ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಆಟದ ಮೇಳ’ ಪುಸ್ತಕ ಪರಿಚಯ: ಅಂದಿನ ಸಾಮಾಜಿಕ ಸ್ಥಿತಿಗತಿಯ ನೋಟ

Published 1 ಸೆಪ್ಟೆಂಬರ್ 2024, 1:51 IST
Last Updated 1 ಸೆಪ್ಟೆಂಬರ್ 2024, 1:51 IST
ಅಕ್ಷರ ಗಾತ್ರ

ಕೃತಿಯ ಶೀರ್ಷಿಕೆಯೇ ಹೇಳುವಂತೆ, ಮೇಳ ಕಟ್ಟಿ ತಿರುಗಾಡುವ ಕಷ್ಟಗಳು, ನಷ್ಟಗಳು, ನೋವು, ನಲಿವುಗಳೆಲ್ಲವೂ ಸಂತೆಗುಳಿ ನಾರಾಯಣ ಭಟ್ಟರ ಆತ್ಮಕಥನದಲ್ಲಿ ಬಿತ್ತರಗೊಂಡಿದೆ.

ಇದೊಂದು ಜನಸಾಮಾನ್ಯನ ಆತ್ಮಕಥನವೆಂದರೂ ತಪ್ಪಾಗದು. ಯಾಕೆಂದರೆ ಇದರಲ್ಲಿ ಲೇಖಕ ಕೆರೆಮನೆ ಶಿವಾನಂದ ಹೆಗಡೆಯವರು, ಸಂತೆಗುಳಿ ನಾರಾಯಣ ಭಟ್ಟರ ಯಕ್ಷಗಾನ ಆಸಕ್ತಿಯ ಮೇಲಷ್ಟೇ ಬೆಳಕು ಚೆಲ್ಲದೆ, ಆ ಕಾಲದ ಸಮುದಾಯ ಬದುಕುತ್ತಿದ್ದ ರೀತಿ, ದಾಟಿ ಬಂದ ಸಂಕಷ್ಟಗಳೆಲ್ಲ ಅಭಿವ್ಯಕ್ತವಾಗಿ, ಇದೊಂದು ಜೀವನಶೈಲಿಯ ಸ್ಥಿತ್ಯಂತರವನ್ನು ವಿವರಿಸುವ ಕೃತಿಯಾಗಿಯೂ ಗಮನ ಸೆಳೆಯುತ್ತದೆ. 1940-50ರ ದಶಕದಲ್ಲಿ ಹೊನ್ನಾವರ ತಾಲ್ಲೂಕಿನ ಸಾಮಾಜಿಕ ಸ್ಥಿತಿಗತಿ ಇಲ್ಲಿ ಚಿತ್ರಣವಾಗಿದೆ. ಹೀಗಾಗಿ ಯಕ್ಷಗಾನಕ್ಕೆ ಸಂಬಂಧಪಡದ ಓದುಗನಿಗೂ ಇಷ್ಟವಾಗಿ, ಆ ಕಾಲದಲ್ಲಿ ರಾಜಿ ಪಂಚಾಯತಿಕೆ ವ್ಯವಸ್ಥೆ, ಮದುವೆ-ಮುಂಜಿ ನಡೆಯುತ್ತಿದ್ದ ಬಗೆ, ಕೃಷಿ ಕಾಯಕ, ಸಂಪರ್ಕ-ಸಂವಹನದ ನಿಧಾನಗತಿಯ ಸುಧಾರಣೆ - ಇವೆಲ್ಲವೂ ಕುತೂಹಲದಿಂದ ಓದಿಸಿಕೊಂಡು ಹೋಗುತ್ತದೆ. ಇದರ ಜೊತೆಗೆ, 1970ರ ದಶಕದಲ್ಲಿ ನಾರಾಯಣ ಭಟ್ಟರು ಸಂಘಟಿಸಿದ ಸಂಯುಕ್ತ ಮೇಳದ ಅಧ್ಯಾಯ ಓದಿದರೆ, ಆ ಕಾಲದ ಯಕ್ಷಗಾನ ರಂಗಭೂಮಿಯ ಇತಿಹಾಸದ ಮೇಲೂ ಬೆಳಕು ಚೆಲ್ಲುತ್ತದೆ. ಅದೇ ರೀತಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಅದೆಷ್ಟೋ ಕಲಾವಿದರು ಪ್ರಸಿದ್ಧರಾಗಿದ್ದರೂ, ಅಲ್ಲಿ ಪೂರ್ಣಪ್ರಮಾಣದ ವ್ಯವಸಾಯಿ ಮೇಳವೊಂದು ಹುಟ್ಟಿ ಉಳಿದು ಬೆಳೆದು ಬಂದುದಿಲ್ಲ ಎಂಬ ಅಂಶವೂ ಕುತೂಹಲ ಮೂಡಿಸುತ್ತದೆ.

ಯಕ್ಷಗಾನ ಮೇಳ ಕಟ್ಟಿ ಸಾಕಷ್ಟು ನೋವುಂಡೂ ನಾರಾಯಣ ಭಟ್ಟರು ಆರೋಗ್ಯವಂತರಾಗಿದ್ದುದು ಹೇಗೆ ಎಂಬುದಕ್ಕೆ ಅಧ್ಯಾಯವೊಂದರಲ್ಲಿ ಉತ್ತರ ದೊರೆಯತ್ತದೆ. ಜೊತೆಗೆ, ಬಂದದ್ದನ್ನು ಬಂದಂತೆ ಸ್ವೀಕರಿಸುವ ಗುಣವಿರಬೇಕೆಂಬ ತತ್ವಜ್ಞಾನದ ದರ್ಶನದ ಅರಿವೂ ಆಗುತ್ತದೆ. ನಿರೂಪಕ, ಕಲಾವಿದ ಶಿವಾನಂದ ಹೆಗಡೆಯವರು 90 ಹರೆಯದ ನಾರಾಯಣ ಭಟ್ಟರನ್ನು ಮಾತನಾಡಿಸಿ, ಅವರ ಬಾಯಿಯಿಂದ ಹಳೆಯ ನೆನಪುಗಳನ್ನೆಲ್ಲ ಕೆದಕಿ ಕೆದಕಿ, ಅವರ ಪಾಲಿಗೆ ಯಕ್ಷಗಾನ ಮತ್ತು ಸ್ವಂತ ಬದುಕಿನ ಅವಿನಾಭಾವ ಸಂಬಂಧವನ್ನು ತೆರೆದಿಟ್ಟು, ಈ ಅತ್ಯಮೂಲ್ಯವಾದ, ಯಕ್ಷಗಾನದ ಒಂದು ಕವಲಿನ ಇತಿಹಾಸವನ್ನೂ ಸಾರಬಲ್ಲಂತಹ ಕೃತಿಯನ್ನು ಕಟ್ಟಿಕೊಟ್ಟಿದ್ದಾರೆ.

ಪೇಳುವೆನೀ ಕಥಾಮೃತವ ಎಂಬಲ್ಲಿಂದ ತೊಡಗಿ ಬಾಳ ಮುಸ್ಸಂಜೆವರೆಗಿನ 12 ಅಧ್ಯಾಯಗಳಲ್ಲಿ ಮೂಡಿಬಂದಿರುವ ಆಟದ ಮೇಳ ಕೃತಿಯು ಯಕ್ಷಗಾನದ ಆಸಕ್ತರಿಗೆ ಪ್ರೇರಣಾದಾಯಿ ಕೈದೀವಿಗೆಯೂ ಆಗಬಹುದು.

‌ನಿರೂಪಣೆ: ಕೆರೆಮನೆ ಶಿವಾನಂದ ಹೆಗಡೆ

ಪ್ರ: ಯಾಜಿ ಪ್ರಕಾಶನ

ಸಂ: 9448722800

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT