ಆಶಾ ಎ. ಶಿವಮೊಗ್ಗ
***
ನನ್ನೊಡಲೊಳು ಚಿಗುರೊಡೆಯುತ್ತಿರುವ
ಗರ್ಭವೇ ನೀ ಹೆಣ್ಣಾಗಿರಬೇಡ....
ಭಾರತಾಂಭೆಯೇ ನಲಗುತ್ತಿರುವ
ಈ ಘಳಿಗೆಯಲಿ
ನೀ ಹೆಣ್ತನವ ತಾಳಬೇಡ ಕೂಸೇ....
ಮೊನ್ನೆ ಮೊನ್ನೆ ಮಣಿಪುರದಲಿ
ಪುರುಷ ಅಹಂಕಾರಕೆ
ಸ್ತ್ರೀಯತ್ವ ಬೆತ್ತಲಾಗಿ
ನಡುರಸ್ತೆಯಲಿ ಹೆಣ್ತನದ
ಯೋನಿಯೊಳು ರಕ್ತ ಸೋರಿದೆ...
ನನ್ನೂರಿನ ಧರ್ಮ ಪರಿಪಾಲಕ
ಗುರುವೊಬ್ಬ...
ಎಳೆ ಶಿಷ್ಯೆಯ ಮೇಲೆ
ಪುರುಷತ್ವದ ಮೊಹರನ್ನೊತ್ತಿದ್ದಾನೆ...
ದೂರದ ಸಿಂಹಳದಲ್ಲಿ
ಬುದ್ಧನ ಪರಿಪಾಲಕನೊಬ್ಬನ
ಚಾಪಲ್ಯಕ್ಕೆ ಹೆಣ್ತನವೊಂದು
ಭೋದಿವೃಕ್ಷದ ಕೆಳಗೆ
ಬಲಿಯಾಗಿದೆ....ಕೂಸೇ...
ಸ್ತ್ರೀಯನ್ನು ಪೂಜಿಸುತ್ತಿದ್ದ
ನಮ್ಮ ಸಂಸ್ಕೃತಿಯಲ್ಲೀಗಾ
ಸ್ತ್ರೀಯೇ ಬಳಕೆಯ ವಸ್ತುವಾಗಿಹಳು
ಸಲೀಸಾಗಿ ಹೆಣ್ತನವ ಕಿತ್ತು
ಸಾಧನೆಗೈದೆವೆಂದು ಬೀಗುವ
ಈ ಪೈಶಾಚಿಕ ಮನಸ್ಸುಗಳಿರುವ
ಈ ಹೊತ್ತಿನಲಿ... ನೀ ಹೆಣ್ಣಾಗಿ
ರೂಪ ತಾಳಬೇಡ ಕೂಸೇ.....
ಹಸುಗೂಸಿನ ಲಿಂಗಕ್ಕೆ
ಬಾಯಾಕುವ ಕಾಮುಕರಿರುವ
ಈ ಹೊತ್ತಿನಲಿ
ನಿನ್ನ ಹೇಗೆ ಹೆರಲಿ.....
ನಿನ್ನಮ್ಮನೇ ಭಯದಿಂದಿರುವ
ಈ ಸಮಾಜದಿ
ರಕ್ತ ಮಾಂಸವ ಹೊತ್ತಾ.....
ಗರ್ಭವೇ.....ನೀ.....ಹೆಣ್ಣಿನಂಗವನು
ಪಡೆಯಬೇಡ......
ನೀ ಹೆಣ್ಣಾಗಬೇಡ...
ಹೆಣ್ತನವ ತಾಳ ಬೇಡ......
ಹೆಣ್ಣು ಉಸಿರಿನಲಿ ಕಣ್ತೆರೆಯಬೇಡ....
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.