ಭಾನುವಾರ, 3 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ: ಕಾಲ್ಪನಿಕ ಕಥೆಗಳ ಗುಚ್ಛ ‘ಗ್ರಿಮ್ಸ್‌ ಫೇರಿ ಟೇಲ್ಸ್‌’

Published 23 ಸೆಪ್ಟೆಂಬರ್ 2023, 23:30 IST
Last Updated 23 ಸೆಪ್ಟೆಂಬರ್ 2023, 23:30 IST
ಅಕ್ಷರ ಗಾತ್ರ

ಇಂದಿನ ಮಕ್ಕಳಿಗೆ ಕಥೆ ಹೇಳುವುದು ಸುಲಭವಲ್ಲ. ಅವರ ಕುತೂಹಲ ತಣಿಸುವ, ಅವರಲ್ಲೇಳುವ ಪ್ರಶ್ನೆಗಳಿಗೆ ಸಾವಧಾನದ ಉತ್ತರ ನೀಡಲು ತುಸು ತಾಳ್ಮೆ, ಬಲು ಜಾಣ್ಮೆ ಎರಡೂ ಬೇಕಾಗುತ್ತವೆ. ಕಲ್ಪನಾಲೋಕವೊಂದನ್ನು ವಿಸ್ತರಿಸುವ ಕಥೆಗಳನ್ನು ಮಕ್ಕಳು ಎಲ್ಲ ಕಾಲಕ್ಕೂ ಕೇಳುತ್ತಾರೆ. ಫೋನ್‌, ಟ್ಯಾಬ್‌  ಹಿಡಿದ ಮಕ್ಕಳ ಮನೋಲೋಕವನ್ನು ಇಂಥ ಕಾಲ್ಪನಿಕ ಕಥೆಗಳು ಮತ್ತಷ್ಟು ಹಿಗ್ಗಿಸುತ್ತವೆ. 

 ‘ಗ್ರಿಮ್ಸ್‌ ಫೇರಿ ಟೇಲ್ಸ್‌’ನ ಸರಣಿ ಕಥಾ ಸಂಕಲನಗಳು ಹೊಸ ಬಗೆಯ ಕಲ್ಪನಾಲೋಕಕ್ಕೆ ಕರೆದುಕೊಂಡು ಹೋಗುತ್ತವೆ. ಇವನ್ನು ಎಂ.ರಾಮರಾವ್‌ ಕನ್ನಡಕ್ಕೆ ಬಹಳ ಸರಳವಾಗಿ, ಸಮರ್ಥವಾಗಿ ಅನುವಾದಿಸಿಕೊಟ್ಟಿದ್ದಾರೆ. 

ಈ ಎಲ್ಲ ಸಂಕಲನಗಳಲ್ಲಿ ಇರುವ ಕಥೆಗಳ ವಿಶಿಷ್ಟತೆ–ಸಾಮಾನ್ಯರಲ್ಲಿ ಸಾಮಾನ್ಯರೇ ಕಥಾನಾಯಕರಾಗಿರುವುದು. ಆ ಮೂಲಕ ಅವರೇ  ಬದುಕಿನ ನಾಯಕರು ಎಂಬುದನ್ನು ಮಕ್ಕಳ ಪುಟ್ಟ ಮನಸ್ಸಿಗೆ ಮನದಟ್ಟು ಮಾಡಿಸುವಂತಿದೆ. ಇದಕ್ಕೆ ಒಂದು ನಿದರ್ಶನ ‘ಕುರುಬರ ಹುಡುಗ’ ಕಥಾಸಂಕಲನದಲ್ಲಿರುವ ‘ಕುರುಬರ ಹುಡುಗ’ ಕಥೆಯಲ್ಲಿ ಬಹಳ ಬುದ್ಧಿವಂತ ಕುರುಬರ ಹುಡುಗನೊಬ್ಬ ಇರುತ್ತಾನೆ. ಆತ ಎಂಥ ಪ್ರಶ್ನೆಗಳಿಗೂ ಬುದ್ಧಿವಂತಿಕೆಯಿಂದ ಉತ್ತರಿಸುವ ಛಾತಿ ಪಡೆದಿರುತ್ತಾನೆ. ಕೊನೆಗೆ ಆಸ್ಥಾನದ ಚಕ್ರವರ್ತಿಯೇ ಅವನ ಬುದ್ಧಿವಂತಿಕೆಗೆ ಶರಣಾಗಿ ಅವನನ್ನು ದತ್ತುಪುತ್ರನಾಗಿ ಸ್ವೀಕರಿಸುತ್ತಾನೆ ಎಂಬಲ್ಲಿಗೆ ಕಥೆ ಮುಗಿಯುತ್ತದೆ. ಇನ್ನೊಂದು ಉದಾಹರಣೆಯಾಗಿ, ಬಡರೈತ ಸ್ವರ್ಗಕ್ಕೆ ಹೋಗುವ ಕಥೆಯಿದೆ. ಹೊಲದಲ್ಲಿ ಕಷ್ಟಪಟ್ಟು ದುಡಿಯುವ ರೈತ ಸತ್ತುಹೋಗುತ್ತಾನೆ. ಬಡ ರೈತನ ಜತೆ ಶ್ರೀಮಂತನೊಬ್ಬನೂ ಸ್ವರ್ಗಕ್ಕೆ ಹೋಗುತ್ತಾನೆ. ಶ್ರೀಮಂತನಿಗೆ ಪ್ರೀತ್ಯಾದರ, ಮರ್ಯಾದೆ ಸಿಗುತ್ತದೆ. ಭೂಮಿಯಲ್ಲಿ ಶ್ರೀಮಂತ, ಬಡವ ಎಂಬ ಭೇದವಿರುವಂತೆ ಸ್ವರ್ಗದಲ್ಲಿಯೂ ಇದೆ ಎಂದು ಬಡರೈತ ಚಕಿತಗೊಳ್ಳುತ್ತಾನೆ. ಆಗ ಆ ಕಾವಲುಗಾರ  ‘ಈ ಸ್ವರ್ಗವೇ ಬಡವರ ಸ್ವತ್ತು. ಶ್ರೀಮಂತನಾದವರು ಅದರಲ್ಲಿಯೂ ಸ್ವರ್ಗದಲ್ಲಿ ವಾಸಿಸಲು ಅರ್ಹರಾದ ಶ್ರೀಮಂತರು ನೂರು ವರ್ಷಕ್ಕೊಮ್ಮೆ ಇಲ್ಲಿಗೆ ಬರುತ್ತಾರೆ’ ಎಂದು ಹೇಳುತ್ತಾನೆ. ಇಡೀ ಸ್ವರ್ಗವೇ ಬಡವನ ಸ್ವತ್ತಾಗುವ ಮೂಲಕ ಒಳ್ಳೆಯತನ, ಪ್ರಾಮಾಣಿಕತನ, ಕಾಯಕನಿಷ್ಠೆ ಎತ್ತಿಹಿಡಿಯುವ ಒಳದನಿಯೊಂದು ಈ ಕಥೆಯಲ್ಲಿ ಅನಾವರಣಗೊಳ್ಳುತ್ತದೆ.

ಈ ಸಂಕಲನಗಳಲ್ಲಿರುವ ಎಲ್ಲ ಕಥೆಗಳು ದೇಶ, ಗಡಿ, ಭಾಷೆ ಎಲ್ಲವನ್ನೂ ಮೀರಿವೆ. ಯಾವ ಪಾತ್ರಕ್ಕೂ ಹೆಸರಿಲ್ಲ. ಪಾತ್ರಗಳ ಮನೋಧರ್ಮದಿಂದಲೇ ಅವನ್ನು ಗುರುತಿಸಲಾಗುತ್ತದೆ. ನಿತ್ಯ ರಾತ್ರಿ ಮಕ್ಕಳು ಕಥೆ ಕೇಳುವ ಅಭ್ಯಾಸ ಇಟ್ಟುಕೊಂಡಿದ್ದರೆ ಐಬಿಎಚ್‌ ಪ್ರಕಾಶನ ಹೊರತಂದಿರುವ ‘ಗ್ರಿಮ್ಸ್‌ ಫೇರಿ ಟೇಲ್ಸ್‌ನ’ ಸರಣಿ ಪುಸ್ತಕಗಳು ಸಹಾಯಕ್ಕೆ ಬರುತ್ತವೆ. ಈ ಸರಣಿಯಲ್ಲಿ ಒಟ್ಟು ಹತ್ತು ಕಥಾ ಸಂಕಲನಗಳಿವೆ. 

‘ಗ್ರಿಮ್ಸ್‌ ಫೇರಿ ಟೇಲ್ಸ್‌ ಸರಣಿ

ಮೂಲ ಲೇಖಕರು: ಜೇಕಬ್‌ ಗ್ರಿಮ್‌ ಮತ್ತಿ ವಿಲಿಯಮ್‌ ಗ್ರಿಮ್‌

ಅನುವಾದ: ಎಂ. ರಾಮರಾವ್

ಪ್ರಕಾಶನ: ಐಬಿಎಚ್‌ ಪ್ರಕಾಶನ

ಸಂಪರ್ಕ: 080–26676003 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT