ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಷ್ಟಕರ ರಾಗಗಳ ಮೋಹಿ

Last Updated 15 ಏಪ್ರಿಲ್ 2023, 19:30 IST
ಅಕ್ಷರ ಗಾತ್ರ

ಬೆಂಗಳೂರಿನ ವಿದುಷಿ ಕಲಾವತಿ ಅವಧೂತ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಹೆಸರಾಂತ ಕಲಾವಿದೆ. ಲಯವಾದ್ಯ ಪ್ರವರ್ತಕರಾಗಿದ್ದ ವಿದ್ವಾನ್‌ ಬೆಂಗಳೂರು ವೆಂಕಟ್ರಾಮ್‌ ಅವರ ಪುತ್ರಿಯಾಗಿರುವ ಕಲಾವತಿ, ಅಮೆರಿಕ, ನೆದರ್ಲೆಂಡ್‌, ಯುರೋಪ್‌ ದೇಶಗಳಲ್ಲಿ ಸಂಗೀತ ಕಛೇರಿ ನೀಡಿದ್ದಾರೆ. ಹಲವು ಪ್ರಶಸ್ತಿಗಳಿಗೂ ಭಾಜನರಾದ ಈ ‘ಮಾಗಿದ ಕಲಾವಿದೆ’, ಬೆಂಗಳೂರಿನ ಚಾಮರಾಜಪೇಟೆಯ ಕೋಟೆ ಶ್ರೀರಾಮನವಮಿ ಸಂಗೀತೋತ್ಸವದಲ್ಲಿ ಏಪ್ರಿಲ್‌ 24ರಂದು ಕೇಳುಗರಿಗೆ ಸಂಗೀತ ರಸದೌತಣ ನೀಡಲಿದ್ದಾರೆ. ‘ಭಾನುವಾರ ಪುರವಣಿ’ಯೊಂದಿಗೆ ಅವರು ತಮ್ಮ ಸಂಗೀತ ಪಯಣವನ್ನು ಹಂಚಿಕೊಂಡರು.

ಪರಂಪರೆಯ ಸಂಗೀತ ಮನೆತನ, ನಿಮ್ಮ ಸಂಗೀತದೊಂದಿಗೆ ಬೆಸೆದದ್ದು ಹೇಗೆ?

ನಮ್ಮ ಮನೆಯಲ್ಲಿ ಸಂಪೂರ್ಣವಾಗಿ ಸಂಗೀತದ ವಾತಾವರಣವೇ ಇತ್ತು. ತಾಯಿ ಜಿ.ಆರ್‌. ಜಯಾ ಶಾಸ್ತ್ರೀಯ ಸಂಗೀತ ಹಾಗೂ ಗಮಕ ಕಲಾವಿದೆ. ತಂದೆ ಬೆಂಗಳೂರು ಕೆ. ವೆಂಕಟ್ರಾಮ್ ಘಟಂ ಮತ್ತು ಮೃದಂಗ ವಿದ್ವಾಂಸರಾಗಿದ್ದವರು. ಚಿಕ್ಕವಳಿದ್ದಾಗಲೇ ತಾಯಿ ಬಳಿ ಸಂಗೀತದ ಆರಂಭದ ಪಾಠಗಳನ್ನು ಕಲಿತೆ. ಮುಂದೆ ವಿದುಷಿ ಉಷಾಚಾರ್‌ ಬಳಿ ಕಲಿತೆ. ಆಮೇಲೆ ವಿದ್ವಾನ್‌ ಆನೂರು ರಾಮಕೃಷ್ಣ ಅವರ ಬಳಿ, ವಿದುಷಿ ಸೀತಾಲಕ್ಷ್ಮಿ ವೆಂಕಟೇಶನ್‌ ಹಾಗೂ ಚೆನ್ನೈಯ ವಿದ್ವಾನ್‌ ಪಿ.ಎಸ್‌. ನಾರಾಯಣಸ್ವಾಮಿ ಅವರ ಬಳಿಯೂ ಹೆಚ್ಚಿನ ಸಂಗೀತ ಮಾರ್ಗದರ್ಶನ ಪಡೆದುಕೊಂಡೆ.

ನಿಮ್ಮ ತಂದೆ ಬೆಂಗಳೂರು ಕೆ. ವೆಂಕಟರಾಮ್ ಲಯವಾದ್ಯಕ್ಕೆ ವಿಶೇಷ ಸ್ಥಾನಮಾನ ತಂದುಕೊಟ್ಟವರು. ಸಂಗೀತಕ್ಕೆ ಅವರ ಕೊಡುಗೆಯನ್ನು ನೆನಪಿಸಿಕೊಳ್ಳುವಿರಾ?

ನಮ್ಮ ತಂದೆ ಕರ್ನಾಟಕ ಗಾನಕಲಾ ಪರಿಷತ್ತು ಹಾಗೂ ತಾಳವಾದ್ಯ ಕಲಾ ಕೇಂದ್ರ (ಪರ್ಕಷನ್‌ ಆರ್ಟ್ಸ್‌ ಸೆಂಟರ್) ಎಂಬ ರಾಜ್ಯದ ಎರಡು ಪ್ರಮುಖ ಸಂಗೀತ ಸಂಸ್ಥೆಯ ಸ್ಥಾಪಕ ಸದಸ್ಯರಾಗಿದ್ದವರು. ಲಯವಾದ್ಯ, ತಾಳವಾದ್ಯಗಳಿಗೆ ಬಹಳ ಪ್ರಾಶಸ್ತ್ಯ ನೀಡುತ್ತಿದ್ದರು. ಹಿರಿಯ ವಿದ್ವಾಂಸರಾಗಿದ್ದ ಪಾಲ್ಘಾಟ್ ಮಣಿ ಅಯ್ಯರ್‌ ಅವರ ಬಳಿ ನಿಕಟ ಸಂಬಂಧ ಇಟ್ಟುಕೊಂಡಿದ್ದವರು. ಅವರ ನೆನಪಲ್ಲೇ ತಾಳವಾದ್ಯ ಸಂಸ್ಥೆ ಕಟ್ಟಿದರು. ಈ ಸಂಸ್ಥೆ ಮುಖಾಂತರ ಸಂಗೀತದ ಹಲವು ಉಪನ್ಯಾಸಗಳನ್ನು, ಪ್ರಾತ್ಯಕ್ಷಿಕೆಗಳನ್ನು ದಾಖಲೀಕರಣ ಮಾಡಿದ್ದಾರೆ. ತಾಳ ಸಂಗ್ರಹ, ರಾಗ–ತಾನ–ಪಲ್ಲವಿ ಮುಂತಾದ ಪುಸ್ತಕಗಳನ್ನು ಹೊರತಂದಿದ್ದಾರೆ.

ಲಯವಾದ್ಯವನ್ನು ಬಹಳ ಜನಪ್ರಿಯಗೊಳಿಸಿದವರು. ಆಗೆಲ್ಲ ಸಂಗೀತ ಕಛೇರಿಗಳಲ್ಲಿ ತನಿಯಾವರ್ತನ ಭಾಗ ಬಂದಾಗ ಕೇಳುಗರು ಬೋರ್‌ ಎಂದು ಎದ್ದು ಹೋಗುತ್ತಿದ್ದರು. ರಸಿಕರು ಲಯವಾದ್ಯದ ಸೊಬಗನ್ನು ಅರ್ಥ ಮಾಡುವ ಹಾಗೆ ತಂದೆಯವರು ಪ್ರಯತ್ನಿಸುತ್ತಿದ್ದರು. ವಿಶೇಷ ತಾಳಗಳಾದ ಅಷ್ಟೋತ್ತರ ಶತ ತಾಳ, ಮಾರ್ಗ ತಾಳ, ಮುಖಿ ತಾಳಗಳನ್ನು ಬಳಕೆಗೆ ತಂದರು. ಇದರಲ್ಲಿ ಲಯವಿನ್ಯಾಸ ಅಳವಡಿಸಿ ನೂತನ ಪ್ರಯೋಗ ಮಾಡಿ ಸಂಗೀತ ವಿದ್ಯಾರ್ಥಿಗಳಿಗೂ ಅನುಕೂಲವಾಗುವಂತೆ ಮಾಡಿದರು. ಹೆಸರಾಂತ ಲಯವಾದಕ ಆನೂರು ಅನಂತಕೃಷ್ಣ ಶರ್ಮ ಅವರ ಬಳಿ ವಿಶೇಷ ಸಂಯೋಜನೆ ಮಾಡಿ ‘ಪಾಂಚಜನ್ಯ’ ಹೆಸರಿನಲ್ಲಿ ವಿವಿಧ ಜತಿಗಳನ್ನು ಸೇರಿಸಿ ವಿಶೇಷ ಕಾರ್ಯಕ್ರಮ ರೂಪಿಸಿದ್ದರು.

ಆಗಿನ ಕಾಲದಲ್ಲಿ ಟಿ.ಬಿ. ನರಸಿಂಹಾಚಾರ್‌ ಅಂತ ಸಂಗೀತ ವಿಮರ್ಶಕರಿದ್ದರು. ಅವರು ತಂದೆಯವರನ್ನು ‘ರೆಸ್ಟ್‌ಲೆಸ್‌ ರಿದಂ ಮ್ಯಾನ್’ ಅಂತ ಕರೀತಿದ್ರು. ಎಂದಿಗೂ ಸಮಯ ಪೋಲು ಮಾಡ್ತಿರಲಿಲ್ಲ.

ಸಂಗೀತ ಕಲಿಯುವಿಕೆ ಜೊತೆಗೆ ಕೇಳ್ಮೆಯಿಂದಲೂ ಸಾಕಷ್ಟು ಲಾಭ ಇದೆ. ನಿಮ್ಮ ಅನಿಸಿಕೆ ಏನು?

ಕೇಳ್ಮೆಯಿಂದಲೂ ಸಂಗೀತ ಜ್ಞಾನ ವಿಸ್ತಾರವಾಗುತ್ತದೆ. ನನ್ನ ಗುರುಗಳು ವಿದ್ವಾನ್‌ ಆನೂರು ರಾಮಕೃಷ್ಣ ಶರ್ಮ ಅವರು ಈ ಮಾತಿನಲ್ಲಿ ಬಹಳ ನಂಬಿಕೆ ಇಟ್ಟವರು. ರಾಗಗಳ ಬಗ್ಗೆ, ಸ್ವರ ಪ್ರಸ್ತಾರದ ಬಗ್ಗೆ ಸವಿಸ್ತಾರವಾದ ಅರಿವು ಮೂಡುತ್ತದೆ. ಒಂದೇ ರಾಗದ ಹಲವು ಕೃತಿಗಳನ್ನು ಕಲಿಯುವುದು, ಇದೇ ಕೃತಿಗಳನ್ನು ಬೇರೆ ಬೇರೆ ವಿದ್ವಾಂಸರು ಯಾವ ರೀತಿಯಲ್ಲಿ ಪ್ರಸ್ತುತಪಡಿಸುತ್ತಾರೆ ಎಂಬುದನ್ನು ಗಮನಿಸುವುದರಿಂದ ಆ ರಾಗದ ವಿವಿಧ ಆಯಾಮಗಳನ್ನು ತಿಳಿಯಬಹುದು. 'one teaches, two learns' (ಒಬ್ಬರು ಕಲಿಸುತ್ತಾರೆ, ಇಬ್ಬರೂ ಕಲಿಯುತ್ತಾರೆ) ಎಂಬ ಮಾತಿದೆ. ಗುರುಗಳು ಪಾಠ ಮಾಡುವುದರಿಂದ ಅವರ ಜ್ಞಾನ ಮತ್ತಷ್ಟು ಪಕ್ವಗೊಳ್ಳುತ್ತದೆ. ವರ್ಣ, ಕೃತಿಗಳಲ್ಲಿ ಯಾವ ಭಾಗ ತೆಗೆದುಕೊಂಡು ಸ್ವರಪ್ರಸ್ತಾರ ಮಾಡಬಹುದು, ನೆರವಲ್‌ ಮಾಡಬಹುದು ಎಂಬುದು ಕೂಡ ಕೇಳ್ಮೆಯಿಂದಲೇ ಹೆಚ್ಚು ಮನದಟ್ಟಾಗುವಂಥದ್ದು.

ಸಿಂಹೇಂದ್ರ ಮಧ್ಯಮ, ಹನುಮ ತೋಡಿ, ಭೈರವಿ, ಬೇಗಡೆಗಳಂತಹ ಕಷ್ಟಕರ ರಾಗಗಳನ್ನು ಕಛೇರಿಗಳಲ್ಲಿ ಆಯ್ಕೆ ಮಾಡಿಕೊಳ್ಳುವ ಕಲಾವಿದರು ಕಡಿಮೆ. ನಿಮ್ಮ ಕಛೇರಿಗಳಲ್ಲಿ ಇಂಥ ರಾಗಗಳನ್ನೇ ಸಲೀಸಾಗಿ ಹಾಡುತ್ತೀರಿ. ಇದು ಹೇಗೆ ಸಾಧ್ಯವಾಯಿತು?

ಸಾಮಾನ್ಯವಾಗಿ ಎಲ್ಲರೂ ಹಾಡುವುದಕ್ಕಿಂತ ಭಿನ್ನವಾಗಿರಲೆಂದು ಕಷ್ಟಕರ ರಾಗಗಳನ್ನೇ ಇಷ್ಟಪಟ್ಟು ಹಾಡುತ್ತೇನೆ. ಭೈರವಿ, ಕಾಂಬೋಧಿ, ಬೇಗಡೆ, ಯದುಕುಲ ಕಾಂಭೋಜಿ, ಸಹನಾ ಮುಂತಾದವು ಪ್ರಚಲಿತ ರಾಗಗಳೇ ಆದರೂ ಕಷ್ಟಕರವಾದದ್ದು. ‘ಭಾವಯಾಮಿ ರಘುರಾಮಂ’ ಎಂಬ ಹಾಡನ್ನು ಏಳು ರಾಗಗಳಲ್ಲಿ ಹಾಡಿ ಪ್ರಯೋಗ ಮಾಡಿದ್ದೆ. ರಾಗಮಾಲಿಕೆ ಕೂಡ ಇಂತಹ ಕಷ್ಟರಾಗಗಳಲ್ಲೇ ಹಾಡಿದ್ದೆ. ಜೊತೆಗೆ ಅಷ್ಟರಾಗ, ಚತುರ್ದಶ ರಾಗಮಾಲಿಕೆ ಕೂಡ ಸವಾಲಾಗಿ ಹಾಡಿದ್ದೆ. ಪಂಚ ನಡೆ, ಗತಿಯಲ್ಲಿ ‘ಪಲ್ಲವಿ’ ಹಾಡಿದ್ದು ಕೂಡ ನನ್ನ ಹೊಸ ಪ್ರಯೋಗವೇ. ‘ಪ್ರಾಚೀನ ಪಲ್ಲವಿ’ ಎಂಬ ಗಾಯನ ಸರಣಿ ಆರು ಎಪಿಸೋಡ್‌ಗಳಲ್ಲಿ ಆಕಾಶವಾಣಿಗಾಗಿ ಹಾಡಿದ್ದು ಕೂಡ ಕಷ್ಟಕರ ರಾಗಗಳನ್ನು ಸಂಯೋಜಿಸಿಯೇ ಆಗಿದೆ. ಹೀಗೆ ರಾಗ ಸಿಂಹೇಂದ್ರ ಮಧ್ಯಮ ಇರಬಹುದು, ಹನುಮತೋಡಿಯೇ ಇರಬಹುದು. ರಾಗದ ಚೆಲುವನ್ನು ಅನುಭವಿಸಿ, ಧ್ಯಾನಸ್ಥಳಾಗಿ ಹಾಡಿದಾಗ ಅದು ಸಲೀಸಾಗಿಯೇ ಹೊರಹೊಮ್ಮುತ್ತದೆ.

ಕಲೆಯನ್ನು ಮುಂದುವರಿಸುವಲ್ಲಿ ನಿಮ್ಮ ಪ್ರಯತ್ನ ಹೇಗೆ ಸಾಗಿದೆ?

ಸಂಗೀತವನ್ನು ಮುಂದುವರೆಸುವ ನಿಟ್ಟಿನಲ್ಲಿ ಶಕ್ತಿಮೀರಿ ಹಲವು ಯೋಜನೆಗಳಿವೆ. ‘ಸ್ವರನಿಧಿ’ ಎಂಬ ತಂಡ ಕಟ್ಟಿಕೊಂಡು ತತ್ವಾಧಾರಿತ ಕಾರ್ಯಕ್ರಮ (Themantic programmes) ಮಾಡ್ತೀನಿ. ತ್ಯಾಗರಾಜರ ‘ಪ್ರಹ್ಲಾದ ಭಕ್ತವಿಜಯ’ ಪರಿಕಲ್ಪನೆಯನ್ನು ಸಂಗೀತಕ್ಕೆ ಅಳವಡಿಸಿ ನನ್ನ ಶಿಷ್ಯಂದಿರ ಬಳಿ ಹಾಡಿಸಿದ್ದೇನೆ. ‘ಪುರಂದರದಾಸ ಕೀರ್ತನ ಮಾಲಾ’ ಎಂಬ ದಾಸರಪದಗಳ ಗಾಯನ ಹೆಚ್ಚು ಜನರನ್ನು ಸೆಳೆದಿತ್ತು. ಮಗ ದತ್ತಪ್ರಸಾದ ಸಂಗೀತದಲ್ಲಿ ಭರವಸೆ ಮೂಡಿಸುತ್ತಿದ್ದಾನೆ. ರಾಹುಲ್‌ ವೆಲ್ಲಾಳ್‌ ಉತ್ತಮ ಗಾಯಕನಾಗಿ ರೂಪುಗೊಂಡಿದ್ದಾನೆ. ⇒v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT