ಭಾನುವಾರ, 1 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಓದು: ಹುಡುಕಾಟದ ಕಣ್ಣು ಕಾಣಿಸಿದ ಬರಹಗಳು

Published 5 ಆಗಸ್ಟ್ 2023, 23:31 IST
Last Updated 5 ಆಗಸ್ಟ್ 2023, 23:31 IST
ಅಕ್ಷರ ಗಾತ್ರ

ಪ್ರವಾಸ ಕಥನಗಳ ಮಾದರಿಗಳು ಹಲವು. ಕಂಡದ್ದನ್ನು ಚಿತ್ರಿಸಿ, ಆ ಸಂದರ್ಭಕ್ಕೆ ಹಗುರಾಗುವುದು ಸಾಮಾನ್ಯವಾಗಿ ಆಯ್ಕೆ ಮಾಡಿಕೊಳ್ಳುವ ದಾರಿ. ರಹಮತ್ ತರೀಕೆರೆ ಅವರ ‘ಜೆರುಸಲೆಂ’ ಪ್ರವಾಸ ಚಿಂತನೆಯ ಕೃತಿ. ಹೀಗಾಗಿಯೇ ಅದು ಅನುಭವದಾಚೆಗೆ ಅಧ್ಯಯನ, ಪರಾಮರ್ಶೆ, ಶೋಧನೆ ಹೀಗೆ ಬಿಳಲುಗಳನ್ನು ಕಾಣಿಸಿದೆ. ನೇಪಾಳ, ಜೋರ್ಡಾನ್, ಈಜಿಪ್ಟ್, ಪ್ಯಾಲೆಸ್ತೈನ್, ಇಸ್ರೇಲ್, ಟರ್ಕಿ, ಮಲೇಷ್ಯಾ, ಜರ್ಮನಿ, ಭೂತಾನ್, ನೆದರ್‌ಲ್ಯಾಂಡ್ಸ್‌, ಕ್ರೊಯೇಷಿಯಾ, ಸ್ಲೊವೇನಿಯಾ ಮುಂತಾದೆಡೆಗೆ ಪ್ರವಾಸಕ್ಕೆ ಹೋದಾಗಿನ ಅನುಭವ ಪ್ರೇರೇಪಿಸಿದ ಚಿಂತನಾ ಬರಹಗಳು ಇವು. ನಡು ಏಷ್ಯಾ, ಯೂರೋಪು, ಹಿಂದೂಸ್ತಾನ, ಕರ್ನಾಟಕ, ಪ್ರವಾಸತತ್ವ ಹೀಗೆ ವಿಭಾಗಗಳಾಗಿ ಇಲ್ಲಿನ 30 ಪ್ರಬಂಧಗಳನ್ನು ರಹಮತ್ ವಿಂಗಡಿಸಿದ್ದಾರೆ. ಆದರೆ, ಓದಿನ ಸುಖದ ವಿಷಯದಲ್ಲಿ ಎಲ್ಲವುಗಳದ್ದೂ ಏಕತ್ರ ಪರಿಣಾಮ. 

‘ನೀಲಕುರಿಂಜಿಯ ವನಗಳಲಿ’ ಎನ್ನುವ ಬರಹವನ್ನೇ ಗಮನಿಸೋಣ. ‘ಕುರಿಂಜಿ ನೋಡಲು ಮೊಳಕಾಲೆತ್ತರದ ಗಿಡ; ಅದರ ಕಪ್ಪುಹಸುರಿನ ದಪ್ಪನೆಯ ಎಲೆಗಳಿಗೆ ಹಸ್ತರೇಖೆಯಂತೆ ಎದ್ದುಕಾಣುವ ಗೀರುನರ; ಚಳಿಗೆದ್ದ ನವಿರಿನಂತೆ ಸೂಕ್ಷ್ಮಸುಂಕು; ಅಂಚಲ್ಲಿ ಗರಗಸದ ಹಲ್ಲಿನಂತೆ ಕಚ್ಚು.’ ಈ ರೀತಿಯಲ್ಲಿ ಕಣ್ಣಿಗೆ ಕಟ್ಟುವ ಚಿತ್ರಬರಹವು ಕ್ರಮೇಣ ಒಂದು ಸಾಂಸ್ಕೃತಿಕ ಅಧ್ಯಯನದ ದರ್ಶನವಾಗಿ ಬೆಳೆಯುತ್ತದೆ. ಕುರಿಂಜಿ ಕುರಿತ ಬರಹಗಳಿಗಾಗಿ ಹುಡುಕಾಡಿರುವ ಲೇಖಕರು,  ಬಿಜಿಎಲ್ ಸ್ವಾಮಿ ಅವರ ‘ಹಸಿರಹೊನ್ನು’ವಿನಲ್ಲು ಇದರ ಪ್ರಸ್ತಾಪ ಇಲ್ಲದ್ದನ್ನು ಗುರುತಿಸುತ್ತಾರೆ. ಎ.ಕೆ. ರಾಮಾನುಜನ್ ಇಂಗ್ಲಿಷ್‌ಗೆ ಅನುವಾದಿಸಿದ ಪ್ರಾಚೀನ ಸಂಗಂ ಸಾಹಿತ್ಯದಲ್ಲಿನ ಕುರಿಂಜಿ ತಿಣೈನ ಎರಡು ಪದ್ಯಗಳನ್ನು ನಮ್ಮ ಓದಿಗೆ ಹಿಡಿದು ಕೊಡುತ್ತಾರೆ. ಕಂಡುಬಂದ ಜಾಗೆಗಳನ್ನು ಹೀಗೆ ಹುಡುಕಾಟದ ಕಣ್ಣುಗಳಿಂದ ಬಗೆ ಬಗೆದು ತೆಗೆದು, ಮೊಗೆದು ಕೊಟ್ಟಂತಹ ಬರಹಗಳು ವಿಸ್ತಾರವಾದ ಓದಿನ ತೃಪ್ತಿಯನ್ನು ಒದಗಿಸುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT