ಅಮ್ಮನಿಗೆ ಆಕರ್ಷಕವಾಗಿ ಸುಳ್ಳು ಹೇಳಲು ಬರುತ್ತಿತ್ತು! ಅದು ಕತೆಗಾರರಿಗೆ ಇರಬೇಕಾದ ಬಹುಮುಖ್ಯ ಗುಣ. ಅವಳ ದೆಸೆಯಿಂದ ನನಗೂ ಆ ಸದ್ಗುಣ (!) ಬಂದುಬಿಟ್ಟಿದೆ. ಒಂದು ದಿನದ ಮಟ್ಟಿಗೆ ತನ್ನ ತವರೂರು ಬಳ್ಳಾರಿಗೆ ಹೋಗಿ ಬಂದರೂ ಸಾಕು, ಕೇವಲ ಐವತ್ತು ಕಿಲೊಮೀಟರ್ ದೂರದ ಆ ‘ಮಹಾಪ್ರಯಾಣ’ವನ್ನು ಅಮ್ಮ ಮೂರು ದಿನಗಳ ಕಾಲ ಕತೆ ಮಾಡಿ ಹೇಳುತ್ತಿದ್ದಳು. ನಾವು ಮಕ್ಕಳು ಮತ್ತು ಅಪ್ಪನ ಮಾತಂತಿರಲಿ, ಓಣಿಯ ಜನರೂ ಮೈಯೆಲ್ಲಾ ಕಿವಿಯಾಗಿಸಿಕೊಂಡು ಆಕೆಯ ಬಳ್ಳಾರಿ ಯಾತ್ರೆಯ ವಿವರಗಳನ್ನು ಕೇಳುತ್ತಿದ್ದರು.

ಇನ್ನು ದೂರದ ಮಂತ್ರಾಲಯಕ್ಕೋ ತಿರುಪತಿಗೋ ಹೋಗಿಬಂದರಂತೂ ತೀರಿತು. ತಿಂಗಳುಗಟ್ಟಲೆ ಅದರ ಆಕರ್ಷಕ ಪ್ರವಾಸ ಕಥನ ನಿತ್ಯ ಧಾರಾವಾಹಿಯಾಗಿ ನಮ್ಮನೆಯಲ್ಲಿ ನಡೆಯುತ್ತಲೇ ಇರುತ್ತಿತ್ತು. ಹೇಗಾದರೂ ಮಾಡಿ ಆಕೆಯ ಕತೆಯಲ್ಲಿ ತಪ್ಪು ಹುಡುಕುವ ಕೆಟ್ಟ ಹವ್ಯಾಸ ನನಗೆ. ಆಕೆಯನ್ನು ಸಿಕ್ಕಿಸಿಹಾಕಲು ನಾನು ಕಷ್ಟದಿಂದ ಪ್ರಯತ್ನಿಸಿದರೆ, ನನಗಿಂತಲೂ ಹಲವು ನದಿಯ ನೀರು ಕುಡಿದ ಆಕೆ ಮತ್ತೊಂದು ಉಪಕತೆಯನ್ನು ಸೃಷ್ಟಿಸಿ ನನ್ನನ್ನೇ ಬೆಪ್ಪು ಮಾಡಿಬಿಡುತ್ತಿದ್ದಳು. ನನಗೇ ಗೊತ್ತಿಲ್ಲದೆ ಅವಳನ್ನು ಅನುಸರಿಸಲು ತೊಡಗಿದ ನಾನು, ಏನೋ ಸೃಷ್ಟಿಸಿ ಕತೆಯಾಗಿಸಿ ಹೇಳಿದರೆ, ಆಕೆ ಸುಲಭವಾಗಿ ನನ್ನ ತಪ್ಪನ್ನು ಗುರುತಿಸಿ ಖೆಡ್ಡಾದಲ್ಲಿ ಕೆಡವುತ್ತಿದ್ದಳು. ‘ಸುಳ್ಳು ಹೇಳೋ ಬುಳ್ಳಾ ಅಂದರೆ, ಬಳ್ಳಾರಿ ಮುಂದೆ ಬಲು ಹೊಳಿ ಬಲು ಹೊಳಿ ಅಂತಾನೆ’ ಎಂದು ಹೊಳೆಯಿಲ್ಲದ ಬಳ್ಳಾರಿಯ ಉಪಮೆ ಬಳಸಿ ನನ್ನನ್ನು ಹಂಗಿಸುತ್ತಿದ್ದಳು. ಆಕೆ ಬಳಸುತ್ತಿದ್ದ ಭಾಷೆ, ಗಾದೆ ಮಾತುಗಳು, ನುಡಿಗಟ್ಟುಗಳು, ಒಗಟುಗಳು, ಪುರಾಣದ ಕತೆಗಳು, ದೆವ್ವದ ಪ್ರಸಂಗಗಳು, ಯಾರದ್ದೋ ಎಡವಟ್ಟು ಸಂಗತಿಗಳು, ಹಾದರದ ಸಂಗತಿಗಳು, ಪೋಲಿ ಮಾತುಗಳು- ಒಂದೇ ಎರಡೇ! ಅವೆಲ್ಲವೂ ನನ್ನ ಆಸ್ತಿಯೆಂದು ಈಗ ಗೊತ್ತಾಗುವಾಗ ಕಣ್ಣುಗಳು ತೇವವಾಗುತ್ತವೆ.

ಆದರೆ ತಾಯಿಯಿಂದ ಗುಣಗಳು ಮಾತ್ರವಲ್ಲದೆ ರೋಗಗಳೂ ನಮಗೆ ಉಡುಗೊರೆಯಾಗಿ ಬರುತ್ತವೆ. ಆಕೆಗಿದ್ದ ಸಕ್ಕರೆಕಾಯಿಲೆ ಈಗ ನನಗೂ ಸಣ್ಣದಾಗಿ ಪ್ರಾರಂಭವಾಗಿದೆ. ಅಂದು ಅರ್ಥವಾಗದ ಅಮ್ಮನ ಒದ್ದಾಟ, ಅವಳ ವೇದನೆ, ಹಬ್ಬದ ದಿನ ಮನೆಯವರಿಗೆಲ್ಲಾ ಹೋಳಿಗೆ ಮಾಡಿ ಬಡಿಸಿ ತಾನು ಸಪ್ಪೆಯಾದ ಚಪಾತಿ ತಿನ್ನುವಾಗ ಅವಳ ಕಣ್ಣಲ್ಲಿ ಮೂಡುತ್ತಿದ್ದ ಭಾವ- ಎಲ್ಲವೂ ಈಗ ಅರ್ಥವಾಗಿ ಅವಳ ಮೇಲೆ ಇನ್ನಷ್ಟು ಪ್ರೀತಿ ಉಕ್ಕುತ್ತದೆ. ರೋಗವೂ ತಂದೆ-ತಾಯಿ ಕೊಟ್ಟ ಆಶೀರ್ವಾದ ಎಂದು ಭಾವಿಸಿದರೆ ನಮ್ಮ ನೋವು ತುಸು ತಗ್ಗುತ್ತದೆ. ನಮ್ಮ ಕಾಲದಲ್ಲಿರುವ ಒಳ್ಳೆಯ ಔಷಧಿಗಳು, ರೋಗದ ಕುರಿತು ಮಾಹಿತಿ, ಸುಲಭವಾಗಿ ರಕ್ತಪರೀಕ್ಷೆ ಮಾಡಿಸಿಕೊಳ್ಳುವ ವ್ಯವಸ್ಥೆ- ಅವೊಂದೂ ಇಲ್ಲದ ಹೊತ್ತಲ್ಲಿ ಆಕೆ ಪಟ್ಟ ಕಷ್ಟದ ಮುಂದೆ ನನ್ನ ಒದ್ದಾಟ ಅಷ್ಟೇನೂ ದೊಡ್ಡದಲ್ಲ ಎಂದು ಅರ್ಥವಾಗಿ ಮನಸ್ಸು ಸಮಾಧಾನಗೊಳ್ಳುತ್ತದೆ. ನನ್ನ ರಕ್ತಪರೀಕ್ಷೆಗಾಗಿ ಮನೆಗೆ ಬಂದ ವ್ಯಕ್ತಿಯನ್ನು ನೋಡಿದಾಗ, ಅದಕ್ಕಾಗಿ ಇಡೀ ದಿನ ವ್ಯಯಿಸಿ ಅಮ್ಮ ದೂರದ ಬಳ್ಳಾರಿಗೆ ಹೋಗಿ ಬರುತ್ತಿದ್ದುದು ನೆನಪಾಗಿ ಹೃದಯ ಬೆಚ್ಚಗಾಗುತ್ತದೆ.

ಆದರೆ ತಾಯಿಯ ಎಲ್ಲ ಗುಣಗಳೂ ನಮಗೆ ಬರುವುದಿಲ್ಲ. ಅಮ್ಮನಿಗೆ ಜಗತ್ತಿನಲ್ಲಿ ಯಾರನ್ನಾದರೂ ಏನನ್ನಾದರೂ ಎದುರಿಸುವ ಧೈರ್ಯವಿತ್ತು. ಎಂತಹ ಕಷ್ಟದ ಪರಿಸ್ಥಿತಿ ಬಂದರೂ ಹೋರಾಡುವ ಗುಂಡಿಗೆ ಅವಳಿಗಿತ್ತು. ಅಗತ್ಯವಿದ್ದರೆ ಬೀದಿಯಲ್ಲಿ ನಿಂತು ಜಗಳ ಮಾಡುವುದೂ ಗೊತ್ತಿತ್ತು. ಯಾರದೇ ಮುಲಾಜಿಗೆ ಒಳಗಾಗದೆ, ತನಗೆ ಬೇಡವೆನ್ನಿಸಿದ್ದಕ್ಕೆ ‘ಇಲ್ಲ’ ಎಂದು ಹೇಳುವುದು ಆಕೆಗೆ ಅತ್ಯಂತ ಸುಲಭವಾಗಿತ್ತು. ಯಾರಾದರೂ ತನ್ನ ಕುಟುಂಬವನ್ನು ಕೆಣಕಿದರೆ, ಅವಮಾನ ಮಾಡಿದರೆ, ಅವರ ಮುಖದ ಮೇಲೆ ನೀರಿಳಿಸುವುದನ್ನು ಕರಗತ ಮಾಡಿಕೊಂಡಿದ್ದಳು. ಆದರೆ ಅಪ್ಪನಿಗೆ ಅಂತಹ ಗಟ್ಟಿಗತನ ಇರಲೇ ಇಲ್ಲ. ಚಿಕ್ಕ ಕಂಟಕ ಎದುರಾದರೂ ಹೌಹಾರಿ ಕುಳಿತುಕೊಳ್ಳುತ್ತಿದ್ದ ಆತನನ್ನು ನೋಡಿ ‘ಈ ಗಂಡಸಿಗಂತೂ ಧೈರ್ಯಾನೇ ಇಲ್ಲ ನೋಡಪ್ಪ’ ಎಂದು ಪ್ರೀತಿಯಿಂದ ಸಿಡುಕುತ್ತಿದ್ದಳು. ಅಮ್ಮನ ಈ ಧೈರ್ಯದ ಸ್ವಭಾವ ನನಗೆ ಬರದೆ, ಪೂರ್ತಿ ಅಪ್ಪನಂತೇ ಆಗಿ ಕೂತಿದ್ದೇನೆ. ಅಪ್ಪನ ಆ ಭಯಸ್ಥ ಗುಣ ನನಗೂ ಬಂದುಬಿಟ್ಟಿದೆ. ಬದುಕಿದ್ದರೆ ಅಮ್ಮ ನನಗೂ ಅಪ್ಪನಿಗೆ ಬೈದಂತೆಯೇ ಬೈಯುತ್ತಿದ್ದಳೇನೋ ಎಂದು ಅನ್ನಿಸುತ್ತದೆ.

ನಾನು ಸರ್ಕಾರಿ ಕೆಲಸ ಸಿಕ್ಕರೂ ಸೇರದೆ ಖಾಸಗಿ ಮಲ್ಟಿನ್ಯಾಷನಲ್ ಕೆಲಸಕ್ಕೆ ಸೇರಿದ್ದಕ್ಕೆ ಅಮ್ಮ ಸಿಟ್ಟಾಗಿದ್ದಳು. ‘ರಿಟೈರ್ಡ್ ಆದ ಮೇಲೂ ಪಿಂಚಣಿ ಬರೋ ಸರ್ಕಾರಿ ಕೆಲಸ ಬ್ಯಾಡ ಅಂತೀಯಲ್ಲೋ, ನಿಂಗೆ ಬುದ್ಧಿ ನೆಟ್ಟಗದಾ ಇಲ್ಲಾ. ನಾಳೆ ಬೆಳಿಗ್ಗೆ ಅರವತ್ತು ದಾಟಿದರೆ ತಿನ್ನೋದಕ್ಕೆ ಏನು ಮಾಡ್ತಿ?’ ಎಂದು ಬೇಸರದಿಂದ, ಭವಿಷ್ಯದ ಭಯದಿಂದ ನನ್ನನ್ನು ಗದರಿಸಿದ್ದಳು. ನಾನು ಎದುರು ಮಾತಾಡದೆ ನನ್ನ ಪಾಡಿಗೆ ನಾನು ಖಾಸಗಿ ಕೆಲಸಕ್ಕೆ ಸೇರಿದ್ದೆ. ಅದು ತಿಳಿದಾಗ ‘ಎಲ್ಲಾ ಅಪ್ಪನ ಬುದ್ಧಿ. ಒಳಗೊಳಗೇ ಗುಮ್ಮನಗುಸುಗನ ತರಹ ಸಂಚು ಮಾಡಿಬಿಟ್ಟ’ ಎಂದಿದ್ದಳು.

ವಿಚಿತ್ರವೆಂದರೆ, ಅಮ್ಮ ತೀರಿದ ನಂತರ ನಾನು ಅಮ್ಮನನ್ನು ಕುರಿತು ಧ್ಯಾನಿಸುತ್ತಾ ‘ನಮ್ಮಮ್ಮ ಅಂದ್ರೆ ನಂಗಿಷ್ಟ’ ಎಂಬ ಕೃತಿಯನ್ನು ಬರೆದು ಪ್ರಕಟಿಸಿದೆ. ಈಗಲೂ ವರ್ಷಕ್ಕೆ ಏನಿಲ್ಲವೆಂದರೂ ಅದರ ಒಂದೆರಡು ಸಾವಿರ ಪ್ರತಿಗಳಾದರೂ ಖರ್ಚಾಗುತ್ತವೆ. ಸುಮಾರು 35,000 ಪ್ರತಿಗಳು ಈಗಾಗಲೇ ಮಾರಾಟವಾಗಿವೆ. ನಾನೇ ಅದರ ಪ್ರಕಾಶಕ. ತೆಲುಗು ಮತ್ತು ತಮಿಳಿನಲ್ಲೂ ಈ ಕೃತಿ ಪ್ರಕಟವಾಗಿ ಜನರ ಮೆಚ್ಚುಗೆ ಗಳಿಸಿದೆ. ಈಗ ಇಂಗ್ಲಿಷಿನಲ್ಲಿ ಖ್ಯಾತ ಪ್ರಕಾಶನ ಸಂಸ್ಥೆಯಿಂದ ‘I love my Amma’ ಎಂದು ಪ್ರಕಟವಾಗಿದೆ. ಇವೆಲ್ಲವುಗಳಿಂದ ನನಗೆ ಸಾಕಷ್ಟು ಗೌರವಧನ ಬರುತ್ತಿದೆ. ಒಂದರ್ಥದಲ್ಲಿ ಅಮ್ಮ ನನ್ನೊಳಗೆ ಕೂತು ಈ ಪುಸ್ತಕ ಬರೆಸಿ, ಪಿಂಚಣಿ ಬರುವಂತೆ ಮಾಡಿ ತನ್ನ ಕಾರ್ಯ ಸಾಧಿಸಿಕೊಂಡಳೆಂದೇ ನನಗನ್ನಿಸುತ್ತದೆ.

ಚಿಕ್ಕಂದಿನಲ್ಲಿ ಕಷ್ಟಗಳು ಇರಲಿಲ್ಲವೆಂದಲ್ಲ. ಆದರೆ ಆಗವು ಕಷ್ಟಗಳೆಂದು ಗೊತ್ತಾಗುತ್ತಿರಲಿಲ್ಲ. ನಮ್ಮ ಸುತ್ತಮುತ್ತಲಿನ ಎಲ್ಲರ ಮನೆಯ ಬದುಕೂ ನಮ್ಮಂತೆಯೇ ಇರುತ್ತಿತ್ತು. ತಿಂಗಳ ಕೊನೆಗೆ ಊಟಕ್ಕೆ ತುಸು ಕಷ್ಟವಾದರೆ, ವರ್ಷಕ್ಕೆ ಒಂದು ಜೊತೆಗಿಂತಲೂ ಹೆಚ್ಚು ಬಟ್ಟೆ ಕೊಳ್ಳಲು ಆಗದಿದ್ದರೆ, ಹರಿದ ಬಟ್ಟೆಗಳಿಗೆ ಮತ್ತೆ ಮತ್ತೆ ತೇಪೆ ಹಾಕಿಕೊಂಡರೆ, ದಿನಸಿ ಅಂಗಡಿಯಲ್ಲಿ ಉದ್ರಿ ಕೊಳ್ಳಲು ಹೋದಾಗ ಅಂಗಡಿಯವ ನಿರ್ಲಕ್ಷಿಸಿದರೆ... ನಾವು ಯಾರೂ ಅದನ್ನು ದೊಡ್ಡ ಸಮಸ್ಯೆಯಾಗಿ ಪರಿಗಣಿಸುತ್ತಿರಲಿಲ್ಲ.

ಸಣ್ಣ ಸ್ಟೀಲ್ ಪಾತ್ರೆ ಕೊಂಡರೂ ಸಾಕು, ಲಕ್ಷಾಂತರ ರೂಪಾಯಿ ಬೆಲೆಯ ಒಡವೆಯನ್ನು ಕೊಂಡಂತಹ ಸಂತೋಷವನ್ನು ಪರ್ಯಾಯವಾಗಿ ಅನುಭವಿಸುವುದನ್ನು ಅಮ್ಮ ಮತ್ತು ಆಕೆಯ ಗೆಳತಿಯರು ಕಂಡು ಕೊಂಡಿದ್ದರು. ಆದ್ದರಿಂದ ನನಗೆ ಬಾಲ್ಯ ಕಷ್ಟವಾಗಿತ್ತು ಎಂದು ಯಾವತ್ತೂ ಅನ್ನಿಸುವುದೇ ಇಲ್ಲ. ಅಮ್ಮನಿಗೂ ಹಾಗನ್ನಿಸದಂತೆ ಮನೆಯಲ್ಲಿ ಪ್ರೀತಿಯ ವಾತಾವರಣವಿತ್ತು.

(ಅಮ್ಮನ ಭಾವಚಿತ್ರವನ್ನು ಸಾರ್ವಜನಿಕವಾಗಿ ಬಳಸಲು ಲೇಖಕರು ಇಚ್ಛಿಸಿಲ್ಲ)

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-51-1230842777

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.