ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಓದು: ಸ್ತ್ರೀ ಜಗತ್ತಿನ ಬೆಳಕಿನ ಗುಚ್ಛಗಳು

Last Updated 14 ಮೇ 2022, 19:30 IST
ಅಕ್ಷರ ಗಾತ್ರ

ಹೆಣ್ಣಿನ ಕಣ್ಣು, ಕರುಳು ನೋಡಿದ ಸಂಕಥನಗಳ ಗುಚ್ಛಗಳನ್ನು ಬೆನಕ ಬುಕ್ಸ್‌ ಬ್ಯಾಂಕ್‌ ಹೊರತಂದಿದೆ. ಬೇರೆ ಬೇರೆ ಕ್ಷೇತ್ರಗಳಲ್ಲಿ ಸಕ್ರಿಯರಾಗಿರುವ ಲೇಖಕಿಯರು ತಮ್ಮ ವೃತ್ತಿ ಹಾಗೂ ಬದುಕಿನ ಅನುಭವಗಳನ್ನು ಕಥನ ರೂಪದಲ್ಲಿ ಹೇಳಿರುವ ಕೃತಿಗಳಿವು. ತಾವು ಕಂಡ, ಅನುಭವಿಸಿದ, ಅನುಭವಿಸುತ್ತಲೇ ಇರುವ ಘಟನೆಗಳನ್ನು ಸ್ಫೂರ್ತಿ ನೀಡಬಹುದಾದ ಕಥನಗಳನ್ನಾಗಿ ನಿರೂಪಿಸಿದ್ದಾರೆ.

ವಿವಿಧ ಪತ್ರಿಕೆ, ಮಾಧ್ಯಮ, ಡಿಜಿಟಲ್‌ ವೇದಿಕೆಗಳಲ್ಲಿ ಪ್ರಕಟವಾಗಿ ಹಾಗೆಯೇ ಮಾಯವಾಗಬಹುದಾಗಿದ್ದ ಬರಹಗಳನ್ನು ಒಂದೆಡೆ ಹಿಡಿದಿಟ್ಟು ಓದುಗರಿಗೆ ಕೊಡುವ ಪ್ರಯತ್ನ ಮಾಡಲಾಗಿದೆ. ನಾಲ್ಕು ಕೃತಿಗಳನ್ನು ಬರೆದವರ ಪೈಕಿ ಸುಧಾ ಶರ್ಮಾ, ಮಾಲತಿ ಭಟ್‌ ಪತ್ರಕರ್ತರು, ಚಿತ್ರ ಸಿ. ಅವರು ಆಪ್ತ ಸಮಾಲೋಚಕಿ, ಜೀವನ ಕೌಶಲ ತರಬೇತಿ ನೀಡುವವರು ಮತ್ತು ಶೋಭಾ ಹೆಗಡೆ ಬರಹಗಾರ್ತಿಯಾಗಿ ಗುರುತಿಸಿಕೊಂಡವರು. ಕೃತಿಗಳ ಕುರಿತ ಝಲಕ್‌ ಇಲ್ಲಿದೆ.

ದೀಪದ ಮಲ್ಲಿಯರು:ಬದುಕಿನಲ್ಲಿ ನಿಜ ಅರ್ಥದಲ್ಲಿ ಬೆಳಗಿ, ಸಮಾಜವನ್ನೂ ಬೆಳಗಿಸಿದ ಸಾಧಕಿಯರನ್ನು ಹುಡುಕಿ ಹೆಕ್ಕಿ ತೆಗೆದು ಅವರ ಕಥನ ಕಟ್ಟಿಕೊಟ್ಟಿದ್ದಾರೆ ಮಾಲತಿ ಭಟ್‌. ಬದುಕಿನ ಅಗ್ನಿದಿವ್ಯದಲ್ಲಿ ಬೆಂದು ಮತ್ತೆ ಪುಟಿದೆದ್ದು ಬೆಳೆದ ಅಸಾಧಾರಣ ಸಾಧಕಿಯರು ಇಲ್ಲಿದ್ದಾರೆ. ಉದ್ಯಮಿ ಕಲ್ಪನಾ ಸರೋಜ್‌, ಅಮೆರಿಕದಲ್ಲಿ ಉದ್ಯಮಿಯಾಗಿ ಬೆಳೆದ ಅನಿಲಾ ಜ್ಯೋತಿ ರೆಡ್ಡಿ, ಎವರೆಸ್ಟ್‌ ಏರಿದ ಅರುಣಿಮಾ ಸಿನ್ಹಾ, ಆ್ಯಸಿಡ್‌ ದಾಳಿಗೊಳಗಾಗಿಯೂ ಬದುಕು ಕಟ್ಟಿಕೊಂಡ ದಿಟ್ಟೆ ಲಕ್ಷ್ಮೀ ಅಗರ್‌ವಾಲ್‌... ಹೀಗೆ ಸಾಲು ಸಾಲು ಸಾಧಕಿಯರ ಕಥನಗಳು ಇಲ್ಲಿವೆ.

ಸಾವಿರ ಕಹಿಗಳ ನಡುವೆಯೂ ಜೀವನ ಪ್ರೀತಿಯನ್ನು ಉಳಿಸಿಕೊಂಡು ಮತ್ತೊಂದಿಷ್ಟು ಜನರನ್ನು ಬೆಳೆಸಿದ ಸ್ಫೂರ್ತಿಯ ಚಿಲುಮೆಗಳು ಈ ‘ದೀಪದ ಮಲ್ಲಿಯರು’. ಒಂದೇ ಗುಕ್ಕಿನಲ್ಲಿ ಓದಿಸಿಕೊಂಡು ಹೋಗುವ ಕಥನಗಳಿವು. ಹತಾಶ ಮನಸ್ಸುಗಳಿಗೆ ಒಂದಿಷ್ಟು ಗೆಲುವಿನ ಭರವಸೆ ತುಂಬಬಲ್ಲ ಶಕ್ತಿ ಈ ಕಥನಗಳಿಗಿದೆ.

ನಮ್ಮೊಳಗೆ ನಾವು:ವ್ಯಕ್ತಿತ್ವ ವಿಕಸನಕ್ಕೆ ಬೇಕಾದ ಪರಿಕರಗಳ ಗುಚ್ಛವಾಗಿದೆ ಈ ಕೃತಿ. ಸಣ್ಣ ಸಣ್ಣ ಉದಾಹರಣೆಗಳು, ಸನ್ನಿವೇಶಗಳ ಉಲ್ಲೇಖಗಳು ಓದುಗ ತನ್ನನ್ನು ತಾನು ಪ್ರಶ್ನಿಸಿಕೊಳ್ಳುವ ಹಾಗೆ ಮಾಡುತ್ತವೆ. ಎಲ್ಲ ವಯೋಮಾನದವರನ್ನೂ ತಲುಪುವ ಪ್ರಯತ್ನ ಇಲ್ಲಿನ ಲೇಖನಗಳಲ್ಲಿದೆ. ಕೆಲವು ಸ್ವಗತಗಳಂತೆ, ಅನುಭವ ಕಥನಗಳಂತೆ ಹಾಗೂ ಕೆಲವು ಸ್ವಾನುಭವದ ಲಹರಿಗಳಂತೆ ಈ ಲೇಖನಗಳು ಮೂಡಿಬಂದಿವೆ. ಹಾಗೆಂದು ಇವೇನೂ ತಿಳಿಹೇಳುವ ಬೋಧನೆಗಳಲ್ಲ. ಸ್ವಾವಲೋಕನಕ್ಕೆ ಎಡೆಮಾಡಿಕೊಡುವ ಸಾಲುಗಳು. ಸಹಜವಾಗಿರಿ (ಇರುವಂತೆ ತೋರುವುದು) ಎಂದು ಹೇಳಿರುವ ಲೇಖನದ ಹಾಗೆಯೇ ಕೃತಿಯೂ ಅಷ್ಟೇ ಸಹಜ ಮತ್ತು ಸರಳವಾಗಿದೆ.

ಅವಳೆಂಬ ಸುಗಂಧ:ಹಳ್ಳಿಯಲ್ಲಿ ಕಾಣುವ ಮಹಿಳಾ ಜಗತ್ತಿನ ನಿತ್ಯ ಜೀವನ ಸಂಗತಿಗಳ ಪುಟ್ಟ ಪುಟ್ಟ ಫ್ರೇಮ್‌ಗಳಿವು. ಸಣ್ಣ ಸಂಗತಿಗಳನ್ನೇ ನವಿರು ಹಾಸ್ಯ ಬೆರೆಸಿ ನಿರೂಪಿಸಿದ್ದಾರೆ ಲೇಖಕಿ. ಅತ್ತೆ ಸೊಸೆಯ ಕಾಳಗ ಸಾಯುವವರೆಗೂ ಮುಂದುವರಿದು, ಕೊನೆಗೆ ಅಜ್ಜ ಸರಳ ಸೂತ್ರದಲ್ಲಿ ಬಗೆಹರಿಸುವ ಸಂಗತಿ, ‘ಹಿರಿಯಬ್ಬೆ’ಯ ವ್ಯಕ್ತಿ ಚಿತ್ರಣ, ಅಜ್ಜಿ ಕತೆಗಳ ಜೊತೆಗೆ ಬರುವ ಸಂಭಾಷಣೆಗಳು ಹೀಗೆ ಒಟ್ಟಾರೆ ಸಹಜ ಬದುಕಿನ ಚಿತ್ರಗಳಿವು.

ಬರಹಗಳಲ್ಲಿ ಮಲೆನಾಡಿನ ಪರಿಸರ, ಜನಜೀವನ, ವ್ಯವಹಾರದ ಬದುಕು ಹಾದು ಹೋಗುತ್ತವೆ. ನಮ್ಮದೇ ಅನ್ನಬಹುದಾದ ಸಂಗತಿಗಳೇ ಅನ್ನಿಸುವಷ್ಟು ಆಪ್ತವಾಗುತ್ತವೆ.

ಅನಾಮಿಕಳ ಅಂತರಂಗ:ಲೇಖಕಿಯ ಅನುಭವದ ಮೂಸೆಯಿಂದ ಹೊರಬಂದ ನೈಜ ಘಟನೆಗಳು. ಪಾತ್ರಗಳಿಗೆ ಹೆಸರು ಕೊಟ್ಟಿಲ್ಲ. ಆದರೆ, ಪಾತ್ರಗಳ ಮನಸ್ಸಿನ ಸಂವೇದನೆಯನ್ನು ಕಟ್ಟಿಕೊಟ್ಟಿದ್ದಾರೆ. ಹದಿಹರೆಯದ ಹೆಣ್ಣು ಮಕ್ಕಳಿಂದ ಹಿಡಿದು ಈಗಷ್ಟೇ ಉದ್ಯೋಗಕ್ಕೆ ಸೇರಿರುವವರು, ಉದ್ಯೋಗ ಕ್ಷೇತ್ರದಲ್ಲಿ ಹಲವು ವೈಪರೀತ್ಯ ಎದುರಿಸಿ ಹಣ್ಣಾಗಿರುವವರು ಈ ನೈಜ ಕಥನಗಳನ್ನು ಓದಬೇಕು. ಒಂದಿಷ್ಟು ಹೊಸ ಬೆಳಕು ಕಾಣಿಸಬಹುದು.

ಪ್ರತಿಯೊಬ್ಬರ ಜೀವನದಲ್ಲೂ ಸಮಸ್ಯೆ ಇರುತ್ತದೆ. ಸಮಸ್ಯೆಯನ್ನು ಹೇಗೆ ನೋಡುತ್ತೇವೆ ಎನ್ನುವುದು ಮುಖ್ಯ. ನಾವು ಸಮಸ್ಯೆಯನ್ನು ಮಾತ್ರ ಗಮನಿಸುವ ಬದಲು ಪರಿಹಾರವನ್ನೂ ಫೋಕಸ್‌ ಮಾಡಿದಾಗ ಅವಕಾಶಗಳು ತೆರೆದುಕೊಳ್ಳುತ್ತವೆ ಎಂದಿದ್ದಾರೆ ಲೇಖಕಿ. ಎಲ್ಲ ಲೇಖನ ಹಾಗೂ ಘಟನೆಗಳಿಗೆ ಈ ಮಾತು ಅನ್ವಯಿಸುತ್ತದೆ.

ಸಾವಿನ ಸನಿಹಕ್ಕೆ ಹೋಗಿಬಂದವರು, ಚಿಂತೆಯಲ್ಲಿ ಒದ್ದಾಡಿ ಖಿನ್ನರಾಗಿರುವವರು ಹೊಸ ಬದುಕಿನತ್ತ ಹೊರಳಿರುವ ಘಟನೆಯೊಂದಿಗೆ ಇಲ್ಲಿನ ಕಥೆಗಳು ಅಂತ್ಯಗೊಳ್ಳುತ್ತವೆ. ಹಾಗಾಗಿ ಇದೊಂದು ಸ್ಫೂರ್ತಿಯ ಕಥನಗಳ ಗುಚ್ಛ ಎಂದು ಕರೆಯಬಹುದು.

ಎಲ್ಲ ಕೃತಿಗಳ ಪ್ರಕಾಶಕರು: ಬೆನಕ ಬುಕ್ಸ್‌ ಬ್ಯಾಂಕ್‌, ಶಿವಮೊಗ್ಗ.
ಸಂ: 73384 37666

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT