ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪಿ. ಬಿ. ಪ್ರಸನ್ನ ಅವರ ಕವನ ‘ಯಾಕೆ’

ಪಿ. ಬಿ. ಪ್ರಸನ್ನ
Published 24 ಆಗಸ್ಟ್ 2024, 22:30 IST
Last Updated 24 ಆಗಸ್ಟ್ 2024, 22:30 IST
ಅಕ್ಷರ ಗಾತ್ರ

ಯಾಕೆ ಆಡುತ್ತಾರೆ
ಇಷ್ಟೊಂದು ಮಾತುಗಳನು
ಅರ್ಥಾರ್ಥ ಸಂಬಂಧ ಇಲ್ಲದವುಗಳನು?

ಹಿತ ಮಿತವಾಗಿ
ಸಂಬಂಧಗಳ ಹದಗೊಳಿಸಿದರೆ
ಚಿನ್ನಕ್ಕೆ ಪರಿಮಳ ಬಂದಂತೆ

ಅಷ್ಟಷ್ಟೇ ಇರಬೇಕು ಎಂದು
ಲೆಕ್ಕಾಚಾರ ಹಾಕುತ್ತೇನೆ ನಾನು
ಆದರೂ ಎಲ್ಲೋ ಲಯತಪ್ಪಿ
ಹೈರಾಣಾಗುವೆ

ಗಾಜಿನ ಮನೆಯಲ್ಲಿ ಕೂತು
ಕಲ್ಲು ಎಸೆಯುವುದೆಂದರೆ
ಅವರಿಗೆಂಥ ಪ್ರೀತಿ

ಕಣ್ಣಿದ್ದೂ ಕಾಣುವುದಿಲ್ಲ
ಒಡೆವ ಹರಳು
ಮೂಡುವ ಬಿರುಕು
ಅವತರಿಸುವ ಖಂಡ ಬಿಂಬಗಳು

ಪ್ರತೀ ಜಾತ್ರೆಯಲ್ಲೂ ಸಿಗುತ್ತಾರೆ
ಕುಶಲವಿಚಾರಿಸುವ ಮೊದಲೇ
ಒಂದೇ ಸಮನೆ ಹಲುಬುತ್ತಾರೆ
ಕಳಕೊಂಡ ಕನಸುಗಳ
ಲೆಕ್ಕ ನೀಡಿ
ಮಹಲಿನ ಮೇಲೆ ಮಹಲನು ಕಟ್ಟಿ
ಆಕಾಶಕ್ಕೆ ಏಣಿ ಇಡುವ
ಪಲ್ಲವಿಯ ಹಾಡುತ್ತಾರೆ

ಎಲ್ಲ ಮುಗಿಯಿತೋ
ನನ್ನೊಡಲ ದನಿ
ಹೊರಬೀಳುವ ಮೊದಲೇ
ಮುಖ ತಿರುವಿ ನಡೆದಾಯಿತು

ಹೇಳದೇ ಉಳಿದ ಮಾತುಗಳು
ನನ್ನೊಳಗೇ ಲಯವಾಗಿ
ಹಾಡಾಗಿ ಹರಿಯಬೇಕು ಎನ್ನುತ್ತವೆ
ಹೊಳೆಯುವುದೇ ಇಲ್ಲ
ಯಾವ ಸೊಲ್ಲೂ
ಯಾಕೆ!?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT