ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೊದಲ ಓದು: ನನ್ನ ತಂಗಿ ಈಡಾ– ವಿಶಿಷ್ಟ ನಿರೂಪಣೆಯ ಪುಸ್ತಕ

ಹರ್ಷ ರಘುರಾಮ್ ಅನುವಾದಿತ ಪುಸ್ತಕ
Published : 14 ಸೆಪ್ಟೆಂಬರ್ 2024, 23:12 IST
Last Updated : 14 ಸೆಪ್ಟೆಂಬರ್ 2024, 23:12 IST
ಫಾಲೋ ಮಾಡಿ
Comments

ಸ್ವಾಭಿಮಾನವೇ ಮೈವೆತ್ತಂತ ಅಂತರ್ಮುಖಿ ಹೆಣ್ಣುಮಗಳೊಬ್ಬಳ ಸುತ್ತ ಹೆಣೆಯಲಾದ ಸುಂದರ ಕಾದಂಬರಿಯೇ ‘ನನ್ನ ತಂಗಿ ಈಡಾ’. ಬಾಲ್ಯದಿಂದಲೂ ಬರೀ ನೋವು, ಅಪಮಾನ, ಸಂಕಷ್ಟಗಳನ್ನೇ ತುಂಬಿಕೊಂಡಿದ್ದರೂ ಛಲಬಿಡದೇ ಬದುಕು ಕಟ್ಟಿಕೊಳ್ಳಲು ತಹತಹಿಸುವ ಹೆಣ್ಣುಮಗಳ ಕತೆಗೆ ಗಡಿ ಎಂಬುದು ಇರಬಹುದೇ?

ಜರ್ಮನಿಯ ಒಂದು ಹಳ್ಳಿಯಲ್ಲಿ ದೂರಾದ ಅಪ್ಪ, ಕುಡುಕ ಅಮ್ಮ ಹಾಗೂ ಬದುಕನ್ನು ಪ್ರೀತಿಸಲು ಕಾರಣ ಒಂದೇ ಎಂಬಂತಿರುವ ಪುಟ್ಟ ತಂಗಿ ‘ಈಡಾ’ ಹೀಗೆ ಇವರ ನಡುವೆ ಬದುಕನ್ನು, ಅದು ಕೊಟ್ಟ ಜವಾಬ್ದಾರಿಯನ್ನು ಜತೆ ಜತೆಗೆ ಸ್ವಾತಂತ್ರ್ಯದ ಖುಷಿಯನ್ನು ಅನುಭವಿಸಲು ಹೆಣಗಾಡುವ ದಿಟ್ಟ ಹೆಣ್ಣುಮಗಳೇ ಟಿಲ್ಡಾ. ಈಕೆಯ ಈ ಕಾದಂಬರಿಯ ಕಥಾನಾಯಕಿ.

ಸೂಪರ್ ಮಾರ್ಕೆಟ್‌ನಲ್ಲಿ ಕೆಲಸ ಮಾಡುತ್ತಾ, ಗಣಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತ, ದೂರದ ಬರ್ಲಿನ್‌ನಲ್ಲಿ ಪಿಎಚ್‌ಡಿ ಪದವಿ ಪಡೆಯುವ ಕನಸು ಕಾಣುತ್ತ, ನೋವು ನೀಗಿಕೊಳ್ಳಲು ಈಜುವುದನ್ನು ಧ್ಯಾನ ಮಾಡಿಕೊಂಡ ಟಿಲ್ಡಾ ಎಂಬ ಹರೆಯದ ಹುಡುಗಿಯ ಆಳದಲ್ಲಿ ಹುದುಗಿರಬಹುದಾದ ಆಸೆ, ಆಕಾಂಕ್ಷೆ, ಪ್ರೇಮವನ್ನು ಬಹಳ ಚಂದದ ನಿರೂಪಣೆಯಲ್ಲಿ ಕಟ್ಟಿಕೊಡಲಾಗಿದೆ. ಪುಟ್ಟ ‘ಈಡಾ’ ಮತ್ತು ಅವಳ ಬಣ್ಣದ ಪ್ರಪಂಚ ಮತ್ತು ಅದರ ವಿವರಗಳು ಒಟ್ಟು ಕಥನಕ್ಕೆ ಒದಗಿಬಂದ ದೊಡ್ಡ ರೂಪಕದಂತೆ ಭಾಸವಾಗುತ್ತದೆ. 

ಕಲಿಯಲು ಬರ್ಲಿನ್‌ಗೆ ಹೋಗುವ ಮುನ್ನ ಸಂಕೋಚ ಪ್ರವೃತ್ತಿಯ ಈಡಾಳನ್ನು ದಿಟ್ಟಳಾಗಿ ಮಾಡಬೇಕೆಂಬ ಟಿಲ್ಡಾ ಕನಸು, ಅದಕ್ಕಾಗಿ ಅವಳು ಹಾಕಿಕೊಳ್ಳುವ ಯೋಜನೆಗಳು ಏತನ್ಮಧ್ಯೆ ಸಹಜವೆಂಬಂತೆ ಆಗಿ ಹೋಗುವ ಪ್ರೀತಿ ಎಲ್ಲವನ್ನು ಜರ್ಮನಿಯ ಕಾದಂಬರಿಗಾರ್ತಿ ಕಾರೊಲೀನ ವಾಲ್‌ ಬಹಳ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ಇದನ್ನು ಕನ್ನಡೀಕರಿಸಿದ್ದಾರೆ ಹರ್ಷ ರಘುರಾಮ್‌.  ಸಮಕಾಲೀನ ಕಾದಂಬರಿಯೊಂದನ್ನು ಕನ್ನಡದ ಓದುಗರಿಗೆ ನೀಡಬೇಕೆಂಬ ಹರ್ಷ ಅವರ ಹಂಬಲವನ್ನು ಮೆಚ್ಚಲೇಬೇಕು. 

ಪ್ರೀತಿ ಮತ್ತು ಜವಾಬ್ದಾರಿಗಳ ನಡುವಿನ ಹೊಯ್ದಾಟದ ಕಥೆ ಸಾಮಾನ್ಯ ಎನಿಸಿದರೂ, ಹೇಳದೆಯೂ ಉಳಿಯುವ ಪ್ರೇಮದ ಸವಿಯನ್ನು ಕಾದಂಬರಿಯುದ್ದಕ್ಕೂ ಉಣಬಡಿಸಲಾಗಿದೆ. ಆಗಾಗ್ಗೆ ಬಂದು ಹೋಗುವ ಮಳೆ, ತಿನಿಸಿನ ಪದಾರ್ಥಗಳ ವಿವರಗಳು ಕಥೆಗೆ ದಟ್ಟ ಚೌಕಟ್ಟನ್ನು ಒದಗಿಸಿದೆ. ವಿಶಿಷ್ಟ ನಿರೂಪಣೆ ಓದಿನ ಹುರುಪನ್ನು ಹೆಚ್ಚಿಸುತ್ತದೆ. ಆದರೆ ಅನುವಾದವನ್ನು ಇನ್ನಷ್ಟು ಕನ್ನಡದ ಜಾಯಮಾನಕ್ಕೆ ಒಗ್ಗಿಸಲು ಮತ್ತು ಆರ್ದ್ರವಾಗಿಸುವ ನಿಟ್ಟಿನಲ್ಲಿ ಅನುವಾದಕರು ಪ್ರಯತ್ನಪಡಬೇಕಿತ್ತು. 

ನನ್ನ ತಂಗಿ ಈಡಾ ಮೂಲ: ಕಾರೊಲೀನ ವಾಲ್ ಕನ್ನಡಕ್ಕೆ: ಹರ್ಷ ರಘುರಾಮ್ ಪ್ರಕಾಶನ: ಛಂದ ಸಂ: 9844422782

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT