ಇನ್ನೂ ಚುಮು ಚುಮು ಬೆಳಗು. ಕಾಡಿನ ಮರಗಳಲ್ಲಿ ಹಕ್ಕಿಗಳ ಚಿಲಿಪಿಲಿ ಆರಂಭವಾಗಿತ್ತು. ಶರಾವತಿ ನದಿಯ ದಡದಲ್ಲಿ ದಿನದ ಮೊದಲ ಚಟುವಟಿಕೆ ಶುರುವಾಗುತ್ತಿತ್ತು. ಆದರೆ ಅದು ಶಾಂತ ಆರಂಭವಲ್ಲ, ಬದುಕಿನ ಗಡಿಬಿಡಿಯ ಆರಂಭ.

ಅಂಬಾರಗೋಡ್ಲು–ಕಳಸವಳ್ಳಿ ಕಡವು ಮಾರ್ಗದ ಲಾಂಚ್ ದಡದಲ್ಲಿ ಜನ ಸೇರುತ್ತಿದ್ದರು. ಶಂಕರಯ್ಯ ಅಡಿಕೆ ಚೀಲಗಳನ್ನು ಎತ್ತಿನಬಂಡಿಯಲ್ಲಿ ತುಂಬಿಕೊಂಡು ಸಾಗರದತ್ತ ಹೊರಟಿದ್ದರು. ಅವರ ಮನಸ್ಸಿನಲ್ಲಿ ಒಂದೇ ಯೋಚನೆ–ಲಾಂಚ್ನಲ್ಲಿ ರಷ್ ಕಡಿಮೆಯಿರಲಿ. ಈ ದ್ವೀಪದ ಕಲ್ಲುಮಣ್ಣು ರಸ್ತೆಯನ್ನು ದಾಟಿ, ಹೊಳೆಬಾಗಿಲಿಗೆ ತಲುಪುವಷ್ಟರಲ್ಲಿ ಇನ್ನೂ ಒಂದು ಗಂಟೆ ಬೇಕು. ಅಲ್ಲಿಂದ ಲಾಂಚ್ ಹಿಡಿದು ಆಚೆ ದಡ ಸೇರಿದರೆ ಮುಂದಿನ ಪ್ರಯಾಣ ಆರಂಭವಾಗುತ್ತದೆ. ‘ಇದಕ್ಕೆಲ್ಲ ಮುಕ್ತಿ ಯಾವಾಗ?’ ಎಂಬ ಪ್ರಶ್ನೆ ಅವರೊಳಗೆ ಮೌನವಾಗಿ ಹರಿಯುತ್ತಿತ್ತು.

ಅದೇ ದಡದಲ್ಲಿ ಗಣಪತಿ ತನ್ನ ಅನಾರೋಗ್ಯಪೀಡಿತ ತಾಯಿಯನ್ನು ಸಾಗರದ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು. ಹೋಗುವಾಗ ಸೀಟು ಸಿಕ್ಕೀತು, ಬರುವಾಗ ತಾಯಿಗೆ ಕುಳಿತುಕೊಳ್ಳಲು ಜಾಗ ಸಿಕ್ಕರೆ ಸಾಕು ಎಂಬುದು ಅವರ ಚಿಂತೆ. ಜಯರಾಮ ಕಬ್ಬಿಣದ ಬೀರು ಸಾಗಿಸುವ ಗೊಂದಲದಲ್ಲಿದ್ದರು. ಸುಬ್ಬಣ್ಣ ಸಾಗರದ ಸಂತೆ ಕೆಲಸ ಮುಗಿಸಿ ಅಂಗಡಿಗೆ ಬೇಕಾದ ಸಾಮಾನುಗಳ ಪಟ್ಟಿಯನ್ನು ಜೇಬಿನಲ್ಲಿ ಇಟ್ಟುಕೊಂಡಿದ್ದರು. ಕೃಷ್ಣಮೂರ್ತಿ ಪರೀಕ್ಷೆಗೆ ಹೋಗುವ ಆತುರದಲ್ಲಿದ್ದರು. ಶಿಕ್ಷಕರು, ವೈದ್ಯರು, ನರ್ಸ್ಗಳು, ಗ್ರಾಮಲೆಕ್ಕಿಗರು, ಮೀನು ವ್ಯಾಪಾರಿಗಳು–ಎಲ್ಲರೂ ಒಂದೇ ಕ್ಯೂನಲ್ಲಿ ನಿಂತಿದ್ದರು. ಎಲ್ಲರಿಗೂ ಈ ನದಿ ದಾಟುವುದು ದಿನನಿತ್ಯದ ಅವಶ್ಯಕತೆ, ಆದರೆ ಒಂದೇ ಲಾಂಚ್ನಲ್ಲಿ ಅದು ಒಂದು ಹೋರಾಟ.

ಶರಾವತಿ ನದಿಯ ಆ ದಡದಲ್ಲಿ ನೀರು ಗಂಗೆಯಂತಿದ್ದರೂ, ಅದರ ಮೇಲೆ ಹರಿಯುವ ಬದುಕು ಸದಾ ಗೊಂದಲಮಯ. ಒಂದು ಲಾಂಚ್–ಅನೇಕ ಬದುಕುಗಳು.

ದಶಕಗಳ ಕಾಲ ಇದೇ ಬದುಕು ಮುಂದುವರಿಯಿತು. 2010ರ ನಂತರ ಸಿಗಂದೂರು ದೇವಾಲಯದ ಹೆಸರು, ಪ್ರವಾಸೋದ್ಯಮದ ಬೆಳವಣಿಗೆ ಮತ್ತು ಮಾಧ್ಯಮದ ಪ್ರಚಾರ ಈ ಪ್ರದೇಶದ ಚಿತ್ರಣವನ್ನೇ ಬದಲಿಸಿತು. ಪ್ರವಾಸಿಗರ ಪ್ರವಾಹ ದಿಢೀರನೆ ಹೆಚ್ಚಾಯಿತು. ಒಂದೇ ಇದ್ದ ಅಂಗಡಿ ಹಲವಾರು ಗೂಡಂಗಡಿಗಳಾಗಿ ಬೆಳೆದವು. ಚಹಾ ಹೋಟೆಲ್ಗಳು, ಪಾನ್ ಶಾಪ್ಗಳು, ಜೀಪ್ ಸೇವೆಗಳು ಶರುವಾದವು. ದಡದ ಎರಡೂ ಬದಿಯಲ್ಲಿ ಜನಸಂದಣಿ ಹೆಚ್ಚಾಗಿ ಲಾಂಚ್ ಹತ್ತುವುದು ಸವಾಲಾಯಿತು.

ಈ ಬೆಳವಣಿಗೆಯ ಜೊತೆ ಸಮಸ್ಯೆಗಳೂ ಹೆಚ್ಚಿದವು. ಪ್ರವಾಸಿಗರು ಮತ್ತು ಸ್ಥಳೀಯರ ನಡುವೆ ವಾಗ್ವಾದಗಳು, ತಳ್ಳಾಟ, ವಿಳಂಬ, ಗೊಂದಲಗಳು ಸಾಮಾನ್ಯವಾದವು. ಕೆಲ ದಿನಗಳಲ್ಲಿ ಶರಾವತಿ ದಡವು ‘ರಣಾಂಗಣ’ದಂತೆ ಕಾಣತೊಡಗಿತು. ಸ್ಥಳೀಯರಿಗೆ ಇದು ಕೇವಲ ಪ್ರವಾಸಿ ತಾಣವಲ್ಲ, ಅವರ ಬದುಕಿನ ಅವಶ್ಯಕತೆ. ಆದರೆ ಪ್ರವಾಸಿಗರಿಗೆ ಇದು ಒಂದು ದಿನದ ಮೋಜಿನ ಸ್ಥಳ. ಈ ಎರಡು ಜಗತ್ತುಗಳು ಒಂದೇ ದಡದಲ್ಲಿ ಮುಖಾಮುಖಿಯಾದವು.

ಆದರೆ ಸಮಸ್ಯೆಗಳ ನಡುವೆ ಒಂದು ಸ್ಪಷ್ಟ ಬೇಡಿಕೆ ಹುಟ್ಟಿತು, ಅದು ಸೇತುವೆ ಬೇಕು. ವರ್ಷಗಳ ಹೋರಾಟ, ಒತ್ತಡ, ಮನವಿಗಳ ನಂತರ ಕೇಬಲ್ ಸೇತುವೆಯ ನಿರ್ಮಾಣ ಆರಂಭವಾಯಿತು. ಕಾಲ ಕಳೆದಂತೆ ಸೇತುವೆ ರೂಪುಗೊಂಡಿತು. ಅದು ಕೇವಲ ಮೂಲಸೌಕರ್ಯವಲ್ಲ, ಒಂದು ಯುಗದ ಬದಲಾವಣೆ.

ಸೇತುವೆ ಕಾರ್ಯಾರಂಭವಾದ ದಿನ, ದ್ವೀಪದ ಜನರ ಕಣ್ಣಲ್ಲಿ ಕೇವಲ ಸಂತೋಷವಿರಲಿಲ್ಲ; ಅದು ಕಷ್ಟಗಳ ಗೆಲುವಿನ ಕಣ್ಣೀರು. ಐವತ್ತು ವರ್ಷಗಳ ಲಾಂಚ್ ಬದುಕು ಒಂದು ಕ್ಷಣದಲ್ಲಿ ಹೊಸ ದಿಕ್ಕಿಗೆ ತಿರುಗಿತು. ಜನರು ಈಗ ಸುಲಭವಾಗಿ ನಡೆದು, ವಾಹನಗಳಲ್ಲಿ ನದಿ ದಾಟತೊಡಗಿದರು. ಆಸ್ಪತ್ರೆಗೆ ಹೋಗುವುದು, ಸಂತೆ, ಕೆಲಸ ಈಗ ಎಲ್ಲವೂ ವೇಗವಾಗಿದೆ, ಸುರಕ್ಷಿತವಾಗಿದೆ, ನಿರೀಕ್ಷಿತವಾಗಿದೆ.

ಆದರೆ ಲಾಂಚ್ಗಳ ಬದುಕು ನಿಧಾನವಾಗಿ ನಿಂತಿತು. ಒಮ್ಮೆ ಗಡಿಬಿಡಿಯಿಂದ ತುಂಬಿದ್ದ ದಡಗಳು ಈಗ ಮೌನವಾಗಿವೆ. ಮೂರು ಲಾಂಚ್ಗಳು ದಡದಲ್ಲಿ ನಿಂತಿವೆ. ಅವುಗಳ ಮೇಲೆ ತುಕ್ಕು ಹಿಡಿಯತೊಡಗಿದೆ. ಸಿಬ್ಬಂದಿಗಳು ಅತಂತ್ರರಾಗಿದ್ದಾರೆ. ದಡದ ಅಂಗಡಿಗಳು, ಜೀಪ್ ಸೇವೆಗಳು, ಚಹಾ ಹೋಟೆಲ್ಗಳು ಇವೆಲ್ಲವೂ ತಮ್ಮ ಸಹಜ ಲಯವನ್ನು ಕಳೆದುಕೊಂಡಿವೆ. ‘ಇಷ್ಟು ದಿನ ನಮ್ಮನ್ನು ದಡ ಸೇರಿಸಿದವು’ ಎಂಬ ಕೃತಜ್ಞತೆ ಒಂದು ಕಡೆ, ‘ಇದೀಗ ಅವು ಕೆಲಸವಿಲ್ಲದೆ ನಿಂತಿವೆ’ ಎಂಬ ನೋವು ಇನ್ನೊಂದು ಕಡೆ.

ಸೇತುವೆ ಬಂದ ಸಂತೋಷ ಮತ್ತು ಲಾಂಚ್ಗಳ ಮೌನ ಒಂದೇ ದಡದಲ್ಲಿ ಸೇರಿದೆ. ಅಭಿವೃದ್ಧಿಯ ಬೆಳಕು ಕಂಡರೂ, ಅದರ ನೆರಳಿನಲ್ಲಿ ಕೆಲವು ಬದುಕುಗಳು ಮೌನವಾಗಿ ಮಾಯವಾಗಿವೆ.

ಇದೇ ಸಮಯದಲ್ಲಿ ಮುಪ್ಪಾನೆ–ಹಲ್ಕೆ ಭಾಗದಲ್ಲಿ ಇನ್ನೊಂದು ಲಾಂಚ್ ಇನ್ನೂ ಬದುಕನ್ನು ಹೊತ್ತೊಯ್ಯುತ್ತಿದೆ. ಜೋಗ ಜಲಪಾತದಿಂದ ಸುಮಾರು 25 ಕಿ.ಮೀ ದೂರದ ಈ ಪ್ರದೇಶದಲ್ಲಿ ಶರಾವತಿ ನದಿ ಇನ್ನೂ ಸಂಪರ್ಕದ ನಾಡಿಯಾಗಿದೆ. ಕುದರೂರು, ತುಮರಿ, ಸಂಕಣ್ಣ ಶಾನುಭೋಗ ಹಳ್ಳಿಗಳ ಜನರಿಗೆ ಇದೇ ಲಾಂಚ್ ಆಧಾರ.

2017ರಲ್ಲಿ ಆರಂಭವಾದ ಈ ಲಾಂಚ್, ಅದಕ್ಕೂ ಮೊದಲು ಇದ್ದ ದೋಣಿ ಬದುಕಿನ ಮುಂದುವರಿಕೆ. ಆಗ ಜನ, ಬೈಕ್, ರೋಗಿಗಳು–ಎಲ್ಲರನ್ನೂ ಸಣ್ಣ ದೋಣಿಗಳಲ್ಲಿ ದಾಟಿಸಲಾಗುತ್ತಿತ್ತು, ಅನಿಶ್ಚಿತತೆಯ ನಡುವೆ. ಈಗ ಸಣ್ಣ ಲಾಂಚ್ನಲ್ಲಿ ಕೆಲ ಕಾರುಗಳು, ಬೈಕ್ಗಳು ಮತ್ತು ಜನರನ್ನು ದಾಟಿಸಲಾಗುತ್ತದೆ. ದಿನದಲ್ಲಿ ಹಲವಾರು ಬಾರಿ ಸಂಚಾರ ನಡೆಯುತ್ತದೆ.

ಆದರೆ ಇಲ್ಲಿಯೂ ಬದುಕು ಸುಲಭವಲ್ಲ. ಮಳೆಗಾಲದಲ್ಲಿ ನೀರಿನ ಏರಿಕೆ, ಬೇಸಿಗೆಯಲ್ಲಿ ನೀರಿನ ಕೊರತೆ, ಮರದ ದಿಮ್ಮಿಗಳು, ಮರಳು ದಿಬ್ಬಗಳಿಂದ ಉಂಟಾಗುವ ತಾಂತ್ರಿಕ ಸಮಸ್ಯೆ–ಇವೆಲ್ಲವೂ ಸೇವೆಯ ಮೇಲೆ ಪರಿಣಾಮ ಬೀರುತ್ತವೆ. ತಕ್ಷಣದ ನಿರ್ವಹಣೆಗೆ ವ್ಯವಸ್ಥೆಯ ಕೊರತೆಯೂ ಇದೆ. ಆದರೂ ಈ ಲಾಂಚ್ ಇನ್ನೂ ಜೀವಂತವಾಗಿದೆ. ಅದು ನಿಂತ ವ್ಯವಸ್ಥೆಯಲ್ಲ, ಇನ್ನೂ ಹರಿಯುತ್ತಿರುವ ಅಗತ್ಯ.

ಶರಾವತಿ ನದಿ ತನ್ನ ದಾರಿಯನ್ನು ಬದಲಿಸಿಲ್ಲ. ಆದರೆ ಅದನ್ನು ದಾಟುವ ಬದುಕು ಬದಲಾಗಿದೆ. ಲಾಂಚ್ಗಳು ಒಂದು ಯುಗದ ನೆನಪುಗಳು. ಸೇತುವೆ ಹೊಸ ಯುಗದ ಗುರುತು. ಮತ್ತು ಮುಪ್ಪಾನೆಯ ಲಾಂಚ್ ಇನ್ನೂ ನಡೆಯುತ್ತಿರುವ ಹಳೆಯ ಬದುಕಿನ ಮೌನ ರಾಗ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.