ಡಿಸೆಂಬರ್ ಮಾಸ, ಶೀತಗಾಳಿ ಬೀಸುತಿದೆ. ಎಲೆ ಕಳೆದುಕೊಂಡ ಮರಗಳು ಸುತ್ತಲೂ ಆವರಿಸಿಕೊಂಡಿವೆ. ತನು ನಡುಗುತಿದೆ. ಓಡಿ ಓಡಿ ಇಂತಹ ಚಳಿಯಲ್ಲೂ ಬೆವರು ಸುರಿಯುತಿದೆ. ಅದು ಓಡಿದ್ದಕಿಂತಲೂ ಹೆಚ್ಚಾಗಿ ಭಯದಿಂದ ಇಳಿದ ಬೆವರು ಎಂದು ಅರಿವಾಗುತ್ತಿದೆ. ಅದು ಅಮೆರಿಕಾದ ಪೆನ್ಸಿಲ್ವೇನಿಯ ರಾಜ್ಯದ ನ್ಯೂ ಹೋಪ್ ನಗರದ ಹೊರವಲಯ. ಪಕ್ಕದಲ್ಲೇ ಡೆಲವೆರ್ ನದಿ ಹರಿಯುತ್ತಿದೆ. ನದಿಯ ಮೇಲಿಂದ ಬೀಸುವ ಶೀತಗಾಳಿ ದೇಹವನ್ನು ಕೊರೆಯುತ್ತಿದೆ.

ಇಮಿಗ್ರೇಷನ್ ಮತ್ತು ಕಸ್ಟಮ್ ಆಫೀಸರ್ಗಳು ಅಕ್ರಮ ವಲಸೆಗಾರರನ್ನು ಹಿಡಿಯಲು ತಾನು ಕೆಲಸ ಮಾಡುತ್ತಿದ್ದ ಹೋಟೆಲ್ಲಿಗೆ ಬರುತ್ತಿದ್ದಾರೆ ಎಂದು ಯಾರೋ ಕೊಟ್ಟ ಸುಳಿವಿನಿಂದ, ಇದ್ದಕ್ಕಿದ್ದ ಹಾಗೆ ಹಿಂದಣ ಬಾಗಿಲಿನಿಂದ ಓಡಿ ಸಿಕ್ಕಿದ ಹಾದಿಯಲ್ಲಿ ನುಗ್ಗಿ, ಮರಗಳ ಸಂದಿಗಳಲ್ಲಿ ನುಸುಳಿ ರಸ್ತೆಗೆ ದೂರವಾಗಿ, ಒಂದು ಮರದ ಮರೆಯಲಿ ಸುಸ್ತಾಗಿ, ಉಸ್ಸೆಂದು ಕುಳಿತರೂ ಎದೆಯ ಡವ ಡವ ನಿಂತಿರಲಿಲ್ಲ. ಇದ್ದ ನಾಲ್ಕು ಅಕ್ರಮ ವಲಸೆಗಾರರು ಚೆಲ್ಲಾಪಿಲ್ಲಿಯಾಗಿ ಎತ್ತೆತ್ತಲೋ ಓಡಿ ಹೋಗಿದ್ದರು. ಕಣ್ಣಲ್ಲಿ ಭಯ, ಎದೆಯಲ್ಲಿ ಡವ ಡವ, ಮೈ ನಡುಗುತ್ತಿದ್ದರೂ ಮನಸು ನೆನಪಿನ ಆಳಕ್ಕೆ ಇಳಿಯಿತು.

"ಉದೋ ಉದೋ ಆಂಜನೇಯ, ಉಳ್ಳಾಡಬೇಡ ಆಂಜನೇಯ, ಬೀಳೋರ್ನೆತ್ತೋ ಆಂಜನೇಯ, ಅಡ್ಡಬೀಳುವೆ ಆಂಜನೇಯ", ಊರಜಾತ್ರೆಯಲಿ ಆಂಜನೇಯನ ಯಾತ್ರೆ. ಖುಷಿಯಿಂದ ಊರೆಲ್ಲಾ ಒಂದು ರೌಂಡ್ ಹಾಕಿಸಿ, ವರುಷಕ್ಕೆ ಒಂದು ಸಲ ಊರು ತೋರಿಸಿದರೆ, ಖುಷಿಯಾದ ಆಂಜನೇಯ ಗರ್ಭಗುಡೀಲಿ ಕುಂತು ಹೆಂಗೆ ಊರಿಗೆ ಏನೇನು ಕೊಡ್ಬೇಕು ಎಂದು ಒಂದು ಸಲ ಎರಡು ಸಲ ಮೂರು ಸಲ ಧ್ಯಾನಿಸಿ, ಮೂಲೆ ಮನೆ ರಂಗಕ್ಕನ ಮಗಳ ಮದುವೆ ಯಾರ ಜೊತೆ ಮಾಡಬೇಕು. ಬೇವಿನಮರದ ಭರಮಣ್ಣನ ಕಾಲುನೋವಿಗೆ ಔಷದಿ ಏನು. ಊರಿನ ಕೆರೆ ಕಟ್ಟೆ ಹೊಡಿದಲೆ ಎಂಗೆ ಕಾಪಾಡಬೇಕು. ಇಂಗೆ ಎಲ್ಲಾ ಯೋಚಿಸುತ್ತಾನೆ ಎನ್ನುವುದು ಜನಗಳ ಅಂಬೋಣ. ಗರ್ಭಗುಡೀಲಿ ಕುಂತ ಆಂಜನೇಯ ಊರ ಜನರ ಕಾಪಾಡುತ್ತಾನೆ ಎನ್ನುವ ಭರವಸೆ.

ಶ್ರೀನಿವಾಸಪ್ಪನ ಎರಡನೇ ಮಗ ಮೂರನೇ ತರಗತಿಯಲ್ಲಿ ಓದುತ್ತಿರುವ ಸಂಜೀವ , ಮೊಬೈಲಲ್ಲಿ ಅಮೆರಿಕದ ಜನರ ಮೈಯ ನೋಡಿ, ಎಷ್ಟು ಬೆಳ್ಗವರೇ ಎಂದು ತನ್ನ ಮೈಯ ಒಂದು ಸಲ, ಅವರ ಮೈಯ ಒಂದು ಸಲ ನೋಡಿಕೊಂಡು, ಆಂಜನೇಯ ಅನ್ಯಾಯ ಮಾಡಿಬಿಟ್ಟ ಎಂದು ನಿಟ್ಟಿಸಿರು ಬಿಟ್ಟು, ತಾನು ಅಮೆರಿಕಗೆ ಹೋದ್ರೆ ಅಂಗೇ ಬೆಳ್ಳಗೆ ಆಗಿತೀನಿ, ಆಂಜನೇಯ ಒಂದು ಸಲ ಅಮೆರಿಕಗೆ ಕಳಿಸಿಕೊಡು, ಬೆಳ್ಳಗಾಗಿ ಅಂಗೇ ವಾಪಸ್ ಬಂದುಬಿಡ್ತೀನಿ ಎಂದು ಮನಸಿನಲ್ಲಿ ಆಂಜನೇಯನಿಗೆ ಕೈ ಮುಗಿದ.

ಹೋದ್ಸಲ ಎಲೆಕ್ಷನ್ ಬಂದಾಗ ಬಂದಿದ್ದ ಈಗಿನ ಎಂ.ಎಲ್.ಎ ರಾಜೀವಪ್ಪ ಏನು ಹೇಳಿದ್ರು, "ಭಾರತ ನನ್ನ ತಾಯಿ, ಈ ದೇಶಕ್ಕಾಗಿ ಪ್ರಾಣ ಬಿಡ್ತೇನೆ. ಎಲ್ಲರಿಗೂ ದೇಶಭಕ್ತಿ ಇರ್ಬೇಕು, ಯಾರೂ ಅಮೆರಿಕ, ಆಸ್ಟ್ರೇಲಿಯಾ, ಇಂಗ್ಲೆಂಡ್ ಅಂತೆಲ್ಲಾ ಹೋಗಬಾರದು. ದೇಶನ ಪ್ರೀತಿಸಬೇಕು. ಎಂದೆಂದೂ ಇಲ್ಲೇ ಇರಬೇಕು. ನಿಮ್ಮ ಮಕ್ಕಳಿಗೂ ಇದೇ ಹೇಳಬೇಕು, ದೇಶವೆಂದರೆ ದೇಹವಲ್ಲ, ಅದು ಆತ್ಮ" ಅಂತ ಅದೂ ಇದೂ ಹೇಳಿಹೋಗಿದ್ರು. ನಿಮಗೆ ದೇಶಭಕ್ತಿ ಇದ್ದರೆ ನನಗೇ ಓಟು ಹಾಕಿ ಎಂದು ಹೇಳಿ ಗೆದ್ದು ಎಂ. ಎಲ್. ಎ ಆದ್ರು. ಎಂ. ಎಲ್. ಎ ಆದ ಆರುತಿಂಗಳಿಗೆ ರಾಜೀವಪ್ಪನ ಮಗ ಅಮೆರಿಕಗೆ ಹಾರಿಹೋಗಿದ್ದ, ಊರಿಗೆ ಬಂದಾಗ, ಎರಡಕ್ಷರ ಓದಿದ ಜನ ಮಗ ಅಮೆರಿಕಗೆ ಹೋದ್ನನಂತೆ ಅಭಿನಂದೆನಗಳು ಅಂದಿದ್ದರು. ಅವರ ಮಾತಿನಲ್ಲಿ ವ್ಯಂಗ್ಯಏನಾದರು ಇದೆಯೇ ಎಂದು ಒಂದು ಕ್ಷಣ ಯೋಚಿಸಿದ ರಾಜೀವಪ್ಪ "ಹೆಹೆ ಹೆಹೆ ಅವನು ತುಂಬಾ ಕಷ್ಟಪಟ್ಟು ಓದಿದ್ದ. ಅಮೆರಿಕಗೆ ಹೋಗ್ಬೇಕು ಅಂತ ಎರಡು ವರ್ಷದಿಂದ ಟ್ರೈ ಮಾಡ್ತಾ ಇದ್ದ. ದೈವ ಬಲ ಕೂಡಿಬಂತು, ನಿಮಗೆ ಗೊತ್ತಲ್ಲ, ಈಗಿನ ಮಕ್ಲು ಅಪ್ಪ ಅಮ್ಮನ ಮಾತು ಎಲ್ಲಿ ಕೇಳ್ತಾರೆ. ಆದರೆ ಅವನಿಗೆ ನಮ್ಮ ದೇಶ ಎಂದರೆ ಪ್ರಾಣ. ಹೆಹೆ ಹೆಹೆ" ಎಂದು ಪೆಕರು ಪೆಕರಾಗಿ ನಕ್ಕಿದ್ದರು. ಅಮೆರಿಕ ಸುಲಭವಾಗಿ ವೀಸಾ ಕೊಟ್ಟರೆ ಎಷ್ಟು ದೇಶಭಕ್ತರು ದೇಶ ಬಿಡ್ತಾರೋ ಎಂದುಕೊಂಡರು ಮನಸ್ಸಿನಲ್ಲಿ.

"ಅಂದರೆ ನೀವು ಹೋಗ್ತೀರಾ"

"ನೋಡಿ ದೊಡ್ಡವರು ಏನ್ ಹೇಳಿದಾರೆ, ದೇಶ ನೋಡ್ಬೇಕು ಕೋಶ ಒದ್ಬೇಕು ಅಂತ. ಮಗ ಹೇಳಿದಾನೆ ನಿಮ್ಮನ್ನು ಅಮೆರಿಕ ಪ್ರವಾಸ ಮಾಡ್ಸೆತೇನೆ ಅಂತ. ಹೆಹೆ ನಾನೇನು ಅಲ್ಲೇ ಇರ್ತೇನೆಯೇ, ನೋಡಿ ಬರೋದು ಅಷ್ಟೇ" ಅಂದರು.

ಅಲ್ಲೇ ಅವರ ಮಾತು ಕೇಳುತ್ತಾ ಕುಳಿತಿದ್ದ ಸಂಜೀವ, "ನನ್ನನ್ನು ಅಮೆರಿಕಗೆ ಕರಕೊಂಡು ಹೋಗ್ತೀರಾ" ಎಂದ, ಎಲ್ಲರೂ ಗೊಳ್ಳನೆ ನಕ್ಕರು.

ಎಲ್ಲಾ ಜನರ ಕೈಗೆ ಮೊಬೈಲ್ ಬಂದು, ಜನ ಭಾರಿ ಬ್ಯುಸಿ ಆಗಿಹೋಗಿ, ದೇಶ ವಿದೇಶದ ವಿಷ್ಯ ಎಲ್ಲಾ ಕ್ಷಣಮಾತ್ರದಲ್ಲೇ ಗೊತ್ತಾಗಿ, ತಮ್ಮ ಜ್ಞಾನ ಹೆಚ್ಚಿಸಿಕೊಳ್ಳೋ ಬರದಲ್ಲಿ ವಾಟ್ಸಪ್ಪ್, ಫೇಸ್ಬುಕ್ ರೀಲ್ಸ್ನಲ್ಲಿ ಬರೋದೆಲ್ಲ ನಿಜ ಎಂದು ನಂಬಿ ಎಲ್ಲರಿಗೂ ಫಾರ್ವರ್ಡ್ ಮಾಡುತ್ತಾ, ತಾವು ಎಷ್ಟು ದೇಶಸೇವೆ ಮಾಡ್ತಾ ಇದೀವಿ ಅಂತ ತಮ್ಮ ಬೆನ್ನ ತಾವೇ ತಟ್ಟಿಕೊಂಡು ಮಾತಾಡ್ಕೋತ ಕುಂತಿದ್ದರು.

ಆಂಜನೇಯ ಇಡೀ ದಿವಸ ಊರನೋಡಿ ಅಂಗೇ ಕುಳಿತಿದ್ದ. ದೇವರ ಪೂಜಾರಪ್ಪ ಗರ್ಭಗುಡಿಯ ಬಾಗಿಲಿಗೆ ಬೀಗ ಹಾಕಿ ಮನೆಗೆ ಹೋಗಿದ್ದ. ಮುಂದಲ ಬಾಗಿಲು ರಾತ್ರಿ ಒಬ್ಬಂತ್ತು ಗಂಟೆ ಮ್ಯಾಲೆ ಹಾಕತಾಯಿದ್ದ, ಪೂಜಾರಪ್ಪ. ಸಂಜೀವ ಯಾರೂ ಇಲ್ಲದ್ದನ್ನು ನೋಡಿ ಗುಡಿಯ ಒಳಗೆ ಹೋದ. ಮುಚ್ಚಿದ ಬಾಗಿಲ ಗರ್ಭಗುಡಿಯ ಮುಂದೆ ಕುಳಿತ.

"ಬೊ ಅನ್ಯಾಯ ಆಗಿದೆ ಸ್ವಾಮಿ. ನಮ್ಮನ್ನೆಲ್ಲಾ ಹೀಗೆ ಕರ್ರಗೆ ಮಾಡಿ ಆ ಅಮೆರಿಕದ ಜನಾನ ಬೆಳ್ಳಿಗೆ ಮಾಡಿದ್ದಿಯಾ, ಅಮ್ಮ ಎಷ್ಟು ತಿಕ್ಕಿ ತಿಕ್ಕಿ ಸ್ನಾನ ಮಾಡಿಸಿದರೂ ಬೆಳ್ಳಗೆ ಆಯ್ತಾ ಇಲ್ಲ. ಯಾವೋದು ಕೆಲ ದೇಶ ಬಿಟ್ಟರೆ ಎಲ್ಲಕಡೆ ಜನ ಬೆಳ್ಳಗೆ ಇರ್ತಾರಂತೆ, ಚೀನಾದೋರು ಬೆಳ್ಳಗೆ ಇದಾರಂತೆ, ಒಮ್ಮೆ ನನ್ನನು ಆ ಬಿಳಿ ದೇಶಕ್ಕೆ ಕಲಿಸಿಬಿಡು ಸ್ವಾಮೀ. ನಾನೂ ಬೆಳ್ಳಗಾಗ್ತಿನಿ, ನಮ್ಮ ಊರಿನ ಎಲ್ಲರೂ ಹೋಗ್ಬಂದರೆ ಎಲ್ಲರೂ ಬೆಳ್ಳಗಾಗ್ತಿವಿ ಆಲ್ವಾ. ಸ್ವಲ್ಪ ಹೊತ್ತು ಸುಮ್ಮನಿದ್ದು ಏನೋ ಹೊಳೆದವನಂತೆ "ಅಲ್ಲ ರಾಮ ಮಾತ್ರ ಈ ಕಡೆ ಬಂದಿದ್ನನಂತೆ. ಕೃಷ್ಣ, ಹಾಗೆ ಬೇರೆ ಬೇರೆ ಅವತಾರತಾಳಿದ ಯಾವ ದೇವರೂ ನಮ್ಮ ಊರಕಡೆ ಯಾಕೆ ಬಂದಿಲ್ಲ. ಆ ರಾವಣ ಸೀತಾಮಾತೆನಾ ಮೋಸಮಾಡಿ ಕರ್ಕೊಂಡು ಹೋಗ್ದೆ ಇದ್ದರೆ ರಾಮ ನಮ್ಮ ಊರಿಗೆ ಯಾವೊತ್ತಾದರೂ ಬರುತಿದ್ನಾ, ಆಗ ನೀನು ನಮಗೆ ಗೊತ್ತಾಗ್ತಾ ಇರಲಿಲ್ಲ ಅಲ್ವ, ಹಂಗಾದರೆ ಆಂಜನೇಯನ ಗುಡಿ ಇಲ್ಲದ ಊರು ಹೆಂಗೆ ಇರುತಿತ್ತು. ಎಲ್ಲಾ ಹೀಗೇ ನಡೀಬೇಕು ಅಂತ ಮೊದಲೇ ದೇವರು ಬರೆದಿದ್ನಾ, ಇರಬಹುದು. ನಿನ್ನ ಶಕ್ತಿ ಹೇಗೋ ಎಲ್ಲರಿಗೂ ಗೊತ್ತಾಗ್ತಾ ಇರತಾಯಿತ್ತು. ನಾನೇನು ನಿನ್ನ ಪ್ರಶ್ನೆ ಮಾಡೋ ಅಷ್ಟು ಬುದ್ದಿವಂತನೇ, ನಿನ್ನ ಹತ್ರ ಮಾತಾಡೋದು ಖುಷಿ ಅಷ್ಟೇ" ಎಂದ ಸಂಜೀವ ಪೂಜಾರಪ್ಪ ಬರೋದು ನೋಡಿ ಎದ್ದು ಹೊರಬಂದ.

ಸಂಜೀವ ಊರಿನಲ್ಲಿ ಸ್ವಲ್ಪ ಓದಿದ ಜನರನ್ನು ಈ ಪ್ರಶ್ನೆ ಕೇಳಲಾರಂಭಿಸಿದ. ಯಾಕೆ ದೇವರ ಹತ್ತು ಅವತಾರಗಳೂ ಉತ್ತರ ಭಾರತದಲ್ಲೇ ಆಗಿವೆ? ನಮ್ಮ ಕಡೆ ಯಾಕೆ ಆಗ್ನಿಲ್ಲ? ಜನ ತಮಗೆ ತೋಚಿದ ಉತ್ತರ ಕೊಟ್ಟರು. ಕೆಲವರಂತೋ ಸಂಜೀವನ ಅಪ್ಪ ಶ್ರೀನಿವಾಸಪ್ಪನ ಮನೆಗೆ ಬಂದರು. "ಏನ್, ಶ್ರೀನಿವಾಸಪ್ಪ ನೀನು ನಿನ್ನ ಮಕ್ಕಳಿಗೆ ಇದೇನಾ ಹೇಳ್ಕೊಡೋದು? ಉತ್ತರ ಭಾರತ ದಕ್ಷಿಣ ಭಾರತ ಅಂತ ಬೇರೆ ಮಾಡಿ ಮಾತಾಡ್ತಾ ಅವ್ನೆ. ಇದು ದೇಶ ದ್ರೋಹ ಗೊತ್ತಾ?, ಅವರತಾರಗಳು ಇಡೀ ಭಾರತಕ್ಕೆ ಒಂದೇ ಅಲ್ವಾ" ಎಂದಿದ್ದರು. ಅದಕ್ಕೆ ಶ್ರೀನಿವಾಸಪ್ಪ "ಅವನಿಗೆ ಏನು ಗೊತ್ತಾಗುತ್ತೆ ಇನ್ನೂ ಚಿಕ್ಕೋನು, ಅವನಿಗೆ ಕುತೂಹಲಕ್ಕೆ ಆಗೇ ಮಾತಾಡ್ತಾ ಅವ್ನೆ, ನಾನೇ ಹೇಳಿತೀನಿ ಬಿಡಿ" ಎಂದಿದ್ದ.

ಸಂಜೀವ ತನ್ನ ಕುತೂಹಲ ಬಿಡಲಿಲ್ಲ. ಶಾಲೆಯಲ್ಲಿ ಮಾಸ್ತರನ್ನು ಕೇಳಿದ ಅವರು "ಆಗೆಲ್ಲಾ ಉತ್ತರ ಭಾರತ, ದಕ್ಷಿಣ ಭಾರತ ಅಂತ ಇರಲಿಲ್ಲ, ಅವತಾರಗಳು ಬರೀ ನಮ್ಮ ದೇಶಕ್ಕೆ ಅಂದ್ಕೋಬಾರದು ಅವು ಇಡೀ ಪ್ರಪಂಚಕ್ಕೆ. ಎಲ್ಲರನ್ನು ಕಾಪಾಡೋದಕ್ಕೆ" ಎಂದು ಹೇಳಿ ಸಮಾಧಾನ ಮಾಡಲು ಯತ್ನಿಸಿದ್ದರು. ಸಂಜೀವನಿಗೆ ಸಮಾಧಾನ ಆಗಲಿಲ್ಲ. ಮತ್ತೆ ಎಲ್ಲರನ್ನು ಪ್ರಶ್ನೆ ಮಾಡುತ್ತಲೇ ಇದ್ದ.

ಒಂದು ದಿನಸಂಜೆ ಇದ್ದಕಿದಹಾಗೆ ಪೊಲೀಸ್ ವ್ಯಾನ್ ಬಂದು ತಮ್ಮ ಮನೆಯ ಮುಂದೆ ನಿಂತಾಗ, ಶ್ರೀನಿವಾಸಪ್ಪನ ಎದೆ ನಡುಗಿತು. ವ್ಯಾನಿನಿಂದ ಇಳಿದ ಇನ್ಸ್ಪೆಕ್ಟರ್ ರಾಮಣ್ಣ, ತನ್ನ ಪ್ಯಾಂಟನ್ನು ಮೇಲೆಳೆದು ಸರಿ ಮಾಡಿಕೊಂಡು ಮನೆ ಮುಂದೆ ಬಂದು" ಏ ಯಾರ್ರ್ರಿ ಒಳಗೆ, ಹೊರಗೆ ಬನ್ನಿ" ಎಂದರು. ಶ್ರೀನಿವಾಸಪ್ಪ ಕೈಮುಗಿದುಕೊಂಡು ಹೊರಗೆ ಬಂದು "ಏನಾಯಿತು ಸರ್" ಎಂದ. "ಏನ್ರಿ ದೇಶನಾ ಒಡೆಯೋಕೆ ನೋಡ್ತೀರಾ, ನಿಮ್ಮ ಮೇಲೆ ಕಂಪ್ಲೇಂಟ್ ಬಂದಿದೆ. ಸ್ಟೇಷನ್ಗೆ ಕರಕೊಂಡು ಹೋಗಿ, ಸ್ವಲ್ಪ ಟ್ರೀಟ್ಮೆಂಟ್ ಕೊಟ್ರೆ ಸರಿ ಹೋಗ್ತೀರ" ಎಂದರು. ಶ್ರೀನಿವಾಸಪ್ಪ ನಡುಗುತ್ತಾ "ನಾನೇನು ಅಂತದ್ದು ಮಾಡಲಿಲ್ಲ" ಅಂದ. "ನೀವು ಮಾಡಲಿಲ್ಲ, ನಿಮ್ಮ ಮಗನಿಗೆ ಹೇಳ್ಕೊಡ್ತಿದೀರ. ಅವನು ಎಲ್ಲಾ ಕಡೆ ಅದನ್ನೇ ಹೇಳಿಕೊಂಡು ತಿರುಗ್ತಾ ಇದಾನೆ. ಕರೀರಿ ನಿಮ್ಮ ಮಗನ". ಇಷ್ಟರಲ್ಲಿ ಊರಿನ ಜನಾನೆಲ್ಲಾ ಸೇರಿದರು.

ಅಲ್ಲೇ ನಿಂತಿದ್ದ ಸಂಜೀವ " ನಮ್ಮ ಅಪ್ಪ ಏನು ಹೇಳಿಕೊಟ್ಟಿಲ್ಲ, ನಂಗೇ ಡೌಟು ಬಂತು". ಕುಂಡಿಮೇಲೆ ಬಿಡ್ಬೇಕಾ ಇಷ್ಟೇ ಇಷ್ಟು ಇದೀಯ, ನಿಂಗ್ಯಾಕೋ ಇಲ್ಲದ ಉಸಾಬರಿ, ಸುಮ್ಮನೆ ಸ್ಕೂಲ್ಗೆ ಹೋಗಿ ಓದೋದಲ್ವಾ"

" ಇದು ಕಲಿಯೋದೆ ಅಲ್ವಾ"

ಅಷ್ಟರಲ್ಲಿ ಊರಿನಜನ ಅಲ್ಲಿ ಸೇರಿ ಜೋರಾಗಿ ಮಾತನಾಡಿಕೊಳ್ಳುತ್ತ, ಗಲಾಟೆ ಎಬ್ಬಿಸಿದರು. ಅನೇಕ ಪ್ರಶ್ನೆಗಳನ್ನು ಸಂಜೀವನಿಗೆ ಕೇಳಲಾರಂಭಿಸದರು. ಕೆಲವರು ಪರ,ಕೆಲವರು ವಿರೋಧ.

ಇನ್ಸ್ಪೆಕ್ಟರ್ ರಾಮಣ್ಣನಿಗೆ ರೇಗಿತು, " ಏ ವಿಚಾರಿಸೋಕೆ ನಾನು ಇಲ್ವಾ, ನೀವೆಲ್ಲಾ ಸುಮ್ಮನಿರಿ" , ಈ ರಂಗಣ್ಣ ಎಲ್ಲರನ್ನು ಇಲ್ಲಿಂದ ಕಳಿಸಿಬಿಡಿ" ಎಂದರು.

ಎಲ್ಲರೂ ಹೋದಮೇಲೆ ರಾಮಣ್ಣ, ಶ್ರೀನಿವಾಸಪ್ಪನ ಮನೆ ಜಗುಲಿ ಮೇಲೆ ಕುಳಿತು, ಶ್ರೀನಿವಾಸಪ್ಪ, ಸಂಜೀವನನ್ನು ಕುಳಿತುಕೊಳ್ಳಲು ಹೇಳಿ,

" ನೋಡಿ ಈ ಉಸಾಬರಿ ಎಲ್ಲಾ ಯಾಕೆ ನಿಮಗೆ? ಈಗ ಎಲ್ಲಕ್ಕೂ ಕೇಸ್ ಮಾಡಬೋದು. ಸುಮ್ಮನೆ ಧರ್ಮ ವಿರೋಧಿ, ದೇಶ ವಿರೋಧಿ ಅಂತೆಲ್ಲಾ ಯಾಕೆ ಬೇಕು? ಹಳ್ಳಿಯಲ್ಲಿ ಇರಬೇಕಲ್ಲ?.

" ಸರಿ ಸಾರ್, ಮಗನಿಗೆ ಹೇಳ್ತೇವೆ, ಹುಡುಗು ಬುದ್ದಿ"

" ಸರಿ ಇನ್ಮೇಲೆ ಹೇಗೆಲ್ಲಾ ಆಗಬಾರದು, ನಾನು ಕೇಸ್ ವಾಪಸ್ ತಗೊಳ್ಳೇಕೆ ಹೇಳಿತೀನಿ" ಎಂದು ಎದ್ದು ಹೋಗಿ ಕಾರಿನಲ್ಲಿ ಕುಳಿತರು.

ಪೇದೆ ರಂಗಣ್ಣ ಇನ್ನೂ ಅಲ್ಲೇ ನಿಂತು, ಶ್ರೀನಿವಾಸಪ್ಪನ ಹತ್ತಿರ ಬಂದು " ಸಾಹೇಬ್ರು ಸಹಾಯ ಮಾಡಿದ್ದಾರೆ, ಅವರಿಗೂ ಸಹಾಯ ಮಾಡಬೋದಲ್ಲ"

"ಬಡವ ಹಣ ಇಲ್ಲ"

" ಬೆಳೆ ಏನು ಬಂತು ಈ ಸಲ"

"ಕಡ್ಲೆಕಾಯಿ"

"ಒಂದು ಎರಡು ಮೂಟೆ ಜೀಪಲ್ಲಿ ಹಾಕು" ಎಂದ ರಂಗಣ್ಣ

ಸಂಜೀವನಿಗೆ ಗೊಂದಲವಾದರೂ, ಇದೆಲ್ಲಾ ಅರ್ಥವಾಗಲಿಲ್ಲ. ಪೊಲೀಸ್ ಬಂದಿದ್ದಾರೆ ಅಂದರೆ ಮನೆಗೆ ತೊಂದರೆ ಬಂದ ಹಾಗೆ ಎಂದುಕೊಂಡು ಊರ ಜನರ ಹತ್ತಿರ ಮಾತನಾಡುವುದನ್ನು ನಿಲ್ಲಿಸಿಬಿಟ್ಟ.

ಮಾತು ನಿಲ್ಲಿಸಿದರೂ ಅವನಿಗೆ ಅಮೆರಿಕಗೆ ಹೋಗೋ ವಿಚಾರ ಮನದಲ್ಲಿ ಯೋಚಿಸುವುದನ್ನು ನಿಲ್ಲಿಸಲು ಆಗಲಿಲ್ಲ. ಅಪ್ಪ"ಈಗೆಲ್ಲಾ ಯೋಚಿಸಬೇಡ, ನೀನು ಚೆನ್ನಾಗಿ ಓದಿ, ಅಮೆರಿಕಗೆ ಹೋಗಬೋದು, ಈಗ ಮೊದಲು ಚನ್ನಾಗಿ ಓದು, ದೊಡ್ಡವನಾದ ಮೇಲೆ ನೋಡೋಣ" ಎಂದು ಮಗನನ್ನು ಸಮಾಧಾನ ಮಾಡಿದರು.

ಸಂಜೀವ ಹತ್ತನೇ ತರಗತಿಗೆ ಬರಲು ಬಹಳ ಪ್ರಾಯಾಸ ಪಟ್ಟ. ಹೇಗೋ ಪಾಸಾಗಿ ಪಕ್ಕದ ಸಣ್ಣ ಪಟ್ಟಣದ ಕಾಲೇಜಿಗೆ ಸೇರಿಕೊಂಡ. ಅಣ್ಣ ಹತ್ತರಲ್ಲಿ ನಾಪಾಸಾಗಿ ಅಪ್ಪನ ಜೊತೆ ವ್ಯವಸಾಯ ಮಾಡುತ್ತಿದ್ದ. ತಂಗಿ ಎಂಟನೇ ತರಗತಿಯಲ್ಲಿ ಓದುತ್ತಿದ್ದಳು. ಪಿ.ಯು.ಸಿ ಯಲ್ಲಿ ಆರ್ಟ್ಸ್ ಸಿಕ್ಕಿದ್ದರಿಂದ, ತಾನು ಅಮೆರಿಕಗೆ ಹೋಗಲು ಸಾಧ್ಯವಿಲ್ಲ ಅನಿಸತೊಡಗಿತ್ತು. ಅಷ್ಟರಲ್ಲಿ ಅಮೆರಿಕದಲ್ಲಿ ಬೇಕಾದಷ್ಟು ಕಪ್ಪು ಜನರಿದ್ದಾರೆ ಎಂದು ತಿಳಿದು, ತಾನು ಅಮೆರಿಕಗೆ ಹೋದರೂ ಬೆಳ್ಳಗಾಗಲು ಸಾಧ್ಯವಿಲ್ಲ ಅನ್ನುವುದನ್ನು ಅರಿತುಕೊಂಡಿದ್ದ. ಆಫ್ರಿಕಾದ ಅನೇಕ ದೇಶಗಳಲ್ಲಿ ನಮಗಿಂತ ಕಪ್ಪು ಜನರಿದ್ದಾರೆ ಎಂದು ತಿಳಿದುಕೊಂಡು ಸ್ವಲ್ಪ ಸಮಾಧಾನವೂ ಆಗಿತ್ತು. ಜನರನ್ನು ಕಪ್ಪು ಬಿಳಿ ಮಾಡುವುದರಲ್ಲಿ ಆಂಜನೇಯನ ಕೈವಾಡ ಏನೂ ಇಲ್ಲವೇನೋ ಅನಿಸಿತ್ತುಕೂಡ.

ಆದರೆ, ಬಿ ಎ ಮಾಡಿಯಾದ ಮೇಲೆ ಅನೇಕ ವಿಷಯಗಳನ್ನು ತಿಳಿಯುತ್ತಾ ತಿಳಿಯುತ್ತಾ ಅಮೆರಿಕಗೆ ಹೋದರೆ ಸ್ವಲ್ಪ ಹಣ ಮಾಡಿ ಅಪ್ಪನಿಗೆ ಸಹಾಯ ಮಾಡಬಹದು. ತಂಗಿಯನ್ನು ಒಳ್ಳೆಯಕ ಡೆ ಕೊಟ್ಟು ಮದುವೆ ಮಾಡಬಹದು. ಮನೆ ಕಟ್ಟಿಸಬಹದು ಎಂದುಕೊಂಡ. ಅಮೆರಿಕಗೆ ಹೋಗಲು ಮಾರ್ಗವನ್ನು ಎಲ್ಲಕಡೆ ವಿಚಾರಿಸತೊಡಗಿದ. ಎಲ್ಲ ಕಡೆ ವಿಚಾರಿಸಿದಾಗ ತಿಳಿದಿದ್ದು ಬಾಂಬೆಯಲ್ಲಿ ಒಂದು ಕಡೆ ಹಣ ತೆಗೆದುಕೊಂಡು ಅಮೆರಿಕಗೆ ಹೋಗಲು ಏರ್ಪಾಡು ಮಾಡುತ್ತಾರೆ ಎಂದು. ಹೇಗೋ ಮಾಡಿ ಅದರ ವಿಳಾಸ ಪಡೆದು, ಸ್ನೇಹಿತನ ಊರಿಗೆ ಹೋಗುತ್ತಿದ್ದೇನೆ ಎಂದು ಮನೆಯಲ್ಲಿ ಹೇಳಿ, ಆಂಜನೇಯನ ಆಶೀರ್ವಾದ ಪಡೆದು, ಬೆಂಗಳೂರಿನಿಂದ ಬಾಂಬೆಯ ರೈಲು ಹತ್ತಿದ್ದ.

ವಿಳಾಸದಲ್ಲಿ ಇದ್ದ ಜಾಗಕ್ಕೆ ಬಂದಾಗ ತಿಳಿದಿದ್ದು ಇಷ್ಟು:

ಬಾಂಬೆಯ ಈ ಕಂಪನಿಗೆ ಮೂವತ್ತು ಲಕ್ಷ ಕೊಟ್ಟರೆ, ಏನಾದರೂ ಮಾಡಿ ಅಮೆರಿಕಗೆ ನುಸುಳಲು ಸಹಾಯ ಮಾಡುತ್ತಾರೆ. ಮೊದಲು ಮೆಕ್ಸಿಕೊಗೆ ವೀಸಾ ಮಾಡಿಸಿ ಅಲ್ಲಿಂದ, ಅಮೆರಿಕದ ಗಡಿಗೆ ತಂದು, ಅಮೆರಿಕದ ಒಳಗೆ ಹೋಗಲು ಏರ್ಪಾಡು ಮಾಡುತ್ತಾರೆ ಎಂದರು. ಅಲ್ಲಿನ ಗಡಿಕಾಯುವ ಸೈನ್ಯ ಹಿಡಿದರೆ ಎಂದರೆ, ಅಲ್ಲಿ ಅವರಿಗೆ ಬೇಕಾದನ್ನು ಕೊಟ್ಟು ಅಡ್ಜಸ್ಟ್ ಮಾಡಿಕೊಂಡಿದ್ದೇವೆ ಎಂದರು. ಒಂದು ಸಲ ನೀನು ಅಮೆರಿಕದ ಒಳಗೆ ಕಾಲಿಟ್ಟರೆ ನಿನ್ನನು ತಡೆಯಲು ಯಾರಿಗೂ ಸಾಧ್ಯವಿಲ್ಲ. ಅಲ್ಲಿ ನಿನ್ನ ಕೆಲಸಕ್ಕೂ ಏರ್ಪಾಡು ಮಾಡುತ್ತೇವೆ. ನೀನು ಹಣ ಗಳಿಸಲು ಶುರು ಮಾಡಿದ ಮೇಲೆ, ಅದನ್ನು ನಿಮ್ಮ ಅಪ್ಪ ಅಮ್ಮನಿಗೆ ತಲುಪಿಸುವ ಏರ್ಪಾಡು ನಾವೂ ಮಾಡುತ್ತೇವೆ. ಗೊತ್ತಲ್ಲ, ಅಮೆರಿಕದ ಒಂದು ಡಾಲರ್ ನಮ್ಮಲ್ಲಿ ಎಂಬತ್ತು ರೂಪಾಯಿ. ನಿಮ್ಮ ಮನೆಯವರೆಲ್ಲಾ ಜೀವನ ಪರ್ಯಂತ ಕುಳಿತು ತಿನ್ನಬಹುದು. ಎರಡು ವರ್ಷದಲ್ಲಿ ನಿನ್ನ ಸಾಲಾನೂ ತೀರಿಸಬಹದು ಎಂದರು.

ಸಂಜೀವನಲ್ಲಿ ಚಿಗುರಿದ್ದ ಆಸೆ ಹೆಮ್ಮರವಾಗಿ ಬೆಳೆಯಿತು. ಊರಿಗೆ ಬಂದು ಅಪ್ಪ, ಅಮ್ಮ, ಅಣ್ಣ, ತಂಗಿಯನ್ನು ಕೂರಿಸಿಕೊಂಡು ವಿಷಯ ತಿಳಿಸಿ ಅವರಿಗೂ ಆಸೆ ಹುಟ್ಟಿಸಿದ. ಆದರೆ ಅಷ್ಟು ಹಣ ಎಲ್ಲಿಂದ ತರವುದು ಎಂದು ಶ್ರೀನಿವಾಸಪ್ಪನಿಗೆ ತಿಳಿಯಲಿಲ್ಲ. ಸಂಜೀವ ಜಮೀನ ಮೇಲೆ ಸಾಲ ಮಾಡೋಣ. ಹೇಗೋ ಎರಡು ವರ್ಷಗಳಲ್ಲಿ ಸಾಲ ಸುಲಭವಾಗಿ ತೀರಿಸಲು ಸಾಧ್ಯ ಎಂದು ಸಮಾಧಾನ ಮಾಡಿದ. ಅಪ್ಪಿ ತಪ್ಪಿ ಅಕ್ರಮವಾಗಿ ಅಮೆರಿಕಗೆ ನುಸುಳುವ ಬಗ್ಗೆ ಹೇಳಲಿಲ್ಲ.

ಬಾಂಬೆಯ ಕಂಪನಿಗೆ ಹಣ ಕಟ್ಟಿದ ಮೇಲೆ ಎರಡು ತಿಂಗಳಲ್ಲಿ ಪಾಸ್ಪೋರ್ಟ್ ಬಂತು. ಪಾಸ್ ಪೋರ್ಟ್ ಅನ್ನು ಮನೆಯಲ್ಲಿ ಎಲ್ಲರೂ ಮುಟ್ಟಿ ಮುಟ್ಟಿ ನೋಡಿ ಖುಷಿ ಪಟ್ಟರು. ಅದಾದ ಎರಡು ತಿಂಗಳಾದಮೇಲೆ ಮೆಕ್ಸಿಕೊದ ವೀಸಾ ಬಂದು, ಸಂಜೀವ ವಿಮಾನ ಹತ್ತುವ ಸಮಯ ಬಂದಿತು. ಊರಿನಲ್ಲಿ ಎಲ್ಲರಿಗೂ ಮಗ ಅಮೆರಿಕಗೆ ಹೊರಟಿದ್ದಾನೆ ಎಂದು ಹೇಳಿ, ಆಂಜನೇಯನ ದೇವಸ್ಥಾನದಲ್ಲಿ ಎಲೆ ಪೂಜೆ ಮಾಡಿಸಿ ಊರಿಗೆಲ್ಲಾ ಊಟ ಹಾಕಿಸಿ ಶ್ರೀನಿವಾಸಪ್ಪ ಸಂಭ್ರಮ ಪಟ್ಟ. ಹೊರಡುವ ಹಿಂದಣ ದಿನ ಸಂಜೀವ ಆಂಜನೇಯನ ಗರ್ಭ ಗುಡಿಯ ಬಳಿ ಕುಳಿತು, "ಸ್ವಾಮಿ ದೂರ ದೇಶಕ್ಕೆ ಹೋಗುತ್ತಿದ್ದೇನೆ. ಎಲ್ಲಾ ಭಾರ ನಿನ್ನ ಮೇಲೆ ಹಾಕ್ತಾಯಿದೀನಿ. ಎಲ್ಲಾ ಒಳ್ಳೇದು ಮಾಡು. ಮತ್ತೆ ಯಾವಾಗ ಹಿಂದಕ್ಕೆ ಬರುತ್ತೇನೋ ಏನೋ? ಬರುತ್ತೇನೆಯೋ ಇಲ್ವೋ? ಎಲ್ಲರಿಗೂ ಒಳ್ಳೇದಾಗ್ಲಿ" ಎಂದು ಕೈ ಮುಗಿದು ಕೇಳಿಕೊಂಡಿದ್ದ. ಆಂಜನೇಯ ಈ ತೃಣಮಾತ್ರ ಜನ ಜೀವಿಸಲು ಮಾಡೋ ಸರ್ಕಸ್ ನೋಡಿ ನೋಡಿ ಬೇಸರಗೊಂಡಿದ್ದ. ಏನೋ ಮಾಡ್ಕೊಂಡು ಹೋಗಿ ಎಂದು ಸುಮ್ಮನೆ ಕುಳಿತಿದ್ದ.

ಮೆಕ್ಸಿಕೊ ನಗರ ತಲುಪಿಯಾದ ಮೇಲೆ ಏರ್ ಪೋರ್ಟ್ಗೆಗೆ ಒಂದು ದೊಡ್ಡ ವ್ಯಾನಿನಲ್ಲಿ ಬಂದ ಮೂವರು, ಸಂಜೀವನಂತೆ ಬಂದಿದ್ದ ಇನ್ನೂ ಅನೇಕರನ್ನು ವ್ಯಾನಿನಲ್ಲಿ ತುಂಬಿಕೊಂಡು ಒಂದು ಸಣ್ಣ ಮನೆಯಲ್ಲಿ ತುಂಬಿ, ಒಂದು ವಾರ ಎಲ್ಲೂ ಹೋಗದೆ ಮನೆಯಲ್ಲೇ ಇರಲು ಹೇಳಿ ಹೋದರು. ಅವರ ಅಡುಗೆಗೆ ಎಂದು ಇಬ್ಬರು ಜನ ಆಗಲೇ ಅಲ್ಲಿ ಇದ್ದರು.

ಅಲ್ಲಿ ಅನೇಕ ದೇಶಗಳಿಂದ ಬಂದಿದ್ದ ಯುವಕರು ಇದ್ದರು. ಎಲ್ಲರಿಗೂ ಮನೆಯಲ್ಲಿ ಸಾವಿರ ಸಮಸ್ಯೆಗಳು, ಅವುಗಳನ್ನು ತೀರಿಸಿ ಸ್ವಲ್ಪ ಹಣ ಮಾಡಿಕೊಂಡು ಮತ್ತೆ ತಮ್ಮ ತಮ್ಮ ದೇಶಕ್ಕೆ ವಾಪಸ್ ಆಗುವುದು ಎಂದುಕೊಂಡರು. ಎಲ್ಲರೂ ಅಮೆರಿಕದ ಕನಸು ಕಾಣುತ್ತಾ ವಾರ ಕಳೆದರು.

ವಾರವಾದ ಮೇಲೆ ಅಮಾವಾಸ್ಯೆ ದಿನ, ರಾತ್ರಿ ಎಲ್ಲರನ್ನೂ ತುಂಬಿಕೊಂಡ ವ್ಯಾನ್ ಅಮೆರಿಕದ ಗಡಿಯ ಕಡೆ ಹೊರಟಿತು. ವ್ಯಾನ್ ರಾತ್ರಿ ಹನ್ನೆರಡು ಗಂಟೆಗೆ ರಿಯೋ ಗ್ರಾಂಡೆ ನದಿ ಹತ್ತಿರ ತಲುಪಿತು. ಎಲ್ಲರಿಗೂ ಲೈಫ್ ಜಾಕೆಟ್ ತೊಡಿಸಿ, ತಾವು ಹೇಳಿದಾಗ ನದಿಗೆ ಹಾರಿ ಈಜಿ ಆಚೆ ದಡದಲ್ಲಿ ಇರುವ ಅಮೆರಿಕದ ಗಡಿ ಸೇರಿ ಹೇಗೋ ಅಲ್ಲಿನ ಸೈನಿಕರಿಂದ ತಪ್ಪಿಸಿಕೊಂಡು ಓಡಿ ಬಿಡಬೇಕು ಎಂದು ಹೇಳಿ, ಹತ್ತಿರದ ನಗರ ತಲುಪಿದ ಮೇಲೆ ಯಾರನ್ನು ಸಂಪರ್ಕಿಸಬೇಕು ಎಂದು ಹೇಳಿ ನದಿ ದಡದಲ್ಲಿ ಕೂರಿಸಿ ಕಾಯುವಂತೆ ಹೇಳಿದರು. ಬೆಳಗಿನಜಾವ ಮೂರುಗಂಟೆಯಲ್ಲಿ ನದಿಗೆ ಹಾರಲು ಸಿಗ್ನಲ್ ಬಂತು. ನದಿಗೆ ಹಾರಿ ದಡ ತಲುಪುಲು ಸುಮಾರು ಅರ್ಧಗಂಟೆ ಆಯಿತು. ದಡ ತಲುಪಿ, ಅಲ್ಲಿ ಸುಮಾರು ಒಂದು ಗಂಟೆ ಅಲ್ಲಿನ ಸೈನಿಕರ ಕಣ್ಣು ತಪ್ಪಿಸಲು ಕಾಯಬೇಕಾಯಿತು. ಸಮಯ ಸಿಕ್ಕಾಗ ಅಲ್ಲಿಂದ ಓಡಲು ಶುರುಮಾಡಿದರು. ಓಡುತ್ತಿದ್ದಾಗ ಸೈನಿಕರು ಹಿಂಬಾಲಿಸಿ ಓಡಿ ಬರುತ್ತಿದ್ದಿದ್ದು ಕಾಣಿಸಿತು. ಜೀವ ಹಿಡಿದುಕೊಂಡು ಓಡಿದರು. ಹಾಗೆ ಓಡುವಾಗ ಅನೇಕರು ಸಿಕ್ಕಿಬಿದ್ದರು. ಸಂಜೀವ ಹೇಗೋ ತಪ್ಪಿಸಿಕೊಂಡು ಕಣ್ಮರೆಯಾದ.

ಬೆಳಕಾಗುವವರೆಗೂ ಓಡುತ್ತಲೇ ಇದ್ದ. ಹತ್ತಿರದಲ್ಲಿ ಇದ್ದ ಒಂದು ಹೋಟೆಲ್ ಒಳಗೆ ಹೋಗಿ ಉಸ್ಸ್ ಎಂದು ಕುಳಿತ. ಅಲ್ಲಿಯೇ ಇದ್ದ ಬಾತ್ರೂಮಿಗೆ ಹೋಗಿ ಶುಚಿಯಾಗಿ ಬಂದ. ಬೆಳಗಿನ ತಿಂಡಿ ಮುಗಿಸಿ ಹತ್ತಿರದಲ್ಲಿ ಇದ್ದ ಫೋನಿನಿಂದ ತನಗೆ ಕೊಟ್ಟಿದ್ದ ನಂಬರಿಗೆ ಫೋನ್ ಮಾಡಿದ. ಅರ್ಧಗಂಟೆಯಲ್ಲಿ ಕಾರೊಂದು ಬಂದು ನಿಂತಿತು. ಕಾರಿನಲ್ಲಿ ಹತ್ತಿಸಿಕೊಂಡ ಜನ, ಎಲ್ಲಿಯೂ ನಿಲ್ಲದೆ ಓಡಿಸಿಕೊಂಡು ಹೋಗಿ ಪೆನ್ಸಿಲ್ವನಿಯಾದ ನ್ಯೂಹೋಪಿನಲ್ಲಿ ನಿಲ್ಲಿಸಿದರು. ಅಲ್ಲಿನ ಮೆಕ್ಸಿಕನ್ ಹೋಟೆಲ್ ಒಂದರಲ್ಲಿ ಕೆಲಸ ಕೊಡಿಸಿ ಹೊರಟುಹೋದರು. ಸಂಜೀವ ಅಲ್ಲಿಯೇ ಅಡುಗೆ ಮಾಡಲು ಕಲಿತು, ಅಡಿಗೆವನಾಗಿ ಕೆಲಸ ಮಾಡಹತ್ತಿದ.

ಕೆಲಸ ಮಾಡಲು ಶುರುಮಾಡಿದ ಮೇಲೆ, ಅಲ್ಲೆಯೇ ಊಟ ವಸತಿ ಇದ್ದುದ್ದರಿಂದ ಬರುವ ಹಣ ಕೈಯಲ್ಲೇ ಉಳಿಯುವಂತಾಯಿತು. ಅಕ್ರಮವಾಗಿ ನೆಲೆಸಿದ್ದರಿಂದ ಹೊರಗೆ ಹೆಚ್ಚಾಗಿ ತಿರುಗಲು ಹೋಗಲಿಲ್ಲ. ಆರು ತಿಂಗಳಲ್ಲಿ ಹಣ ಇಲ್ಲಿ ಯಾರ ಕೈಗೆ ಹಾಕಿದರೆ, ಊರಲ್ಲಿ ಮನೆಯವರಿಗೆ ಹೇಗೆ ತಲುಪುತ್ತದೆ ಎಂದು ತಿಳಿದುಕೊಂಡ. ಮನೆಗೆ ಹಣ ತಲುಪಿದ ಸುದ್ದಿ ಕೇಳಿ ಖುಷಿಯಾಯಿತು.

ಮತ್ತೆ ಆರು ತಿಂಗಳಲ್ಲಿ ಅಮೆರಿಕದ ಚುನಾವಣೆ ನಡೆದು, ಅಕ್ರಮ ವಲಸೆಗಾರರನ್ನು ಹಿಡಿಯಲು ಹೊಸ ಸರ್ಕಾರ ಇಮಿಗ್ರೇಷನ್ ಮತ್ತು ಕಸ್ಟಮ್ಸ್ ಜಾರಿ ಎನ್ನುವ ವಿಭಾಗವನ್ನು ತೆರೆಯಿತು.

ಅಕ್ರಮ ವಲಸೆಗಾರರನ್ನು ಹಿಡಿದು ಅವರವರ ದೇಶಕ್ಕೆ ಕೈ ಕಾಲಿಗೆ ಕೋಳ ಹಾಕಿ ಕಳುಹಿಸಲಾರಂಭಿಸಿತು. ಅಲ್ಲಿ ಇಲ್ಲಿ ಕೆಲಸ ಮಾಡುತಿದ್ದ ವಿದ್ಯಾರ್ಥಿಗಳು ಕೆಲಸ ನಿಲ್ಲಿಸಿ ಇರುವ ಹಣದಲ್ಲಿ ಜೀವನ ನಡೆಸಲು ಆಗದೆ ಒದ್ದಾಡತೊಡಗಿದರು. ಕೆಲವರು ಅಲ್ಲಿಂದ ಇಲ್ಲಿ ಇಲ್ಲಿಂದ ಅಲ್ಲಿ ಅಲೆದಾಡುತ್ತಾ ಅಧಿಕಾರಿಗಳಿಂದ ತಪ್ಪಿಸಿಕೊಂಡು ಓಡಾಡತೊಡಗಿದರು. ಕೆಲವರು ದೇಶ ಬಿಟ್ಟು ಹೊರಗೆ ಹೋಗಲಿಲ್ಲ. ಸಕ್ರಮ ವಲಸೆಗಾರರೂ ಭಯಗೊಂಡಿದ್ದರು. ಅಕ್ರಮವಾಗಿ ವರುಷಗಳಿಂದ ನೆಲೆಸಿ ಮಕ್ಕಳನ್ನು ಬೆಳಿಸಿದ್ದವರೂ ಮಕ್ಕಳನ್ನು ಬಿಟ್ಟು ಹೊರಗೆ ಹೋಗುವಂತಾಯಿತು. ಅಕ್ರಮ ವಲಸೆಗಾರರನ್ನು ಹೊತ್ತು ಹಲವಾರು ವಿಮಾನಗಳು ಬೇರೆ ಬೇರೆ ದೇಶಗಳಿಗೆ ಹೊರುಡುತ್ತಿದ್ದ ಸುದ್ದಿ ದಿನಾ ಕೇಳಿಬರುತ್ತಿತ್ತು.

ಸಂಜೀವ ಕೆಲಸ ಮಾಡುತ್ತಿದ್ದ ಹೋಟೆಲ್ಲಿನ ಮಾಲಿಕನಿಗೆ ಕೆಲ ಅಧಿಕಾರಿಗಳ ಪರಿಚಯ ಇತ್ತು. ಆದ್ದರಿಂದ ಅಧಿಕಾರಿಗಳು ಬಂದರೆ ನಿಭಾಯಿಸಬಹುದು ಎಂದು ಯಾರನ್ನೂ ಕೆಲಸದಿಂದ ತೆಗೆದಿರಲಿಲ್ಲ. ತೆಗೆದರೆ ಕೆಲಸ ಮಾಡಲು ಯಾರೂ ಇರಲೂ ಇಲ್ಲ. ಅಕ್ರಮವಾಗಿ ಕೆಲಸ ಮಾಡುತ್ತಿದವರನ್ನು ಟೇಬಲ್ಲುಗಳಿಗೆ ಕಳುಹಿಸುತ್ತಿರಲಿಲ್ಲ. ಅದಲ್ಲದೆ ಅಂಥವರ ಬಗ್ಗೆ ಸ್ವಲ್ಪ ಕನಿಕರವೂ ಇತ್ತು. ಅಕ್ರಮವಾಗಿ ನೆಲೆಸುವವರು ಹೆಚ್ಚು ಕೆಲಸ ಮಾಡುವುದಲ್ಲದೆ, ಯಾವ ಗಲಾಟೆಯೂ ಮಾಡುತ್ತಿರಲಿಲ್ಲ. ಕೊಟ್ಟಷ್ಟು ಹಣ ತೆಗೆದುಕೊಳ್ಳುತ್ತಿದ್ದರು. ಅದರಿಂದ ಲಾಭ ಆಗುತ್ತಿತ್ತು.

ಏನೋ ಸಪ್ಪಳವಾದಂತಾಗಿ ಸಂಜೀವ ಎಚ್ಚರಗೊಂಡು ನೋಡಿದ. ಸರ್ಕಾರದ ವಾಹನಗಳು ಒಂದೊಂದಾಗಿ ಹೊರಡುವುದನ್ನು ನೋಡಿದ. ಬದುಕಿದೆ ಬಡಜೀವ ಎಂದು ಕೊಂಡ. ಕಣ್ಣಿನಲ್ಲಿ ನೀರು ಸುರಿಯಲಾರಂಭಿಸಿತು. ಇನ್ನೂ ಜಮೀನಿನ ಮೇಲೆ ತೆಗೆದುಕೊಂಡು ಸಾಲ ತೀರಿರಲಿಲ್ಲ. ತಂಗಿಯ ಮದುವೆ ನಡೆದಿರಲಿಲ್ಲ. ಹೇಗಾದರೂ ತಾನು ಅಮೆರಿಕದಲ್ಲಿ ನಿಲ್ಲಬೇಕು. ಇಲ್ಲ ಅಂದ್ರೆ ಇರುವ ಜಮೀನು ಕೈತಪ್ಪಿ ಹೋಗುತ್ತದೆ ಎಂದುಕೊಂಡು ಹೋಟೆಲ್ಲಿಗೆ ವಾಪಾಸ್ ಆದ. ತನ್ನ ಜೊತೆ ಓಡಿದವರು ಸಿಕ್ಕಿಹಾಕಿಕೊಂಡರು. ಅವರನ್ನು ಅವರವರ ದೇಶಕ್ಕೆ ವಾಪಸ್ ಕಳುಹಿಸುತ್ತಿದ್ದಾರೆ ಎಂದು ಜೊತೆಯಲ್ಲಿ ಕೆಲಸಮಾಡುವವರು ಹೇಳಿದರು.

ಮತ್ತೆ ವಾರದಲ್ಲಿ ಮತ್ತೊಮ್ಮೆ ಅಧಿಕಾರಿಗಳಿಂದ ದಾಳಿಯಾಯಿತು. ಅವರು ಬರುವ ಸುಳಿವು ಮುಂಚೆಯೇ ಯಾರಿಗೂ ಸಿಕ್ಕಿರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.