ಲಾಗಾಯ್ತಿನ ಸಂಬಂಧಗಳನ್ನು ಅಳಿಸಿ ಹಾಕಿದ ದೇಶ ವಿಭಜನೆಯ ದುರಂತ, ಹಿಂದೂ–ಮುಸ್ಲಿಂ ಎಂಬ ಎರಡು ಧ್ರುವಗಳ ನಡುವೆ ವಿಜೃಂಭಿಸಿದ ಕ್ರೌರ್ಯ, ಅತಂತ್ರಗೊಂಡ ಜನಜೀವನ—ಇವುಗಳ ನೆನಪು ಇಂದಿಗೂ ಪ್ರಜ್ಞಾವಂತರ ಎದೆ ನಡುಗಿಸುವಂತಿವೆ. ಒಂದು ಕಾಲಘಟ್ಟದಲ್ಲಿ ನೆರೆಹೊರೆಯವರಾಗಿದ್ದವರು ಕ್ಷಣಾರ್ಧದಲ್ಲಿ ಪರಸ್ಪರ ವೈರಿಗಳಾಗುವ ಸ್ಥಿತಿ ಮಾನವ ಸಂಬಂಧಗಳ ನಾಜೂಕುತನವನ್ನೇ ಬಿಚ್ಚಿಡುತ್ತದೆ. ಈ ಹಿನ್ನೆಲೆಯಲ್ಲೇ ಮಾನವೀಯತೆಯ ಕಿರಣಗಳನ್ನು ಹುಡುಕಿದ ಹಲವು ರಂಗಪ್ರಯೋಗಗಳ ಸಾಲಿಗೆ ಹೊಸ ಸೇರ್ಪಡೆ ‘ಸ್ವಾತಂತ್ರ್ಯದ ಓಟ’. ಬೋಳುವಾರು ಮಹಮದ್ ಕುಂಞ ಅವರ ಕಾದಂಬರಿಯನ್ನು ಆಧರಿಸಿ ರೂಪುಗೊಂಡ ಈ ನಾಟಕ ಇತ್ತೀಚೆಗೆ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಮೊದಲ ಪ್ರದರ್ಶನ ಕಂಡಿತು.

ಕಾದಂಬರಿಯಲ್ಲಿನ ‘ಮುತ್ತುಪ್ಪಾಡಿ’ ಎಂಬ ಹಳ್ಳಿ ಇಲ್ಲಿ ರೂಪಕವಾಗಿಯೇ ಅಲ್ಲ, ಜೀವಂತ ಜಗತ್ತಿನಂತೆ ಮೂಡಿಬರುತ್ತದೆ. ದೇಶ ವಿಭಜನೆಯ ಅಲೆಗಳಲ್ಲಿ ಸಿಲುಕಿದ ಚಾಂದ್ ಅಲಿ, ಕ್ರೌರ್ಯದ ನಡುವೆ ಮಾನವೀಯತೆಯನ್ನು ಉಳಿಸಿಕೊಂಡು ಹಿಂದೂ ಕುಟುಂಬವೊಂದನ್ನು ರಕ್ಷಿಸಿ ಭಾರತಕ್ಕೆ ಕರೆತರುತ್ತಾನೆ. ಆದರೆ ರೈಲು ನಿಲ್ದಾಣದಲ್ಲಿ ಅವರಿಂದ ದೂರವಾಗುತ್ತಾನೆ. ಆ ಕಾಣೆಯಾಗುವ ಕ್ಷಣವೇ ಅವನ ಬದುಕಿನ ತಿರುವಾಗಿ ಪರಿಣಮಿಸುತ್ತದೆ. ನಂತರ ಮುತ್ತುಪ್ಪಾಡಿಯಲ್ಲಿ ನೆಲೆಸಿ, ಸೂಫಿ ಸಂತನಂತೆ ಊರ ಬದುಕಿನೊಳಗೆ ಬೆರೆತು ‘ಚಾಂದಜ್ಜ’ನಾಗುವ ಅವನ ಪಯಣವೇ ನಾಟಕದ ಹೃದಯ. ಈ ಪಯಣದಲ್ಲಿನ ಒಳಮನದ ಮಿಡಿತಗಳು ಪ್ರೇಕ್ಷಕರಿಗೂ ಹತ್ತಿರವಾಗುತ್ತವೆ.

ಚಾಂದ್ ಅಲಿಯ ಜೀವನವನ್ನು ಮೂರು ಹಂತಗಳಲ್ಲಿ ಮೂವರು ನಟರು ನಿರ್ವಹಿಸಿರುವುದು ಗಮನಾರ್ಹ. ಈ ಪಾತ್ರದ ವಿವಿಧ ಹಂತಗಳ ನಡುವೆ ಕಾಣಿಸುವ ಭಾವಾಂತರಗಳು ನಾಟಕಕ್ಕೆ ಆಳವನ್ನು ನೀಡುತ್ತವೆ. ಬದ್ರುದ್ದೀನ್, ಮೂಸಜ್ಜ, ಖೈರುನ್ನೀಸಾ, ತನ್ವೀರ್ ಮೊದಲಾದ ಪಾತ್ರಗಳು ಕೇವಲ ವೈಯಕ್ತಿಕವಾಗಿಯೇ ಉಳಿಯದೆ, ಸಮೂಹದ ಪ್ರತಿನಿಧಿಗಳಾಗಿ ರೂಪುಗೊಳ್ಳುತ್ತವೆ. ಇದರಿಂದ ಮುತ್ತುಪ್ಪಾಡಿ ಒಂದು ಹಳ್ಳಿಯ ಮಿತಿಯನ್ನು ಮೀರಿ ದೇಶದ ಸಂಕೇತವಾಗಿ ಕಾಣಿಸುತ್ತದೆ.

ಗಾಂಧಿ ನೇರವಾಗಿ ವೇದಿಕೆಗೆ ಬಾರದಿದ್ದರೂ, ಧ್ವನಿ, ಸೂಚನೆಗಳು ಮತ್ತು ಕಥನದ ಮೂಲಕ ಅವರ ಇರುವಿಕೆಯನ್ನು ಕಟ್ಟಿಕೊಡುವ ಪ್ರಯತ್ನ ಯಶಸ್ವಿಯಾಗಿದೆ. ಅದು ಕೇವಲ ವ್ಯಕ್ತಿಯ ನೆನಪಲ್ಲ, ಒಂದು ಮೌಲ್ಯದ ಸಾನ್ನಿಧ್ಯವಾಗಿ ಪ್ರೇಕ್ಷಕರ ಮನಸ್ಸಿನಲ್ಲಿ ಮೂಡುತ್ತದೆ.

ತಮ್ಮ ಅಳಿದುಳಿದ ಸರಕು, ಸಾಮಾನುಗಳೊಂದಿಗೆ, ಮಡದಿ–ಮಕ್ಕಳು, ವಯಸ್ಸಾದ ತಂದೆ–ತಾಯಿಯರೊಂದಿಗೆ ದಿಕ್ಕೆಟ್ಟವರಂತೆ ಆಶ್ರಯ ಅರಸಿ ಭಾರದ ಹೆಜ್ಜೆಗಳನ್ನಿಡುತ್ತ ಸಾಗುವ ಜನರ ನಿಧಾನಗತಿಯ ಚಲನೆಯಿಂದಲೇ ನಾಟಕ ಆರಂಭವಾಗುತ್ತದೆ. ತಮ್ಮ ಬಳಿ ಉಳಿದಿದ್ದ ಬದುಕಿನ ಅವಶೇಷಗಳನ್ನು ಹೊತ್ತು ಸಾಗುವ ಈ ಜನರ ಮೆರವಣಿಗೆ ನಲವತ್ತೇಳರ ದುಃಸ್ವಪ್ನವನ್ನು ಕಣ್ಮುಂದೆ ಜೀವಂತಗೊಳಿಸುತ್ತದೆ. ದೃಶ್ಯಗಳು ಒಂದರ ಹಿಂದೆ ಒಂದಾಗಿ ನಮ್ಮ ಮುಂದೆ ಸಾಲಾಗಿ ನಿಂತು, ನೋಡುಗರನ್ನು ನಿಧಾನವಾಗಿ ತಲ್ಲಣಗೊಳಿಸುತ್ತವೆ. ಈ ‘ಓಟ’ದಲ್ಲಿ ಓಟದ ಆತುರವೂ ಇದೆ, ಧ್ಯಾನದ ಮೌನವೂ ಇದೆ. ಈ ಎರಡು ಅಂಚುಗಳ ನಡುವೆ ನಡೆಯುವ ದೃಶ್ಯಗಳು ಕಾವ್ಯಾತ್ಮಕ ಅನುಭವವಾಗಿ ಮೂಡುತ್ತವೆ. ನಾಟಕ ಮುಗಿದ ನಂತರವೂ ಆ ಚಿತ್ರಗಳು ಮನಸ್ಸನ್ನು ಬಿಡದೆ ಕಾಡುತ್ತವೆ.

ರಾಘವ ಕಮ್ಮಾರ ಅವರ ಹಿನ್ನೆಲೆ ಸಂಗೀತ ನಾಟಕದ ಭಾವಗಾಢತೆಯನ್ನು ಮತ್ತಷ್ಟು ತೀವ್ರಗೊಳಿಸುತ್ತದೆ. ಕೆಲ ಕ್ಷಣಗಳಲ್ಲಿ ಅದು ಪಾತ್ರಗಳ ಒಳಮನಸ್ಸಿನ ಪ್ರತಿಧ್ವನಿಯಂತೆ ಅನಿಸುತ್ತದೆ. ಮಂಜು ನಾರಾಯಣ್ ಅವರ ಬೆಳಕಿನ ವಿನ್ಯಾಸ ದೃಶ್ಯಗಳಿಗೆ ಶಿಲ್ಪದ ಹೊಳಪು ನೀಡುತ್ತದೆ. ಸಹನಾ ಪಿಂಜರ್ ಅವರ ವಸ್ತ್ರ ವಿನ್ಯಾಸ ಕಾಲಘಟ್ಟದ ನೈಜತೆಯನ್ನು ನಂಬಿಸುವಂತೆ ಕಟ್ಟಿಕೊಡುತ್ತದೆ. ಮಧುಸೂದನ್ ಬಿ.ಆರ್, ರಮೇಶ್ ಎಸ್ ಮೈಸೂರು ಮತ್ತು ಶಂಕರ್ ಕೆ. ಬೆಳಲಕಟ್ಟೆ ಅವರ ರಂಗಸಜ್ಜಿಕೆ ವೇದಿಕೆಗೆ ಚಲನಶೀಲತೆಯನ್ನು ನೀಡುತ್ತದೆ.

ನಟರಾಜ ಹೊನ್ನವಳ್ಳಿ ಅವರ ನಿರ್ದೇಶನ ಈ ಎಲ್ಲಾ ಅಂಶಗಳನ್ನು ಸಮನ್ವಯಗೊಳಿಸಿ ನಾಟಕವನ್ನು ದೃಶ್ಯಕಾವ್ಯವಾಗಿ ರೂಪಿಸಿದೆ. ಕೆಲವು ಮೌನ ಕ್ಷಣಗಳನ್ನು ಬಳಸಿರುವ ರೀತಿ ಗಮನಾರ್ಹ. ಬೃಹತ್ ಕಾದಂಬರಿಯನ್ನು ಮೂರೂವರೆ ಗಂಟೆಗಳ ನಾಟಕವಾಗಿ ರೂಪಾಂತರಿಸುವಲ್ಲಿ ಮಂಜುನಾಥ ಗೋಮಾರದಹಳ್ಳಿ ಯಶಸ್ವಿಯಾಗಿದ್ದಾರೆ.

ಆದರೆ, ಮೊದಲಾರ್ಧದಲ್ಲಿ ನಾಟಕದ ಗತಿ ಕೆಲವೆಡೆ ನಿಧಾನವಾಗುತ್ತದೆ. ಉತ್ತರಾರ್ಧದಲ್ಲಿ ಮಾತ್ರ ಚುರುಕು ಹೆಚ್ಚಾಗಿ ಪ್ರೇಕ್ಷಕರನ್ನು ಗಟ್ಟಿಯಾಗಿ ಹಿಡಿದಿಡುತ್ತದೆ. ಹಿನ್ನೆಲೆ ಗಾಯನದಲ್ಲಿ ಹಿಂದಿ ಗೀತೆಗಳ ಬದಲಿಗೆ ಹೆಚ್ಚು ಕನ್ನಡ ಗೀತೆಗಳನ್ನು ಬಳಸಬಹುದಾಗಿತ್ತು. ಒಂದೆರಡು ದೃಶ್ಯಗಳಲ್ಲಿ ಅತಿವೇಗದ ಸಂಭಾಷಣೆ ಲಯಕ್ಕೆ ಅಡ್ಡಿಯಾಗುತ್ತದೆ.

ಈ ಸಣ್ಣ ಮಿತಿಗಳನ್ನು ಮೀರಿ, ‘ಸ್ವಾತಂತ್ರ್ಯದ ಓಟ’ ಮಾನವೀಯತೆ ಮತ್ತು ಇತಿಹಾಸದ ನಡುವೆ ಓಡುವ ಒಂದು ಗಾಢ ಅನುಭವವಾಗಿ ಉಳಿಯುತ್ತದೆ. ಶಿವಮೊಗ್ಗ ರಂಗಾಯಣ ನಿರ್ಮಿಸಿರುವ ಈ ನಾಟಕದಲ್ಲಿ ರಾಜ್ಯದ ವಿವಿಧ ಭಾಗಗಳ 22 ರೆಪರ್ಟರಿ ಕಲಾವಿದರು ಅಭಿನಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.