ನೆನ್ನೆ ಮೆಟ್ಟಿಲು ಇಳಿಯುವಾಗ
ಕಾಲು ಜಾರಿತು ನೋಡು ತಟ್ಟನೆ
ನಿನ್ನ ನೆನಪಾಯಿತು
ಹಿಂದಕ್ಕೆ ಮುಂದಕ್ಕೆ ಜೋಲಿ ಹೊಡೆದು
ಬೀಳದೆ ನಿಂತಾಗ ಕಣ್ಣು ತುಂಬಿದವು
ಮುಂದೆ ಹೆಜ್ಜೆ ಇಡುವಾಗಲೂ
ನೀನು ಜೊತೆ ಇರಬಹುದೆನ್ನುವ
ಅನುಮಾನವೇ ಸುತ್ತ ಸುಳಿಯುತ್ತಿತ್ತು
ಸಣ್ಣದೊಂದು ಕಂಪನ
ಕಂಪಿಸುತ್ತಿರುವುದು ನೀನಾ ನಾನಾ
ತಿಳಿಯದ ಅಯೋಮಯ ಸ್ಥಿತಿ
ನಿನ್ನೊಳಗೆ ನಾನು ಹೇಗೋ
ನನ್ನೊಳಗೆ ನೀನು
ನಿಜ ನೀನಿನ್ನು ಜೀವಂತವಾಗಿದ್ದೀ
ಸತ್ತಿದ್ದು ನಾನು

ನಿನ್ನ ಸುಳಿವನ್ನು ಬಿಟ್ಟುಕೊಡದ ಗುಟ್ಟೊಂದು
ನನ್ನನ್ನು ತಲುಪದ ಪೋಸ್ಟ್ ಕಾರ್ಡಿನಂತೆ
ಆಟವಾಡಿಸುತ್ತಿದೆ...
ಸ್ವಲ್ಪ ಜೋರು ಗಾಳಿ ಬೀಸಿದರೆ ಹಾರಿಹೋಗುವ
ಸಪೂರ ಹುಲ್ಲು ಕಡ್ಡಿಯಂತೆ ಮನಸ್ಸು
ಹೊಯ್ದಾಡುತ್ತಿದೆ
ಬದುಕು ಅನಿಶ್ಚಿತ ಎನ್ನದಿರು
ಕಂಗೆಡಿಸುತ್ತಿದೆ ಅದರ ಪ್ರಮಾಣ

ಮೂರ್ತಿಗಿಂತಲೂ ಪ್ರಭಾವಳಿಯೇ ಆಕರ್ಷಕ
ಗಾಯಕ್ಕಿಂತಲೂ ನೋವೇ ತೀವ್ರ
ಹೀಗೇ ನೋಯಬೇಕು ನೋಯುತ್ತಲೇ ಇರಬೇಕು
ನೋವನ್ನೇ ಪ್ರೀತಿಸುತ್ತಾ...
ಕೈಮೇಲೊಂದು ಸುಟ್ಟ ಗಾಯ
ಬೆಂಕಿಯೊಂದಿಗೆ ಸರಸವಾಡಿದ್ದರ ಕುರುಹಾಗಿ
ಉಳಿದಿರಲಿ ಮಾಸದಂತೆ
ತಿಂಗಳಿಗೊಮ್ಮೆ ನೀನು ಹೆಣ್ಣು ಎಂದು
ನೆನಪಿಸುವ ಋತುಗಾನ
ನೋವಿನ ಜೇನಿನಲ್ಲದ್ದಿ ಒಂದೊಂದೇ ಅಂಗವನ್ನು
ಸೆಳೆಯುತ್ತ ಹೊಸ ಭಾಷ್ಯ ಬರೆಯುವ ಸವಿಗಾನ
ನಿಲ್ಲುವ ಹೊತ್ತಿಗೆ ಕೆಲಸಕ್ಕೆ ಬರಲೆಂದು
ಕಾಯ್ದಿರಿಸಿಟ್ಟ ನೀನೂ ಸಹ
ಅತ್ಯಂತ ಮಧುರ ನೋವು
ನೋವೇನು ಹೊಸದಲ್ಲ ಬಿಡು ನನಗೆ
ಆದರೂ ಒಂದು ವಿಷಾದ
ನೀನಿರಬೇಕಿತ್ತು...

ಇರಬೇಕಿತ್ತು ನೀನು
ಸೀರೆ ಉಟ್ಟಾಗ ಕಳ್ಳ ದೃಷ್ಟಿ ಹಾಯಿಸಲಿಕ್ಕೆ
ಸಣ್ಣಗೆ ಗುನುಗುವಾಗ ಮೆಲ್ಲಗೆ ಆಲಿಸಲಿಕ್ಕೆ
ಜ್ವರ ಬಂದು ಬಳಲುವಾಗ ಲಾಲಿಸಲಿಕ್ಕೆ
ಸ್ವಲ್ಪ ದಪ್ಪ ಆದೆ
ಟ್ರೆಡ್ ಮಿಲ್ ಹತ್ತು
ಡಂಬಲ್ಸ್ ಎತ್ತು
ಕೂದಲಿಗೆ ಡೈ ಹಾಕು
ಆಗಾಗ ಪಾರ್ಲರ್ ಗೆ ಹೋಗೋದು ಮರೀಬೇಡ
ನೀನು ಹೇಗಿದ್ರು ನನಗೆ ಚಂದಾನೇ ಕಣೆ
ಆದರೂ ಅವೆಲ್ಲವುಗಳಲ್ಲಿ ಇರುವ ಬದುಕಿನ ಆಸಕ್ತಿ
ಜೀವನ ಪ್ರೀತಿಯನ್ನ ಅಲ್ಲಗಳೆಯಲು
ಸಾಧ್ಯವಾ ಹೇಳು...
ಅಂತೆಲ್ಲ ಹೇಳಿ ಪರಮ ಸೋಮಾರಿ ನನ್ನ
ಜೋಂಪೆ ಕೂದಲ ಸರಿಸಿ ಹಣೆಯ ಚುಂಬಿಸಿ
ಕೋಣೆಯ ಕರ್ಟನ್ ಎಳೆದು
ನಿದ್ದೆಯ ಅಟ್ಟುವ ಕಿರಣಗಳ ಬರಮಾಡಿಕೊಂಡು
ಎಬ್ಬಿಸಲಿಕ್ಕಾದರೂ ನೀನು ನನ್ನ
ಪಕ್ಕದಲ್ಲೇ ಇರಬೇಕಿತ್ತು..
ಮರೆತಷ್ಟೂ ನೆನಪಿಗೆ ಸಲ್ಲುವ ನೀನು
ಕತ್ತಲೆಯ ಮನದಲ್ಲಿ ದೀಪವನ್ನಾದರೂ
ಹಚ್ಚಿಟ್ಟು ಹೋಗಬೇಕಿತ್ತು

ಅಂತೆಲ್ಲ ಚಡಪಡಿಸುವ ನಾನು ದಿಕ್ಕೆಟ್ಟು
ಅಲೆಯುವುದನ್ನು ಅಭ್ಯಾಸ ಮಾಡಿಕೊಂಡಿದ್ದೇನೆ ಇಳಿ
ಸಂಜೆಯ ಹೊತ್ತಲ್ಲಿ ಬಾನು ಕೆಂಪಾಗುವಾಗ
ಊರ ಹೊರಗಿನ ಸೇತುವೆಯ ಮೇಲೆ ನಿಂತು
ನೀರ ಮೇಲೆ ನಿನ್ನ ಪ್ರತಿಬಿಂಬ ಹುಡುಕುತ್ತೇನೆ
ಬಹುಶಃ ನೀನು ಬಿಂಬವಾಗಲೇ ಇಲ್ಲ
ನನ್ನ ಉದಾಸೀನ ಲಕ್ಷ್ಯಕ್ಕೂ ಬೀಳಬಾರದೆನ್ನುವ
ಹಠವಾದರೂ ಏನಿತ್ತು ನಿನಗೆ
ಹೋಗಹೋಗುತ್ತಾ ನೀನಂತು ಮಹಾಕಾವ್ಯವೇ
ಆಗಿ ಹೋದೆ
ನಿನ್ನನ್ನು ಮಾತುಬಾರದ ಪದಗಳಲ್ಲಿ ಹಿಡಿಯಲು
ನೋಡಿ ನಾ ಸೋಲುತ್ತಲೇ ಇದ್ದೇನೆ

ಗಾಳಿಯ ಸ್ಪರ್ಶ ನೀರಿನ ರುಚಿ
ಮಣ್ಣಿನ ಘಮ ಆಕಾಶದ ಬೆಳಕು
ಬೆಂಕಿಯೆದೆಯ ಕಡುಗಪ್ಪು ನೀಲಿಯೇ ನೀನು
ಅಂತೆಲ್ಲ ಭಾವಿಸಿ ಪಂಚಭೂತಗಳ ಸಾಕ್ಷಿಯಾಗಿ
ಅನಂಗ ನಿನ್ನನ್ನು ಕಾಯ ವಾಚಾ ಮನಸಾ
ಅಪ್ಪುವ ಮನಸಾಗುತ್ತದೆ
ಯಾವುದೊ ಲ್ಯಾಬಿನಲ್ಲಿ ಪ್ರಯೋಗಕ್ಕೆ ಒಳಗಾದ
ಪಂಚಾಭೂತಗಳಿಂದ ಜೀವವೊಂದು ಅಚಾನಕ್
ಸೃಷ್ಟಿಯಾಗುವಂತೆ ನೀನು ಹುಟ್ಟಿ
ಮತ್ತೊಮ್ಮೆ ಮಡಿಲ ಸೇರುವಂತಿದ್ದಿದ್ದರೆ
ನಾನು ಏಕಕಾಲಕ್ಕೆ ನಿನ್ನಬ್ಬೆಯೂ
ನಲ್ಲೆಯೂ ಆಗಿ ಸಾರ್ಥಕ ಕ್ಷಣವೊಂದರಲ್ಲಿ
ನಿನ್ನೊಳಗೆ ಮರುಹುಟ್ಟು ಪಡೆಯುತ್ತಿದ್ದೆ
ಈಗ ಬರಿ ನಿಟ್ಟುಸಿರಿನದೆ ರಾಜ್ಯಭಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ನೆನ್ನೆ ಮೆಟ್ಟಿಲು ಇಳಿಯುವಾಗ
ಕಾಲು ಜಾರಿತು ನೋಡು ತಟ್ಟನೆ
ನಿನ್ನ ನೆನಪಾಯಿತು
ಹಿಂದಕ್ಕೆ ಮುಂದಕ್ಕೆ ಜೋಲಿ ಹೊಡೆದು
ಬೀಳದೆ ನಿಂತಾಗ ಕಣ್ಣು ತುಂಬಿದವು
ಮುಂದೆ ಹೆಜ್ಜೆ ಇಡುವಾಗಲೂ
ನೀನು ಜೊತೆ ಇರಬಹುದೆನ್ನುವ
ಅನುಮಾನವೇ ಸುತ್ತ ಸುಳಿಯುತ್ತಿತ್ತು
ಸಣ್ಣದೊಂದು ಕಂಪನ
ಕಂಪಿಸುತ್ತಿರುವುದು ನೀನಾ ನಾನಾ
ತಿಳಿಯದ ಅಯೋಮಯ ಸ್ಥಿತಿ
ನಿನ್ನೊಳಗೆ ನಾನು ಹೇಗೋ
ನನ್ನೊಳಗೆ ನೀನು
ನಿಜ ನೀನಿನ್ನು ಜೀವಂತವಾಗಿದ್ದೀ
ಸತ್ತಿದ್ದು ನಾನು

ನಿನ್ನ ಸುಳಿವನ್ನು ಬಿಟ್ಟುಕೊಡದ ಗುಟ್ಟೊಂದು
ನನ್ನನ್ನು ತಲುಪದ ಪೋಸ್ಟ್ ಕಾರ್ಡಿನಂತೆ
ಆಟವಾಡಿಸುತ್ತಿದೆ...
ಸ್ವಲ್ಪ ಜೋರು ಗಾಳಿ ಬೀಸಿದರೆ ಹಾರಿಹೋಗುವ
ಸಪೂರ ಹುಲ್ಲು ಕಡ್ಡಿಯಂತೆ ಮನಸ್ಸು
ಹೊಯ್ದಾಡುತ್ತಿದೆ
ಬದುಕು ಅನಿಶ್ಚಿತ ಎನ್ನದಿರು
ಕಂಗೆಡಿಸುತ್ತಿದೆ ಅದರ ಪ್ರಮಾಣ

ಮೂರ್ತಿಗಿಂತಲೂ ಪ್ರಭಾವಳಿಯೇ ಆಕರ್ಷಕ
ಗಾಯಕ್ಕಿಂತಲೂ ನೋವೇ ತೀವ್ರ
ಹೀಗೇ ನೋಯಬೇಕು ನೋಯುತ್ತಲೇ ಇರಬೇಕು
ನೋವನ್ನೇ ಪ್ರೀತಿಸುತ್ತಾ...
ಕೈಮೇಲೊಂದು ಸುಟ್ಟ ಗಾಯ
ಬೆಂಕಿಯೊಂದಿಗೆ ಸರಸವಾಡಿದ್ದರ ಕುರುಹಾಗಿ
ಉಳಿದಿರಲಿ ಮಾಸದಂತೆ
ತಿಂಗಳಿಗೊಮ್ಮೆ ನೀನು ಹೆಣ್ಣು ಎಂದು
ನೆನಪಿಸುವ ಋತುಗಾನ
ನೋವಿನ ಜೇನಿನಲ್ಲದ್ದಿ ಒಂದೊಂದೇ ಅಂಗವನ್ನು
ಸೆಳೆಯುತ್ತ ಹೊಸ ಭಾಷ್ಯ ಬರೆಯುವ ಸವಿಗಾನ
ನಿಲ್ಲುವ ಹೊತ್ತಿಗೆ ಕೆಲಸಕ್ಕೆ ಬರಲೆಂದು
ಕಾಯ್ದಿರಿಸಿಟ್ಟ ನೀನೂ ಸಹ
ಅತ್ಯಂತ ಮಧುರ ನೋವು
ನೋವೇನು ಹೊಸದಲ್ಲ ಬಿಡು ನನಗೆ
ಆದರೂ ಒಂದು ವಿಷಾದ
ನೀನಿರಬೇಕಿತ್ತು...

ಇರಬೇಕಿತ್ತು ನೀನು
ಸೀರೆ ಉಟ್ಟಾಗ ಕಳ್ಳ ದೃಷ್ಟಿ ಹಾಯಿಸಲಿಕ್ಕೆ
ಸಣ್ಣಗೆ ಗುನುಗುವಾಗ ಮೆಲ್ಲಗೆ ಆಲಿಸಲಿಕ್ಕೆ
ಜ್ವರ ಬಂದು ಬಳಲುವಾಗ ಲಾಲಿಸಲಿಕ್ಕೆ
ಸ್ವಲ್ಪ ದಪ್ಪ ಆದೆ
ಟ್ರೆಡ್ ಮಿಲ್ ಹತ್ತು
ಡಂಬಲ್ಸ್ ಎತ್ತು
ಕೂದಲಿಗೆ ಡೈ ಹಾಕು
ಆಗಾಗ ಪಾರ್ಲರ್ ಗೆ ಹೋಗೋದು ಮರೀಬೇಡ
ನೀನು ಹೇಗಿದ್ರು ನನಗೆ ಚಂದಾನೇ ಕಣೆ
ಆದರೂ ಅವೆಲ್ಲವುಗಳಲ್ಲಿ ಇರುವ ಬದುಕಿನ ಆಸಕ್ತಿ
ಜೀವನ ಪ್ರೀತಿಯನ್ನ ಅಲ್ಲಗಳೆಯಲು
ಸಾಧ್ಯವಾ ಹೇಳು...
ಅಂತೆಲ್ಲ ಹೇಳಿ ಪರಮ ಸೋಮಾರಿ ನನ್ನ
ಜೋಂಪೆ ಕೂದಲ ಸರಿಸಿ ಹಣೆಯ ಚುಂಬಿಸಿ
ಕೋಣೆಯ ಕರ್ಟನ್ ಎಳೆದು
ನಿದ್ದೆಯ ಅಟ್ಟುವ ಕಿರಣಗಳ ಬರಮಾಡಿಕೊಂಡು
ಎಬ್ಬಿಸಲಿಕ್ಕಾದರೂ ನೀನು ನನ್ನ
ಪಕ್ಕದಲ್ಲೇ ಇರಬೇಕಿತ್ತು..
ಮರೆತಷ್ಟೂ ನೆನಪಿಗೆ ಸಲ್ಲುವ ನೀನು
ಕತ್ತಲೆಯ ಮನದಲ್ಲಿ ದೀಪವನ್ನಾದರೂ
ಹಚ್ಚಿಟ್ಟು ಹೋಗಬೇಕಿತ್ತು

ಅಂತೆಲ್ಲ ಚಡಪಡಿಸುವ ನಾನು ದಿಕ್ಕೆಟ್ಟು
ಅಲೆಯುವುದನ್ನು ಅಭ್ಯಾಸ ಮಾಡಿಕೊಂಡಿದ್ದೇನೆ ಇಳಿ
ಸಂಜೆಯ ಹೊತ್ತಲ್ಲಿ ಬಾನು ಕೆಂಪಾಗುವಾಗ
ಊರ ಹೊರಗಿನ ಸೇತುವೆಯ ಮೇಲೆ ನಿಂತು
ನೀರ ಮೇಲೆ ನಿನ್ನ ಪ್ರತಿಬಿಂಬ ಹುಡುಕುತ್ತೇನೆ
ಬಹುಶಃ ನೀನು ಬಿಂಬವಾಗಲೇ ಇಲ್ಲ
ನನ್ನ ಉದಾಸೀನ ಲಕ್ಷ್ಯಕ್ಕೂ ಬೀಳಬಾರದೆನ್ನುವ
ಹಠವಾದರೂ ಏನಿತ್ತು ನಿನಗೆ
ಹೋಗಹೋಗುತ್ತಾ ನೀನಂತು ಮಹಾಕಾವ್ಯವೇ
ಆಗಿ ಹೋದೆ
ನಿನ್ನನ್ನು ಮಾತುಬಾರದ ಪದಗಳಲ್ಲಿ ಹಿಡಿಯಲು
ನೋಡಿ ನಾ ಸೋಲುತ್ತಲೇ ಇದ್ದೇನೆ

ಗಾಳಿಯ ಸ್ಪರ್ಶ ನೀರಿನ ರುಚಿ
ಮಣ್ಣಿನ ಘಮ ಆಕಾಶದ ಬೆಳಕು
ಬೆಂಕಿಯೆದೆಯ ಕಡುಗಪ್ಪು ನೀಲಿಯೇ ನೀನು
ಅಂತೆಲ್ಲ ಭಾವಿಸಿ ಪಂಚಭೂತಗಳ ಸಾಕ್ಷಿಯಾಗಿ
ಅನಂಗ ನಿನ್ನನ್ನು ಕಾಯ ವಾಚಾ ಮನಸಾ
ಅಪ್ಪುವ ಮನಸಾಗುತ್ತದೆ
ಯಾವುದೊ ಲ್ಯಾಬಿನಲ್ಲಿ ಪ್ರಯೋಗಕ್ಕೆ ಒಳಗಾದ
ಪಂಚಾಭೂತಗಳಿಂದ ಜೀವವೊಂದು ಅಚಾನಕ್
ಸೃಷ್ಟಿಯಾಗುವಂತೆ ನೀನು ಹುಟ್ಟಿ
ಮತ್ತೊಮ್ಮೆ ಮಡಿಲ ಸೇರುವಂತಿದ್ದಿದ್ದರೆ
ನಾನು ಏಕಕಾಲಕ್ಕೆ ನಿನ್ನಬ್ಬೆಯೂ
ನಲ್ಲೆಯೂ ಆಗಿ ಸಾರ್ಥಕ ಕ್ಷಣವೊಂದರಲ್ಲಿ
ನಿನ್ನೊಳಗೆ ಮರುಹುಟ್ಟು ಪಡೆಯುತ್ತಿದ್ದೆ
ಈಗ ಬರಿ ನಿಟ್ಟುಸಿರಿನದೆ ರಾಜ್ಯಭಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.