ಯುಗಧರ್ಮ...
ಚೈತ್ರ ಚಿಗುರು ಸೊಬಗಿನ ಮುನ್ನುಡಿಯು ಯುಗಾದಿ ಹಬ್ಬ
ಮಾವುಬೇವು ತಳಿರುತೋರಣ ಕುಣಿಸುತಿವೆ ಖುಷೀಲಿ ಹುಬ್ಬ
ದೇವ-ದಿಂಡಿರು ಪೂಜೆ-ಪುನಸ್ಕಾರ ನಾಡತುಂಬ ಸಾಲುಹಬ್ಬ
ಪ್ರಕೃತಿಯನು ಪೂಜಿಸುವುದು ಯುಗಾದಿಯೆಂಬ ಹಾಡುಗಬ್ಬ |
ಸುಡುವ ಸೂರ್ಯನ ಕಂಡು ಕಡುನೋವನುಂಡ ಭೂಮಿ
ಅಗ್ನಿಜ್ವಾಲೆಯ ನುಂಗಿ ವಿರಮಿಸುತಲಿರುವ ಪರಮ ಸಂಯಮಿ
ನೆನೆದಂತೆ ಬರುತಿಹವು ತಿಥಿಗಳು ಅಷ್ಟಮಿ ನವಮಿ ದಶಮಿ
ಕೋಗಿಲೆಯ ಕೊರಳಲಿ ಬಂಧಿಯಾದಳು ಅಮರಪ್ರೇಮಿ |
ಪ್ರಭವ ವಿಭವ ಕ್ಷಯ ಅಕ್ಷಯ ಸರದಿಯಲಿ ಸಂವತ್ಸರ
ಹುಟ್ಟು ಸಾವು ಪ್ರಕೃತಿಯೊಲುಮೆ ಕಾಲವೆಂದು ನಿರಂತರ
ಪ್ರಮೋದ ವಿನೋದ ವಿಳಂಬಿ ವಿರೋಧ ತರತರ
ಬೇವುಬೆಲ್ಲ ನೋವುನಲಿವು ಏಳುಬೀಳು ಭವಾಂತರ |
ಗಿಡಗಿಡದಲು ಮುಗುಳು ಹೂಹೀಚುಕಾಯಿಯ ಒಗರು
ಅಡ್ಡಮಳೆಗೆ ಬಾಯ್ದೆರೆದ ಚರಾಚರಗಳಿಗೆಂತ ಪೊಗರು
ಬಿಸಿಲ ಬಿಸಿಯು ಮಳೆಯ ಹಸಿಯು ಜೀವಸ್ಫೂರ್ತಿ ಮರ್ಮ
ಬಾಳ ಹರಿವು ಬದುಕ ತಿರುವು ನಮ್ಮನಿಮ್ಮ ಯುಗಧರ್ಮ |