ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮರ್ಶೆ | ಬಟ್ಟೆಗಂಟಿದ ಬೆಂಕಿ - ಬಹುತ್ವದ ಪ್ರೀತಿ ಹುಟ್ಟಿಸುವ ಕವಿತೆಗಳು

Published 3 ಜೂನ್ 2023, 23:53 IST
Last Updated 3 ಜೂನ್ 2023, 23:53 IST
ಅಕ್ಷರ ಗಾತ್ರ

ಡಾ.ನಿಂಗಪ್ಪ ಮುದೇನೂರು

ವಿಶಾಲ್ ಮ್ಯಾಸರ್ ಮೂಲತಃ ವಿಜ್ಞಾನದ ವಿದ್ಯಾರ್ಥಿ. ಇನ್ನೂ ಆತನಿಗೆ ಇಪ್ಪತ್ತರ ಪ್ರಾರಬ್ಧದ ಪ್ರಾಯ! ಆದರೆ ಆತನ ಒಡಲೊಳಗೆ ತುಂಬಿರುವುದು ವರ್ತಮಾನದ ಆರದ ಕಿಚ್ಚು. ‘ಬಟ್ಟೆಗಂಟಿದ ಬೆಂಕಿ’ ಎಂಬುವ ಅರಿವಿನ ಕಾವ್ಯವ ಹೊತ್ತು ಸಾಗಿದ ಈ ಪರಿ 1970-80ರ ಕನ್ನಡ ದಲಿತ ಬಂಡಾಯದ ಕಾಲಮಾನವನ್ನು ನೆನಪಿಸುವಂತಿದೆ.

ಬಹುತ್ವದ ಕುರಿತು ಮಾತನಾಡುತ್ತಿರುವ ಈ ಹೊತ್ತಿನಲ್ಲಿ ಈ ಹುಡುಗ- ‘ಬಟ್ಟೆಗಂಟಿದ ಬೆಂಕಿ ಆರುವುದು ಬೇಡ ಹೊತ್ತಿ ಉರಿಯುವುದು ಬೇಡ ನನ್ನ ಹಾದಿಗೆ ದೀಪವಾದರೆ ಅಷ್ಟೇ ಸಾಕು’ ಎನ್ನುವ ಸದಾಶಯದ ಮಾತುಗಳನಾಡುತ್ತಿರುವುದು ಒಂದು ಮಹತ್ವದ ಬೆಳವಣಿಗೆ.

ತನ್ನ ಪ್ರಿಯ ಯೌವನಗಳಲ್ಲಿ ಕಳೆದುಹೋಗದೆ ಸಾಮಾಜಿಕ ಬಿಕ್ಕಟ್ಟುಗಳಿಗೆ, ಬದುಕಿನ ಅಸಹಾಯಕತೆಗೆ, ತನ್ನ ಸುತ್ತಲ ಕೇರಿಯ ಮಂದಿಯ ಶೋಚನೀಯ ಬದುಕಿಗೆ, ಅವರೊಳಗಿನ ಮೌಢ್ಯಕ್ಕೆ, ಗುಲಾಮಿತನಕ್ಕೆ, ಇನ್ನೂ ಜೀವಂತವಿರುವ ಅಸ್ಪೃಶ್ಯತೆಗೆ, ದೇವದಾಸಿ ಪದ್ಧತಿಗೆ, ಧರ್ಮಾಂಧತೆ, ಜಾತೀಯತೆ, ಪ್ರಭುತ್ವದ ಸರ್ವಾಧಿಕಾರ, ಯುದ್ಧದ ಭೀಕರತೆಗೆ ಒಡಲಗೊಂಡು ಬರೆಯುವ ಈ ಹುಡುಗನ ಕಾವ್ಯ ನಿಗಿ ಕೆಂಡದತಿದೆ. ಆದರೆ ನಾವಿಲ್ಲಿ ತಣ್ಣಗೆ ಕುಳಿತು ಮೈ ಮನ ಕಾಯಿಸಿಕೊಳ್ಳುವಂತಿಲ್ಲ. ಆದರೂ ಬೆಂಕಿ ಬೆಳಕಾಗುವ ಪರಿಯಂತೆ ಹಲವು ರೂಪಾಂತರಗಳನ್ನು ಇಲ್ಲಿನ ಕವಿತೆಗಳು ಕಂಡಿವೆ ಮತ್ತು ವರ್ತಮಾನವನ್ನು ಕಾಣಿಸಿವೆ. ಅಲ್ಲಲ್ಲಿ ಕಾವ್ಯ ಮೃದುಗೊಳ್ಳುವುದಕ್ಕೆ, ಹದವಾಗಿ ಸಾಂಗತ್ಯಗೊಳ್ಳುವುದಕ್ಕೆ ಪ್ರೇಮಕವಿತೆಗಳು ಬೇಕು. ಅಂತಹ ಕೆಲವು ಝಳಕು ಈ ಕೃತಿಯಲ್ಲಿವೆ.

ವಿಶಾಲನ ಕುಟುಂಬದೊಳಗಿನ ಅಜ್ಜಿಯ ಹಾಡು, ತಾಯಿಯವರ ಪದ, ಬಾಲ್ಯದ ಮಳೆ, ಕಾಮಣ್ಣನ ಹಾಡ್ಗತೆ ಈ ಎಲ್ಲಾ ಪರಂಪರೆಯ ಲಯಗಳು ಈ ಕೃತಿಗೆ ದಕ್ಕಿವೆ. ಜನಪದ ಪರಂಪರೆಯನ್ನು ‘ಕಣಜ’ ಎಂದು ನಂಬುವ ಈ ಕಾವ್ಯದ ಹುಡುಗ ಚಂದದ ಬಾಲ್ಯದ ಬೆಳಕನ್ನು ಅರಿವಾಗಿಸಿಕೊಂಡವ. ಬಯಲಲ್ಲಿ ಬಯಲಾಗುವ ಅವ್ವನನ್ನು ಕಾಣಿಸುವುದೇ ಇಲ್ಲೊಂದು ಸೋಜಿಗ.

‘ಮಯ್ಯ ತುಂಬಾ ಕನ್ನಡಿಯ ಸೀರೆ ಉಟ್ಟು ತಿಂಗಳದ ಚುಕ್ಕೆಗಳ ಬೆಳದಿಂಗಳ ಸೆರೆಗಲ್ಲಿ ತೋರಿಸುವ ದಿನವೂ...ಮಯ್ಯ ಮುರಿದು ಕುಡುಗೋಲು ಹಿಡಿದು ಜಗದ ಕಳೆ ಕಿತ್ತು ಬಿಸಿಲು ಎರವಲು ತರುವ’ ಈ ಅವ್ವ ಜಗದ ಅವ್ವಂದಿರಿಗಿಂತ ಭಿನ್ನ ಮತ್ತು ಅವಳು ಎಲ್ಲಿಯೂ ದಾಖಲಾಗದೆ ಬಯಲಲ್ಲಿ ಬಯಲಾಗುವಳು.

ಇನ್ನೊಂದೆಡೆ ಇದೇ ಕವಿ ವಿಶಾಲ್, ‘ನಾನೊಂದು ರೂಪಕ ಹುಡುಗಿ/ನನ್ನವರ ನೋವಿಗೆ, ನಿನ್ನವರ ತುಳಿತಕ್ಕೆ’ ಎನ್ನುವ ಸರಳ ಸಾಲುಗಳ ಮೂಲಕ ಎಚ್ಚರದ ಧ್ವನಿಯೊಂದನ್ನು ಬಹು ದೂರ ದಾಟಿಸುತ್ತಾರೆ.

ನಗುವಿಲ್ಲದ ಬುದ್ಧನನ್ನು ಷೋಕೇಶಿನಲ್ಲಿ ಇಟ್ಟುಕೊಂಡು ಸಂಭ್ರಮಿಸುವ ಹುಸಿ ವರ್ತಮಾನದ ನಡುವೆ ಮತ್ತೊಮ್ಮೆ ನಗುವ ಬುದ್ಧನಿಗಾಗಿ ಕಾಯುವ ಭರವಸೆಯ ಕಣ್ಣೊಂದು ಇಲ್ಲಿನ ಕವಿತೆಗಳಿಗೆ ಮೂಡಿದೆ. ಹಾಗೆಂದೇ, ಈ ಸಂಕಲನದ ಮುನ್ನುಡಿಯಲ್ಲಿ ಕನ್ನಡದ ವಿವೇಕವಾಗಿರುವ ಬರಗೂರು ರಾಮಚಂದ್ರಪ್ಪನವರು ವಿಶಾಲ್ ಮ್ಯಾಸರ್ ಅವರಿಗೆ ಇರುವ ಕಾವ್ಯಾಭಿವ್ಯಕ್ತಿಯ ಆಸಕ್ತಿ ಅಪರಮಿತವಾಗಿದೆ ಎಂದು ಸರಿಯಾಗಿ ಗುರುತಿಸಿದ್ದಾರೆ. ‘ನಾನು ಇದ್ದಿಲು’ ಎನ್ನುವ ಕವಿತೆಯಲ್ಲಿ ವಿಶಾಲ್ ಮ್ಯಾಸರ್ ಹೇಳುವುದು ಇಷ್ಟು: ‘ಇದ್ದಿಲು ನಾನು/ಕಪ್ಪೆಂದರೆ ಕಪ್ಪು/ಕತ್ತಲೆಯು ನಾಚುವಷ್ಟು
ಬದುಕೋ ಚಂದ್ರನಿಲ್ಲದ ರಾತ್ರಿ...’

ಈ ಬಗೆಯ ಪ್ರತಿಮಾ ರೂಪಕದ ಮೂಲಕ ಮಾತನಾಡುವ ಈ ಕವಿತೆ ಆಂತರ್ಯದಲ್ಲಿ ಕವಿಯ ತಣ್ಣನೆಯ ಅಗ್ಗಿಷ್ಟಗೆಯೊಂದನ್ನು ಪ್ರೀತಿಯಲ್ಲಿ ಅದ್ದಿ ತೆಗೆದಂತಿದೆ. ಇಂಥಲ್ಲೂ ಕವಿ ‘ಕನಸು ಕಾಣುವ ಹೊತ್ತಲ್ಲ ಗೆಳತಿ/ವಾಸ್ತವತೆ ಬೆನ್ನಟ್ಟಿ ಬರುತ್ತಿದೆ ನನ್ನನ್ನು, ನಿನ್ನನ್ನು, ಅವನನ್ನು, ಇವಳನ್ನು ಅಷ್ಟೇ ಏಕೆ ಇಡೀ ದೇಶವನ್ನು’ ಎಂದು ಬರೆಯಬಲ್ಲ. ಹಾಗೆ ಅಜಾನ್ ಕೂಗಿಗೆ ಸೆರಗು ಹೋದೆವ ಅವ್ವನನ್ನು, ಶವಯಾತ್ರೆಗೆ ಹೆಗಲು ಕೊಡುತ್ತಿದ್ದ ಕರೀಂ ಸಾಬನನ್ನು, ದಮನಿತರ ಸೋಗೆ ಬಿಲದಲ್ಲಿ ಕ್ಯಾಂಡಲ್ ಬೆಳಗಿದ ಪೀಟರ್‌ನನ್ನು ಹುಡುಕುವ ಬಗೆ, ಅಕ್ಕನು ತನ್ನ ಅರಿವ ದಾರಿಯ ದೈವಿಕ ಬೆಳಕು ಚೆನ್ನಮಲ್ಲಿಕಾರ್ಜುನನನ್ನು ಹುಡುಕುವ ಪರಿಗಿಂತಲೂ ತುಂಬಾ ವಿವೇಕವುಳ್ಳದ್ದು.

ಸಂತರು ನುಡಿದ ಸಾಮಾಜಿಕ ಎಚ್ಚರದ ನುಡಿ ನೂಲನ್ನು ಹಿಡಿದು ಮಾನವತೆಯ ಎಡೆ ಹಾಕುವ ಕಾರ್ಯವನ್ನು ಈ ಕವಿ ಮತ್ತು ಈ ಕಾವ್ಯ ಮಾಡಿರುವುದರಿಂದ ಈ ಕೃತಿಗೊಂದು ಸಾರ್ಥಕ್ಯ ಒದಗಿನಿಂತಿದೆ. ಇಂತಹ ಜೀವಮಿಡಿತದ ಕೃತಿ ಪ್ರಕಟಿಸಿದ ದುಡಿಮೆ ಪ್ರಕಾಶನಕ್ಕೂ, ಮುಖಪುಟ ವಿನ್ಯಾಸಗೊಳಿಸಿದ ಸೃಜನ್ ಅವರಿಗೂ ಅಭಿನಂದನೆಯನ್ನು ಹೇಳಲೇಬೇಕು. ‘ಬಾ ಕವಿತೆ ಬೇಲಿ ಇಲ್ಲದ ಬಯಲನ್ನೊಮ್ಮೆ ಸುತ್ತು ಹಾಕೋಣ’ ಎನ್ನುವ ಮುಕ್ತತೆಯ, ಸ್ವಚ್ಛಂದದ ಬಹುತ್ವದ ಪ್ರೀತಿ ಹುಟ್ಟಿಸಿದ ಕವಿತೆ ಬರೆದ ಭರವಸೆಯ ಮಿತ್ರ ವಿಶಾಲ್ ಮ್ಯಾಸರ್ ಅವರನ್ನು ಆತನ ಕವಿತೆಯೊಂದಿಗೆ ಆತ್ಮವಿಶ್ವಾಸದಿಂದ ನಾವುಗಳು ಬರಮಾಡಿಕೊಳ್ಳಬೇಕು ಮತ್ತು ಅವರ ಮುಂದಿನ ಕಾವ್ಯದ ಹೊಸ ಕಥನದ ನೋಟಕ್ಕೆ ಎದೆಹನಿಯನುಣಿಸಬೇಕು.

ಬಟ್ಟೆಗಂಟಿದ ಬೆಂಕಿ

ಕವಿ: ವಿಶಾಲ್ ಮ್ಯಾಸರ್,

ಪ್ರ: ದುಡಿಮೆ ಪ್ರಕಾಶನ, ಬಳ್ಳಾರಿ

ಸಂ: 6363 612 399

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT