ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದಯ ಪ್ರಕಾಶ್ ಅವರ ಕಥೆ: ನೀರ್ಗುದುರೆ

Last Updated 25 ಫೆಬ್ರುವರಿ 2023, 19:30 IST
ಅಕ್ಷರ ಗಾತ್ರ

ದಾದಾರ ಕಣ್ಣುಗಳಲ್ಲಿ ಅಂಧಕಾರವೇ ಇರಬೇಕು. ಅವರು ಯಾವುದೇ ವಸ್ತುವನ್ನು ನೋಡುತ್ತಿರುವಂತೆ ತೋರುತ್ತಿರಲಿಲ್ಲ. ಅವರಿಗೆ ಎಲ್ಲಾ ವಸ್ತುಗಳು ಪಾರದರ್ಶಕವಾದಂತಿತ್ತು...ಅವರು ತಮ್ಮ ಅಸ್ತಿತ್ವವನ್ನು ಕಳೆದುಕೊಂಡಂತೆ...ಅವರ ಕಣ್ಣುಗಳು ಅವರನ್ನೂ ದಾಟಿ ಹೋಗಿ ಎಲ್ಲೋ ಸಿಲುಕಿಕೊಂಡತ್ತಿತ್ತು. ಇಂಥ ಅಂಧಕಾರದಲ್ಲಿ ಅನೇಕಾನೇಕ ಬಣ್ಣಗಳ ಬಲೂನುಗಳು ತೇಲುತ್ತವೆ...ರೇಖೆಗಳು ಮತ್ತು ಆಕೃತಿಗಳು ರಚನೆಗೊಳ್ಳುತ್ತವೆ. ನಂತರ ಎಲ್ಲವೂ ನಾಶವಾಗುತ್ತವೆ.

ಧ್ವನಿಗಳು ಸಹ ಹಾಗೆಯೇ ಕ್ಷಣ ಭಂಗುರ. ಅಕಸ್ಮಾತ್ ರಾತ್ರಿ ವೇಳೆಯಲ್ಲಿ ತನ್ನ ನೆರಳಿನಲ್ಲಿ ಅಡಗಿದ ಮರಗಳು ಅಥವಾ ಪೊದೆಗಳಲ್ಲಿಂದ ಒಮ್ಮೆಲೆ ಜೀರುಂಡೆ ಹುಳುಗಳು ಝೇಂಕರಿಸಿದಂತೆ ಅಥವಾ ದೂರದಿಂದ, ಬೆಟ್ಟವೊಂದರ ತುದಿಯಿಂದ ತುಂಬಾ ಸೂಕ್ಷ್ಮ ಮತ್ತು ಅಸ್ಪಷ್ಟ ಧ್ವನಿ ಕರೆದಂತೆ, ‘ದಾದಾ...ಓ...ಓ...ಓ...ದಾದಾ’. ನಂತರ ಅಕಸ್ಮಾತ್ ಎಲ್ಲವೂ ಸ್ತಬ್ಧ. ನಿಶ್ಶಬ್ದ.
ಪ್ರಜ್ಞೆ ಬಂದ ನಂತರವೂ ಅವರು ಪ್ರಜ್ಞೆಯಲ್ಲಿರಲಿಲ್ಲ. ಒಂದು ವೇಳೆ ಅವರು ಪ್ರಜ್ಞಾವಸ್ಥೆಯಲ್ಲಿದ್ದಿದ್ದರೆ, ಬೆಳಿಗ್ಗೆ ಒಂಭತ್ತು ಗಂಟೆಯ ಉಲ್ಲಾಸದಿಂದ ತುಂಬಿದ ಕೋಣೆಯ ಒಂದೊಂದು ವಸ್ತುವಿನ ಬಗ್ಗೆ ಅವರ ಕುತೂಹಲ ಸ್ಥಿರವಾಗುತ್ತಿತ್ತು; ಅವರು ಮತ್ತೆ ಈ ಜಗತ್ತಿಗೆ ಮರಳಿ ಬಂದ ಘಟನೆಗೆ ಆಶ್ಚರ್ಯ ಪಡುತ್ತಿದ್ದರು. ರಾತ್ರಿ ಸುಮಾರು ಎಂಟು ಗಂಟೆಗೆ, ಇನ್ನು ಅವರು ಮರಳಿ ಬರುವುದಿಲ್ಲವೆಂದು ನಾನು ಯೋಚಿಸಿದ್ದೆ.

ಆದರೆ ದಾದಾ ಮತ್ತೆ ಬಂದಿದ್ದರು. ಅವರ ಬಲ ಗಲ್ಲದ ಕೆಳ ಭಾಗದಿಂದ ಕಿವಿಯ ಹಿಂದಿನ ಕತ್ತಿನವರೆಗಿನ ಮಾಂಸವನ್ನು ಆಪರೇಶನ್ ಮಾಡಿ ತೆಗೆಯಲಾಗಿತ್ತು. ಅಲ್ಲೊಂದು ಭಯಾನಕ ತೆರೆದುಕೊಂಡ ಗಾಯವಿತ್ತು. ಅವರ ಬಲ ದವಡೆಯನ್ನು ಸಹ ತೆಗೆಯಲಾಗಿತ್ತು; ಹೀಗಾಗಿ ಅವರ ಮುಖದ ಅನುಪಾತ ಬಿಗಡಾಯಿಸಿತ್ತು. ಅವರನ್ನು ನೋಡಿದಾಗ, ತುಂಬಾ ಅವಸರದಲ್ಲಿ ಅವರ ಮುಖವನ್ನು ಅರ್ಧ ಭಾಗ ಮಾಡಲಾಗಿದೆ ಎಂದು ತೋರುತ್ತಿತ್ತು. ತುಟಿಗಳು ವಕ್ರವಾಗಿ ನೇತಾಡುತ್ತಿದ್ದವು. ಮೂಗು ಒಂದು ಭಾಗಕ್ಕೆ ಬಾಗಿದಂತೆ ಕಾಣ ಬರುತ್ತಿತ್ತು. ಬಲ ಕಣ್ಣು ಮುಚ್ಚಿದ್ದಾಗ್ಯೂ, ಮುಚ್ಚಿರುವುದಕ್ಕಾಗಿಯೇ ಪ್ರಯತ್ನಿಸುವಂತೆ ತೋರುತ್ತಿತ್ತು.

ನಾನು ದಾದಾಗೆ ರಕ್ತವನ್ನು ಕೊಟ್ಟಿದ್ದೆ. ನನ್ನ ವಯಸ್ಸು ಹದಿನೆಂಟಾಗಿದ್ದು, ಆಲೂ-ರೊಟ್ಟಿ ತಿಂದಿದ್ದರಿಂದಾಗಿ ಶರೀರದಲ್ಲಿ ರಕ್ತವಿತ್ತು. ಆ ರಕ್ತದಲ್ಲಿ ಗೋಡಂಬಿ, ಒಣದ್ರಾಕ್ಷಿ ಅಥವಾ ನಾನಾ ರೀತಿಯ ಹಣ್ಣುಗಳ ಸತ್ವವಿರಲಿಲ್ಲ; ಈ ರಕ್ತದ ಪ್ರಮಾಣ ಆರನೂರು ಸೀಸೀ ಇತ್ತು. ನಾನು ನನ್ನ ಬಗ್ಗೆ ದಯೆ ಮತ್ತು ಗರ್ವವನ್ನು ಅನುಭವಿಸುತ್ತಿದ್ದೆ. ದಾದಾಗೆ ಪ್ರಜ್ಞೆ ಬರುತ್ತಲೇ ನಾನು ಕಿರುಚಿ, ‘ನೋಡಿ, ಯಾರನ್ನು ನೀವು ಅಲೆಮಾರಿ, ಕೆಲಸಕ್ಕೆ ಬಾರದವ, ತುಚ್ಛ ಮತ್ತು ಸ್ವೇಚ್ಛಾಚಾರಿ ಎಂದು ತಿಳಿದಿದ್ದರೋ, ಅವನೆಷ್ಟು ಪ್ರಾಮಾಣಿಕ ಮತ್ತು ತಂದೆಯ ಸೇವಕ’ ಎಂಬುದನ್ನು ಹೇಳಲು ಕಾಯುತ್ತಿದ್ದೆ. ಹರೀಶ್ ದಾ ಮತ್ತು ಅಮರೇಂದ್ರ ಆ ಸಮಯದಲ್ಲಿ ಜಾರಿಕೊಂಡಿದ್ದರು. ಕಡೆಗೆ ನಾನೇ ಉಪಯೋಗಕ್ಕೆ ಬಂದೆನಲ್ಲ?

ಆದರೆ ದಾದಾ ನನ್ನ ಗುರುತು ಹಿಡಿಯುತ್ತಲೇ ಇರಲಿಲ್ಲ. ಅವರು ನನ್ನನ್ನೇ ನೋಡುತ್ತಿದ್ದರೂ, ಅವರು ದೂರದ ಒಂದು ಹಳೆಯ ದೇವಸ್ಥಾನದ ಗೋಪುರದ ಮೇಲೆ ಹಾರಾಡುತ್ತಿದ್ದ ಹದ್ದನ್ನು ನೋಡುತ್ತಿದ್ದಾರೆ ಅಥವಾ ಜಾತ್ರೆಯ ‘ಗಿರುಗಟೆ’ಯಲ್ಲಿ ಓಡುವ ಮರದ ಕುದುರೆಯಲ್ಲಿ ಒಂದು ಕುದುರೆಯನ್ನು ನೋಡಲು ತುಂಬಾ ಪ್ರಯತ್ನಿಸುತ್ತಿದ್ದಾರೆ...ಅಥವಾ ನದಿಯ ತೀರದಲ್ಲಿ ಚಾಚಿದ್ದ ದೂರ-ದೂರದವರೆಗಿನ ಮರಳಿನಲ್ಲಿ ಹಾರುವ ಹಳೆಯ ಪತ್ರಿಕೆಯ ತುಂಡನ್ನು ದುರುಗುಟ್ಟಿ ನೋಡುತ್ತಾ ಅದರಲ್ಲಿನ ಸುದ್ದಿಯೊಂದನ್ನು ಓದುವಲ್ಲಿ ಮಗ್ನರಾಗಿದ್ದಾರೆಂದು ತೋರುತ್ತಿತ್ತು. ನನಗೆ ಅಳು ಬಂತು. ಗಂಟಲಿನವರೆಗೆ ಬಂದ ಅಳು ಅಲ್ಲಿಯೇ ಸಿಕ್ಕಿಕೊಂಡಿತು.

ದಾದಾರೆದುರು ನಾನಿದ್ದೆ. ಚಿಕ್ಕಪ್ಪ ಕೂತಿದ್ದರು. ದಾದಾ ಇಬ್ಬರನ್ನೂ ಗುರುತಿಸಲಿಲ್ಲ. ಗುರುತಿಸುವ ಪ್ರಯತ್ನ ಸಹ ಕಾಣ ಬರಲಿಲ್ಲ. ಪ್ರತಿಯಾಗಿ ಡ್ರೆಸ್ಸಿಂಗ್ ಮಾಡಲು ಬಂದ ನರ್ಸನ್ನು ಅವರು ತುಂಬಾ ಹೊತ್ತು ನೋಡುತ್ತಿದ್ದರು.

ಚಿಕ್ಕಪ್ಪ ಎರಡು ಬಾರಿ ಗಟ್ಟಿಯಾಗಿ ಹೇಳಿದರು, ‘ಅಣ್ಣಾ, ಪುಟ್ಟನನ್ನು ನೋಡು. ಅವನು ಅಳುತ್ತಿದ್ದಾನೆ, ನಿನಗೆ ಕೇಳಿಸುವುದೇ?’ ಆದರೆ ದಾದಾ ನಿರ್ಲಿಪ್ತರಾಗಿದ್ದರು. ರಾತ್ರಿ ಹತ್ತು ಗಂಟೆಗೆ ದಾದಾ ನೀರು ಕೇಳಿದರು. ಅಷ್ಟರಲ್ಲಿ ನಾನು ಸಂಬಂಧಿಕರಿಗೆ, ಆಪರೇಷನ್ ಯಶಸ್ವಿಯಾಯಿತು ಎಂದು ತಂತಿಯನ್ನು ಕಳುಹಿಸಿದ್ದೆ.

ಅವರು ಮುಗುಳ್ನಕ್ಕರು....ಕಡೆಗಂತೂ ನಾನು ಬಂದೆನಲ್ಲ, ನೀವಂತೂ ನನ್ನನ್ನು ಬೀಳ್ಕೊಟ್ಟಿದ್ದಿರಿ ಎಂಬ ಭಾವನೆ ಆ ಮುಗುಳ್ನಗೆಯಲ್ಲಿತ್ತು. ಅವರು ಆಗ ನಿಜವಾಗಿಯೂ ಎಲ್ಲೋ ದೂರದಿಂದ ಬರುತ್ತಿರುವಂತೆ ಕಾಣುತ್ತಿದ್ದರು. ಅನೇಕ ಮೆಟ್ಟಿಲುಗಳನ್ನು ಒಂದೇ ಉಸಿರಿಗೆ ಹತ್ತಿದ್ದರಿಂದ ಆಯಾಸ ಮತ್ತು ಗೆಲುವಿನಲ್ಲಿ ಅವರ ಮುಖ ಹೊಳೆಯುವಂತೆ ತೋರುತ್ತಿತ್ತು. ಅವರು ಮೇಲುಸಿರು ಬಿಡುತ್ತಿದ್ದರು.

ಆದರೂ ಅವರ ಮುಖವನ್ನು ತುಂಬಾ ಹೊತ್ತು ನೋಡುವ ಧೈರ್ಯ ನನ್ನಿಂದ ಪದೇ-ಪದೇ ತಪ್ಪಿ ಹೋಗುತ್ತಿತ್ತು. ಅವರು ಬೆಳಿಗ್ಗೆ ಎದ್ದು ಸಾಬೂನಿನ ನೊರೆಯನ್ನು ಹಚ್ಚಿಕೊಂಡು, ಅದರ ಮೇಲೆ ಶೇವಿಂಗ್ ಬ್ರಶ್ ಸವರುವುದನ್ನು ಅದೆಷ್ಟೋ ವರ್ಷಗಳಿಂದ ನೋಡುತ್ತಿದ್ದೆ. ಅವರು ಗಡ್ಡವನ್ನು ಹೆರೆದುಕೊಳ್ಳುವಾಗ ಆಟವಾಡುತ್ತಿದ್ದರು. ಬ್ರಶ್ ಅತ್ತ-ಇತ್ತ ಅಡಿಸಿದಾಗ ಸಾಬೂನಿನ ನೊರೆಗಳು ಸುತ್ತಮುತ್ತ ಮತ್ತು ಕೋಣೆಯಲ್ಲಿ ಹಾರುತ್ತಿದ್ದವು. ಮತ್ತೊಮ್ಮೆ ರೇಜರ್‌ನಿಂದ ಶೇವ್ ಮಾಡಿಕೊಂಡು, ಟವಲ್ಲಿನಿಂದ ಒರಸಿಕೊಂಡಾಗ ಅಜ್ಜನ ಬಿಳಿಯ ಸ್ವಚ್ಛ ಮುಖ ಕಾಣಿಸುತ್ತಿತ್ತು.

ಈಗ ಅಲ್ಲೊಂದು ಆಕಾರವಿಲ್ಲದ ಮಾಂಸದ ಮುದ್ದೆಯಿತ್ತು. ಅದು ಕ್ಯಾನ್ಸರ್ ಆಗಿದ್ದು, ಅದರ ಆಪರೇಷನ್ ಆಗಿತ್ತು. ಕಾರ್ಸಿನೋಮಾ ಆನ್ ಚೀಕ್ ಅಂದರೆ ಗಲ್ಲದೊಳಗೆ ದವಡೆಗಳಿಂದ ಹಾದು ಗಂಟಲಿನ ಸ್ವರ ಯಂತ್ರದವರೆಗೆ ಹಬ್ಬಿದ ರಾಜ ರೋಗ. ಜಗತ್ತಿನ ವಿಜ್ಞಾನಿಗಳ ಬಳಿ ಇದಕ್ಕೆ ಯಾವುದೇ ಔಷಧವಿಲ್ಲ.

ನಾನು ಓಡಿ ನರ್ಸ್ ಬಳಿಗೆ ಹೋದೆ. ದಾದಾ ನೀರು ಕೇಳುತ್ತಿದ್ದರು. ನರ್ಸ್ ಕೇರಳದವಳಿರಬೇಕು. ಅವಳು ಕಪ್ಪಗಿದ್ದು, ಸುಂದರಿಯಾಗಿದ್ದಳು. ಅಲ್ಲದೆ ಸಣಕಲಾಗಿದ್ದಳು. ಸಣಕಲು ನರ್ಸ್ಗಳನ್ನು ನೋಡಿದಾಗ, ಅವರು ಸಿಡಿಸಿಡಿ ರೇಗುತ್ತಾರೆ ಎಂದು ನನಗೆ ಅನ್ನಿಸುತ್ತದೆ. ಅವರು ಪ್ರೀತಿಸಿದರೂ, ಪ್ರಿಯತಮನನ್ನು ಗಿಳಿಯಾಗಿಟ್ಟುಕೊಂಡು ಸಾಕಬಹುದೇನೋ.

ನರ್ಸ್ ಕಳವಳಗೊಂಡಳು. ಅವಳು ವೈದ್ಯರನ್ನು ಕೇಳಲು ಚೇಂಬರ್‌ಗೆ ಹೋದಳು. ಅವಳು ಮರಳಿ ಬಂದಾಗ ಅವಳ ಕೈಯಲ್ಲಿ ಒಂದು ರಬ್ಬರ್ ಟ್ಯೂಬ್ ಇತ್ತು. ಫೀಡಿಂಗ್ ಟ್ಯೂಬ್. ಫೀಡಿಂಗ್ ಟ್ಯೂಬನ್ನು ದಾದಾರ ಮೂಗಿನೊಳಗೆ, ಅದರ ತುದಿ ಆಹಾರದ ನಳಿಕೆಯನ್ನು ಸ್ಪರ್ಶಿಸುವಂತೆ ತೂರಿಸಲಾಯಿತು. ಈ ಟ್ಯೂಬಿನಿಂದಲೇ ಸೀರಿಂಜಿನಿಂದ ನೀರು ಕೊಡಬೇಕಾಗುವುದು. ಹಸಿವಾದರೆ ಲಿಕ್ವಿಡ್ ಫುಡ್, ದ್ರವ ಆಹಾರ ಕೊಡಬೇಕು. ಅಂದರೆ ಹಾಲು, ಹಣ್ಣಿನ ರಸ, ಪ್ರೊಟೀನೆಕ್ಸ್, ಹಸಿ ಮೊಟ್ಟೆ ಮತ್ತು ಮೋಸುಂಬೆ ರಸ.

ದಾದಾ ಈ ರೀತಿಯಲ್ಲಿ ಅಸಹಾಯಕರಾಗಿದ್ದರು.

ನಾವು ಚಿಕ್ಕವರಿದ್ದಾಗ, ದಾದಾ ತಮ್ಮ ಬಾಯಿಯಲ್ಲಿ ಎರಡೂ ಕೈಗಳ ಒಂದೊಂದು ಬೆರಳನ್ನು ಸಿಗಿಸಿ, ತುಟಿಗಳನ್ನು ಎರಡೂ ಗಲ್ಲದವರೆಗೆ ಎಳೆದುಕೊಳ್ಳುತ್ತಿದ್ದರು. ಆಗ ಅವರ ದವಡೆ ನೀರ್ಗುದುರೆಯಂತಾಗುತ್ತಿತ್ತು. ಅವರು ‘ಫಾಊ ಫಾಊ...ಫಾಊ...ಫಾಊ...’ ಎಂದಾಗ ನಮಗೆ ಮಜವೆನಿಸುತ್ತಿತ್ತು. ನಮಗೆ ಭಯವೂ ಆಗುತ್ತಿತ್ತು. ನಾವು ಅಂಗಲಾಚುತ್ತಾ ನಗುತ್ತಿದ್ದೆವು. ಆಗ ದಾದಾ, ಇನ್ನೊಂದು ಕ್ಷಣಕ್ಕೆ ನೀರ್ಗುದುರೆಯಾಗಿ ನಮ್ಮನ್ನು ಹಿಡಿದುಕೊಳ್ಳುತ್ತಾರೆಂದು ಅನ್ನಿಸುತ್ತಿತ್ತು. ಅದು ತುಂಬಾ ನಾಜೂಕಿನ ಸಮಯವಾಗುತ್ತಿತ್ತು. ಆದರೆ ದಾದಾ ಪ್ರತಿ ಸಲವೂ ನೀರ್ಗುದುರೆಯಾಗುವುದಕ್ಕೆ ಹೋಗಿ, ಎಲ್ಲೋ ಎಡವುತ್ತಿದ್ದರು; ಆಗ ನಮ್ಮ ಉಸಿರು ಸಹಜ ಸ್ಥಿತಿಗೆ ಮರಳಿ ಬರುತ್ತಿತ್ತು. ಹೀಗೆ ಅವರು ಎಡವಿದಾಗ...ಅವರ ಕೈಯಿಂದ ಭಯಾನಕ ಅವಕಾಶ ತಪ್ಪಿದಾಗ, ನಾವು ಗೆಲ್ಲುತ್ತಿದ್ದೆವು. ಆಗ ನಾವು ನಗುತ್ತಿದ್ದೆವು. ನಗುತ್ತಾ ಅವರನ್ನು ಸೋಲಿಸುತ್ತಿದ್ದೆವು.

ದಾದಾ ಒಮ್ಮೊಮ್ಮೆ ಆಂಜನೇಯನಾಗುತ್ತಿದ್ದರು. ಎರಡೂ ಗಲ್ಲಗಳಲ್ಲಿ ಗಾಳಿಯನ್ನು ತುಂಬಿಕೊಂಡು, ಗಲ್ಲಗಳನ್ನು ಉಬ್ಬಿಸಿಕೊಳ್ಳುತ್ತಿದ್ದರು...ನಂತರ ಎರಡೈ ಅಂಗೈಗಳಿಂದ ಒಮ್ಮೆಲೆ, ಎರಡೂ ಗಲ್ಲಗಳ ಮೇಲೆ ಹೊಡೆದುಕೊಳ್ಳುತ್ತಿದ್ದರು; ಅಂದರೆ ಚಪ್ಪಾಳೆ ತಟ್ಟುವಾಗ ಕೈಗಳ ಮಧ್ಯೆ ತಮ್ಮ ಮುಖವನ್ನು ಇಟ್ಟಂತೆ ಹೊಡೆದುಕೊಳ್ಳುತ್ತಿದ್ದರು. ಗಾಳಿ ‘ಫುರ್ರರ್ರ್-ಫುರರ್ರ್’ ಎಂದು ಸದ್ದು ಮಾಡುತ್ತಾ ಹೊರ ಬರುತ್ತಿತ್ತು. ಆಂಜನೇಯ ಮತ್ತೆ ದಾದಾ ಆಗಿ ಬದಲಾಗುತ್ತಿದ್ದರು.

ಈಗ ಎರಡೂ ಆಟಗಳು ಸಾಧ್ಯವಿರಲಿಲ್ಲ. ಯಾಕೆಂದರೆ ನಾವು ದೊಡ್ಡವರಾಗಿದ್ದೆವು; ಕಡೇ ಪಕ್ಷ ನಾನಂತೂ, ಹದಿನೆಂಟಕ್ಕೆ ಕಾಲಿಟ್ಟಿದ್ದಾಗ್ಯೂ ದೊಡ್ಡವನಾಗಿರಲಿಲ್ಲ. ದಾದಾರ ಮುಖವನ್ನು ವೈದ್ಯರು ಸೀಳಿದ್ದರು. ಅವರ ತುಟಿಗಳು ಬೇರ್ಪಟ್ಟು ಓಲಾಡುತ್ತಿದ್ದವು. ಬಲ ಗಲ್ಲ ಮತ್ತು ಬಲ ದವಡೆ ಇರಲೇ ಇಲ್ಲ.

ನಾನು ಮತ್ತೆ ಅಳಬೇಕೆಂದು ಅನ್ನಿಸುತ್ತದೆ. ಅದೆಷ್ಟೋ ವರ್ಷಗಳಿಂದ ತಡೆದುಕೊಂಡಿದ್ದ ರೋದನವನ್ನು ಒಮ್ಮೆಲೆ ಹೊರಹಾಕಬೇಕೆಂದು ಅನ್ನಿಸುತ್ತದೆ. ನಾನು ಬಿರುಗಾಳಿಯ ಮಧ್ಯೆ ಮರವಾಗಿ, ಎಲೆಗಳನ್ನೆಲ್ಲಾ ಜಾಡಿಸಿ ಅಳಬೇಕೆಂದು ಅನ್ನಿಸುತ್ತದೆ. ದಾದಾ-ದಾದಾ ಎಂದು ಹೇಳುತ್ತಾ ಅಳಬೇಕೆಂದು ಅನ್ನಿಸುತ್ತದೆ. ಆದರೆ ಅಳುವನ್ನು ಕೇಳಲು ಇಲ್ಲಿ ಯಾರೂ ಇಲ್ಲ. ಯಾಕೆಂದರೆ ದಾದಾ ಮತ್ತು ನನ್ನ ನಡುವೆ ನಡೆಯುತ್ತಿದ್ದ ಆಟಕ್ಕೆ ಬೇರೆ ಪಾರ್ಟನರ್ ಇಲ್ಲ, ಬೇರೆ ಜೊತೆಗಾರರಿಲ್ಲ, ಬೇರೆ ಸಾಕ್ಷಿದಾರರಿಲ್ಲ. ಚಿಕ್ಕಪ್ಪ, ಹರೀಶ್ ದಾ ಮತ್ತು ಅಮರೇಂದ್ರರಿಗೆ ತಮ್ಮದೇ ಆದ ಜಗತ್ತಿದೆ. ಅಲ್ಲಿ ದಾದಾ ಇದ್ದರೂ, ಅವರೊಬ್ಬರು ರೋಗಗ್ರಸ್ತ ಮನುಷ್ಯರಂತಿರುತ್ತಾರೆ. ಈ ದಿನದ ದಾದಾ ತುಂಬಾ ಅಸಹಾಯಕರಾಗಿದ್ದು, ಅವರ ಮೂಗಿನೊಳಗೆ ಫೀಡಿಂಗ್ ಟ್ಯೂಬ್ ತೂರಲಾಗಿದೆ, ಅರ್ಧ ಮುಖ ಮಾಯವಾಗಿದೆ. ಇವರಿಂದ ಮಾತನಾಡಲು ಸಾಧ್ಯವಿಲ್ಲ.

ಅಥವಾ ದಾದಾ ನಶೆಯ ಅಮಲಿನಲ್ಲಿರಬೇಕು. ಜಮಖಾನ ಮತ್ತು ನೆಲದ ನಡುವೆ, ತಮ್ಮ ವಾಂತಿಯ ನಡುವೆ ಪ್ರಜ್ಞೆ ತಪ್ಪಿ ಬಿದ್ದಿರಬೇಕು. ಸಾಲದಲ್ಲಿ ಇವರು ಮುಳುಗಿರಬೇಕು. ಹಗಲು-ರಾತ್ರಿ ಹುಚ್ಚುತನದಲ್ಲಿ ಅಡುಗೆ ಪಾತ್ರೆಗಳನ್ನು ಎಸೆಯುತ್ತಾ, ಮಾತನಾಡದೆ ಜಗಳಕ್ಕಿಳಿಯುವ, ನಿಂದನೆಯಲ್ಲಿ ತೊಡಗಿರುವ, ಬಾಟ್ಲಿಗಳ ನಡುವೆ ತಮ್ಮ ಶರೀರ, ಮಿದುಳು, ಹೊಲ, ಆಸ್ತಿ ಎಲ್ಲವನ್ನೂ ಸ್ವಾಹಾ ಮಾಡುತ್ತಾ ದಾದಾ ಮಲಗಿರಬೇಕು.

ದಾದಾ ನೀರ್ಗುದುರೆಯಾಗಿದ್ದರು ಎಂಬುದು ಹರೀಶ್ ದಾ ಮತ್ತು ಅಮರೇಂದ್ರರಿಗೆ ತಿಳಿದಿಲ್ಲವೇ? ಅವರು ಆಂಜನೇಯನಾಗಿದ್ದರು ಎಂಬುದು ಗೊತ್ತಿಲ್ಲವೇ? ದಾದಾ ಅದೊಂದು ದಿನ ಚಪ್ಪರಕ್ಕೆ ನೇತುಹಾಕಿದ್ದ ಚಿಣ್ಣಿಯನ್ನು ತೆಗೆದುಕೊಳ್ಳಲು ಮಂಗನಂತೆ ಹೆಂಚಿನ ಮೇಲೆ ಹತ್ತಿ ಹೋಗಿದ್ದರು. ಕೆಳಗೆ ನಿಂತ ಅಮ್ಮ, ‘ಹೆಂಚುಗಳನ್ನು ಒಡೆದು ಈ ವರ್ಷದ ಮಳೆಗಾಲದಲ್ಲಿ ಮನೆ ಕೊಚ್ಚಿಕೊಂಡು ಹೋಗುವಂತೆ ಮಾಡುತ್ತೀರ; ಇದೇನಿದು?’ ಎಂದರು. ದಾದಾ ಹೆಂಚುಗಳ ಮೇಲೆ ನಿಂತು, ‘ಹೂಪ್...ಹೂಪ್’ ಎನ್ನುತ್ತಿದ್ದರು. ನಾವು ಚಪ್ಪಾಳೆ ತಟ್ಟಿ ನಮ್ಮ ಖುಷಿಯನ್ನು ವ್ಯಕ್ತಪಡಿಸುತ್ತಾ ಅಮ್ಮನನ್ನು ರೇಗಿಸುತ್ತಿದ್ದೆವು, ಅಮ್ಮ ರೇಗುತ್ತಲೂ ಇದ್ದರು, ಇದನ್ನು ನೋಡಿ ದಾದಾ ಇನ್ನೂ ಮುಂದುವರೆಯುತ್ತಿದ್ದರು. ಆಗಲೇ ನಾವು, ದಾದಾಗೆ ಬಾಲ ಬೆಳೆದು, ಅವರ ಬಾಯಿ ಮಂಗನಂತೆ ಕಪ್ಪಾಯಿತು; ಅವರು ಹಾರುತ್ತಾ-ನೆಗೆಯುತ್ತಾ ಇನ್ನೊಂದು ಬದಿಯಿಂದ ಇಳಿದ ದೃಶ್ಯವನ್ನು ನೋಡಿದೆವು. ಅದು ನಮ್ಮ ಕಣ್ಣುಗಳೆದುರು ದಾದಾ ಮಾಡಿದ್ದ ಅತಿ ಯಶಸ್ಸಿನ ಚಮತ್ಕಾರದ ಕೈಚಳಕವಾಗಿತ್ತು. ಅಲ್ಲದೆ ಅವರು ಇಸ್ಪೀಟೆಲೆಗಳಲ್ಲಿ ಜಾದೂ ಪ್ರದರ್ಶಿಸುತ್ತಿದ್ದರು. ಗಟ್ಟಿ ಕಾಳನ್ನು ಹಲ್ಲಿನಿಂದ ಎರಡು ಭಾಗಗಳಲ್ಲಿ ಸೀಳಿ, ಮತ್ತೆ ಅದನ್ನು ‘ಛೂ ಮಂತರ್’ ಎನ್ನುತ್ತಾ ಕಾಳಿನ ಭಾಗಗಳನ್ನು ಸೇರಿಸುತ್ತಿದ್ದರು.

ನಾನು ಹೊರಗಿನಿಂದ ಮರಳಿ ಬಂದಾಗ ಕೋಣೆಯಲ್ಲಿ ಔಷಧಿಗಳ ದಟ್ಟ ವಾಸನೆಯಿತ್ತು. ಕೋಣೆಯಲ್ಲಿ ಚಿಕ್ಕಪ್ಪ ಮತ್ತು ಹರೀಶ್ ದಾ ಕೂತಿದ್ದು, ಗಟ್ಟಿಯಾಗಿ ಮಾತನಾಡುತ್ತಿದ್ದರು...ಬಹುಶಃ ದಾದಾರ ಮನಸ್ಸಿನಲ್ಲಿ ಸಂತಸ ಮೂಡಿಸಲು ಹರಟೆ ಹೊಡೆಯುತ್ತಿದ್ದರು. ಈ ವರ್ಷ ಒಳ್ಳೆ ಬೆಳೆಯಾಗುವುದು. ಮಳೆ ಚೆನ್ನಾಗಿ ಬರುತ್ತಿದೆ...ಸೀಲಿಂಗ್‌ನಲ್ಲಿ ತಿರುಗುವ ಫ್ಯಾನಿನಿಂದ ಚೂರು-ಚೂರಾಗಿ ಈ ಮಾತುಗಳು ಚಿಂದಿಯಂತೆ ನೆಲದ ಮೇಲೆ ಬೀಳುತ್ತಿದ್ದವು. ಅವುಗಳನ್ನು ಯಾರೂ ನೋಡುತ್ತಿರಲಿಲ್ಲ. ಸತ್ತ ಬಾವಲಿಗಳಂತೆ ಅವು ಒಂದು ರಾಶಿಯಾಗಿ ಜಮಾವಣೆಯಾಗುತ್ತಿದ್ದವು. ದಾದಾ ಈ ಮಾತುಗಳನ್ನು ಕೇಳುತ್ತಿಲ್ಲವೆಂದು ನನಗೆ ತಿಳಿದಿತ್ತು. ಬಹುಶಃ ಚಿಕ್ಕಪ್ಪ ಮತ್ತು ಹರೀಶ್ ದಾ ದಾದಾರ ಸಂತಸಕ್ಕಾಗಿ ಪ್ರಯತ್ನಿಸುತ್ತಾ ತಮ್ಮ ಮಾತುಕತೆಗಳಲ್ಲಿಯೇ ಎಲ್ಲೋ ಸಿಲುಕಿಕೊಂಡಿದ್ದಾರೆ. ದಾದಾ ಆ ಮಾತುಕತೆಯಲ್ಲಿ ಯಾವ ದಿಕ್ಕಿನಿಂದಲೂ ನುಸುಳಲು ಸಾಧ್ಯವಿರಲಿಲ್ಲ. ದಾದಾರನ್ನು ಇಬ್ಬರೂ ಮರೆತಿದ್ದರು.

ನಾನು ಕೋಣೆಗೆ ಬಂದಾಗ ಮೆಲ್ಲನೆ ಮೆಲ್ಲನೆ ನಕ್ಕರು ಎಂದು ಅನ್ನಿಸಿತು. ಆ ಮುಖದಲ್ಲಿ ಊಹಿಸುವಂಥದ್ದು ಯಾವುದೂ ಉಳಿದಿರಲಿಲ್ಲ.

ಆದರೆ ಅವರು ನಕ್ಕಿದ್ದು ನಿಜ, ಯಾಕೆಂದರೆ ನಾನು ಉತ್ತರದಲ್ಲಿ ಮುಗುಳ್ನಗುತ್ತಿದ್ದೇನೆ ಎಂದು ನನಗೆ ಅನ್ನಿಸಿತು. ದಾದಾ ಕೈ ಎತ್ತಿ ಬೆರಳುಗಳನ್ನು ಆಡಿಸಿದರು. ಅಂದರೆ ‘ಸಮೀಪಕ್ಕೆ ಬಾ’ ಎಂದಿದ್ದರು. ನಾನು ಹೋದಾಗ ಅವರು ನನ್ನ ಹಣೆಯ ಮೇಲೆ ಬೆರಳುಗಳನ್ನಿಟ್ಟರು. ಹುಬ್ಬುಗಳನ್ನು ಸ್ಪರ್ಶಿಸಿದರು. ಬೆರಳುಗಳು ತುಂಬಾ ತಣ್ಣಗಿದ್ದವು, ಅವು ಮುದುಡಿಕೊಂಡಿದ್ದವು. ಅವರು ನನ್ನ ಗಲ್ಲಗಳನ್ನು ತಟ್ಟಿದರು, ಅವರ ಕಣ್ಣುಗಳ ಅಂಚಿನಲ್ಲಿ ಕಣ್ಣೀರು ಒತ್ತಿ ಬಂತು.

ಓಹ್? ಪುಟ್ಟಾ ನಿಮಗೆ ರಕ್ತವನ್ನು ಕೊಟ್ಟಿದ್ದಾನೆ, ನೀವು ಆಪರೇಷನ್ ಥಿಯೇಟರ್‌ನ ಮೇಜಿನ ಬಳಿಗೆ ಹೋಗಿದ್ದಿರಿ, ಅಲ್ಲಿಂದ ನಿಮ್ಮನ್ನು ಮರಳಿ ಕರೆತರುವ ಮೆಟ್ಟಿಲುಗಳನ್ನು ಹುಡುಗನ ರಕ್ತ ತಯಾರಿಸಿದೆ ಎಂದು ಆ ಕೇರಳದ ನರ್ಸ್ ಹೇಳಿರಬೇಕೆಂದು ಅನ್ನಿಸಿತು.

ನಾನೊಂದು ದೊಡ್ಡ ಕೆಲಸವನ್ನು ಮಾಡಿದ್ದಕ್ಕೆ ಜಂಭ ನನ್ನೊಳಗೆ ಮೂಡಿತು. ಜೊತೆಗೆ ಆಳವಾದ ಆತ್ಮೀಯತೆ ನನ್ನೊಳಗೆ ಜನ್ಮತಾಳುತ್ತಿತ್ತು; ಅದರಲ್ಲಿ ನನ್ನ ದಾದಾರ ಬಗ್ಗೆ ತುಂಬು ಪ್ರೀತಿ ಕಲೆತಿತ್ತು. ನಾನು ದಾದಾರಿಗಾಗಿ ಏನು ಬೇಕಾದರೂ ಮಾಡಬಲ್ಲೆನೆಂದು ಅನ್ನಿಸಿತು. ದಾದಾ ನನ್ನ ಅತಿ ಸಮೀಪದಲ್ಲಿದ್ದರು. ಇದು ಅವರಿಗೇ ಗೊತ್ತಿತ್ತು.

ನನಗೆ ಆ ಕಪ್ಪು ಬಣ್ಣದ ನರ್ಸ್ ತುಂಬಾ ಇಷ್ಟವಾಗಲಾರಂಭಿಸಿದಳು. ಅವಳೇ ದಾದಾಗೆ ಹೇಳಿರಬೇಕು. ಅಮರೇಂದ್ರ, ಚಿಕ್ಕಪ್ಪ, ಹರೀಶ್ ದಾ ನನ್ನ ಶತ್ರುಗಳಾಗಿದ್ದರು. ಹರೀಶ್ ದಾಗೆ, ದಾದಾಗೆ ಆಪರೇಷನ್ ಸಮಯದಲ್ಲಿ ರಕ್ತದ ಆವಶ್ಯಕತೆಯಿದೆ ಎಂಬುದು ತಿಳಿದಿದ್ದರೆ, ಬಹುಶಃ ಅವರು ತಮ್ಮ ರಕ್ತವನ್ನು ಕೊಡುತ್ತಿದ್ದರು ಎಂದು ನನಗೆ ಅನ್ನಿಸುತ್ತದೆ. ಆದರೆ ಆಗ ನಾನು ಈ ಹೋರಾಟದಲ್ಲಿ ಸೋಲುತ್ತಿದ್ದೆ. ನಂತರ ಅವರು ನನ್ನ ಜೀವಮಾನವಿಡಿ ಶತ್ರುಗಳಾಗುತ್ತಿದ್ದರು. ಸದ್ಯ, ಡಾಕ್ಟರ್ ಮದಾನ್ ಆಪರೇಷನ್ ಥಿಯೇಟರ್‌ನಿಂದ ಹೊರಗೆ ಭಯದಿಂದ ಬಂದಾಗ ನಾನೇ ಭೇಟಿಯಾದದ್ದು ಒಳ್ಳೆಯದಾಯಿತು. ಇಲ್ಲದಿದ್ದಲ್ಲಿ ಎಲ್ಲವೂ ಹಾಳಾಗುತ್ತಿತ್ತು. ಅಥವಾ ಹರೀಶ್ ದಾ, ಚಿಕ್ಕಪ್ಪ ಮತ್ತು ಅಮರೇಂದ್ರರಿಗೆ, ದಾದಾಗೆ ರಕ್ತದ ಆವಶ್ಯಕತೆವುಂಟಾಗುವುದು ಎಂಬುದು ತಿಳಿದಿದ್ದರೆ, ಬಹುಶಃ ಅವರು ಆಪರೇಷನ್ ವೇಳೆಯಲ್ಲಿ ಊಟ ಮಾಡುವ ನೆಪವೊಡ್ಡಿ ಜಾರಿಕೊಳ್ಳುತ್ತಿದ್ದರು.

ದಾದಾರ ಕೈ ಇನ್ನೂ ನನ್ನ ಹೆಗಲ ಮೇಲಿತ್ತು. ಆ ಸ್ಪರ್ಶದಲ್ಲಿ ಆಸರೆಯ ಯಾಚನೆ ಮತ್ತು ಕೃತಜ್ಞತೆ ಮತ್ತು ಬೆಚ್ಚನೆಯ ಆತ್ಮೀಯತೆಯಿತ್ತು. ಸ್ನೇಹವಿತ್ತು. ‘ದಾದಾ, ಇದೇನೂ ಅಲ್ಲವೇ ಅಲ್ಲ. ನಾನು ನನ್ನ ಗಲ್ಲ, ದವಡೆ, ತುಟಿಗಳು, ಕಣ್ಣುಗಳು ಎಲ್ಲವನ್ನೂ ನಿಮಗೆ ಕೊಡಬಲ್ಲೆ. ಡಾಕ್ಟರ್ ಮದಾನ್, ದಾದಾ ಮತ್ತೊಮ್ಮೆ ದಾದಾ ಆಗಬಲ್ಲರು, ಅವರ ಆಕಾರ ಸರಿಯಾಗಬಹುದು, ಅವರು ನೀರ್ಗುದುರೆಯಾಗಿ ‘ಫಾಊ-ಫಾಊ’ ಎನ್ನಬಹುದು ಎಂದರೆ ಸಾಕು, ಎಲ್ಲವನ್ನೂ ನಿಮಗೆ ಕೊಡಬಲ್ಲೆ’ ಎಂದು ನಾನು ದಾದಾರ ಕೈಯನ್ನು ನನ್ನ ಬಲಗೈಯ ಅಂಗೈಯಿಂದ ಒತ್ತಿದೆ. ನನ್ನ ರಕ್ತ ತೀವ್ರ ಗತಿಯಿಂದ ಹರಿಯುತ್ತಿತ್ತು; ಅದರ ಒಂದೊಂದು ಹನಿ ದಾದಾರಿಗಾಗಿತ್ತು. ನಾನು ಮಂಗನಂತೆ ‘ಹಪ್-ಹಪ್’ ಎಂದಿರಬೇಕು; ಯಾಕೆಂದರೆ ದಾದಾ ಮಾತ್ರವಲ್ಲ, ಕೋಣೆಯಲ್ಲಿದ್ದ ಚಿಕ್ಕಪ್ಪ, ಹರೀಶ್ ದಾ, ಅಮರೇಂದ್ರ ಮತ್ತು ಕೇರಳದ ಆ ನರ್ಸ್ ಎಲ್ಲರೂ ನಗುತ್ತಿದ್ದರು.

ಆದರೆ ನಾನು ಒಳಗಿನಿಂದ ಕಂಪಿಸಿದ್ದೆ. ದಾದಾರ ನಗು, ನಗುವಾಗಿರಲಿಲ್ಲ. ಒಂದು ಪಿಶಾಚಿ ಅಥವಾ ಮೊಸಳೆಯ ದವಡಿ ಅಲ್ಲಿ ವ್ಯಾಪಿಸಿತ್ತು; ಅದು ತನ್ನ ಗಂಟಲಿನಿಂದ ‘ಘುರ್ರ್-ಘುರ್ರ್’ ಎಂದು ಧ್ವನಿಗೈಯುತ್ತಿತ್ತು.

ಅಂದು ನಾನು ಹೀರೋ ಆಗಿದ್ದೆ. ನಾನು ಚದುರಂಗದಾಟದಲ್ಲಿ ಅಮರೇಂದ್ರ ಮತ್ತು ಹರೀಶ್ ದಾರನ್ನು ಅನೇಕ ಬಾರಿ ಸೋಲಿಸಿದ್ದೆ. ಇಂದು ಮತ್ತೆ ನಾನು ಆಟಕ್ಕಿಳಿದೆ. ಇದು ಮೂಲತಃ ಸೋಲಾಗಿತ್ತು. ಎಲ್ಲರ ಕಾಯಿಗಳು ಉರುಳಿದ್ದವು. ನನ್ನ ಬಾದಶಾಹರು ನನ್ನ ದಾದಾ ಆಗಿದ್ದರು. ನಾನು ಅವರನ್ನು ಒಂದು ಮಜಬೂತಾದ ಕೋಟೆಯನ್ನು ಕಟ್ಟಿ ಅವರನ್ನು ಉಳಿಸಿದ್ದೆ.

ಡ್ರೆಸಿಂಗ್ ಮಾಡಿದ ನಂತರ ಮತ್ತು ಚಾರ್ಟ್ನಲ್ಲಿ ಏನೋ ದಾಖಲಿಸಿದ ನಂತರ ನರ್ಸ್ ಹೊರಟಾಗ, ಅವಳು ನನ್ನನ್ನು ಕರೆದಳು. ಅವಳು ಡ್ಯೂಟಿ ರೂಮಿನಲ್ಲಿ ನನಗೆ ಬೆಣ್ಣೆ ಹಚ್ಚಿದ ಎರಡು ಸ್ಲೈಸ್, ಒಂದು ಬೆಂದ ಮೊಟ್ಟೆ ಮತ್ತು ಒಂದು ಗ್ಲಾಸ್ ಸ್ಟ್ರಾಂಗ್‌ ಕಾಫಿಯನ್ನು ಕೊಟ್ಟಳು. ನಂತರ, ‘ಇನ್ನೂ ನೀನು ಒಂದೆರಡು ವಾರ ಚೆನ್ನಾಗಿ ತಿನ್ನಬೇಕು, ಇಲ್ಲದಿದ್ದರೆ ನಿಶ್ಶಕ್ತಿಯಾಗುತ್ತದೆ’ ಎಂದಳು. ನಂತರ ಅವಳು ಮನೆಯ ಬಗ್ಗೆ ವಿಚಾರಿಸಿದಳು, ಕಾಲೇಜಿನ ಬಗ್ಗೆ ವಿಚಾರಿಸಿದಳು. ನಾನು ಸದಾ ಫರ್ಸ್ಟ್ ಬರುತ್ತೇನೆ ಎಂದೆ.

ನನಗೆ ಹದಿನೆಂಟು ವರ್ಷವಾಗಿತ್ತು. ಪಣವನ್ನು ನಾನು ಗೆದ್ದಿದ್ದೆ. ದಾದಾರ ಆಪರೇಷನ್ ಯಶಸ್ವಿಯಾಗಿತ್ತು, ಅವರು ಕಂಟಕದಿಂದ ಪಾರಾಗಿದ್ದರು. ನಾನು ಖುಷಿಗೊಂಡಿದ್ದೆ, ತುಂಬಾ ಖುಷಿಗೊಂಡಿದ್ದೆ. ಆ ನರ್ಸ್ ಕೇರಳದವಳಾಗಿರಲಿಲ್ಲ, ಆಂಧ್ರದವಳಾಗಿದ್ದು, ಅವಳ ಹೆಸರು ಡಿ.ನೀಲಮ್ಮಾ ರಾಜುಲು ಎಂದಾಗಿತ್ತು. ಅವಳು ನನಗೆ ತುಂಬಾ ಇಷ್ಟವಾಗುತ್ತಿದ್ದಳು. ನಾನು ಅವಳನ್ನು ಪ್ರೀತಿಸಲು ಆರಂಭಿಸಿದ್ದೆ. ನಾನು ಸ್ಲೈಸ್‌ ತಿನ್ನುವಾಗ ಮನಸ್ಸಿನಲ್ಲಿ, ದಾದಾರ ಆರೋಗ್ಯ ಸುಧಾರಿಸುತ್ತಲೇ ನಾನು ಈ ನರ್ಸನ್ನು ಮದುವೆಯಾಗುತ್ತೇನೆ ಎಂದು ಪ್ರತಿಜ್ಞೆ ಮಾಡಿದ್ದೆ.

ಹಾಲಿಗೆ ಪ್ರೊಟೀನೆಕ್ಸ್, ಗ್ಲೂಕೋಸ್ ಸೇರಿಸಿ ಅದನ್ನು ಸಿರಿಂಜಿನಲ್ಲಿ ತುಂಬಿ, ಫೀಡಿಂಗ್ ಟ್ಯೂಬ್ ಮೂಲಕ ಅಜ್ಜನ ಹೊಟ್ಟೆಗೆ ತಲುಪಿಸಲಾಗುತ್ತಿತ್ತು. ಇದೇ ಅವರ ಆಹಾರವಾಗಿತ್ತು. ದಾದಾಗೆ ಅನ್ನವನ್ನು ಉಣ್ಣುವ ತೀವ್ರ ಬಯಕೆ ಆಗುತ್ತಿತ್ತೇನೋ. ಬೇಳೆ, ಅನ್ನ, ಮಾವಿನ ಉಪ್ಪಿನಕಾಯಿ, ಸ್ವಲ್ಪ ತುಪ್ಪ ಮತ್ತು ಬೆಂಡೆಕಾಯಿಯ ಕೂರ್ಮ, ಮೀನು ಮತ್ತು ಸುಟ್ಟ ಹಪ್ಪಳವನ್ನೂ ತಿನ್ನುವ ಬಯಕೆಯಾಗುತ್ತಿತ್ತು. ಆದರೆ ದಾದಾ ತುಂಬಾ ಅಸಹಾಯಕರಾಗಿದ್ದರು. ಅವರ ಅಸಹಾಯಕತನ ಗಂಭೀರವಾಗಿತ್ತು. ಅವರಿಂದ ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ. ಅವರ ತುಟಿಗಳಿಂದ ಪದೇ-ಪದೇ ಜೊಲ್ಲು ಹೊರ ಸೂಸುತ್ತಿತ್ತು. ಒಂದು ಟವಲ್ಲನ್ನು ಅವರ ಬಳಿ ಇಡಲಾಗಿದ್ದು, ಅದರಿಂದ ಜೊಲ್ಲನ್ನು ಒರೆಸಿಕೊಳ್ಳುತ್ತಿದ್ದರು. ತುಟಿಗಳು ಸಡಿಲಗೊಂಡು ಓಲಾಡುತ್ತಿದ್ದವು, ಹೀಗಾಗಿ ಅವು ಜೊಲ್ಲನ್ನು ತಡೆಯಲು ಸಾಧ್ಯವಿರಲಿಲ್ಲ.

ರಾತ್ರಿಯಾಗಿತ್ತು. ಕರೆಂಟ್ ಇರಲಿಲ್ಲ. ಇಡೀ ಆಸ್ಪತ್ರೆ ಅಂಧಕಾರದಲ್ಲಿ ಮುಳುಗಿತ್ತು. ಫ್ಯಾನ್‌ಗಳು ಸ್ತಬ್ಧವಾಗಿದ್ದವು. ರೋಗಿಗಳ ರೋಗಗ್ರಸ್ತ ಬೆವರು ಮತ್ತು ಔಷಧಿಗಳು ಮತ್ತು ಪಟ್ಟಿಗಳ ವಾಸನೆ ಕಲೆತಿದ್ದವು. ಹರೀಶ್ ದಾ, ಅಮರೇಂದ್ರ, ಚಿಕ್ಕಪ್ಪ ಹೊರಗಿನ ವರಾಂಡದಲ್ಲಿ ನಿದ್ರಿಸುತ್ತಿದ್ದರು. ದಾದಾ ಎಚ್ಚೆತ್ತಿದ್ದರು. ನಾನು ಕೋಣೆಯಲ್ಲಿ ಮೇಣದಬತ್ತಿಯನ್ನು ಹೊತ್ತಿಸಿಟ್ಟು, ಸ್ಟೂಲ್ ಮೇಲೆ ಕೂತಿದ್ದೆ. ನಾನು ತುಂಬಾ ಹೊತ್ತಿನಿಂದ ದಾದಾರನ್ನು ನೋಡಿರಲಿಲ್ಲ.

ನಾನು ದಾದಾರನ್ನು ನೋಡಿ ಮತ್ತೆ ಕಲ್ಲಿನಂತೆ ಜಡವಾದೆ, ಆ ಕಲ್ಲಿನೊಳಗೆ ಭಯದ ಕಂಪನ ದೌಡಾಯಿಸುತ್ತಿರುವಂತಿತ್ತು. ಮೇಣದ ಬತ್ತಿಯ ಹಳದಿ ಬೆಳಕಿನಲ್ಲಿ ದಾದಾರ ಮುಖ ಭಯಾನಕ ಮತ್ತು ಅಪರಿಚಿತರಂತೆ ತೋರುತ್ತಿತ್ತು. ಈ ಮನುಷ್ಯನನ್ನು ನಾನೆಂದೂ ನೋಡಲಿಲ್ಲ. ಇವನು ನಿಜವಾಗಿಯೂ ಮನುಷ್ಯನೇ? ಯಾರು ನೀನು? ನಾನು ಕಿರುಚಲು ಬಯಸುತ್ತಿದ್ದೆ. ಒಂದು ವೇಳೆ ನಾನೀಗಲೇ ದಾದಾಗೆ ಕನ್ನಡಿಯನ್ನು ತೋರಿಸಿದರೆ? ಅವರು ಸಹಿಸಿಕೊಳ್ಳುವರೇ? ನಾನು ಹೆದರಿದ್ದೆ. ಇವರು ದಾದಾ ಆಗಿರಲಿಲ್ಲ. ನೀರ್ಗುದುರೆ, ಆಂಜನೇಯ, ರಾಕ್ಷಸ, ಪಿಶಾಚಿ, ಮೊಸಳೆ ಎಲ್ಲವೂ ಒಟ್ಟಿಗೆ ಎದುರಿನ ಮಂಚದ ಮೇಲೆ, ಒಂದು ಶರೀರವಾಗಿ ಮಲಗಿದಂತಿತ್ತು. ನಮ್ಮ ಬಾಲ್ಯದ ದಿನಗಳಲ್ಲಿ, ಅವರು ನೀರ್ಗುದುರೆಯಾಗುತ್ತಾ, ಸಮಯ ನೋಡಿ ಎಡವುತ್ತಿದ್ದರು, ಆಗ ನಮಗೆ ಗೆಲುವಾಗುತ್ತಿತ್ತು, ಆದರೆ ಇಂದು ಹೀಗಾಗಲು ದಾದಾ ಬಿಡಲಿಲ್ಲ ಎಂದು ಅನ್ನಿಸುತ್ತದೆ. ಆದರೆ ಇದು ಅವರ ಸೋಲೂ ಆಗಿತ್ತು. ದೊಡ್ಡ ಸೋಲಾಗಿತ್ತು. ಮೇಣದ ಬತ್ತಿಯನ್ನೆತ್ತಿಕೊಂಡು ಅವರ ತಲೆ ಅಂಧಕಾರದಲ್ಲಿ ಮುಳುಗುವಂತೆ ಇಡಲೇ ಎಂದು ಯೋಚಿಸಿದೆ.

ಆದರೆ ಅವರು ನನ್ನನ್ನು ಕರೆಯುತ್ತಿದ್ದರು. ನಾನು ಕಿರುಚಬಹುದಿತ್ತು. ಆದರೆ ಆ ಭಯಾನಕ ಮುಖದಲ್ಲಿ ಅದೆಷ್ಟು ಯಾತನೆ, ಅಸಹಾಯಕತೆ, ಕರುಣೆ ಇತ್ತೆಂದರೆ, ನಾನು ಒಳಗಿನಿಂದ ಕರಗಿದೆ. ದಾದಾರ ಕಣ್ಣುಗಳಿಂದ ಇಣಿಕಿ ನೋಡುತ್ತಿದ್ದ ಅಸಹಾಯಕತೆ ಅಸಹನೀಯವಾಗಿತ್ತು. ಫುಟ್‌ಪಾಥಿನಲ್ಲಿ ಅರ್ಧ ಮುಖ ಕರಗಿಹೋಗಿದ್ದು, ಭಿಕ್ಷೆ ಬೇಡುತ್ತಿದ್ದ ಓರ್ವ ಭಯಾನಕ ಕುಷ್ಠರೋಗಿಯನ್ನು ನಾನು ನೋಡಿದ್ದೆ. ದಾದಾರ ಕಣ್ಣುಗಳು ಅವನಿಗಿಂತಲೂ ಹೆಚ್ಚು ಭಯಾನಕ, ಆದರೆ ದಯನೀಯವಾಗಿದ್ದವು. ನಾನೆದ್ದು ಹೊರಟೆ. ದಾದಾ ಬಹು ಕಷ್ಟದಿಂದ ತಮ್ಮ ಎಡ ಅಂಗೈಯಲ್ಲಿ ಬಲಗೈಯ ಉಂಗುರವನ್ನು ಇಟ್ಟು, ಅದನ್ನು ಉಜ್ಜಿದರು. ನಾನು ಗಟ್ಟಿಯಾಗಿ, ‘ಏನು?’ ಇಂಥ ಪರಿಸ್ಥಿತಿಯಲ್ಲಿ? ಎಂದೆ. ಅವರ ಕಣ್ಣುಗಳಲ್ಲಿ ಯಾಚನೆ ಮತ್ತೂ ದಟ್ಟವಾಗುತ್ತಿತ್ತು. ಅವರು ನನ್ನಲ್ಲಿ ಭಿಕ್ಷೆಯನ್ನು ಯಾಚಿಸುತ್ತಿದ್ದರು. ದಾದಾ ಗಟ್ಟಿಮುಟ್ಟಾದ ವ್ಯಕ್ತಿಗಳಾಗಿದ್ದರು. ಅವರ ಶರೀರ ಮಜಬೂತಾಗಿತ್ತು. ಮನೆಯಲ್ಲಷ್ಟೇ ಅಲ್ಲ, ಮನೆಯ ಹೊರಗೂ ಅವರ ದರ್ಪವನ್ನು ಕಾಣಬಹುದಿತ್ತು. ದಾದಾರ ಮುಖದಲ್ಲಿ ಇಂಥ ದೈನ್ಯತೆಯನ್ನು ಈ ಮೊದಲು ನಾನು ನೋಡಿರಲಿಲ್ಲ.

ಮೇಣದ ಬತ್ತಿಯ ಹಳದಿ ಮತ್ತು ಕಂಪಿಸುವ ಬೆಳಕಿನಲ್ಲಿ, ಒಂದು ಭಯಾನಕ ಮುಖದಿಂದ ಇಣಿಕಿ ನೋಡುವಂಥ ದೈನ್ಯತೆ. ಇವು ದಾದಾರ ದೈನ್ಯತೆಯ ಕಣ್ಣುಗಳಾಗಿದ್ದವು. ದಾದಾ ನನ್ನ ತಂದೆಯಾಗಿದ್ದರು. ಆದರೆ ಈ ಮುಖ ಮತ್ತು ಈ ಕಣ್ಣುಗಳು ನನಗೆ ಅಪರಿಚಿತವಾಗಿದ್ದವು.

ನಾನು ಆಸ್ಪತ್ರೆಯ ಮಂಚದಲ್ಲಿ ಬಿದ್ದಿದ್ದ ಅವರ ಮುಂಡವನ್ನು ನೋಡಿದೆ. ಅದರ ಮೇಲೆ ಶ್ವೇತ ರಗ್ಗಿತ್ತು. ಅವರ ಕೈ ಆಪರೇಷನ್ ಆದ ನಂತರ ರಕ್ತದ ಕೊರತೆಯಿಂದ ಅಥವಾ ದೀರ್ಘ ಕಾಯಿಲೆಯಿಂದ ಹಳದಿಯಾಗಿತ್ತು. ಕೈಗಳಲ್ಲಿ ನೀಲಿ ಧಮನಿಗಳ ಜಾಲಗಳು ಮೂಡಿದ್ದವು, ಇವುಗಳನ್ನು ಕಡಿಮೆ ಬೆಳಕಿನಲ್ಲೂ ನಾನು ನೋಡುತ್ತಿದ್ದೆ. ಅವರ ಉಗುರುಗಳು ಬೆಳೆದಿದ್ದವು, ಆ ಉಗುರುಗಳಲ್ಲಿ ಕೊಳೆ ಸೇರಿಕೊಂಡಿತ್ತು.

ದಾದಾ ಮತ್ತೊಮ್ಮೆ ಹಾಗೆಯೇ ಮಾಡಿದರು. ನಾನು ನಿಜವಾಗಿಯೂ ರೋದಿಸಲು ಬಯಸುತ್ತಿದ್ದೆ. ಎದ್ದು ಹೊರ ಬಂದೆ. ಚಿಕ್ಕಪ್ಪನ ಮೂಗು ಶಬ್ದ ಮಾಡುತ್ತಿತ್ತು. ಹರೀಶ್ ದಾ ರೇಡಿಯೊ ಕೇಳುತ್ತಾ ನಿದ್ರೆಗೆ ವಶವಾಗಿದ್ದರು. ತುಂಬಾ ಮಂದ ಧ್ವನಿಯಲ್ಲಿ ರೇಡಿಯೊ ಈಗಲೂ ಏನೋ ಬಿತ್ತರಿಸುತ್ತಿತ್ತು. ನಾನು ಅದನ್ನು ಆಫ್ ಮಾಡಿದೆ. ಚಿಕ್ಕಪ್ಪನ ಚೀಲದಿಂದ ತಂಬಾಕು-ಸುಣ್ಣ ತೆಗೆದುಕೊಂಡು ಹೊಸಕಿದೆ, ನಂತರ ದಾದಾರ ಸಮೀಪಕ್ಕೆ ಹೋದೆ.

ದಾದಾ ಒಂದು ಚಿಟಿಕೆ ತಂಬಾಕನ್ನು ಬಾಯಿಗೆ ಹಾಕಿಕೊಂಡರು- ಅದನ್ನು ಬಾಯಿ ಎನ್ನುವುದಾದರೆ! ಜೊಲ್ಲು ಸುರಿಸುವುದು ಸ್ವಲ್ಪ ಹೊತ್ತು ನಿಂತಿತು. ಅವರು ಸಂತುಷ್ಟರಾದರು, ದೀರ್ಘ ಒತ್ತಡದಿಂದ ನೆಮ್ಮದಿ ಸಿಕ್ಕಿದಂತಾಯಿತು. ಈಗ ಅವರು ನನ್ನನ್ನು ನೋಡುತ್ತಿರಲಿಲ್ಲ. ದೈನ್ಯತೆ ಕಣ್ಮರೆಯಾಗಿತ್ತು. ಈಗ ಅವರು ಮತ್ತೊಮ್ಮೆ ಓರ್ವ ಅಸಹಾಯಕ ವ್ಯಕ್ತಿಗಳಾಗಿದ್ದರು, ನಿರ್ಲಿಪ್ತರಾಗಿದ್ದರು. ನಾನು ಮೇಣದ ಬತ್ತಿಯ ಜಾಗವನ್ನು ಬದಲಿಸಿದೆ. ದಾದಾರ ಮುಖ ಸರಿಯಾಯಿತು. ನಾನು ಅವರನ್ನು ಮರಳಿ ಕರೆತಂದೆ. ದಾದಾ, ನೀವೀಗ ಏನೂ ಆಗಲಾರರಿ. ನೀವೀಗ ದಾದಾ ಮಾತ್ರ. ಇಂಥ ಅಂಧಕಾರದಲ್ಲಿ, ಸರಿಯಾದ ಬೆಳಕು ಇಲ್ಲದಿರುವಾಗ, ಏನಾದರೂ ಜಾದೂ ಮಾಡಿ, ವರಸೆ ಹಾಕಿ, ಇಲ್ಲದಿದ್ದರೆ ಆಟವೆಲ್ಲಾ ಮುಗಿದುಹೋಯಿತೆಂದು ತಿಳಿಯಿರಿ. ಈಗ ಮಂಗ ಆಗಿ. ಬಟ್ಟೆ-ಬರೆಗಳನ್ನು ಹರಿದು ಹಾಕಿ. ಕಳ್ಳು ಕುಡಿದು ಮನೆಯಲ್ಲಿ ಗಲಾಟೆ ಮಾಡಿ. ಲೋಟ-ತಟ್ಟೆಗಳನ್ನು ಎಸೆಯಿರಿ. ನೀವು ಪಕ್ಷಿಗಳನ್ನು ಹಾರಿಸುತ್ತಿದ್ದ ದಿನಗಳು ಕಳೆದು ಹೋದವು...

ನಾನು ನಿದ್ರಿಸಲು ಹೋದಾಗ ತಲೆ ಭಾರವಾಗಿತ್ತು. ತಲೆ ನೋಯುತ್ತಿತ್ತು. ಕಣ್‌ರೆಪ್ಪೆಗಳಿಂದ ಬಿಸಿ-ಬಿಸಿ ಭಾಷ್ಪ ಹೊರಬಂದಂತೆ...ಜೊತೆಗೆ ಕಷ್ಟಕರ ಶರೀರ. ಇಂಥ ಒತ್ತಡದಲ್ಲಿ ಮತ್ತು ವ್ಯಗ್ರತೆಯಲ್ಲಿ ಕನಸುಗಳು ಬೀಳುವುದಿಲ್ಲ, ರಾತ್ರಿಯಿಡೀ ಅಂಧಕಾರವಿರುತ್ತದೆ, ಇದು ದುಃಖದಂತೆ ನಿದ್ರೆ ಮತ್ತು ಎದೆಯಲ್ಲಿ ವ್ಯಾಪಿಸುತ್ತಿದೆ. ಕಪ್ಪು ರಗ್ಗು. ಈ ಕಪ್ಪು, ರಾತ್ರಿಗೆ ಸಂಬಂಧಿಸಿರುತ್ತದೆ ಅಥವಾ ವಯಸ್ಸಿನ ಅಂಧಕಾರದ್ದಾಗಿರುತ್ತದೆ. ಪ್ರಸ್ತುತ ತೀರ್ಮಾನಿಸುವುದು ಕಷ್ಟ. ಬೆಳಿಗ್ಗೆ ಕೋಣೆಯಲ್ಲಿ ಯಾರೂ ಇರದಿದ್ದಾಗ ದಾದಾ ಮುಖವನ್ನು ಮತ್ತೆ ಯಾವುದೇ ಅಪೇಕ್ಷೆ ಇಲ್ಲದವರಂತೆ ಮಾಡಿಕೊಂಡರು. ಅವರ ಕಣ್ಣುಗಳಲ್ಲಿ ಅದೇ ಯಾಚನೆ, ಪ್ರಾರ್ಥನೆ ಮತ್ತು ಭಿಕ್ಷೆ ಯಾಚಿಸುವ ಭಂಗಿಯಿತ್ತು. ಈ ಕೊಂಡಿ ಮುಂದುವರಿಯಿತು. ದಾದಾ ನನ್ನ ದೌರ್ಬಲ್ಯವನ್ನು ಅರಿತಿದ್ದರು. ಒಂಟಿಯಾಗುತ್ತಲೇ ನಾನು ಅವರ ವರಸೆಯ ಕೆಳಗೆ ಬರುತ್ತಿದ್ದೆ. ಅವರು ತಮ್ಮ ಈಗಿನ ಪರಿಸ್ಥಿತಿಯ ಪೂರ್ಣ ಲಾಭವನ್ನು ಪಡೆಯುತ್ತಿದ್ದರು; ಇದು ಅವರಿಗೊಂದು ಅಸ್ತ್ರವಾಗಿತ್ತು. ದಾದಾ ತಮ್ಮ ಜೀವನದಲ್ಲಿ ಇಷ್ಟು ಚತುರರಾಗಿರಲಿಲ್ಲ.
ನಾನು ಅವರನ್ನು ಹೇಗೆ ಅಲ್ಲಗೆಳೆಯಲು ಸಾಧ್ಯವಿತ್ತು? ಅವರಿಗೆ ಎಂದಿನಿಂದ ತಂಬಾಕಿನ ಚಟವಿತ್ತೋ...ಮನೆಯಲ್ಲಿ ಅವರಿಗೆ ನಿತ್ಯ ಬೆಳಿಗ್ಗೆ ಚೀಲವೊಂದು ಸಿದ್ಧವಾಗಿರುತ್ತಿತ್ತು. ದಾದಾ ನನಗೂ ಸಹ ತಂಬಾಕು ತಿನ್ನಬೇಡವೆಂದು ಎಂದೂ ಹೇಳಲಿಲ್ಲ. ಚಳಿಗಾಲದಲ್ಲಿ ಬೋರೆ ಹಣ್ಣು ತಿನ್ನುವುದರಿಂದ ಕೆಮ್ಮು ಬರುತ್ತದೆ ಎಂದು ಅಮ್ಮ ಹೇಳುತ್ತಿದ್ದರು. ದುರದೃಷ್ಟದಿಂದ ಬೋರೆ ಹಣ್ಣುಗಳು ಚಳಿಗಾಲದಲ್ಲಿಯೇ ಮಾಗುತ್ತವೆ. ದಾದಾ ಯಾರಿಗೂ ತಿಳಿಯದಂತೆ ತಮ್ಮ ಜೇಬಿನಿಂದ ಬೋರೆ ಹಣ್ಣುಗಳನ್ನು ತೆಗೆದು ನಮಗೆ ಕೊಡುತ್ತಿದ್ದರು. ಒಂದೆರಡು ಗೊಂಚಲು ತಿನ್ನುತ್ತಲೇ ಅಮ್ಮ ಬೋರೆ ಗೊಂಚಲನ್ನು ಕಸಿದುಕೊಳ್ಳುತ್ತಿದ್ದರು. ಹೊಟ್ಟೆ ಕೆಡುತ್ತದೆ ಎಂದು ಹೇಳುತ್ತಿದ್ದರು. ದಾದಾ ಗೊಂಚಲಿಗೆ ಸಾಕಷ್ಟು ಲಿಂಬು ಮತ್ತು ಉಪ್ಪನ್ನು ಹಚ್ಚಿ ಕೊಡುತ್ತಿದ್ದರು. ದಾದಾ ನಮ್ಮ ಮನಸ್ಸಿನ ಪ್ರತಿಯೊಂದು ವಿಷಯವನ್ನು ತಿಳಿಯುತ್ತಿದ್ದರು, ಅರ್ಥ ಮಾಡಿಕೊಳ್ಳುತ್ತಿದ್ದರು.

ಪತ್ರಗಳು ಬಂದಿದ್ದವು. ಚಿಕ್ಕಪ್ಪ ಮೊದಲು ಓದಿದರು. ಅಂಥ ವಿಷಯಗಳೇನಾದರೂ ಇದ್ದರೆ, ಈಗಲೇ ದಾದಾರಿಗೆ ಹೇಳುವುದು ಬೇಡವೆಂದು ನಾನು ಹೇಳಿದೆ. ಹರೀಶ್ ದಾ, ‘ಇದರಿಂದೇನಾಗುವುದು? ಆಪರೇಷನ್ ಆದ ನಂತರ ಕಡೇ ಪಕ್ಷ ಏಳು ವರ್ಷದವರೆಗೆ ಯಾವುದೇ ಸಮಸ್ಯೆ ಇಲ್ಲ, ದೊಡ್ಡ ಆಪರೇಷನ್ ಆಗಿದೆ. ತಮ್ಮ ಕರಿಯರ್‌ನ ಅತಿ ಯಶಸ್ವಿ ಆಪರೇಷನ್ ಇದು ಎಂದು ಡಾಕ್ಟರ್ ಮದಾನ್ ಹೇಳುತ್ತಿದ್ದರು’ ಎಂದರು.

ನಾನು ಚಿಕ್ಕ ವಯಸ್ಸಿನವನಾಗಿದ್ದೆ, ಇದು ಕಷ್ಟಕರವಾಗಿತ್ತು. ನಾನು ಇಂಥ ಅನೇಕ ವಿಷಯಗಳನ್ನು ಅಗತ್ಯ ಮತ್ತು ಗಂಭೀರವೆಂದು ತಿಳಿಯುತ್ತಿದ್ದೆ, ಇದನ್ನು ಅವರು ನಕ್ಕು ಅಲ್ಲಗೆಳೆಯುತ್ತಿದ್ದರು ಅಥವಾ ಅವರ ಮೇಲೆ ಅದು ಯಾವುದೇ ಪ್ರಭಾವವನ್ನು ಬೀರುತ್ತಿರಲಿಲ್ಲ. ಉದಾಹರಣೆಗೆ, ನಾನು ದಾದಾರಿಗೆ ತಂಬಾಕು ಕೊಡುತ್ತೇನೆ ಎಂದರೆ ಚಿಕ್ಕಪ್ಪ ಮತ್ತು ಹರೀಶ್ ದಾ ಇಬ್ಬರೂ ನನ್ನ ಮೇಲೆ ರೇಗುತ್ತಿದ್ದರು, ನಿಂದಿಸುತ್ತಿದ್ದರು. ಆದರೆ ನಾನು ಅವರಿಗೆ, ದಾದಾರ ಪರಿಸ್ಥಿತಿ ಆಗ ಯಾವ ಹಂತಕ್ಕೆ ಹೋಗಿರುತ್ತದೆ, ಅವರ ಕಣ್ಣುಗಳಲ್ಲಿ ದೈನ್ಯತೆ ಮತ್ತು ಯಾಚನೆ ಇರುತ್ತದೆ, ನಾನು ಆಗ ಅಸಹಾಯಕನಾಗುತ್ತೇನೆ ಎಂದಾಗ ಅವರಿಗೆ ಏನೂ ಅನ್ನಿಸುವುದೇ ಇಲ್ಲ. ಅವರು ದಾದಾರ ಚಿಕಿತ್ಸೆ ಮಾಡಿಸಲು ಬಂದಿದ್ದರು. ವೈದ್ಯರು ಹೇಳಿದಂತೆ ಮಾಡುತ್ತಿದ್ದರು. ದಾದಾ ಅವರಿಗೆ ರೋಗಿ ಮಾತ್ರ ಆಗಿದ್ದರು.

ಚಿಕ್ಕಪ್ಪ ಪತ್ರವನ್ನು ಓದುತ್ತಿದ್ದರು. ಪತ್ರದಲ್ಲಿ ಬರೆಯಲಾಗಿತ್ತು-
‘ದಾದಾ ಮುಖಂಡರಾಗಿದ್ದ ಗ್ರಾಮ ಪಂಚಾಯಿತಿಯನ್ನು ಮತ್ತೆ ರಚಿಸಲಾಗಿದೆ. ಪಂಚಾಯಿತಿ ಅಧಿಕಾರಿಗಳು ಚುನಾವಣೆವರೆಗೆ ಭೀಮರಾಜರನ್ನು ಮುಖಂಡರನ್ನಾಗಿ ಮಾಡಿದ್ದಾರೆ.

‘ಭೀಮರಾಜನೊಂದಿಗೆ ನಮ್ಮ ಹಳೆ ದ್ವೇಷವಿತ್ತು. ಅವನು ತುಂಬಾ ಕಪಟಿಯಾಗಿದ್ದ. ದಾದಾ ತಮ್ಮ ಹಳ್ಳಿಯಿಂದ ಎಂಟು ತಿಂಗಳಿನಿಂದ ಹೊರಗಿದ್ದರು. ಅಲ್ಲಿ ಅವರಿಗೆ ಸಂಬಂಧಿಸಿದ ಎಲ್ಲವನ್ನೂ ನಾಶ ಮಾಡಲಾಗುತ್ತಿತ್ತು. ಎರಡನೆಯ ಗುಂಪು ಬೆಳೆಯುತ್ತಿತ್ತು. ದಾದಾ ಅವರೊಂದಿಗಿದ್ದವರು ಭೀಮರಾಜ ಮತ್ತು ತಿಲಕರಾಜರ ಗುಂಪಿಗೆ ಹೋಗಿದ್ದರು. ಉಳಿದ ಒಂದಿಬ್ಬರು, ದಾದಾ ಈ ಬಾರಿ ಚುನಾವಣೆಯಲ್ಲಿ ಸೋಲುತ್ತಾರೆ ಎಂದು ನಿರಾಶರಾಗಿದ್ದಾರೆ. ಇಡೀ ಹಳ್ಳಿಯೇ ನಾಶವಾಗಿದೆ. ಪಶ್ಚಿಮ ಸಿವಾನಿನ ಹೊಲಗಳಲ್ಲಿ ನೊಗವನ್ನು ಊಳಿಲ್ಲ. ಹಳ್ಳಿಯಲ್ಲಿ ರೈತರ ಹೊಲಗಳಲ್ಲಿ ನಾಲ್ಕು-ನಾಲ್ಕು ಅಂಗುಲ ಧಾನ್ಯದ ಗಿಡಗಳು ಬೆಳೆದಿವೆ. ಆದರೆ ನಮ್ಮಲ್ಲಿ ಬಿತ್ತನೆಯೇ ಆಗಿಲ್ಲ.

‘ಸೊಸೈಟಿ ಕಡೆಯಿಂದ ಸಾಲದ ವಸೂಲಿಗೆ ಪತ್ರಗಳು ಬಂದಿವೆ. ಜವಾನ ಬಂದು ನೋಟೀಸ್ ಕೊಟ್ಟು ಹೋಗಿದ್ದ. ಚಿಕಿತ್ಸೆಯ ಖರ್ಚಿಗೆ ಮೂರು ಹೊಲಗಳನ್ನು ಮಾರಲಾಗಿತ್ತು, ಖರೀದಿದಾರರು ಶಾನುಭೋಗನಿಗೆ ಲಂಚ ಕೊಟ್ಟು, ಪೂರ್ಣ ಹಣ ಚುಕ್ತಾ ಮಾಡದೆ ಪಟ್ಟಾ ಮಾಡಿಸಿಕೊಂಡಿದ್ದಾರೆ. ಈಗ ಅಗತ್ಯವುಂಟಾದರೆ ಹಣ ಹೇಗೆ ಬರುವುದು? ಅಮರೇಂದ್ರ ಮತ್ತೆ ಫೇಲಾದ. ಪುಟ್ಟನ ಕಾಲೇಜು ಪ್ರಾರಂಭವಾಗಲು ಇನ್ನು ಹತ್ತು ದಿನಗಳಿವೆ. ಫೀಸ್ ಕೊಡಬೇಕಾಗುವುದು. ಬಟ್ಟೆ ಹೊಲಿಸಬೇಕಾಗುವುದು. ಪುಸ್ತಕಗಳನ್ನು ಖರೀದಿಸಿ ಕೊಡಬೇಕಾಗುವುದು.’

ಚಿಕ್ಕಪ್ಪ, ಇದನ್ನೆಲ್ಲಾ ನಿಲ್ಲಿಸಿ; ನೀವು ದಾದಾರ ಸ್ವಂತ ತಮ್ಮ, ದಾದಾರ ಮನಸ್ಸಿನ ಮೇಲೆ ಒಂದೊಂದು ಸುದ್ದಿ ಸಹ ಭಾರಿ ಪ್ರಭಾವವನ್ನು ಬೀರುತ್ತಿರಬಹುದು ಎಂದು ನಾನು ಕಿರುಚಿ ಹೇಳಲು ಬಯಸುತ್ತಿದ್ದೆ. ದರ್ಪ, ಗರ್ವ ಇದ್ದಾಗ್ಯೂ ದಾದಾ ಒಳಗಿನಿಂದ ದುರ್ಬಲರಾಗಿದ್ದರು ಎಂಬುದು ನನಗಷ್ಟೇ ಗೊತ್ತಿತ್ತು. ನನಗಷ್ಟೇ ಗೊತ್ತಿತ್ತು ಎಂಬುದೇ ದುಃಖದ ವಿಷಯವಾಗಿತ್ತು. ಬಹುಶಃ ಅಮ್ಮ ಬದುಕಿದ್ದರೆ, ಅವರಿಗೆ ಗೊತ್ತಿರುತ್ತಿತ್ತು.

ಪತ್ರಗಳನ್ನು ಓದಿದ ನಂತರ ಚಿಕ್ಕಪ್ಪ ತಮ್ಮ ಹಿರಿತನದ ಸಲಹೆಗಳನ್ನು, ದಾದಾರಿಗೆ ತಾವು ಮಾತ್ರ ಆತ್ಮೀಯರು ಎಂಬಂತೆ ಕೊಡಲಾರಂಭಿಸಿದರು. ಹರೀಶ್ ದಾ ಮತ್ತು ಅಮರೇಂದ್ರ ಕೂತು ಗಂಭೀರವಾಗಿ ಕೇಳುತ್ತಿದ್ದರು. ದಾದಾ ಮಾತನಾಡಲು ಸಾಧ್ಯವಿರಲಿಲ್ಲ. ಆದರೆ ನೋಡುತ್ತಿದ್ದರು. ದಾದಾ ಅಶಾಂತಿಯಿಂದ ಚಡಪಡಿಸುತ್ತಾ, ಮುಕ್ತಿಯನ್ನು ಪಡೆಯಲು ಬಯಸುತ್ತಿದ್ದರು ಎಂಬುದು ಸ್ಪಷ್ಟವಾಗಿತ್ತು. ಪದೇ-ಪದೇ ಜೊಲ್ಲು ಸುರಿಯುತ್ತಿತ್ತು. ದಾದಾ ಅದನ್ನು ಟವಲ್ಲಿನಿಂದ ಒರೆಸಿಕೊಳ್ಳುವದನ್ನೂ ನಿಲ್ಲಿಸಿದ್ದರು. ಅವರು ನಿರ್ಲಿಪ್ತರಾಗಿದ್ದರು, ನಿಶ್ಚಲರಾಗಿದ್ದರು. ಯಾವ ಮಾರ್ಗ ಉಚಿತವಾಗುವುದು, ಈ ಕಷ್ಟಗಳಿಂದ ಪಾರಾಗುವುದು ಹೇಗೆ, ಯಾವುದಕ್ಕೂ ಚಿಂತಿಸುವ ಅಗತ್ಯವಿಲ್ಲ ಎಂದು ಚಿಕ್ಕಪ್ಪ ತಿಳಿ ಹೇಳುತ್ತಿದ್ದರು. ಹರೀಶ್ ದಾ ಮತ್ತು ಅಮರೇಂದ್ರ ‘ಹೂಂ-ಹೂಂ’ ಎಂದು ಹೂಂಗುಟ್ಟುತ್ತಿದ್ದರು, ನಡು-ನಡುವೆ ತಮ್ಮ ಅಭಿಪ್ರಾಯಗಳನ್ನೂ ತಿಳಿಸುತ್ತಿದ್ದರು. ದಾದಾ ಒಮ್ಮೆ ಚಿಕ್ಕಪ್ಪನೆಡೆಗೆ ನೋಡಿದರು. ಚಿಕ್ಕಪ್ಪ ಇದನ್ನು ಅರ್ಥ ಮಾಡಿಕೊಳ್ಳದಾದರು, ಆದರೆ ಅವರ ನೋಟದಲ್ಲಿ ಜುಗುಪ್ಸೆಯಿತ್ತು ಎಂಬುದನ್ನು ನಾನು ಗಮನಿಸಿದೆ. ‘ನನ್ನನ್ನು ಸ್ವಲ್ಪ ಹೊತ್ತು ಬಿಟ್ಟುಬಿಡಿ’ ಎಂದು ಅವರು ಹೇಳಲು ಬಯಸುತ್ತಿದ್ದರು. ನಾನೇನು ಮಾಡಲೆಂದು ನನಗೆ ತಿಳಿಯುವುದಿಲ್ಲ.

ದಿನವಿಡಿ ದಾದಾ ನಿಶ್ಚಲರಾಗಿದ್ದರು. ಕಣ್ಣುಗಳನ್ನು ಮುಚ್ಚಿಕೊಂಡಿದ್ದರು. ಅವರು ಮೂರ‍್ನಾಲ್ಕು ಬಾರಿ ನನಗೆ ತಂಬಾಕು ಕೊಡುವಂತೆ ಸಂಜ್ಞೆ ಮಾಡಿದರು. ಆದರೆ ಈ ಬಾರಿ ಯಾಚನೆ ಇರಲಿಲ್ಲ. ಅವರು ತಮ್ಮದೇ ಆದ ಲೋಕದಲ್ಲಿ ಕಳೆದು ಹೋಗಿದ್ದರು. ಏನೋ ಯೋಚಿಸುತ್ತಿದ್ದರು. ದಾದಾ ಏನು ಯೋಚಿಸುತ್ತಿದ್ದರು?

‘ನೀವು ಇದರಿಂದ ಮುಕ್ತಿ ಪಡೆಯಲಾರಿರಿ. ಕೆಲವು ದಿನಗಳವರೆಗೆ ಗೊತ್ತಾಗುತ್ತಿರಲಿಲ್ಲ, ಪತ್ರಗಳನ್ನು ಕೇಳುತ್ತಿರಲಿಲ್ಲ. ಸರಿ. ನಂತರ? ನೀವು ಗುಣಮುಖರಾಗುತ್ತಲೇ ಕಷ್ಟಗಳು ನಿಮ್ಮ ಹೆಗಲ ಮೇಲೆ, ತಲೆಯ ಮೇಲೆ, ಮಿದುಳಿನ ನರ-ನಾಡಿಗಳಲ್ಲಿ ಬಂದು-ಬಂದು ಬೀಳುತ್ತವೆ. ನಾನು ನನ್ನ ರಕ್ತವನ್ನು ಇದಕ್ಕಾಗಿಯೇ ನಿಮಗೆ ಕೊಟ್ಟಿದ್ದೇನೆ, ಅದಕ್ಕೇ ನಿಮ್ಮ ಚಿಕಿತ್ಸೆ ನಡೆಯುತ್ತಿದೆ, ಅದಕ್ಕೇ ಚಿಕ್ಕಪ್ಪ, ಹರೀಶ್ ದಾ ಮತ್ತು ಅಮರೇಂದ್ರ ಇಲ್ಲಿ ತಳವೂರಿದ್ದಾರೆ. ನೀವು ಸ್ವಲ್ಪ ಸುಧಾರಿಸಿಕೊಳ್ಳಿ, ನಂತರ ಕಷ್ಟಗಳನ್ನೆಲ್ಲಾ ನಿಮ್ಮ ಮಿದುಳಿನಲ್ಲಿಟ್ಟುಕೊಂಡು ನನಗೆ ಬಿಡುವು ಮಾಡಿ ಕೊಡಿ. ನಾನಿನ್ನೂ ಚಿಕ್ಕ ವಯಸ್ಸಿನವನು. ಯೌವನಕ್ಕೆ ಕಾಲಿಡುತ್ತಿದ್ದೇನೆ. ನಾನು ಆಟವಾಡಲು ಬಯಸುತ್ತೇನೆ. ತುಂಟತನ ಮಾಡಲು ಬಯಸುತ್ತೇನೆ. ನಾನು ಒಳ್ಳೆಯ ದಾಳವನ್ನು ಹಾಕಿದ್ದೇನೆ. ನೀವು ಗುಣಮುಖರಾದರೆ ನಾನು ಗೆಲ್ಲುತ್ತೇನೆ, ನೀವು ಗೆದ್ದರೆ ನಿಮ್ಮ ಜೀವನದಿಂದ ಮುಕ್ತಿಯನ್ನು ಪಡೆಯುವಿರಿ.

‘ದಾದಾ, ಹೀಗೆ ಯೋಚಿಸುತ್ತಿರುವ ನಾನು ನಿಮ್ಮ ಮಗನಲ್ಲ. ನಾವು ನಿಮ್ಮನ್ನು ಗುಣಪಡಿಸುತ್ತಾ ನಮ್ಮ ಹಿತವನ್ನು ಮಾಡಿಕೊಳ್ಳಲು ಬಯಸುತ್ತೇವೆ, ವಾಸ್ತವಿಕತೆ ಇದೇ ಆಗಿದೆ. ನೀವು ಗುಣಮುಖರಾಗದಿದ್ದರೆ, ನಿಮ್ಮ ಸಾಲವನ್ನು ನಾವು ತೀರಿಸುತ್ತೇವೆ, ಪಮ್ಮಿಯ ಮದುವೆಯನ್ನು ನಾವು ಮಾಡುತ್ತೇವೆ, ಹೊಲಗಳ ಜವಾಬ್ದಾರಿಗಳನ್ನು ನಾವು ಹೊರುತ್ತೇವೆ. ನಾವು ಹಳ್ಳಿಯ ಮುಖಂಡರಾಗುವುದು ಹೇಗೆ? ನಾವು ಗೌರವವನ್ನು ಪಡೆಯುವುದು ಹೇಗೆ? ದಾದಾ, ಒಂದು ವಿಷಯವನ್ನು ಹೇಳುತ್ತೇನೆ, ನೀವು ನಮ್ಮನ್ನು ಸೋಲಿಸಲು ಬಯಸುತ್ತೀರಲ್ಲ? ಹಾಗಾದರೆ ಫರ‍್ರನೆ ಹಾರಿ ಹೋಗಿ. ಹಾರಿ ಬಿಡಿ. ಅಥವಾ ಬಾಲ ಬೆಳೆಸಿಕೊಂಡು ಮಂಗನಂತೆ ಈ ಕಿಟಕಿಯಿಂದ ಹಾರಿ, ಆಸ್ಪತ್ರೆಯ ಛಾವಣಿಯಿಂದ ಹಾದು, ಕಾಡಿಗೆ ಹೋಗಿ, ‘ಹೂಪ್-ಹೂಪ್’ ಎಂದು ಹೇಳಿ. ಚಮತ್ಕಾರವಾಗಲಿ. ಎಂಥ ಐಡಿಯಾ?’

ರಾತ್ರಿಯ ವೇಳೆಯಾಗಿತ್ತು. ವೈದ್ಯರಾದ ಮದಾನ್‌ ಅವರು ದಾದಾರನ್ನು ಪರೀಕ್ಷಿಸಿ ಹೊರ ಹೋದಾಗ ಸುಮಾರು ಹತ್ತು ಗಂಟೆಯಾಗಿತ್ತು. ದಾದಾ ನನ್ನನ್ನು ಕರೆಸಿದರು. ಅವರು ತಮ್ಮ ಕಂಪಿಸುವ ಕೈಗಳಿಂದ ಒಂದು ಹಾಳೆಯಲ್ಲಿ ಬರೆದಿದ್ದರು-‘ಒಂದು ಪಾವು ತಗೊಂಡು ಬಾ, ವೈದ್ಯರನ್ನು ಕೇಳಿದ್ದೇನೆ.’ ಓಹ್...ದಾದಾ ಇದಕ್ಕೂ ಇಳಿದರು. ಇದುವರೆಗೆ ತಂಬಾಕನ್ನಷ್ಟೇ ಸೇವಿಸುತ್ತಿದ್ದರು. ಇನ್ನು ಇದೂ ಬೇಕಾಗುವುದು.

ನಾನು ನೀಲಮ್ಮಾಳ ಬಳಿಗೆ ಹೋದೆ. ಅವಳು ತೂಕಡಿಸುತ್ತಿದ್ದಳು. ನನ್ನನ್ನು ನೋಡಿ ಖುಷಿಗೊಂಡಳು. ಈ ರಾತ್ರಿಯಲ್ಲಿ ಡ್ಯೂಟಿ ರೂಮಿನಲ್ಲಿ ನಾನು ಬರುವುದನ್ನು ನೋಡಿ ಅವಳೇನು ಯೋಚಿಸಿದಳೋ? ಅವಳು ಹೇಳಿದಳು, ‘ನಿಮ್ಮ ಫಾದರ್ ಅಡಿಕ್ಟೆಡ್ ಆಗಿದ್ದಾರೆ. ಅದನ್ನು ಸಂಪೂರ್ಣವಾಗಿ ನಿಲ್ಲಿಸಿದರೆ ಹೆಲ್ತ್‌ಗೆ ಹಾನಿಕಾರಕವಾಗಬಹುದು ಎಂದು ಡಾಕ್ಟರ್ ಹೇಳಿದ್ದಾರೆ. ಉತ್ತಮ ವ್ಹಿಸ್ಕಿಯ ಒಂದು ಕ್ವಾರ್ಟರ್ ತಂದು, ಮೂರ‍್ನಾಲ್ಕು ದಿನಗಳವರೆಗೆ ಸ್ವಲ್ಪ-ಸ್ವಲ್ಪವೇ ಸಿರಿಂಜಿನಿಂದ ಕೊಡುತ್ತಿರು. ಫೀಡ್ ಮಾಡುವಂತೆ ಕೊಡು. ಅವರ ಅಪಿಟೇಟ್ ಸರಿಯಾಗಿಲ್ಲ, ಚಿಕಿತ್ಸೆಗೆ ಅವರು ಸರಿಯಾಗಿ ರೆಸ್ಪಾನ್ಸ್ ಮಾಡುತ್ತಿಲ್ಲ.’

ಚಿಕ್ಕಪ್ಪನಿಗೆ ವಿಷಯ ತಿಳಿದಾಗ ಅವರು ರೇಗಿದರು. ನೀನು ನಿನ್ನ ದಾದಾ ಗುಣಮುಖರಾಗಲು ಬಿಡುವುದಿಲ್ಲವೆಂದು ಅನ್ನಿಸುತ್ತದೆ. ಇಂಥ ಪ್ರೀತಿ ಸರಿಯಲ್ಲ. ವೈದ್ಯರೂ ಹೇಳಿದ್ದಾರೆ, ನಾನೂ ಹೇಳಿದ್ದೇನೆ, ಏನೂ ತೊಂದರೆಯಿಲ್ಲ. ಈ ಚಿಕಿತ್ಸೆಯ ನೆಪದಲ್ಲಿ ಕುಡಿಯುವುದು ತಪ್ಪಿತು ಎಂದು ಚಿಕ್ಕಪ್ಪ ಹೇಳಿದರು. ಆದರೆ ಹೀಗಾಗುವುದಿಲ್ಲವೆಂದು ತೋರುತ್ತದೆ. ವಿಧಿ ಹಣೆಯಲ್ಲಿ ಬರೆದಿದ್ದಾನೆ.
ನಾನು ಅದನ್ನು ತೆಗೆದುಕೊಂಡು ಬಂದೆ, ಆಗ ಗಂಟೆ ಹನ್ನೊಂದಾಗಿತ್ತು. ದಾದಾ ಎಚ್ಚೆತ್ತಿದ್ದರು. ಅವರು ಅದನ್ನೇ ಕಾಯುತ್ತಿರುವಂತೆ ಕಂಡಿತು. ನಾನು ಅದನ್ನು ಜೇಬಿನಿಂದ ತೆಗೆದು ಸ್ಟೂಲ್ ಮೇಲಿಟ್ಟಾಗ ದಾದಾ ಅರಳಿದರು. ಅವರು ಸಂಜ್ಞೆ ಮಾಡಿ ಬಾಟಲಿಯನ್ನು ಯಾಚಿಸಿದರು. ಅದನ್ನು ಓದಿದರು. ಅದು ಓಲ್ಡ್ ಮಾಂಕ್ ಆಗಿತ್ತು. ಶೀಶದ ಮೇಲೆ ಪಾದರಿಯನ್ನು ನೋಡಿ ಖುಷಿಗೊಂಡಿರಬೇಕು.
ಅವರು ಮತ್ತೆ ಕುಡಿಸಲು ಸಂಜ್ಞೆ ಮಾಡಿದರು. ನಾನು ಕಂಪಿಸಿದೆ. ವಿಚಿತ್ರ ಜುಗುಪ್ಸೆ ನನ್ನೊಳಗೆ ಹುಟ್ಟಿತು. ದಾದಾ ಸದಾ ನಮ್ಮೆಲ್ಲರ ಕಣ್ಣುಗಳನ್ನು ತಪ್ಪಿಸಿ ಕುಡಿಯುತ್ತಿದ್ದರು. ನಮ್ಮೆದುರಿಗೆ ಎಂದೂ ಕುಡಿಯಲಿಲ್ಲ. ಅವರು ನಶೆಯಲ್ಲಿ ಮೈಮರೆಯುತ್ತಿದ್ದರು, ವಾಂತಿ ಮಾಡಿಕೊಳ್ಳುತ್ತಿದ್ದರು, ಆದರೆ ನಮ್ಮನ್ನು ನೋಡಿ, ‘ಮಗಾ, ಇದು ಕೊನೆಯ ಸಲ. ಇನ್ನು ಬಿಟ್ಟು ಬಿಡುತ್ತೇನೆ’ ಎನ್ನುತ್ತಿದ್ದರು. ಒಮ್ಮೊಮ್ಮೆ ಅವರು ನಶೆಯಲ್ಲಿದ್ದಾಗ, ‘ತಾವು ಕುಡಿದಿದ್ದೇವೆ ಎಂಬುದನ್ನು ನಾವು ತಿಳಿದೆವು’ ಎಂಬುದನ್ನು ಅರ್ಥ ಮಾಡಿಕೊಳ್ಳುತ್ತಿದ್ದರು. ಅಂಥ ಸಮಯದಲ್ಲಿ ಅವರು ರೇಗಿ, ‘ಇಲ್ಲೇನು ಕೆಲಸ. ನನ್ನ ತಲೆಯ ಮೇಲೆ ಹಾರಾಡುತ್ತಿದ್ದೀಯಲ್ಲ, ಹೋಗು, ಹೊರಗೆ ಹೋಗು. ಓದು-ಬರಿ.’ ಎನ್ನುತ್ತಿದ್ದರು.

ಅವರಿಗೆ ನಾನೇ ಖುದ್ದು ಮದ್ಯವನ್ನು ಕುಡಿಸುವ ಸಂದರ್ಭ ಒದಗಿದ್ದು ಇದು ಮೊದಲ ಬಾರಿಯಾಗಿತ್ತು. ಅವರು ತುಂಬಾ ಲಜ್ಜೆಗೆಟ್ಟು ನನಗೆ ಈ ಕೆಲಸವನ್ನು ಮಾಡುವಂತೆ ಹೇಳಿದ್ದರು. ಚಿಕ್ಕಪ್ಪ ಈ ಕೆಲಸವನ್ನು ಮಾಡಿದ್ದರೆ ಉಚಿತವಿತ್ತು. ಅಥವಾ ನೀಲಮ್ಮಾ ಮಾಡಿದ್ದರೆ ಆಗುತ್ತಿತ್ತು. ಅಥವಾ ಡಾಕ್ಟರ್ ಮದಾನ್ ಮಾಡಬಹುದಿತ್ತು. ಅಮಲಿಗೊಳಗಾದ ವ್ಯಕ್ತಿ ತನ್ನ ವ್ಯಕ್ತಿತ್ವವನ್ನು ಕಳೆದುಕೊಂಡು, ಎಂಥ ಕೆಲಸಕ್ಕೂ ಇಳಿಯುತ್ತಾನೆಂದು ನಾನೆಲ್ಲೋ ಓದಿದ್ದೆ. ಇದು ದಾದಾ ಅವರಿಗೂ ಅನ್ವಯಿಸಿತ್ತು. ಅವರ ಆತ್ಮ ಸತ್ತಿತ್ತು?

ನಾನು ಮದ್ಯವನ್ನು ಸಿರಿಂಜಿಗೆ ತುಂಬಿ, ಅದನ್ನು ಫೀಡಿಂಗ್ ಟ್ಯೂಬಿನಿಂದ ಕುಡಿಸಲು ಆರಂಭಿಸಿದೆ. ಅವರಿಗೆ ಯಾವುದೇ ರುಚಿಯ ಅನುಭವವಾಗುತ್ತಿಲ್ಲವೆಂದು ನನಗೆ ಗೊತ್ತಿತ್ತು. ಕಾರಣ, ಹೆಂಡ ನೇರವಾಗಿ ಹೊಟ್ಟೆಯೊಳಗೆ ಹೋಗುತ್ತಿತ್ತು. ಅಲ್ಲಿ ಯಾವ ಸ್ವಾದೇಂದ್ರಿಯಗಳು ಇರುವುದಿಲ್ಲ. ಆದರೂ ಅವರಿಗೆ ನೆಮ್ಮದಿ ಸಿಗುತ್ತಿದೆ ಎಂದು ದಾದಾರ ಮುಖದಿಂದ ತಿಳಿದು ಬರುತ್ತಿತ್ತು.

ವೈದ್ಯರು ಹೇಳಿದ ಪ್ರಮಾಣದ ನಂತರ ನಾನು ನಿಲ್ಲಿಸಲು ಬಯಸುತ್ತಿದ್ದೆ, ಆದರೆ ದಾದಾ ಭಿಕ್ಷುಕರಾದರು. ರೋಗಗ್ರಸ್ತ ವ್ಯಕ್ತಿಯ ಕಣ್ಣುಗಳಲ್ಲಿ ಪ್ರಾರ್ಥನೆಯಿತ್ತು. ‘ಏಯ್ ಪುಟ್ಟ, ಇನ್ನು ಸ್ವಲ್ಪ, ಸ್ವಲ್ಪ ಕುಡಿಸು’ ಎಂದು ಅಂಗಲಾಚುವಿಕೆ ವ್ಯಕ್ತವಾಗುತ್ತಿತ್ತು. ಅವರು ಕೈಯೆತ್ತಿ ಬೆರಳುಗಳಿಂದ ಭಿಕ್ಷೆಯ ಪ್ರಮಾಣವನ್ನು ಹೇಳುತ್ತಿದ್ದರು. ನಾನು ಸುಮಾರಾಗಿ ಇಡೀ ಕ್ವಾರ್ಟರನ್ನೇ ಅವರೊಳಗೆ ಸುರಿದು, ಅಲ್ಲಿಂದ ಓಟಕಿತ್ತೆ.

ಆಪರೇಷನ್ ಆಗಿ ಹತ್ತು ದಿನಗಳಾಗುತ್ತಿದ್ದವು. ಅಂದಿನಿಂದ ಹೊಟ್ಟೆಗೆ ಅನ್ನದ ಒಂದು ಅಗಳೂ ಹೋಗಲಿಲ್ಲ. ಲಿಕ್ವಿಡ್ ಫುಡ್‌ನಿಂದ ಏನು ಸಾಧ್ಯ? ನಿಶ್ಶಕ್ತಿ ಅತೀವವಾಗಿತ್ತು. ಖಾಲಿ ಹೊಟ್ಟೆಗೆ ಇಷ್ಟು ವ್ಹಿಸ್ಕಿ! ಒಂದು ವೇಳೆ ದಾದಾರಿಗೆ ಏನಾದರೂ ಆದರೆ, ನನ್ನನ್ನು ನಾನೇ ಮುಕ್ತಗೊಳಿಸಿಕೊಳ್ಳುತ್ತೇನೆ. ನನ್ನೊಳಗೆ ಗಾಢ ಪಾಪ-ಪ್ರಜ್ಞೆ ತುಂಬಿತು. ಚಿಕ್ಕಪ್ಪ, ಹರೀಶ್ ದಾ ನಿಜವಾಗಿಯೂ ದಾದಾರ ಹಿತೈಷಿಗಳು. ದಾದಾರ ಆರೋಗ್ಯ ಮತ್ತೆ ಬಿಗಡಾಯಿಸಬಾರದೆಂದು ಅವರು ಸದಾ ಬಯಸುತ್ತಾರೆ.

ಆದರೆ ನಾನು? ದಾದಾರ ಅತಿ ಸಮೀಪದಲ್ಲಿರುವವ ಎಂದು ಕೊಚ್ಚಿಕೊಳ್ಳುವ ಪುಟ್ಟ, ಅವರೊಂದಿಗೆ ಎಂಥ ಜುಗುಪ್ಸೆಯ ಆಟವಾಡಿದೆ. ನಾನು ಪಾಪ-ಕಾರ್ಯವೆಸಗಿದೆ. ಹೇ ದೇವರೇ, ದಾದಾರಿಗೆ ಯಾವ ತೊಂದರೆಯೂ ಆಗಬಾರದು.

ದಾದಾ ನಶೆಯಲ್ಲಿದ್ದರು. ನಾನು ರಾತ್ರಿ ಒಂದು ಗಂಟೆಗೆ ಟಾಯಿಲೆಟ್‌ಗೆ ಹೋಗಲು ಎದ್ದೆ. ಟಾಯಿಲೆಟ್ ಅದೇ ಕೋಣೆಗೆ ಅಟಾಚ್ಡ್ ಆಗಿತ್ತು. ದಾದಾ ಎಚ್ಚೆತ್ತಿದ್ದರು. ಅವರ ಬೆಡ್ ಸಮೀಪದಿಂದಲೇ ಹಾದು ಹೋಗಬೇಕಿತ್ತು. ನಾನು ಅಲ್ಲಿಂದ ಹಾದು ಹೋದಾಗ ದಾದಾ ನನ್ನ ಕೈಯನ್ನು ಹಿಡಿದುಕೊಂಡರು. ಅವರಿಂದ ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ. ಗಂಟಲಿನಿಂದ ಹಿಡಿದು ಕತ್ತಿನವರೆಗೆ ಆಪರೇಷನ್ನಿನ ಗಾಯವಿತ್ತು. ನಾಲಿಗೆ ಒಣಗಿತ್ತು. ತುಟಿಗಳು ಸಡಿಲಗೊಂಡಿದ್ದವು. ಆದರೂ ನಾನು, ‘ಫೀ ಫಾಯು, ಖಾ-ಖಾ’ ಎಂಬ ಭಯಾನಕ ಧ್ವನಿಯನ್ನು ಕೇಳಿದೆ. ಅವರು ಸಿಟ್ಟಿನ ಭರದಲ್ಲಿ ಕರ್ಕಶವಾಗಿ ಏನೋ ಹೇಳುತ್ತಿದ್ದರು ಅಥವಾ ಪ್ರಾರ್ಥಿಸುತ್ತಿದ್ದರು ಅಥವಾ ಯಾಚಿಸುತ್ತಿದ್ದರು. ನನಗೆ ಆಶ್ಚರ್ಯವಾಯಿತು. ಅವರ ಮುಖ ನನ್ನ ಕಣ್ಣುಗಳೆದುರು ಮೂಡಿದವು. ರಾಕ್ಷಸ, ನೀರ್ಗುದುರೆ, ಮೊಸಳೆ...ಸಿಂಹ...ನಾನು ಹೆದರಿ ಕಿರುಚಲು ಬಯಸುತ್ತಿದ್ದೆ.

ಆದರೆ ಸಾಧ್ಯವಾಗಲಿಲ್ಲ. ದಾದಾ ರೋದಿಸುತ್ತಿದ್ದರು. ನನ್ನ ಕೈಗಳ ಮೇಲೆ ಅವರ ಬಿಸಿ-ಬಿಸಿ ಕಣ್ಣೀರು ಹನಿಯುತ್ತಿತ್ತು. ನಾನು ದಾದಾರ ತಲೆಯ ಮೇಲೆ ಕೈಯಿಟ್ಟೆ. ಕಡೆಗೆ ಆ ಬೆಟ್ಟ ಕರಗಿತು. ಇದು ಹಿಮವಾಗಿತ್ತು, ನನಗೆ ಆರಂಭದಿಂದಲೂ ಅನುಮಾನವಿತ್ತು. ಎಲ್ಲದಕ್ಕೂ ಒಂದು ಮಿತಿ ಇರುತ್ತದೆ.

ಜುಲೈ ಹನ್ನೆರಡರ ರಾತ್ರಿಯಾಗಿತ್ತು. ಒಂದರ ಮೇಲಿನ ಸಮಯ. ನಾನೂ ಸಹ ರೋದಿಸುತ್ತಿದ್ದೆ. ದಾದಾ, ನಿಮಗೆ ನಾನೇನು ಕೊಡಬಲ್ಲೆ? ನೀವು ಹೇಳಿದರೆ ಸತ್ತು ನಿಮ್ಮನ್ನು ಪಾರು ಮಾಡುತ್ತೇನೆ-ಇದು ಸಾಧ್ಯವಿದ್ದರೆ. ನೀವು ಹೋಗುತ್ತಲೇ ಮನೆ ಚೆಲ್ಲಾಪಿಲ್ಲಿಯಾಗುವುದೆಂದು ನನಗೆ ಗೊತ್ತಿದೆ. ಹರೀಶ್ ದಾ, ಅಮರೇಂದ್ರ, ಪಮ್ಮಿ...ಯಾರಿಗೂ ನನ್ನ ಪರಿಚಯವಿರುವುದಿಲ್ಲ. ಇವರೆಲ್ಲಾ ಯಾರು? ನೀವು ಬದುಕಿರುವವರೆಗೆ ಮಾತ್ರ. ನಿಮ್ಮ ನಂತರ ಈ ಪುಟ್ಟ ಒಬ್ಬ ಆಸರೆಯಿಲ್ಲದ ಬಾಲಕ.

ಮರುದಿನ ನಗರದಿಂದ ಸಾಬೂನು ಇತ್ಯಾದಿಗಳೊಂದಿಗೆ ಮರಳಿ ಬಂದಾಗ ಕೋಣೆಯಲ್ಲಿ ಚಿಕ್ಕಪ್ಪ, ಅಮರೇಂದ್ರ ಮತ್ತು ಹರೀಶ್ ದಾ ಇದ್ದರು. ಹರೀಶ್ ದಾ ದಾದಾರಿಗಾಗಿ ಕಿತ್ತಲೆ ಹಣ್ಣಿನ ಸಿಪ್ಪೆ ಸುಲಿದು ರಸ ತೆಗೆಯುತ್ತಿದ್ದರು. ಚಿಕ್ಕಪ್ಪ ಪತ್ರವನ್ನು ಓದಿ ಮುಗಿಸಿದ್ದರು. ದಾದಾರ ಮುಖ ಕಂಪಿಸುತ್ತಿತ್ತು. ಅವರು ಸಂಪೂರ್ಣವಾಗಿ ಜಡವಾಗಿದ್ದರು.

ಪತ್ರದಲ್ಲಿ, ನಮ್ಮ ನಿಮ್ಮೋ ಸೋದರತ್ತೆ, ದಾದಾರ ಅತಿ ಪ್ರೀತಿಯ ಸಹೋದರಿ, ಅತ್ತೆ ಮನೆಯಿಂದ ಮರಳಿ ಬಂದಿದ್ದಾರೆ ಎಂಬ ಸುದ್ದಿಯಿತ್ತು. ‘ಸೋದರ ಮಾವ ಅವರನ್ನು ಮನೆಯಿಂದ ಹೊರ ಹಾಕಿದ್ದಾರೆ. ಬೆನ್ನು ಮತ್ತು ಭುಜಗಳಲ್ಲಿ ಸಲಾಕೆ ಮತ್ತು ನಾಣ್ಯಗಳಿಂದ ಹಾಕಿದ ಬರೆಗಳಿವೆ. ಅಮರೇಂದ್ರನ ಅಡ್ಮೀಶನ್ ಇನ್ನು ಆಗುವುದಿಲ್ಲ. ಅವನು ಎರಡನೆಯ ಬಾರಿಗೆ ಫೇಲಾಗಿದ್ದಾನೆ. ಇನ್ನು ಖಾಸಗಿಯಲ್ಲಿ ಪರೀಕ್ಷೆಗೆ ಕೂರಬೇಕು. ಪಮ್ಮಿಯ ಬಗ್ಗೆ ಹಳ್ಳಿಯಲ್ಲಿ ವದಂತಿಗಳು ಹಬ್ಬಿವೆ. ಹೊಲ ಹಾಳಾಗಿದೆ. ಕಳೆದ ಆಷಾಡದಲ್ಲಿ ಮನೆಯ ಹಿಂಭಾಗ ಬಿದ್ದು ಹೋಗಿದ್ದು, ಅಲ್ಲಿ ಹೇಗೋ ಮಾಡಿ ಮುಳ್ಳಿನ ಬೇಲಿಯನ್ನು ಹಾಕಲಾಗಿದೆ. ಆದರೆ ಮನೆಗೆ ಸುರಕ್ಷತೆ ಇಲ್ಲ. ಯಾವುದೇ ಮರೆಯಿಲ್ಲ. ಸಾವಿರ, ಎರಡು ಸಾವಿರ ಹಣ ಸಿಕ್ಕರೆ ದುರಸ್ತಿಯಾಗಬಹುದು. ಸರ್ಕಾರಿ ಸಾಲದ ಹಣ ತುಂಬಾ ದಿನ ಇರಲ್ಲ. ಡಿಕ್ರಿಯಾಗುವುದು.’ ಚಿಕ್ಕಪ್ಪನೇ ಪತ್ರವನ್ನು ಓದಿದರು. ಹರೀಶ್ ದಾ ಮೌನದಿಂದ ಕೂತಿದ್ದರು.

ಇವರೆಲ್ಲರೂ ಹದ್ದುಗಳು. ರಾಕ್ಷಸರು. ‘ಚಿಕ್ಕಪ್ಪ, ನೀವು ಮಾಡುತ್ತಿರುವುದು ಸರಿಯಲ್ಲ. ಹರೀಶ್ ದಾ, ಅಮರೇಂದ್ರ ನೀವೆಲ್ಲರೂ ಸ್ವಲ್ಪವಾದರೂ ಅರ್ಥ ಮಾಡಿಕೊಳ್ಳಿ’ ಎಂದು ನಾನು ಹೇಗೆ ತಿಳಿಯಪಡಿಸಲಿ?

ದಾದಾ ನಾಲ್ಕು ಗಂಟೆಗೇ ಬೇಡಿಕೆಯಿಡಲು ಆರಂಭಿಸಿದರು. ನೀಲಮ್ಮಾ ಕಳವಳಗೊಂಡಿದ್ದಳು. ಇಷ್ಟು ಕುಡಿಯುತ್ತಾರೆಯೇ, ಅಯ್ಯಯ್ಯಪ್ಪಾ! ಅವಳು ಒಂಭತ್ತಕ್ಕೂ ಮೊದಲು ಕೊಡಬೇಡ, ಇಲ್ಲ ಎನ್ನುತ್ತಿರು ಎಂದು ಹೇಳಿದಳು.

ನಾನು ಗಟ್ಟಿಯಾಗಿ ಹೇಳಿದೆ, ‘ದಾದಾ, ಡಾಕ್ಟರ್ ಕೊಡಬೇಡವೆಂದು ಹೇಳಿದ್ದಾರೆ. ಈಗ ಸಿಗಲ್ಲ. ನೀವು ತುಂಬಾ ನಿಶ್ಶಕ್ತರಾಗಿದ್ದೀರ.’

ದಾದಾರ ಇಡೀ ಮುಂಡ ಕಂಪಿಸಿತು. ಅವರೆದ್ದು ಕೂತರು. ಮೊದಲ ಬಾರಿಗೆ ಆಪರೇಷನ್ ಆದ ನಂತರ ಎದ್ದು ಕೂತಿದ್ದರು. ಅವರ ಮುಖ ನೋವಿನಿಂದಾಗಿ ಸೆಟೆದುಕೊಂಡಿತ್ತು. ಅವರು ನಿಜವಾಗಿಯೂ ಭಯಾನಕವಾಗಿ ತೋರುತ್ತಿದ್ದರು. ಅವರ ಕಣ್ಣುಗಳಲ್ಲಿ ಗಾಢ ಜುಗುಪ್ಸೆ ಮತ್ತು ಸಿಟ್ಟಿತ್ತು. ‘ಪುಟ್ಟ, ನೀನೂ ಸಹ?’ ಎಂದು ಅವರು ಸಿಟ್ಟಿನ ಭರದಲ್ಲಿ ಮೂಗಿನಿಂದ ಫೀಡಿಂಗ್ ಟ್ಯೂಬ್ ಎಳೆದು ಎಸೆದರು. ನೋವಿನಿಂದಾಗಿ ಕಿರುಚಿದರು. ನಂತರ ಅವರು ಮಂಚದಿಂದ ಕೆಳಗಿಳಿಯಲು ಪ್ರಯತ್ನಿಸಿದರು. ಕೈಯಿಂದ ತಮ್ಮ ಪಟ್ಟಿಯನ್ನು ಹೊಸಕಿ ಹಾಕಲು ಪ್ರಯತ್ನಿಸಿದರು, ಆದರೆ ಅದು ಗಾಯಕ್ಕೆ ಅಂಟಿಕೊಂಡಿತ್ತು. ಅವರು ಓಲಾಡುತ್ತಾ ನಿಂತರು. ಅವರಲ್ಲಿ ನಿಶ್ಶಕ್ತಿ ಎಷ್ಟಿತ್ತೆಂದರೆ, ಅವರಿಂದ ಅವರ ಶರೀರವನ್ನು ಸಂಭಾಳಿಸಲು ಸಾಧ್ಯವಾಗದೆ ಕೆಳಗೆ ಬಿದ್ದರು. ಬಿದ್ದು, ಪ್ರಜ್ಞೆ ತಪ್ಪಿದರು.

ಅರ್ಧ ಗಂಟೆಯ ನಂತರ ದಾದಾ ಸುಧಾರಿಸಿದರು. ಅವರ ಮೂಗಿಗೆ ಮತ್ತೆ ಫೀಡಿಂಗ್ ಟ್ಯೂಬನ್ನು ಹಾಕಲಾಯಿತು. ಅವರು ಸೋತಿದ್ದರು. ಅವರು ಆತ್ಮಸಮರ್ಪಣೆ ಮಾಡಿಕೊಂಡಿದ್ದರು. ನನ್ನ ಶರೀರಕ್ಕೆ ಏನು ಬೇಕಾದರೂ ಮಾಡಿ ಎನ್ನುವಂತಿತ್ತು. ನಂತರ ಅವರಿಗೆ ಲಿಕ್ವಿಡ್ ಫುಡ್ ಅಂದರೆ ಮೋಸುಂಬೆ ಮತ್ತು ಕಿತ್ತಲೆಯ ರಸವನ್ನು ಕೊಡಲಾಯಿತು. ಮೊಟ್ಟೆಯ ತೆಳು ಭಾಗವನ್ನು ಕೊಡಲಾಯಿತು. ಈಗ ಅವರು ಸುಧಾರಿಸಿದಂತೆ ಕಂಡು ಬರುತ್ತಿದ್ದರು. ರಾತ್ರಿ ಒಂಭತ್ತು ಗಂಟೆಗೆ ವೈದ್ಯರ ಸೂಚನೆ ಮೇರೆಗೆ ಸ್ವಲ್ಪ ಬ್ರಾಂಡಿಯನ್ನು ಕೊಡಲಾಯಿತು. ದಾದಾ ತುಟಿಪಿಟಕ್ಕೆನ್ನದೆ ಮೌನಕ್ಕೆ ಶರಣಾಗಿದ್ದರು.

ಮೂರು ದಿನಗಳ ನಂತರ ದಾದಾರನ್ನು ಕೋಬಾಲ್ಟ್ ಥೆರಪಿಗೆ ಕರೆದೊಯ್ಯಬೇಕಿತ್ತು. ಡಾಕ್ಟರ್ ಮದಾನ್ ಅವರನ್ನು ಚೆಕ್ ಮಾಡಿ, ವ್ಯಗ್ರರಾದರು. ಸೆಪ್ಟಿಕ್ ಆಗಿರಬಹುದು. ಕೀವು ಬರುತ್ತಿದೆ. ಈಗಲೇ ಕೋಬಾಲ್ಟ್ ಥೆರಪಿಗೆ ಕರೆದೊಯ್ಯುವುದು ಬೇಡ ಎಂದರು.

ಚಿಕಿತ್ಸೆ ಮುಂದಕ್ಕೆ ಹೋಗಲಾರಂಭಿಸಿತು.

ಪತ್ರ ಬಂದಿದೆ ಎಂದು ದಾದಾ ನನಗೆ ಬರೆದು ಕೊಟ್ಟರು. ‘ಕಾಲೇಜು ಪ್ರಾರಂಭವಾಗಿದೆ. ನೀನು ಹೋಗು. ನಾನು ಒಂದು ತಿಂಗಳಿನಲ್ಲಿ ಗುಣಮುಖನಾಗಿ ಬರುತ್ತೇನೆ. ಹಣವನ್ನು ಲಲ್ಲೂನಿಂದ ತೆಗೆದುಕೋ. ನಾನು ಅವನಿಗೆ ಪ್ರತ್ಯೇಕವಾಗಿ ಬರೆಯುತ್ತಿದ್ದೇನೆ. ನಮ್ಮ ಸ್ವಲ್ಪ ಹಣ ಅವನ ಬಳಿಯಿದೆ. ಇನ್ನೂರನ್ನು ಈ ಕಡೆ ಕಳುಹಿಸು. ಹಣದ ಅವಶ್ಯಕತೆ ಬೀಳಬಹುದು.’ ಎಂದು ಪತ್ರದಲ್ಲಿತ್ತು.

ಬೆಳಿಗ್ಗೆ ದಾದಾ ನಿದ್ರೆಯಿಂದ ಬೇಗ ಏಳಲಿಲ್ಲ. ನನ್ನ ಟಿಕೇಟ್ ಬಂದಿತ್ತು. ಹನ್ನೆರಡು ಗಂಟೆಗೆ ನನ್ನ ರೈಲಿತ್ತು. ಹತ್ತು ಗಂಟೆಯವರೆಗೆ ದಾದಾ ನಿದ್ರಿಸುತ್ತಿದ್ದರು. ಡಾಕ್ಟರ್ ಮದಾನ್ ಒಮ್ಮೆ ಬಂದು ಹೋಗಿದ್ದರು. ಹತ್ತೂಕಾಲಿಗೆ ದಾದಾರನ್ನು ಎಬ್ಬಿಸಿದೆ, ಅದರೆ ಅವರ ಕಣ್ಣುಗಳು ಗುರುತಿಸುತ್ತಿರಲಿಲ್ಲ. ಅವರು ಯಾರನ್ನೂ ನೋಡುತ್ತಿರುವಂತೆ ತೋರುತ್ತಿರಲಿಲ್ಲ. ಆಪರೇಷನ್ ಆದ ದಿನ ಹೇಗಿದ್ದರೋ, ಈಗಲೂ ಹಾಗೆಯೇ ಇದ್ದರು.

ಅವರು ಮೆಲ್ಲನೆ ಸ್ವಲ್ಪ ನಕ್ಕರೆಂದು ನನಗೆ ಅನ್ನಿಸಿತು. ಮಂಗ ಆಗಿರಬೇಕು. ಅವರೇನೋ ನೋಡುತ್ತಿದ್ದರು. ಎಲ್ಲೋ, ಏನೋ ಹುಡುಕುತ್ತಿದ್ದರು. ಕತ್ತಲಿನ ಆಕೃತಿಗಳಿರಬೇಕು. ನಾನು ಅವಶ್ಯವಾಗಿ ಆ ಅಂಧಕಾರದಲ್ಲಿ ಅಮ್ಮನೊಂದಿಗೆ ಹೋಗುತ್ತೇನೆ. ಸರಿಯಾಗಿ ನೋಡಿ, ದಾದಾ. ಪೇರಲೆ ಹಣ್ಣಿನ ಮರದ ಯಾವ ಕೊಂಬೆ ರಭಸದಲ್ಲಿ ಅಲುಗುತ್ತಿದೆಯೋ, ಅದು ನಾನು. ನೋಡಿ, ನದಿಯಿಂದ ಏಡಿಗಳನ್ನು ಹಿಡಿದು ನಿಮ್ಮೆದುರಿಗೆ ಬಿಡುತ್ತಿದ್ದೇನೆ. ಜೀವಂತ ಚಿಟ್ಟೆಯ ಸೊಂಟಕ್ಕೆ ದಾರ ಕಟ್ಟಿ ನಾನು ಹಾರುತ್ತಿದ್ದೇನೆ. ಇತ್ತ ನೋಡಿ, ವೇಗವಾಗಿ ತಿರುಗುವ ಗೋಳಾಕಾರದ ಗಿರುಗಟೆಯ ಆ ನೀಲಿ ಮರದ ಕುದುರೆ ಮೇಲೆ ಯಾರು ಕೂತಿದ್ದಾರೆ? ಗುರುತಿಸಿದಿರ? ಅದು ನಾನು ದಾದಾ, ನಿಮ್ಮ ಪುಟ್ಟ. ಮತ್ತೆ ಹಿಂದಕ್ಕೆ ನೋಡಿ, ಮೂರನೆಯ ಕೆಂಪು ಕದುರೆಯ ಮೇಲೆ ಹರೀಶ್ ದಾ ಕೂತಿದ್ದಾರೆ...ನಂತರ ಅಮರೇಂದ್ರ...ಪಮ್ಮಿ ಅತ್ತ ಕಡೆ ಕಬ್ಬು ಮಾರುವವನ ಸಮೀಪದಲ್ಲಿ ನಿಂತಿದ್ದಾಳೆ. ಇನ್ನು ನಮಗೆ ಭಯವಿಲ್ಲ. ನೀವು ಆಂಜನೇಯರಾಗಿ. ನಮಗೆ ಹೆದರಿಸಿ. ಒಂದೇ ಹೊಡತಕ್ಕೆ ,‘ಫುರ್ರ್-ಫುರ್ರ್...’ ಎಂದು ಗಾಳಿ ಹೊರ ಹೋಗುವುದು.

ಡಾಕ್ಟರ್ ಮದಾನ್ ಗಂಭೀರರಾಗಿದ್ದರು. ಅವರು ನನ್ನ ಹೆಗಲ ಮೇಲೆ ಕೈಯಿಟ್ಟರು. ಅವರೊಂದಿಗೆ ಚಿಕ್ಕಪ್ಪ, ಹರೀಶ್ ದಾ ಸಹ ಹೊರಗೆ ಹೋದರು. ‘ಡಿಲೀರಿಯಮ್...ಇನ್ನು ಸ್ವಲ್ಪ ಹೊತ್ತಿಗೆ ಕೋಮಾವಸ್ಥೆಗೆ ಹೋಗುತ್ತಾರೆ. ಹೆದರುವ ಅಗತ್ಯವಿಲ್ಲ. ವೈದ್ಯರ ವಶದಲ್ಲಿ ಏನೂ ಇರುವುದಿಲ್ಲ. ರೋಗಿಯೇ ಗುಣಮುಖನಾಗುತ್ತಾನೆ. ಕೋ-ಅಪರೇಟ್ ನಿಲ್ಲಿಸಿ, ರೆಸ್ಪಾನ್ಸ್ ಕೊಡದಿದ್ದರೆ ಕಷ್ಟವಾಗುತ್ತದೆ. ಇವರಿಗೆ ಜಾಂಡೀಸ್ ಆಗಿದೆ. ಸಿಚುಯೇಶನ್ ಡೆಲಿಕೇಟ್ ಆಗಿದೆ. ಸೆಪ್ಟಿಕ್ ಬೇರೆ ಆಗಿದೆ. ಕೋಬಾಲ್ಟ್ ಥೆರಪಿ ಸಹ ಆಗುತ್ತಿಲ್ಲ. ಏನು ಮಾಡುವುದು? ನೋಡಿ, ಹೆದರುವುದರಿಂದ ಏನೂ ಆಗುವುದಿಲ್ಲ. ನಾನು ಸಂಪೂರ್ಣವಾಗಿ ಪ್ರಯತ್ನವನ್ನು ಮಾಡುತ್ತಿದ್ದೇವೆ’ ಎಂದರು ವೈದ್ಯರು.

ನಾನಿದ್ದೂ ಏನು ಮಾಡಲು ಸಾಧ್ಯವಿತ್ತು? ದಾದಾ ಮತ್ತೆ ಗುಣಮುಖರಾಗುತ್ತಾರೆಂಬ ಭರವಸೆಯಿತ್ತು. ಹನ್ನೊಂದು ಗಂಟೆಗೆ ಮತ್ತೆ ಕೋಣೆಗೆ ಹೋದೆ. ದಾದಾ ಕೋಮಾದಲ್ಲಿದ್ದರು. ಅವರ ಕಾಲುಗಳನ್ನು ಮುಟ್ಟಿದೆ. ತಲೆಯನ್ನು ಕಾಲುಗಳ ಮೇಲಿಟ್ಟೆ. ನಾನು ಅಳುತ್ತಿದ್ದೆ. ಅದೆಷ್ಟೋ ವರ್ಷಗಳ ರೋದನ ಒಮ್ಮೆಲೆ ಉಕ್ಕಿ ಬಂದಿತ್ತು. ಗಟ್ಟಿಯಾಗಿ ಅಳುತ್ತಿದ್ದೆ. ನೀಲಮ್ಮಾ ತಲೆಯನ್ನು ನೇವರಿಸುತ್ತಿದ್ದಳು. ಈಗೇನೂ ಉಳಿದಿರಲಿಲ್ಲ. ನಾನು ಸೋತಿದ್ದೆ. ದಾದಾ ಚತುರತೆಯನ್ನು ತೋರಿದ್ದರು.

ನೀಲಮ್ಮಾಳಿಗೆ, ‘ಏನಾದರೂ ಮಾಡಿ’ ಎಂದು ಹೇಳಲು ಬಯಸುತ್ತಿದ್ದೆ. ನಾನೇನು ಮಾಡಲು ಸಾಧ್ಯ ಎಂಬುದನ್ನೂ ಹೇಳು ಎಂದೆ. ಹೀಗಾಗಲು ಬಿಡಬೇಡ ಎಂದೆ. ನನ್ನಲ್ಲಿ ಸಾಕಷ್ಟು ರಕ್ತವಿದೆ. ದಾದಾ ಏನೆಂದು ನಿನಗೆ ಗೊತ್ತಿಲ್ಲ. ಒಮ್ಮೆ ಅವರು ಮಾತನಾಡುವಂತೆ ಮಾಡು, ಮುಂದಿನದನ್ನು ನಾನು ನೋಡಿಕೊಳ್ಳುತ್ತೇನೆ’ ಎಂದೆ.

ಹನ್ನೆರೆಡು ಗಂಟೆಗೆ ರೈಲು ಹೊರಡುವುದರಲ್ಲಿತ್ತು. ಚಿಕ್ಕಪ್ಪ, ‘ಹೋಗು, ದೇವರು ಒಳ್ಳೆಯದು ಮಾಡುತ್ತಾನೆ, ಆಸ್ಪತ್ರೆಗೆ ಬಂದಾಗ ಇವರ ಪರಿಸ್ಥಿತಿ ಮತ್ತೂ ಹದಗೆಟ್ಟಿತ್ತು, ಒಂದು ವಾರದಲ್ಲಿ ಜಾಂಡೀಸ್ ಗುಣವಾಗುವುದು ಎಂದು ವೈದ್ಯರು ಹೇಳಿದ್ದಾರೆ. ನೀನು ಓದುವುದಕ್ಕೆ ಗಮನಕೊಡು’ ಎಂದರು.

ನಾನು ಪ್ಲಾಟ್‌ಫಾರ್ಮ್‌ನಲ್ಲಿದ್ದಾಗ, ದಾದಾರ ಉಗುರುಗಳು ತುಂಬಾ ಬೆಳೆದಿತ್ತು, ಅವುಗಳಲ್ಲಿ ಕೊಳೆ ತುಂಬಿದೆ ಎಂಬುದು ನೆನಪಾಯಿತು. ನಾನು ನನ್ನ ಬಾಯಿಯ ಎರಡೂ ಬದಿಗಳಲ್ಲಿ ಬೆರಳುಗಳನ್ನು ಸಿಗಿಸಿ, ಅವುಗಳನ್ನು ಎಳೆದೆ...ನನ್ನ ದವಡೆ ನೀರ್ಗುದುರೆಯಂತೆ ಅಗಲವಾಯಿತು. ನಾನು ಪ್ಲಾಟ್ ಫಾರ್ಮಿನಲ್ಲಿ ಮನಸಾರೆ ರೋದಿಸುತ್ತಿದ್ದೆ. ನಾನೀಗ ಗುಂಪಿನ ನಡುವೆ ತಮಾಷೆಯ ವಸ್ತುವಾಗಿದ್ದೆ.

ಉದಯ ಪ್ರಕಾಶ್
1952ರಲ್ಲಿ ಮಧ್ಯಪ್ರದೇಶದ ಒಂದು ಚಿಕ್ಕ ಹಳ್ಳಿ ಸೀತಾಪುರದಲ್ಲಿ ಜನಿಸಿದ ಉದಯ ಪ್ರಕಾಶರು ಒಬ್ಬ ಶ್ರೇಷ್ಠ ಕವಿಗಳು ಮಾತ್ರವಲ್ಲದೆ ಶೇಷ್ಠ ಕಥೆಗಾರರು, ಪತ್ರಕರ್ತರು, ಕಿರುಚಿತ್ರಗಳ ನಿರ್ದೇಶಕರು ಮತ್ತು ಶ್ರೇಷ್ಠ ಅನುವಾದಕರಾಗಿಯೂ ಪ್ರಸಿದ್ಧರು. ಇವರ 5 ಕವನ ಸಂಕಲನಗಳು, 13 ಕಥಾ ಸಂಕಲನಗಳು, 4 ಪ್ರಬಂಧ ಸಂಕಲನಗಳು ಪ್ರಕಟಗೊಂಡಿವೆ. ಇವರ ಅನೇಕ ಕಥೆಗಳು ಭಾರತೀಯ ಭಾಷೆಗಳು ಹಾಗೂ ಆಂಗ್ಲ ಭಾಷೆಯಲ್ಲಿ ಮಾತ್ರವಲ್ಲದೆ ರಷ್ಯನ್, ಜಪಾನಿ, ಡಚ್, ಜರ್ಮನಿ, ಕೋರಿಯಾ, ಸ್ಪಾನಿಶ್, ಹಂಗೇರಿಯನ್ ಮುಂತಾದ ವಿದೇಶಿ ಭಾಷೆಗಳಲ್ಲಿಯೂ ಅನುವಾದಗೊಂಡಿವೆ. ಇವರು ಅನೇಕ ಡಾಕ್ಯೂಮೆಂಟರಿ ಚಿತ್ರಗಳನ್ನೂ ತಯಾರಿಸಿದ್ದಾರೆ. 2010 ರಲ್ಲಿ ಇವರ ‘ಮೋಹನದಾಸ್’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪುರಸ್ಕಾರ ಲಭಿಸಿದೆ.

ಮೂಲ: ಉದಯ ಪ್ರಕಾಶ್, ಕನ್ನಡಕ್ಕೆ: ಡಿ.ಎನ್.ಶ್ರೀನಾಥ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT