ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಓದು | ಬಹುರೂಪಿ ಬಿಡುಗಡೆ

Published 4 ಜೂನ್ 2023, 0:18 IST
Last Updated 4 ಜೂನ್ 2023, 0:18 IST
ಅಕ್ಷರ ಗಾತ್ರ

ಭಾಷೆ–ಊಟ ಭಿನ್ನವಾದ ಎರಡು ಕುಟುಂಬಗಳ ಎರಡು ಕೂಸುಗಳು ಜೊತೆಯಾಗುತ್ತವೆ. ಹಾಗೆ ಕಂದಮ್ಮಗಳು ಜೊತೆಯಾದಾಗ – ‘ಅಮ್ಮಾ ಅಂದವು, ಅಜ್ಜೀ ಎಂದವು / ನುಡಿ ನಲಿಯಿತು.’ ‘ನುಡಿ’ ಹೆಸರಿನ ಪದ್ಯದ ಈ ನುಡಿಚಿತ್ರ, ವಿದ್ಯಾರಶ್ಮಿ ಪೆಲತ್ತಡ್ಕರ ‘ಕೆರೆ–ದಡ’ ಸಂಕಲನದ ಬಹುತೇಕ ಕವಿತೆಗಳ ಹಂಬಲದಂತೆ ಕಾಣಿಸುತ್ತದೆ. ಜೀವನದ ದಂದುಗಗಳನ್ನು ಮಗುವಿನ ಮುಗ್ಧತೆಯ ಶಕ್ತಿಯಲ್ಲಿ ದಾಟಿ, ಬಿಡುಗಡೆಯನ್ನು ಹಂಬಲಿಸುವ ರಚನೆಗಳು ಈ ಸಂಕಲನದಲ್ಲಿವೆ.

ಇಲ್ಲಿನ ಬಿಡುಗಡೆ ಭೌತಿಕ–ಮಾನಸಿಕ ರೂಪದ್ದೂ ಹೌದು, ತಾತ್ವಿಕ ನೆಲೆಗಟ್ಟಿನದೂ ಹೌದು. ಮಗುವಿನ ಸಿಂಗಾರದ ಪ್ರಕ್ರಿಯೆಯನ್ನು ಚಿತ್ರಿಸುವ ‘ನವಜಾತ ಕವನ’ ಎನ್ನುವ ರಚನೆ, ಸಿಂಗರದ ಸಂಭ್ರಮದ ತುದಿಯಲ್ಲಿ, ‘ಇನ್ನೀಗ ನೀನು ಜಗದ ಕೂಸು’ ಎನ್ನುತ್ತದೆ. ತಾಯೊಬ್ಬಳ ವಾತ್ಸಲ್ಯದ ಚೌಕಟ್ಟಿನ ವಿಸ್ತರಣೆಯಂತೆ ಕಾಣಿಸುವ ಈ ರಚನೆ, ಮಗುವಿಗೂ ತಾಯಿಗೂ ಒಂದು ಬಗೆಯ ಬಿಡುಗಡೆಯೂ ಹೌದು. ‘ನೆಲದಲ್ಲಿ ಸಿಕ್ಕ ನಗೆ’ ಕವಿತೆಯನ್ನು ಗಮನಿಸಿ. ಹೂವಿನ ನೆಪದಲ್ಲಿ ಅಜ್ಜಿ–ಅಮ್ಮನ ಕಳ್ಳುಬಳ್ಳಿ ನೆನಪುಗಳನ್ನು ಕವಯಿತ್ರಿಯಲ್ಲಿ ಮೊಳೆಯಿಸುವ ಈ ಕವಿತೆ, ಗಿಡದೊಂದಿಗೆ ಹೂವು ತೊಟ್ಟು ಮುರಿದುಕೊಳ್ಳುವ ಗಳಿಗೆಯನ್ನು – ಅಂಗಿ ಕಳಚಿದ ಹಾಗೆ ತೊಟ್ಟು ಕಳಚುವೆಯಲ್ಲ’ ಎಂದು ಉದ್ಗರಿಸುತ್ತ, ‘ಬದುಕ ಮೋಹದ ಮರದಲಿರುವವರಿಗೆಲ್ಲ ನಿನ್ನ ದರ್ಶನವಾಗಲೊಮ್ಮೆ’ ಎಂದು ಹಂಬಲಿಸುತ್ತ, ‘ಬಿಟ್ಟು ಹೊರಡುವುದು ಯಾರಿಗೂ ಕಷ್ಟವಲ್ಲ’ ಎನ್ನುವ ಬಿಡುಗಡೆಯ ಅನಿವಾರ್ಯತೆಯನ್ನು ಕಾಣಿಸುತ್ತದೆ.

‘ಗೌರೀದುಃಖ’ ಸಂಕಲನದ ನಂತರದ, ವಿದ್ಯಾರಶ್ಮಿ ಅವರ ಎರಡನೇ ಸಂಕಲನವಿದು. ಮೋಹಕ ಚಿತ್ರಗಳ ಸರಮಾಲೆಯಂತಿರುವ ಈ ಸಂಕಲನದ ರಚನೆಗಳು, ಗ್ರೂಪ್‌ ಫೋಟೊಕ್ಕಾಗಿ ಹಂಬಲಿಸುವ ಹಾಗೂ ಚದುರಂಗದ ಚೌಕದಿಂದ ಹೊರಬಿದ್ದ ಕಾಯಿಗಳನ್ನು ಮರಳಿ ಚೌಕಕ್ಕೆ ತಂದು ‘ನೋಡಲೆಷ್ಟು ಚಂದ’ ಎಂದು ಭಾವಿಸುವ ಜೀವಪ್ರೀತಿಯನ್ನು ಸ್ಫುರಿಸುವ ಗುಣ ಹೊಂದಿವೆ.

ಕೆರೆ–ದಡ

ಲೇ: ವಿದ್ಯಾರಶ್ಮಿ ಪೆಲತ್ತಡ್ಕ

ಪ್ರ: ಬಹುರೂಪಿ ಬೆಂಗಳೂರು.  

ಸಂ: 7019182729 ಪು: 72; ಬೆ: ರೂ. 100

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT