ರಮ್ಯಾ ಶ್ರೀಹರಿ

ಜೀವನದಲ್ಲಿ ಪ್ರತಿದಿನ ಬರುವ ಎಲ್ಲವನ್ನೂ ಒಂದು ‘ಅನುಭವ’ ಎಂದು ಸ್ವೀಕರಿಸುವುದಕ್ಕೂ, ಜೀವನದಲ್ಲಿ ಪ್ರತಿನಿತ್ಯವೂ ವೈವಿಧ್ಯಪೂರ್ಣ ಅನುಭವಗಳನ್ನು ಪಡೆಯಬೇಕು ಎಂದು ಬಯಸುವುದಕ್ಕೂ ಇರುವ ಅಂತರವೇ ಉಲ್ಲಾಸಕ್ಕೂ ಉನ್ಮಾದಕ್ಕೂ ಇರುವ ವ್ಯತ್ಯಾಸ.

ಜೀವನದಲ್ಲಿ ಯಾವ ಅನುಭವಗಳು ಬರುತ್ತವೋ ಬರಲಿ, ಅದನ್ನು ಅನುಭವಿಸುತ್ತಲೇ ‘ನಾನು ಯಾರು?’ ಎನ್ನುವುದನ್ನು ಕಂಡುಕೊಳ್ಳುತ್ತೇನೆ ಎನ್ನುವುದು; ಜೀವನವಿರುವುದೇ ನನಗೆ ಬೇಕಾದ ಅನುಭವಗಳನ್ನು ಪಡೆಯುವ ಮೂಲಕ ‘ನನ್ನತನ’ವನ್ನು ಕಟ್ಟಿಕೊಳ್ಳುವುದಕ್ಕೆ’ ಎನ್ನುವುದು- ಎರಡೂ ಬೇರೆ ಬೇರೆ.

ಆರ್ಥಿಕ ಅಭಿವೃದ್ಧಿ, ತಾಂತ್ರಿಕ ಆವಿಷ್ಕಾರಗಳು ನಮ್ಮ ಜೀವನವನ್ನು ನಮ್ಮ ಹಿಂದಿನ ತಲೆಮಾರಿನವರ ಜೀವನಕ್ಕಿಂತ ಹೆಚ್ಚು ಸರಳಗೊಳಿಸಿದೆಯೋ ಸಂಕೀರ್ಣ ಗೊಳಿಸಿದೆಯೋ ಅರ್ಥವಾಗದ ಅಯೋಮಯ ಸ್ಥಿತಿ ಇಂದು ಉಂಟಾಗಿರುವುದು ಸುಳ್ಳಲ್ಲ. ಆರ್ಥಿಕ, ರಾಜಕೀಯ ಬದಲಾವಣೆಗಳು ಸಹಜವಾಗಿಯೇ ಸಾಂಸ್ಕೃತಿಕ ಬದಲಾವಣೆಗಳನ್ನು ತಂದೊಡ್ಡಿವೆ. ಎಲ್ಲದರಲ್ಲೂ ‘ಮಿತಿ’ ಮರೆಯಾಗಿ ಎಲ್ಲೆಲ್ಲೂ ‘ಅತಿ’ ವಿಜೃಂಭಿಸುತ್ತಿರುವ ಹೊತ್ತಲ್ಲಿ ಮನುಷ್ಯನ ಸುಖಜೀವನಕ್ಕೆ ಯಾವುದು, ಎಷ್ಟು ಬೇಕು ಎನ್ನುವ ಪ್ರಶ್ನೆಗೆ ಉತ್ತರ ಸುಲಭವಲ್ಲ.

ವಿದ್ಯೆ, ಉದ್ಯೋಗದಲ್ಲಿನ ಆಯ್ಕೆಗಳನ್ನು ಮೊದಲುಗೊಂಡು ಜೀವನಶೈಲಿಯಲ್ಲಿನ ಆಯ್ಕೆಗಳಾದ ಊಟ, ಉಡುಗೆ, ಗೃಹಾಲಂಕಾರ, ವಾಹನ, ಪ್ರವಾಸ, ಐಷಾರಾಮಿ ವಸ್ತುಗಳು, ದಿನನಿತ್ಯದ ಬಳಕೆಯ ತಾಂತ್ರಿಕ ಉಪಕರಣಗಳು, ಮನೋರಂಜನೆ, ಹವ್ಯಾಸ, ಎಲ್ಲದರಲ್ಲೂ ಯಾವುದನ್ನು ಆಯ್ದುಕೊಳ್ಳಬೇಕು, ಯಾವುದನ್ನು ಬಿಟ್ಟುಬಿಡಬೇಕೆಂದು ಗೊತ್ತೇ ಆಗದಷ್ಟು ಸಹಸ್ರಾರು ಆಯ್ಕೆಗಳು ನಮ್ಮ ಮುಂದಿರುತ್ತವೆ. ಆಯ್ಕೆಗಳು ಅತಿಯಾದಷ್ಟು ಸರಿಯಾದ್ದನ್ನು ಆಯ್ದುಕೊಳ್ಳುತ್ತಿದ್ದೇನೋ ಇಲ್ಲವೋ ಎನ್ನುವ ಎಚ್ಚರಿಕೆಗಿಂತಲೂ ‘ನನ್ನ ಆಯ್ಕೆಗಳು ಬೇರೆಯವರ ಆಯ್ಕೆಗಳ ಜೊತೆ ಹೇಗೆ ಸ್ಪರ್ಧಿಸುತ್ತಿವೆ?’ ಎನ್ನುವ ಆತಂಕವೇ ಜಾಸ್ತಿ ಎನ್ನಬಹುದು. ‘ನನಗೇನು ಸಿಕ್ಕಿದೆ?’ ಎನ್ನುವ ಪ್ರಶ್ನೆಗಿಂತ ‘ನಾನು ಯಾವುದೇ ವಿಶಿಷ್ಟ, ರೋಚಕ, ಬದುಕು ಬದಲಿಸಿಬಿಡುವ ಅನುಭವವನ್ನು ಕಳೆದುಕೊಳ್ಳುತ್ತಿಲ್ಲ ತಾನೇ?’ ‘ಬೇರೆಯವರ ಆಯ್ಕೆಗಳಿಗಿಂತ ನನ್ನ ಆಯ್ಕೆಗಳೇ ವೈವಿಧ್ಯಪೂರ್ಣ, ಅತ್ಯುತ್ತಮ ಅನುಭವವನ್ನು ನೀಡುವ ಆಯ್ಕೆಯಾಗಿದೆಯೇ ಇಲ್ಲವೇ?’ ಎನ್ನುವ ಪ್ರಶ್ನೆಗಳೇ ಮುಖ್ಯವಾಗಿಬಿಡುತ್ತವೆ.

ಈ ಕ್ಷಣ ಅತಿಹೆಚ್ಚು ಸುಖವನ್ನು ತರುವ, ಕಣ್ಮನಗಳನ್ನು ಸೆಳೆದು ವಿವೇಕವನ್ನು ಮಣ್ಣುಪಾಲು ಮಾಡುವ ಆಯ್ಕೆಗಳೇ ಮುಂದೆ ಅಪ್ರಿಯವಾಗುವುದೂ ಸಾಮಾನ್ಯ.

ಉದಾಹರಣೆಗೆ, ಆಧುನಿಕ ಜೀವನದ ‘ಶೋಕಿ’ಗಳಲ್ಲಿ ಒಂದಾದ ಶಾಪಿಂಗ್ ಅನ್ನೇ ತೆಗೆದುಕೊಳ್ಳಿ, ಅದರಲ್ಲೂ ಬೇರೆ ದೇಶಗಳಿಗೆ, ಬೇರೆ ರಾಜ್ಯಗಳಿಗೆ ಭೇಟಿಕೊಟ್ಟಾಗ ಮಾಡುವ ಶಾಪಿಂಗ್ ಕುರಿತು ಹೇಳುವುದಾದರೆ ಅಲ್ಲಿ ಅಗತ್ಯಕ್ಕಿಂತಾ ಹೆಚ್ಚಾಗಿ ‘ನೆನಪಿಗಿರಲಿ’ ಎಂದು ತೆಗೆದುಕೊಳ್ಳುವ, ‘ನಮ್ಮೂರಲ್ಲಿ ಇಂಥದ್ದೆಲ್ಲಾ ಇಷ್ಟು ಚೆನ್ನಾಗಿರುವುದು ಸಿಗುವುದಿಲ್ಲ’ ಎಂದು ಖರೀದಿಸುವ, ಆ ದಿನದ ಭೇಟಿ / ಪ್ರವಾಸವನ್ನು ಸ್ಮರಣೀಯವಾಗಿಸುವಂತಹ ವಸ್ತುಗಳನ್ನು ಕೊಂಡುಕೊಳ್ಳುವ ಉನ್ಮಾದ ಹೆಚ್ಚಾಗುತ್ತದೆ. ವಿಶಿಷ್ಟ ಎನಿಸುವ ಹೊಸಬಗೆಯ ಅಂಗಡಿಗಳನ್ನು ಹೊಕ್ಕು ಬಗೆಬಗೆಯ ಬಣ್ಣಬಣ್ಣದ ಸಾಮಗ್ರಿಗಳನ್ನು ಕಂಡಾಗ, ‘ಅದೂ ಇರಲಿ, ಇದೂ ಇರಲಿ, ನಾನೇನು ದಿನಾ ಇವನ್ನೆಲ್ಲಾ ಕೊಂಡುಕೊಳ್ಳುತ್ತೇನೆಯೇ?’ ಎಂದುಕೊಂಡು ದೊಡ್ಡ ಗಂಟೊಂದನ್ನು ದೊಡ್ಡ ಮೊತ್ತದ ಹಣ ಪಾವತಿಸಿ ತಂದು ಮನೆಯಲ್ಲಿಡುತ್ತೇವೆ. ಒಂದೆರೆಡು ವಾರ ಆ ಶಾಪಿಂಗ್ ಅನುಭವ ಎಷ್ಟು ಚೆಂದವಿತ್ತು ಎನಿಸುತ್ತಿರುತ್ತದೆ, ಕಾಲಕ್ರಮೇಣ ಆ ವಸ್ತುಗಳ ಮೇಲಿನ ಆಕರ್ಷಣೆ ಕಡಿಮೆಯಾಗಿ ಅವುಗಳ ನಿರುಪಯುಕ್ತತೆ ಕಣ್ಣಿಗೆ ರಾಚಲಾರಂಭಿಸುತ್ತದೆ. ಇಷ್ಟೊಂದು ಹಣಕೊಟ್ಟು ಹಠಹಿಡಿದು ತಂದೆನಲ್ಲಾ ಇವುಗಳನ್ನು, ಸುಮ್ಮನೆ ವ್ಯರ್ಥವಾಯಿತು ಎಂದೆನಿಸುತ್ತದೆ. ಉನ್ಮಾದ ಮರೆಯಾಗಿ ವಿವೇಕ ಜಾಗೃತವಾದಾಗ ‘ಕೊಳ್ಳುಬಾಕತನವನ್ನು ಸ್ವಲ್ಪ ನಿಗ್ರಹಿಸಿದ್ದಿದ್ದರೆ, ಹಣವೂ, ಮನೆಯಲ್ಲಿನ ಸ್ಥಳಾವಕಾಶವೂ ಉಳಿಯುತ್ತಿತ್ತು’ ಎಂದು ಮರುಗುತ್ತೇವೆ.

ಇದಕ್ಕೆಲ್ಲಾ ಕಾರಣ ನಾವು ಪ್ರತಿದಿನವೂ ‘ಹೇಳಿಕೊಳ್ಳುವಂತಹ’, ‘ನೆನಪಿಡುವಂತಹ’ ‘ಆಸಕ್ತಿಕರ’ವಾಗಿರುವ ಏನನ್ನಾದರೂ ಮಾಡಬೇಕು, ಪ್ರತಿಕ್ಷಣವೂ ವಿಶೇಷ ರೋಮಾಂಚಕ ಅನುಭವಗಳನ್ನು ಪಡೆಯಬೇಕೆನ್ನುವ ಲಾಲಸೆ. ನಾವು ನಿರಂತರ ಮನೋರಂಜನೆ, ನಿರಂತರ ಪ್ರಚೋದನೆಯನ್ನು ಬಯಸುತ್ತೇವೆ. ಅದು ಸಿಗದಿದ್ದಾಗ ಬಲುಬೇಗ ಬೇಸರಕ್ಕೆ ಒಳಗಾಗುತ್ತೇವೆ ಮತ್ತು ಬೇಸರ ಆದಕೂಡಲೇ ಏನಾದರೂ ಹೊಸದೆನಿಸುವ, ಮೈನವಿರೇಳಿಸುವ ಅನುಭವಕ್ಕೆ ಹಾತೊರೆಯುತ್ತೇವೆ .

ಶಾಪಿಂಗನ್ನು ಉದಾಹರಣೆಗಷ್ಟೇ ಹೇಳಿದ್ದು, ನಿಜದಲ್ಲಿ ಆಧುನಿಕ ಸ್ನೇಹಸಂಬಂಧಗಳಲ್ಲೂ, ನಿತ್ಯದ ಜೀವನದಲ್ಲೂ ಹೀಗೇ ಕ್ಷಣಿಕ ಸುಖಕ್ಕಾಗಿ ಹಂಬಲಿಸಿ, ನವನವೀನ ಅನುಭವಗಳಿಗಾಗಿ ಪರಿತಪಿಸಿ, ಉನ್ಮಾದಕ್ಕೊಳಗಾಗಿ ದಣಿದು ನಮ್ಮನ್ನು ನಾವು ರೂಪಿಸಿಕೊಳ್ಳುವುದಕ್ಕಿಂತ ಹೆಚ್ಚಾಗಿ ನಮ್ಮನ್ನು ನಾವು ಕಳೆದುಕೊಳ್ಳುವುದೇ ಜಾಸ್ತಿ. ಇಂದು ಆಧುನಿಕ ದಾಂಪತ್ಯವು ಕರ್ತವ್ಯ, ಜವಾಬ್ದಾರಿ, ಕುಟುಂಬ ಪಾಲನೆಗಿಂತಲೂ ಹೆಚ್ಚಾಗಿ ‘ಅವಿಸ್ಮರಣೀಯ ಅನುಭವ’ಗಳನ್ನು ಹುಟ್ಟುಹಾಕುವುದರತ್ತಲೇ ಕೇಂದ್ರೀಕೃತವಾಗಿದೆ. ಆಧುನಿಕ ದಾಂಪತ್ಯವು ವ್ಯಕ್ತಿಸ್ವಾತಂತ್ರ್ಯ, ಪ್ರವಾಸ, ಸ್ಮರಣೀಯ ಸಮಾರಂಭಗಳು, ವೈಯಕ್ತಿಕ ಕನಸುಗಳನ್ನು ಒಟ್ಟಿಗೆ ಸಾಕಾರಗೊಳಿಸಿಕೊಳ್ಳುವುದು, ವೈಚಾರಿಕ ಸಾಮರಸ್ಯ ಇನ್ನು ಮುಂತಾದವುಗಳ ಸುತ್ತ ಸುತ್ತುತ್ತಿರುತ್ತದೆಯೇ ಹೊರತು ಮೊದಲಿನಂತೆ ದಾಂಪತ್ಯವೂ ಸಮಾಜದ ಒಂದು ಭಾಗ, ಸಮಾಜದ ಜೊತೆಜೊತೆಗೆ ಬೆಳೆಯುವುದು, ಸಾಮಾಜಿಕ ಹಿತವನ್ನು ಸಾಧಿಸುವುದು ದಾಂಪತ್ಯದ ಗುರಿಗಳಲ್ಲಿ ಮುಖ್ಯವಾದುದು ಎಂದು ಅಂಗೀಕರಿಸಿ ಬಾಳುವುದು ಪ್ರಸ್ತುತತೆ ಕಳೆದುಕೊಳ್ಳುತ್ತಿದೆ.

ಇಲ್ಲಿ ಯಾವುದು ಸರಿ, ಯಾವುದು ತಪ್ಪು, ಹಾಗಾದರೆ ಆಧುನಿಕ ಬದುಕನ್ನು ತ್ಯಜಿಸಿ ಮತ್ತೆ ಪ್ರಾಚೀನಕಾಲಕ್ಕೆ ಮರಳಬೇಕೆ ಎನ್ನುವ ಪ್ರಶ್ನೆಯೇ ಇಲ್ಲ; ಆಧುನಿಕ ಬದುಕು ಅನಿವಾರ್ಯವೂ ಹೌದು, ಅಗತ್ಯವೂ ಹೌದು; ಹಾಗೆ ಕಾಲದೊಟ್ಟಿಗೆ ಹೆಜ್ಜೆ ಹಾಕುವಾಗ ಆಗಬಹುದಾದ ಅವಾಂತರಗಳಿಗೆ ಪರಿಹಾರಗಳನ್ನು ಕಂಡುಕೊಂಡಾಗ ಸಾಂಪ್ರದಾಯಿಕ ನೋಟವನ್ನೂ ಆಧುನಿಕ ನೋಟವನ್ನೂ ಮೇಳೈಸಿ ನಿರಾಮಯವಾಗಿ ಬದುಕುವ ಬಗೆಯನ್ನು ಹುಡುಕಿಕೊಳ್ಳಬೇಕು.

ಇಂದಿನ ಪ್ರಪಂಚದಲ್ಲಿ ಅಧ್ಯಾತ್ಮವೂ ಈ ರೋಚಕತೆಯ ತೃಷೆಯಿಂದ ತಪ್ಪಿಸಿಕೊಂಡಿಲ್ಲ; ಆಧ್ಯಾತ್ಮಿಕ ಜೀವನವೆಂದರೆ ‘ಅಸಾಧಾರಣ ಅನುಭವಗಳು’, ‘ನಿಗೂಢತೆ’, ‘ಪವಾಡಸದೃಶ ಘಟನೆಗಳು’, ‘ಏಕಾಏಕಿ ಎಲ್ಲವೂ ಬದಲಾಗಿಬಿಡುವುದು’ - ಹೀಗೆಲ್ಲಾ ಕಲ್ಪಿಸಿಕೊಳ್ಳುವುದು ಸಾಮಾನ್ಯವಾಗಿಬಿಟ್ಟಿದೆ. ಅಧ್ಯಾತ್ಮವೂ ಸರ್ವವ್ಯಾಪಿಯಾದ ಬೇಸರಕ್ಕೆ ಮದ್ದು ಎಂಬಂತೆ ಬಿಂಬಿತವಾಗುತ್ತಿದೆ.

ಬದುಕಿನಲ್ಲಿ ಬಾಹ್ಯಪ್ರಪಂಚದ ವೈವಿಧ್ಯ, ವಿಸ್ತಾರ, ಆಯ್ಕೆಗಳು ಜಾಸ್ತಿಯಾದಷ್ಟು ಅಂತರಂಗದ ಆಳ, ತೀವ್ರತೆ, ಸ್ಪಷ್ಟತೆ ಕ್ಷೀಣಿಸಿಹೋಗದಂತೆ ಕಾಯ್ದುಕೊಳ್ಳಬೇಕಾಗುತ್ತದೆ. ಒಂದು ಆಯ್ಕೆಯಿಂದ ಮತ್ತೊಂದು ಆಯ್ಕೆಗೆ ಸದಾ ಜಿಗಿಯಲು ತಯಾರಾಗುವ ಮನಸ್ಸಿಗೆ ಬಲುಬೇಗ ಎಲ್ಲ ಆಯ್ಕೆಗಳೂ ನೀರಸ, ನಿರರ್ಥಕ ಎನಿಸತೊಡಗುತ್ತದೆ. ವೈಯಕ್ತಿಕತೆಯ ಸಂಕುಚಿತತೆಯನ್ನು ಮೀರಿ ನಮಗಿಂತ ಬಲು ಹಿರಿದಾದ ಶಾಶ್ವತವಾದ ತತ್ವವೊಂದರಲ್ಲಿ ಮನಸ್ಸು ನೆಲೆನಿಂತಾಗ ನಾವು ಉನ್ಮಾದಕ್ಕಿಂತಲೂ ಉಲ್ಲಾಸವನ್ನೇ ಬದುಕಿನ ಸಾರ್ಥಕತೆಯ ಮಾನದಂಡವಾಗಿಸಿಕೊಳ್ಳುತ್ತೇವೆ. ಉಲ್ಲಾಸ ಚಿತ್ತವಿಕಾರವನ್ನಲ್ಲ, ಚಿತ್ತಶಾಂತಿಯನ್ನು ತಂದುಕೊಡುತ್ತದೆ, ಉಲ್ಲಾಸ ಮನೋದೌರ್ಬಲ್ಯವಲ್ಲ, ಅದು ಮನೋಬಲ. ಉನ್ಮಾದದಿಂದ ಹುಟ್ಟುವ ಚಿತ್ತಚಾಂಚಲ್ಯಕ್ಕೂ ಉಲ್ಲಾಸದಿಂದ ದೊರಕುವ ಅನಾಯಾಸ ಏಕಾಗ್ರತೆಗೂ ಇರುವ ವ್ಯತ್ಯಾಸವನ್ನು ಅರಿಯಬೇಕಾದರೆ ಪ್ರತಿಕ್ಷಣವೂ ನಮ್ಮ ಮನದಲ್ಲೇಳುವ ತರಂಗಗಳನ್ನು ಧ್ಯಾನಶೀಲವಾಗಿ ಪರಿಶೀಲಿಸುವ ಮನೋಚೈತನ್ಯವೂ ಬೇಕು, ಅಭ್ಯಾಸವೂ ಬೇಕು.

ಪ್ರತಿದಿನ ಬೆಳಿಗ್ಗೆ ಸೂರ್ಯೋದಯ ನೋಡುತ್ತೇವಾದರೂ ‘ಅಯ್ಯೋ, ಸೂರ್ಯೋದಯ ಬಲು ಬೋರು’ ಎನ್ನುವುದಿಲ್ಲ; ‘ಆಹಾ, ಸೂರ್ಯೋದಯ ಅದೆಷ್ಟು ಸುಂದರ’ ಎನ್ನುತ್ತೇವೆ. ಶ್ರೇಷ್ಠ ಕಾವ್ಯವೂ ಕಲಾಕೃತಿಯೂ ಹಾಗೆಯೇ. ಅದರಿಂದ ನಾವು ಪಡೆಯುವ ಅನುಭವ, ಆನಂದ ನಿತ್ಯನೂತನ, ಆ ಆನಂದ ನಮ್ಮ ಆತ್ಮೋನ್ನತಿಗೆ ಪೂರಕ, ಸತ್ಕರ್ಮಗಳಿಗೆ ಪ್ರೇರಕ. ಅಂತಹ ಉಲ್ಲಾಸವು ಉನ್ಮಾದದಂತೆ ಆಯಾಸಕಾರಕವಲ್ಲ, ಆಯಾಸಪರಿಹಾರಕ. ಪ್ರತಿದಿನವೂ ಹೊಸತು ಎಂಬುದರಂತೆ ಬಾಳಲು ಹೊಸ ಹೊಸ ಬದುಕುಗಳನ್ನು ಹುಡುಕಿ ದಣಿಯಬೇಕಾದ್ದಿಲ್ಲ, ಕಾಣುವ ಕಣ್ಣನ್ನು, ಮನಸ್ಸನ್ನು ಎಚ್ಚರ, ಅರಿವು, ವಿವೇಕಗಳಿಂದ ಬೆಳಗುವಂತೆ ನೋಡಿಕೊಂಡರೆ ಸಾಕು. v

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260519-51-763328848

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.