ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಥೆ: ಸಹೃದಯರು

Published 21 ಮೇ 2023, 0:10 IST
Last Updated 21 ಮೇ 2023, 0:10 IST
ಅಕ್ಷರ ಗಾತ್ರ

ಮೂಲ ಮಲಯಾಳಂ: ಕಮಲಾದಾಸ್, ಕನ್ನಡಕ್ಕೆ: ಕೆ. ಕೆ. ಗಂಗಾಧರನ್

"ಕಾರ್ಯವಾಸಿ ಕತ್ತೆ ಕಾಲೂ ಹಿಡಿಯಬೇಕೆಂದು ಹೇಳಿದ್ದನ್ನು ನೀನು ಕೇಳಿದ್ದೀಯಲ್ಲ..?" ಕವಿ ತನ್ನ ಸಂಶಯಾಳು ಪತ್ನಿಯ ಬೆನ್ನು ಸವರುತ್ತಾ ಸಮಾಧಾನ ಪಡಿಸುತ್ತಾ ಹೇಳಿದ. ಅದೇಕೊ ಆ ಮಾತುಗಳು ಹೆಂಡತಿಗೆ ರುಚಿಸಿದಂತೆ ತೋರಲಿಲ್ಲ.


"ಹಿಂದೆ ಯಾರೋ ಹೇಳಿದ್ದನ್ನು ನನಗೆ ಹೇಳಬೇಕೂಂತಿಲ್ಲ. ನಾನು ಕೇಳ್ತಾ ಇರೋದು ನಿಮ್ಮನ್ನು. ಅದಕ್ಕೆ ನನಗೆ ಉತ್ತರ ಬೇಕು. ನೀವು ಯಾಕೆ ವಾರಕ್ಕೊಮ್ಮೆ ಆ ಸರಸ್ವತಿ ದೇವಿಯನ್ನು ಭೇಟಿಯಾಗುವುದು? ಹೋಗಲಿಕ್ಕೆ ಜಾಗವಿಲ್ಲಾಂದ್ರೆ ಚೆಂಗಲೂರಿನ ಆ ಶಿವನ ದೇವಾಲಯಕ್ಕೆ ಹೋಗಿ ಕೈಮುಗಿದು ಬರಬಹುದಲ್ಲ....ಸ್ವಲ್ಪ ಪುಣ್ಯನಾದ್ರು ಕಟ್ಕೊಬಹುದಲ್ಲ."


ಹಳ್ಳಿಯ ಮುಗ್ಧೆ ಕುಲೀನಳೂ ಆದ ಪತ್ನಿ ಧ್ವನಿ ಸ್ವಲ್ಪ ಎತ್ತರಿಸಿ ಕೇಳಿದಳು.


"ಮಲಬಾರಿನ ಹೆಣ್ಮಕ್ಕಳನ್ನು ಮದುವೆ ಆಗಬಾರದೂಂತ ನನ್ನ ಸ್ನೇಹಿತರು ನೂರಾರು ಸಲ ಹೇಳಿದ್ದರು. ಮಲಬಾರಿನವರಿಗೆ ಹೊಟ್ಟೆಯುರಿ ಅನ್ನೋದು ಸ್ವಲ್ಪ ಜಾಸ್ತಿನೇ ಇರುತ್ತದಂತೆ. ಏನು ಮಾಡಿದರೂ ಅವರಿಗೆ ಅನುಮಾನಾಂತ ಶ್ರೀಧರಣ್ಣ ಕೂಡ ಹೇಳಿದ್ದರು. ಆದರೂ ನಾನು ನಿನ್ನನ್ನು ಗುರುವಾಯೂರಿಗೆ ಕರೆದುಕೊಂಡು ಹೋಗಿ ತಾಳಿ ಕಟ್ಟಿದೆ. ನಾನೊಬ್ಬ ಕವಿಯಲ್ವಾ? ನಾನು ಬೇರೆ ಬೇರೆ ಕವಿಗಳನ್ನು ಭೇಟಿಯಾಗುವುದು ಬೇಡ್ವಾ? ಅವರಿಂದ ಸ್ಪೂರ್ತಿ ಪಡೆಯದೆ ಹೊಸ ಕವಿತೆಗಳನ್ನು ಬರೆಯೋದು ಸಾಧ್ಯವೇ? ಸರಸ್ವತಿ ದೇವಿಯವರಿಂದ ಮುನ್ನುಡಿ ಬರೆಸಲಿಕ್ಕೆ ಎಷ್ಟು ದಿನಗಳಿಂದ ಓಡಾಡ್ತಾ ಇದೀನಿ ಗೊತ್ತಾ..?" ಕವಿ ಕನಲಿ ಹೇಳಿದ.


ಅಷ್ಟರಲ್ಲಿ ಆತ ತನ್ನ ನೋಟು ಪುಸ್ತಕವನ್ನು ಎತ್ತಿ ಕಂಕುಳಲ್ಲಿಟ್ಟುಕೊಂಡು ಹಿಮ್ಮಡಿ ಸೀಳಿದ ಪಾದವನ್ನು ಹೊಸ ಚಪ್ಪಲಿಯಲ್ಲಿ ನಿಧಾನಕ್ಕೆ ತುರುಕಿಕೊಂಡಾಗಿತ್ತು.


"ಒಂದು ಭಾನುವಾರವಾದರೂ ನಿಮಗೆ ಮನೆಯಲ್ಲಿ ಇರಬಾರದೇನು? ನಿಮ್ಮ ಹಠ ನಿಮಗೆ. ಎಷ್ಟು ದಿನಗಳಾದವು ನೀವು ನಂಜೊತೆ ಹೊರಗಡೆ ತಿರುಗಾಡಿ. ಒಂದು ಸಿನಿಮಾ ನೋಡಿಯೇ ಐದು ವರ್ಷಗಳಾದರೂ ಆಗಿರಬಹುದು. ಒಂದು ಟಿವೀನಾದರೂ ತೆಕ್ಕೊಟ್ಟಿದ್ದೀರಾ? ಅದೂ ಇಲ್ಲ. ನಾನು ಮತ್ತು ಮಕ್ಕಳು ಈ ಕತ್ತಲೆಯ ಮೂಲೆಯಲ್ಲಿ ಮೂಗಿಲಿಗಳ ತರ ಕುಳಿತು ಎಷ್ಟು ಕಾಲವಾಯಿತು. ಯೋಚನೆ ಮಾಡಿದ್ದೀರಾ? ಕವಿಯಂತೆ! ಯಾವಾಗ ನೋಡಿದರೂ ಕಾಗದದಲ್ಲಿ ಗುರ್ತು ಹಾಕಿಕೊಳ್ತಾ ಇರ್ತೀರಾ? ಇಲ್ಲವಾದರೆ ಯಾವುದಾದರೂ ಹೆಣ್ಮಕ್ಕಳ ಮನೆಗೆ ಹೋಗಿ ಅವುಗಳನ್ನು ನೋಡುತ್ತಾ ಹಂಲ್ಲುಗಿಂಜುತಿರ್ತಿರ. ನನ್ನ ವಿಷಯ ಹೋಗಲಿ ಬಿಡಿ. ಇದೆಲ್ಲ ನನ್ನ ದುರ್ವಿಧಿ ಎಂದು ತಿಳಿದುಕೊಂಡಿರ್ತಿನಿ. ಆದರೆ, ಈ ಮಕ್ಕಳು ಏನು ತಪ್ಪು ಮಾಡಿದ್ದಾರೆ? ಅವುಗಳಿಗೂ ಆಸೆ ಇರೋದಿಲ್ವೆ? ಅಪ್ಪನ ಜೊತೆಯಲ್ಲಿ ಆಟೋದಲ್ಲಿ ಹೋಗಬೇಕು, ಮೃಗಾಲಯ ನೋಡಬೇಕು...ಅವುಗಳಿಗೆ ಅಪ್ಪಾಂತ ಇರೋದು ನೀವೊಬ್ಬರೆ ತಾನೆ?"


ಕವಿ ಪತ್ನಿ ಬಾಗಿಲ ಬಳಿ ನಿಂತು ಕೇಳಿದಳು. ಅದೇ ಸಮಯಕ್ಕೆ ಪಕ್ಕದ ಮನೆ ಮಾಲಿಕಳು ತಲೆ ಹೊರಹಾಕಿ ನಕ್ಕಳು.


ಕವಿಯ ಹೊಸ ಚಪ್ಪಲಿ ಹೆಜ್ಜೆ ಹೆಜ್ಜೆಗೂ ಬಿಕ್ಕುತ್ತಿದ್ದವು. ಅವನು ಹಿಂತಿರುಗಿ ನೋಡದೆ ತರಾತುರಿಯಿಂದ ಬಸ್ಟಾಪಿನತ್ತ ನಡೆದ. ದಾರಿಯಲ್ಲಿ ಕೆಸರು, ಸೆಗಣ ಕಪ್ಪುಗಲ್ಲಿನ ತುಣುಕುಗಳು ತುಂಬಿಕೊಂಡಿದ್ದವು. ಚಪ್ಪಲಿಗಳಿಗೆ ಮಣ್ಣು ಸೆಗಣಿ ಮೆತ್ತದಂತೆ ಕವಿ ಎಚ್ಚರಿಕೆಯಿಂದ ನೋಡುತ್ತಾ ನಡೆದ. ಹಿಂದೊಮ್ಮೆ ಆತನ ಕವಿತಾ ಸಂಗ್ರಹ ಸೆಗಣಿಯಲ್ಲಿ ಬಿದ್ದು ಹೋಗಿದ್ದು ನೆನಪಾಯಿತು. ತಾನೊಬ್ಬ ಹತಭಾಗ್ಯನೆಂಬ ವಿಚಾರ ಅವನನ್ನು ಮತ್ತಷ್ಟು ಕುಸಿಯುವಂತೆ ಮಾಡಿತು. ತನಗೆ ಅನುರೂಪಳಾದ ಹೆಂಡತಿ ಸಿಗಲಿಲ್ಲವೆಂಬ ಕೊರಗು ಅವನನ್ನು ಅಸ್ವಸ್ಥನನ್ನಾಗಿಸಿತು. ಗುರುವಾಯೂರು ದೇಗುಲಕ್ಕೆ ಹೋಗಿ ಈ ಹಳ್ಳಿಗುಗ್ಗುವನ್ನು ತನ್ನ ಪಟ್ಟದ ಮಹಿಷಿಯನ್ನಾಗಿ ಮಾಡಿದೆ. ಆದರೆ, ಅಂದು ಶಕುಂತಲೆಯನ್ನು ವಶೀಕರಿಸಿದ ದುಷ್ಯಂತನ ತೃಪ್ತಿ ಅವನದ್ದಾಗಿತ್ತು.


ತಿರುವನಂತಪುರಂ ತಲುಪಿದಾಗ ತನ್ನ ಸ್ನೇಹಿತರಿಗೆ ಅವನು ಹೇಳಿದ, "ಸುಂದರಿಯೇ ಅಲ್ಲವೇ ಎನ್ನುವುದನ್ನು ನೀವೇ ನಿರ್ಧರಿಸಿ. ಅವಳು ನಿಷ್ಕಳಂಕಳು, ಕುಲೀನಳು. ನಾಗರೀಕಾಂಗನೆಯಲ್ಲ. ನಾಗರೀಕಾಂಗನೆಯೆಂದರೆ ನನಗೆ."


ಗಂಧದ ಬೊಟ್ಟು ತೊಟ್ಟು, ಕಣ್ಣುಗಳನ್ನು ಅರ್ಧ ಮುಚ್ಚಿ ಸೋಫದಲ್ಲಿ ಕುಳಿತಿದ್ದ ವಧುವನ್ನು ಕೌತುಕದಿಂದ ಎಲ್ಲರೂ ದಿಟ್ಟಿಸಿ ನೋಡಿದರು.


"ಪರವಾಗಿಲ್ಲ..." ಸ್ನೇಹಿತರೆಲ್ಲರೂ ಹೇಳಿದರು.


ವಧುವಿನ ಕೈಗಳಲ್ಲಿ ಸಾಕಷ್ಟು ಬಂಗಾರದ ಬಳೆಗಳಿದ್ದವು. ಕೊರಳಲ್ಲಿ ಸರಗಳು. ಅವಳ ಸಂಭಾಷಣಾ ಶೈಲಿ, ಅವರಿಗೆ ಅಪರಿಚಿತವಾಗಿತ್ತು.


ಬಸ್ಟಾಪ್‌ನಲ್ಲಿ ಪರಮೇಶ್ವರನ್ ಪಿಳ್ಳೈ ನಿಂತಿದ್ದು, ಕವಿಯನ್ನು ಕಂಡ ತಕ್ಷಣ ಕೇಳಿದ,
"ಏನ್ರಿ ಚರ್ಚಾ ವೇದಿಕೆಯ ವಿಜಿಟಿ ಹಾಲ್‍ನಲ್ಲಿ ಕಾಣ ಸಲಿಲ್ಲವಲ್ಲ. ಬರ್ತಿಯಾಂತ ತುಂಬ ಹೊತ್ತು ಹೊರಗಡೆ ಕಾಯುತ್ತಿದ್ದೆ. ಏಕೆ ಕಾಣಿಸಿಲ್ಲವಲ್ಲ..?"


"ಬರ್ಲಿಕ್ಕೆ ಸಾಧ್ಯವಾಗಲಿಲ್ಲ. ಒಬ್ಬ ಪ್ರಕಾಶರನ್ನು ಭೇಟಿಯಾಗಲಿಕ್ಕೆ ಹೋಗಿದ್ದೆ. ಮುಂದಿನ ತಿಂಗಳು ನನ್ನ ಒಂದು ಹೊಸ ಪುಸ್ತಕ ಬರ್ತಿದೆ. 'ಜೇನುಮಾವಿನ ಸಂತೃಪ್ತಿ'- ಎಂದು ಅದರ ಹೆಸರು. ನಿನ್ನೆ ಯಾರೆಲ್ಲ ಕವಿತೆ ಆಲಾಪಿಸಿದರು? ಸುಗತ ಕುಮಾರಿ ಇದ್ದರಾ...? ಅಯ್ಯಪ್ಪ ಪಣ ಕ್ಕರ್? ಪರಮಣ್ಣ ನೀವು ನಿರಾಶೆಪಡೋದು ಬೇಡ. ನಾಳೆ ನಾನು ನಿಮ್ಮ ಮನೆಗೇ ಬಂದು ನನ್ನ ಹೊಸ ಕವಿತೆಯನ್ನು ಕೇಳಿಸುತ್ತೇನೆ..ಆಯಿತಾ?"
ಕವಿ ಹೇಳಿದ.


ಸರತಿಯ ಸಾಲಿನಲ್ಲಿ ನಿಂತ ಅನೇಕರು ಕವಿಯ ಸಂಭಾಷಣೆಯನ್ನು ಗಮನಿಸುತ್ತಿದ್ದರು. ಅವರ ಮುಖದಲ್ಲಿ ಕಾಣಿಸುತ್ತಿದ್ದ ಏಕಾಗ್ರತೆ ಕವಿಯನ್ನು ಮತ್ತಷ್ಟು ಮಾತನಾಡಲು ಪ್ರೆರೇಪಿಸಿತು.
"ಏನು ಪರಮಣ್ಣ ನಾನು ನಾಳೆ ಬಂದರೆ ಸಾಲದೇನು.."


ಅವನು ಪರಮೇಶ್ವರ ಪಿಳ್ಳೈಯನ್ನು ಕೇಳಿದ.
"ಏಕೆ.."
"ನಿಮಗೆ ನಿನ್ನೆ ಕೇಳಿಸಲಿಕ್ಕೆ ಸಾಧ್ಯವಾಗದ ಕವಿತೆಯೊಂದನ್ನು ಕೇಳಿಸುವುದಕ್ಕೆ"
"ವೇಣು ನಾನು ಕವಿತೆ ಕೇಳಿಸಿಕೊಳ್ಳಲಿಕ್ಕಲ್ಲ ವಿಜಿಟಿ ಹಾಲ್ ಗೆ ಬಂದಿದ್ದು. ನೀನು ಆರು ತಿಂಗಳ ಹಿಂದೆ ಸಾಲ ತೆಗೆದುಕೊಂಡಿದ್ದ ಹಣ ವಾಪಾಸು ಕೇಳೋಣಾಂತ ಬಂದಿದ್ದೆ. ಒಂದನೆಯ ತಾರೀಖಾದುದರಿಂದ ಜೋಬಲ್ಲಿ ಹಣ ಇರಬಹುದೂಂತ ತಿಳಿದು ಬಂದಿದ್ದೆ." ಪಿಳ್ಳೈ ಹೇಳಿದ.
ಕವಿ ಗಟ್ಟಿಯಾಗಿ ನಕ್ಕುಬಿಟ್ಟ.


"ಒಳ್ಳೆಯ ಬತ್ತಿ ಇಟ್ಟಿರಿ ಪರಮಣ್ಣ" ಕವಿ ಎಲ್ಲರೂ ಕೇಳಿಸಿಕೊಳ್ಳುವಂತೆ ಹೇಳಿದ.
"ಬತ್ತಿ ಇಟ್ಟಿದ್ದು ನೀವು ವೇಣು, ನಾನಲ್ಲ. ನಾನು ಗಂಭೀರವಾಗಿಯೇ ಹೇಳಿದ್ದು. ಅವಳಿಗೆ ನಾಟಿ ಔಷಧಿ ಕೊಡಿಸ್ತಿದ್ದೀನಿ. ಕಷಾಯ, ತೈಲ, ಪಥ್ಯ ಎಲ್ಲವೂ ಇವೆ. ನನ್ನ ಬಳಿ ಹಣವೇ ಇಲ್ಲ. ನನಗೆ ಅದನ್ನು ವಾಪಾಸ್ ಕೊಡಬೇಕು. ಅದಲ್ಲದೆ ಬೇರೆ ದಾರಿಯೇ ಇಲ್ಲ ವೇಣು" ಪರಮೇಶ್ವರನ್ ಪಿಳ್ಳೈ ಹೇಳಿದ.
"ಹೋಗಲಿ, ಅಕ್ಕನಿಗೆ ಈಗ ವಾಸಿನಾ..?


"ಏನೂಂತ ಹೇಳಲಿಕ್ಕಾಗಲ್ಲ. ಕಾಲಿನ ಊತ ಸ್ವಲ್ಪ ಕಡಿಮೆ ಆಗಿದೆ.. ಸಂಧಿಯ ನೋವು ಬಿಟ್ಟಿಲ್ಲ. ಈಗ ನೀನೂ ಮನೆಯಲ್ಲಿರುವುದಿಲ್ಲವಲ್ಲ. ನಿನ್ನನ್ನು ಕಂಡೆ ಸುಮಾರು ದಿನಗಳಾದವು ಅಂತ ಅವಳು ನಿನ್ನೆ ತಾನೆ ಹೇಳಿದ್ದಳು." ಪಿಳ್ಳೈ ಹೇಳಿದ.


"ನಾನು ಬರ್ತೀನಿ ಪರಮಣ್ಣ. ಈಗ ನಾನು ತುಂಬಾ ಬ್ಯುಜಿó. ಮೊನ್ನೆ ಕೊಚ್ಚಿಯಿಂದ ಪರಶುರಾಮ ಎಕ್ಸ್‌ಪ್ರೆಸ್‌ನಲ್ಲಿ ವಾಪಸಾದೆ. ಆಲುವಾದಲ್ಲಿ ರಾಜ್ಯ ಸಮ್ಮೇಳನವಿತ್ತು. ಅದರ ಮುಂದುವರಿದ ಭಾಗವಾಗಿ ರಸಿಕ ಕವಿಗೋಷ್ಠಿಯೂ ಇತ್ತು. ನಾನು ನನ್ನ "ರಾತ್ರಿ ಹಕ್ಕಿಯ ದುಃಖ" ಎಂಬ ಕವಿತೆಯನ್ನು ಓದಿದೆ. ರೇಡಿಯೋದವರು ಅದನ್ನು ಟೇಪ್ ಮಾಡಿದ್ದಾರೆ. ಮುಂದೆ ರೆಡಿಯೋದಲ್ಲಿ ಕೇಳಬಹುದು. ಅಕ್ಕನಿಗೆ ಹೇಳಬೇಕು. ಆನಂತರ ನಮ್ಮ ಸರಸ್ವತಿ ದೇವಿಯವರ ಮನೆಯಲ್ಲಿ ಕೆಲವು ವಿದೇಶಿಯರಿಗೆ ಸತ್ಕಾರ ಕೂಟವಿತ್ತು. ಅವರೆಲ್ಲ ಹೆಸರಾಂತ ಸಾಹಿತಿಗಳು. ನಾನು ಮೊದಲಿನಿಂದ ಕೊನೆಯ ತನಕ ಅವರ ಸಹಾಯಕ್ಕೆ ನಿಂತಿದ್ದೆ. ಸತ್ಕಾರ ಮುಗಿದಾಗ ತುಂಬಾ ಕತ್ತಲಾಗಿತ್ತು. ಮಧ್ಯಾಹ್ನದ ಊಟವಾಗಿತ್ತು." ಕವಿ ಹೇಳಿದ.
"ಕಳೆದ ವಾರ ನೀನು ಜವಾಹರ್ ನಗರಿನ ಮ್ಯಾಥ್ಯೂಸ್‍ನ ಅಂಗಡಿ ಮುಂದೆ ನಿಂತಿದ್ದೇಂತ ವಿಜಯ ಹೇಳಿದ್ದ. ಅವನು ಸ್ಕೂಲ್ ಬಸ್ಸಿನಲ್ಲಿ ಆ ದಾರಿಯಾಗಿ ಹೋಗುತ್ತಿದ್ದನಂತೆ. ವೇಣುವಣ್ಣ ಆಕಾಶ ನೋಡುತ್ತಾ ಜವಾಹರ್ ನಗರದಲ್ಲಿ ನಿಂತಿದ್ದರು ಅಂತ ಅವನು ಹೇಳಿದ್ದ. ಬಹುಷಃ ಮೇಘಗಳನ್ನು ನೋಡುತ್ತಿರಬಹುದೂಂತ ಓಮನಾಳು ಹೇಳಿದ್ದಳು." ಪರಮೇಶ್ವರನ್ ಪಿಳ್ಳೈ ಹೇಳಿದ.


ಆತನ ಮುಖದಲ್ಲಿ ಆಗ ಅರಳಿದ ಮುಗುಳ್ನಗು ಕವಿಯನ್ನು ಸಂತೋಷಪಡಿಸಲಿಲ್ಲ. ಕ್ಯೂವಿನಲ್ಲಿ ನಿಂತಿರುವವರ ಗೌರವ ಪರಮೇಶ್ವರನ್ ಪಿಳ್ಳೈಯ ಒಣ ಮಾತುಗಳಿಂದ ತನಗೆ ನಷ್ಟವಾಗುತ್ತಿದೆಯೆಂದು ಕವಿಗೆ ಅರ್ಥವಾಯಿತು. ಆತ ತಕ್ಷಣ ಆಟೋವೊಂದಕ್ಕೆ ಕೈತೋರಿಸಿ "ಕವಡಿಯಾರ್..ಕವಡಯಾರ್ ಅರಮನೆ ಬಳಿ ಬಿಡಿ" ಎಂದು ಗಟ್ಟಿಯಾಗಿ ಕೂಗಿ ಅದರಲ್ಲಿ ಕುಳಿತುಕೊಂಡ. ನೋಟುಪುಸ್ತಕಗಳು ಕಂಕುಳಿನ ಬೆವರಿನಲ್ಲಿ ತೇವಗೊಂಡಿದ್ದಾವೆ ಎಂದು ತಿಳಿದಾಗ ಆತ ತನ್ನ ದುರ್ವಿಧಿಯನ್ನು ಶಪಿಸಿಕೊಂಡ. ವರದಕ್ಷಿಣೆ ಪಡೆದು ತಿರುವನಂತಪುರದ ಒಬ್ಬ ದೊಡ್ಡ ಮನುಷ್ಯನ ಮಗಳನ್ನು ಹೆಂಡತಿಯನ್ನಾಗಿ ಮಾಡಿಕೊಂಡಿದ್ದಿದ್ದರೆ, ತನಗೆ ಅನಾಯಾಸವಾಗಿ ಸಂಚರಿಸಲು ಒಂದು ಮೋಟಾರು ಕಾರು ಇರುತ್ತಿತ್ತೆಂಬ ವಿಚಾರ ಆತನನ್ನು ಮತ್ತಷ್ಟು ಬೆವರುವಂತೆ ಮಾಡಿತು. ಹಸಿರು ಬಣ್ಣದ ಶರ್ಟಿನ ಹಿಂಬದಿ ಕಪ್ಪಾಗಿ ಚುಕ್ಕೆಯಾಗಿತ್ತು.
ಸರಸ್ವತಿ ದೇವಿಯ ಮನೆಯ ಬಾಗಿಲ ಮುಂದೆ ನಿಂತಾಗ ಕವಿಯ ಹೃದಯದ ಬಡಿತ ತೀವ್ರಗೊಂಡಿಗಿತ್ತು. ಇವತ್ತಾದರೂ ಅವರು ತನಗೊಂದು ಮುನ್ನುಡಿ ಬರೆದುಕೊಡಲಾರರೆ? ಎಷ್ಟು ಕಾಲವಾಯಿತು ಈ ಯೋಚನೆ ಆರಂಭವಾಗಿ?


ಬಾಗಿಲು ತೆರೆದ ಪರಿಚಾರಕ ಮುಖದ ಮಾಂಸಪೇಶಿಗಳನ್ನು ಸರಿಸದೆ ಗೊಣಗಿದ.
"ಅಮ್ಮ ಇಲ್ಲಿಲ್ಲ..."
"ಎಲ್ಲಿಗೆ ಹೋಗಿದ್ದಾರೆ" ಕವಿ ಕೇಳಿದ. ತಾನು ಬೆಳಿಗ್ಗೆ ಫೋನ್‌ ಮಾಡಿ ತಿಳಿಸಿದ್ದೆನಲ್ಲ. ತಾನು ಹೊಸ ಕವಿತೆಯನ್ನು ಓದಿ ಹೇಳಲು ಇವತ್ತು ಸರಿಯಾಗಿ ಹತ್ತುವರೆಗೆ ತಲುಪುತ್ತೇನೆಂದು ಪಬ್ಲಿಕ್ ಬೂತಿನಿಂದ ಅವರಿಗೆ ಹೇಳಿದ್ದೆ. ಅವರು 'ಆ' ಎನ್ನುವ ಮೃದುಧ್ವನಿಯನ್ನು ಮಾತ್ರ ಹೊರಹಮ್ಮಿಸಿದ್ದರು. ನಂತರ ಇಷ್ಟು ಅವಸರದಲ್ಲಿ ಎಲ್ಲಿಗೆ ಹೋದರು?


ತಾನು ಆಫೀಸಿಗೆ ಚಕ್ಕರ್ ಹೊಡೆದು ಇಲ್ಲಿಗೆ ಬರಲು ಕಷ್ಟಪಡುವಾಗ ಸರಸ್ವತಿ ದೇವಿ ಶಾಪಿಂಗಿಗೋ ಅಥವಾ ಬೇರೆ ಹೆಂಗಸರೊಂದಿಗೋ ಯಾವುದೇ ತಪ್ಪಿತಸ್ಥ ಮನೋಭಾವವು ಇಲ್ಲದೆ ಹೋಗ್ತಾರೆ! ಅಬ್ಬಾ ಇವರೆಲ್ಲ ಕಲ್ಲಿನಲ್ಲಿ ನಿರ್ಮಿಸಿದ ಒಂದು ಪ್ರತಿಮೆಯೇನು? ಇವರ ಹೃದಯದಲ್ಲಿ ಸ್ವಲ್ಪ ಪ್ರೀತಿಯನ್ನು ಜಾಗೃತಗೊಳಿಸಲು ತನ್ನ ಮಧುರ ಮಧುರವಾದ ಮಾತುಗಳಿಗೆ, ಪ್ರೇಮ ಕವಿತೆಗಳಿಗೆ ಸಾಧ್ಯವಾಗಲಿಲ್ಲ ಎಂದು ನೆನೆದಾಗ ವೇಣುವಿಗೆ ಅಳಬೇಕೆನಿಸಿತು. ಕಣ್ಣುಗಳು ತುಂಬಿ ಹರಿದವು.


"ನಾನು ಸ್ವಲ್ಪ ಹೊತ್ತು ಇಲ್ಲಿ ಕೂತಿರ್ತಿನಿ. ಹಾಗೇನೆ ಸ್ವಲ್ಪ ನೀರು ಕೊಡಿ ಕುಡೀಲಿಕ್ಕೆ. ನಾನು ಅಮ್ಮ ಬರುವವರೆಗೂ ಕಾಯುತ್ತಾ ಇಲ್ಲಿ ಕುಳಿತಿರುತ್ತೇನೆ." ವೇಣು ಕೆಲಸದವನಿಗೆ ಹೇಳಿದ.
"ಇಲ್ಲಿ ಯಾರನ್ನೂ ಕೂರಿಸಬಾರದೂಂತ ಸರ್ ಹೇಳಿದ್ದಾರೆ" ಆತ ಹೇಳಿದ. ಅವನು ಕವಿಯ ಮುಖಕ್ಕೆ ಬಡಿದಂತೆ ಬಾಗಿಲು ಹಾಕಿದ.
"ಇವನೆಂತಹ ಪಿಶಾಚಿ? ಇಂತಹವರನ್ನೆಲ್ಲ ಸಂಬಳ ಕೊಟ್ಟು ಮನೆಯಲ್ಲಿಟ್ಟುಕೊಂಡರೆ ಮಾನಮರ್ಯಾದೆಯಿರುವವರು ಯಾರೂ ಈ ಕಡೆ ತಿರುಗಿ ನೋಡಲ್ಲ" ವೇಣು ಗಟ್ಟಿಯಾಗಿ ಹೇಳಿದ. ಅವನ ಧ್ವನಿ ಬಾಗಿಲ ಒಳಗಿದ್ದ ಕೆಲಸದವನಿಗೆ ಕೇಳಿರಬಹುದು. ಅದರೆ ಮತ್ತಿನ್ಯಾರೂ ಬಾಗಿಲು ತೆರೆಯಲಿಲ್ಲ.
ವೇಣುವಿನ ಕೈಯಲ್ಲಿ ಆಫೀಸಿಗೆ ಹೋಗುವುದಕ್ಕಾಗಲೀ ಮನೆಗೆ ಹೋಗುವುದಕ್ಕಾಗಲೀ ಆಟೋ ಕಾಸು ಇರಲಿಲ್ಲ. ಉರಿವ ಬಿಸಿಲಿನಲ್ಲಿ ನಡೆದುಕೊಂಡು ಆತ ಶ್ರೀ ದೇವಿ ಅಂತರ್ಜನಂರವರ ಮನೆಗೆ ಹೋದ. ಒಂದು ಲೋಟ ನೀರು ಕುಡಿಯದೆ ಮುನ್ನಡಿಯಿಡಲು ತನಗೆ ಶಕ್ತಿಯಿಲ್ಲ ಎಂದು ಆತ ಶ್ರೀದೇವಿಗೆ ಹೇಳಿದ.
ಶ್ರೀದೇವಿ ಒಳಹೊಕ್ಕು ಫ್ರಿಡ್ಜ್ ತೆರೆಯದೆ ಪೈಪಿನ ನೀರನ್ನು ಒಂದು ಲೋಟ ತುಂಬಾ ತಂದು ಕೊಟ್ಟಳು. ವೇಣು ಅದನ್ನು ನಿಧಾನಕ್ಕೆ ಕುಡಿದ.


"ಶ್ರೀದೇವಿ ಟೀಚರ್ ಐಸ್ ನೀರು ಇಲ್ವಾ?" ಆತ ಕೇಳಿದ.
"ಇಲ್ಲ ಫ್ರಿಡ್ಜ್‌ನಲ್ಲಿ ನೀರಿಡಲು ಮರೆತುಬಿಟ್ಟೆ." ಅವರು ಹೇಳಿದರು.
"ನಿನ್ನೆ ಬರೆದು ಮುಗಿಸಿದ ಒಂದು ಕವಿತೆಯನ್ನು ನಿಮಗೆ ಕೇಳಿಸೋಣಾಂತೆ ಬಂದೆ ಟೀಚರ್" ಕವಿ ಸ್ವಲ್ಪ ನಾಚಿಕೆಯಿಂದಲೇ ತಿಳಿಸಿದ.


"ಅಯ್ಯೋ...ಇವತ್ತು ಇಲ್ಲಿ ಕುಳಿತು ಕವಿತೆ ಕೇಳುವಷ್ಟು ಸಮಯವಿಲ್ಲ. ಇವತ್ತು ಉಣ್ಣಿಯ ಅಪ್ಪನ ಬರ್ಥ್‍ಡೆ. ಮಧ್ಯಾಹ್ನ ಊಟಕ್ಕೆ ಬರ್ತಾರೆ. ಅಷ್ಟರಲ್ಲಿ ಅಡಿಗೆಯೆಲ್ಲಾ ತಯಾರಿಸಬೇಕು. ಪುರುಸೊತ್ತೇ ಇಲ್ಲ. ಕ್ಷಮಿಸಬೇಕು ವೇಣು" ಶ್ರೀದೇವಿ ಟೀಚರ್ ಹೇಳಿದರು.
ಅವರ ಮುಖ ದಣ ದಂತೆ ಕಾಣ ಸಿತು.


"ಅಡಿಗೆ ಸುರು ಮಾಡಿ ತುಂಬಾ ಹೊತ್ತಾಯಿತಾ? ನಿಮ್ಮ ಮುಖ ಬೆಂಕಿಯ ಕಾವಿಗೆ ಊದಿಕೊಂಡಿದೆಯಂತಿದಿಯಲ್ಲ. ಒಂದು ಕೆಂದಾವರೆಯಂತೆ...ಮಧ್ಯಾಹ್ನದ ಬಿಸಿಲಿಗೆ ಬಾಡಿದ ಕೆಂದಾವರೆಯಂತೆ..." ವೇಣು ಹೇಳಿದ.


ಶ್ರೀದೇವಿ ಅದನ್ನೇನು ಕೇಳಿಸಿಕೊಳ್ಳದೆ ಅಡಿಗೆ ಮನೆಯತ್ತ ಹೆಜ್ಜೆ ಹಾಕಿದರು. ವೇಣು ಚಪ್ಪಲಿಯನ್ನು ಕಳಚಿ ಆಕೆಯನ್ನು ಹಿಂಬಾಲಿಸಿದ. ಸಾಂಬಾರಿನ ಸುಗಂಧ ಅವನ ನಾಸಿಕದ ರಂಧ್ರವನ್ನು ತೃಪ್ತಿಗೊಳಿಸಿತ್ತು.
"ಟೀಚರ್, ಈ ತನಕ ನನ್ನನ್ನು ನೀವು ಊಟಕ್ಕೇ ಕರೆದಿಲ್ಲ. ನಿಮ್ಮ ಕೈಯಡಿಗೆ ಉಣ್ಣಲು ನನಗೆ ತುಂಬಾ ಆಸೆ ಇದೆ." ಕವಿ ತನ್ನ ಬಯಕೆಯನ್ನು ತೋಡಿಕೊಂಡ.


"ವೇಣು, ನಾನು ಮೊದಲೇ ಹೇಳಲಿಲ್ವಾ, ನಾನು ತುಂಬಾ ಬ್ಯುಜಿóಯಾಗಿದ್ದೀನೀಂತ. ಇವತ್ತು ಇಲ್ಲಿ ಕುಳಿತು ನನಗೆ ತೊಂದರೆ ಕೊಡಬೇಡಿ. ಅಕ್ಕಪಕ್ಕ ವಾಸವಿರುವ ಹೆಂಗಸರು ಅಡಿಗೆಮನೆಯಲ್ಲಿ ಯಾವನೋ ಗಂಡಸು ಬಂದು ನಿಂತಿರುವುದನ್ನು ಕಂಡರೆ ಏನೇನೋ ಕಥೆ ಕಟ್ಟಿ ಹೇಳ್ತಾರೆ. ಕವಿತೆಗಳೆಲ್ಲಾ ಇನ್ನೊಂದ್ಸಾರಿ ಆಗಲಿ. ಇವತ್ತು ನೀವು ಇಲ್ಲಿರ ಬೇಡಿ. ಆದಷ್ಟು ಬೇಗ ಹೊರಡಿ." ಟೀಚರ್ ಖಚಿತವಾಗಿ ನುಡಿದರು.
ಕವಿ ಗಟ್ಟಿಯಾಗಿ ನಕ್ಕುಬಿಟ್ಟ. ಪೈಶಾಚಿಕ ನಗು.


"ನನಗೆ ಹೆದರುತ್ತಿದ್ದೀರಾ ಟೀಚರ್? ನಾನು ಹೆಂಗಸರಿಗೆ ಬಲತ್ಕಾರ ಮಾಡುವ ಪೈಕಿ ಅಲ್ಲ. ನಾನೊಬ್ಬ ಬಡಪಾಯಿ ಕವಿ. ನಿರುಪದ್ರವಿ. ಸ್ವಲ್ಪ ಪಾಯಸ ಕುಡಿದು ಜಾಗ ಖಾಲಿ ಮಾಡಿಬಿಡ್ತೇನೆ."
"ವೇಣು, ನಾನಿನ್ನು ಪಾಯಸ ಮಾಡಿಲ್ಲ. ಪಾಯಸವನ್ನು ಕೊನೆಯಲ್ಲಿ ತಯಾರು ಮಾಡ್ತೇನೆ." ಟೀಚರ್ ಅವನಿಗೆ ಕೇಳಿಸುವಂತೆ ಪಿಸು ನುಡಿದರು.
"ನೀವು ತಯಾರಿಸಿದ ಪಾಯಸ ಕುಡಿಯದೆ ನಾನು ಇಲ್ಲಿಂದ ಕದಲೋದೆ ಇಲ್ಲ. ಇದು ನನ್ನ ಪ್ರತಿಜ್ಞೆ." ವೇಣು ಒಂದು ಪೀಠದಲ್ಲಿ ಕುಳಿತು ಹೇಳಿದ. ಶ್ರೀದೇವಿಗೆ ಗಾಬರಿಯೆನಿಸಿತು.
"ಅವರು ಬರುವಾಗ ಅಡಿಗೆಮನೆಯಲ್ಲಿ ಒಬ್ಬರು ಕುಳಿತಿರುವುದನ್ನು ಕಂಡರೆ, ರಂಪ ಮಾಡ್ತಾರೆ." ಶ್ರೀದೇವಿ ಮತ್ತೊಮ್ಮೆ ಎಚ್ಚರಿಸಿದರು.


"ಶ್ರೀದೇವಿ ಟೀಚರ್, ನಾನು ಕೇವಲ ಒಬ್ಬ ವ್ಯಕ್ತಿ ಅಲ್ಲ. ನಾಡಿನ ಕವಿ. ಕೇರಳದ ಪ್ರತಿಷ್ಟಿತ ಪತ್ರಿಕೆಗಳಲ್ಲಿ ಎಷ್ಟು ಕಾಲದಿಂದ ನನ್ನ ಕವಿತೆಗಳು ಪ್ರಕಟವಾಗುತ್ತಾ ಬರುತ್ತಿವೆ ಗೊತ್ತಾ? ನಾನು ಬರೋದ್ರಿಂದ ನಿಮಗಾಗಲೀ ನಿಮ್ಮ ಯಜಮಾರಿಗಾಗಲೀ ಅವಮಾನವಾಗುವುದಿಲ್ಲ. ನೀವು ಅಡಿಗೆ ಮಾಡ್ತಾ ಇರಿ, ನಾನು ಕವಿತೆ ಓದುತ್ತಾ ಇರ್ತೇನಿ. ನೋಡಿ ಈ ಕವಿತೆಯ ಹೆಸರು 'ವಾಚಾಲಗಳಾದ ಮಳೆಹನಿಗಳು'. ರಾತ್ರಿಯ ಎರಡನೇ ಯಾಮ. ಹೊಸ ವರ್ಷಾರಂಭ...."
ಕವಿ ಹಾಡಿದ.


ಟೀಚರ್ ಕೈಯಲ್ಲಿ ಸೌಟನ್ನು ಹಿಡಿದು ಅಡಿಗೆಮನೆಯಿಂದ ಹೊರಕ್ಕೆ ಓಡಿದರು.
"ಯಾರೋ ಬಾಗಿಲು ತಟ್ಟುತ್ತಿದ್ದಾರೆ.." ಅವರು ಕೂಗಿ ಹೇಳಿದರು. ಬಾಗಿಲು ತೆರೆದಾಗ ಒಳಪ್ರವೇಶಿಸಿದ ಮಧ್ಯವಯಸ್ಕ ವೇಣುವನ್ನು ದುರುಗುಟ್ಟಿ ನೋಡಿದರು.
ಮಹಡಿಮನೆಯಲ್ಲಿ ವಾಸಿಸುತ್ತಿರುವ ರಮಕ್ಕ, ಅಂದರೆ ಮಿಸೆಸ್ ಕುರುಪ್.
"ಬನ್ನಿ ಅಕ್ಕಾ...ಇವರು ಮಹಾಕವಿ ವೇಣುಗೋಪಾಲ್ ಅಂತ. ನೀವು ಓದಿರಬಹುದು ಇವರ ಕವಿತೆಗಳನ್ನು..."
ಶ್ರೀ ದೇವಿ ಟೀಚರ್ ತೊದಲಿದರು.


ಅಕ್ಕ ಅಂತ ಕರೆಯಲ್ಪಟ್ಟ ಮಹಿಳೆ ವೇಣುವನ್ನು ನಖಶಿಖಾಂತ ನೋಡಿದರು.
"ಕವಿತೆಗಳನ್ನು ಓದುವ ಅಭ್ಯಾಸ ನನಗಿಲ್ಲ." ಹಾಗನ್ನುತ್ತಾ ಅವರು ಸೋಫಾದಲ್ಲಿ ಕುಳಿತುಕೊಂಡರು. ಅವರ ಕಣ್ಣುಗಳು ಮತ್ತೆ ವೇಣುವಿನ ಮುಖದ ಮೇಲೆಲ್ಲ ಸಂಚರಿಸಿದವು.
"ನಿಮ್ಮನ್ನು ನಾನೆಲ್ಲೋ ನೋಡಿದಿನಿ. ಮುಖ ಪರಿಚಯ ಚೆನ್ನಾಗಿದೆ. ವೆಳ್ಳಯಂಬಲ್‍ನ ಮಾವೇಲಿ (ರೇಷನ್) ಸ್ಟೋರ್ಸ್‍ನಲ್ಲಿ ಪದಾರ್ಥಗಳನ್ನು ತೆಗೆದುಕೊಡುವ ಕೆಲಸದಲ್ಲಿದ್ದೀರಾ? ನಾನು ಮತ್ತು ನನ್ನ ಅಡಿಗೆಯವಳು ಪಾಮೋಲಿನ್ ಆಯಿಲ್ ತಗೊಳೋಣಾಂತ ಬಂದಿದ್ವಿ. ಆಗ ಇವರು ಅಲ್ಲಿ ಕೆಲಸದಲ್ಲಿದ್ದರೂಂತ ನೆನಪು." ಅಕ್ಕ ಹೇಳಿದರು.


"ಅಯ್ಯೋ ಅದು ನಾನಲ್ಲ ಮೇಡಂ...ನಾನು ಮಾವೇಲಿ ಸ್ಟೋರಲ್ಲೇನು ಕೆಲಸದಲ್ಲಿಲ್ಲ. ನಾನು ಬ್ಯಾಂಕ್‍ನಲ್ಲಿ ಕೆಲಸದಲ್ಲಿದ್ದೀನಿ." ವೇಣು ಉದ್ವೇಗದಿಂದ ಹೇಳಿದ.
"ಹಾಗಾದರೆ ನನಗೆ ತಪ್ಪಾಗಿರಬಹುದು. ಆದರೆ ಇದೇ ಬಣ್ಣ. ಇವರಂತೆ ಕುಳ್ಳಗಿನ, ಕಟ್ಟಿಗೆಯಂತ ಸ್ಕೆಲಿಟನ್. ಇವತ್ತೇನು ಬ್ಯಾಂಕ್‍ಗೆ ರಜೆನಾ?" ಅಕ್ಕ ಕೇಳಿದರು.
"ರಜೆಯೇನೂ ಇಲ್ಲ, ನಾನೇ ರಜೆ ತಗೊಂಡೆ. ಒಂದೆರಡು ಮನೆಗಳಿಗೆ ಹೋಗಬೇಕಾಗಿತ್ತು." ಕವಿ ಹೇಳಿದ.
"ಸರಿ ವೇಣು, ನೀವಿನ್ನು ಹೊರಡಿ. ಹೋಗಬೇಕಾದ ಕಡೆಗೆಲ್ಲ ಹೋಗಿ. ನನ್ನ ಅಡಿಗೆ ಕೆಲಸ ಇನ್ನೂ ಮುಗಿದಿಲ್ಲ."
ಕವಿ ತನ್ನ ನೋಟುಪುಸ್ತಕಗಳನ್ನೆಲ್ಲ ಕೈಗೆತ್ತಿಕೊಂಡು ಪ್ರಯಾಣ ಹೊರಟ.


ಇನ್ನು ಹೋಗುವುದಾದರೂ ಎಲ್ಲಿಗೆ? ಪ್ರಶ್ನೆಯನ್ನು ಅವನು ಅವನಲ್ಲೇ ಕೇಳಿಕೊಂಡ.
ಪಡೆದ ರಜೆ ಹಾಳಾಗಿ ಹೋಯಿತು. ಸರಸ್ವತಿ ದೇವಿಯವರನ್ನು ಭೇಟಯಾಗಲು ಸಮಯ ಕೂಡಿ ಬರಲಿಲ್ಲ. ಸುಂದರಿಯಾದ ಶ್ರೀದೇವಿಯ ಸನಿಹವೂ ಯಥೇಚ್ಛವಾಗಿ ಲಭಿಸಲಿಲ್ಲ. ಸ್ವಂತ ಮನೆಗೆ ಹೋದರೆ ಹೇಗೆ? ತಲೆನೋವು, ಜ್ವರ ಎಂದು ಅಭಿನಯಿಸಿದರೆ, ಹಾಸಿಗೆಯಲ್ಲಿ ಸಿಂಬೆ ಸುತ್ತಿ ಮಲಗಲು ಅವಳು ಅನುಮತಿ ನೀಡಿಯೇ ನೀಡುತ್ತಾಳೆ.


ನಡೆದೂ ನಡೆದು ತಾನು ಕೆಲಸ ಮಾಡುತ್ತಿದ್ದ ಆಫೀಸನ್ನು ತಲುಪಿದ.
"ವೇಣು ಸರ್, ಮೇನೆಜರ್ ನಿಮಗೊಂದು ಮೆಮೋ ಕೊಡ್ಲಿಕ್ಕೆ ಹೇಳಿದ್ದಾರೆ. ನೀವು ಸೀಟಿನಲ್ಲೇ ಇರೋದಿಲ್ಲಾಂತ ಮೇನೆಜರ್ ಕೆಂಡಾಮಂಡಲವಾಗಿದ್ದಾರೆ. ರಜೆ ಕೂಡ ತೆಗೆದುಕೊಳ್ಳದೇ ಆಫೀಸಿಗೆ ಬರದೇನೇ ಕವಿಗೋಷ್ಠಿ ಅದೂ ಇದೂಂತ ಹೋಗೊದ್ರಿಂದ ಕೆಲಸ ಕಳ್ಕೊಬೇಕಾಗತ್ತೆ. ಹಾಗಂತ ಮೇನೆಜರ್ ಹೇಳಿದರು.”
ಅರಸಿಕ! ಅಕ್ಷರವೈರಿ!! ಕವಿತೆಯನ್ನು ಆಸ್ವಾದಿಸಲು ಅರಿಯದವನು. ಮೇನೆಜರ್‍ಗೆ ಹಿಡಿ ಶಾಪ ಹಾಕುತ್ತಾ ಮನೆಯತ್ತ ಹೆಜ್ಜೆ ಹಾಕಿದ. ಹೊಟ್ಟೆ ತುಂಬಾ ಮಜ್ಜಿಗೆ ಕುಡೀಬೇಕೂಂತ ಅನಿಸಿತು. ಕರಿಬೇವಿನೆಲೆಯನ್ನು ಹಾಕಿದ ಮಜ್ಜಿಗೆ ತಣ್ಣಗಿರುತ್ತದೆ.
ವೇಣು ಮನೆ ತಲುಪಿದ.


"ಸ್ವಲ್ಪ ಮಜ್ಜಿಗೆ ಕೊಡು..." ವೇಣು ಹೆಂಡತಿಯನ್ನು ಕರೆದು ಹೇಳಿದ.
"ಇದೇನು ಇಷ್ಟೊತ್ತಿಗೆ ಬಂದುಬಿಟ್ಟಿದ್ದೀರಲ್ಲ. ಆಫೀಸ್ ಬೇಗ ಮುಗೀತಾ? ಅಥವಾ ಯಾರಾದ್ರೂ ತೀರಿಕೊಂಡ್ರಾ?" ಹೆಂಡತಿ ಅಚ್ಚರಿಯಿಂದ ಪ್ರಶ್ನಿಸಿದಳು. ಅವಳು ಬೂದಿಯಿಂದ ಹಿತ್ತಾಳೆ ಪಾತ್ರೆಗಳನ್ನು ತಿಕ್ಕಿ ಬೆಳಗುತ್ತಿದ್ದಳು. ಮಧ್ಯಾಹ್ನದ ಊಟಕ್ಕೆ ಗಂಡ ಮನೆಗೆ ಬರಬಹುದೆಂಬ ನಿರೀಕ್ಷೆ ಅವಳಿಗಿರಲಿಲ್ಲ. ಹಿಂದಿನ ದಿನದ ಗಂಜಿಯನ್ನ ಮಾತ್ರವಿತ್ತು. ಆದ್ದರಿಂದ ಅವಳು ಮ್ಲಾನವದನಲಾಗಿದ್ದಳು.
"ಮಧ್ಯಾಹ್ನ ನೀವು ಬರ್ತಿನೀಂತ ಹೇಳಲೇ ಇಲ್ವಲ್ಲ. ಬರ್ತಿನೀಂತ ಹೇಳಿದ್ದಿದ್ದರೆ, ನಾನು ಅಡಿಗೆ ಮಾಡಿ ಇಟ್ಟಿರುತ್ತಿದ್ದೆ. ಈಗ ಇಲ್ಲಿ ನಿನ್ನೆಯ ತಣ್ಣನೆಯ ಗಂಜಿಯನ್ನ ಮಾತ್ರಯಿದೆ. ಸರಿ, ಹಪ್ಪಳ ಮಾಡಿ ಕೊಡ್ತಿನಿ." ಹೆಂಡತಿ ಹೇಳಿದಳು.


"ನನಗೆ ಈಗ ಊಟವೇನೂ ಬೇಡ. ಮಜ್ಜಿಗೆ ಕೊಡು ಸಾಕು." ಆತ ಪಿಸು ನುಡಿದ. ಮಜ್ಜಿಗೆ ಕುಡಿದ ನಂತರ ಅವನು ಹೆಂಡತಿಯನ್ನು ಬಲವಾಗಿ ತಬ್ಬಿಕೊಂಡ. ಬೂದಿ, ಮಜ್ಜಿಗೆ, ಕರಿಬೇವಿನ ಸಮ್ಮಿಶ್ರ ಗಂಧ ಅವಳ ದೇಹದಿಂದ ಹೊರಹೊಮ್ಮುತ್ತಿತ್ತು.
"ನಾನು ನಿನಗೆ ತುಂಬಾ ನೋವು ಕೊಟ್ಟುಬಿಟ್ಟೆ ಅಲ್ವಾ?"
ಅವನು ಹೇಳಿದ.


"ಏಕೆ ಹೀಗೆಲ್ಲ ಮಾತನಾಡ್ತಿದ್ದೀರಿ? ಬಿಸಿಲಿನಲ್ಲಿ ನಡೆದು ತಲೆನೋವು ಬಂತಾ? ಅಥವಾ ಬೇರೇನಾದರೂ ಕಾಯಿಲೆ ಇದೆಯಾ? ನನಗೆ ನೀವು ಮಾತಾಡೋದು ಕೇಳಿದರೆ ಭಯವಾಗ್ತಿದೆ." ಅವಳು ಗದ್ಗದದಿಂದ ನುಡಿದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT