ಇದೊಂದು ಅತ್ಯಂತ ಗಂಭೀರ ಆದರೆ ಯಾರೂ ಗಂಭೀರವಾಗಿ ತೆಗೆದುಕೊಳ್ಳದ ವಿಷಯ. ನೇರವಾಗೇ ಕೇಳಿ ಬಿಡೋಣ, ಹೇಳಿ ನೋಡೋಣ. ನಿಮ್ಮ ಪ್ರಕಾರ ‘ಶ್ಲೀಲ ಯಾವುದು ಮತ್ತು ಅಶ್ಲೀಲ ಅಂದರೆ ಯಾವುದು?’ ಬಹುಶಃ ಇದಕ್ಕೆ ಒಂದು ಸಾಲಿನಲ್ಲಿ ಉತ್ತರಿಸುವುದು ತೀರಾ ಕಷ್ಟವೆನಿಸುತ್ತದೆ. ಇವೆರಡರ ನಡುವಿನ ಗೆರೆ ತೀರಾ ತೆಳುವಾಗಿದೆ. ಸಂಗಾತಿಗಳು ಇಬ್ಬರೇ ಇದ್ದಾಗ, ಅವರ ನಡುವೆ ಏಕಾಂತದಲ್ಲಿ ನಡೆಯುವ ಯಾವುದೂ ಆಶ್ಲೀಲವಲ್ಲವೇ ಅಲ್ಲ. ಅದು ಮೂರನೆಯವರಿಗೆ ಗೊತ್ತಾದರೆ ಆಶ್ಲೀಲ. ಹಾಗೆಯೇ ಏಕಾಂತದಲ್ಲಿ ಗಂಡು–ಹೆಣ್ಣು ಪರಸ್ಪರ ಸಮ್ಮತಿಯ ಮೇರೆಗೆ ಏನೆಲ್ಲ ನಡೆಸಬಹುದೋ ಅದೆಲ್ಲವೂ ಶಿಕ್ಷಿತ–ಶ್ಲೀಲ. ಆದರೆ ಅದು ಬಲವಂತವೋ, ಅಹಿತವೋ, ಅಸಮ್ಮತಿಯೊಂದಿಗೋ ನಡೆದರೆ ಅದು ಅಶಿಕ್ಷಿತ–ಅಶ್ಲೀಲ. ವೈದ್ಯಕೀಯ, ಆರೋಗ್ಯ, ವಿಜ್ಞಾನ, ಶೈಕ್ಷಣಿಕ, ಗ್ರಾಂಥಿಕ ಕಾರಣಕ್ಕೆ ಇದನ್ನು ವಿಮರ್ಶಿಸಿದರೆ ಅದು ಶಾಸ್ತ್ರ ವಿಹಿತ, ಕೆಲವೊಮ್ಮೆ ಅದನ್ನು ಮೀರಿದಾಗ ವಿಕೃತ ಎನಿಸಿಕೊಳ್ಳುತ್ತದೆ ಅಲ್ಲವೇ? ಇನ್ನೂ ಸರಳವಾಗಿ ಹೇಳುವುದಾದರೆ ಸೂಚ್ಯವಾದರೆ ಶ್ಲೀಲ, ವಾಚ್ಯವಾದರೆ ಅಶ್ಲೀಲ!

ಆದರೆ, ನಮ್ಮ ಭಾರತೀಯ ಜಾನಪದೀಯರಿಗೆ, ಕವಿಗಳಿಗೆ, ಶಾಸ್ತ್ರ ಕೋವಿದರಿಗೆ ಪ್ರೌಢ ಗಂಡು–ಹೆಣ್ಣಿನ ನಡುವಿನ ಏಕಾಂತದಾಟವನ್ನು ವಾಚ್ಯವಾಗಿಸಿಯೂ ಅಶ್ಲೀಲದ ಲೇಪವಿಲ್ಲದೇ ಹೇಳಲು ಗೊತ್ತು. ಅಂಥ ಪ್ರತಿಭಾವಂತರ ಬಹುದೊಡ್ಡ ಸಮೂಹವೇ ನಮ್ಮಲ್ಲಿದೆ. ಅವರು ಅದಕ್ಕಿಟ್ಟ ಚೆಂದದ ಹೆಸರು ‘ಶೃಂಗಾರ‘ ನಾವು ಭಾರತೀಯರ ಪಾಲಿಗೆ ಶೃಂಗಾರಕ್ಕೆ ಇಂಥದ್ದೇ ಒಂದು ಕಾಲ–ದಿನವೆಂಬುದಿಲ್ಲ, ಇದೇ ತಾಣವೆಂಬುದಿಲ್ಲ. ಅನುದಿನ- ಅನುಕ್ಷಣ... ಒಟ್ಟಾರೆ ಬದುಕೇ ಶೃಂಗಾರಮಯ. ಅದನ್ನೇ ನಮ್ಮ ಕವಿಪುಂಗವರು ತಮ್ಮ ಕಾವ್ಯದುದ್ದಕ್ಕೂ ಹಾಸುಹೊಕ್ಕಾಗಿಸಿದ್ದಾರೆ. ಅಸಲಿಗೆ ಸಾಹಿತ್ಯವೆಂದರೇ ಬದುಕು ಎಂದಾದ ಮೇಲೆ, ಶೃಂಗಾರ ಸಾಹಿತ್ಯದ ಭಾಗವಾಗಲೇಬೇಕಲ್ಲವೇ? ಅದಕ್ಕಾಗೇ ರಸಿಕತೆಯ ಸಾಕಾರ ಮೂರ್ತಿಗಳಾದ ನಮ್ಮ ಸಂಸ್ಕೃತ ಕವಿಗಳೋ, ವರ್ಷವಿಡೀ ಶೃಂಗಾರ ಸಮಾಧಿಯನ್ನು ಹೊಕ್ಕು ಕುಳಿತು, ಕಾವ್ಯ ಕನ್ನಿಕೆಯನ್ನು ಒಲಿಸಿಕೊಂಡುಬಿಟ್ಟಿದ್ದಾರೆ. ಭರ್ತೃಹರಿ, ಭೋಜರಾಜ, ಕಾಳಿದಾಸ... ಹೀಗೆ ಒಬ್ಬರೇ ಇಬ್ಬರೆ? ಕಾವ್ಯ ಕನ್ನಿಕೆಗೆ ಬಹುವಲ್ಲಭರು! ಎಲ್ಲರಿಗೂ ಸಮಾನ ಸುಖವನ್ನು ಹಂಚುವ, ಹಂಚಿದ ಬಳಿಕವೂ ಆಕೆ ಅತೃಪ್ತಳೇ. ಸ್ವತಃ ಜೀವನದಲ್ಲಿ ವಿರಹದ ಬಿಸಿಯನುಭವಕ್ಕೆ, ಮಿಲನದ ಹಸಿಯಪ್ಪುಗೆಗೆ ಒಳಗಾಗಿದ್ದ ಕಾಳಿದಾಸ, ಭರ್ತೃಹರಿಯರಂತೂ ತಮ್ಮೆಲ್ಲ ಮನೋ‘ಕಾಮ’ನೆಗಳೋ ಎಂಬಂತೆ ಕೃತಿಗಳಲ್ಲಿ ಶೃಂಗಾರವನ್ನು ಅತ್ಯಂತ ಹಸಿಹಸಿಯಾಗಿ ಚಿತ್ರಿಸಿದ್ದಾರೆ. ವಿವಾಹದ ಮೊದಲ ರಾತ್ರಿಯೇ ಮಡದಿಯಿಂದ ದೂರಾದ ಕಾಳಿದಾಸ ಕೊನೆಗೂ ಶಕುಂತಲೆಯನ್ನೇ ಸಂಕೇತವಾಗಿಸಿಕೊಂಡು ತನ್ನ ವಿರಹವನ್ನು ಆಕೆಯ ಪಾತ್ರದ ಮೂಲಕ ಅಭಿವ್ಯಕ್ತಗೊಳಿಸಿದ. ಇನ್ನು ಒಂದೆರಡಲ್ಲ, ಬರೋಬ್ಬರಿ ಏಳು ಬಾರಿ ಬ್ರೇಕಪ್ ಮಾಡಿಕೊಂಡು ವಿರಹದ ಬಿಸಿ ಅನುಭವಿಸಿದ ಭರ್ತೃಹರಿಯಂತೂ ‘ವೈರಾಗ್ಯ ಶತಕ’ದೊಂದಿಗೆ ಬರಿದಾದ ಬಳಿಕ ಬೈರಾಗಿಯಾಗಿ ‘ಮುಟ್ಟುನಿಂತ ಮೇಲೆ ಪತಿವ್ರತೆ’ ಎಂಬಂತೆ ‘ನೀತಿ ಶತಕ’ವನ್ನು ಬರೆಯಲು ಮುಂದಾಗಿರಬಹುದೇ?

ಅಲ್ಲದಿದ್ದರೆ ಆತ ಮಾಡಿದ ಮನ್ಮಥನ ಓಲೈಕೆಯ ಸ್ತುತಿಯನ್ನೊಮ್ಮೆ ನೋಡಿ...

ಶಂಭುಃ ಸ್ವಯಂಭುಃ ಹರಯೋ ಹರಿಣೇಕ್ಷಣಾನಾಂ
ಯೇನಕ್ರಿಯಂತ ಸತತಂ ಗೃಹಕರ್ಮ ದಾಸಾಃ
ವಾಚಾಮಗೋಚರ ಚರಿತ್ರ ವಿಚಿತ್ರತಾಯ
ತಸ್ಮೈ ನಮೋ ಭಗವತೇ ಕುಸುಮಾಯುಧಾಯ!

ಅಂದರೆ ಸ್ವತಃ ಹರಿಹರರೂ ಮನ್ಮಥ ಬಾಣಕ್ಕೆ ತುತ್ತಾಗಿ ಹೆಂಡತಿಯ ದಾಸರಾಗಿ, ಮನೆವಾರ್ತೆಗೆ ಇಳಿದಿದ್ದಾರೆಂದ ಮೇಲೆ ನಮ್ಮಂಥ ಪಾಮರರ ಪಾಡೇನು? ಎನ್ನುತ್ತಾ ಮನ್ಮಥನದ ಹೆಗ್ಗಳಿಕೆಯನ್ನು ತನ್ನ ಕೃತಿಯಲ್ಲಿ ಹಾಡಿ ಹೊಗಳುತ್ತಾ, ಆತನಿಗೆ ನಮಿಸುತ್ತಾನೆ ಕವಿ.

ಅದೆಲ್ಲ ಬಿಡಿ, ಯಾರು ಹೇಳಿದ್ದು ಕಾಮ ಪಾಪವೆಂದು? ವೇದಗಳೇ ಅದನ್ನು ಒಪ್ಪಿ‘ಅಪ್ಪಿ’ಕೊಂಡಿರುವಾಗ ನಾವಿನ್ನೂ ಈ ಆಧುನಿಕ ಯುಗದಲ್ಲೂ ಮಕ್ಕಳಿಗೆ ಲೈಂಗಿಕ ಶಿಕ್ಷಣ ಬೇಕೇ, ಬೇಡವೇ ಎಂಬ ಚರ್ಚೆಯಲ್ಲೇ ಇದ್ದೇವೆ. ಭಗವಂತನೇ ‘ಭಗ’ (ಸೊಂಟದ ಸುತ್ತಲು)ದ ಭಾಗವಾಗಿರುವಾಗ ಆತ ಹೇಗೆ ಕಾಮವನ್ನು ನಿರಾಕರಿಸಿಯಾನು? ಅಷ್ಟಕ್ಕೂ ಸೃಷ್ಟಿಗೆ ಪ್ರೇರಣೆಯನ್ನೀಯುವವನು ಅವನೇ ಅಲ್ಲವೇ? ಅದಕ್ಕಾಗಿಯೇ ಸ್ವತಃ ಆತ ಧರ್ಮಕ್ಕೆ ವಿರುದ್ಧವಲ್ಲದ ಕಾಮ, ನನ್ನದೇ ಭಾಗ ಎಂದು ಹೇಳಿಬಿಟ್ಟಿದ್ದಾನೆ. ಯೋಚಿಸಿ, ಅಷ್ಟಕ್ಕೂ ಕಾಮವೆಂದರೆ ಏನರ್ಥ? ಬಯಕೆ ಅಂತ. ಶೃಂಗಾರವೂ ಹುಟ್ಟಿದ್ದು ಬಯಕೆಯಿಂದಲೇ ಅಲ್ಲವೇ?

ಕೆಲವು ವೇಳೆ ಶೃಂಗಾರದಿಂದಲೂ ಕಾಮ ಹುಟ್ಟಬಹುದು ಬಿಡಿ. ಇರಲಿ, ನಾಲ್ಕು ಪುರುಷಾರ್ಥ ಸಾಧನೆಗಾಗಿಯೇ ನಾವು ಆರಾಧನೆಗೆ ತೊಡಗುತ್ತೇವೆ. ಕಾಮವೆಂಬುದು ಪುರುಷಾರ್ಥದ ಭಾಗ. ಕಾಮಿಸದೆಯೇ (ಬಯಸದೆಯೇ) ಒಲಿದಾನು/ಳು ಹೇಗೆ ದೇವ/ವಿ? ಅದಕ್ಕಾಗಿಯೇ ಭಾರತೀಯ ವೇದ-ಉಪನಿಷತ್ತುಗಳಲ್ಲೂ ಕಾಮದ ಬಗ್ಗೆ ಮುಕ್ತ ವ್ಯಾಖ್ಯಾನ ನೀಡಲಾಗಿದೆ. ಬರಿದೇ ನಾವು ಅದನ್ನು ಮೀರಿ ಅಧ್ಯಾತ್ಮದ ಹೆಸರಲ್ಲಿ ಅನಗತ್ಯ ಬೇಲಿ ನಿರ್ಮಿಸಿಕೊಳ್ಳುತ್ತಿದ್ದೇವೆ.

ಮಾನವ ಸಹಜ ಕಾಮ ಸರ್ವ ಸಮ್ಮತ. ಆದರೆ ಮೃಗೀಯ ವಿಕೃತಿ ನಾಗರಿಕ ಸಮಾಜಕ್ಕೆ ಭೂಷಣವಲ್ಲ ಎಂಬ ಪ್ರಜ್ಞೆಯೂ ಮುಖ್ಯ.ಅಥರ್ವವೇದವು ‘ಕಾಮೋ ಜಜ್ಞೇ ಪ್ರಥಮೋ’ ಎನ್ನುತ್ತದೆ. ಅಂದರೆ, ಎಲ್ಲಕ್ಕಿಂತ ಮೊದಲು ಕಾಮವು ಹುಟ್ಟಿತು ಎಂದರ್ಥ. ಇನ್ನೂ ಮುಂದುವರಿದು...

ಯಥಾ ವೃಕ್ಷಂ ಲಿಬುಜಾ ಸುಮಂತಂ
ಪರಿಷಸ್ವಜೇ ಏವಂ ಪರಿಷಸ್ವಜಮಾಮ್॥

ಎನ್ನಲಾಗಿದೆ. ಅಂದರೆ ಮರವನ್ನು ಬಳ್ಳಿಯು ಸುತ್ತಿಕೊಳ್ಳುವಂತೆ ನೀನು ನನ್ನನ್ನು ಅಪ್ಪಿಕೋ ಎಂದು ಅಪ್ಪಣೆ ಕೊಡಿಸುತ್ತಾನೆ ಭಗವಂತ.

ಇನ್ನು ಮಹಾನಾರಾಯಣೋಪನಿಷತ್ತು ಗಮನಿಸಿ:

ಕಾಮೋಕಾರ್ಷೀತ್ ಕಾಮಃ
ಕರೋತಿ ನಾಹಂ ಕರೋಮಿ॥

‘ಕಾಮದಿಂದಲೇ ಎಲ್ಲವೂ ನಡೆಯುತ್ತದೆ. ಕಾಮವೇ ಮಾಡುತ್ತದೆ, ನಾನು ಮಾಡುವುದಿಲ್ಲ’– ಎನ್ನುತ್ತಾನೆ ಸರ್ವವ್ಯಾಪಿಯಾದ ಆ ನಾರಾಯಣ.

ಆರೋಗ್ಯಕಾರಿ ಕಾಮ ಪ್ರಜ್ಞೆಯನ್ನು ಎಲ್ಲ ನಾಗರಿಕ ಸಮಾಜವೂ ರೂಢಿಸಿಕೊಳ್ಳದಿದ್ದರೇ ಅತ್ಯಾಚಾರಗಳಂಥವು ಹೆಚ್ಚುತ್ತದೆ ಎನ್ನುತ್ತಾರೆ ಆಚಾರ್ಯ ರಜನೀಶ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.