ಹಿಂದಿಯಲ್ಲಿ: ಮನೀಷಾ ಮಂಜರಿ

ಕನ್ನಡಕ್ಕೆ: ಎಚ್. ಎಂ.ಕುಮಾರಸ್ವಾಮಿ

ಆಕಾಶದ ನಿಶ್ಯಬ್ಧತೆ ಮತ್ತು ಸಾಗರದ ಮೌನವನ್ನು ಅರ್ಥ ಮಾಡಿಕೊಳ್ಳುವ ಯಾರಾದರೂ ಸಮುದ್ರದ ಗರ್ಭದಾಳದಿಂದ ಚಂಡಮಾರುತ ಹೊರಳಲಾರಂಭಿಸಿದೆ ಎಂದು ಊಹಿಸಬಹುದಾಗಿತ್ತು. ರಾಜ್ವೀರ್ ಅದೆಷ್ಟೋ ಸಮಯದಿಂದ ಕಿಟಕಿಯ ಮೂಲಕ ತನ್ನ ಗಂಭೀರ ದೃಷ್ಟಿಯಿಂದ ಸಮುದ್ರವನ್ನು ನೋಡುತ್ತಾ ನಿಂತಿದ್ದ. ಇಂದು ಅಲೆಗಳು ಮೌನವಾಗಿದ್ದವು. ಸದ್ದುಗದ್ದಲವಿಲ್ಲದೆ ಅವು ಸಾಗಿ ಬಂದು ಕಿನಾರೆಯನ್ನು ತಲುಪಿ ಉಸಿರು ಚೆಲ್ಲುತ್ತಿದ್ದವು. ಆ ಎತ್ತರದ ಕಟ್ಟಡದ ಈ ಕುರ್ಚಿಯ ತನಕ ತಲುಪುವುದು ರಾಜ್ವೀರ್ನಿಗೆ ಸುಲಭದ ಮಾತಾಗಿರಲಿಲ್ಲ. ಹಗಲು-ರಾತ್ರಿ ಎನ್ನದೆ, ದಣಿವರಿಯದೆ ದುಡಿಯುತ್ತಾ ಎಲ್ಲವನ್ನು ತ್ಯಾಗಮಾಡಿ ಅಂತಿಮವಾಗಿ ಆತ ಸಾಫ್ಟ್ವೇರ್ ಕಂಪನಿಯ ಈ ಸ್ಥಾನಕ್ಕೆ ತಲುಪಿದ್ದ. ಇಷ್ಟೆಲ್ಲ ಸಾಧನೆ ಹೇಗಾಯಿತು? ಎಂದು ಆತನಿಗೆ ಊಹಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ.

ರಾಜ್ವೀರ್ನ ವಯಸ್ಸು ನಲವತ್ತು ಆಗಿದ್ದರೂ ಆಕರ್ಷಕ ಮೈಕಟ್ಟು ಹೊಂದಿದ್ದ. ಅವನ ಮುಖದ ಆಕರ್ಷಣೆ ತುಸುವೂ ಮಾಸಿರಲಿಲ್ಲ. ಹಾಗಾಗಿ ಆಫೀಸ್ನ ಹೆಚ್ಚು-ಕಡಿಮೆ ಎಲ್ಲಾ ಮಹಿಳಾ ಉದ್ಯೋಗಿಗಳ ನಡುವೆ ತನ್ನ ಕಾರ್ಯಕುಶಲತೆ ಹಾಗೂ ಸಭ್ಯ ವ್ಯವಹಾರಗಳಿಂದಾಗಿ ಪ್ರಸಿದ್ಧನಾಗಿದ್ದ. ಇಷ್ಟಾದರೂ ಆತ ತನ್ನೊಳಗೆಯೇ ಒಂದು ರೀತಿಯ ಮಿತಿಯನ್ನು ಹಾಕಿಕೊಂಡಿದ್ದ. ಎಲ್ಲರ ಜೊತೆ ಹತ್ತಿರವಾಗಿದ್ದರೂ ಒಂದು ನಿರ್ದಿಷ್ಟ ಅಂತರವನ್ನೂ ಸಹ ಕಾಯ್ದುಕೊಂಡಿದ್ದ.

ಇಂದು ಆತನ ಆಫೀಸಿನಲ್ಲಿ ಕೆಲವು ನೇಮಕಾತಿಗಳು ನಡೆಯಲಿದ್ದವು. ಇಂಟರ್ವ್ಯೂನ ಜವಾಬ್ದಾರಿ ಈತನದ್ದೇ ಆಗಿತ್ತು. ಆತ ತನ್ನ ಕ್ಯಾಬಿನ್ನಿಂದ ಹೊರಟು ಇಂಟರ್ವ್ಯೂ ನಡೆಯುವ ಕೊಠಡಿಯ ಕಡೆಗೆ ತೆರಳಿದ. ಕೊಠಡಿಯ ಹೊರಗೆ ಅಭ್ಯರ್ಥಿಗಳು ಸಾಲುಗಟ್ಟಿ ನಿಂತಿದ್ದರು. ನಿರಂತರವಾಗಿ ಮೂರು ಗಂಟೆಗಳ ತನಕ ನಡೆದ ಸಂದರ್ಶನ ಕಾರ್ಯದಿಂದ ರಾಜ್ವೀರ್ ಸುಸ್ತಾಗಿ ಹೋಗಿದ್ದ. ಅದೇ ಪ್ರಶ್ನೆ, ಉತ್ತರಗಳನ್ನು ಪುನಃ ಪುನಃ ಕೇಳಿ ಆತನ ಆಸಕ್ತಿಯೇ ಕುಗ್ಗಿ ಹೋದಂತಾಗಿತ್ತು. ಒಂದಷ್ಟು ಹೊತ್ತು ಬಿಡುವು ಮಾಡಿಕೊಂಡ ಆತ ತನ್ನ ಮೊಬೈಲ್ ಸ್ಕ್ರಾಲ್ ಮಾಡುತ್ತಾ ಮೌನವಾಗಿ ಕುಳಿತಿದ್ದ.
ಆತ ಮೊಬೈಲ್ನಲ್ಲಿ ಮುಳುಗಿ ಕೆಲವು ನಿಮಿಷಗಳೇ ಸಂದಿದವು. ಇದ್ದಕ್ಕಿದ್ದ ಹಾಗೆ ಒಂದು ಹೆಸರು ತೇಲಿ ಬಂದು ಆತನ ಕೈಗಳು ಹಾಗೂ ವ್ಯಕ್ತಿತ್ವವನ್ನು ಸ್ತಬ್ಧಗೊಳಿಸಿಬಿಟ್ಟಿತು. ಅಭ್ಯರ್ಥಿ ತನ್ನ ಹೆಸರನ್ನು ‘ನಿತ್ಯಾ ಸಹಾಯ್’ ಎಂದು ಹೇಳಿದ್ದರು. ತಕ್ಷಣ ರಾಜ್ವೀರ್ ತಿರುಗಿ ಎದುರಿಗೆ ಕುಳಿತಿದ್ದ ಅಭ್ಯರ್ಥಿಯನ್ನು ನೋಡಿದ 30–35ರ ಹರಯದ ಮಹಿಳೆ ಎದುರಿಗೆ ಕುಳಿತಿದ್ದಳು. ಆಕೆ ಬಿಳಿ ಮತ್ತು ನೀಲಿ ಬಣ್ಣದ ಸಲ್ವಾರ್ ಕಮೀಜನ್ನು ಧರಿಸಿದ್ದಳು. ಶ್ಯಾಮಲವರ್ಣದ ಆಕೆ ತೆಳು ಮೈಕಟ್ಟು ಹೊಂದಿದ್ದಳು. ಕೈನಲ್ಲಿ ಹಿಡಿದಿದ್ದ ಕಪ್ಪು ಬಣ್ಣದ ಫೈಲ್ನ್ನು ಮ್ಯಾನೇಜರ್ ಎದುರಿಗೆ ಇಡಲು ಅನುವಾಗಿದ್ದಳು.

ಒಂದು ಕ್ಷಣಕ್ಕೆ ರಾಜ್ವೀರ್ನ ಎದೆಬಡಿತ ನಿಂತಂತಾಗಿ ಕಣ್ಣುಗಳು ತಾನಾಗಿಯೇ ಅಗಲವಾದವು. ತನಗರಿವಿಲ್ಲದಂತೆಯೇ ಅವನ ಬಾಯಿಯಿಂದ ಹೊರಟ ‘ನಿತ್ಯಾ' ಶಬ್ದ ಆತನ ಕಿವಿಗೂ ತಲುಪಲಿಲ್ಲ. ಈ ನಡುವೆ ಎದುರಿಗೆ ಕುಳಿತಿದ್ದ ‘ನಿತ್ಯಾ’ಳ ಕಣ್ಣುಗಳು ಹೊರಳುತ್ತಾ ರಾಜ್ವೀರ್ ಮೇಲೆ ನೇರವಾಗಿ ಬಿದ್ದಾಗ ಆತನ ಕಣ್ಣುಗಳಲ್ಲಿ ಏನೋ ಸಂಶಯ ವ್ಯಕ್ತವಾಗುತ್ತಿತ್ತು. ಆದರೆ ಸಂದರ್ಶನ ಸಮಿತಿಯ ಇತರೆ ಸದಸ್ಯರ ನಿರಂತರ ಪ್ರಶ್ನೆಗಳನ್ನು ಆಕೆ ಎದುರಿಸುತ್ತಿದ್ದ ಕಾರಣ ಅತ್ತ ಕಡೆ ಹೆಚ್ಚು ಗಮನ ನೀಡಲಾಗಲಿಲ್ಲ. ಆತನ ಕಣ್ಣುಗಳು ನಿತ್ಯಾಳ ಮುಖದ ಮೇಲೆ ಹರಿದಾಡುತ್ತಿದ್ದವು. ಅತ್ತ ಸಂದರ್ಶನ ಪ್ರಕ್ರಿಯೆ ನಡೆಯುತ್ತಿದ್ದರೆ, ಇತ್ತ ರಾಜ್ವೀರ್ನ ಕಣ್ಣುಗಳ ಮುಂದೆ ಹನ್ನೆರಡು ವರ್ಷಗಳ ಹಿಂದಿನ ಆ ಒಂದು ರಾತ್ರಿಯ ನೆನಪು ತೇಲಿ ಬಂತು.

ಶ್ಯಾಮಬಾಬೂರವರ ಮಹಲಿನಲ್ಲಿದ್ದ ಬೆಳಕಿನ ಹೊಳಪು ಸಂಜೆಯ ಚಂದಿರನ ಬೆಳಕಿನಲ್ಲಿರಲಿಲ್ಲ. ಆ ನಗರದ ಶ್ರೀಮಂತ ಬಡಾವಣೆಯಲ್ಲಿದ್ದ ಶ್ಯಾಮಬಾಬೂ ಅವರ ಮಹಲು ಅವರ ತಾತನ ಕಾಲದಿಂದಲೂ ಸಾಕಷ್ಟು ಪ್ರಸಿದ್ಧಿ ಪಡೆದಿತ್ತು. ಸ್ವಾಭಾವಿಕವಾಗಿಯೇ ಸುತ್ತೆಲ್ಲ ಮನೆಗಳಿಗಿಂತ ತುಸು ಹೆಚ್ಚೇ ಹೊಳೆಯುತ್ತಿತ್ತು. ಅವರ ಬಂಗಲೆ ಇಂದು ಮಾತ್ರ ವಿಭಿನ್ನವಾಗಿ ಝಗಮಗಿಸುತ್ತಿತ್ತು. ಇಂದು ಶ್ಯಾಮಬಾಬೂರವರ ಏಕೈಕ ಪುತ್ರಿ ನಿತ್ಯಾಳ ಮದುವೆ ನಡೆಯುವುದಿತ್ತು.

ತನ್ನ ಮನೆಯ ಕಿಟಕಿಯಿಂದ ಎದುರಿಗೇ ಇದ್ದ ಆ ಬಂಗಲೆಯ ಹೊಳಪನ್ನು ರಾಜ್ವೀರ್ ನೋಡುತ್ತಿದ್ದ. ರಾಜ್ವೀರ್ನ ತಂದೆ ಬಾಬೂರವರ ಕಾರ್ಖಾನೆಯಲ್ಲಿ ಕ್ಲರ್ಕ್ ಆಗಿದ್ದರು. ಇಂದು ಅವರು ತಮ್ಮ ಬಾಸ್ನ ಮನೆಯ ಕಾರ್ಯಕ್ರಮದಲ್ಲಿ ಲಗುಬಗೆಯಿಂದ ಓಡಾಡುತ್ತಿದ್ದರು. ರಾಜ್ವೀರ್ನ ತಾಯಿ ತನ್ನ ಕೋಣೆಯಲ್ಲಿ ಕಪಾಟಿನಿಂದ ತೆಗೆದ ಸೀರೆಗಳನ್ನು ಮಂಚದ ಮೇಲೆ ಹರಡಿ ಮದುವೆಗೆ ಉಡುವ ಸೀರೆಯ ಆಯ್ಕೆಯಲ್ಲಿ ಮಗ್ನರಾಗಿದ್ದರು. ಎಷ್ಟಾದರೂ ಶ್ರೀಮಂತರ ಮನೆಯ ಮದುವೆ...! ಚೆನ್ನಾಗಿರುವ ಸೀರೆಯನ್ನೇ ಉಡಬೇಕಲ್ಲವೇ...! ರಾಜ್ವೀರ್ ಗರಬಡಿದವನಂತೆ ನಿಂತು ಎಲ್ಲವನ್ನು ಮೌನವಾಗಿಯೇ ಗಮನಿಸುತ್ತಿದ್ದ. ಮನದೊಳಗಿನ ಮಾತನ್ನು ಹಾಗೆಯೇ ಅದುಮಿಟ್ಟುಕೊಳ್ಳುವ ಸ್ವಭಾವವನ್ನು ಆತ ಚಿಕ್ಕಂದಿನಿಂದಲೇ ಮೈಗೂಡಿಸಿಕೊಂಡಿದ್ದ.
ಸಂಜೆಯಾಗುತ್ತಾ ಹೋದಂತೆ ಶಹನಾಯಿಯ ನಾದ ತಾರಕಕ್ಕೇರತೊಡಗಿತು. ಮೋಟಾರು ಗಾಡಿಗಳ ಆಗಮನದ ಶಬ್ದ ಜಾಸ್ತಿಯಾಗ ತೊಡಗಿತು. ನಗರದ ಹೆಚ್ಚಿನ ಪ್ರತಿಷ್ಠಿತ ಕುಟುಂಬಗಳು ಆಗಮಿಸಲಾರಂಭಿಸಿದವು. ವಾಹನಗಳ ಓಡಾಟದ ಶಬ್ಧ ರಾಜ್ವೀರ್ನ ಆತಂಕವನ್ನು ಉಮ್ಮಳಿಸತೊಡಗಿತ್ತು. ಹಾಗೇನೇ ಮನಸು ಭಾರವಾಗ ತೊಡಗಿತ್ತು. ಬಿಕ್ಕಿಬಿಕ್ಕಿ ಅತ್ತು ಮನಸ್ಸನ್ನು ಹಗುರ ಮಾಡಿಕೊಳ್ಳಬೇಕೆಂದು ಆತನಿಗೆ ಅನ್ನಿಸುತ್ತಿತ್ತು. “...ರಾಜ್ವೀರ್ ಎಷ್ಟು ಹೊತ್ತಿನಿಂದ ಹಾಗೆ ಕಿಟಕಿಯ ಬಳಿ ನಿಂತಿರುತ್ತೀಯಾ? ಹೋಗು, ತಯಾರಾಗು. ಅಪ್ಪ ಬೆಳಗ್ಗೆಯಿಂದ ಅಲ್ಲಿಯೇ ಇದ್ದಾರೆ. ಅತಿಥಿ ಅಭ್ಯಾಗತರು ಬಂದು ಸೇರುತ್ತಿದ್ದಾರೆ. ನಾವು ಕೂಡ ಸಹಾಯ ಮಾಡೋಣ. ಇನ್ನೇನು ದಿಬ್ಬಣ ಬಂದುಬಿಡುತ್ತದೆ...ಹಾಂ., ಹೊರಡು...!” ತಾಯಿ ಎಚ್ಚರಿಸಿದಾಗ ಆತ ವಾಸ್ತವಕ್ಕೆ ಹೊರಳಿದ್ದ.
ರಾಜ್ವೀರ್ನ ಕಣ್ಣುಗಳಲ್ಲಿ ತುಂಬಿಕೊಂಡಿದ್ದ ಕಣ್ಣೀರ ಹನಿಗಳು ಅನಿವಾರ್ಯವಾಗಿ ಕೆಳಕ್ಕೆ ಉರುಳಿದವು. ಕೂಡಲೇ ಸಾವರಿಸಿಕೊಂಡ ಆತ ತಾಯಿಗೆ “...ಇಲ್ಲಮ್ಮ, ನೀನು ಹೋಗು. ಈಗ ಹೊರಡಲು ನನಗೆ ಮನಸ್ಸಿಲ್ಲ. ಮತ್ತೆ, ಅಲ್ಲಿ ಸಹಾಯ ಮಾಡಲು ಸಾಕಷ್ಟು ಜನರಿರುತ್ತಾರೆ. ದೊಡ್ಡವರ ಮನೆಯ ಕಾರ್ಯ ತಾನೇ...” ಎಂದು ಭಾರವಾದ ಧ್ವನಿಯಲ್ಲಿಯೇ ಹೇಳಿದ.
ತಾಯಿ ಕಣ್ಣರಳಿಸಿ ಮಗನನ್ನು ನೋಡುತ್ತಾ ಎತ್ತರದ ಧ್ವನಿಯಲ್ಲಿ ಹೇಳಿದಳು- “...ಏನಂದೆ? ಮನಸ್ಸಿಲ್ಲ ಅಂದ್ರೆ ಏನರ್ಥ? ಮೂರ್ಖರ ಹಾಗೆ ಮಾತಾಡಬೇಡ. ಅವರು ದೊಡ್ಡವರು. ಅವರಿಂದಲೇ ನಮ್ಮ ಜೀವನ ನಡೀತಾ ಇರೋದು. ನಿನ್ನ ವಿದ್ಯಾಭ್ಯಾಸ ಅವರ ಕಾರಣದಿಂದಲೇ ಆಗ್ತಾ ಇದೆ ಎನ್ನುವ ಅರಿವು ನಿನಗೆ ಇದೇ ತಾನೇ...! ಅವರ ಮಗಳ ಮದುವೆಯ ಕಾರ್ಯಕ್ರಮಕ್ಕೆ ಹೋಗೋದು ಒಂದರ್ಥದಲ್ಲಿ ನಮ್ಮ ಕರ್ತವ್ಯವೂ ಹೌದು. ಸ್ವಲ್ಪ ಅರ್ಥ ಮಾಡಿಕೊಂಡು ಮಾತಾಡು. ಹೋಗು, ರೆಡಿಯಾಗಿ ಹೊರಡು, ಬೇರೆ ಮಾತು ಬೇಡ...”

ತಾಯಿಯ ಮಾತಿಗೆ ಎದುರಾಡುವುದರಿಂದ ಏನೂ ಪ್ರಯೋಜನವಿಲ್ಲ ಎಂದು ರಾಜ್ವೀರ್ಗೆ ಗೊತ್ತಿತ್ತು. ಆದರೆ ಮನಸ್ಸು ಹಿಂದೆ ಸರಿಯುತ್ತಿತ್ತು. ತಂದೆ ಆ ಮನೆಯಲ್ಲಿ ನೌಕರರ ಹಾಗೆ ದುಡಿಯುತ್ತಿದ್ದರು. ಅದೇ ಮನೆಯ ಹುಡುಗಿಯ ಬಗ್ಗೆ ಈತ ಆಕರ್ಷಿತನಾಗಿದ್ದ. ಅದಕ್ಕೆ ಕಾರಣವೂ ಇತ್ತು. ಚಿಕ್ಕಂದಿನಿಂದಲೂ ರಾಜ್ವೀರ್ ನಿತ್ಯಾಳ ಜೊತೆ ಬೆಳೆದುಬಂದಿದ್ದ. ಇಬ್ಬರ ನಡುವೆ ಸಲುಗೆಯೂ ಬೆಳೆದಿತ್ತು. ಆದರೆ ಬಾಲ್ಯದ ಸ್ನೇಹ ಪ್ರೀತಿಯಾಗಿ ಆತನ ಅರಿವಿಗೆ ಬಾರದಂತೆ ಸಹಜವಾಗಿ ಮೊಳಕೆಯೊಡೆದಿತ್ತು. ನಿತ್ಯಾ ಮಾತ್ರ ಏನೂ ಅರಿಯದವಳಂತೆ ಸದಾ ಲವಲವಿಕೆಯಿಂದ ಇರುತ್ತಾ ಬಂದಿದ್ದಳು. ಹಾಂ., ಒಂದೊಮ್ಮೆ ‘ಮುಂದೆ ನನ್ನ ಬಾಳ ಸಂಗಾತಿಯಾಗುವವನು ರಾಜ್ವೀರ್ನಂತೆಯೇ ಇರಬೇಕು’ ಎಂದು ತನ್ನ ಗೆಳತಿಯರ ಜೊತೆ ಹೇಳಿಕೊಂಡಿದ್ದು ರಾಜ್ವೀರ್ನಿಗೆ ತಿಳಿದಿತ್ತು. ನಿತ್ಯಾ ಏನನ್ನೂ ಹೇಳಿಕೊಳ್ಳದಿದ್ದರೂ ‘ಆಕೆಯನ್ನು ತಾನು ಪ್ರೀತಿಸುತ್ತಿದ್ದೇನೆ’ ಎಂದು ರಾಜ್ವೀರ್ ತನಗೆ ತಾನೇ ಕನಸು ಕಟ್ಟಿಕೊಂಡಿದ್ದ. ತನ್ನ ಆಂತರಿಕ ಭಾವನೆಯನ್ನು ಕನಸಿನ ಮೂಲಕವಷ್ಟೇ ನಿತ್ಯಾಳ ಎದುರು ನಿವೇದನೆ ಮಾಡಬಹುದಾಗಿತ್ತು.
ಕಳೆದ ವಾರ ಇದ್ದಕ್ಕಿದ್ದ ಹಾಗೆ ತಂದೆ ‘ನಿತ್ಯಾಳ ಮದುವೆ ಒಬ್ಬ ದೊಡ್ಡ ಅಧಿಕಾರಿಯ ಜೊತೆ ನಿಶ್ಚಯವಾಗಿದೆ. ಒಂದು ವಾರದಲ್ಲಿ ಮದುವೆ ಕೂಡ ನಡೆಯಲಿದೆ’ ಎಂದು ಹೇಳಿದ್ದರು. ರಾಜ್ವೀರ್ಗೆ ತನ್ನ ಕಿವಿಗಳನ್ನು ತಾನೆ ನಂಬಲಾಗಲಿಲ್ಲ. ಇದು ಹೇಗೆ ಸಾಧ್ಯ? ನಿತ್ಯಾಳ ಓದು ಇನ್ನೂ ಮುಗಿದೇ ಇಲ್ಲ. ಅವಳ ತಂದೆ ಆಕೆಯನ್ನು ಒಂದು ಉನ್ನತ ಸ್ಥಾನದಲ್ಲಿ ಕಾಣುವ ಯೋಚನೆಯಲ್ಲಿದ್ದಾರೆ. ನಾನೂ ಕೂಡ ಆಕೆಗೆ ಸರಿ ಸಮಾನವಾದ ಹಂತಕ್ಕೆ ತಲುಪಿ, ನಂತರ ಧೈರ್ಯ ಮಾಡಿ ಆಕೆಯನ್ನು ಜೀವನ ಸಂಗಾತಿಯನ್ನಾಗಿ ಹೊಂದುವ ನನ್ನ ಕನಸನ್ನು ಧೈರ್ಯ ಮಾಡಿ ವ್ಯಕ್ತಪಡಿಸುವ ಕನಸು ಕಾಣುತ್ತಿದ್ದೇನೆ... ಆದರೆ ಈಗ ಇದ್ದಕ್ಕಿದ್ದ ಹಾಗೆ ಇದೇನಿದು...? ಈಗ ನಾನು ಯಾವ ಮುಖವಿಟ್ಟುಕೊಂಡು ಅಷ್ಟು ದೊಡ್ಡ ಮನೆ ಹುಡುಗಿಗೆ ‘ನಾನು ನಿನ್ನನ್ನು ಪ್ರೀತಿಸುತ್ತೇನೆ ಎಂದು ಹೇಳಲಿ...?'

ಚಿಕ್ಕಂದಿನಿಂದಲೂ ಆತ ಬಡತನದಲ್ಲಿಯೇ ಬೆಳೆದು ಬಂದಿದ್ದ. ಆತನ ತಂದೆ ಮಗನನ್ನು ಹೇಗಾದರೂ ಮಾಡಿ ಸಮಾಜದಲ್ಲಿ ಒಬ್ಬ ದೊಡ್ಡ ವ್ಯಕ್ತಿಯನ್ನಾಗಿ ಮಾಡುವ ಕನಸು ಹೊಂದಿದ್ದರು. ಅದಕ್ಕಾಗಿಯೇ ಅವರು ತಮ್ಮ ಸರ್ವಸ್ವವನ್ನು ಧಾರೆ ಎರೆಯಲು ಸದಾ ತಯಾರಾಗಿದ್ದರು. ರಾಜ್ವೀರ್ ಕೂಡ ತಂದೆಯ ಕನಸಿಗೆ ಸೂಕ್ತವಾಗಿ ಸ್ಪಂದಿಸುತ್ತಾ ಸಾಗಿದ್ದ.
ಹಾಗೆ ನೋಡಿದರೆ ಆತ ಪ್ರೀತಿ, ಪ್ರೇಮದ ಕಡೆಗೆ ವಾಲುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಆದರೇನು? ವಯಸ್ಸಿನ ಸೆಳೆತದಿಂದಾಗಿ ಆತ ಹೃದಯವನ್ನು ನಿಯಂತ್ರಿಸಲಾರದೆ ಹೋಗಿ, ನಿತ್ಯಾಳ ಕಡೆಗೆ ಗೊತ್ತಿಲ್ಲದೆಯೇ ಆಕರ್ಷಿತನಾಗಿದ್ದ. ಆಕೆಯ ಕಣ್ಣೋಟ, ಮುಗುಳ್ನಗೆಗೆ ಮಾರುಹೋಗಿದ್ದ. ಸದಾ ಅವಳನ್ನೇ ಧ್ಯಾನಿಸುತಿದ್ದ ರಾಜ್ವೀರ್ಗೆ ಈಗ ತಾಯಿ ‘ತಯಾರಾಗು’ ಎನ್ನುತ್ತಿದ್ದಂತೆ ಒಳಗಿನದ್ದನ್ನು ವ್ಯಕ್ತಪಡಿಸಲಾಗದ ಅಸಹಾಯಕ ಸ್ಥಿತಿಯಲ್ಲಿ ಅನ್ಯಮನಸ್ಕನಾಗಿಯೇ ಎದ್ದು ಹೋಗಿ ಬಟ್ಟೆ ಬದಲಾಯಿಸಿ, ತಾಯಿಯ ಜೊತೆ ಎದುರಿನ ಬಂಗಲೆಯತ್ತ ಹೆಜ್ಜೆ ಹಾಕಿದ.

ಮದುಮಗಳಂತೆ ಸಿಂಗಾರಗೊಂಡು ಜಗಮಗಿಸುತ್ತಿದ್ದ ಆ ಭವ್ಯಬಂಗಲೆಯ ಸೌಂದರ್ಯ ಕಣ್ಣುಗಳನ್ನು ಕುಕ್ಕುವಂತಿತ್ತು. ಆದರೆ ರಾಜ್ವೀರ್ನ ಕಣ್ಣುಗಳಲ್ಲಿ ಒಂದು ತೆರನಾದ ನೋವು ತುಂಬಿ ಮಾತು ಹೊರಡದಂತಾಗಿತ್ತು. ಇಂದಿನಿಂದ ಆತನ ಪ್ರೇಮ ಯಾರೋ ಅನ್ಯರ ಶ್ರದ್ಧೆಯಾಗಿ ಪರಿವರ್ತನೆಯಾಗುವುದರಲ್ಲಿತ್ತು. ಹಾಗಾಗಿ ಕೊನೆಯ ಸಾರಿ ಒಮ್ಮೆ ಒಂದು ಕ್ಷಣ ಕಣ್ತುಂಬಿಕೊಳ್ಳುವ ಆಸೆಯಿಂದ ಆತ ತಾಯಿಯ ಜೊತೆ ಆ ಬಂಗಲೆಯೊಳಗೆ ಪ್ರವೇಶಿಸಿದ. ಎದುರಿಗಿದ್ದ ತಂದೆಯ ದೃಷ್ಟಿ ತನ್ನ ಮೇಲೆ ಬಿದ್ದ ತಕ್ಷಣ ರಾಜ್ವೀರ್ ಅತಿಥಿಗಳ ಸ್ವಾಗತದ ಕಾರ್ಯದ ಕಡೆಗೆ ಹೊರಳಿದ. ಸ್ವಾಗತದ ನೆಪದಲ್ಲಿಯೇ ಆತ ಸಂದರ್ಭ ಹೊಂದಿಸಿಕೊಂಡು ನಿತ್ಯಾಳನ್ನು ನೋಡುವ ಹಂಬಲದಿಂದ ಮೊದಲನೇ ಮಹಡಿಯ ಮೇಲಿದ್ದ ಆಕೆಯ ಕೊಠಡಿಯ ಕಡೆಗೆ ನಡೆದ. ನಿತ್ಯಾಳ ಕೊಠಡಿಯ ಎದುರಿಗೆ ತುಂಬಿದ್ದ ಯುವತಿಯರನ್ನು ಕಂಡು ರಾಜ್ವೀರ್ ವರಾಂಡದ ಒಂದು ಮೂಲೆಯಲ್ಲಿ ನಿಂತುಬಿಟ್ಟ. ಯುವತಿಯರ ಗುಂಪು ಸ್ವಲ್ಪ ಕಡಿಮೆಯಾದಾಗ ನಿತ್ಯಾಳನ್ನು ಕಾಣುವ ಉದ್ದೇಶ ಅವನದಾಗಿತ್ತು.

ಬ್ಯಾಂಡು, ಸಿಡಿಮದ್ದುಗಳ ಸದ್ದಿನಿಂದ ದಿಬ್ಬಣ ಬಂಗಲೆಯ ದ್ವಾರದ ಬಳಿ ತಲುಪಿದೆ ಎಂದು ತಿಳಿಯಿತು. ನಿತ್ಯಾಳ ಕೊಠಡಿಯ ಎದುರಿಗೆ ನೆರೆದಿದ್ದ ಹುಡುಗಿಯರು ದಿಬ್ಬಣ ಮತ್ತು ವರನನ್ನು ನೋಡುವ ತವಕದಿಂದ ವರಾಂಡಕ್ಕೆ ಧಾವಿಸಿದರು. ಇದೇ ಸಮಯ ನೋಡಿ ರಾಜ್ವೀರ್ ಈ ‘ಹೂ ಬುಟ್ಟಿಯನ್ನು ರೂಮಿನೊಳಗೆ ಇಟ್ಟುಬಿಡು’ ಎಂದು ಹೇಳಿ ಕಳುಹಿಸಿದ್ದಾರೆ ಎಂಬ ನೆಪ ಹೇಳುತ್ತಾ ನಿತ್ಯಾಳ ಕೊಠಡಿಯೊಳಗೆ ಪ್ರವೇಶಿಸಿದ.

ನಿತ್ಯಾ ಕೊಠಡಿಯೊಳಗೆ ನಿಲುಗನ್ನಡಿಯ ಮುಂದೆ ಕುಳಿತಿದ್ದಳು. ಆಕೆಯ ಮುಖವನ್ನು ನೋಡಿದ ರಾಜ್ವೀರ್ ‘ಏನಿದ್ದರೂ ಈಕೆ ಬೇರೆಯವನ ಜೀವನ ಸಂಗಾತಿಯಾಗುವವಳಿದ್ದಾಳೆ’ ಎಂದು ಮನದೊಳಗೆ ಅಂದುಕೊಂಡು ನತಮಸ್ತಕನಾಗಿ ನಿಂತು ಬಿಟ್ಟ. ರಾಜ್ವೀರ್ನನ್ನು ನೋಡಿದ ನಿತ್ಯಾ ‘ಯಾಕಿಷ್ಟು ತಡಮಾಡಿದೆ ರಾಜ್ವೀರ್’ ಎಂದು ಕೇಳಿದಳು.

ರಾಜ್ವೀರ್ ಬಲವಂತದ ನಗೆ ಬೀರುತ್ತಾ ಅವಳ ಮುಖವನ್ನು ನೋಡಿ ಹೇಳಿದ ‘ಆಂ., ಇಂಜಿನಿಯರಿಂಗ್ ಎಂಟ್ರೆನ್ಸ್ ಎಕ್ಸಾಮ್ಗೆ ತಯಾರಿ ಮಾಡಬೇಕಲ್ವಾ... ಅದಕ್ಕೆ ಬಿಜಿ ಆಗಿದ್ದೆ. ನೀನಂತೂ ನಿನ್ನ ದಾರಿ ಕಂಡುಕೊಂಡುಬಿಟ್ಟೆ. ನಾನು ಸಹ ಜೀವನದಲ್ಲಿ ಏನಾದರೂ ಕಂಡುಕೊಳ್ಳಬೇಕಲ್ವಾ...?’

ನಿತ್ಯಾಳ ಮುಖದ ಮೇಲೆ ಒಂದು ರೀತಿಯ ಬೇಸರ ಮೂಡಿದ್ದನ್ನು ರಾಜ್ವೀರ್ ಗಮನಿಸಿದ. ರಾಜ್ವೀರ್ಗೆ ಆಕೆ ತಕ್ಷಣ ಪ್ರತಿಕ್ರಿಯೆ ನೀಡಬೇಕೆನ್ನುವ ರೀತಿಯಲ್ಲಿ ಆತನನ್ನೇ ಒಂದು ಕ್ಷಣ ದಿಟ್ಟಿಸಿ ನೋಡಿದಳು. ಆದರೆ ಶಬ್ದಗಳು ಬಾಯಿಯಿಂದ ಹೊರಡದೇ ಹೋದಾಗ ನಿತ್ಯಾ ಬೇಸರದ ನಿಟ್ಟುಸಿರೊಂದನ್ನು ಹೊರಚೆಲ್ಲಿದಳು. ರಾಜ್ವೀರ್ ಕೂಡ ನಿತ್ಯಾಳನ್ನು ಕಣ್ಣು ಮಿಟುಕಿಸದೇ ನೋಡುತ್ತಿದ್ದ. ಏನೆಲ್ಲಾ ಹೇಳಬೇಕೆಂಬ ತುಡಿತ ಅವನೊಳಗೆ ತುಂಬಿದ್ದರೂ ಈ ಕ್ಷಣಕ್ಕೆ ಹೇಳಲಾರದೇ ಹೋದ. ನಿತ್ಯಾಳ ಮೌನಮುಖದ ಕೆನ್ನೆಗಳ ಮೇಲೆ ಕಣ್ಣೀರ ಹನಿಗಳು ಉರುಳಿದ್ದನ್ನು ಕಂಡ ರಾಜ್ವೀರ್ ಆಕೆಗೆ ಏನೋ ಹೇಳಬೇಕೆಂದು ಅವಳ ಹತ್ತಿರ ಹೋಗಬೇಕೆನ್ನುವಷ್ಟರಲ್ಲಿ ಬಾಗಿಲ ಬಳಿ ಸದ್ದಾಗಿ ಆತ ತಿರುಗಿ ನೋಡಿದಾಗ ಆಕೆಯ ತಂದೆ ಒಳ ಪ್ರವೇಶಿಸುತ್ತಿದ್ದರು. ರಾಜ್ವೀರ್ನನ್ನು ನೋಡಿದ ಕೂಡಲೇ ಅವರು ಹೇಳಿದರು- “...ಅರೆ., ರಾಜ್ವೀರ್...! ಮದುಮಗಳ ಕೊಠಡಿಯಲ್ಲಿ ಏನು ಮಾಡುತ್ತಿರುವೆ? ಅಲ್ಲಿ ಹೋಗಿ ನಮ್ಮ ಅಳಿಯಂದಿರ ದಿಬ್ಬಣದ ಸತ್ಕಾರದಲ್ಲಿ ಸೇರಿಕೋ. ಹಾಂ., ತುಂಬಾ ಅದೃಷ್ಟವಂತೆ ನಮ್ಮ ನಿತ್ಯಾ...! ಅಷ್ಟು ದೊಡ್ಡ ಆಫೀಸರ್ ಸಿಕ್ಕಿದ್ದು ನಮ್ಮ ದೊಡ್ಡ ಅದೃಷ್ಟ... ಹೋಗು... ಹೋಗು... ಕೆಳಗಡೆ ಇಡೀ ನಗರವೇ ಆಗಮಿಸಿದೆ...”
ನಿತ್ಯಾಳ ಕಡೆಗೊಮ್ಮೆ ಕಡೆಗಣ್ಣಿನ ನೋಟ ಬೀರಿ ಅಲ್ಲಿಂದ ರಾಜ್ವೀರ್ ನಿರ್ಗಮಿಸಿದ.

ಹೇಳಬೇಕೆಂದಿದ್ದ ಕೆಲವೇ ಮಾತುಗಳು ಒಳಗೇ ಉಳಿದಿದ್ದವು. ಅಸಹಾಯಕತೆಯ ಮುಖ ಹೊತ್ತು ತಂದೆಯ ಪಕ್ಕದಲ್ಲಿ ಹೋಗಿ ಕುಳಿತುಕೊಂಡ. ಮಗನ ಹೆಗಲ ಮೇಲೆ ಕೈ ಹಾಕಿ ಆತನ ತಂದೆ ಹೇಳಿದರು- “...ನೋಡು., ಎಂತಹ ಖುಷಿ...! ತಂದೆ ತಾಯಿಯರಿಗೆ ಮಕ್ಕಳ ಮದುವೆಗಿಂತ ಹೆಚ್ಚಿನ ಸಂತೋಷ ಬೇರೇನಿದೆ? ನೀನು ಕೂಡ ಬೇಗ ಇಂಜಿನಿಯರಿಂಗ್ ಮುಗಿಸಿ ದೊಡ್ಡ ಹುದ್ದೆಯನ್ನು ಪಡೆದುಕೋ. ನಾನು ಕೂಡ ಆದಷ್ಟು ಬೇಗ ಮನೆಗೆ ಒಬ್ಬ ಸೊಸೆಯನ್ನು ತಂದು ತುಂಬಿಸಿಕೊಂಡು ನೆಮ್ಮದಿಯಿಂದ ಇದ್ದುಬಿಡುತ್ತೇನೆ...”

ರಾಜ್ವೀರ್ ಮೌನವಾಗಿಯೇ ಕುಳಿತಿದ್ದ. ಆತನಿಗೆ ಹೇಳಲು ಇನ್ನೇನು ಉಳಿದಿತ್ತು...? ಕೆಲವೇ ಗಂಟೆಗಳಲ್ಲಿ ವಿವಾಹದ ಎಲ್ಲಾ ಕಾರ್ಯಗಳು ಮುಗಿದು ಹೋದವು. ಬೆಳಗ್ಗೆ ಸೂರ್ಯೋದಯಕ್ಕೆ ಮುನ್ನ ನಿತ್ಯಾಳನ್ನು ಕಳುಹಿಸಿ ಕೊಡುವ ಕೆಲಸವೂ ಮುಗಿಯಿತು. ರಾಜ್ವೀರ್ ಮನೆಗೆ ತೆರಳಿ ತಾನು ದಿನಾ ಬೆಳಿಗ್ಗೆ ಸಂಜೆ ನಿತ್ಯಾಳನ್ನು ಗಂಟೆಗಳ ತನಕ ನೋಡುತ್ತಿದ್ದ ಅದೇ ಕಿಟಕಿಯ ಎದುರು ನಿಂತು ನಿತ್ಯಾಳ ಬಂಗಲೆಯನ್ನೊಮ್ಮೆ ನೋಡಿದ. ಎಲ್ಲವೂ ಶೂನ್ಯ ಎನಿಸಿತು. ಎದೆಯೊಳಗೆ ನಿತ್ಯಾಳ ನೆನಪು ಮಾತ್ರ ಅವಿತಿಟ್ಟುಕೊಂಡಿತ್ತು.

ರಾಜ್ವೀರ್ ನಿತ್ಯಾಳ ಬಗೆಗಿನ ತನ್ನ ಏಕಮುಖ ಪ್ರೀತಿಯನ್ನು ಮರೆತು ಜೀವನದಲ್ಲಿ ಸಾಧನೆ ಮಾಡಿ ನಿತ್ಯಾಳಿಗಿಂತ ಮುಂದೆ ಸಾಗಬೇಕೆಂದು ಪ್ರಯತ್ನಿಸತೊಡಗಿದ. ತಂದೆ-ತಾಯಿ ಮಗನಿಗೆ ಮದುವೆ ಮಾಡಿಸುವ ಸಲುವಾಗಿ ಸಾಕಷ್ಟು ಹುಡುಗಿಯರ ಫೋಟೋ ತೋರಿಸಿದರು. ಆದರೆ ಆತ ಏನಾದರೂ ಒಂದು ನೆಪ ಹೇಳುತ್ತಲೇ ಹೋದ. ಸರಿ, ಮಗನ ಯಶಸ್ಸು ಕಾಣುವ ಹಂಬಲದಿಂದ ಅವರು ಸುಮ್ಮನಾದರು.

ನಿತ್ಯಾ ಇಂಟರ್ವ್ಯೂ ಮುಗಿದ ಕೂಡಲೇ ಎದ್ದುನಿಂತು ಎಲ್ಲರಿಗೂ ನಮಸ್ಕಾರ ಹೇಳಿ, ಕೊಠಡಿಯಿಂದ ಸರಸರನೇ ನಡೆದು ಹೊರಬಂದಳು. ಆಕೆ ಹೊರಹೋದ ತಕ್ಷಣ ರಾಜ್ವೀರ್ ಎದ್ದು ಹೊರಡಲನುವಾದಾಗ ಹೆಚ್.ಆರ್.ಮ್ಯಾನೇಜರ್- “...ಸರ್., ಇನ್ನೂ ಸ್ವಲ್ಪ ಕ್ಯಾಂಡಿಡೇಟ್ಸ್ ಇದ್ದಾರೆ...” ಎಂದರು.

“...ನನಗೆ ಯ್ಯಾಕೋ ಆರೋಗ್ಯ ಸರಿ ಇಲ್ಲ ಎನಿಸುತ್ತೆ. ನೀವೇ ಇಂಟರ್ವ್ಯೂ ಮುಂದುವರೆಸಿ...” ಎಂದು ಹೊರಬಂದು ಕ್ಯಾಂಡಿಡೇಟ್ಸ್ಗಳ ನಡುವೆಯೇ ನಿತ್ಯಾಳನ್ನು ಹುಡುಕುತ್ತಾ ಹೋದ. ಆದರೆ ನಿತ್ಯಾ ಎಲ್ಲೂ ಕಾಣಸಿಗಲೇ ಇಲ್ಲ. ವರ್ಷಗಳ ಹಿಂದಿನ ನಿತ್ಯಾ ಇವಳಲ್ಲ ಎಂದು ಆಕೆಯ ಮುಖಭಾವ ಕಣ್ಣುಗಳನ್ನು ಕಂಡಾಗಲೇ ರಾಜ್ವೀರ್ಗೆ ಸಂಶಯ ಮೂಡಿತ್ತು. ಆತ ಭರಭರನೆ ನಡೆದು ಸೆಕ್ಯೂರಿಟಿಯ ಬಳಿ ಬಂದು ವಿಚಾರಿಸಿದಾಗ ಆಕೆ ಸೀದಾ ನಡೆದುಹೋದ ಮಾಹಿತಿ ದೊರೆಯಿತು.

ರಾಜ್ವೀರ್ ಆಫೀಸ್ ಮ್ಯಾನೇಜರ್ ಬಳಿ ಬಂದು ಆಕೆಯ ಬಗ್ಗೆ ಕೇಳಿದಾಗ ನಿತ್ಯಾಳ ಮೊಬೈಲ್ ನಂಬರ್ ದೊರೆಯಿತು. ಕೂಡಲೇ ಆ ನಂಬರ್ಗೆ ಕಾಲ್ ಮಾಡಿದಾಗ ನಿತ್ಯಾ ಕಾಲ್ ರಿಸೀವ್ ಮಾಡಲೇ ಇಲ್ಲ. ರಾಜ್ವೀರ್ನನ್ನು ಹಲವಾರು ಪ್ರಶ್ನೆಗಳು, ಸಂಶಯಗಳು ಕಾಡತೊಡಗಿದವು. ನಿತ್ಯಾ ಯಾಕಾದರೂ ಇಂಟರ್ವ್ಯೂಗೆ ಬಂದಿದ್ದಳು? ಆಕೆಗೆ ಈಗ ಕೆಲಸದ ಅವಶ್ಯಕತೆ ಇದೆಯೇ? ಏನಾಗಿರಬಹುದು? ಮೇಲಾಗಿ ನಿತ್ಯಾ ನನ್ನನ್ನು ಗುರುತಿಸಿದಳೇ...?
ಅವಳು ಇಲ್ಲಿ ನೀಡಿರುವ ವಿಳಾಸಕ್ಕೆ ಒಮ್ಮೆ ಹೋಗಿ ಆಕೆಯನ್ನು ಭೇಟಿಯಾದರೆ ಹೇಗೆ? ಎಂದು ರಾಜ್ವೀರ್ಗೆ ಅನ್ನಿಸಿತು. ಆದರೆ ಆಕೆಯ ಪತಿ ಮನೆಯಲ್ಲಿದ್ದರೆ ಏನು ಹೇಳುವುದು? ಎಂಬ ಪ್ರಶ್ನೆಯೂ ಎದುರಾಯಿತು.

ಈ ಗೊಂದಲದಲ್ಲಿಯೇ ರಾಜ್ವೀರ್ ಆಫೀಸಿನಿಂದ ಹೊರಟು ನಡೆದುಕೊಂಡೇ ಸಮುದ್ರದ ಕಡೆಗೆ ಹೊರಟ. ಗಾಳಿ ತನ್ನ ವೇಗವನ್ನು ಹೆಚ್ಚಿಸಿಕೊಳ್ಳತೊಡಗಿತ್ತು. ಎಷ್ಟೋ ಮೈಲು ದೂರದಿಂದ ಸಮುದ್ರದ ಮಧ್ಯದಿಂದ ಹುಟ್ಟಿ ಬಂದ ಅಲೆಗಳು ಗರ್ಜಿಸುತ್ತಾ ದಡಕ್ಕೆ ಅಪ್ಪಳಿಸಿ ಹಿಂತಿರುಗುತ್ತಿದ್ದವು. ಸಮುದ್ರದ ಗರ್ಜನೆ ಮನದೊಳಗಿನ ಮೊರೆತಗಳಿಂದ ಅಶಾಂತನಾದ ರಾಜ್ವೀರ್ ಆಯಾಸಗೊಂಡು ಸಮೀಪದಲ್ಲೇ ಇದ್ದ ಸಿಮೆಂಟ್ ಬೆಂಚ್ ಮೇಲೆ ಕುಳಿತು ನಿತ್ಯಾಳ ಬಿಂಬವನ್ನು ಮನದೊಳಗೆ ತುಂಬಿಕೊಂಡ. ಆತ ಕಣ್ಣೆದುರಿಗಿನ ಸಮುದ್ರ ಹಾಗೂ ಅದರ ಅಬ್ಬರವನ್ನು ನೋಡುತ್ತಾ ಕುಳಿತ. ಅವನಿಗೆ ಅರಿವಿಲ್ಲದಂತೆಯೇ ನಿತ್ಯ ಎದುರಿಗೆ ನಿಂತು ಏನೋ ಹೇಳಿದ ಹಾಗೆ ಭಾಸವಾಯಿತು.
“...ಸರ್...” ಎಂಬ ಧ್ವನಿಗೆ ವಾಸ್ತವಕ್ಕೆ ಹಿಂತಿರುಗಿ ಆತ ನೋಡಿದಾಗ ನಿಜವಾಗಿಯೂ ನಿತ್ಯಾಳೇ ನಿಂತಿದ್ದಳು. “...ಸರ್., ನೀವು ಸ್ವಲ್ಪ ಸಮಯದ ಮುಂಚೆ ಇಂಟರ್ವ್ಯೂನಲ್ಲಿ ಇದ್ದಿರಿ ತಾನೇ...!”
ರಾಜ್ವೀರ್ ನಿತ್ಯಾಳನು ಮೇಲಿಂದ ಕೆಳಗಿನ ತನಕ ನೋಡಿ ಕೇಳಿದ- “...ನಿತ್ಯಾ ನೀನು ನನ್ನನ್ನು ನಿಜವಾಗಿಯೂ ಗರುತಿಸಿದೆಯಾ...?”

ನಿತ್ಯಾ ಕ್ಷಣಹೊತ್ತು ರಾಜ್ವೀರ್ನ ಮುಖವನ್ನೇ ದಿಟ್ಟಿಸಿ ನೋಡಿದಳು. ಕಣ್ಣಂಚಿನಲ್ಲಿ ಒಂದು ಹನಿ ಮೂಡಿತು. “...ಹೌದು. ಆ ರಾಜ್ವೀರ್ ನೀನೇ ತಾನೇ...!” ರಾಜ್ವೀರ್ನ ಕಣ್ಣುಗಳು ತುಂಬಿ ಬಂದವು. ನಿತ್ಯಾಳ ಕೈಯನ್ನು ಗಟ್ಟಿಯಾಗಿ ಹಿಡಿಯಬೇಕು ಎಂದು ಅನಿಸಿದರೂ ಶಿಷ್ಟಾಚಾರವನ್ನು ಮೀರಲಾರದೆ ತೆಳುವಾಗಿ ಮುಗುಳ್ನಗುತ್ತಾ ಕೇಳಿದ- “...ನಿತ್ಯಾ ನೀನು ಚೆನ್ನಾಗಿರುವೆಯೇ ತಾನೇ...! ಮನೆಯಲ್ಲಿ ಎಲ್ಲರೂ ಆರಾಮವಾಗಿದ್ದಾರೆಯೇ...? ನಿನ್ನ ಪತಿ...?”

ನಿತ್ಯಾ ದೀರ್ಘವಾದ ನಿಟ್ಟುಸಿರೊಂದನ್ನು ಚೆಲ್ಲಿ, ರಾಜ್ವೀರ್ನನ್ನೇ ನೋಡುತ್ತಾ ಭಾರವಾದ ಧ್ವನಿಯಿಂದ ಹೇಳುತ್ತಾ ಹೋದಳು- “...ಮದುವೆಯಾದ ಒಂದೇ ವರ್ಷದಲ್ಲಿ ರೋಡ್ ಆಕ್ಸಿಡೆಂಟ್ ಒಂದರಲ್ಲಿ ಪತಿ ತೀರಿ ಹೋದರು. ಅತ್ತೆ ಮಾವ ನನ್ನನ್ನು ದರಿದ್ರ, ಅಪಶಕುನ ಹೆಂಗಸು ಎಂದೆಲ್ಲ ಹೀಯಾಳಿಸತೊಡಗಿದಾಗ, ನಿರಂತರ ಅವಮಾನ, ಹಿಂಸೆಯನ್ನು ತಾಳಲಾರದೆ ಹೋದಾಗ ಅಪ್ಪ ನನ್ನನ್ನು ಮನೆಗೆ ಕರೆತಂದರು. ಕ್ರಮೇಣ ಅಪ್ಪನ ಆರೋಗ್ಯ ಹದಗೆಡುತ್ತಾ ಹೋದಂತೆ ಅವರು ಹಾಸಿಗೆ ಹಿಡಿದರು. ವ್ಯಾಪಾರ-ವ್ಯವಹಾರ ಸಹೋದ್ಯೋಗಿಗಳ ಕುತಂತ್ರದಿಂದ ಕ್ಷೀಣಿಸತೊಡಗಿತು. ಸಾಲ ಹೆಚ್ಚಾಗಿ ಮನೆ ಕೂಡ ಹರಾಜು ಆಯಿತು. ಆ ಚಿಂತೆಯಲ್ಲಿಯೇ ಕೊರಗಿ ಅಪ್ಪ ಇಲ್ಲವಾದರು. ಬದುಕೇ ಕಾಣದಾದಾಗ ಚಿಕ್ಕಪ್ಪ ನನ್ನನ್ನು ಕರೆದುಕೊಂಡು ಹೋದರು. ಚಿಕ್ಕಪ್ಪನ ಒತ್ತಾಸೆಯಿಂದ ಉಳಿದಿದ್ದ ಶಿಕ್ಷಣವನ್ನು ಹೇಗೋ ಮುಗಿಸಿದೆ. ಇದಕ್ಕಿಂತ ಹಾಗೆ ಚಿಕ್ಕಪ್ಪನ ಮಕ್ಕಳು ಮನೆ ಆಸ್ತಿಯನ್ನು ಭಾಗ ಮಾಡಿಕೊಂಡಾಗ ನಾನು ಸ್ವತಂತ್ರ ಜೀವನ ನಡೆಸುವ ಉದ್ದೇಶದಿಂದ ಈ ನಗರಕ್ಕೆ ಬಂದು ಇಲ್ಲಿ ನೌಕರಿಗಾಗಿ ಅಲೆಯುತ್ತಿದ್ದೇನೆ...”

ಗಾಳಿಯ ಮೊರೆತ ಇನ್ನೂ ಜೋರಾಗಿತ್ತು. ಅಲೆಗಳು ಸಾಲು ಸಾಲಾಗಿ ಬಂದು ದಡಕ್ಕೆ ಅಪ್ಪಳಿಸಿ ತೆರಳುತ್ತಿದ್ದವು. ನಿತ್ಯಾ ಅವುಗಳನ್ನು ತದೇಕ ಚಿತ್ತದಿಂದ ನೋಡುತ್ತಿದ್ದಳು. “...ರಾಜ್ವೀರ್ನ ಹೃದಯದೊಳಗೆ ಪ್ರಶ್ನೆಗಳ ಸರಮಾಲೆಯೇ ಮೂಡಿತ್ತು. ಅಲ್ಲಾ., ಇಷ್ಟೆಲ್ಲ ನಿತ್ಯಾಳ ಜೀವನದಲ್ಲಿ ನಡೆದಿದ್ದರೂ ನಾನು ನಗರದಲ್ಲಿದ್ದೆ ಎಂದ ಮಾತ್ರಕ್ಕೆ ಯಾರೂ ನನ್ನ ಗಮನಕ್ಕೆ ಕಿಂಚಿತ್ತಾದರೂ ತರಲಿಲ್ಲವೇಕೆ? ಅಂದು ಮದುವೆಯ ದಿನ ನನ್ನೆದುರಿಗೆ ಒಂದು ಹನಿ ಕಣ್ಣೀರು ಹಾಕಿದ್ದ ನಿತ್ಯಾಳ ಮನದಾಳದಲ್ಲಿ ನಾನಿರಲಿಲ್ಲವೇ? ಅಂದರೆ ನನ್ನದು ಏಕಪಕ್ಷೀಯ ಪ್ರೀತಿಯೇ ಹಾಗಾದರೆ....?” ತನ್ನ ಒಳತೋಟಿಯ ಹೊಯ್ದಾಟವನ್ನು ಹತ್ತಿಕ್ಕಿ ಅವನು ಕೇಳಿದ- “...ನಿತ್ಯಾ ನೀನು ಅಷ್ಟು ಚಿಕ್ಕ ವಯಸ್ಸಿನಲ್ಲಿ ಮದುವೆಗೆ ಒಪ್ಪಿಗೆ ಸೂಚಿಸಿದ್ದಾದರೂ ಯಾಕೆ...?”

ಸಮುದ್ರವನ್ನೇ ನೋಡುತ್ತಿದ್ದ ನಿತ್ಯಾಳಿಗೆ ರಾಜ್ವೀರ್ನ ಈ ಪ್ರಶ್ನೆ ಅನಿರೀಕ್ಷಿತವಾಗಿತ್ತು. ಆತನನ್ನೇ ನೋಡುತ್ತಾ ಹೇಳಿದಳು- “...ನೇರವಾಗಿ ಹೇಳುತ್ತೇನೆ ಕೇಳು ರಾಜ್ವೀರ್... ನಾನು ನಿಜವಾಗಿಯೂ ನಿನ್ನನ್ನು ಪ್ರೀತಿಸುತ್ತಿದ್ದೆ. ನಿನ್ನಿಂದ ಸ್ಪಂದನೆ ದೊರೆಯದಿದ್ದಾಗ ನಾನು ನಿನಗೊಂದು ಪತ್ರವನ್ನು ಬರೆದಿದ್ದೆ. ಅದು ಹೇಗೋ ನನ್ನ ತಂದೆಗೆ ತಿಳಿದು, ‘ಈ ವಯಸ್ಸಿನಲ್ಲಿ ಇಂತಹ ಕೃತ್ಯಕ್ಕೆ ಮನಸ್ಸು ಮಾಡಿದರೆ ಕೂಡಲೇ ನಿನಗೆ ಮದುವೆಯ ತಯಾರಿ ಮಾಡುತ್ತೇನೆ. ನೀನು ಇನ್ನೂ ಮುಂದುವರೆದರೆ ರಾಜ್ವೀರ್ನ ಇಡೀ ಕುಟುಂಬವನ್ನೇ ಹೊಸಕಿ ಹಾಕಿಬಿಡುತ್ತೇನೆ...’ ಎಂದು ಗರ್ಜಿಸಿದರು. ಜೊತೆಗೆ ತರಾತುರಿಯಲ್ಲಿ ಮದುವೆಯ ನಿಶ್ಚಯವನ್ನೂ ಮಾಡಿದರು. ಅಲ್ಲಿಗೆ ನನ್ನ ನಿರೀಕ್ಷೆಯೆಲ್ಲಾ ಮಣ್ಣುಗೂಡಿತು.

ಇದನ್ನು ಕೇಳಿದ ರಾಜ್ವೀರ್ನ ಹೃದಯ ಒಂದು ಕ್ಷಣಕ್ಕೆ ನಡುಗಿ ಹೋಯಿತು. ತನ್ನದು ಏಕಮುಖ ಪ್ರೀತಿಯಾಗಿರಲಿಲ್ಲ ಎಂದು ಮನಸ್ಸು ಕೂಗಿ ಹೇಳಿತು. ಈ ಯಥಾರ್ಥವನ್ನು ಮನಗಾಣಲು ಇಲ್ಲೀತನಕ ಕಾಯಬೇಕಾಯಿತು. ಈ ಹೊಯ್ದಾಟದಲ್ಲಿಯೇ ಒಂದೆರಡು ಕ್ಷಣ ರಾಜ್ವೀರ್ ಕಣ್ಣುಮುಚ್ಚಿದ್ದ. “...ಸರಿ., ನಾನಿನ್ನು ಬರುವೆ ರಾಜ್ವೀರ್...” ಎಂದು ನಿತ್ಯಾ ಆ ಮರಳಿನಲ್ಲಿ ತನ್ನ ಹೆಜ್ಜೆಯನ್ನು ಮೂಡಿಸುತ್ತಾ ನಡೆಯತೊಡಗಿದಳು. ಕೂಡಲೇ ಎಚ್ಚೆತ್ತವನಂತೆ ರಾಜ್ವೀರ್ ಎದ್ದು ಆಕೆಯ ಹೆಜ್ಜೆ ಗುರುತುಗಳ ಮೇಲೆ ತನ್ನ ಹೆಜ್ಜೆಯನ್ನಿಡುತ್ತಾ ಕೂಗಿ ಹೇಳಿದ- “...ನಿತ್ಯಾ., ಇನ್ನು ನೀನು ನಿರೀಕ್ಷೆ ಮಾಡಬೇಕಾಗಿಲ್ಲ...”

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.