ಉಡುಪಿ ಜಿಲ್ಲೆಯ ಹೆಬ್ರಿ ಪೇಟೆಯಿಂದ ಪಶ್ಚಿಮ ಘಟ್ಟದ ತಪ್ಪಲಲ್ಲಿರುವ ಮುದ್ರಾಡಿ ಕಡೆಗೆ ಸಾಗುವ ರಸ್ತೆಯ ಬದಿಯಲ್ಲಿ ತುಳು ಭಾಷೆಯ ಒಂದು ಬೋರ್ಡ್ ಗಮನ ಸೆಳೆಯುತ್ತದೆ– ‘ಬಲೇ ಉನ್ಕ’. ಅಂದರೆ, ‘ಬನ್ನಿ ಊಟ ಮಾಡೋಣ’.

ಒಳ ಹೊಕ್ಕರೆ ಮನೆಯ ಅಡುಗೆಯ ಘಮಲು. ಬಾಣಲೆಯ ಕುದಿಯ ಸದ್ದು. ಒಲೆಯ ಮೇಲಿನ ಪಾತ್ರೆಗಳಿಂದ ಹೊರಬರುವ ಹಬೆ. ಅತಿಥಿಯನ್ನು ಮನೆಯವರಂತೆ ಕಾಣುವ ನಗು. ಆ ನಗುವಿನ ಹಿಂದೆ ಬದುಕಿನ ಜೊತೆ ಹೋರಾಡಿ ಗೆದ್ದ ಹೆಂಗಸರ ಕಠಿಣ ಪರಿಶ್ರಮವೂ ಅಡಗಿದೆ.

ಹೋಟೆಲ್ ನಡೆಸುತ್ತಿರುವ ಯಶೋಧಾ ಶೆಟ್ಟಿ ಮತ್ತು ದೀಪಾ ಶೆಟ್ಟಿ ಅವರಿಗೆ ಈ ಅಡುಗೆಮನೆ ಕೇವಲ ವ್ಯಾಪಾರದ ಜಾಗವಲ್ಲ; ಅದು ತಮ್ಮ ಕಾಲಿನ ಮೇಲೆ ತಾವು ನಿಲ್ಲಬೇಕು ಎನ್ನುವ ಛಲದ ಸಂಕೇತ. ಎರಡು ವರ್ಷಗಳ ಹಿಂದೆ ‘ಓಂ ಶಕ್ತಿ ಸಂಜೀವಿನಿ ಒಕ್ಕೂಟ’ದ ಅಧೀನದಲ್ಲಿ ಕಾರ್ಯನಿರ್ವಹಿಸುವ ‘ಶುಕ್ಲಂ ಸಂಜೀವಿನಿ ಸ್ವಸಹಾಯ ಸಂಘ’ದ ಮೂಲಕ ₹1.5 ಲಕ್ಷ ಸಾಲ ಪಡೆದು ಅವರು ಈ ಮಾಂಸಾಹಾರಿ ಹೋಟೆಲ್ ಆರಂಭಿಸಿದ್ದರು. ಆರಂಭದ ದಿನಗಳಲ್ಲಿ ಬೆಳಗ್ಗಿನಿಂದ ರಾತ್ರಿ ತನಕ ತಾವೇ ಅಡುಗೆ ಮಾಡಿ, ಪಾತ್ರೆ ತೊಳೆದು, ಗ್ರಾಹಕರಿಗೆ ಬಡಿಸಿ ಹೋಟೆಲ್ ನಡೆಸುತ್ತಿದ್ದರು. ಕೆಲ ದಿನಗಳಲ್ಲಿ ಗ್ರಾಹಕರು ಕಡಿಮೆಯಿದ್ದಾಗ ಆತಂಕವೂ ಕಾಡುತ್ತಿತ್ತು. ಆದರೆ ಮನೆಯ ಅಡುಗೆಯ ರುಚಿ ನಿಧಾನವಾಗಿ ಜನರನ್ನು ಸೆಳೆಯತೊಡಗಿತು. ಈಗ ಮಧ್ಯಾಹ್ನದ ವೇಳೆಗೆ ಹೋಟೆಲ್ನಲ್ಲಿ ಕುಳಿತು ಊಟ ಮಾಡಲು ಸ್ಥಳ ಹುಡುಕಬೇಕಾಗಿದೆ.

ಹೋಟೆಲ್ನ ಗೋಡೆಗಳ ಬಳಿ ಸ್ಟೀಲ್ ಪಾತ್ರೆಗಳ ಸದ್ದು ಕೇಳಿಸುತ್ತಿರುತ್ತದೆ. ಹೊರಗಡೆ ವಾಹನಗಳು ನಿಂತಿರುತ್ತವೆ. ದೂರದ ಊರುಗಳಿಂದ ಕೆಲಸಕ್ಕೆ ಹೋಗುವವರೂ ಇಲ್ಲಿ ಊಟಕ್ಕೆ ನಿಲ್ಲುತ್ತಾರೆ. ‘ಮನೆಯ ಊಟ ಸಿಗುತ್ತೆ’ ಎಂಬ ಮಾತೇ ಅವರ ಹೋಟೆಲ್ಗೆ ದೊಡ್ಡ ಪ್ರಚಾರವಾಗಿದೆ.

‘ಮೊದಲಿಗೆ ನಮಗೆ ಹೋಟೆಲ್ ನಡೆಸೋದು ಸಾಧ್ಯವಾ ಅನ್ನೋ ಭಯ ಇತ್ತು. ಆದರೆ ಗುಂಪಿನ ಮಹಿಳೆಯರು, ಪಂಚಾಯಿತಿ ಸಿಬ್ಬಂದಿ ಎಲ್ಲರೂ ಧೈರ್ಯ ಕೊಟ್ಟರು’ ಎಂದು ಯಶೋಧಾ ಶೆಟ್ಟಿ ಹೇಳುವಾಗ ಅವರ ಧ್ವನಿಯಲ್ಲಿ ಆತ್ಮವಿಶ್ವಾಸ ಸ್ಪಷ್ಟವಾಗುತ್ತದೆ.

ಮುದ್ರಾಡಿಯಲ್ಲಿ ಇಂಥ ಕಥೆಗಳು ಒಂದೆರಡಲ್ಲ. ಅಲ್ಲಿನ ಹೆಂಗಸರ ಬದುಕಿನಲ್ಲಿ ‘ಸಂಜೀವಿನಿ’ ಎನ್ನುವುದು ಕೇವಲ ಯೋಜನೆಯ ಹೆಸರಲ್ಲ; ಅದು ನಿಧಾನವಾಗಿ ಆತ್ಮವಿಶ್ವಾಸವಾಗಿ ಬದಲಾಗಿರುವ ಪದ.

ಎಂಟು ವರ್ಷಗಳ ಹಿಂದೆ ಗೇರುಬೀಜ ಕಾರ್ಖಾನೆಯಲ್ಲಿ ದುಡಿಯುತ್ತಿದ್ದ ಬಲ್ಯಾಡಿಯ ಹೇಮಲತಾ ಅವರ ಬದುಕೂ ಇದಕ್ಕೆ ಉದಾಹರಣೆ. ಕಾರ್ಖಾನೆಯ ಕೆಲಸ ಬಿಟ್ಟ ಬಳಿಕ ಸಣ್ಣ ಅಂಗಡಿ ತೆರೆದರೂ ಮನೆಯ ಖರ್ಚು ನಿಭಾಯಿಸುವುದು ಕಷ್ಟವಾಗಿತ್ತು. ಗಂಡನಿಗೆ ಅನಾರೋಗ್ಯ. ಮಗಳು ಶಾಲೆಗೆ ಹೋಗುತ್ತಿದ್ದಳು. ಆ ದಿನಗಳಲ್ಲಿ ಬದುಕು ಎಂದರೆ ಪ್ರತಿದಿನದ ಲೆಕ್ಕಾಚಾರ.

ಅಂತಹ ಹೊತ್ತಿನಲ್ಲಿ ಅವರು ಮನೆಯಲ್ಲೇ ಉಪ್ಪಿನಕಾಯಿ ತಯಾರಿಸಿ ಮಾರಾಟ ಮಾಡಲು ಆರಂಭಿಸಿದರು. ಮೊದಲ ದಿನ ₹300 ತರಕಾರಿ ಖರೀದಿಸಿ ಮಾಡಿದ ಉಪ್ಪಿನಕಾಯಿಯೇ ಅವರ ಹೊಸ ಬದುಕಿನ ಆರಂಭವಾಗಿತ್ತು.

‘ಆಗ ನನಗೆ ದೊಡ್ಡ ಕನಸುಗಳೇನೂ ಇರಲಿಲ್ಲ. ಮನೆ ನಿಭಾಯಿಸಬೇಕು ಅನ್ನೋದೇ ಮುಖ್ಯವಾಗಿತ್ತು’ ಎಂದು ಹೇಳುವ ಹೇಮಲತಾ ಅವರ ಕಣ್ಣಲ್ಲಿ ಈಗ ಆತ್ಮವಿಶ್ವಾಸದ ಹೊಳಪು ಕಾಣಿಸುತ್ತದೆ.

ಸ್ವಸಹಾಯ ಸಂಘದ ಮೂಲಕ ಸಿಕ್ಕ ಸಾಲ ಅವರ ಕೈಗೆ ಹಣ ಮಾತ್ರ ಕೊಡಲಿಲ್ಲ; ‘ನಾನೂ ಏನಾದರೂ ಮಾಡಬಲ್ಲೆ’ ಎನ್ನುವ ಧೈರ್ಯವನ್ನೂ ನೀಡಿತು. ನಿಧಾನವಾಗಿ ಉಪ್ಪಿನಕಾಯಿ ಉದ್ಯಮ ವಿಸ್ತಾರವಾಯಿತು. ಮನೆಯ ಮುಂದೆಯೇ ಸ್ವಂತ ಪುಟ್ಟ ಘಟಕ ಕಟ್ಟಿದರು. ‘ಸಂಜೀವಿನಿ ಶಿವದುರ್ಗಾ ಪ್ರಾಡಕ್ಟ್’ ಹೆಸರಿನಲ್ಲಿ ಅವರು ತಯಾರಿಸುವ ಉಪ್ಪಿನಕಾಯಿ ಈಗ ಜಿಲ್ಲೆಯ ಹಲವಾರು ಅಂಗಡಿಗಳು, ಸೂಪರ್ ಮಾರ್ಕೆಟ್ಗಳ ಶೆಲ್ಫ್ಗಳಲ್ಲಿ ಕಾಣಿಸುತ್ತದೆ.

ಉಪ್ಪಿನಕಾಯಿ ತಯಾರಿಸುವ ದಿನಗಳಲ್ಲಿ ಬೆಳಗ್ಗಿನಿಂದಲೇ ಅವರ ಮನೆಯ ಅಂಗಳ ಚಟುವಟಿಕೆಯಿಂದ ಕಂಗೊಳಿಸುತ್ತದೆ. ಮಾವಿನಕಾಯಿ ಕತ್ತರಿಸುವುದು, ಉಪ್ಪು–ಖಾರದ ಅಳತೆ ನೋಡುವುದು, ಬಾಟಲಿಗಳನ್ನು ಸಿದ್ಧಪಡಿಸುವ ಎಲ್ಲ ಕೆಲಸಗಳನ್ನೂ ಮನೆಯವರ ಜೊತೆ ಸೇರಿ ಮಾಡುತ್ತಾರೆ. ಕೆಲವೊಮ್ಮೆ ಸ್ವಸಹಾಯ ಗುಂಪಿನ ಮಹಿಳೆಯರೇ ಅವರ ಉತ್ಪನ್ನಗಳನ್ನು ಮೇಳಗಳಿಗೆ ಕೊಂಡೊಯ್ಯುತ್ತಾರೆ. ಇನ್ನೊಮ್ಮೆ ಹೇಮಲತಾ ಅವರೇ ಸ್ಕೂಟಿಯಲ್ಲಿ ಅಂಗಡಿಗಳಿಗೆ ಸರಬರಾಜು ಮಾಡುತ್ತಾರೆ. ಒಮ್ಮೆ ₹300 ತರಕಾರಿಯಿಂದ ಆರಂಭವಾದ ಪ್ರಯತ್ನ ಇಂದು ಮನೆಯ ಆಧಾರವಾಗಿ ಬೆಳೆದಿದೆ.

‘ಹಿಂದೆ ಮನೆಯ ಖರ್ಚಿಗೆ ಇತರರನ್ನು ನೋಡಬೇಕಾಗುತ್ತಿತ್ತು. ಈಗ ನನ್ನ ದುಡಿಮೆಯಿಂದ ಮನೆ ನಡೆಯುತ್ತಿದೆ ಅನ್ನೋ ಸಂತೋಷ ಇದೆ’ ಎಂದು ಅವರು ಹೇಳುತ್ತಾರೆ.

ಮುದ್ರಾಡಿಯ ‘ಓಂ ಶಕ್ತಿ ಸಂಜೀವಿನಿ ಒಕ್ಕೂಟ’ದ ಅಧೀನದಲ್ಲಿ ಕಾರ್ಯನಿರ್ವಹಿಸುವ ‘ಶುಕ್ಲಂ’ ಗುಂಪಿನ ಹನ್ನೆರಡು ಮಹಿಳೆಯರೂ ವಿಭಿನ್ನ ಸ್ವ ಉದ್ಯೋಗಗಳಲ್ಲಿ ತೊಡಗಿರುವುದು ವಿಶೇಷ. ಯಾರೋ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದಾರೆ; ಇನ್ನೊಬ್ಬರು ಕೋಳಿ ಅಂಗಡಿ ಇಟ್ಟಿದ್ದಾರೆ; ಕೆಲವರು ಜೇನು ಸಾಕಣೆ ಮಾಡುತ್ತಿದ್ದಾರೆ; ಮತ್ತೊಬ್ಬರು ಕೋರಿರೊಟ್ಟಿ ತಯಾರಿಸುತ್ತಿದ್ದಾರೆ. ಒಮ್ಮೆ ಮನೆಯ ಗಡಿಗಳೊಳಗೆ ಸೀಮಿತವಾಗಿದ್ದ ಹೆಂಗಸರು ಈಗ ತಮ್ಮ ಕೈಯಿಂದ ಮನೆಯ ಆರ್ಥಿಕತೆಯನ್ನು ನಿಭಾಯಿಸುತ್ತಿದ್ದಾರೆ.

ಸ್ವಸಹಾಯ ಸಂಘಗಳ ಸಭೆಗಳು ಈಗ ಕೇವಲ ಉಳಿತಾಯದ ಲೆಕ್ಕಾಚಾರದ ಸ್ಥಳಗಳಲ್ಲ. ಅಲ್ಲಿ ಉದ್ಯಮದ ಮಾತುಗಳಿರುತ್ತವೆ. ಬ್ಯಾಂಕ್ ಸಾಲದ ಚರ್ಚೆಗಳಿರುತ್ತವೆ. ಯಾರ ಉತ್ಪನ್ನ ಎಲ್ಲಿ ಚೆನ್ನಾಗಿ ಮಾರಾಟವಾಗುತ್ತಿದೆ ಎನ್ನುವ ಮಾಹಿತಿ ಹಂಚಿಕೊಳ್ಳಲಾಗುತ್ತದೆ. ಒಬ್ಬರ ಯಶಸ್ಸು ಮತ್ತೊಬ್ಬರಿಗೆ ಧೈರ್ಯವಾಗುತ್ತದೆ. ಇದೇ ಕಾರಣಕ್ಕೆ ಮುದ್ರಾಡಿಯಲ್ಲಿ ಸ್ವಸಹಾಯ ಸಂಘಗಳು ನಿಧಾನವಾಗಿ ಸಾಮಾಜಿಕ ಬದಲಾವಣೆಯ ಕೇಂದ್ರಗಳಾಗಿ ರೂಪುಗೊಂಡಿವೆ.

ಮುದ್ರಾಡಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ 650 ಮಹಿಳೆಯರನ್ನು 65 ಸ್ವಸಹಾಯ ಗುಂಪುಗಳಲ್ಲಿ ಸಂಘಟಿಸಲಾಗಿದೆ. ಸುಮಾರು ₹1 ಕೋಟಿ ಸಾಲ ಸಣ್ಣ ಉದ್ಯಮಗಳಿಗೆ ಬಳಕೆಯಾಗಿದೆ. 50ಕ್ಕೂ ಹೆಚ್ಚು ಸೂಕ್ಷ್ಮ ಉದ್ಯಮಗಳು ಈ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿವೆ. ಆದರೆ ಈ ಅಂಕಿ–ಅಂಶಗಳಿಗಿಂತ ದೊಡ್ಡ ಬದಲಾವಣೆ ಬೇರೆಡೆ ಇದೆ. ಅದು ಹೆಂಗಸರ ಮುಖದಲ್ಲಿ ಕಾಣುವ ಆತ್ಮವಿಶ್ವಾಸದಲ್ಲಿ.

ಗ್ರಾಮದ ಬದಲಾವಣೆ ಕೇವಲ ಉದ್ಯಮಗಳಲ್ಲಷ್ಟೇ ಕಾಣಿಸುವುದಿಲ್ಲ. ಸಮಾಜದ ಅತ್ಯಂತ ದುರ್ಬಲರ ಬದುಕಿನಲ್ಲೂ ಅದರ ಸ್ಪರ್ಶ ಇದೆ.

ನೆಲ್ಲಿಕಟ್ಟೆಯ 58 ವರ್ಷದ ವಸಂತಿ ಅವರಿಗೆ ಶೇಕಡ 50 ರಷ್ಟು ಅಂಗವಿಕಲತೆ ಇದೆ. ಪತಿ ನಿಧನರಾದ ಬಳಿಕ ಒಬ್ಬಂಟಿಯಾಗಿಯೇ ಬದುಕು ಸಾಗಿಸುತ್ತಿದ್ದಾರೆ.

ಅಂಗವಿಕಲ ಮಾಸಾಶನವೇ ಅವರ ಜೀವನಾಧಾರ. ಪುಟ್ಟ ಮನೆಯ ಮುಂಭಾಗದಲ್ಲಿ ಕುಳಿತಿದ್ದ ಅವರನ್ನು ಭೇಟಿ ಮಾಡಿದಾಗ ಅವರ ಮಾತುಗಳಲ್ಲಿ ಏಕಾಂತದ ನೆರಳು ಸ್ಪಷ್ಟವಾಗಿ ಕಾಣುತ್ತದೆ. ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ಸದಾಶಿವ ಅವರು ಆಗಾಗ ಮನೆಗೆ ತೆರಳಿ ಪಿಂಚಣಿ ಸರಿಯಾಗಿ ಸಿಗುತ್ತಿದೆಯೇ, ಆರೋಗ್ಯ ಹೇಗಿದೆ ಎಂದು ವಿಚಾರಿಸುತ್ತಾರೆ.

‘ನನ್ನನ್ನು ನೋಡುವವರು ಯಾರೂ ಇಲ್ಲ ಅನ್ನೋ ಭಾವ ಇತ್ತು. ಈಗ ಪಂಚಾಯಿತಿಯಿಂದ ಯಾರಾದರೂ ಬಂದು ವಿಚಾರಿಸಿದಾಗ ಧೈರ್ಯ ಬರುತ್ತದೆ’ ಎಂದು ವಸಂತಿ ಹೇಳುತ್ತಾರೆ.

ಶ್ರೀದೇವಿ ಅವರ ಬದುಕಿನ ಕಥೆಯೂ ಬೇರೆ ಅಲ್ಲ. ನಾಲ್ಕು ವರ್ಷಗಳ ಹಿಂದೆ ಗಂಡ ಹೃದಯಾಘಾತದಿಂದ ಮೃತಪಟ್ಟ ಬಳಿಕ ಇಬ್ಬರು ಮಕ್ಕಳ ಓದಿನ ಹೊಣೆ ಅವರ ಮೇಲಿದೆ. ಬೀಡಿ ಕಟ್ಟುತ್ತಲೇ ಜೀವನ ಸಾಗಿಸುತ್ತಿರುವ ಅವರಿಗೆ ಈಗ ವಿಧವಾ ಪಿಂಚಣಿ ಸಣ್ಣ ಆಸರೆಯಾಗಿದೆ. ಮನೆಯ ಗೋಡೆಗೆ ಮಕ್ಕಳ ಕಾಲೇಜಿನ ಟೈಮ್ಟೇಬಲ್ ಅಂಟಿಸಲಾಗಿದೆ. ಆ ಕಾಗದಗಳನ್ನು ನೋಡುತ್ತಲೇ ಅವರು ದಿನದ ಕೆಲಸ ಆರಂಭಿಸುತ್ತಾರೆ.

‘ಮಕ್ಕಳ ಓದು ನಿಲ್ಲಿಸಬಾರದು ಅನ್ನೋದೇ ನನ್ನ ಆಸೆ’ ಎಂದು ಅವರು ಹೇಳುವಾಗ ಕಣ್ಣಲ್ಲಿ ಚಿಂತೆಯ ಜೊತೆಗೆ ಹಟವೂ ಕಾಣಿಸುತ್ತದೆ.

ಮುದ್ರಾಡಿ ಪಂಚಾಯಿತಿಯು ಅಂಗವಿಕಲರ ಯುಡಿಐಡಿ ಕಾರ್ಡ್, ವೃದ್ಧಾಪ್ಯ ಪಿಂಚಣಿ ಹಾಗೂ ವಿಧವಾ ಪಿಂಚಣಿ ಯೋಜನೆಗಳ ಅನುಷ್ಠಾನದಲ್ಲಿ ಶೇಕಡ ನೂರರಷ್ಟು ಸಾಧನೆ ಮಾಡಿದೆ. ಆದರೆ ಆ ಸಾಧನೆಯ ನಿಜವಾದ ಅರ್ಥ ಸರ್ಕಾರಿ ದಾಖಲೆಗಳಲ್ಲಿ ಅಲ್ಲ; ವಸಂತಿ ಮತ್ತು ಶ್ರೀದೇವಿ ಅವರಂತಹವರ ದಿನನಿತ್ಯದ ನೆಮ್ಮದಿಯಲ್ಲಿ ಇದೆ.

ಪಶ್ಚಿಮ ಘಟ್ಟದ ತಪ್ಪಲಿನ ಈ ಪಂಚಾಯಿತಿಯಲ್ಲಿ ಕೃಷಿಯೇ ಪ್ರಮುಖ ಜೀವನಾಧಾರ. ಮಳೆಗಾಲದಲ್ಲಿ ಮಂಜು ಇಳಿಯುವ ಬೆಟ್ಟಗಳ ನಡುವೆ ಹರಡಿರುವ ಕೃಷಿಭೂಮಿಗಳೇ ಇಲ್ಲಿನ ಜನರ ಆರ್ಥಿಕತೆಯ ಆಧಾರ. ಒಟ್ಟು 1,671 ಕುಟುಂಬಗಳು ಇಲ್ಲಿ ವಾಸಿಸುತ್ತಿವೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಾವಿರಕ್ಕೂ ಹೆಚ್ಚು ಜನರು ಈ ಪಂಚಾಯಿತಿಯ ಭಾಗವಾಗಿದ್ದಾರೆ. ಬಡತನ ಮುಕ್ತ ಪಂಚಾಯಿತಿ ಎಂಬ ಗುರಿಯೊಂದಿಗೆ ನರೇಗಾ, ವಸತಿ ಯೋಜನೆ, ಕೃಷಿ, ಸ್ವ ಉದ್ಯೋಗ– ಎಲ್ಲವನ್ನು ಒಟ್ಟಿಗೆ ಜೋಡಿಸಿ ಕೆಲಸ ಮಾಡಲಾಗಿದೆ.

ನರೇಗಾ ಯೋಜನೆಯಡಿ ಸಾವಿರಾರು ಮಾನವ ದಿನಗಳ ಉದ್ಯೋಗ ಸೃಷ್ಟಿಯಾಗಿದೆ. 128 ಕುಟುಂಬಗಳು ನೂರು ದಿನಗಳ ಕೆಲಸ ಪೂರ್ಣಗೊಳಿಸಿವೆ. ಪ್ರಧಾನ ಮಂತ್ರಿ ಆವಾಸ್ ಯೋಜನೆ ಹಾಗೂ ಬಸವ ವಸತಿ ಯೋಜನೆಯಡಿ ಮನೆ ಇಲ್ಲದ ಕುಟುಂಬಗಳಿಗೆ ಆಶ್ರಯ ಕಲ್ಪಿಸಲಾಗಿದೆ. 30 ಎಕರೆ ಭೂ ಅಭಿವೃದ್ಧಿ ಮತ್ತು ದನದ ಕೊಟ್ಟಿಗೆಗಳ ನಿರ್ಮಾಣದ ಮೂಲಕ ಕೃಷಿ ಆಧಾರಿತ ಜೀವನೋಪಾಯಕ್ಕೂ ಬೆಂಬಲ ನೀಡಲಾಗಿದೆ. ರೈತರನ್ನು ‘ಫ್ರೂಟ್ಸ್’ ಪೋರ್ಟಲ್ನಲ್ಲಿ ನೋಂದಾಯಿಸಿ ನೇರ ಲಾಭ ವರ್ಗಾವಣೆಯ ಸೌಲಭ್ಯ ಕಲ್ಪಿಸಲಾಗಿದೆ.

ಆದರೆ ಈ ಬದಲಾವಣೆ ಅಷ್ಟು ಸುಲಭವಾಗಿ ಬಂದದ್ದಲ್ಲ. ದುರ್ಗಮ ಭೌಗೋಳಿಕ ಪ್ರದೇಶವಾಗಿರುವುದರಿಂದ ಮನೆ ನಿರ್ಮಾಣ ಸಾಮಗ್ರಿ ಸಾಗಿಸುವುದೇ ದೊಡ್ಡ ಸವಾಲಾಗಿತ್ತು. ಮಳೆಗಾಲದಲ್ಲಿ ರಸ್ತೆಗಳಲ್ಲಿ ವಾಹನ ಸಂಚಾರ ಕಷ್ಟವಾಗುತ್ತಿತ್ತು. ಹಿರಿಯ ನಾಗರಿಕರಿಗೆ ಬಯೋಮೆಟ್ರಿಕ್ ಸಮಸ್ಯೆಯಿಂದ ಪಿಂಚಣಿ ಪಡೆಯಲು ತೊಂದರೆ ಆಗುತ್ತಿತ್ತು. ಯುವಕರ ನಗರ ವಲಸೆಯಿಂದ ಕೃಷಿ ಕಾರ್ಮಿಕರ ಕೊರತೆಯೂ ಎದುರಾಗಿತ್ತು.

ಅದನ್ನು ಎದುರಿಸಲು ಪಂಚಾಯಿತಿ ವಿವಿಧ ಯೋಜನೆಗಳನ್ನು ಒಟ್ಟಿಗೆ ಜೋಡಿಸಿ ಕೆಲಸ ಮಾಡಿತು. ನರೇಗಾ ಮತ್ತು ವಸತಿ ಯೋಜನೆಗಳನ್ನು ಸಂಯೋಜಿಸಲಾಯಿತು. ಮಹಿಳಾ ಸಭೆಗಳ ಮೂಲಕ ಫಲಾನುಭವಿಗಳನ್ನು ಪಾರದರ್ಶಕವಾಗಿ ಆಯ್ಕೆ ಮಾಡಲಾಯಿತು. ಕೃಷಿ ಕಾರ್ಮಿಕರ ಕೊರತೆಯನ್ನು ನೀಗಿಸಲು ಯಾಂತ್ರೀಕೃತ ಕೃಷಿಗೆ ಉತ್ತೇಜನ ನೀಡಲಾಯಿತು. ಫಲಾನುಭವಿಗಳ ಪಟ್ಟಿಯನ್ನು ಸಾರ್ವಜನಿಕವಾಗಿ ಪ್ರದರ್ಶಿಸುವ ಮೂಲಕ ಸಾಮಾಜಿಕ ಪರಿಶೀಲನೆಗೂ ಒತ್ತು ನೀಡಲಾಯಿತು.

ಈ ಬದಲಾವಣೆಯ ಹಿಂದೆ ಹಲವು ಇಲಾಖೆಗಳ ಸಹಕಾರವೂ ಇದೆ. ಕೃಷಿ ಇಲಾಖೆ ಬೀಜ ನೀಡಿದೆ. ಪಶುಪಾಲನಾ ಇಲಾಖೆ ಆರೋಗ್ಯ ಶಿಬಿರ ನಡೆಸಿದೆ. ತೋಟಗಾರಿಕೆ ಇಲಾಖೆ ಅಡಿಕೆ ಬೆಳೆ ರೋಗ ನಿರ್ವಹಣೆಯ ಕುರಿತು ತರಬೇತಿ ನೀಡಿದೆ. ವಿದ್ಯಾರ್ಥಿಗಳ ಸಹಾಯದಿಂದ ಯುವಜನರ ಕೌಶಲ ಸಮೀಕ್ಷೆಯೂ ನಡೆದಿದೆ. ಬ್ಯಾಂಕ್ಗಳು ಮಹಿಳೆಯರ ಸ್ವಸಹಾಯ ಗುಂಪುಗಳಿಗೆ ಸಾಲ ನೀಡಿವೆ. ಆದರೆ ಈ ಎಲ್ಲ ಯೋಜನೆಗಳಿಗೆ ಜೀವ ಬಂದದ್ದು ಗ್ರಾಮದಲ್ಲಿನ ಮಹಿಳೆಯರ ಕೈ ಸೇರಿದ್ದಾಗಲೇ.

ಮುಂದಿನ ದಿನಗಳಿಗಾಗಿ ಪಂಚಾಯಿತಿಯು ಹೊಸ ಯೋಜನೆಗಳನ್ನೂ ರೂಪಿಸಿದೆ. ವಾರದ ಸಂತೆ ಆರಂಭಿಸಿ ಸ್ವಸಹಾಯ ಗುಂಪುಗಳ ಉತ್ಪನ್ನಗಳಿಗೆ ಶಾಶ್ವತ ಮಾರುಕಟ್ಟೆ ಸೃಷ್ಟಿಸುವ ಯೋಚನೆ ಇದೆ. ತ್ಯಾಜ್ಯ ಸಂಗ್ರಹಣೆಗೆ ಬಳಕೆದಾರ ಶುಲ್ಕ ವ್ಯವಸ್ಥೆ ಜಾರಿಗೊಳಿಸಿ ಸಮುದಾಯ ಆಸ್ತಿಗಳ ನಿರ್ವಹಣೆಯತ್ತ ಗಮನ ಹರಿಸುವ ಚಿಂತನೆಯೂ ಇದೆ.

ಮುದ್ರಾಡಿಯ ದಾರಿಯಲ್ಲಿ ಸಾಗುವಾಗ ‘ಬಲೇ ಉನ್ಕ’ ಎನ್ನುವ ಫಲಕ ಮತ್ತೆ ಕಣ್ಣಿಗೆ ಬೀಳುತ್ತದೆ. ಅದು ಕೇವಲ ಊಟಕ್ಕೆ ಕರೆಯುವ ಮಾತಿನಂತೆ ತೋರುವುದಿಲ್ಲ. ಬದುಕಿನ ಜೊತೆ ಹೋರಾಡಿ ನಿಧಾನವಾಗಿ ಗೆಲ್ಲುತ್ತಿರುವ ಗ್ರಾಮವೊಂದು ತನ್ನ ಕಥೆಯೊಳಗೆ ಕರೆಯುತ್ತಿರುವಂತೆ ಭಾಸವಾಗುತ್ತದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260524-51-1142259302

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.