ಅಂದು ಗರಿಗಳ ಭಾನುವಾರ, ಗರಿಗಳ ಹಬ್ಬ.

ʻಇಲ್ಲಿ, ಗುಡಿಯ ಮುಂದಿನ ಅಂಗಳದಲ್ಲಿ ಗರಿಗಳಿಲ್ಲವಲ್ಲಾ? ಇಷ್ಟು ಬೇಗ ಗರಿಗಳನ್ನು ಮಂತ್ರಿಸುವ ಕೆಲಸವೂ ಮುಗಿಯಿತೇ? ಪೂಜೆಯೂ ಮುಗಿದುಬಿಟ್ಟಿದೆಯಾ? ನಾವು ಬರುವುದು ತಡವಾಯಿತೆ? ಅಥವಾ ಸಂತೆಯ ಮೊದಲೇ ಗಂಟು ಕಳ್ಳರು ಸೇರುವಂತೆ, ನಾವು ಮೊದಲೇ ಗುಡಿ ಅಂಗಳಕ್ಕೆ ಬಂದು ಸೇರಿದೆವಾ?ʼ

ಅಪ್ಪ ಚಿಂತಿಸುತ್ತಾ ಗುಡಿಯ ಹೊರಗಡೆಯೆ ನಿಂತಿದ್ದರು.

ಅಮ್ಮ ಮತ್ತು ಮೂವರು ಮಕ್ಕಳು ಗುಡಿಯ ಒಳಗೆ ಹೋಗಿ ಪೀಠದ ಮುಂದಿನ ಐದನೇ ಬೆಂಚಿನಲ್ಲಿ ಕುಳಿತುಕೊಂಡಿದ್ದರು.

ಮಕ್ಕಳಿಗೆ ಚಡಪಡಿಕೆ ಶುರುವಾಗಿತ್ತು. ಊರಲ್ಲಾಗಿದ್ದರೆ, ಇಷ್ಟರಲ್ಲಿ ಅವರೆಲ್ಲರ ಕೈಯಲ್ಲಿ ಗರಿಗಳು ತೊನೆದಾಡುತ್ತಿದ್ದವು. ಗುಡಿಯ ಅಂಗಳದಲ್ಲಿ ಹಾಕಿದ ಟೇಬಲ್ಲಿನ ಮೇಲೆ ಹರಡಿದ ಎಳೆಯ ಟೆಂಗಿನ ಗರಿಗಳನ್ನು ಸ್ವಾಮಿಗಳು ಮಂತ್ರಿಸುತ್ತಿದ್ದಂತೆಯೇ, ಕೆಲವು ಪೀಠದ ಬಾಲಕರು ಟೇಬಲ್ ಹಿಂದೆ ನಿಂತುಕೊಂಡು ದೈವಪ್ರಜೆಗಳಿಗೆ ಒಂದೊಂದಾಗಿ ಮಂತ್ರಿಸಿದ ಗರಿಗಳನ್ನು ಹಂಚುತ್ತಿದ್ದರು. ಗರಿಗಳನ್ನು ಪಡೆದ ವಿಶ್ವಾಸಿಕರು ಹೆಣ್ಣು, ಗಂಡು, ಮುದುಕರು ಮುದಕಿಯರು, ಹುಡುಗರು ಹುಡುಗಿಯರು ಮತ್ತು ಅವರವರ ಅಮ್ಮ ಅಪ್ಪಂದಿರ ಮಡಿಲಲ್ಲಿದ್ದ ಚಿಕ್ಕ ಚಿಕ್ಕಕೂಸುಗಳು ಕೈಯಲ್ಲಿ ಗರಿಗಳನ್ನು ಹಿಡಿದುಕೊಂಡು, ಕಂಚಿನ ಏಲುಬೆ ಕೋಲು ಹಿಡಿದು ಸಾಗುತ್ತಿದ್ದ ಪೀಠ ಬಾಲಕರು ಮತ್ತು ಅವರ ಹಿಂದೆ ಗುರುಗಳು ಇದ್ದ ಮೆರವಣಿಗೆಯನ್ನು ಹಿಂಬಾಲಿಸುತ್ತಾ ಗುಡಿಯ ಸುತ್ತ ಸಾಗುತ್ತಿದ್ದರು. ಕೊನೆಗೆ ಗುರುಗಳ ನೇತೃತ್ವದ ಮೆರವಣಿಗೆ ಗುಡಿಯ ತಲೆಬಾಗಿಲಿನಿಂದ ಗುಡಿ ಪ್ರವೇಶ ಪಡೆಯುತ್ತಿತ್ತು. ಸಂಭ್ರಮದ ಪಾಡು ಪೂಜೆ ಮುಗಿಯುತ್ತಿದ್ದಂತೆಯೆ, ಗುಡಿಯಿಂದ ಹೊರಗೆ ಬರುವಷ್ಟರಲ್ಲಿ, ಹಿರಿಯರು ಗರಿಗಳನ್ನು ಮಡಚಿ ಶಿಲುಬೆಯ ಆಕಾರದಲ್ಲಿ ಸಿದ್ಧಪಡಿಸಿ ಮಕ್ಕಳ ಕೈಗೆ ಒಪ್ಪಿಸಿರುತ್ತಿದ್ದರು.

ಆದರೆ ಇಲ್ಲಿ ಈಗ, ಹಬ್ಬದ ದಿನವಾದರೂ ವಿಚಿತ್ರ ಎನ್ನುವಂತೆ, ಗುಡಿಯು ಭಣ ಗುಡುತ್ತಿತ್ತು. ಗುಡಿಯಲ್ಲಿನ ಬೆಂಚುಗಳ ಮೇಲೆ ಯಾರೊಬ್ಬರೂ ಕುಳಿತಿರಲಿಲ್ಲ.

ಆದರೆ ತುಸು ದೂರದಲ್ಲಿ ಒಬ್ಬ ಧೋತರ ಮತ್ತು ಬಿಳಿಯ ಅಂಗಿ ತೊಟ್ಟಿದ್ದ ಮುಪ್ಪಾನು ಮುದುಕ ಕೋಲು ಹಿಡಿದುಕೊಂಡು ಅರಳಿ ಮರದ ಕಟ್ಟೆಯ ಮೇಲೆ ಕುಳಿತಿದ್ದ. ಅವನ ತಲೆಯ ಮೇಲೆ ಪಟಗ ಇತ್ತು. ʻಅವನನ್ನಾದರೂ ಕೇಳಿದರಾಯಿತುʼ ಎಂದುಕೊಳ್ಳುತ್ತಾ ಅಪ್ಪ ಜೋಸೆಫಪ್ಪ ಅವನತ್ತ ನೋಡುತ್ತಿದ್ದರು.

ಅಷ್ಟರಲ್ಲಿ ಮಡದಿ ಅನ್ನಮ್ಮ ಮತ್ತು ಮಕ್ಕಳು ಕಿಟ್ಟಿ -ಕ್ರಿಸ್ಟೋಫರ್, ಜೀವನ – ಜಾನ್ ಮತ್ತು ಮರಿಯವ್ವ – ಮೇರಿ, ಅಪ್ಪ ಜೋಸೆಫಪ್ಪನ ಹತ್ತಿರ ಬಂದು ನಿಂತಿದ್ದರು.

ʻʻಅಪ್ಪ, ಗುಡಿಯಲ್ಲಿ ಯಾರೂ ಇಲ್ಲʼʼ ಕಿರಿಯ ಮಗ ಕಿಟ್ಟಿ ಅಪ್ಪನ ಪ್ಯಾಂಟು ಹಿಡಿದು ಎಳೆದು ಕೇಳಿದ.

ʻʻಹೌದೂರಿ, ಒಳಗೆ ಒಬ್ಬರೂ ಕುಳಿತಿಲ್ಲ. ಒಳ ಹೋಗಿ, ಸತ್ಪ್ರಸಾದ ಸಂಪುಟದತ್ತ ಮುಖ ತಗ್ಗಿಸಿ ಗೌರವ ತೋರಿ, ಬೆಂಚಿನಲ್ಲಿ ಕುಳಿತು ಮೊಣಕಾಲುರಿ ಪರಲೋಕ ದೇವ ಪ್ರಾರ್ಥನೆ ಹೇಳಿದ ನಂತರ ಸುಮ್ಮನೇ ಕುಳಿತುಕೊಳ್ಳಲಾಗದೇ, ನಾವೂ ಹಾಗೆಯೇ ಎದ್ದು ಬಂದೆವು.ʼʼ ಮಡದಿ ಅನ್ನಮ್ಮ ನುಡಿದಳು.

ʻʻಸರಿ, ಅಲ್ಲೊಬ್ಬರು ಯಜಮಾನರು ಕುಳಿತುಕೊಂಡಿದ್ದಾರೆ. ಕೇಳಿ ನೋಡೋಣ’’ ಅಪ್ಪ ಜೋಸೆಫಪ್ಪ ಹೇಳುತ್ತಿದ್ದಂತೆಯೇ, ಐವರೂ ಅಜ್ಜ ಕುಳಿತಿದ್ದ ಅರಳಿ ಮರದ ಕಟ್ಟೆಯತ್ತ ಸಾಗಿದರು.

ʻʻಸ್ತೋತ್ರ ಯಜಮಾನರೆ, ಯಾಕೆ ಇಲ್ಲಿ ಒಬ್ಬರೂ ಕಾಣುತ್ತಿಲ್ಲವಲ್ಲ? ಗರಿಗಳ ಹಬ್ಬದ ದಿನ ಗುಡಿಯು, ಗುಡಿಯ ಅಂಗಳವೂ ಬರಿದಾಗಿದೆಯಲ್ಲ?ʼʼ

ʻʻನಿಮಗೂ ಸ್ತೋತ್ರಪಾ, ನೀವು ಈ ಊರಿಗೆ ಹೊಸಬರಂಗ ಕಾಣಸ್ತಿದ್ದೀರಿ?ʼʼ

ʻʻಹೌದು ಯಜಮಾನರೆ, ನಾವು ಈ ಊರಿಗೆ ಹೊಸಬರೇನಲ್ಲ. ಆದರೆ, ಈ ಪ್ರದೇಶಕ್ಕೆ ಹೊಸಬರು ಅಷ್ಟೆ.ʼʼ

ʻʻಅದೇ ಅಂದುಕೊಂಡೆ. ಈ ಊರವರೇ ಆಗಿದ್ದರೆ ನೀವು ಇಲ್ಲಿ ನಿಂತಿರುತ್ತಿರಲಿಲ್ಲ. ಅಲ್ಲಿ ಊರಲ್ಲಿನ ದಾನಿಯೇಲಪ್ಪನ ಕತ್ತರಿ ಹತ್ತಿರ ಹೋಗಿರುತ್ತಿದ್ದಿರಿ.ʼʼ

ʻʻಅಲ್ಲಿಗೇಕೆ ಹೋಗಬೇಕು? ಅಜ್ಜಾ ಗುಡಿ ಇರೋದು ಇಲ್ಲಲ್ಲಾʼʼ ಮಡದಿ ಅನ್ನಮ್ಮ ಅನುಮಾನದಿಂದ ಕೇಳಿದಳು.

ʻʻಅದೊಂದು ದೊಡ್ಡ ಕತೆಯಮ್ಮ. ಅದನ್ನ ಈಗ ಯಾರು ಕೇಳ್ತಾರೆ? ಎಲ್ಲಾ ಜನ ಅಲ್ಲಿ ಹೋಗಿದ್ದಾರೆ. ನೀವು ಹೋಗಿ.ʼʼ

ಅಜ್ಜನ ಮಾತು ಮುಗಿಸುವುದೆ ತಡ, ಅವನ ಬಳಿ ಸಾರಿದ ಕಿರಿಯ ಮಗ ಕಿಟ್ಟಿ ʻʻಅದೇನು ಕತೆ? ಹೇಳಿ ಅಜ್ಜ, ನಾವು ಖಂಡಿತ ಕೇಳಿಸಿಕೊಳ್ತೀವಿ. ಅಪ್ಪ, ಅಮ್ಮಾ ಬನ್ರಿ, ಅಜ್ಜ ಅದೇನೋ ಕತೆ ಹೇಳ್ತಾರಂತೆ, ಕೇಳೋಣವಂತೆʼʼ ದುಂಬಾಲು ಬಿದ್ದ.

ʻʻಸರಿ ಗುಡಿಗೆ ಸ್ವಲ್ಪ ಬೇಗನೆ ಬಂದೆವೋ ಏನೋ? ಎಲ್ಲೋ ಎಡವಟ್ಟಾದಂತಿದೆ. ಸರಿ. ಅಜ್ಜನ ಕತೆಯನ್ನಾದರೂ ಕೇಳೋಣʼʼ ಅಪ್ಪ ಜೋಸೆಫಪ್ಪ ನುಡಿದ.

ಎಲ್ಲರೂ ಗುಡಿಯ ಪಕ್ಕದ ಅಂಗಳದಲ್ಲಿನ ಅರಳಿಮರದ ಕಟ್ಟೆಯ ಮೇಲೆ, ಅಜ್ಜನ ಸುತ್ತ ಜಾಗ ಮಾಡಿಕೊಂಡು ಕುಳಿತುಕೊಂಡರು.

ಅದು ನಾಲ್ಕಾರು ತಲೆಮಾರುಗಳ ಹಿಂದಿನ ಕತೆ.

ಅದೇ ಆಗ ಪ್ಲೇಗ್ ಹಾವಳಿ ತಗ್ಗಿತ್ತು. ಕಾಡು ಮೇಡುಗಳಲ್ಲಿ ಕಾಲ ಕಳೆಯುತ್ತಾ, ಗಡ್ಡೆ ಗೆಣಸುಗಳನ್ನು ತಿನ್ನುತ್ತಾ ಹತ್ತಾರು ತಿಂಗಳುಗಟ್ಟಲೇ ಊರು ತೊರೆದು ಹೋದವರು ಒಬ್ಬೊಬ್ಬರೇ ತಮ್ಮ ಊರುಗಳಿಗೆ ಮರಳುತ್ತಿದ್ದರು. ಈ ಊರಿಗೆ ಇಟಲಿಯಿಂದ ಬಂದಿದ್ದ ಕೆಲವು ಯೇಸುಸಭೆಯ ಪಾದ್ರಿಗಳು ಊರ ಹೊರಗಿನ ಕೆರೆಯ ಅಂಗಳದಲ್ಲಿ ಡೇರೆ ಹಾಕಿ ಠಿಕಾಣಿ ಹೂಡಿದ್ದರು. ಒಕ್ಕಲುತನ ಮತ್ತು ನೇಕಾರಿಕೆ ಮಾಡುತ್ತಿದ್ದ ಸ್ಥಳೀಯ ಕ್ರೈಸ್ತರು ಅವರೊಂದಿಗೆ ಅಲ್ಲಿ ವಾಸವಾಗಿದ್ದರು. ಕಂಪೆನಿ ಸರ್ಕಾರ ಅವರಿಗೆ ಕಾಳುಕಡಿಯ ವ್ಯವಸ್ಥೆ ಮಾಡಿದ್ದಂತೆ ಕಾಣುತ್ತದೆ. ಆ ಡೇರೆ ಹಾಕಿ ನೆಲೆನಿಂತ ಜಾಗವನ್ನು ಕ್ಯಾಂಪ್ ಎಂದು ಕರೆಯಲಾಗುತ್ತಿತ್ತು. ಕ್ರಮೇಣ ಅದು ಆ ಊರಿನ ಒಂದು ಬಡಾವಣೆಯಾಗಿ ಬೆಳೆದುಬಿಟ್ಟಿತು.

ಹಳೆಯ ಊರ ಮಧ್ಯದಲ್ಲಿ ಉಮಾಮಹೇಶ್ವರನ ಗುಡಿ ಇತ್ತು. ಅಲ್ಲಿನ ಹೊಕ್ಕು ತುಂಬುವ ಸಿಹಿ ನೀರಿನ ಬಾವಿ, ಊರವರ ಬಾಯಾರಿಕೆ ತಣಿಸುತ್ತಿತ್ತು. ಊರಲ್ಲಿ ಅಲ್ಲಲ್ಲಿ, ಬಳಕೆಯ ನೀರಿನ ಬಾವಿಗಳಿದ್ದವು. ಉತ್ತರದ ದಿಕ್ಕಿನಲ್ಲಿ ಅಗಸಿ ಬಾಗಿಲಿನ ಹೊರಗೆ ಸಾಧಾರಣ ಊರ ಹೊರಗೆ ಹನುಮಂತನ ಗುಡಿ ಇದ್ದರೆ, ಈ ಕಡೆಗೆ ದಕ್ಷಿಣದ ದಿಕ್ಕಿನಲ್ಲಿ ಕೆರೆಕೋಡಿಯ ಹತ್ತಿರ ಕೋಡಿ ಗಂಗಮ್ಮನ ಗುಡಿ ಇತ್ತು. ಪೂರ್ವ ಮತ್ತು ನೈಋತ್ಯ ದಿಕ್ಕಿನ ದಿನ್ನೆಯ ಮೇಲೆ ಸಂತ ಇಗ್ನೇಸಪ್ಪರ ಗುಡಿ ಇತ್ತು. ಅದರ ಸುತ್ತಲಲ್ಲಿ ಬೆಳೆದ ಚಿಕ್ಕ ಬಡಾವಣೆ ಕ್ರೈಸ್ತರಿಗೆ ಸೇರಿತ್ತು. ಅದು ಹಿಂದಿನ ಕಾಲದ ಕ್ಯಾಂಪ್ ಅಂತೆ. ಅದರಂತೆಯೇ ಪಶ್ಚಿಮದಲ್ಲಿ ಶಾ ವಲಿ ದರ್ಗಾದ ಸುತ್ತ ಸಾಬರ ಬಡಾವಣೆ ಇತ್ತು. ಊರಿನ ವಿಶೇಷತೆ ಏನೆಂದರೆ, ಈ ಊರಲ್ಲಿ ಒಬ್ಬ ಪಂಚಮನ ಮನೆಯೂ ಇರಲಿಲ್ಲ. ಊರಲ್ಲಿದ್ದ ಕೆಲವರು ಸಮಯಾವಕಾಶವಿದ್ದಾಗ, ರವಿವಾರ ಇಗ್ನೇಸಪ್ಪರ, ಸೋಮವಾರ ಉಮಾಮಹೇಶ್ವರರ, ಮಂಗಳವಾರ ಹನುಮಂತನ ಗುಡಿಗಳಿಗೆ, ಗುರುವಾರ ಬ್ರಾಹ್ಮಣರ ಓಣಿಯಲ್ಲಿರುವ ಮಂತ್ರಾಲಯ ಶ್ರೀಗಳ ಬೃಂದಾವನಕ್ಕೆ, ಶುಕ್ರವಾರ ದರ್ಗಾಕ್ಕೆ ಭೇಟಿಕೊಡುವುದನ್ನು ರೂಢಿ ಮಾಡಿಕೊಂಡಿದ್ದರು.

ಪ್ಲೇಗ್ ಹಾವಳಿ ನಿಲ್ಲುತ್ತಿದ್ದಂತೆಯೇ ಊರು ಬಿಟ್ಟುಹೋದ ಜನ ಊರಲ್ಲಿ ಮತ್ತೆ ನೆಲೆಸಲು ತೊಡಗುತ್ತಿದ್ದಂತೆಯೇ ಊರಲ್ಲಿ ಲವಲವವಿಕೆ ಉಂಟಾಗಿತ್ತು. ಊರಲ್ಲಿನ ಜನ ಕೆರೆ ಗಂಗಮ್ಮನ ಪಕ್ಕದಲ್ಲಿ ಪ್ಲೇಗ್ಮ್ಮನ ಗುಡಿ ಕಟ್ಟಿ ಜಾತ್ರೆ ನಡೆಸುವ ಪರಿಪಾಠ ಆರಂಭಿಸಿದ್ದರು. ಶಾ ವಲಿ ದರ್ಗಾದ ವಾರ್ಷಿಕ ಉರುಸು ಮತ್ತೆ ಆರಂಭವಾಗಿತ್ತು. ಊರಲ್ಲಿ ವಿವಿಧ ಓಣಿಗಳಲ್ಲಿ ಕಮ್ಮಾರರ ಓಣಿ, ಕುಂಬಾರರ ಓಣ, ನೇಕಾರರ ಓಣಿ ಹೀಗೆ ವಿವಿಧ ಓಣಿಗಳಲ್ಲಿ ಹರಿದು ಹಂಚಿಹೋಗಿದ್ದ ಕ್ರೈಸ್ತರು, ಕ್ಯಾಂಪಿನ ದೆಸೆಯಿಂದ ಒಂದೇ ಬಡಾವಣೆಯಲ್ಲಿ ನೆಲೆಸುವಂತಾಗಿತ್ತು. ಅದನ್ನು ಮಿಷನ್ ಕಂಪೌಂಡ್ ಎಂದು ಜನ ಕರೆಯುತ್ತಿದ್ದರು. ಕ್ರೈಸ್ತ ಮಿಷನರಿಗಳ ಹೆಸರಿನಲ್ಲಿ ಆ ಬಡಾವಣೆ ಮಿಷನ್ ಕಂಪೌಂಡ್ ಎಂದು ಹೆಸರಾಗಿತ್ತು.

ಎಲ್ಲ ಊರುಗಳು ಅಭಿವೃದ್ಧಿಗೆ ತೆರೆದುಕೊಂಡಂತೆ ಈ ಊರು ಅಭಿವೃದ್ಧಿಯತ್ತ ಮುಖ ಮಾಡತೊಡಗಿತ್ತು. ಮಿಷನರಿಗಳು ಬಂದಾಗ ಅವರೊಂದಿಗೆ ಆಸ್ಪತ್ರೆಯು ಬಂದಿತ್ತು. ಜೊತೆಗೆ ಇಗ್ನೇಸಪ್ಪರ ಗುಡಿಯನ್ನು ಕಲ್ಲಿನಲ್ಲಿ ದೊಡ್ಡದಾಗಿ ಕಟ್ಟಲಾಗಿತ್ತು. ಮಿಷನರಿಗಳ ಪ್ರಯತ್ನದ ದೆಸೆಯಿಂದ ಊರಿಗೆ ಒಂದು ವೆರ್ನಾಕ್ಯುಲರ್ ಶಾಲೆ ಬಂದಿತ್ತು. ಪಾದ್ರಿಗಳ ಮನೆಗೆ ಅಂಟಿಕೊಂಡಂತೆ ಪೋಸ್ಟಾಫೀಸು ಬಂದಿತ್ತು. ರಾತ್ರಿ ಆಗುತ್ತಿದ್ದಂತೆಯೇ ಊರ ಬೀದಿಗಳಲ್ಲಿ ಎಣ್ಣೆ ದೀಪ ಹಚ್ಚುವ ಕೆಲಸ ಪ್ರಾರಂಭವಾಯಿತು. ಸಂಜೆಯ ಇಳಿ ಹೊತ್ತಿನಲ್ಲಿ ಬಿದರಿನ ಏಣಿ ಮತ್ತು ಚಿಮಣಿ ಎಣ್ಣೆ ಡಬ್ಬ ಹೊತ್ತುಕೊಂಡು ಬರುತ್ತಿದ್ದ ದಾನಿಯೇಲಪ್ಪ, ದೀಪದ ಕಂಬಕ್ಕೆ ಏಣಿ ಹಚ್ಚಿ, ಅದನ್ನು ಏರಿ ಚೌಕಾಕಾರದ ದೊಡ್ಡ ಕಂದೀಲಿನ ಒಳಗಿದ್ದ ಚಿಮಣಿಎಣ್ಣೆಯ ದೀಪಕ್ಕೆ ಎಣ್ಣೆ ಸುರಿದು ದೀಪ ಬೆಳಗುತ್ತಿದ್ದ. ಒಂದು ಅರ್ಧ ಗಂಟೆಯಲ್ಲಿ ಎಲ್ಲರ ಓಣಿಯಲ್ಲಿನ ದೀಪ ಬೆಳಗುವ ಕೆಲಸ ಮುಗಿಯುತ್ತಿತ್ತು.

ದೂರದ ಸೀಮೆಯಿಂದ ಚಿಮಣಿ ಎಣ್ಣೆ ಬರುವ ಮೊದಲು ಗಾಣಿಗರ ಮನೆಯಿಂದ ಗಾಣದಿಂದ ಬಸಿದ ಉಳಿಕೆಯ ಬೆರೆಕೆ ಎಣ್ಣೆಯ ದೀಪ ಹಚ್ಚುತ್ತಿದ್ದ ದಾನಿಯೇಲಪ್ಪನನ್ನು ಊರವರು ದೊಂದಿಯ ದಾನಪ್ಪ ಎಂದು ಕರೆಯುತ್ತಿದ್ದರು. ಊರಲ್ಲಿ ಓಣಿಗಳ ದೀಪಗಳನ್ನು ಅಳವಡಿಸುವ ಪ್ರಕ್ರಿಯೆ ಆರಂಭವಾಗುತ್ತಿದ್ಧಂತೆಯೇ ಪೋಸ್ಟಾಫೀಸಿನ ಜವಾಬ್ದಾರಿ ಹೊತ್ತಿದ್ದ ಇಗ್ನೇಸಪ್ಪರ ಗುಡಿಯ ಸ್ವಾಮಿ ಫಾದರ್ ವಲ್ಲಿ ಅವರು, ಪಟ್ಟಣದ ಮಾಮಲೇದಾರನೊಂದಿಗೆ ಮಾತನಾಡಿ ಪರೋಪಕಾರಿ ದಾನಿಯೇಲಪ್ಪನಿಗೆ ಆ ಕೆಲಸ ಕೊಡಿಸಿದ್ದರು.

ಈ ದೊಂದಿಯ ದಾನಪ್ಪ, ಊರಲ್ಲಿನ ಇಗ್ನೇಸಪ್ಪರ ಗುಡಿಯಲ್ಲಿ ಉಪದೇಶಿಯಾಗಿ ಕೆಲಸ ಮಾಡುತ್ತಿದ್ದ. ಸಾಕಷ್ಟು ಜಮೀನು ಹೊಂದಿದ್ದ ದಾನಪ್ಪ ದಾನದಲ್ಲಿ ಎತ್ತಿದ ಕೈ ಹೊಂದಿದ್ದ. ಹೀಗಾಗಿ ಆತ ಊರಲ್ಲಿ ಎಲ್ಲರಿಗೂ ಬೇಕಾದವನಾಗಿದ್ದ. ಎಲ್ಲರೊಂದಿಗೆ ಅವರ ಸುಖ ದುಃಖದಲ್ಲಿ ಬೆರೆಯುತ್ತಿದ್ದ ಆತ, ಊರವರ ಕಣ್ಮಣಿಯಾಗಿದ್ದ. ಪಿಂಜಾರರ ಇಮಾಮಸಾಬ, ಬ್ರಾಹ್ಮಣರ ಓಣಿಯ ಗೋವಿಂದ ಕುಲಕರ್ಣಿ, ಶೆಟ್ಟರ ಓಣಿಯ ಬಸಪ್ಪ, ತೇಲಿ ಸಾವಕಾರ ಸಿದ್ದಪ್ಪ ಅವರೊಂದಿಗೆ ಉಪದೇಶಿ ದಾನಪ್ಪನ ಹೆಸರು ಊರ ಪಂಚರ ಲೆಕ್ಕದಲ್ಲಿ ಸೇರಿಕೊಂಡಿತ್ತು.

ಜನಾನುರಾಗಿ ನಡವಳಿಕೆಯಿಂದ ಊರವರ ಪ್ರೀತಿಗೆ ಪಾತ್ರರಾಗಿದ್ದ ಸ್ವಾಮಿ ವೆಲೆರಿಯನ್ ಅವರು, ಜನರಿಂದ ಪ್ರೀತಿಯಿಂದ ವಲ್ಲಿ ಸ್ವಾಮಿ, ಫಾದರ್ ವಲ್ಲಿ ಎಂದು ಕರೆಯಿಸಿಕೊಳ್ಳುತ್ತಿದ್ದರು. ಅನ್ವರ್ಥಕ ಎನ್ನುವಂತೆ ಅವರು ತಮ್ಮ ಬಿಳಿಯ ಬಣ್ಣದ ನಿಲುವಂಗಿ ತೊಟ್ಟು ಗುಡಿ ಬಿಟ್ಟು ಹೊರಗೆ ಹೊರಟರೆಂದರೆ ಅವರ ಹೆಗಲ ಮೇಲೆ ಒಂದು ವಲ್ಲಿ ಇರುತ್ತಿತ್ತು.

ನೇಕಾರರ ಮನೆಯಿಂದ ಗಾಣದಿಂದ ಬಸಿದಿದ್ದ ಬೆರೆಕೆ ಎಣ್ಣೆಯ ದೀಪ ಉರಿಸುವ ಕಾಯಕ ನಡೆದಾಗ ಎಲ್ಲವೂ ಸುರಳೀತವಾಗಿ ಸಾಗಿತ್ತು. ಮಾಮಲೇದಾರರು ಚಿಮಣಿ ಎಣ್ಣೆ ದೀಪ ಉರಿಸಲು ಕ್ರಮ ಕೈಗೊಳ್ಳುವ ಸಮಯದಲ್ಲಿ ಸ್ವಾಮಿ ಜಾರ್ಜ್ ಅವರು ಇಗ್ನೇಸಪ್ಪರ ಗುಡಿಗೆ ಪಾಲನಾ ಸ್ವಾಮಿಗಳಾಗಿ ಬಂದಿದ್ದರು. ಅವರು ಸಿಟ್ಟಿನಲ್ಲಿ ವಿಶ್ವಾಮಿತ್ರನಂತೆಯೇ ಇದ್ದರು. ಶಿಸ್ತಿನ ಪ್ರತಿರೂಪವಾಗಿದ್ದ ಅವರಿಗೆ ಎಲ್ಲ ಕೆಲಸಗಳೂ ಸಮಯಕ್ಕೆ ಸರಿಯಾಗಿ ಶಿಸ್ತಿನಿಂದ ಸಾಗಬೇಕಿತ್ತು. ಅವರಿಗೂ ದೊಂದಿ ದಾನಿಯೇಲಪ್ಪನಿಗೂ ಯಾಕೋ ಸರಿ ಬರಲಿಲ್ಲ. ಹಿಂದಿದ್ದ ಸ್ವಾಮಿಗಳು ಬೆಳಗಿನ ಪೂಜೆಯಷ್ಟನ್ನೇ ಮಾಡುತ್ತಿದ್ದರು. ಹೊಸದಾಗಿ ಬಂದ, ಗತ್ತಿನಿಂದ ನಡೆದುಕೊಳ್ಳುತ್ತಿದ್ದ ಸ್ವಾಮಿ ಜಾರ್ಜ್ ಅವರು, ಸಂಜೆ ಪೂಜೆ ಮಾಡಲು ಶುರು ಮಾಡಿದ್ದರು. ಅದು ದೊಂದಿ ದಾನಿಯೇಲಪ್ಪನ ದೀಪ ಬೆಳಗುವ ಕಾಯಕಕ್ಕೆ ಕಿರಿಕಿರಿ ಆಗತೊಡಗಿತ್ತು.

ʻʻಅಜ್ಜಾ ಅಜ್ಜಾ ಅದೇನೋ ದೊಡ್ಡ ಕತೆ ದಾನಿಯೇಲಪ್ಪನ ಕತ್ತರಿ ಕತೆ ಅಂದಿರಿ. ಈಗ ಗುಡಿಯ ಉಪದೇಶಿ, ದೊಂದಿ ದಾನಪ್ಪ ಅಂತ ಏನೇನೋ ಹೇಳ್ತಿದ್ದೀರಿ?ʼʼ ಎಂದು ಮಗ ಕಿಟ್ಟಿ ನಡುವೆ ಬಾಯಿ ಹಾಕಿದ.

ʻʻಹೂಂ-ನಪ್ಪ ನಾನು ಅದೇ ಕತೆ ಹೇಳುತ್ತಿರುವೆ. ಇನ್ನೂ ಕತೆ ಮುಗಿದಿಲ್ಲ ಅನ್ನೊದು ನಿನಗೆ ಅರ್ಥವಾಗುತ್ತಿಲ್ಲʼʼ ಎಂದ ಅಜ್ಜ.

ಅಷ್ಟರಲ್ಲಿ ಜನರ ಗದ್ದಲ ಕೇಳಿಸಲಾರಂಭಿಸಿತು.

ʻʻಅಜ್ಜಾ ಅಜ್ಜಾ ಮೆರವಣಿಗೆ ಬಂತು ಅನ್ನಿಸುತ್ತೆ. ನಿನ್ನ ಕತೆ ಆಮೇಲೆʼʼ ಎನ್ನುತ್ತಾ ಮೂವರು ಮಕ್ಕಳು ಎದ್ದು, ಗದ್ದಲ ಕೇಳಿಸಿದ ದಿಕ್ಕಿನತ್ತ ಓಡತೊಡಗಿದರು. ಅವರ ಅಪ್ಪ ಅಮ್ಮ, ಅಜ್ಜನಿಗೆ ವಂದಿಸುತ್ತಾ ಮಕ್ಕಳ ಹಿಂದೆ ನಡೆದರು.

ದೂರದಲ್ಲಿ ಜನರ ಗದ್ದಲ ಕೇಳಿಬರತೊಡಗಿತ್ತು. ಆ ಊರಿನ ಹಳೆಯ ಬಡಾವಣೆಯ ದೊಡ್ಡ ಓಣಿಯೊಂದರಿಂದ ಜನರ ಜೈ ಕಾರಗಳು ಕೇಳತೊಡಗಿದ್ದವು.

ಸ್ವಲ್ಪ ಹೊತ್ತಿನಲ್ಲಿ ಜನರ ಮೆರವಣಿಗೆ ಕಣ್ಣಿಗೆ ಕಾಣಿಸತೊಡಗಿತ್ತು. ಅದರ ಹಿಂದೆಯೇ, ʻರಾಜರ ರಾಜನಿಗೆ ಹೋಸಾನ್ನʼ ʻಯೇಸು ಕ್ರಿಸ್ತನಿಗೆ ಹೋಸಾನ್ನʼ ʻಯೇಸುಸ್ವಾಮಿಗೆ ಜಯಕಾರʼ ಎಂಬ ಘೋಷಣೆಗಳು ಕೇಳಿಬರತೊಡಗಿದ್ದವು.

ಗರಿಗಳ ಭಾನುವಾರವು, ಯೇಸುಸ್ವಾಮಿ ತಮ್ಮ ಜೀವನದ ಕೊನೆಯ ಹಂತದಲ್ಲಿ ಹೇಸರಗತ್ತೆಯ ಮೇಲೆ ರಾಜರಂತೆ ಕುಳಿತು ಅಂದಿನ ಯಹೂದಿಗಳ ಪವಿತ್ರ ಕ್ಷೇತ್ರವಾಗಿದ್ದ, ದಾವಿದ ಅರಸನಿಂದ ಪ್ರಾರಂಭವಾಗಿದ್ದ, ನಂತರ ಮಗ ಸಾಲೊಮನ್ ಪೂರ್ಣವಾಗಿ ಕಟ್ಟಿಸಿದ್ದ ಮಹಾದೇವಾಲಯವಿದ್ದ ಜೆಸರುಲೇಮ ಪಟ್ಟಣವನ್ನು ಪ್ರವೇಶ ಮಾಡಿದ್ದನ್ನು ಸ್ಮರಿಸುವ ಶುಭದಿನ.

ಇದು ಕ್ರೈಸ್ತರಿಗೆ ಸಂತೋಷದ ಮತ್ತು ದುಃಖದ ದಿನ. ಯೇಸುವನ್ನು ಜೆರುಸಲೇಮಿಗೆ ಸ್ವಾಗತಿಸಲು ಸಂತೋಷ ಪಡುತ್ತಾರೆ. ಜೊತೆಗೆ, ಇನ್ನೊಂದು ವಾರದಲ್ಲಿ ಯೇಸುವನ್ನು ಶಿಲುಬೆಗೆ ಏರಿಸಲಾಗುತ್ತದೆ ಎಂಬ ದುಃಖದ ಸಂಗತಿಯೂ ಹೌದು. ಚರ್ಚಿನಲ್ಲಿ ತಾಳೆ ಮರಗಳ ಗರಿಗಳ ಅಲಂಕಾರವಿದ್ದರೆ ಹೊರಗೆ ಮೆರವಣಿಗೆಯಲ್ಲಿ ಬರುವವರ ಕೈಯಲ್ಲಿ ಟೆಂಗಿನ ಗರಿಗಳು ಇರುತ್ತವೆ.

ಬೈಬಲ್ಲಿನಲ್ಲಿ ಈ ವಿಷಯದ ಪ್ರಸ್ತಾಪ ಹೀಗಿದೆ: ಯೇಸು ಹೇಳಿದಂತೆ ಶಿಷ್ಯರು ಮಾಡಿದರು. ಒಂದು ಕತ್ತೆಯನ್ನು ತಂದರು. ನಂತರ ಅವರು ತಮ್ಮ ಮೇಲಂಗಿಗಳನ್ನು ಅದರ ಮೇಲೆ ಹಾಸಿದರು. ಯೇಸು ಅದರ ಮೇಲೆ ಹತ್ತಿ ಕುಳಿತರು.

ತಾಳೆ ಮರದ ಟೊಂಗೆಗಳನ್ನು, ಖರ್ಜೂರ ಮರದ ಗರಿಗಳನ್ನು ಹಿಡಿದುಕೊಂಡು, ಹೋಸಾನ್ನಾ ಎಂದು ಕೂಗುತ್ತಾ ಯೇಸುವನ್ನು ಬರಮಾಡಿಕೊಳ್ಳಲು ಜನರು ಧಾವಿಸಿ ಬಂದರು. ʻಸರ್ವೇಶ್ವರನ ಹೆಸರಿನಲ್ಲಿ ಬರುವವನು ಧನ್ಯನು, ದಾವಿದ ಕುಲಪುತ್ರನಿಗೆ ಜಯವಾಗಲಿ. ಶಾಂತಿ ಸ್ವರ್ಗದಲ್ಲಿ ಮಹಿಮೆ ಮಹೋನ್ನತದಲ್ಲಿ. ಇಸ್ರಯೇಲಿನ ಅರಸನಿಗೆ ಶುಭವಾಗಲಿʼ ಎಂಬ ಘೋಷಣೆಗಳನ್ನು ಕೂಗುತ್ತಿದ್ದರು.

ದೇವಸುತ ಯೇಸುಕ್ರಿಸ್ತನು ಪುನರುತ್ಥಾನನಾದುದನ್ನು ಸಂಭ್ರಮಿಸುವ ಈಸ್ಟರ್ ಹಬ್ಬ, ಮುಗಿದ ನಂತರ, ಹೊಸ ತೀರ್ಥದ ನೀರಿನಿಂದ ವಿಶ್ವಾಸಿಕರ ಮನೆ ಮಂತ್ರಿಸುವ ಕಾರ್ಯವನ್ನು ಗುಡಿಯ ಪಾಲನಾ ಗುರುಗಳು ಹಮ್ಮಿಕೊಳ್ಳುವುದು ಸಂಪ್ರದಾಯ. ʻಗುರುಗಳು ಯಾವ ದಿನ, ಯಾವ ಸಮಯಕ್ಕೆ ನಮ್ಮ ಮನೆಗೆ ಬಂದಾರು?ʼಎಂದು ವಿಚಾರಿಸಲು, ಜೋಸೆಫಪ್ಪ ಮನೆಯ ಸಮೀಪದ ಇಗ್ನೇಸಪ್ಪರ ಗುಡಿಯ ಕಚೇರಿಗೆ ಹೋಗಿದ್ದರು. ಆಗ, ಅಲ್ಲಿದ್ದ ಸಿಬ್ಬಂದಿ, ʻʻನೀವು ಹೊಸಬರಂತೆ ಕಾಣುತ್ತಿದ್ದೀರಿ. ನಮ್ಮ ಗುಡಿಯ ಕುಟುಂಬ ಪುಸ್ತಕ ಮಾಡಿಸಿಕೊಂಡಿದ್ದೀರಾ?ʼʼ ಎಂದು ಕೇಳಿದಾಗ ʻಇಲ್ಲʼ ಎಂದು ಗೋಣು ಅಲ್ಲಾಡಿಸಬೇಕಾಯಿತು. ʻʻನೀವು ಈ ಮೊದಲು ಸದಸ್ಯರಾಗಿದ್ದ ಗುಡಿಯ ಪಾಲನಾ ಗುರುಗಳಿಗೆ ಅಲ್ಲಿನ ನಿಮ್ಮ ಕುಟುಂಬ ಪುಸ್ತಕವನ್ನು ಹಿಂದಿರುಗಿಸಿ, ನೀವು ಇಲ್ಲಿಗೆ ಬಂದಿರುವಿರೆಂದು ಒಂದು ಪತ್ರ ಬರೆಯಿಸಿಕೊಂಡು ಬನ್ನಿರಿʼʼ ಎಂದು ಆ ಸಿಬ್ಬಂದಿ ಮಾಹಿತಿ ನೀಡಿದರು.

ಅದರಂತೆಯೇ, ಮರುದಿನ ಬೆಳಿಗ್ಗೆ ದೂರದ ಹಳ್ಳಿಗೆ ಹೋಗಿ ಗುಡಿಯ ಗುರುಗಳ ಬಳಿ ಹೋಗಿ ಜೋಸೆಫಪ್ಪ ವಿಚಾರಿಸಿದ, ʻʻಇಲ್ಲಿ ಕುಟುಂಬ ಪುಸ್ತಕದ ಪದ್ಧತಿ ಇನ್ನೂ ಜಾರಿಗೆ ಬಂದಿಲ್ಲʼʼ ಎಂದ ಗುರುಗಳು, ʻʻಜೋಸೆಫಪ್ಪ ಮತ್ತು ಕುಟುಂಬದವರು ಇಲ್ಲಿನ ಕೂಡು ಕುಟುಂಬಕ್ಕೆ ಸೇರಿದವರು. ಈಗ ಕೆಲಸಕ್ಕೆ ಸೇರಿರುವ ಅವರು ಮಕ್ಕಳೊಂದಿಗೆ ನಿಮ್ಮ ಊರಿಗೆ ಬಂದಿದ್ದಾರೆʼʼ ಎಂದು ಪತ್ರ ಬರೆದು ಕೊಟ್ಟರು. ಒಂದೆರಡು ದಿನ ಬಿಟ್ಟು, ಈಗ ತಾನಿರುವ ಅಕ್ಕಪಕ್ಕದ ಹಳ್ಳಿಗಳನ್ನು ಆಪೋಷಣೆ ಬೆಳೆಯುತ್ತಿರುವ ಪಟ್ಡಣಕ್ಕೆ ಬಂದು, ಸಂತ ಇಗ್ನೇಸಪ್ಪರ ಗುಡಿಯ ಕಚೇರಿಗೆ ತೆರಳಿದ ಜೋಸೆಫಪ್ಪ, ಕಚೇರಿಯಲ್ಲಿದ್ದವರಿಗೆ ಹಳ್ಳಿಯಲ್ಲಿದ್ದ ತಮ್ಮ ಚರ್ಚಿನ ಗುರುಗಳು ಕೊಟ್ಟ ಪತ್ರವನ್ನು ತಲುಪಿಸಿದರು.

ʻʻನಾಳೆ ಬೆಳಿಗ್ಗೆ ಮರುದಿನ 11 ಗಂಟೆಗೆ ಪಾಲನಾ ಗುರುಗಳು ಕಚೇರಿಯಲ್ಲಿ ಇರುತ್ತಾರೆ. ಅವರನ್ನೊಮ್ಮೆ ಪರಿಚಯ ಮಾಡಿಕೊಳ್ಳುವುದು ಒಳ್ಳೆಯದುʼʼ ಕಚೇರಿ ಸಿಬ್ಬಂದಿ ಸಲಹೆ ನೀಡಿದ್ದರು.

ʻಸರಿʼ ಎಂದು ಅಂದುಕೊಂಡ ಜೋಸೆಫಪ್ಪ, ಮರುದಿನ ಬೆಳಿಗೆ ಅರ್ಧ ದಿನ ತನ್ನ ಕಚೇರಿಗೆ ಹೋಗಿ ಅರ್ಧ ದಿನ ರಜೆ ಹಾಕಿ ಗುಡಿಯ ಕಚೇರಿಗೆ ಹೋದಾಗ, ಗುರುಗಳು ಕಚೇರಿಯ ತಮ್ಮ ಕೊಠಡಿಯಲ್ಲಿದ್ದರು. ಅವರನ್ನು ಕಂಡು ಜೋಸೆಫಪ್ಪ ಪರಿಚಯ ಮಾಡಿಕೊಂಡರು. ಗುರುಗಳಿಂದ ಕುಟುಂಬದ ಪುಸ್ತಕ ಪಡೆದು ಬೇಕಾದ ವಿವರವನ್ನು ಭರ್ತಿ ಮಾಡಿ ಗುರುಗಳ ರುಜು ಹಾಕಿಸಿಕೊಂಡರು. ಅಂದಿನಿಂದ ಜೋಸೆಫಪ್ಪ ಮತ್ತು ಕುಟುಂಬದವರು ಆ ಗುಡಿಯ ಅಧಿಕೃತ ಸದಸ್ಯರಾದಂತಾಯಿತು. ಹಾಗೆಯೇ, ʻಮನೆ ಮಂತ್ರಿಸಲು ಎಂದು ಬರುವಿರಿ?ʼ ಎಂದು ಗುರುಗಳನ್ನು ಕೇಳಿದಾಗ, ʻಎರಡು ದಿನ ಬಿಟ್ಟು ಬರುವುದಾಗಿʼಅವರು ತಿಳಿಸಿದರು.

ಉಪದೇಶಿ ಚಿನ್ನಪ್ಪ ಅವರೊಂದಿಗೆ ಮನೆಗೆ ಬಂದ ಗುರುಗಳು, ಅಡ್ಡಪಟ್ಟಿ ಹೆಗಲಿಗೆ ಏರಿಸಿಕೊಂಡು ಪ್ರಾರ್ಥನೆ ಆರಂಭಿಸಿದರು. ಪಿತನ ಸುತನ ಎಂದು ಶಿಲುಬೆ ಗುರುತು ಹಾಕಿ ʻಸರ್ವ ಸೃಷ್ಟಿಗಳ ಕರ್ತರೆ, ನಿಮ್ಮ ಔದಾರ್ಯದಿಂದ ನಿಮ್ಮ ಭಕ್ತರಿಗೆ ಈ ಮನೆಯನ್ನು ದಯಪಾಲಿಸಿದ್ದೀರಿ. ನಿಮ್ಮ ಶಾಂತಿ ಮತ್ತು ಪ್ರೀತಿಯು ಈ ಮನೆಯಲ್ಲಿ ನೆಲೆಸಲಿʼ ಎಂದು ಪಾರ್ಥಿಸಿದರು. ನಂತರ ಮನೆಯ ಎಲ್ಲಾ ಕಡೆಗೆ ಹೋಗಿ ತೀರ್ಥದ ನೀರನ್ನು ಚಿಮುಕಿಸಿದರು. ಕೊನೆಯಲಿ, ʻಮಾಡಿರೆಲ್ಲಾ ಜಯಕಾರವ, ಮೃತ್ಯುಂಜಯ ಕ್ರಿಸ್ತರಿಗೆ ಜಯಕಾರವʼ ಹಾಡು ಹಾಡಿ ಮನೆ ಮಂತ್ರಿಸುವುದನ್ನು ಸಂಪನ್ನಗೊಳಿಸಲಾಯಿತು.

ಕಾಣಿಕೆ ಸಲ್ಲಿಸಿದ ನಂತರ ವಿರಾಮವಾಗಿ ಕುಳಿತ ಗುರುಗಳು, ಮನೆಯಲ್ಲಿದ್ದ ಮಡದಿ ಮಕ್ಕಳನ್ನು ಪರಿಚಯಿಸಿಕೊಂಡರು. ಕ್ರಿಸ್ಟೋಫರ್, ಗರಿಹಬ್ಬದ ದಿನದಂದು ತಾನು ಕೇಳಿದ್ದ ಉಪದೇಶಿ ದೊಂದಿ ದಾನಿಯೇಲಪ್ಪನ ಕತೆಯ ಬಗ್ಗೆ ಪ್ರಸ್ತಾಪಿಸಿದಾಗ, ಗುರುಗಳು ಮತ್ತು ಉಪದೇಶಿ ಚಿನ್ನಪ್ಪ ಗಲಿಬಿಲಿಗೊಂಡಂತೆ ಕಂಡರು.

ʻʻನೀವು ಈ ಊರಿಗೆ ಹೊಸಬರು. ನಿಮಗೆ ನಮ್ಮ ಗುಡಿಯ ಉಪದೇಶಿ ದೊಂದಿ ದಾನಿಯೇಲಪ್ಪನ ಕತೆ ಹೇಗೆ ಗೊತ್ತಾಯಿತು?ʼʼ ಉಪದೇಶಿ ಚಿನ್ನಪ್ಪ ಚಕಿತಗೊಂಡಂತೆ ಪ್ರಶ್ನಿಸಿದ.

ಉಪದೇಶಿಯ ಮಾತು ಮುಗಿಯುತ್ತಿದ್ದಂತೆಯೇ, ʻʻನಿಮಗೆ ಎಲ್ಲಾ ಗೊತ್ತಾಯಿತಾ? ಯಾರು ಹೇಳಿದರು ನಿಮಗೆ?ʼʼ ಎಂದು ಗುರುಗಳು ಗಲಿಬಿಲಿಯಲ್ಲಿ ಪ್ರಶ್ನೆ ಮಾಡಿದರು.

ʻʻಫಾದರ್, ಮೊನ್ನಿನ ಗರಿಗಳ ಹಬ್ಬದಂದು ಗುಡಿಯ ಹತ್ತಿರದ ಅರಳಿ ಮರದ ಕೆಳಗಿನ ಕಟ್ಟೆಯಲ್ಲಿ ಒಬ್ಬ ಅಜ್ಜ ಕುಳಿತಿದ್ದ. ಆ ಅಜ್ಜ ದೊಂದಿ ದಾನಪ್ಪನ ಕತೆ ಹೇಳ್ತಿದ್ದ. ನಾವು ಪೂರ್ತಿ ಕತೆ ಕೇಳುವ ಮೊದಲೇ ಗರಿಹಬ್ಬದ ಮೆರವಣಿಗೆ ಗುಡಿಯ ಹತ್ತಿರ ಬಂದಂತೆ, ನಾವೆಲ್ಲಾ ಎದ್ದು ಓಡಿ ಹೋಗಿ ಮೆರವಣಿಗೆ ಸೇರಿಕೊಂಡ್ವಿ.’’

ʻʻಅಂದ ಹಾಗೆ, ಆ ಅಜ್ಜ ನೋಡಲು ಹೇಗಿದ್ದ?ʼʼ

ʻʻಆತ ಮುಪ್ಪಾನು ಮುದುಕನಾಗಿದ್ದ. ಧೋತರ ಮತ್ತು ಬಿಳಿಯ ಅಂಗಿ ತೊಟ್ಟಿದ್ದ. ಮುದುಕ ಕೋಲು ಹಿಡಿದುಕೊಂಡು ಅರಳಿ ಮರದ ಕಟ್ಟೆಯ ಮೇಲೆ ಕುಳಿತಿದ್ದ. ಅವನ ತಲೆಯ ಮೇಲೆ ಪಟಗ ಸುತ್ತಿಕೊಂಡಿದ್ದ ಫಾದರ್.ʼʼ ಕಿಟ್ಟಿಯ ಅಪ್ಪ ಜೋಸೆಫಪ್ಪ ನುಡಿದ.

ʻʻಓಹ್, ನಿಮಗೆ ಆ ದೊಂದಿ ದಾನಿಯೇಲಪ್ಪನ ದರ್ಶನ ಆಗಿದೆ ಅಂತಾಯಿತು.ʼʼ

ʻʻಏನು? ನಾವು ಕಂಡುದ್ದು, ಮಾತನಾಡಿಸಿದ್ದು ದೊಂದಿ ದಾನಿಯೇಲಪ್ಪನಾ?ʼʼ ಅಪ್ಪ ಜೋಸೆಫಪ್ಪ ಅಮ್ಮ ಅನ್ನಮ್ಮ ಅಚ್ಚರಿಯಲ್ಲಿ ಏಕ ಕಾಲದಲ್ಲಿ ಉದ್ಗಾರಗೈದರು.

ಮಕ್ಕಳು ಬಾಯಿ ಅರಳಿಸಿಕೊಂಡು, ಅದನ್ನು ಎರಡೂ ಅಂಗೈಗಳಿಂದ ಮುಚ್ಚಿಕೊಂಡು ದಂಗಾಗಿ ಕುಳಿತಿದ್ದರು.

ʻʻನೀವು ಭಾಗ್ಯವಂತರು.ʼʼ ಉಪದೇಶಿ ಚಿನ್ನಪ್ಪ ಉದ್ಗರಿಸಿದ.

ʻಜೋಸೆಫಪ್ಪ ಕುಟುಂಬದ ಸದಸ್ಯರು, `ತಮ್ಮ ಮನೆಯಲ್ಲಿ ಏನು ಜರುಗುತ್ತಿದೆ?ʼ ಎಂಬುದು ಗೊತ್ತಾಗದೇ ಗೊಂದಲದಲ್ಲಿ ಬಿದ್ದಿದ್ದರು.

ʻʻಹೌದು, ನೀವು ಭಾಗ್ಯವಂತರುʼʼ ಫಾದರ್ ಸಹ ಉಪದೇಶಿಯ ಮಾತುಗಳನ್ನೇ ಪುನರುಚ್ಚರಿಸಿದರು.

ಉಪದೇಶಿ ಚಿನ್ನಪ್ಪ ತಮ್ಮ ಹೇಳಿಕೆಯನ್ನು ವಿವರಿಸಲು ಆರಂಭಿಸಿದರು.

ʻʻಉಪದೇಶಿ ದಾನಿಯೇಲಪ್ಪ, ಊರವರ ಬಾಯಿಯಲ್ಲಿ ದೊಂದಿ ದಾನಪ್ಪ ಎಂದು ಕರೆಯಿಸಿಕೊಂಡರೂ ಆತನು ಒಬ್ಬ ಸಚ್ಚಾರಿತ್ರ್ಯದ ಮನುಷ್ಯನಾಗಿದ್ದ. ಸಂಸಾರಸ್ಥನಾಗಿದ್ದರೂ ಸಂತನ ಮಾದರಿಯಲ್ಲಿ ಜೀವನ ಸಾಗಿಸುತ್ತಾ ಊರ ದೈವದವರಲ್ಲಿ ಒಬ್ಬನಾಗಿದ್ದ. ಆತನಿಂದ ಹಲವಾರು ಜನ ಹತ್ತಾರು ಕೆಲಸಗಳನ್ನು ಮಾಡಿಸಿಕೊಳ್ಳುತ್ತಿದ್ದರು. ಬಗೆ ಬಗೆಯ ಸಹಾಯ ಪಡೆದಿರುತ್ತಿದ್ದ ಈ ಊರವರು ಮತ್ತು ಅಕ್ಕಪಕ್ಕದ ಊರವರು, ಆತ ಸಂತ ತುಕಾರಾಮನ ಪ್ರತಿರೂಪ ಎಂದು ಹೇಳುತ್ತಿದ್ದರು. ಯೇಸುಸ್ವಾಮಿಯ ಸಾಮಿತಿಯ ಕತೆಗಳನ್ನು ಹಾಡು ಕಟ್ಟಿ ತತ್ವಪದಗಳಂತೆ ಹಾಡುತ್ತಿದ್ದ ಆತನನ್ನು, ಪುರಂದರ ದಾಸರ ಹೆಸರಿನ ಧಾಟಿಯಲ್ಲಿ ಕರ್ತನ ದಾಸ, ಕ್ರಿಸ್ತದಾಸ, ಯೇಸುದಾಸ ಎಂದೂ ಜನ ಕರೆಯುತ್ತಿದ್ದರು.

ಶಾವಲಿ ದರ್ಗಾದ ವಾರ್ಷಿಕ ಉರುಸಿನ ಸಂದರ್ಭದಲ್ಲಿ ದರ್ಗಾಕ್ಕೆ ಮೊದಲ ಸಕ್ಕರೆ ಸಲ್ಲಿಸುವ ಗೌರವಕ್ಕೆ ದಾನಿಯೇಲಪ್ಪನ ಕುಟುಂಬ ಪಾತ್ರವಾಗಿತ್ತು. ಉಮಾಮಹೇಶ್ವರನ ಗುಡಿಯ ಜಾತ್ರೆಯಲ್ಲಿ ರಥಕ್ಕೆ ಮೊದಲ ಟೆಂಗಿನಕಾಯಿ ಒಡೆಯುವ ಗೌರವವೂ ದಾನಿಯೇಲಪ್ಪನ ಕುಟುಂಬಕ್ಕೆ ಸೇರಿತ್ತು. ಇಗ್ನೇಸಪ್ಪರ ಗುಡಿ ಹುಬ್ಬದಂದು ಇಗ್ನೇಸಪ್ಪರ ಸ್ವರೂಪವಿದ್ದ ಪಲ್ಲಕ್ಕಿಯನ್ನು ಹೋಲುವ ಮಂಟಪದ ಮೆರವಣಿಗೆ, ಶಾಲಿ ವಲಿ ದರ್ಗಾ, ಉಮಾಮಹೇಶ್ವರ ಮತ್ತು ಕೆರೆ ಗಂಗಮ್ಮನ ಗುಡಿಗಳನ್ನು ಮುಟ್ಟಿ ಬರುತ್ತಿತ್ತು. ಬಸವಣ್ಣನವರ ಕಾಯಕವೇ ಕೈಲಾಸ ಎಂಬುದರಲ್ಲಿ ನಂಬುಗೆ ಇಟ್ಟಿದ್ದ ಆತ, ಮುದುಕನಾಗಿದ್ದರೂ ತನ್ನ ದೀಪ ಬೆಳಗುವ, ಉಪದೇಶಿ ಕಾಯಕವನ್ನು ಬಿಟ್ಟಿರಲಿಲ್ಲ. ಊರಲ್ಲಿನ ಎಲ್ಲ ಸಮುದಾಯದವರಿಗೂ ಆತ ಬೇಕಾದವನಾಗಿದ್ದ.

ಅದು ಸತ್ಯವಂತರ ಕಾಲ. ಊರಲ್ಲಿನ ಎಲ್ಲರೂ ಎಲ್ಲರ ಹಬ್ಬವನ್ನು ಆಚರಿಸುತ್ತಿದ್ದರು. ಮೊಹರಂ ಬಂದರೆ ಎಲ್ಲರ ಮನೆಯಲ್ಲೂ ಚೊಂಗೆ ಇದ್ದೇ ಇರುತ್ತಿತ್ತು. ಬಕ್ರೀದ ಆದರೆ ಸುರಕುಂಬಾದ ಸಮಾರಾಧನೆ ಇರುತ್ತಿತ್ತು. ಶಿವರಾತ್ರಿಗೆ ಎಲ್ಲರೂ ಉಪವಾಸವಿದ್ದರೆ, ಪಂಚಮಿ ಹಬ್ಬದಂದು ಎಲ್ಲರ ಮನೆಗಳಲ್ಲೂ ಬಗೆಬಗೆಯ ಫಳಾರ ಸಿದ್ಧವಾಗುತ್ತಿತ್ತು. ಸಂಕ್ರಾಂತಿಯಂದು ಊರವರು ಎಳ್ಳುಬೆಲ್ಲ, ಬನ್ನಿ ಹಬ್ಬಕ್ಕೆ ಬನ್ನಿಬಂಗಾರವನ್ನು ಹಂಚಿಕೊಂಡು ʻನಾವು ನೀವು ಬೆಲ್ಲದಂಗ ಇರೂಣುʼ, ʻನಮ್ಮ ನಿಮ್ಮ ಬಾಳು ಬಂಗಾರವಾಗಲಿʼ ಎಂದು ಪರಸ್ಪರ ಹಾರೈಸಿಕೊಳ್ಳುತ್ತಿದ್ದರು. ಕ್ರಿಸ್ಮಸ್ ಹಬ್ಬದ ದಿನದಂದು ಊರಲ್ಲಿನ ಬಹುತೇಕರು ಗುಡಿಯ ಅಂಗಳಕ್ಕೆ ಬಂದು ಕ್ರೈಸ್ತರ ಸಂತೋಷದಲ್ಲಿ ಪಾಲ್ಗೊಳ್ಳುತ್ತಿದ್ದರು. ಅಂದು ಬಂದವರಿಗೆಲ್ಲಾ ಕೇಕು ಸೇರಿದಂತೆ ಸಾಂಪ್ರದಾಯಿಕ ತಿಂಡಿ ತಿನಿಸುಗಳನ್ನು ಹಂಚಲಾಗುತ್ತಿತ್ತು.

ಬೂದಿ ಬುಧವಾರದ ನಂತರದಲ್ಲಿ ಜಪತಪಗಳ ಸಾತ್ವಿಕ ಜೀವನ ಶೈಲಿಯ ತಪಸ್ಸು ಕಾಲ ಆರಂಭವಾಗಿತ್ತು. ನಿತ್ಯವೂ ಒಂದೇ ಹೊತ್ತು ಊಟ ಮಾಡುತ್ತಿದ್ದರೂ ಉಪದೇಶಿ ದಾನಿಯೇಲಪ್ಪ ಓಣಿಗಳಲ್ಲಿನ ಕಂಬಗಳನ್ನು ಏರಿ ದೀಪ ಬೆಳಗುವ ತನ್ನ ಕಾಯಕವನ್ನು ಮುಂದುವರೆಸಿದ್ದ.

ಯೇಸು ಸ್ವಾಮಿ ಜೆರುಸಲೇಮನ್ನು ಪ್ರವೇಶಿಸಿದ್ದನ್ನು ಸಂಭ್ರಮಿಸುವ ಗರಿಗಳ ಹಬ್ಬವನ್ನು ಗುಡಿಯಲ್ಲಿ ಆಚರಿಸಲಾಗುತ್ತದೆ. ಪ್ರತಿವರ್ಷವೂ ನಡೆಯುವ ಆ ಹಬ್ಬದ ದಿನಕ್ಕಾಗಿ ಒಂದು ವರ್ಷ ಉಪದೇಶಿ ದಾನಿಯೇಲಪ್ಪ ಹೊಸ ಯೋಜನೆ ಹಾಕಿಕೊಂಡಿದ್ದ, ಮಡಿವಾಳರ ಮನೆಯಿಂದ ಕತ್ತೆಯೊಂದನ್ನು ತರಿಸಿದ್ದ. ಟೆಂಗಿನ ಮರದ ಗರಿಗಳನ್ನು ಮಂತ್ರಿಸಿದ ಮೇಲೆ ಶಿಲುಬೆ ಹಿಡಿದ ಹೊರಟ ಪೀಠ ಬಾಲಕರ ಹಿಂದೆ ಗುರುಗಳು ಕತ್ತೆಯ ಮೆರವಣಿಗೆಯಲ್ಲಿ ಬಂದರೆ ಒಳ್ಳೆಯದು ಎಂದು ಆತ ಲೆಕ್ಕಾಚಾರ ಹಾಕಿದ್ದ. ಏಕೆಂದರೆ, ಕತ್ತೆಯು ಶಾಂತಿಯ ಪ್ರತೀಕ. ಅದು ಸಾಧು ಪ್ರಾಣಿ. ನಮ್ಮ ಹೃದಯ ಸಿಂಹಾಸನವನ್ನು ಅಲಂಕರಿಸುವವರನ್ನು ಹೊತ್ತು ತರುವ ಪ್ರಾಣಿ ಎಂದುಕೊಂಡಿದ್ದ ದೊಂದಿ ದಾನಿಯೇಲಪ್ಪ. ಗುರುಗಳ ಕತ್ತೆಯನ್ನು ಹತ್ತದೇ ಹೋದಾಗ, ತಾನೆ ಹತ್ತಿ ಕುಳಿತಿದ್ದ. ಅದು ಅನೇಕ ವಿಶ್ವಾಸಿಕರ ಮನಸ್ಸು ನೋಯುವಂತೆ ಮಾಡಿತ್ತು. ಗುರುಗಳು ಅವನ ನಡವಳಿಕೆಯಿಂದ ಸಿಟ್ಟಿಗೆದ್ದಿದ್ದರು. ಪವಿತ್ರವಾರದ ಆರಂಭದಲ್ಲೇ ಹೀಗಾದುದು ಅವನಿಗೆ ಅರಗಿಸಿಕೊಳ್ಳಲಾಗಲಿಲ್ಲ. ಅವನೂ ನೊಂದುಕೊಂಡಿದ್ದ.

ಪ್ರತಿವರ್ಷದಂತೆ ಈ ಬಾರಿಯೂ, ಪವಿತ್ರ ಗುರುವಾರದ ಆಚರಣೆಯಲ್ಲಿನ ಸ್ವಾಮಿಯ ಅಂತಿಮ ಬೋಜನದಲ್ಲಿನ ಪ್ರಥಮ ಪವಿತ್ರ ಸತ್ಪ್ರಸಾದ ಪ್ರತಿಷ್ಠಾಪನೆಯ ಜೊತೆಗಿನ, ಸೇವೆ ಮತ್ತು ಪರಸ್ಪರ ಪ್ರೀತಿಯ ಪ್ರತೀಕವಾಗಿ ಸ್ವಾಮಿ ಸ್ವರೂಪರಾದ ಗುರುಗಳು, ಶಿಷ್ಯರ ಪಾದ ತೊಳೆಯುವ ಆಚರಣೆಯ ಸಂದರ್ಭದಲ್ಲಿ, ಉಳಿದ ಸಮುದಾಯದ ಸಾತ್ವಿಕ ಮನಸ್ಸಿನ ಇಬ್ಬರನ್ನು ಕರೆದುಕೊಂಡು ಬಂದು ಹನ್ನೆರಡು ಜನ ಶಿಷ್ಯರೊಂದಿಗೆ ಕೂಡಿಸಿದ್ದ. ಅದೂ ಕೂಡ ಹೊಸದಾಗಿ ಬಂದಿದ್ದ ಗುರುಗಳಿಗೆ ಸರಿ ಬಂದಿರಲಿಲ್ಲ.

ಪವಿತ್ರವಾರದ ದಿನಗಳ ಆಚರಣೆಯಲ್ಲಿ ಸಕ್ರೀಯವಾಗಿ ಭಾಗವಹಿಸಿದರೂ ಗುರುಗಳು ಮತ್ತು ಉಪದೇಶಿ ದಾನಿಯೇಲಪ್ಪನ ನಡುವೆ ಮಾತುಕತೆ ನಡೆಯಲೇ ಇಲ್ಲ. ದಾನಿಯೇಲಪ್ಪ ಶುಭ ಶುಕ್ರವಾರದ ಮಧ್ಯಾಹ್ನದ ಶಿಲುಬೆ ಹಾದಿ ನಂತರ, ಎಂದಿನಂತೆ ಊರಲ್ಲಿನ ಓಣಿಗಳಲ್ಲಿನ ದೀಪದ ಕಂಬಗಳಲ್ಲಿ ದೀಪ ಬೆಳಗಲು ಹೊರಟಿದ್ದ. ಅಂದು ಹೋಳಿಯ ಹುಣ್ಣಿಮೆಯ ಬಣ್ಣದ ಪಂಚಮಿಯ ದಿನವಾಗಿತ್ತು. ಹುಣ್ಣಿಮೆಯ ಆಸುಪಾಸಿನಲ್ಲಿ ದೀಪ ಬೆಳಗುವ ಅವಶ್ಯಕತೆ ಇರದಿದ್ದರೂ, ಹಬ್ಬದ ಸಮಯ ಎಂದು ದೀಪ ಬೆಳಗಲು ಹೊರಟಿದ್ದ. ನಾಲ್ಕಾರು ಓಣಿಯ ಕಂಬಗಳಲ್ಲಿನ ಕಂದೀಲಿಗೆ ಸೀಮೆ ಎಣ್ಣೆ ಸುರಿದು ದೀಪ ಬೆಳಗಿದ್ದ. ಇನ್ನೊಂದು ಓಣಿಗೆ ಹೋಗಿ ದೀಪದ ಕಂಬಕ್ಕೆ ಏಣಿ ತಗುಲಿಸಿಟ್ಟು ಮೇಲೆ ಹತ್ತಿ ಕಂದೀಲಿಗೆ ಎಣ್ಣೆ ಸುರಿತೊಡಗಿದ್ದ, ಅದೇ ಸಮಯದಲ್ಲಿ ಬಣ್ಣದ ಆಟದ ಮೋಜಿನ ಹುರುಪಿನಲ್ಲಿದ್ದ ಆ ಓಣಿಯ ಮಕ್ಕಳು, ಸಂಜೆಯಾದರೂ ಬಣ್ಣ ಆಡುವುದನ್ನು ನಿಲ್ಲಿಸಿರಲಿಲ್ಲ. ಆ ಗುಂಪಿನಲ್ಲಿದ್ದ ಒಬ್ಬ ಕಿಡಿಗೇಡಿ, ಬಣ್ಣದ ಗುಲಾಲನ್ನು ಉಪದೇಶಿ ದಾನಿಯೇಲಪ್ಪನ ಮೇಲೆ ತೂರಿದಾಗ, ಅವನ ಕಣ್ಣು ಮಂಜಾಗಿ ಕಾಣದಂತಾಯಿತು. ಕೈಯಲ್ಲಿದ್ದ ಚಿಮಣಿ ಎಣ್ಣೆಗೆ ಬೆಂಕಿ ತಗಲಿ ಬೆಂಕಿ ಭುಗುಲೆದ್ದು ಆಕ್ರಮಿಸಿಕೊಂಡಿತು. ಕ್ಷಣಾರ್ಧದಲ್ಲಿ ಬೆಂಕಿಗೆ ತುತ್ತಾದ ದಾನಿಯೇಲಪ್ಪ ಚೀರಾಡುತ್ತಾ ಏಣಿಯಿಂದ ಕೆಳಗೆ ಬಿದ್ದಿದ್ದ. ಬಿದ್ದಲ್ಲೇ ಪ್ರಾಣಪಕ್ಷಿ ಹಾರಿಹೋಗಿತ್ತು. ಸಮಾಧಿ ಪೂಜೆಯಾದ ಮೇಲೆ ದಾನಿಯೇಲಪ್ಪ ಸಮಾಧಿ ಮಾಡಲು ಎಲ್ಲಾ ಸಮುದಾಯದವರು ಮುಂದೆ ಬಂದು, ʻತಮ್ಮ ತಮ್ಮ ಪದ್ಧತಿಯಂತೆ ಸಮಾಧಿ ನಡೆಯಲಿʼ ಎಂದು ಪಟ್ಟು ಹಿಡಿದರು.

ʻದೊಂದಿ ದಾನಪ್ಪ ಹುಟ್ಟಿನಿಂದ ಮುಸ್ಲೀಂ ಆಗದಿದ್ದರೇನಾಯ್ತು ಆತ ನಿಜಕ್ಕೂ ಒಬ್ಬ ಮುಸ್ಲೀಂ ನಂತೆಯ ಬದುಕು ಸಾಗಿಸಿದ್ದʼ ಎಂದು ಮುಸ್ಲೀಂರು ವಾದಿಸಿದರೆ, ಉಳಿದವರು ʻಅದ್ಹೇಗೆ ಆಗುತ್ತದೆ? ಆತ ನಮ್ಮೂರಿನ ಎಲ್ಲರಿಗೂ ಸೇರಿದವ. ಊರ ಹೊರಗಿನ ಹನುಮಂತ ದೇವರ ಗುಡಿಯ ಹತ್ತಿರದ ಬಯಲಲ್ಲಿ ಸಮಾಧಿ ಮಾಡಿ, ಅವನಿಗಾಗಿ ಒಂದು ಸ್ಮಾರಕ ಕಟ್ಟೋಣʼ ಎಂದು ವಾದಿಸತೊಡಗಿದರು. ಕೊನೆಗೆ ʻಆತ ನಮ್ಮವ. ಅವನನ್ನು ನಮ್ಮ ಸಮಾಧಿಯಲ್ಲೇ ದಫನ ಮಾಡಲಾಗುವುದುʼ ಎಂದು ಗಟ್ಟಿದನಿಯಲ್ಲಿ ಸ್ಪಷ್ಟ ಪಡಿಸಿದ ಗುರುಗಳು, ಕ್ರೈಸ್ತರ ಬಡಾವಣೆಯ ಹತ್ತಿರದಲ್ಲಿನ ಸ್ಮಶಾನದಲ್ಲಿ ಸಮಾಧಿ ಮಾಡಿದರು. ಇದು ನಡೆದದ್ದು ಶುಕ್ರವಾರ ತಡ ರಾತ್ರಿ. ಶನಿವಾರ ಕಳೆಯಿತು. ಭಾನುವಾರ ಬೆಳಿಗ್ಗೆ ಹಾಲು ಬಿಡಲು ಸಮಾಧಿಯ ಹತ್ತಿರ ಹೋದ ಕುಟುಂಬದ ಸದಸ್ಯರಿಗೆ ಮತ್ತು ಸಂಬಂಧಿಗಳಿಗೆ ಸಮಾಧಿ ಬರಿದಾಗಿದ್ದು ಕಾಣಿಸಿತು. ಉಪದೇಶಿಯ ಶವವನ್ನು ಬೇರೆಡೆಗೆ ಸಾಗಿಸಲಾಗಿತ್ತು. ʻಆ ಕೆಲಸ ಮಾಡಿದವರು ಯಾರು?ʼ ಎಂಬುದು ಯಾರಿಗೂ ಗೊತ್ತಾಗಲೇ ಇಲ್ಲ. ಆ ಯಕ್ಷ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಪರವೂರಿನ ಉಪದೇಶಿಯ ಆಪ್ತರು, ತಮ್ಮೂರಲ್ಲಿ ಈ ಉಪದೇಶಿಯ ಸಮಾಧಿ ಇರಲಿ ಎಂಬ ಆಶಯದಲ್ಲಿ ಅವನ ಶವವನ್ನು ತಮ್ಮ ಊರಿನ ಸಮಾಧಿಗೆ ಸಾಗಿಸಿರಬೇಕು ಎಂಬ ಮಾತುಗಳು ಕೇಳಿಬಂದವು. ಅದು ಯಾವ ಊರು ಎಂಬುದು ಇನ್ನೂ ಯಾರಿಗೂ ತಿಳಿದಿಲ್ಲ.

ವಿಷಾದದಲ್ಲಿ ಶನಿವಾರದ ರಾತ್ರಿ ಜಾಗರಣೆಯ ಈಸ್ಟರ್ ಹಬ್ಬದ ಪೂಜೆಯ ನಂತರದಲ್ಲಿ ಬೆಳಗಿನ ಹೊತ್ತಿನ ಪಾಡುಪೂಜೆಗಳು ಸಾಂಗವಾಗಿ ನೆರವೇರಿದ್ದವು. ಉಪದೇಶಿ ದಾನಿಯೇಲಪ್ಪನ ಸಾವು ಮತ್ತು ಅವನ ಶವ ಕಣ್ಮರೆಯಾದ ಸಂಗತಿ, ಕ್ರೈಸ್ತರನ್ನಲ್ಲದೇ ಊರವರನ್ನೂ ಕಾಡತೊಡಗಿತ್ತು. ಕ್ರೈಸ್ತರಿಗಂತೂ ಹಬ್ಬದ ಸಡಗರವನ್ನು ಅದು ಕೊಚ್ಚಿಕೊಂಡು ಹೋಗುವಂತೆ ಮಾಡಿತ್ತು. ಪವಿತ್ರವಾರದ ಎಡಬಿಡದ ಕಾರ್ಯ ಚಟುವಟಿಕೆಗಳಿಂದ ಬಸವಳಿದ್ದ ಫಾದರ್ ಜಾರ್ಜ್ ಅವರು, ಅಂದು ರಾತ್ರಿ ಊಟ ಮಾಡಿ ಹಾಸಿಗೆ ಸೇರದ್ದರಷ್ಟೇ ಗಡದ್ದು ನಿದ್ದೆ ಬಂದಿತ್ತು. ನಸುಕಿನಲ್ಲಿ ಅವರ ಕನಸಿನಲ್ಲಿ ಕಾಣಿಸಿಕೊಂಡ ಉಪದೇಶಿ ದಾನಿಯೇಲಪ್ಪ, ʻಸ್ವಾಮಿ, ನನ್ನ ನೀವು ಅರ್ಥ ಮಾಡಿಕೊಳ್ಳಲಿಲ್ಲ. ನನ್ನ ನೀವು ಕ್ಷಮಿಸಲಿಲ್ಲʼಎಂದು ಉಸಿರಿದಂತಾಯಿತು.

ದಡಗ್ಗನೇ ಎಚ್ಚರಗೊಂಡು ತಮ್ಮ ಮೇಜಿನ ಮೇಲಿಟ್ಟ ದುಂಡನೆ ಗಡಿಯಾರವನ್ನು ನೋಡಿಕೊಂಡ ಸ್ವಾಮಿಯ ಕಣ್ಣಿಗೆ, ಸಮಯ 4 ಗಂಟೆ ಮೂವತ್ತು ನಿಮಿಷವಾದದ್ದು ಕಂಡಿತು. ಸ್ವಾಮಿಗಳು ಶಿಲುಬೆ ಗುರುತು ಹಾಕಿ ಮತ್ತೆ ಮಲಗಲು ನೋಡಿದರು. ಆದರೆ ನಿದ್ರೆ ಹತ್ತಿರ ಸುಳಿಯಲೇ ಇಲ್ಲ. ಕಣ್ಣು ಮುಚ್ಚಿಕೊಂಡಾಗಲೆಲ್ಲಾ ಉಪದೇಶಿ ದಾನಿಯೇಲಪ್ಪ ಕಣ್ಣ ಮುಂದೆ ಬಂದು ನಿಂತಂತೆ ಭಾಸವಾಗುತ್ತಿತ್ತು. ಮೇತ್ರಾಣಿಗಳನ್ನು ಭೇಟಿ ಮಾಡಿದ ಗುರುಗಳು, ನಮ್ಮ ಈ ಊರಿನಿಂದ ಬೇರೆ ಊರಿಗೆ ವರ್ಗ ಮಾಡಿಸಿಕೊಂಡು ಬೇರೆ ದೂರದ ಊರಿನ ಗುಡಿಗೆ ಹೊರಟೇ ಹೋದರು.ʼʼ

ʻʻಈಗ ನಮ್ಮೂರು ಸಾಕಷ್ಟು ಬೆಳೆದು ಬಿಟ್ಟಿದೆ. ನೆರೆಹೊರೆಯ ಹೊರರಾಜ್ಯಗಳಿಂದ ಬಂದ ಕ್ರೈಸ್ತ ವಿಶ್ವಾಸಿಗಳ ಸಂಖ್ಯೆ ಹೆಚ್ಚಾದಂತೆ ಇಂಗ್ಲಿಷ್ ಪೂಜೆ ಮತ್ತು ಬೇರೆ ಭಾಷೆಯ ಪೂಜೆಗಳು ಆರಂಭವಾಗಿವೆ. ಆದರೂ, ಊರ ಜನರು ಕನ್ನಡದ ಭಾಷೆಯ ಕುರಿತಂತೆ ತಮ್ಮ ಹಿಡಿತವನ್ನು ಸಡಲಿಸಿಲ್ಲ. ಗರಿಗಳ ಭಾನುವಾರದಂದು, ದಾನಿಯೇಲಪ್ಪ ಕತ್ತೆಯ ಮೆರವಣಿಗೆಯನ್ನು ಆರಂಭಿಸಿದ್ದ ನಾಲ್ಕು ರಸ್ತೆಗಳ ಕೂಡು ಜಾಗವನ್ನು ಈಗ ದಾನಿಯೇಲಪ್ಪನ ಕತ್ತರಿ ಎಂದು ಗುರುತಿಸಲಾಗುತ್ತಿದೆ. ಅದೇ ಜಾಗದಲ್ಲಿ ಗುರುಗಳು ಗರಿಗಳನ್ನು ಮಂತ್ರಿಸಿದ ನಂತರ ಮೆರವಣಿಗೆ ಆರಂಭವಾಗುತ್ತದೆ. ಅಲ್ಲಿಂದ ಆರಂಭವಾಗುವ ಮೆರವಣಿಗೆ ಗುಡಿ ಬಾಗಿಲಿನವರೆಗೂ ಬರುವ ಪರಿಪಾಠ ಯಾವ ವರ್ಷವೂ ನಿಂತಿಲ್ಲ. ಈ ಸಂಪ್ರದಾಯದ ಸೌಭಾಗ್ಯ ಕನ್ನಡ ಪೂಜೆಗಷ್ಟೆ ಲಭ್ಯ.ʼʼ

ಉಪದೇಶಿ ಚಿನ್ನಪ್ಪ ಮಾತು ಮುಗಿಸಿದ.

ಉಪದೇಶಿ ಚಿನ್ನಪ್ಪ ಕತೆ ಮುಗಿಸುತ್ತಿದ್ದಂತೆಯೇ, ಎಲ್ಲರೂ ಹಾಜರಿದ್ದ ಪಡಸಾಲೆಯಲ್ಲಿ ಗಂಭೀರ ವಾತಾವರಣ ಮೂಡಿದಂತಾಗಿತ್ತು. ಮಂತ್ರಿಸಲು ಗುರುಗಳು ಬರುವರೆಂದು ಮಡದಿ ಅನ್ನಮ್ಮ ಮನೆಯಲಿ ಹಾಕಿದ್ದ ಲೋಬಾನ, ಅದೇ ಧೂಪ ಹೊಗೆ ಪಡಸಾಲೆಯಲ್ಲಿ ಹಗುರವಾಗಿ ಆವರಿಸಿಕೊಂಡು ಬಿಟ್ಟಿತ್ತು. ಧೂಪದ ಜೊತೆಗೆ ಮೇಣದ ಬತ್ತಿಯ ಉರಿಯ ವಾಸನೆ ಮತ್ತು ಅಗರಬತ್ತಿಯ ವಾಸನೆಯೂ ಸೇರಿಕೊಂಡಿತ್ತು. ಅದೆಂಥದೋ ಪವಿತ್ರ ಕ್ಷೇತ್ರದ ದರ್ಶನ ಮಾಡಿದ ಭಾವ ಅಲ್ಲಿದ್ದವರೆಲ್ಲರಲ್ಲೂ ಮಾಡಿದಂತಾಗಿತ್ತು.

ʻʻದಾನಿಯೇಲಪ್ಪನ ಸಮಾಧಿ ಇನ್ನೂ ತೆರೆದುಕೊಂಡೆ ಇದೆ. ಅಲ್ಲಿ ಬೇರೆಯವರ ಸಮಾಧಿ ಮಾಡಲು, ಯಾರೂ ಮುಂದೆ ಬಂದಿಲ್ಲ. ಮತ್ತೆ ಆ ದಾನಿಯೇಲಪ್ಪನ ದರ್ಶನದ ಕುರಿತು ನಾನೂ ಕೇಳಿರುವೆ. ಪ್ರತಿ ವರ್ಷವೂ ಗರಿಗಳ ಹಬ್ಬದಂದು ಉಪದೇಶಿ ದಾನಿಯೇಲಪ್ಪ ಕೆಲವರಿಗೆ ಕಾಣಿಸಿಕೊಂಡಿದ್ದಿದೆ. ಈ ವರ್ಷ ಆತ ನಿಮಗೆ ಕಾಣಿಸಿಕೊಂಡಿದ್ದಾನೆ. ನಾನಿಲ್ಲಿಗೆ ಬಂದು ಎರಡು ವರ್ಷಗಳಾದರೂ ನನಗೂ ಅವನ ದರ್ಶನವಾಗಿಲ್ಲ. ನೀವು ಪುನೀತರು, ಪುಣ್ಯವಂತರು.ʼʼ

ಗುರುಗಳು ಈ ಮಾತುಗಳನ್ನು ಆಡುವಾಗ ಅವರ ಕಣ್ಣುಗಳಲ್ಲಿ ಹೊಳುಪು ಎದ್ದು ಕಾಣುತ್ತಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.