ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜು ಅನಂತಸ್ವಾಮಿ ರಾಗ ಸ್ಮರಣೆ

Published 22 ಏಪ್ರಿಲ್ 2023, 20:20 IST
Last Updated 22 ಏಪ್ರಿಲ್ 2023, 20:20 IST
ಅಕ್ಷರ ಗಾತ್ರ

-ಮಧು ಮನೋಹರನ್

ರಾಜು ಅನಂತಸ್ವಾಮಿ ಜನ್ಮದಿನವನ್ನು ಐದು ದಿನಗಳ ಗಾನೋತ್ಸವವನ್ನಾಗಿ ಬೆಂಗಳೂರಿನಲ್ಲಿ ಆಚರಿಸಲಾಯಿತು. ಇಂತಹ ಉತ್ಸವದ ಹುಟ್ಟಿಗೆ ಕಾರಣವಾದ ಜ್ಞಾಪಕ ಚಿತ್ರಶಾಲೆಯೊಳಗೊಂದು ಸುತ್ತು...

ಅದು 2003ನೇ ಇಸವಿ. ಒಂದು ದಿನ ‘ಯಾರೋ ಇದು ಹುಡುಗಿ, ನಿನ್ ಥರ ಅಲ್ಲದೇ ಮುದ್ಮುದ್ದಾಗಿ ಇದಾಳೆ’ ಅಂತ ನನ್ನ ಅಣ್ಣ ಕಾರ್ತಿಕ್‌ನ ಚುಡಾಯಿಸಿಕೊಂಡು, ಸ್ವತಃ ತಮ್ಮ ಕೈಯಿಂದ ಮಾಡಿದ ಕಾಫಿಯನ್ನು ಪ್ರೀತಿಯಿಂದ ನಮ್ಮಿಬ್ಬರಿಗೆ ವ್ಯಕ್ತಿಯೊಬ್ಬರು ಕೊಟ್ಟಿದ್ದ ದೃಶ್ಯ ಇನ್ನೂ ಕಣ್ಣ ಮುಂದೆ ಕಟ್ಟಿದ ಹಾಗಿದೆ. ಅದು ನಾನು ಜೀವನದಲ್ಲಿ ಸೇವಿಸಿದ ಮೊದಲನೇ ಕಾಫಿ. ಆ ವ್ಯಕ್ತಿಯೇ ಮೈಸೂರಿನ ಜಗತ್ಪ್ರಸಿದ್ಧ ಅರಮನೆಯಲ್ಲಿ ಆಸ್ಥಾನ ಸಂಗೀತಗಾರರಾಗಿದ್ದ ಚಿಕ್ಕರಾಮ ರಾಯರ ಮರಿ ಮೊಮ್ಮಗ, ಶಾಸ್ತ್ರೀಯ ಸಂಗೀತಗಾರ್ತಿ ಕಮಲಮ್ಮನವರ ಮೊಮ್ಮಗ, ಸುಗಮ ಸಂಗೀತ ಕ್ಷೇತ್ರದ ದೊರೆ ಮೈಸೂರು ಅನಂತಸ್ವಾಮಿಯವರ ಮಗ, ರಾಜು ಅನಂತಸ್ವಾಮಿ. ಇಂತಹ ವಂಶಾವಳಿಯ ಜ್ಞಾನ ಮತ್ತು ಪ್ರತಿಭೆಯನ್ನು ಹೊಂದಿರುವುದರ ಜೊತೆ, ಅವರು ಸ್ವಯಂ ಶ್ರೇಷ್ಠ ಗಾಯಕ, ಸಂಯೋಜಕ, ರಂಗಕರ್ಮಿ ಹಾಗೂ ನಟರಾಗಿದ್ದವರು.

ಆ ಸಮಯದಲ್ಲಿ ಈ ಯಾವ ವಿಚಾರಗಳ ಅರಿವೂ ಇಲ್ಲದಿದ್ದ ನನಗೆ, ಅವರು ಒಬ್ಬ ಸಾಮಾನ್ಯ ಸಂಗೀತಗಾರನಾಗಿ ಕಂಡರು. ಅಲ್ಲಿಂದ ಬೆಳೆದ ನನ್ನ, ಅಣ್ಣನ ಹಾಗೂ ರಾಜು ಅನಂತಸ್ವಾಮಿ... ಅವರ ಬಾಂಧವ್ಯ ಸಂಗೀತದ ವಿಚಾರಗಳ ಚರ್ಚೆ, ಇನ್ನಿತರ ಸ್ನೇಹಿತರೊಂದಿಗೆ ಹರಟೆ, ನಗು ಮುಂತಾದವುಗಳೊಂದಿಗೆ ಅವಿರತವಾಗಿ ಬೆಳೆಯಿತು. ನನ್ನ ಅಣ್ಣ ನಮ್ಮ ಸುಗಮ ಸಂಗೀತದ ಗುರುದ್ವಯರಲ್ಲಿ ಒಬ್ಬರಾದ ಬಾಲಿ ಸರ್ ಅವರ ಆಶೀರ್ವಾದದೊಂದಿಗೆ ಆಗಷ್ಟೇ ಒಬ್ಬ ಲಯವಾದ್ಯ ಕಲಾವಿದನಾಗಿ ವೃತ್ತಿಯಲ್ಲಿ ತೊಡಗಿದ್ದ. ಹಾಗಾಗಿ ರಾಜು ಸರ್ ಕೂಡ ಅವನನ್ನು ಪ್ರೋತ್ಸಾಹಿಸಿ ತಮ್ಮ ಕಾರ್ಯಕ್ರಮಗಳಲ್ಲಿ ಅವಕಾಶ ನೀಡುತ್ತಾ ಬಂದರು.

ಹೀಗೆ ಒಂದು ದಿನ, ರಾಜು ಸರ್ ತಮಾಷೆಯಾಗಿ ನನಗೆ ಒಂದು ‘ಸರ್ಪ್ರೈಸ್ ಟೆಸ್ಟ್’ ಕೊಡ್ತೀನಿ ಎಂದು ಹೇಳಿ ಸಾಲು ಸಾಲಾಗಿ ಅವರ ಮತ್ತು ಅವರ ತಂದೆ ಮೈಸೂರು ಅನಂತಸ್ವಾಮಿಯವರ ಹಾಡುಗಳನ್ನು ಕೇಳಿಸಿ, ಯಾವ ಹಾಡು ಯಾರ ದನಿಯಲ್ಲಿ ರೆಕಾರ್ಡ್ ಆಗಿದೆ ಎಂದು ಕಂಡುಹಿಡಿಯಲು ಸೂಚಿಸಿದರು. ಅವತ್ತು ನಾನು ಬಲಗಡೆಯಿಂದ ಎದ್ದಿದ್ದೆ ಎಂದೆನಿಸುತ್ತದೆ, ಎಲ್ಲಾ ಹಾಡುಗಳ ದನಿಯನ್ನು ಸರಿಯಾಗಿ ಗುರುತಿಸಿದೆ. ಪರೀಕ್ಷೆಯಲ್ಲಿ ನಾನು ಪಾಸ್! ‘ಯಾವಾಗಿಂದ ಬರ್ತೀಯ ಪಾಠಕ್ಕೆ?’ ಎಂದು ಕೇಳಿದರು. ಇದು ರಾಜು ಅನಂತಸ್ವಾಮಿಯವರ ವಿಶೇಷ ಗುಣ. ತಮ್ಮ ಶಿಷ್ಯರನ್ನು ತಾವೇ ಆಯ್ಕೆ ಮಾಡಿಕೊಂಡು ಯಾವುದೇ ಅಪೇಕ್ಷೆಯಿಲ್ಲದೆ ವಿದ್ಯೆಯನ್ನು ಧಾರೆ ಎರೆಯುವುದು. ಸುಗಮ ಸಂಗೀತದ ವಾಸನೆಯೇ ಇಲ್ಲದೆ, ಶಾಸ್ತ್ರೀಯ ಸಂಗೀತ ಅಭ್ಯಾಸ ಬಿಟ್ಟರೆ ಕೇವಲ ಸಿನಿಮಾ ಗೀತೆಗಳನ್ನು ಕೇಳುತ್ತಿದ್ದ ನನಗೆ ಜೀವನದಲ್ಲಿ ಒಂದು ಹೊಸ ಹಾಗೂ ಮಹತ್ವದ ತಿರುವು ಕಾದಿತ್ತು.‌

ಮೂರು ವರ್ಷಗಳು ಕಳೆದದ್ದೇ ತಿಳಿಯಲಿಲ್ಲ, 2006 ರಲ್ಲಿ ಅವರು ಆಯೋಜಿಸುತ್ತಿದ್ದ ‘ಅನಂತ ಚಿತ್ರ’ ಎಂಬ ಮೈಸೂರು ಅನಂತಸ್ವಾಮಿ ಸ್ಮರಣೆಯ ಕಾರ್ಯಕ್ರಮ ಸರಣಿಯಲ್ಲಿ ಒಂದು ಕಾರ್ಯಕ್ರಮವನ್ನು ನನಗೆ ಮೀಸಲಿಟ್ಟರು. ಅಲ್ಲಿಯವರೆಗೆ ಅವರ ಮುಂದಾಳತ್ವದಲ್ಲಿ ಸಹ ಗಾಯಕಿಯಾಗಿ ಹಾಡುತ್ತಿದ್ದ ನನ್ನಲ್ಲಿ ಭಾವಗೀತೆಗಳ ಕಿಡಿಯನ್ನು ಹೊತ್ತಿಸಿದರು. ಅಂದು ಮುಖ್ಯ ಗಾಯಕಿಯಾಗಿ ನನ್ನನ್ನು ಹಾಡಿಸಿ, ನನಗೆ ಅವರೇ ಹಾರ್ಮೋನಿಯಂ ಸಾಥಿ ನೀಡಿ ಸುಗಮ ಸಂಗೀತ ಲೋಕದಲ್ಲಿ ನನ್ನ ರಂಗಪ್ರವೇಶ ಮಾಡಿಸಿದರು. ಈ ಕ್ಷೇತ್ರವನ್ನು ನಾನು ನೋಡುತ್ತಿದ್ದ ರೀತಿಯೇ ಅಷ್ಟು ಹೊತ್ತಿಗೆ ಬದಲಾಗಿತ್ತು. ಭಾವಗೀತೆ ಹಾಗೂ ಸುಗಮ ಸಂಗೀತದ ಎಲ್ಲಾ ಪ್ರಕಾರಗಳ ಮೇಲೂ ಅಪಾರ ಒಲವು ಮೂಡಿತ್ತು. ಆ ಸಮಯದಲ್ಲಿ ಅಣ್ಣ ಮತ್ತು ನಾನು ಸುಗಮ ಸಂಗೀತ ಕಾರ್ಯಕ್ರಮಗಳನ್ನು ನೀಡಬೇಕು, ಗುರುಗಳು ಹೆಮ್ಮೆ ಪಡುವಂತಾಗಬೇಕು ಎಂದು ನಿರ್ಧರಿಸಿ ಕಟ್ಟಿಕೊಂಡ ಸಂಸ್ಥೆಯೇ ‘ನಾಕುತಂತಿ ಸಂಗೀತ ಗುಚ್ಛ’. ನಮ್ಮ ಸಂಸ್ಥೆ ನಿರ್ವಹಿಸಿದ ಒಂದೆರಡು ಕಾರ್ಯಕ್ರಮಗಳಲ್ಲಿ ರಾಜು ಸರ್ ಕೂಡ ಹಾಡಿರುವುದು ಹೆಮ್ಮೆಯ ವಿಚಾರ.

ಸಾಯಿ ಆರತಿ ರವಿಕುಮಾರ್, ಅನಸೂಯಾ, ಪಂ. ವಿ.ಎಂ. ನಾಗರಾಜ್, ರಾಜು ಅನಂತಸ್ವಾಮಿ, ಕರ್ನಾಟಕ ಕಲಾಶ್ರೀ ಎಸ್. ಬಾಲಿ ಮತ್ತು ಧ್ವನಿ ತಜ್ಞ ಅನಂತ್ ವೈದ್ಯನಾಥನ್ ಅವರಲ್ಲಿ ತರಬೇತಿ ಪಡೆದ ಗಾಯಕಿಯಾಗಿ ನನಗೆ ಹಾಗೂ 32ಕ್ಕೂ ಹೆಚ್ಚು ವಾದ್ಯಗಳನ್ನು ನುಡಿಸುವ ಪ್ರಾವೀಣ್ಯ ಹೊಂದಿರುವ ಹಾಗೂ ದಿಗ್ಗಜರಾದ ರಾಜು ಅನಂತಸ್ವಾಮಿ, ಹಂಸಲೇಖ, ಸಿ. ಅಶ್ವಥ್, ಗುರುಕಿರಣ್, ವಿ. ಮನೋಹರ್, ಎಸ್.ಪಿ.ಬಿ., ಎಸ್. ಜಾನಕಿ, ಅನುರಾಧ ಶ್ರೀರಾಮ್, ವಿಜಯ್ ಪ್ರಕಾಶ್ ಮುಂತಾದವರಿಗೆ ವಾದ್ಯ ಸಹಕಾರ ನೀಡಿರುವ ನನ್ನ ಅಣ್ಣ ಕಾರ್ತಿಕ್ ಪಾಂಡವಪುರ, ನಮ್ಮಿಬ್ಬರಿಗೂ, ಮೈಸೂರು ದಸರಾ, ಹಂಪಿ ಉತ್ಸವದ ವೇದಿಕೆಗಳು ಸೇರಿದಂತೆ ಸುಮಾರು 1000ಕ್ಕೂ ಹೆಚ್ಚು ಕಾರ್ಯಕ್ರಮಗಳಲ್ಲಿ ಹಾಡುವ, ನುಡಿಸುವ ಅವಕಾಶಗಳು ಸಿಕ್ಕಿವೆ. ಇದಕ್ಕೆ ಬಹುಮುಖ್ಯ ಕಾರಣ ನಮ್ಮ ರಾಜು ಸರ್.

ರಾಜು ಸರ್ ನಮಗೆ ವಿದ್ಯೆ ಕೊಟ್ಟ ಆಚಾರ್ಯರಾಗಿ ಮಾತ್ರ ಇರಲಿಲ್ಲ, ನಮ್ಮ ಬಾಂಧವ್ಯ ಅಷ್ಟಕ್ಕೆ ಸೀಮಿತವಾಗಲಿಲ್ಲ. ಸರಿ-ತಪ್ಪು ಹೇಳುವುದರಲ್ಲಿ ತಂದೆಯಾಗಿ, ಪ್ರೀತಿ ತೋರುವುದರಲ್ಲಿ ತಾಯಾಗಿ, ಕೆಟ್ಟದರಿಂದ ರಕ್ಷಿಸುವ ದೈವ ಕೈಯಾಗಿ, ಅಕ್ಕರೆ ತೋರುವುದರಲ್ಲಿ ಮಿತ್ರನಾಗಿ, ಎಲ್ಲಾ ಪಾತ್ರಗಳನ್ನು ವಹಿಸಿದ್ದರು. 2009ರಲ್ಲಿ ಅವರು ಅಗಲಿದಾಗ ಸಂಗೀತವೇ ನಮಗೆ ಬೇಡ ಎನ್ನುವಷ್ಟು ಆ ದುರಂತ ಕಾಡಿತು. ಆದರೆ, ಕಲಾವಿದ ಚಿರಾಯು. ಎಲ್ಲಿಯವರೆಗೆ ಒಬ್ಬ ಕಲಾವಿದನ ಕಲೆ ಜನರ ಮನವನ್ನು ಮುಟ್ಟುತ್ತದೆಯೋ, ಅಲ್ಲಿಯವರೆಗೆ ಆ ಕಲಾವಿದ ಬದುಕಿಯೇ ಇರುತ್ತಾನೆ. ಈ ವಿಚಾರ ನಮಗೆ ಬಲವಾಗಿ ಕಾಡಲಾರಂಭಿಸಿತು. ಅಂದು ಹುಟ್ಟಿಕೊಂಡಿದ್ದೇ ‘ರಾಜು ಗಾನೋತ್ಸವ’.

ಐವತ್ತರ ಸಂಭ್ರಮ

ನಮ್ಮ ಗುರುಗಳನ್ನು, ಅವರ ಹಾಡುಗಳನ್ನು ಎಂದಿಗೂ ಜನ ಮರೆಯಬಾರದು ಎಂಬ ಉದ್ದೇಶದೊಂದಿಗೆ ಅಂದಿನಿಂದ ಪ್ರತಿವರ್ಷ ಅವರ ಜನನ ದಿನವನ್ನು ಸಂಭ್ರಮಿಸುತ್ತ, ಅವರ ಜನ್ಮದಿನದ ನೆನಪಿನಲ್ಲಿ ಈ ಕಾರ್ಯಕ್ರಮನ್ನು ಆಯೋಜಿಸುತ್ತಾ ಬರುತ್ತಿದ್ದೇವೆ. 14ನೇ ವರ್ಷವಾದ ಈ ಬಾರಿ ರಾಜು ಅನಂತಸ್ವಾಮಿಯವರ 50ನೇ ಹುಟ್ಟುಹಬ್ಬದ ವಿಶೇಷವಾಗಿ ರಾಜು ಗಾನೋತ್ಸವವನ್ನು 50ಕ್ಕೂ ಹೆಚ್ಚು ಕಲಾವಿದರೊಂದಿಗೆ ಐದು ದಿನಗಳ ಸಂಗೀತ ಹಬ್ಬವಾಗಿ ಆಚರಿಸಿದೆವು. ಬೆಂಗಳೂರಿನ ಜೆಎಸ್‌ಎಸ್‌ ಸಭಾಂಗಣದಲ್ಲಿ ಏಪ್ರಿಲ್‌ 14ರಿಂದ 18ರವರೆಗೆ ನಡೆದ ಈ ‘ಗುರು ನಮನ’ ವಿಶೇಷವಾದದ್ದು. ಒಬ್ಬ ಗುರುವಿಗೆ ಈ ರೀತಿಯ ಐದು ದಿನಗಳ ಸಂಗೀತ ಹಬ್ಬವನ್ನು ಏರ್ಪಡಿಸಿರುವುದು ಸುಗಮ ಸಂಗೀತ ಕ್ಷೇತ್ರದಲ್ಲಿ ಅಪರೂಪವೇ ಹೌದು. ಒಂದಷ್ಟು ಗಣ್ಯರು, ಇನ್ನಷ್ಟು ಗಾಯಕರು, ಮತ್ತಷ್ಟು ವಾದ್ಯ ಕಲಾವಿದರು ಎಲ್ಲರೂ ಸೇರಿ ಈ ಬಾರಿಯ ‘ರಾಜು ಗಾನೋತ್ಸವ’ವನ್ನು ಫಳ ಫಳ ಹೊಳೆಯಿಸಿದರು.

‘ರತ್ನನ್ ವಿಲಾಸ ಮಧು ಪ್ರವಾಸ’ ಶೀರ್ಷಿಕೆಯ ವಿಭಿನ್ನ ರತ್ನನ್ ಪದಗಳ ಪ್ರದರ್ಶನ‌, ರಂಗಗೀತೆಗಳನ್ನು ಹಾಡಿ ವಿವಿಧ ರಂಗತಂಡಗಳು ಸಲ್ಲಿಸಿದ ‘ರಂಗಗೌರವ’, ‘ಭಾವ ಪರಂಪರಾ’ ಮೂಲಕ ನಮ್ಮ ಸಂಸ್ಥೆಯ ಹಾಗೂ ಬೆಂಗಳೂರಿನ ಕೆಲವು ಪ್ರಮುಖ ಸುಗಮ ಸಂಗೀತ ಶಾಲೆಗಳ ವಿದ್ಯಾರ್ಥಿಗಳಿಂದ ಸಂಗೀತ ಸೇವೆ, ರಾಜು ಸರ್ ಒಳಗಿನ ಅವರ ತಂದೆ ಮೈಸೂರು ಅನಂತಸ್ವಾಮಿಯವರಿಗೆ ವಿಶೇಷ ಸಮರ್ಪಣೆಯಾದ ‘ನನ್ನೊಳು ನಾ’ ಹಾಗೂ ಇವೆಲ್ಲದರ ಸಮಾರೋಪವಾಗಿ ರಾಜು ಅನಂತಸ್ವಾಮಿಯವರ ಅತ್ಯದ್ಭುತ ಸಂಯೋಜನೆಗಳನ್ನು ‘ರಾಜು ಕಟ್ಟೆ’ಯಲ್ಲಿ ಹಾಡಿ, ರಂಜಿಸಿ ಈ ಬಾರಿ ನಮ್ಮ ಪ್ರೀತಿಯ ರಾಜು ಸರ್‌ಗೆ ‘ಹ್ಯಾಪ್ಪಿ ಬರ್ತಡೆ’ ಹಾಡಿದೆವು.

ಮುಂದಿನ ವರ್ಷ ಹೊಸದಾಗಿ ಇನ್ನೇನು ಮಾಡುವುದು ಎಂಬ ಯೋಚನೆ ಈಗಿಂದಲೇ ನಮಗೆ ಶುರುವಾಗಿದೆ, ಎಷ್ಟೇ ಕಷ್ಟವಾದರೂ ಈ ಸಮಾರಂಭವನ್ನು ಖಂಡಿತ ಮಾಡೇ ಮಾಡ್ತೀವಿ. ಈ ಮೂಲಕ ನಮ್ಮೊಳಗಿನ ಗುರು ರಾಜು ಅನಂತಸ್ವಾಮಿ ಅವರಿಗೆ ಅನಂತಾನಂತ ನಮನ ಸಲ್ಲಿಸುವ ತುಡಿತ ನಮ್ಮಲ್ಲಿದೆ. ⇒v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT