ಮಧ್ಯಾಹ್ನ ಮೂರೂವರೆ ಆಗಿರಬಹುದು. ಬೆಳಗಿನಿಂದ ಅಸೋಸಿಯೇಷನ್ ಫಂಡ್ ಕಲೆಕ್ಷನ್ನಿಗೆ ಅಂತ ಗುಂಪು ಕಟ್ಟಿಕೊಂಡು ಅಲೆದವಳು ಬಳಲಿ ಮನೆಗೆ ಬಂದಿದ್ದೆ. ಬಿರು ಬಿಸಿಲು. ಫಂಡು ಎತ್ತುವ ಮುಜುಗರದ ಕೆಲಸ. ಸಾಕುಸಾಕಾಗಿತ್ತು.

ಮೆಟ್ಟಿಲು ಹತ್ತುವಾಗಲೇ ಪಕ್ಕದ ಮನೆಗೆ ಬಂದಿದ್ದ, ಸದಾ ಕಿರಿಕಿರಿಯ ಪ್ರಶ್ನೆಗಳನ್ನೇ ಕೇಳುವ ದೂರದ ನೆಂಟರು ದೊಡ್ಡದಾಗಿ ನಗುತ್ತಾ ‘ಯಾವಾಗ ಬಂದೆ’ ಅಂದರು.

ಅರೆ... ನನ್ನ ಮನೆಗೆ ನಾನು ಬರುತಿದ್ದೀನಿ... ಅವರನ್ನು ಕೇಳಬೇಕಾದ ಪ್ರಶ್ನೆಯಲ್ಲವಾ ಇದು... ಇವರು ನನ್ನನ್ನೇ ಕೇಳ್ತಿದ್ದಾರಲ್ಲಾ ಎನಿಸಿ ಕಿರಿಕಿರಿಯಾಯಿತು. ಆದರೂ ತೋರಿಸಿಕೊಳ್ಳದೆ ‘ಚೆನ್ನಾಗಿದ್ದೀರಾ’ ಎಂದೆ ಉತ್ತರ ಬದಲಿಸಿ.

‘ಹೆಹೆಹೆ... ಈಗಷ್ಟೇ ಊಟ ಮುಗಿಸಿ ಮಾತಾಡ್ತಾ ಕೂತ್ವಪ್ಪಾ’ ಅಂದ್ರು. ‘ಇದೇನು ಟಿಟ್ ಫಾರ್ ಟ್ಯಾಟಾ..? ಬರೀ ಉಲ್ಟಾ ಉತ್ತರವೇ’ ಅಂದುಕೊಳ್ತಾ ನಕ್ಕವಳಂತೆ, ‘ಸರಿ ಬನ್ನಿ ಮನೆಗೆ ಆಮೇಲೆ’ ಎನ್ನುತ್ತಾ ಒಳಹೋದೆ.

ಗಡಿಬಿಡಿಯಲ್ಲಿ ಕೈಕಾಲು ತೊಳೆದು ಬೆಳಿಗ್ಗೆ ಅರ್ಧ ಬಿಟ್ಟ ಕೆಲಸಗಳಿಗೆ ಮೋಕ್ಷ ತೋರಲು ಸನ್ನದ್ಧಳಾದೆ. ‘ಥೂ ಹೆಣ್ಣು ಜನ್ಮವೆ... ಈ ಮನೆಯಲ್ಲಿ ಬೆಳಿಗ್ಗೆ ಹೋಗುವಾಗ ಯಾವುದು ಎಲ್ಲಿ ನಿಂತಿರುತ್ತೋ ಅದು ಅಲ್ಲಿಯೇ ಮಲಗಿರುತ್ತೆ... ಹೆಜ್ಜೆ ಕೂಡ ಮುಂದೆ ಹೋಗಿರಲ್ಲ. ಇಡೀ ಮನೆ ಕೆಲಸವನ್ನು ಹೆಣ್ಣಿಗೆ ಗುತ್ತಿಗೆ ಕೊಟ್ಟವರ ಥರ ಆಡ್ತಾರೆ ಈ ಗಂಡಸರು’ ಅಂದುಕೊಳ್ತಾ ಅಡುಗೆಮನೇಲಿ ಊಟ ಮಾಡಿದ್ದ ಕುರುಹುಗಳನ್ನೆಲ್ಲಾ ಅಚ್ಚುಕಟ್ಟು ಮಾಡಿ, ಸಿಂಕ್ ಖಾಲಿ ಮಾಡಿ, ಸೋಫಾದ ಧೂಳು ಒರೆಸಿ, ಮಕ್ಕಳ, ಇವರ ಬೀರು ಕ್ಲೀನು ಮಾಡಿ, ಬೆಳಿಗ್ಗೆ ಒಗೆದು ಒಣಹಾಕಿ ಹೋಗಿದ್ದ ಬಟ್ಟೆಗಳನ್ನಾದ್ರೂ ಸದ್ಯ ತಂದಿಟ್ಟಿದ್ದಾರೆ ಒಳಕ್ಕೆ ಅಂದುಕೊಳ್ತಾ ಮಡಿಸತೊಡಗಿದೆ.

ಇನ್ನೇನು ಕೊನೆ ಬಟ್ಟೆ ಮಡಿಸುವಾಗ ಕಾಲಿಂಗ್ ಬೆಲ್ಲಿನ ಸದ್ದಾಯ್ತು. ‘ಯಾರಿರಬಹುದು.? ಯಾರೇ ಆದರೂ ಹೀಗೆ ಬಟ್ಟೆ ಹರಡಿಕೊಂಡಿರೋದು ಚೆನ್ನಾಗಿ ಕಾಣಲ್ಲ’ ಎನಿಸಿ ಬಟ್ಟೆಗಳನ್ನು ಅವರವರ ಕಪಾಟಿಗಿಟ್ಟು ಹೋಗಿ ಕದ ತೆರೆದೆ. ಈಗಷ್ಟೇ ಕರೆದುಬಂದಿದ್ದ ಕಿರಿಕಿರಿ ಆಸಾಮಿಗಳು... ಕ್ಷಮಿಸಿ. ಅತಿಥಿ ದೇವೋಭವರು. ಹಳೆ ನೆಂಟ ದಂಪತಿಗಳು!

ಬಾಗಿಲು ತೆಗೆದವಳನ್ನ ‘ಮಲಗಿದ್ಯಾ, ತಡ ಆಯ್ತು ತೆಗೆಯೋದು?’ ಅಂದ್ರು. ‘ಇಲ್ಲ ನಾನು ಹಗಲು ಮಲಗುವುದಿಲ್ಲ. ಒಳಗೆ ಬನ್ನಿ’ ಅಂದೆ.

‘ನಿದ್ರೆ ಬಂದಿತ್ತೇನೋ. ಥೋ. ನಾವು ಈಗ ಬರಬಾರದಿತ್ತು...’

ಮೈ ಉರಿದು ಹೋಯ್ತು. ಮೈಮುರಿಯೋಷ್ಟು ಕೆಲಸ ಬಿದ್ದಿರುವಾಗ ಮಲಗೋದಾ ಎನ್ನಿಸಿದರೂ ನಗುಮುಖ ನಟಿಸಿ ‘ಛೆ, ನಾನು ಹಗಲು ಮಲಗುವುದಿಲ್ಲ. ಅದೂ ಅಲ್ಲದೇ ಅಪರೂಪಕ್ಕೆ ಬಂದಿದ್ದೀರಿ ನೀವು. ಬನ್ನಿಬನ್ನಿ’ ಎನ್ನುತ್ತಾ ಸೋಫಾ ತೋರಿದೆ. ಆರಾಮಾಗಿ ಕುಳಿತವರು ಸುತ್ತೆಲ್ಲಾ ಒಮ್ಮೆ ಅಳೆದು ‘ಮತ್ತೆ... ಹಗಲು ಮಲಗುವುದಿಲ್ಲ ಹಾಗಾದರೆ’ ಎಂದರು.

ಓ ದೇವರೆ... ಮಲಗುವುದಕಿಂತ ಮುಖ್ಯವಾದ ವಿಷಯವಿದ್ದರೆ ಈ ಕ್ಷಣ ಇವರ ತಲೆಯೊಳಗಿಳಿಸಪ್ಪಾ ಎಂದುಕೊಳ್ತಾ ‘ಇಲ್ಲ’ ಅಂದೆ ತಣ್ಣಗಿನ ಧ್ವನಿಯಲ್ಲಿ. ಸುಮ್ಮನಾಗಬಹುದೇನೋ ಅನ್ನುವ ಪ್ರಯತ್ನ ನನ್ನದು.

‘ಮಲಗೋದಿಲ್ಲ ಅಂದ್ರೆ ಟೈಮ್ ಪಾಸ್ ಹೇಗೆ ಮಾಡ್ತೀಯಾ. ನಮಗಂತೂ ಹಗಲು ಎರಡು ಸಾರಿ ನಿದ್ದೆ ಆಗಿಬಿಡಬೇಕು. ಬೆಳಿಗ್ಗೆ ತಿಂಡಿ ತಿಂದಾದ ಮೇಲೆ ಒಂದರ್ಧ ಗಂಟೆ, ಮತ್ತೆ ಮಧ್ಯಾಹ್ನ ಊಟವಾದ ಮೇಲೆ. ಮಧ್ಯಾಹ್ನ ನಿದ್ದೆ ಬರೋದಿಲ್ಲ ಅನ್ನು. ಆದರೂ ಅಭ್ಯಾಸ. ಬಿಟ್ರೆ ಸರಿಯಾಗಲ್ಲ. ಹೊರಳಾಡಿ ಅರ್ಧ ಗಂಟೆ ನಿದ್ದೆ ಮಾಡಿದ್ರೆ ಸಮಾಧಾನ’ ಅಂದರು. (ಟೈಮನ್ನು ಪಾಸು ಮಾಡೋದು ಎಲ್ಲಿಂದ... ಅದು ಸದಾ ಅಥ್ಲೆಟಿಕ್ಸ್ನಲ್ಲಿ ಭಾಗವಹಿಸುವವರ ಥರ ನಾಗಾಲೋಟದಲಿರುತ್ತೆ.) ಇನ್ನೇನು ನನ್ನ ತಲೆ ಒಡೆಯಬಹುದಾ ಅಂತ ಅನುಮಾನ ಶುರುವಾಯ್ತು.

ಇವರ ಪದಭಂಡಾರದಿಂದ ‘ಮಲಗು’ ಅನ್ನೋ ಪದವನ್ನು ಶಾಶ್ವತವಾಗಿ ಡಿಲೀಟ್ ಮಾಡೋಕಾಗುತ್ತಾ ಅಂತ ದೇವರಿಗೆ ಅರ್ಜೆಂಟು ಒಂದು ಅಪ್ಲಿಕೇಶನ್ ಹಾಕಲೇಬೇಕು. ಹೇಗೆ?

ಅದು ಇದು ಮಾತಾಡ್ತಾ, ಕಾಯಿಲೆ ಕಸಾಲೆ ಹೇಳುತ್ತಾ ‘ಓ... ಮೈ ಕೈಯೆಲ್ಲಾ ಭಾರ’ ಅಂದ್ರು. ತಿಂದು ಸುಮ್ನೆ ಮಲಗಿದ್ರೆ ಇನ್ನೇನಾಗುತ್ತೆ ಎಂದುಕೊಂಡೆ. ಆದರೂ ಔಪಚಾರಿಕವಾಗಿ ‘ಯಾವಾಗ ಬಂದ್ರಿ ಪಕ್ಕದ ಮನೆಗೆ’ ಎಂದೆ.

‘ರಾತ್ರಿನೇ ಬಂದ್ವಿ. ಗ್ಯಾಸ್ಟ್ರಿಕ್ಕು ಜಾಸ್ತಿ ಆಗಿ ಅಲ್ಸರ್ರು ಆಗಿದೆ. ಮಂಗಳೂರಿನ ಆಸ್ಪತ್ರೆಯೊಂದಕ್ಕೆ ಹೋಗಿದ್ದೆ. ಬೆಳಿಗ್ಗೆ ತಿಂಡಿ ತಿಂದವನು ಅರ್ಧ ಗಂಟೆ ಮಲಗಿ...’

ಓ ಗಾಡ್...! ‘ಅಣ್ಣ ನಿಮಗೆ ವಯಸ್ಸೆಷ್ಟು?’ ಎಂದೆ, ವಿಷಯಾಂತರವೇ ವಿಷಯದ ಆಳವೂ ಆಗಬಹುದೆನ್ನುವ ನಿರೀಕ್ಷೆಯಲ್ಲಿ. ಅದಕ್ಕೆ ಅವರ ಹೆಂಡತಿ ಆಕಳಿಸುತ್ತಾ ‘ಐವತ್ಮೂರು... ಈ ಯುಗಾದಿಗೆ’ ಅಂದ್ರು. ನಂಗಿಂತ ಒಂಬತ್ತು ವರ್ಷ ದೊಡ್ಡವರಷ್ಟೆ. ಹಾಗಾದರೆ ಇನ್ನೂ ಒಂಬತ್ತು ವರ್ಷ ಕಳೆದ ಮೇಲೆ ನಾನೂ... ಭಯ ಎನಿಸ್ತು. ಅವರ ಹೆಂಡತಿಯ ಮುಖ ನೋಡಿದೆ. ಆಕೆಯಂತೂ ‘ಹೊದಿಕೆ ಕೊಡದವರು ಪಾಪಿಗಳು’ ಎನ್ನುವಂಥ ಮುಖ ಹೊತ್ತು ಅರೆಗಣ್ಣಿನಲ್ಲಿ ಕುಳಿತಿದ್ರು. ಜೊತೆಗೆ ಆಗಾಗ ‘ಹಾ ಆ’ ಅನ್ನೋ ಸಶಬ್ದ ಆಕಳಿಕೆ ಬೇರೆ. ಥು... ಇವರ ವಂಶವೇ ಮಲಗೋ ಜೀನ್ಸಿನ ಮೇಲುಗೈಯಲ್ಲಿ ತಯಾರಾಗಿರಬೇಕು. ಏನು ಮಾಡೋಕಾಗುತ್ತೆ, ಅನುವಂಶೀಯ ದೋಷ ಅಂತ ನನ್ನ ನಾನೇ ಸಮಾಧಾನಿಸಿಕೊಳ್ಳುತ್ತ, ‘ಕುಡಿಯೋಕೆ ಏನು ತಗೊಳ್ತೀರಾ?’ ಎಂದೆ. ‘ಉಪ್ಪಿಟ್ಟು, ಬೋಂಡ ಅಂತ ಏನೂ ಹಚ್ಕೊಬೇಡ’ ಅಂದ್ರು ವಿಶಾಲವಾಗಿ ತೇಗುತ್ತಾ.

ನಡುಗಿದೆ. ನಾನೇ ಬಳಲಿಬೆಂಡಾಗಿ... ಕೈಕಾಲು ಸೋತು... ಒಂದು ಗಳಿಗೆ ಮಲಗೋ... ಅರೆ... ನಂಗೇನಾಯ್ತು. ನಾ ಹಗಲು ಮಲಗೋದಿಲ್ಲ ಅಲ್ವಾ? ಅಂಟುರೋಗವೇನಾದ್ರೂ ಬಂದುಬಿಡ್ತಾ? ಗಾಬರಿಯಾಯ್ತು.

ಈಗಷ್ಟೇ ಊಟ ಆಯ್ತು ಅಂತ ಒಳಗೆ ಬರೋವಾಗಲೇ ಹೇಳಿದ್ರು. ದೇವರೇ ಏನು ಮಾಡೋದಪ್ಪ, ಕಾಲು ಬೇರೆ ವಿಪರೀತ ನೋಯ್ತಿದೆ ಎಂದುಕೊಳ್ಳುತ್ತ ಒಳಗೆ ಬರುವಾಗ ‘ಒಂದು ಗಳಿಗೆ ಮಲಗಿ ಏಳ್ತೀನಿ ನಾನು. ಹಸಿಮೆಣಸಿನಕಾಯಿ ಹಾಕಬೇಡ ಯಾವುದಕ್ಕೂ’ ಅಂತ ಆದೇಶ ನೀಡ್ತಾ ಕೋಣೆಗೆ ಹೋದರು. ಅವರ ಹೆಂಡತಿಯ ಮುಖ ನೋಡಿದೆ. ‘ಗ್ಯಾಸ್ಟ್ರಿಕ್ ಅಲ್ವಾ. ಕೆಂಪು ಮೆಣಸಿನಕಾಯಿ ಏನಾಗಲ್ಲ, ನೀ ಬೇಡ ಅಂದ್ರೂ ಬಿಡವಳಲ್ಲ ಅಂತ ಗೊತ್ತು’ ಎನ್ನುತ್ತಾ ಮತ್ತೊಮ್ಮೆ ಜೋರು ಆಕಳಿಸಿ ಸೋಫಾ ದಿಂಬನ್ನು ಪಕ್ಕಕ್ಕೆ ಇಟ್ಕೋತ್ತಿದ್ದಾರೆ!

‘ಹತ್ತೇ ನಿಮಿಷ’ ಎನ್ನುತ್ತಾ ತಮ್ಮ ರಣಭಾರ ಶರೀರವನ್ನು ಮೊನ್ನೆ ತಾನೇ ಕೊಂಡ ನನ್ನ ಹೊಸ ಡೆಲಿಕೇಟ್ ಸೋಫಾ ಮೇಲೆ ಉರುಳಿಸಿದರು. ನಾನು ಗಾಬರಿಯಿಂದ ‘ಅಯ್ಯೋ..! ರೂಮಲ್ಲಿ ಮಲಕ್ಕೊಳ್ಳಿ’ ಎಂದೆ.

‘ಇರ್ಲಿಬಿಡು... ಮನೇಲೂ ಹೀಗೆ ನಾನು. ಟೀವಿ ನೋಡ್ತಾ ದಿವಾನ ಮೇಲೇ ಮಲಗಿಬಿಡ್ತೀನಿ’ ಎಂದರು, ನಿದ್ದೆಯಲ್ಲೇ ನಗುತ್ತಾ.

ಇದೇನು... ಸಾಕ್ಷಾತ್ ಕುಂಭಕರ್ಣನೇ ಏನಾದರೂ ದಂಪತಿಗಳ ರೂಪದಲ್ಲಿ ಮನೆಗೆ ದಯಮಾಡಿಸಿದನೇ ಎನ್ನುವ ಅನುಮಾನವೂ ಹಾದುಹೋಗಿ, ‘ಅವರ ಕ್ವಿಂಟಾಲ್ ತೂಕಕ್ಕೆ ನನ್ನ ಸೋಫಾ ಏನೂ ಆಗದಿರಲಿ ದೇವರೇ’ ಎಂದುಕೊಳ್ತಾ, ಉಪ್ಪಿಟ್ಟಿಗೆ ಎಲ್ಲೋ ಇಟ್ಟು ಮರೆತಿದ್ದ ಕೆಂಪು ಮೆಣಸಿನಕಾಯಿ ಹುಡುಕತೊಡಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.