ್ಷಿ.

ಈ ಶಿಬಿರವು ಸಾಬೀತುಪಡಿಸಿದ್ದು ಏನೆಂದರೆ; ಜಿಲ್ಲೆಯ ಇತಿಹಾಸ ಕೇವಲ ಪುಸ್ತಕಗಳಲ್ಲಿ ಮಾತ್ರ ಇರಬೇಕಿಲ್ಲ. ಅದು ಬಣ್ಣಗಳಲ್ಲಿ, ಗೋಡೆಗಳಲ್ಲಿ, ಜನರ ನೆನಪುಗಳಲ್ಲಿ ಬದುಕಬಹುದು.

ಕಲಾವಿದರು ಎಡೆದೊರೆಯ ವೈಭವವನ್ನು ಕೇವಲ ಚಿತ್ರಿಸಲಿಲ್ಲ; ಅದನ್ನು ಜೀವಂತಗೊಳಿಸಿದರು. ಅವರ ಕುಂಚದಲ್ಲಿ ಕಲ್ಲು ಮಾತಾಡಿತು, ದರವಾಜುಗಳು ತೆರೆದವು, ಆನೆಗಳು ನಡೆದುಬಂದವು, ಚಿಮಣಿಗಳು ಹೊಗೆ ಉಗುಳಿದವು.

ರಾಯಚೂರು ಜಿಲ್ಲೆಯ ಸುತ್ತಾಟ ಮಾಡಲು ವಾಹನ ಬೇಕಾಗಬಹುದು. ಆದರೆ ಈ ಚಿತ್ರಗಳನ್ನು ನೋಡಿದರೆ ಸಾಕು, ಒಂದು ಸಂಪೂರ್ಣ ಕಾಲಯಾನ ಸಾಧ್ಯ.

ಕಲಾವಿದರ ಕೈಚಳಕದಲ್ಲಿ ಮೂಡಿದ ಈ ಬಣ್ಣಗಳು ಕೇವಲ ಅಲಂಕಾರವಲ್ಲ; ಅವು ಜಿಲ್ಲೆಯ ಆತ್ಮದ ಪ್ರತಿಬಿಂಬ. ಎಡೆದೊರೆ ಮತ್ತೆ ಜೀವಂತವಾಗಿದೆ; ಕುಂಚದ ತುದಿಯಲ್ಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.