ಮುಂಶಿ ಇಂದ್ರಮಣಿಯವರ ಆದಾಯ ಕಡಿಮೆಯಿದ್ದು, ಖರ್ಚು ಹೆಚ್ಚಿತ್ತು. ತಮ್ಮ ಮಗುವಿನ ದಾದಿಯ ಖರ್ಚನ್ನು ಭರಿಸುವ ಶಕ್ತಿ ಸಹ ಇರಲಿಲ್ಲ. ಒಂದೆಡೆ ಮಗುವಿನ ಶುಷ್ರೂಸೆಯ ಚಿಂತೆ, ಇನ್ನೊಂದೆಡೆ ತಮ್ಮ ಸರಿಸಮಾನರೊಂದಿಗೆ ಕೆಳಮಟ್ಟದವರಾಗಿ ಜೀವನ ಸಾಗಿಸುವ ಅವಮಾನ; ಈ ಖರ್ಚನ್ನು ಸಹಿಸಲು ವಿವಶಗೊಳಿಸುತ್ತಿತ್ತು. ಮಗು ದಾದಿಯನ್ನು ತುಂಬಾ ಇಷ್ಟಪಡುತ್ತಿತ್ತು. ಸದಾ ಅವಳ ಕೊರಳಿನ ಹಾರವಾಗಿರುತ್ತಿತ್ತು. ಹೀಗಾಗಿ ದಾದಿ ತುಂಬಾ ಅಗತ್ಯವೆಂದು ತೋರುತ್ತಿದ್ದಳು, ಆದರೆ ಅದಕ್ಕಿಂತ ಮಹತ್ವದ ಕಾರಣವೆಂದರೆ, ದಾಕ್ಷಿಣ್ಯದಿಂದಾಗಿ ಅವರು ದಾದಿಯನ್ನು ಅಲ್ಲಗೆಳೆಯುವ ಧೈರ್ಯ ತೋರಲು ಸಾಧ್ಯವಿರಲಿಲ್ಲ. ವೃದ್ಧೆ ದಾದಿ ಅವರ ಮನೆಯಲ್ಲಿ ಮೂರು ವರ್ಷಗಳಿಂದ ನೌಕರಿಯನ್ನು ಮಾಡುತ್ತಿದ್ದಳು. ಅವಳು ಅವರ ಏಕಮಾತ್ರ ಪುತ್ರನನ್ನು ಪೋಷಿಸಿದ್ದಳು, ತನ್ನ ಕೆಲಸವನ್ನು ತುಂಬಾ ಶ್ರದ್ಧೆ ಮತ್ತು ಶ್ರಮದಿಂದ ನಿರ್ವಹಿಸುತ್ತಿದ್ದಳು. ಅವಳನ್ನು ಕೆಲಸದಿಂದ ತೆಗೆದು ಹಾಕಲು ಯಾವುದೇ ನೆಪವಿರಲಿಲ್ಲ. ವ್ಯರ್ಥವಾಗಿ ತಪ್ಪು ಹುಡುಕುವುದು ಇಂದ್ರಮಣಿಯವರಂಥ ಒಳ್ಳೆಯ ಮನುಷ್ಯರ ಸ್ವಭಾವಕ್ಕೆ ವಿರುದ್ಧವಾಗಿತ್ತು. ಆದರೆ ಸುಖದಾ ಈ ಬಗ್ಗೆ ತನ್ನ ಪತಿಯ ಅಭಿಪ್ರಾಯವನ್ನು ಒಪ್ಪುತ್ತಿರಲಿಲ್ಲ. ದಾದಿ ನಮ್ಮನ್ನು ಕೊಳ್ಳೆ ಹೊಡೆಯುತ್ತಾಳೆ ಎಂದು ಅವಳಿಗೆ ಸಂಶಯವಿತ್ತು. ದಾದಿ ಪೇಟೆಯಿಂದ ಮರಳಿ ಬರುವಾಗ ಅವಳು ವರಾಂಡದಲ್ಲಿ ಅಡಗಿ ಕೂತು, ಹಿಟ್ಟನ್ನು ಮತ್ತು ಸೌದೆಯನ್ನು ಎಲ್ಲಿ ಬಚ್ಚಿಡುತ್ತಾಳೆ ಎಂದು ಗಮನಿಸುತ್ತಿದ್ದಳು. ಅವಳು ತಂದ ವಸ್ತುಗಳನ್ನು ಗಂಟೆಗಟ್ಟಲೆ ನೋಡುತ್ತಿದ್ದಳು, ಅವುಗಳ ಬಗ್ಗೆ ವಿಚಾರಿಸುತ್ತಿದ್ದಳು. ಇದಕ್ಕೆಷ್ಟು ಬೆಲೆ? ಅಷ್ಟು ದುಬಾರಿಯಾಯಿತೇ? ಎಂದು ಕೇಳುತ್ತಿದ್ದಳು. ದಾದಿ ಒಮ್ಮೊಮ್ಮೆ ಇಂಥ ಸಂದೇಹದ ಪ್ರಶ್ನೆಗಳಿಗೆ ವಿನಯದಿಂದ ಉತ್ತರಿಸುತ್ತಿದ್ದಳು, ಆದರೆ ಸುಖದಾ ಹೆಚ್ಚು ತೀಕ್ಷ್ಣವಾದಾಗ ಅವಳೂ ಸಹ ಎದುರುತ್ತರ ಕೊಡುತ್ತಿದ್ದಳು; ಆಣೆಗಳನ್ನು ಹಾಕುತ್ತಿದ್ದಳು. ಪ್ರಾಮಾಣಿಕತೆಗೆ ಪುರಾವೆಗಳನ್ನು ಕೊಡುತ್ತಿದ್ದಳು. ವಾದ-ವಿವಾದಗಳಿಗೆ ಗಂಟೆಗಟ್ಟಲೆ ಸಮಯ ಹಿಡಿಯುತ್ತಿತ್ತು. ಸಾಮಾನ್ಯವಾಗಿ ನಿತ್ಯದ ಪರಿಸ್ಥಿತಿ ಹೀಗೆಯೇ ಇರುತ್ತಿತ್ತು. ನಿತ್ಯ ಈ ನಾಟಕ ದಾದಿಯ ಕಣ್ಣೀರಿನೊಂದಿಗೆ ಕೊನೆಗೊಳ್ಳುತ್ತಿತ್ತು. ದಾದಿ ಇಷ್ಟೆಲ್ಲಾ ಕಠೋರತೆಯನ್ನು ಸಹಿಸಿಕೊಳ್ಳುವುದನ್ನು ನೋಡಿ ಸುಖದಾಳ ಸಂದೇಹ ಮತ್ತಷ್ಟು ಪುಷ್ಟಿಗೊಳ್ಳುತ್ತಿತ್ತು. ಈ ವೃದ್ಧೆ ಮಗುವಿನ ಪ್ರೇಮಪಾಶದಲ್ಲಿ ಸಿಲುಕಿದ್ದಾಳೆ ಎಂದು ಅವಳಿಗೆ ನಂಬಿಕೆಯಾಗುತ್ತಿರಲಿಲ್ಲ. ಅವಳು ವೃದ್ಧೆಗೆ ಇಷ್ಟೆಲ್ಲಾ ಮಗುವಿನ ಬಗ್ಗೆ ಪ್ರೀತಿಯಿದೆ ಎಂದೂ ತಿಳಿಯುತ್ತಿರಲಿಲ್ಲ.

ಸಂಯೋಗವೆಂಬಂತೆ ಅದೊಂದು ದಿನ ದಾದಿಗೆ ಪೇಟೆಯಿಂದ ಮರಳಿ ಬರುವಲ್ಲಿ ಸ್ವಲ್ಪ ತಡವಾಯಿತು. ಅಲ್ಲಿ ಇಬ್ಬರು ತರಕಾರಿ ವ್ಯಾಪಾರಿಗಳಲ್ಲಿ ದೇವಾಸುರ ಸಂಗ್ರಾಮ ಆರಂಭವಾಗಿತ್ತು. ಅವರ ಹಾವ-ಭಾವ, ತರ್ಕ-ವಿತರ್ಕ, ಕಟಾಕ್ಷ ಮತ್ತು ವ್ಯಂಗ್ಯ ಮಾತುಗಳು ಅನುಪಮವಾಗಿದ್ದವು. ವಿಷದ ಎರಡು ನದಿಗಳು ಅಥವಾ ಜ್ವಾಲೆಯ ಎರಡು ಪರ್ವತಗಳು ಎರಡೂ ಕಡೆಯಿಂದ ಉಕ್ಕಿ ಬಂದು ಪರಸ್ಪರ ಡಿಕ್ಕಿ ಹೊಡೆದಿದ್ದವು. ಅವರ ವಾಕ್ಯ-ಪ್ರವಾಹ ವಿಚಿತ್ರವಾಗಿತ್ತು. ಅವರ ಶಬ್ದ-ಬಾಹುಳ್ಯ, ಅವರ ಮಾರ್ಮಿಕ ವಿಚಾರಗಳು, ಅವರ ಅಲಂಕಾರದ ಶಬ್ದ-ವಿನ್ಯಾಸ ಮತ್ತು ಅವರ ಉಪಮೆಗಳ ನಾವಿನ್ಯತೆಗೆ ಮುಗ್ಧನಾಗದ ಕವಿ ಯಾರಿದ್ದಾರೆ! ಅವರ ಧೈರ್ಯ ಮತ್ತು ಶಾಂತಿ ವಿಸ್ಮಯಕರವಾಗಿತ್ತು. ಅಲ್ಲಿ ದರ್ಶಕರ ವಿಶೇಷ ಗುಂಪು ಸಹ ಇತ್ತು. ಲಜ್ಜೆಯನ್ನು ಸಹ ಲಜ್ಜಿತಗೊಳಿಸುವ ಸಂಜ್ಞೆಗಳು, ಮಾಲಿನ್ಯದ ಕಿವಿಗಳು ಸಹ ನಿಮಿರುವಂಥ ಅಶ್ಲೀಲ ಶಬ್ದಗಳು, ಸಹಸ್ರಾರು ರಸಿಕರಿಗೆ ಮನರಂಜನೆಯ ಸಾಮಗ್ರಿಗಳಾಗಿದ್ದವು.

ವಿಷಯವೇನೆಂದು ತಿಳಿಯಲು ದಾದಿ ಸಹ ಅಲ್ಲಿ ನಿಂತಳು. ಮನರಂಜನೆ ಎಷ್ಟು ತಮಾಷೆಯಾಗಿತ್ತೆಂದರೆ, ಅವಳಿಗೆ ಸಮಯದ ಪ್ರಜ್ಞೆಯೇ ಇಲ್ಲದಂತಾಯಿತು. ಅಕಸ್ಮಾತ್ ಒಂಬತ್ತು ಗಂಟೆಯ ಶಬ್ದ ಕೇಳಿ, ಗಾಬರಿಗೊಂಡು ಮನೆಯೆಡೆಗೆ ಹೊರಟಳು.
ಸುಖದಾ ಕಾಯುತ್ತಾ ಕೂತಿದ್ದಳು. ದಾದಿಯನ್ನು ನೋಡಿದೊಡನೆಯೇ ಮುಖ-ಭಾವ ಬದಲಿಸಿ ಕೇಳಿದಳು –“ಪೇಟೆಯಲ್ಲಿ ಕಳೆದು ಹೋಗಿದ್ಯಾ?”

ದಾದಿ ವಿನಯದಿಂದ ಹೇಳಿದಳು –“ಗುರುತು ಪರಿಚಯದ ಯಜಮಾನಿಯೊಂದಿಗೆ ಭೇಟಿಯಾಯ್ತು. ಅವಳು ಮಾತಿಗಿಳಿದಳು.”
ಈ ಉತ್ತರದಿಂದ ಸುಖದಾ ಇನ್ನಷ್ಟು ರೇಗಿದಳು –“ಇಲ್ಲಿ ಕಚೇರಿಗೆ ಹೋಗಲು ತಡವಾಗ್ತಿದೆ, ಆದ್ರೆ ನಿನಗೆ ಅಡ್ಡಾಡೋದು ಬೇಕಿದೆ.”
ಆದರೆ ದಾದಿ ಈಗ ಮೌನವಾಗಿರುವುದು ಲೇಸೆಂದು ತಿಳಿದು, ಮಗುವನ್ನೆತ್ತಿಕೊಂಡು ಹೋದಳು. ಆದರೆ ಸುಖದಾ ರೇಗಿದಳು –“ಇರ್ಲಿ ಬಿಡು, ನೀನಿಲ್ಲದಿದ್ದರೆ ಮಗುವೇನು ಹಟ ಮಾಡಲ್ಲ.”

ದಾದಿ ಆದೇಶವನ್ನು ಪಾಲಿಸುವುದು ಅವಶ್ಯವೆಂದು ತಿಳಿಯಲಿಲ್ಲ. ಸುಖದಾಳ ಸಿಟ್ಟನ್ನು ತಣ್ಣಗಾಗಿಸಲು ಇದಕ್ಕಿಂತ ಬೇರೆ ಉಪಾಯ ಹೊಳೆಯಲಿಲ್ಲ. ಅವಳು ರುದ್ರಮಣಿಯನ್ನು ಸಂಜ್ಞೆ ಮಾಡಿ ತನ್ನ ಸಮೀಪಕ್ಕೆ ಕರೆದಳು. ಅವನು ಎರಡೂ ಕೈಗಳನ್ನು ಚಾಚಿ, ಒಲಾಡುತ್ತಾ-ತಡಬಡಿಸುತ್ತಾ ಅವಳೆಡೆಗೆ ಹೋದ. ದಾದಿ ಅವನನ್ನೆತ್ತಿಕೊಂಡು, ಬಾಗಿಲೆಡೆಗೆ ಹೋದಳು, ಅದರೆ ಸುಖದಾ ಹದ್ದಿನಂತೆ ಹಾರಿ ಹೋಗಿ ರುದ್ರನನ್ನು ಅವಳಿಂದ ಕಸಿದುಕೊಂಡು ಹೇಳಿದಳು –“ನಿನ್ನ ಈ ದುಷ್ಟತನವನ್ನು ತುಂಬಾ ದಿನಗಳಿಂದ ನೋಡ್ತಿದ್ದೇನೆ. ಈ ತಮಾಷೆಯನ್ನು ಬೇರೆಯವರಿಗೆ ತೋರ್ಸು. ಇಲ್ಲಿ ಸಾಕಾಯ್ತು.”

ದಾದಿ ರುದ್ರನನ್ನು ಮನಸಾರೆ ಪ್ರೀತಿಸುತ್ತಿದ್ದಳು, ಈ ವಿಷಯ ಸುಖದಾಳಿಗೆ ತಿಳಿದಿದೆ ಎಂಬುದು ಅವಳಿಗೆ ಗೊತ್ತಿತ್ತು. ಸುಖದಾ ಮತ್ತು ತನ್ನ ನಡುವೆ ಬಲವಾದ ಸಂಬಂಧವಿದೆ, ಅದನ್ನು ಸಾಮಾನ್ಯ ಹೊಡೆತ ಮುರಿಯಲು ಸಾಧ್ಯವಿಲ್ಲವೆಂಬುದು ಅವಳ ತಿಳಿವಳಿಕೆಯಾಗಿತ್ತು. ಅದಕ್ಕಾಗಿಯೇ ದಾದಿಗೆ ಸುಖದಾಳ ಕಹಿ ಮಾತುಗಳನ್ನು ಕೇಳಿಯೂ, ಅವಳು ನನ್ನನ್ನು ಹೊರಹಾಕುವ ಯೋಚನೆಯಲ್ಲಿದ್ದಾಳೆ ಎಂದು ನಂಬಿಕೆಯಾಗುತ್ತಿರಲಿಲ್ಲ. ಆದರೆ ಸುಖದಾ ಹೇಳಿದ ಕಠೋರ ಮಾತಿನಿಂದ ಹಾಗೂ ರುದ್ರನನ್ನು ನಿರ್ದಯತೆಯಿಂದ ತನ್ನಿಂದ ಕಸಿದುಕೊಂಡಿದ್ದನ್ನು ದಾದಿ ಸಹಿಸದಾದಳು.

“ನೋಡಿ! ನನ್ನಿಂದ ದೊಡ್ಡ ಅಪರಾಧವೇನೂ ಆಗಿಲ್ಲ, ಸ್ವಲ್ಪ ತಡವಾಗಿರಬಹುದು, ಅದಕ್ಕೆ ನೀವಿಷ್ಟು ರೇಗುತ್ತಿದ್ದೀರ, ಇನ್ನೊಂದು ಮನೆ ನೋಡಿಕೋ ಅಂತ ಸ್ಪಷ್ಟವಾಗಿ ಏಕೆ ಹೇಳ್ತಿಲ್ಲ? ಹುಟ್ಟಿಸಿದ ದೇವರು ಹುಲ್ಲು ಮೇಯ್ಸಲ್ಲ. ಕೂಲಿ ಕೆಲಸದವರಿಗೆ ಕೊರತೆಯೂ ಇಲ್ಲ” ಎಂದಳು ದಾದಿ.

ಸುಖದಾ –“ಇಲ್ಲಿ ನಿನ್ನನ್ಯಾರು ಕೇಳ್ತಾರೆ? ನಿನ್ನಂಥವರು ಗಲ್ಲಿ-ಗಲ್ಲಿಗಳಲ್ಲಿ ಸಿಗ್ತಾರೆ.”
ದಾದಿ -“ಹೌದು, ದೇವರು ನಿಮ್ಮನ್ನು ಸುಖವಾಗಿಡಲಿ. ಕೆಲಸದ ಹೆಂಗಸರು ಮತ್ತು ದಾದಿಯರು ನಿಮಗೆ ಬೇಕಾದಷ್ಟು ಜನ ಸಿಗ್ತಾರೆ. ನನ್ನಿಂದಾದ ಅಪರಾಧವನ್ನು ಕ್ಷಮಿಸಿ. ನಾನು ಹೋಗ್ತೀನಿ.”
ಸುಖದಾ –“ಹೋಗಿ ಅವರ ಹತ್ರ ನಿನ್ನ ಲೆಕ್ಕ ಮಾಡಿಸು.”
ದಾದಿ -“ನನ್ನ ಕಡೆಯಿಂದ ರುದ್ರನಿಗೆ ಮಿಠಾಯಿ ತರಿಸಿ ಕೊಡಿ.”
ಅಷ್ಟರಲ್ಲಿ ಇಂದ್ರಮಣಿ ಹೊರಗಿನಿಂದ ಬಂದು ಕೇಳಿದರು –“ಏನು-ಏನು?”
ದಾದಿ -“ಏನಿಲ್ಲ. ಅಮ್ಮಾವ್ರು ಹೋಗು ಅಂದ್ರು, ಮನೆಗೆ ಹೋಗ್ತೀನಿ.”
ಇಂದ್ರಮಣಿಯವರು ಗೃಹಸ್ಥ-ಜೀವನದಿಂದ, ಬರಿಗಾಲಿನ ವ್ಯಕ್ತಿಯೊಬ್ಬ ಮುಳ್ಳಿನಿಂದ ಪಾರಾಗುವಂತೆ ಪಾರಾಗುತ್ತಿದ್ದರು. ಅವರಿಗೆ ಇಡೀ ದಿನ ಒಂದೇ ಜಾಗದಲ್ಲಿ ನಿಲ್ಲುವುದು ಒಪ್ಪಿಗೆಯಿತ್ತು, ಆದರೆ ಮುಳ್ಳುಗಳ ಮೇಲೆ ಕಾಲಿಡುವ ಧೈರ್ಯವಿರಲಿಲ್ಲ. ಅವರು ದುಃಖದಿಂದ ಕೇಳಿದರು –“ಏನಾಯ್ತು?”
ಸುಖದಾ –“ಏನಿಲ್ಲ. ನಮ್ಮಿಷ್ಟ. ಮನಸ್ಸಿಲ್ಲ, ಇಟ್ಟುಕೊಳ್ಳಲ್ಲ. ನಾವು ಯಾರಿಗೂ ಮಾರಾಟವಾಗಿಲ್ಲ.”
ಇಂದ್ರಮಣಿ ರೇಗುತ್ತಾ ಹೇಳಿದರು –“ಕೂತು-ಕೂತು ನಿನಗೆ ಒಂದಲ್ಲ ಒಂದು ತಪ್ಪು ಕಾಣಿಸುತ್ತೆ.”
ಸುಖದಾ ಸಹ ರೇಗಿ ಹೇಳಿದಳು –“ಹೌದು, ನನಗೆ ಈ ರೋಗವಿದೆ. ನನ್ನ ಸ್ವಭಾವವೇ ಹೀಗೆ. ನಿಮಗೆ ಅವಳು ಇಷ್ಟವಾದರೆ, ಕರ್ಕೊಂಡ್ ಹೋಗಿ ಕೊರಳಿಗೆ ಕಟ್ಟಿಕೊಳ್ಳಿ, ನನಗಿಲ್ಲಿ ಅವಳ ಅವಶ್ಯಕತೆಯಿಲ್ಲ.”

ದಾದಿ ಮನೆಯಿಂದ ಹೊರಟಾಗ, ಅವಳ ಕಣ್ಣುಗಳು ದುಃಖದಿಂದ ತುಂಬಿ ಬಂದಿದ್ದವು. ಅವಳ ಹೃದಯ ರುದ್ರಮಣಿಗಾಗಿ ಕಾತರಿಸುತ್ತಿತ್ತು. ಒಮ್ಮೆ ಮಗುವನ್ನೆತ್ತಿಕೊಂಡು ಮುದ್ದಾಡಲು ಮನಸ್ಸಾಗುತ್ತಿತ್ತು; ಆದರೆ ಈ ಆಸೆಯೊಂದಿಗೇ ಅವಳು ಮನೆಯಿಂದ ಹೊರ ಹೋಗಬೇಕಾಯಿತು. ರುದ್ರಮಣಿ ದಾದಿಯ ಹಿಂದೆ ಬಾಗಿಲವರೆಗೆ ಬಂದ, ಆದರೆ ದಾದಿ ಹೊರಗಿನಿಂದ ಬಾಗಿಲನ್ನು ಮುಚ್ಚಿದಾಗ ಅವನು ನೆಲದ ಮೇಲೆ ಮಲಗಿ ‘ದಾದಿ-ದಾದಿ’ ಎಂದು ರೋದಿಸಿದ. ಸುಖದಾ ಅವನನ್ನು ಎತ್ತಿಕೊಂಡು ಮುದ್ದಾಡಿದಳು, ಮಿಠಾಯಿ ಕೊಡುವ ಆಸೆ ತೋರಿಸಿದಳು, ಜಾತ್ರೆಗೆ ಕರೆದುಕೊಂಡು ಹೋಗುವುದಾಗಿ ಹೇಳಿದಳು; ಆದರೆ ಮಗು ಅಳುವನ್ನು ನಿಲ್ಲಿಸದಿದ್ದಾಗ ಮಂಗ, ಪೊಲೀಸು ಮತ್ತು ಗುಮ್ಮನಿಗೆ ಕೊಡುವುದಾಗಿ ಬೆದರಿಸಿದಳು. ಆದರೆ ರುದ್ರ, ರೌದ್ರಾವತಾರವನ್ನು ತಾಳಿದ್ದ, ಅವನು ಯಾವುದಕ್ಕೂ ಬಾಯಿ ಮುಚ್ಚಲಿಲ್ಲ. ಸುಖದಾ ಸಿಟ್ಟಿನಿಂದ ಅವನನ್ನು ಅಲ್ಲಿಯೇ ಬಿಟ್ಟು, ಮನೆಯ ಕೆಲಸದಲ್ಲಿ ತೊಡಗಿದಳು. ಅತ್ತೂ-ಅತ್ತೂ ರುದ್ರನ ಗಲ್ಲಗಳು ಕೆಂಪಗಾದವು, ಕಣ್ಣುಗಳು ಉಬ್ಬಿದವು. ಕಡೆಗೆ ಬಿಕ್ಕಳಿಸುತ್ತಾ ಅಲ್ಲಿಯೇ ನಿದ್ರೆ ಮಾಡಿದ.

ಮಗು ಸ್ವಲ್ಪ ಹೊತ್ತು ಅತ್ತೂ-ಕರೆದು ಸುಮ್ಮನಾಗುತ್ತದೆ ಎಂದು ಸುಖದಾ ತಿಳಿದಳು, ಆದರೆ ರುದ್ರ ಎಚ್ಚರಗೊಳ್ಳುತ್ತಲೇ ಮತ್ತೆ ದಾದಿ-ದಾದಿ ಎಂದ. ಇಂದ್ರಮಣಿಯವರು ಮೂರು ಗಂಟೆಗೆ ಕಚೇರಿಯಿಂದ ಬಂದು ಮಗುವಿನ ಪರಿಸ್ಥಿತಿಯನ್ನು ನೋಡಿದರು; ಅವರು ಕೋಪದಿಂದ ಹೆಂಡತಿಯನ್ನು ನೋಡಿ, ಮಗುವನ್ನು ಎತ್ತಿಕೊಂಡು, ಸಮಾಧಾನ ಮಾಡಲಾರಂಭಿಸಿದರು. ಕಡೆಗೆ ರುದ್ರನಿಗೆ ದಾದಿ ಮಿಠಾಯಿ ತರಲು ಹೋಗಿದ್ದಾಳೆ ಎಂದಾಗ ಅವನಿಗೆ ಸಂತೋಷವಾಯಿತು.

ಆದರೆ ಸಂಜೆಯಾಗುತ್ತಲೇ ರುದ್ರ ಮತ್ತೆ ಕಿರುಚಿದ –“ದಾದಿ! ಮಿಠಾಯಿ ಕೊಡು.”

ಹೀಗೆ ಎರಡು-ಮೂರು ದಿನಗಳು ಕಳೆದವು. ರುದ್ರನಿಗೆ ದಾದಿ-ದಾದಿ ಎಂದು ಕರೆಯುವುದು ಮತ್ತು ರೋದಿಸುವುದನ್ನು ಬಿಟ್ಟರೆ ಬೇರೆ ಕೆಲಸವಿರಲಿಲ್ಲ. ಅವನ ಮಡಿಲಿನಿಂದ ಒಂದು ಕ್ಷಣ ಸಹ ಇಳಿಯದ ಶಾಂತ ಸ್ವಭಾವದ ನಾಯಿ; ಅವನು ಸಂತೋಷಪಡುತ್ತಿದ್ದ ಕತ್ತಲೆಯಲ್ಲಿದ್ದ ಮೌನವ್ರತಧಾರಿ ಬೆಕ್ಕು; ಅವನು ಜೀವ ಕೊಡುತ್ತಿದ್ದ ರೆಕ್ಕೆಯಿಲ್ಲದ ಪಕ್ಷಿ ಎಲ್ಲವೂ ಅವನ ಮನಸ್ಸಿನಿಂದ ದೂರವಾದವು. ರುದ್ರ ಅವುಗಳೆಡೆಗೆ ಕಣ್ಣೆತ್ತಿಯೂ ನೋಡುತ್ತಿರಲಿಲ್ಲ. ದಾದಿಯಂತೆ ಪ್ರೀತಿಸುವ, ಮಡಿಲಿನಲ್ಲೆತ್ತಿಕೊಂಡು ಮುದ್ದಾಡುವ, ತಟ್ಟಿ-ತಟ್ಟಿ ಮಲಗಿಸುವ, ಹಾಡಿ-ಹಾಡಿ ಖುಷಿಪಡಿಸುವ ದಾದಿ ಎದುರು ಆ ನಿರ್ಜೀವ ವಸ್ತುಗಳಿಗೆ ಮಹತ್ವವಿರಲಿಲ್ಲ. ಅವನು ನಿದ್ರಿಸುತ್ತಿರುವಾಗ ಗಾಬರಿಗೊಳ್ಳುತ್ತಿದ್ದ, ದಾದಿ-ದಾದಿ ಎಂದು ಅವಳನ್ನು ಕರೆಯುವಂತೆ ಕೈಗಳಿಂದ ಸಂಜ್ಞೆ ಮಾಡುತ್ತಿದ್ದ. ದಾದಿಯ ಶೂನ್ಯ ಕೋಣೆಯಲ್ಲಿ ಗಂಟೆಗಟ್ಟಲೆ ಕೂತಿರುತ್ತಿದ್ದ; ದಾದಿ ಇಲ್ಲಿಗೆ ಬರಬಹುದೆಂಬ ಆಸೆಯಾಗುತ್ತಿತ್ತು. ಕೋಣೆಯ ಬಾಗಿಲು ತೆರೆಯುತ್ತಲೇ ದಾದಿ-ದಾದಿ ಎಂದು ಓಡಿ ಬರುತ್ತಿದ್ದ! ದಾದಿ ಬಂದಳೆಂದು ತಿಳಿಯುತ್ತಿದ್ದ. ಅವನ ತುಂಬಿದ ಶರೀರ ಬಾಡಿತು, ಗುಲಾಬಿಯಂಥ ಮುಖ ಒಣಗಿತು, ತಂದೆ-ತಾಯಿ ಅವನ ಮೋಹಕ ನಗುವಿಗಾಗಿ ಕಾತರಿಸುತ್ತಿದ್ದರು. ಒಂದು ವೇಳೆ ಕಚಗುಳಿಯಿಟ್ಟಾಗ ಅಥವಾ ತಮಾಷೆ ಮಾಡಿ ನಗಿಸಿದಾಗ್ಯೂ, ಮನಃಪೂರ್ವಕವಾಗಿ ನಗುತ್ತಿರಲಿಲ್ಲವೆಂದು ತೋರುತ್ತಿತ್ತು. ಈಗ ಅವನಿಗೆ ಹಾಲು ಕುಡಿಯಲು ಇಷ್ಟವಿರಲಿಲ್ಲ, ಕಲ್ಲುಸಕ್ಕರೆ ತಿನ್ನಲು, ಸಿಹಿ ಬಿಸ್ಕತ್ತು ತಿನ್ನಲು, ಜಿಲೇಬಿ ತಿನ್ನಲು ಆಸಕ್ತಿಯಿರಲಿಲ್ಲ; ದಾದಿ ತನ್ನ ಕೈಯಾರೆ ತಿನಿಸುವಾಗ ಮಜವೆನಿಸುತ್ತಿತ್ತು. ಎರಡು ವಯಸ್ಸಿನ ಸುಂದರ ಗಿಡವೊಂದು ಬಾಡಿತು; ಈ ಮೊದಲು ಮಡಿಲಿಗೆ ಎತ್ತಿಕೊಳ್ಳುತ್ತಲೇ ಮೃದುವಾದ, ಬೆಚ್ಚನೆಯ ಮತ್ತು ಭಾರದ ಅನುಭವವಾಗುತ್ತಿದ್ದ ಮಗು ಈ ಒಣಗಿ ಮುಳ್ಳಾಯಿತು. ಸುಖದಾ ತನ್ನ ಮಗುವಿನ ಈ ಅವಸ್ಥೆಯನ್ನು ನೋಡಿ ಒಳಗೊಳಗೇ ಕೊರಗುತ್ತಿದ್ದಳು, ತನ್ನ ಮೂರ್ಖತನಕ್ಕೆ ಪಶ್ಚಾತ್ತಾಪ ಪಡುತ್ತಿದ್ದಳು. ಶಾಂತಿಪ್ರಿಯರಾಗಿದ್ದ ಇಂದ್ರಮಣಿಯವರು ಈಗ ಮಗುವನ್ನು ಮಡಿಲಿನಿಂದ ಕೆಳಗಿಳಿಸುತ್ತಿರಲಿಲ್ಲ, ನಿತ್ಯ ಮಗುವನ್ನು ಅಡ್ಡಾಡಿಸಲು ಕರೆದೊಯ್ಯುತ್ತಿದ್ದರು, ನಿತ್ಯ ಹೊಸ ಆಟಿಕೆಗಳನ್ನು ತರುತ್ತಿದ್ದರು, ಆದರೆ ಬಾಡಿದ ಗಿಡ ಯಾವ ವಿಧದಲ್ಲೂ ಚಿಗುರುತ್ತಿರಲಿಲ್ಲ. ದಾದಿ ಮಗುವಿಗೆ ಜಗತ್ತಿನ ಸೂರ್ಯ ಆಗಿದ್ದಳು. ದಾದಿಯಿಲ್ಲದೆ ಮಗುವಿಗೆ ಎಲ್ಲೆಲ್ಲೂ ನಿಶ್ಶಬ್ದತೆ ಕಾಣ ಬರುತ್ತಿತ್ತು. ಬೇರೊಬ್ಬ ದಾದಿಯನ್ನು ಮೂರನೆಯ ದಿನವೇ ನೇಮಕ ಮಾಡಿಕೊಳ್ಳಲಾಗಿತ್ತು, ಆದರೆ ರುದ್ರ ಅವಳ ಮುಖವನ್ನು ನೋಡಿದೊಡನೆಯೇ, ರಾಕ್ಷಸಿಯನ್ನು ನೋಡಿದವನಂತೆ ಅಡಗಿ ಕೂರುತ್ತಿದ್ದ.

ರುದ್ರ ಪ್ರತ್ಯಕ್ಷವಾಗಿ ದಾದಿಯನ್ನು ಕಾಣದೆ ಈಗ ಅವಳ ಕಲ್ಪನೆಯಲ್ಲಿ ಮಗ್ನನಾಗಿರುತ್ತಿದ್ದ. ಕಲ್ಪನೆಯಲ್ಲಿ ದಾದಿ ಓಡಾಡಿದಂತೆ ತೋರುತ್ತಿದ್ದಳು, ಅವಳ ಅದೇ ಮಡಿಲು, ಅದೇ ಪ್ರೀತಿಯ ಮಾತುಗಳು, ಅದೇ ಪ್ರೀತಿಯ ಹಾಡು, ಅದೇ ಸಿಹಿ ತಿನಿಸುಗಳು, ಅದೇ ಸುಂದರ ಜಗತ್ತು, ಅದೇ ಆನಂದದ ಬದುಕು! ಒಂಟಿಯಾಗಿ ಕೂತು ಕಲ್ಪಿಸಿಕೊಂಡ ದಾದಿಯೊಂದಿಗೆ ಮಾತನಾಡುತ್ತಿದ್ದ.

ಬೆಳಗಾಗುತ್ತಲೇ ಲೋಟ ಹಿಡಿದು ದಾದಿಯ ಕೋಣೆಗೆ ಹೋಗಿ ಹೇಳುತ್ತಿದ್ದ –“ದಾದಿ, ನೀರು ಬೇಕು.” ಹಾಲಿನ ಗ್ಲಾಸ್ ಹಿಡಿದು ಅವಳ ಕೋಣೆಗೆ ಹೋಗಿ ಅಲ್ಲಿಟ್ಟು ಬಂದು ಹೇಳುತ್ತಿದ್ದ –“ದಾದಿ, ಹಾಲು ಕುಡಿಸು.” ತನ್ನ ಮಂಚದ ಮೇಲೆ ದಿಂಬಿಟ್ಟು ಅದನ್ನು ರಗ್ಗಿನಿಂದ ಮುಚ್ಚಿ, ‘ದಾದಿ ನಿದ್ರಿಸುತ್ತಾಳೆ’ ಎನ್ನುತ್ತಿದ್ದ. ಸುಖದಾ ಊಟಕ್ಕೆ ಕೂತಾಗ ಪಾತ್ರೆಗಳನ್ನು ದಾದಿಯ ಕೋಣೆಗೆ ತೆಗೆದುಕೊಂಡು ಹೋಗಿ ‘ದಾದಿ ಊಟ ಮಾಡ್ತಾಳೆ’ ಎನ್ನುತ್ತಿದ್ದ. ಅವನಿಗೆ ದಾದಿ ಸ್ವರ್ಗದ ವಸ್ತುವಾಗಿದ್ದಳು, ಅವಳು ಮರಳಿ ಬರುವ ಆಸೆ ಇರಲಿಲ್ಲ. ರುದ್ರನ ಸ್ವಭಾವದಲ್ಲಿ ಕ್ರಮೇಣ ಬಾಲಕರಲ್ಲಿರಬೇಕಾದ ಚಂಚಲತೆ ಹಾಗೂ ಜೀವಂತಿಕೆಯ ಜಾಗದಲ್ಲಿ ನಿರಾಸೆ, ಸಂತಸವಿಲ್ಲದ ಶಿಥಿಲತೆ ಕಾಣಬರಲಾರಂಭಿಸಿತು. ಹೀಗೆ ಮೂರು ವಾರಗಳು ಕಳೆದವು. ಮಳೆಗಾಲ ಬಂದಿತ್ತು. ಒಮ್ಮೆ ವ್ಯಗ್ರಗೊಳಿಸುವ ಬಿಸಿಲು, ಒಮ್ಮೆ ಗಾಳಿಯ ತಣ್ಣನೆಯ ಅಲೆಗಳು. ಜ್ವರ ಮತ್ತು ಕೆಮ್ಮಿನ ಭರಾಟೆಯಿತ್ತು. ರುದ್ರನ ದೌರ್ಬಲ್ಯ ಈ ಋತು-ಪರಿವರ್ತನೆಯನ್ನು ಸಹಿಸದಾಯಿತು. ಸುಖದಾ ಅವನಿಗೆ ಉಣ್ಣೆಯ ಅಂಗಿಯನ್ನು ತೊಡಿಸುತ್ತಿದ್ದಳು, ಅವನನ್ನು ನೀರಿನ ಸಮೀಪಕ್ಕೆ ಹೋಗಲು ಬಿಡುತ್ತಿರಲಿಲ್ಲ. ಬರಿಗಾಲಿನಲ್ಲಿ ಒಂದು ಹೆಜ್ಜೆ ನಡೆಯಲು ಸಹ ಬಿಡುತ್ತಿರಲಿಲ್ಲ. ಆದರೆ ಚಳಿ ಹಿಡಿಯಿತು. ರುದ್ರನಿಗೆ ಕೆಮ್ಮು ಮತ್ತು ಜ್ವರ ಬಾಧಿಸಿತು.

ಪ್ರಾತಃಕಾಲದ ಸಮಯ. ರುದ್ರ ಮಂಚದ ಮೇಲೆ ಕಣ್ಣುಗಳನ್ನು ಮುಚ್ಚಿಕೊಂಡು ಮಲಗಿದ್ದ. ವೈದ್ಯರ ಚಿಕಿತ್ಸೆ ಕೆಲಸ ಮಾಡಲಿಲ್ಲ. ಸುಖದಾ ಮಂಚದ ಮೇಲೆ ಕೂತು ಅವನ ಎದೆಗೆ ಎಣ್ಣೆಯಿಂದ ಮಸಾಜ್ ಮಾಡುತ್ತಿದ್ದಳು. ಇಂದ್ರಮಣಿಯವರು ವಿಷಾದದ ವಿಗ್ರಹದಂತೆ ಕರುಣೆಯಿಂದ ಮಗುವನ್ನು ನೋಡುತ್ತಿದ್ದರು. ಅವರು ಈಚೆಗೆ ಸುಖದಾಳೊಂದಿಗೆ ಹೆಚ್ಚು ಮಾತನಾಡುತ್ತಿರಲಿಲ್ಲ. ಅವರಿಗೆ ಅವಳ ಬಗ್ಗೆ ಒಂದು ವಿಧದ ಜುಗುಪ್ಸೆಯಾಗಿತ್ತು. ರುದ್ರನ ಕಾಯಿಲೆಗೆ ಇವಳೇ ಕಾರಣವೆಂದು ತಿಳಿಯುತ್ತಿದ್ದರು. ಅವರ ದೃಷ್ಟಿಯಲ್ಲಿ ಅವಳು ನೀಚ-ಸ್ವಭಾವದ ಹೆಣ್ಣಾಗಿದ್ದಳು. ಸುಖದಾ ಭಯಪಡುತ್ತಾ ಹೇಳಿದಳು –“ಇವತ್ತು ದೊಡ್ಡ ಡಾಕ್ಟರನ್ನು ಕರೆಸಿದರೆ, ಬಹುಶಃ ಅವರ ಔಷಧದಿಂದ ಲಾಭವಾಗಬಹುದು.”

ಇಂದ್ರಮಣಿಯವರು ಕಪ್ಪು ಮೋಡಗಳನ್ನು ನೋಡುತ್ತಾ ಒರಟಾಗಿ ಹೇಳಿದರು –“ದೊಡ್ಡ ಡಾಕ್ಟರಲ್ಲ, ಒಂದು ವೇಳೆ ಧನ್ವಂತರಿ ಬಂದರೂ ಮಗುವಿಗೆ ಲಾಭವಾಗದು.”
ಸುಖದಾ –“ಹಾಗಾದ್ರೆ ಇನ್ನು ಔಷಧಿ ಇಲ್ವಾ?”
ಇಂದ್ರಮಣಿ –“ಈಗ ಇವನಿಗೆ ಒಂದೇ ಔಷಧಿಯಿದೆ, ಆದ್ರೆ ಅದು ಸಿಗಲ್ಲ.”
ಸುಖದಾ –“ನಿಮಗೆ ಅದೊಂದೇ ಯೋಚನೆ. ಆ ಮುದುಕಿ ಬಂದು ಅಮೃತವನ್ನು ಕುಡಿಸ್ತಾಳಾ?”
ಇಂದ್ರಮಣಿ –“ ಅವಳು ನಿನಗೆ ವಿಷವಾಗಿರಬಹುದು, ಆದ್ರೆ ಮಗುವಿಗೆ ಅವಳು ಅಮೃತವೇ.”
ಸುಖದಾ –“ದೇವರ ಇಚ್ಛೆ ಅವಳ ಅಧೀನದಲ್ಲಿಲ್ಲ ಎಂದು ನಾನು ತಿಳೀತೀನಿ.”
ಇಂದ್ರಮಣಿ –“ಒಂದು ವೇಳೆ ಇದುವರೆಗೆ ತಿಳಿಯದಿದ್ದರೆ ನೀನು ಅಳಬೇಕಾಗುತ್ತೆ, ಮಗುವನ್ನು ಕಳೆದುಕೊಳ್ಳಬೇಕಾಗುತ್ತೆ.”
ಸುಖದಾ –“ಸುಮ್ನಿರಿ, ಏಕೆ ಕೆಟ್ಟ ಮಾತುಗಳನ್ನಾಡ್ತೀರ? ನೀವು ಹೀಗೇ ಮಾತಾಡುವುದಿದ್ರೆ, ಹೊರಗೆ ಹೋಗಿ.”
ಇಂದ್ರಮಣಿ –“ನಾನಂತೂ ಹೋಗ್ತೀನಿ. ಆದ್ರೆ ನೆನಪಿಟ್ಟುಕೋ, ಈ ಕೊಲೆ ನಿನ್ನ ಕೊರಳಿಗೆ ಸುತ್ತಿಕೊಳ್ಳುತ್ತೆ. ಮಗು ಗುಣವಾಗಬೇಕೆಂದಿದ್ದರೆ, ಆ ದಾದಿಯ ಬಳಿಗೆ ಹೋಗು, ಅವಳಲ್ಲಿ ಕ್ಷಮೆ ಕೇಳು. ನಿನ್ನ ಮಗುವಿನ ಪ್ರಾಣ ಅವಳ ದಯೆಯ ಅಧೀನದಲ್ಲಿದೆ.”
ಸುಖದಾ ಮಾತನಾಡಲಿಲ್ಲ. ಅವಳ ಕಣ್ಣುಗಳು ತುಂಬಿ ಬಂದಿದ್ದವು.
ಇಂದ್ರಮಣಿ –“ಹೋಗಿ ಅವಳನ್ನು ಕರೆತರಲೇ?”
ಸುಖದಾ –“ನೀವೇಕೆ ಹೋಗ್ತೀರಿ, ನಾನೇ ಹೋಗ್ತೀನಿ.”
ಇಂದ್ರಮಣಿ –“ಬೇಡ, ನನಗೆ ನಿನ್ನ ಬಗ್ಗೆ ನಂಬಿಕೆಯಿಲ್ಲ. ನಿನ್ನ ಬಾಯಿಯಿಂದ ಏನು ಮಾತುಗಳು ಬರುತ್ತವೋ, ಅವಳಿಗೆ ಬರಬೇಕೆಂದು ಅನ್ನಿಸಿದರೂ, ಅವಳು ಬರಲ್ಲ.”

ಸುಖದಾ ಪತಿಯನ್ನು ಮತ್ತೆ ಜುಗುಪ್ಸೆಯಿಂದ ನೋಡುತ್ತಾ ಹೇಳಿದಳು –“ಹೌದು, ನನಗೆ ನನ್ನ ಮಗುವಿನ ಕಾಯಿಲೆಯ ಬಗ್ಗೆ ದುಃಖವಿಲ್ಲ. ನಾಚಿಕೆಯಿಂದಾಗಿ ನಿಮಗೆ ವಿಷಯ ತಿಳಿಸಲಿಲ್ಲ, ಆದ್ರೆ ನನ್ನ ಮನಸ್ಸಿನಲ್ಲೆ ಪದೇ-ಪದೇ ಈ ವಿಷಯ ಬಂದಿದೆ. ನನಗೆ ದಾದಿಯ ಮನೆಯ ವಿಳಾಸ ಗೊತ್ತಿದ್ದರೆ, ಅವಳನ್ನು ಒಪ್ಪಿಸಿ ಎಂದೋ ಕರೆದುಕೊಂಡು ಬರ್ತಿದ್ದೆ. ಅವಳಿಗೆ ನನ್ನ ಬಗ್ಗೆ ಎಷ್ಟೇ ಸಿಟ್ಟಿದ್ದರೂ, ರುದ್ರನ ಬಗ್ಗೆ ಅವಳಿಗೆ ತುಂಬಾ ಪ್ರೀತಿಯಿತ್ತು. ನಾನಿವತ್ತೇ ಅವಳ ಮನೆಗೆ ಹೋಗ್ತೀನಿ. ನೀವು ಅವಳಲ್ಲಿ ಕ್ಷಮೆ ಕೇಳುವ ಬಗ್ಗೆ ಹೇಳ್ತಿದ್ದೀರ, ಆದ್ರೆ ನಾನು ಅವಳ ಕಾಲುಗಳಿಗೆ ಬೀಳಲೂ ಸಿದ್ಧಳಿದ್ದೇನೆ. ಅವಳ ಕಾಲುಗಳನ್ನು ನನ್ನ ಕಣ್ಣೀರಿನಿಂದ ತೊಳೀತೀನಿ, ಹೇಗಾದರೂ ಮಾಡಿ ಅವಳನ್ನು ಒಪ್ಪಿಸ್ತೀನಿ.”

ಸುಖದಾ ಈ ಮಾತುಗಳನ್ನು ತುಂಬಾ ಧೈರ್ಯವಹಿಸಿ ಹೇಳಿದಳು, ಆದರೆ ಕಣ್ಣೀರು ನಿಲ್ಲಲಿಲ್ಲ. ಇಂದ್ರಮಣಿಯವರು ಹೆಂಡತಿಯನ್ನು ಸಹಾನುಭೂತಿಯಿಂದ ನೋಡಿ, ಲಜ್ಜಿತರಾಗಿ ಹೇಳಿದರು –“ನೀನು ಹೋಗುವುದು ಸರಿ ಎಂದು ನನಗೆ ಅನ್ನಿಸಲ್ಲ. ನಾನೇ ಹೋಗ್ತೀನಿ.’’

ಕೈಲಾಸಿ ಒಂಟಿಯಾಗಿದ್ದಳು. ಒಂದು ಕಾಲದಲ್ಲಿ ಅವಳ ಪರಿವಾರ ಗುಲಾಬಿಯಂತೆ ಅರಳಿತ್ತು; ಆದರೆ ಕ್ರಮೇಣ ಅದರ ಎಲೆಗಳು ಉದುರಿದವು. ಈಗ ಅದರ ಹಸುರು ನಾಶವಾಯಿತು. ಈಗ ಒಣಗಿದ ಕೊಂಬೆಯೊಂದು ಆ ಗಿಡದ ಚಿಹ್ನೆಯಾಗಿ ಉಳಿದಿತ್ತು.

ಆದರೆ ರುದ್ರನನ್ನು ನೋಡಿ ಬಾಡಿದ ಕೊಂಬೆಗೆ ಜೀವ ಬಂದಿತ್ತು. ಅಲ್ಲಿ ಹಸುರು ಎಲೆಗಳು ಮೂಡಿದ್ದವು. ಇದುವರೆಗೆ ನೀರಸವಾಗಿದ್ದ, ಶುಷ್ಕವಾಗಿದ್ದ ಜೀವನ, ಈಗ ಸರಸ ಮತ್ತು ಸಜೀವಗೊಂಡಿತ್ತು. ಅಂಧಕಾರದ ಅರಣ್ಯದಲ್ಲಿ ದಾರಿತಪ್ಪಿದ ದಾರಿಹೋಕನಿಗೆ ಪ್ರಕಾಶ ಕಾಣುತ್ತಿತ್ತು. ಈಗ ಅವಳ ಜೀವನ ಸಾರ್ಥಕವಾಗಿತ್ತು.

ಕೈಲಾಸಿ ರುದ್ರನ ಮುಗ್ಧ ಮಾತುಗಳಿಗೆ ವಶಳಾದಳು. ಆದರೆ ಅವಳು ತನ್ನ ಪ್ರೀತಿ-ಸ್ನೇಹವನ್ನು ಸುಖದಾಳಿಂದ ಮರೆಮಾಚುತ್ತಿದ್ದಳು. ತಾಯಿಯ ಹೃದಯದಲ್ಲಿ ದ್ವೇಷ ಬರಬಾರದೆಂದು ಹೀಗೆ ಮಾಡುತ್ತಿದ್ದಳು. ಅವಳು ರುದ್ರನಿಗಾಗಿ ತಾಯಿಗೆ ತಿಳಿಯದಂತೆ ಸಿಹಿ ತಿನಿಸುಗಳನ್ನು ತರುತ್ತಿದ್ದಳು; ಅವನಿಗೆ ತಿನ್ನಿಸಿ ಸಂತಸಪಡುತ್ತಿದ್ದಳು. ಮಗು ದಷ್ಟ-ಪುಷ್ಟವಾಗಲೆಂದು ದಿನದಲ್ಲಿ ಎರಡು-ಮೂರು ಬರಿ ಎಣ್ಣೆ ಹಚ್ಚಿ ಮಸಾಜು ಮಾಡುತ್ತಿದ್ದಳು. ದೃಷ್ಟಿ ಬೀಳಬಾರದೆಂದು ಬೇರೆಯವರೆದುರು ತಿನ್ನಿಸುತ್ತಿರಲಿಲ್ಲ. ಸದಾ ಬೇರೆಯವರ ಎದುರು ಮಗು ಊಟವನ್ನೇ ಮಾಡುವುದಿಲ್ಲವೆಂದು ಗೋಗರೆಯುತ್ತಿದ್ದಳು. ಕೆಟ್ಟ ದೃಷ್ಟಿ ಬೀಳಬಾರದೆಂದು ತಾಯತಗಳನ್ನು ತಂದು ಕಟ್ಟುತ್ತಿದ್ದಳು. ಇದು ಅವಳ ಶುದ್ಧ ಪ್ರೀತಿಯಾಗಿತ್ತು; ಇದರಲ್ಲಿ ಸ್ವಾರ್ಥದ ಗಂಧವೇ ಇರಲಿಲ್ಲ.

ಇಂದು ಕೈಲಾಸಿ ಮನೆಯಿಂದ ಹೊರಟಾಗ ಸಿನಿಮಾ ಥಿಯೇಟರ್ನಲ್ಲಿ ಅಕಸ್ಮಾತ್ ವಿದ್ಯುತ್ ಹೋದರೆ, ಪ್ರೇಕ್ಷಕರು ಪಡುತ್ತಿದ್ದ ಪರಿಸ್ಥಿತಿಯನ್ನು ಅನುಭವಿಸುತ್ತಿದ್ದಳು. ಅವಳೆದುರು ಆ ಮುಗ್ಧ ಮುಖ ನೃತ್ಯಿಸುತ್ತಿತ್ತು. ಕಿವಿಗಳಲ್ಲಿ ಅದೇ ಪ್ರೀತಿಯ ಮಾತುಗಳು ಪ್ರತಿಧ್ವನಿಸುತ್ತಿದ್ದವು. ಅವಳಿಗೆ ತನ್ನ ಮನೆ ರುಚಿಸುತ್ತಿರಲಿಲ್ಲ. ಅಲ್ಲಿ ಅವಳಿಗೆ ಉಸಿರಾಡುವುದು ಕಷ್ಟವಾಗುತ್ತಿತ್ತು.

ರಾತ್ರಿಯನ್ನು ಹೇಗೋ ಕಳೆದಳು. ಬೆಳಿಗ್ಗೆ ಮನೆಯಲ್ಲಿ ಕಸ ಗುಡಿಸುತ್ತಿದ್ದಳು. ಅಕಸ್ಮಾತ್ ಹೊರಗೆ ‘ತಾಜಾ ಹಲ್ವಾ ಬೇಕಾ?’ ಎಂಬ ಧ್ವನಿ ಕೇಳಿ ಉತ್ಸಾಹದಿಂದ ಮನೆಯಿಂದ ಹೊರಗೆ ಬಂದಳು. ಆಗ ಅವಳಿಗೆ, ಇಂದು ಹಲ್ವಾ ತಿನ್ನುವವರು ಯಾರು? ಮಡಿಲಿನಲ್ಲಿ ಕೂತು ತೊದಲು ಮಾತನಾಡುವವರು ಯಾರು? ಎಂಬುದು ನೆನಪಾಯಿತು. ಹಲ್ವಾ ತಿನ್ನುವಾಗ ಮಧುರ ಹಾಡನ್ನು ಕೇಳುವ ಮಗುವಿನ ಚಡಪಡಿಕೆಯನ್ನು ನೆನೆದು ಕೈಲಾಸಿಯ ಎದೆ ನೊಂದಿತು. ರುದ್ರನನ್ನು ನೋಡಿಕೊಂಡು ಬರುತ್ತೇನೆಂದು ಅವಳು ಕಳವಳದಿಂದ ಹೊರ ಬಂದಳು, ಆದರೆ ನಡು ರಸ್ತೆಯಿಂದ ಮನೆಗೆ ಮರಳಿ ಹೋದಳು.

ರುದ್ರ ಕೈಲಾಸಿಯ ಧ್ಯಾನದಿಂದ ಒಂದು ಕ್ಷಣ ಸಹ ಮರೆಮಾಚುತ್ತಿರಲಿಲ್ಲ. ಅವಳು ನಿದ್ರಿಸುವಾಗ ಗಾಬರಿಯಿಂದ ಎದ್ದು ಕೂರುತ್ತಿದ್ದಳು. ರುದ್ರ ಕೋಲಿನ ಕುದುರೆಯಲ್ಲಿ ಬರುತ್ತಿದ್ದಾನೆ ಎಂದು ಅನ್ನಿಸುತ್ತಿತ್ತು. ನೆರೆಹೊರೆಯವರ ಮನೆಗಳಿಗೆ ಹೋದಾಗ ರುದ್ರನ ಬಗ್ಗೆಯೇ ಮಾತನಾಡುತ್ತಿದ್ದಳು. ರುದ್ರ ಅವಳ ಮನಸ್ಸು ಮತ್ತು ಪ್ರಾಣದಲ್ಲಿ ನೆಲೆಸಿದ್ದ. ಸುಖದಾಳ ಕಠೋರ ವರ್ತನೆಯ ಬಗ್ಗೆ ಅವಳು ಯೋಚಿಸುತ್ತಿರಲಿಲ್ಲ. ನಾನಿಂದು ರುದ್ರನನ್ನು ನೋಡಲು ಹೋಗುತ್ತೇನೆ ಎಂದು ನಿತ್ಯ ನಿರ್ಧರಿಸುತ್ತಿದ್ದಳು. ಅವನಿಗಾಗಿ ಪೇಟೆಯಿಂದ ಮಿಠಾಯಿ ಮತ್ತು ಆಟಿಕೆಗಳನ್ನು ತರುತ್ತಿದ್ದಳು. ಮನೆಯಿಂದ ಹೊರಟು ನಡುರಸ್ತೆಗೆ ಹೋಗಿ, ನಿರಾಸೆಯಿಂದ ಮರಳಿ ಬರುತ್ತಿದ್ದಳು. ಹೆಚ್ಚು ದೂರ ಹೋಗುತ್ತಿರಲಿಲ್ಲ. ಯಾವ ಮುಖ ಹೊತ್ತು ಹೋಗಲಿ. ಪ್ರೀತಿಯನ್ನು ಧೂರ್ತತೆ ಎಂದು ತಿಳಿಯುವವರಿಗೆ ಯಾವ ಮುಖ ತೋರಿಸಲಿ? ಒಮ್ಮೊಮ್ಮೆ ರುದ್ರ ನನ್ನನ್ನು ಗುರುತಿಸದಿದ್ದರೆ, ಮಗುವಿನ ಪ್ರೀತಿಯ ಭರವಸೆಯಾದರೂ ಏನು? ಎಂದೂ ಯೋಚಿಸುತ್ತಿದ್ದಳು. ರುದ್ರ ಹೊಸ ದಾದಿಯೊಂದಿಗೆ ಬೆರೆತಿರಬೇಕು. ಈ ಯೋಚನೆ ಅವಳ ಕಾಲುಗಳಿಗೆ ಸರಪಳಿಯಾಗುತ್ತಿತ್ತು.

ಹೀಗೆ ಎರಡು ವಾರಗಳು ಕಳೆದವು. ಅವಳು ತೀವ್ರವಾಗಿ ಬೇಸತ್ತಳು. ಮನೆಯ ವಸ್ತುಗಳು ಇದ್ದಲ್ಲೇ ಇರುತ್ತಿದ್ದವು, ಅವಳಿಗೆ ಊಟ ಮಾಡಲು ಮನಸ್ಸಿರಲಿಲ್ಲ, ಬಟ್ಟೆಯ ಚಿಂತೆಯಿರಲಿಲ್ಲ. ಹಗಲು-ರಾತ್ರಿ ರುದ್ರನ ಧ್ಯಾನದಲ್ಲಿ ಮುಳುಗಿರುತ್ತಿದ್ದಳು. ಸಂಯೋಗವೆಂಬಂತೆ ಆ ದಿನಗಳಲ್ಲಿ ಬದ್ರೀನಾಥ ಯಾತ್ರೆಯ ದಿನಗಳು ಬಂದವು. ಮೊಹಲ್ಲಾದ ಕೆಲವರು ಯಾತ್ರೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಸಾಕಿದ ಪಕ್ಷಿ ಪಂಜರದಿಂದ ಹೊರಟು ಮತ್ತೊಂದು ಮೂಲೆಯನ್ನರಸುವ ಪಕ್ಷಿಯಂತಾಗಿತ್ತು ಕೈಲಾಸಿಯ ಪರಿಸ್ಥಿತಿ. ಅವಳಿಗೆ ಎಲ್ಲವನ್ನೂ ಮರೆಯಲು ಒಳ್ಳೆಯ ಅವಕಾಶ ಲಭಿಸಿತು. ಅವಳು ಯಾತ್ರೆಗೆ ಹೊರಡಲು ಸಿದ್ಧಳಾದಳು.

ಆಗಸದಲ್ಲಿ ಕಪ್ಪು ಮೋಡಗಳು ಆವರಿಸಿದ್ದು, ಮಳೆಯ ಹನಿಗಳು ಬೀಳುತ್ತಿದ್ದವು. ದೆಹಲಿ ನಿಲ್ದಾಣದಲ್ಲಿ ಯಾತ್ರಿಕರ ಗುಂಪಿತ್ತು. ಕೆಲವರು ರೈಲಿನಲ್ಲಿ ಕೂತಿದ್ದರು, ಕೆಲವರು ತಮ್ಮವರಿಂದ ಬೀಳ್ಕೊಂಡು ಹೋಗುತ್ತಿದ್ದರು. ಸುತ್ತಮುತ್ತ ಕೋಲಾಹಲವಿತ್ತು. ಅವರನ್ನು ಸಾಂಸಾರಿಕ ಮಾಯೆ ಇಂದೂ ಹಿಡಿದಿತ್ತು. ಒಬ್ಬ ತನ್ನ ಹೆಂಡತಿಗೆ, ಬೆಳೆಯನ್ನು ಕೊಯ್ದಾದ ನಂತರ ಕೆರೆಯ ಬಳಿಯಿರುವ ಹೊಲದಲ್ಲಿ ಬಟಾಣಿ ಹಾಕು, ತೋಟದ ಬಳಿಯಿರುವ ಹೊಲದಲ್ಲಿ ಗೋಧಿಯನ್ನು ಬೆಳಿ ಎಂದು ಎಚ್ಚರಿಸುತ್ತಿದ್ದ. ಇನ್ನೊಬ್ಬ ತನ್ನ ಯುವ ಪುತ್ರನಿಗೆ, ಸಾಗುವಳಿದಾರರ ಮೇಲೆ ಬಾಕಿ ಕಂದಾಯದ ಬಗ್ಗೆ ಮೊಕದ್ದಮೆ ಹಾಕಲು ತಡಮಾಡಬೇಡ, ಎರಡು ರೂಪಾಯಿ ಬಡ್ಡಿಯಂತೆ ಮುರಿದುಕೋ ಎಂದು ಸಲಹೆ ಕೊಡುತ್ತಿದ್ದ. ವೃದ್ಧ ವ್ಯಾಪಾರಿಯೊಬ್ಬರು ತಮ್ಮ ಗುಮಾಸ್ತನಿಗೆ, ಮಾಲು ಬರಲು ತಡವಾದರೆ ನೀನೇ ಖುದ್ದು ಹೋಗಿ, ಚಾಲ್ತಿ ಮಾಲನ್ನು ತಗೊಂಡು ಬಾ, ಇಲ್ಲದಿದ್ದಲ್ಲಿ ಹಣ ಬರಲ್ಲ ಎನ್ನುತ್ತಿದ್ದರು. ಕೆಲವು ಶ್ರದ್ಧಾ-ಭಕ್ತಿಯ ವ್ಯಕ್ತಿಗಳೂ ಇದ್ದರು, ಅವರು ಧರ್ಮದಲ್ಲಿ ಮಗ್ನರಾಗಿರುವಂತೆ ತೋರುತ್ತಿದ್ದರು. ಅವರು ಆಗಸವನ್ನು ನೋಡುತ್ತಿದ್ದರು ಅಥವಾ ಮಾಲೆಯನ್ನು ಜಪಿಸುವಲ್ಲಿ ಮಗ್ನರಾಗಿದ್ದರು. ಕೈಲಾಸಿ ಸಹ ಒಂದು ಡಬ್ಬಿಯಲ್ಲಿ ಕೂತು, ಇವರಿಗೆ ಇನ್ನೂ ಸಂಸಾರದ ಚಿಂತೆ ಬಿಡುವುದಿಲ್ಲ ಎಂದು ಯೋಚಿಸುತ್ತಿದ್ದಳು. ಅದೇ ವಾಣಿಜ್ಯ-ವ್ಯವಹಾರದ ಚಿಂತೆ, ಅದೇ ಲೇವಾದೇವಿಯ ಬಗ್ಗೆ ಚರ್ಚೆ. ರುದ್ರ ಈಗ ಇಲ್ಲಿದ್ದಿದ್ದರೆ ತುಂಬಾ ರೋದಿಸುತ್ತಿದ್ದ, ನನ್ನ ಮಡಿಲಿನಿಂದ ಕೆಳಗಿಳಿಯುತ್ತಿರಲಿಲ್ಲ. ನಾನು ಮರಳಿ ಬಂದಾಗ, ಖಂಡಿತ ಅವನನ್ನು ನೋಡಲು ಹೋಗುತ್ತೇನೆ. ಓಹ್ ದೇವರೇ, ವಾಹನ ಬೇಗ ಹೋಗಲಿ, ಸೆಖೆಯನ್ನು ಸಹಿಸಲಾಗುತ್ತಿಲ್ಲ. ಎಷ್ಟೊಂದು ಮೋಡ ಕವಿದಿದೆ, ಆದರೆ ಮಳೆಯ ಸೂಚನೆಯಿಲ್ಲ. ಈ ರೈಲಿನವರು ಏಕೆ ತಡಮಾಡುತ್ತಿದ್ದಾರೋ? ಸುಖಾಸುಮ್ಮನೆ ಅತ್ತ-ಇತ್ತ ಓಡಾಡುತ್ತಿದ್ದಾರೆ. ಕೂಡಲೇ ರೈಲು ಬಿಡಲ್ಲ. ರೈಲು ಹೊರಟರೆ ಯಾತ್ರಿಕರಿಗೆ ಮರುಜೀವ ಬಂದಂತಾಗುತ್ತದೆ. ಅವಳು ಅಕಸ್ಮಾತ್ ಇಂದ್ರಮಣಿಯವರು ಸೈಕಲ್ ಹಿಡಿದು ಪ್ಲಾಟ್ಫಾರ್ಮ್ನಲ್ಲಿ ಬರುತ್ತಿರುವುದನ್ನು ನೋಡಿದಳು. ಅವರ ಮುಖ ಬಾಡಿತ್ತು, ಬಟ್ಟೆಗಳು ಬೆವರಿನಿಂದ ಒದ್ದೆಯಾಗಿದ್ದವು. ಅವರು ರೈಲಿನಲ್ಲಿ ಇಣಿಕಿ ನೋಡುತ್ತಿದ್ದರು. ಕೈಲಾಸಿ ತಾನೂ ಸಹ ಯಾತ್ರೆಗೆ ಹೋಗುತ್ತಿದ್ದೇನೆ ಎಂದು ತಿಳಿಸಲೋಸುಗ ರೈಲಿನಿಂದ ಹೊರ ಬಂದಳು. ಇಂದ್ರಮಣಿಯವರು ಅವಳನ್ನು ನೋಡಿದೊಡನೆಯೇ, ಅವಳ ಸಮೀಪಕ್ಕೆ ಓಡಿ ಬಂದರು.

“ಕೈಲಾಸಿ, ನೀನೂ ಯಾತ್ರೆಗೆ ಹೊರಟಿದ್ದೀಯ?” ಇಂದ್ರಮಣಿ ಕೇಳಿದರು.

ಕೈಲಾಸಿ ಗರ್ವದಿಂದ ಆದರೆ ದೈನ್ಯದಿಂದ ಹೇಳಿದಳು –“ಹೌದು, ಮತ್ತೇನು ಮಾಡ್ಲಿ? ನಾಳೆಯ ಭರವಸೆಯಿಲ್ಲ, ಯಾವಾಗ ಕಣ್ಣುಗಳನ್ನು ಮುಚ್ಚಬೇಕಾಗುವುದೋ, ದೇವರಿಗೆ ಮುಖ ತೋರಿಸಲೂ, ಒಂದಲ್ಲ ಒಂದು ಉಪಾಯ ಬೇಕಾಗುತ್ತದೆ. ರುದ್ರ ಬಾಬೂ ಚೆನ್ನಾಗಿದ್ದಾನೆಯೇ?”
ಇಂದ್ರಮಣಿ –“ಈಗ ನೀನು ಹೋಗ್ತಿದ್ದೀಯ, ರುದ್ರನ ಬಗ್ಗೆ ವಿಚಾರಿಸಿ ಏನು ಮಾಡ್ತೀಯ? ಅವನಿಗೆ ಆಶೀರ್ವಾದ ಮಾಡ್ತಿರು, ಅಷ್ಟೆ.”
ಕೈಲಾಸಿಯ ಎದೆ ಬಡಿದುಕೊಂಡಿತು. ಅವಳು ಗಾಬರಿಯಿಂದ ಕೇಳಿದಳು –“ಅವನ ಆರೋಗ್ಯ ಸರಿಯಿಲ್ವಾ?”
ಇಂದ್ರಮಣಿ –“ನೀನು ಹೋದಾಗಿನಿಂದ ಅವನು ಹಾಸಿಗೆ ಹಿಡಿದಿದ್ದಾನೆ. ಎರಡು ವಾರ ದಾದಿ-ದಾದಿ ಎಂದು ಕನವರಿಸಿದ. ಈಗ ಒಂದು ವಾರದಿಂದ ಕೆಮ್ಮು, ಜ್ವರದಿಂದ ನರಳುತ್ತಿದ್ದಾನೆ. ಎಲ್ಲಾ ಔಷಧಿಗಳನ್ನು ಮಾಡಿ ಸೋತೆ, ಏನೂ ಉಪಯೋಗವಾಗಲಿಲ್ಲ. ನಿನ್ನ ಮನೆಗೆ ಬಂದು ವಿನಂತಿಸಿಕೊಂಡು ನಿನ್ನನ್ನು ಮನೆಗೆ ಕರೆದುಕೊಂಡು ಹೋಗೋಣ ಎಂದು ಯೋಚಿಸಿದ್ದೆ. ನಿನ್ನನ್ನು ನೋಡಿ ಅವನ ಆರೋಗ್ಯ ಸುಧಾರಿಸಬಹುದೇನೋ. ನಿನ್ನ ಮನೆಗೆ ಹೋದಾಗ ನೀನು ಯಾತ್ರೆಗೆ ಹೋಗುತ್ತಿರುವ ವಿಷಯ ತಿಳಿಯಿತು. ಈಗ ವಾಪಸ್ ಬಾ ಅಂತ ಹೇಗೆ ಹೇಳ್ಲಿ? ನಿನ್ನೊಂದಿಗೆ ಒಳ್ಳೆಯ ರೀತಿಯಲ್ಲಿ ನಡೆದುಕೊಳ್ಳಲೂ ಇಲ್ಲ, ಹೀಗಾಗಿ ಧೈರ್ಯವೂ ಇಲ್ಲ. ಅಲ್ಲದೆ ನೀನು ಪುಣ್ಯದ ಕೆಲಸಕ್ಕೆ ಹೋಗ್ತಿದ್ದೀಯ, ಅದಕ್ಕೆ ವಿಘ್ನ ಮಾಡುವ ಧೈರ್ಯವೂ ನನಗಿಲ್ಲ. ಆಯಸ್ಸು ಗಟ್ಟಿಯಾಗಿದ್ರೆ ಬದುಕ್ತಾನೆ, ದೇವರಿಚ್ಛೆಯಲ್ಲಿ ಯಾರೂ ತಲೆ ಹಾಕಲು ಸಾಧ್ಯವಿಲ್ಲ.”

ಕೈಲಾಸಿಯ ಕಣ್ಣುಗಳೆದುರು ಕತ್ತಲು ಕವಿಯಿತು. ಎದುರಿನ ದೃಶ್ಯಗಳು ತೇಲಾಡುತ್ತಿರುವಂತೆ ಭಾಸವಾಯಿತು. ಹೃದಯ ಭಾವಿ ಅಶುಭವನ್ನು ಯೋಚಿಸಿ ಕಂಪಿಸಿತು. ಅವಳ ಬಾಯಿಯಿಂದ ಒಮ್ಮೆಲೆ ಮಾತುಗಳು ಹೊರಟವು –“ದೇವರೇ, ನನ್ನ ರುದ್ರನನ್ನು ಕಾಪಾಡು.” ಪ್ರೀತಿಯಿಂದಾಗಿ ಮುಂದಕ್ಕೆ ಮಾತೇ ಹೊರಡಲಿಲ್ಲ. ನಾನೆಂಥ ಕಠೋರ ಹೃದಯದವಳು, ಪ್ರೀತಿಯ ಕಂದ ಅತ್ತೂ-ಕರೆದು ಗಾಬರಿಯಾಗಿದ್ದಾನೆ, ಆದರೆ ಅವನನ್ನು ನೋಡಲು ಹೋಗಲಿಲ್ಲ. ಸುಖದಾಳ ಸ್ವಭಾವ ಸರಿಯಿಲ್ಲದಿದ್ದರೇನಾಯಿತು, ಆದರೆ ರುದ್ರ ನನಗೇನು ಕೇಡು ಮಾಡಿದ್ದಾನೆ? ನಾನು ತಾಯಿಯ ಸೇಡನ್ನು ಮಗನಲ್ಲಿ ತೀರಿಸಿಕೊಳ್ಳುತ್ತಿದ್ದೇನೆ. ದೇವರೇ ನನ್ನ ಅಪರಾಧವನ್ನು ಕ್ಷಮಿಸು. ಪ್ರೀತಿಯ ರುದ್ರ ನನಗಾಗಿ ದುಃಖಿಸುತ್ತಿದ್ದಾನೆ. (ಈ ಯೋಚನೆಯಿಂದಾಗಿ ಕೈಲಾಸಿಯ ಎದೆ ದುಃಖದಿಂದ ನೊಂದಿತು, ಅವಳ ಕಣ್ಣುಗಳು ತುಂಬಿ ಬಂದವು.) ಅವನಿಗೆ ನನ್ನ ಬಗ್ಗೆ ಇಷ್ಟೊಂದು ಪ್ರೀತಿಯಿದೆ ಎಂಬುದು ನನಗೆಲ್ಲಿ ತಿಳಿದಿತ್ತು? ಮಗುವಿನ ಪರಿಸ್ಥಿತಿ ಏನಾಗಿದೆಯೋ? ಅವಳು ಭಯದಿಂದ ಹೇಳಿದಳು –“ಹಾಲು ಕುಡೀತಾನಲ್ಲ?”

ಇಂದ್ರಮಣಿ –“ನೀನು ಹಾಲು ಕುಡಿಯೋ ಬಗ್ಗೆ ಕೇಳ್ತಿದ್ದೀಯ! ಅವನು ಎರಡು ದಿನಗಳಿಂದ ಕಣ್ಣುಗಳನ್ನೇ ತೆರೆದಿಲ್ಲ.”
ಅಯ್ಯೋ ದೇವರೇ! ಕೂಲಿ-ಕೂಲಿ, ನನ್ನ ಲಗ್ಗೇಜನ್ನು ರೈಲಿನಿಂದ ಇಳಿಸು. ನನಗೀಗ ತೀರ್ಥಯಾತ್ರೆಗೆ ಹೋಗಬೇಕೆಂದು ಅನ್ನಿಸಲ್ಲ. ಹೌದಪ್ಪಾ ಹೌದು, ಬೇಗ ಇಳಿಸು. ಬಾಬೂಜಿ, ಒಂದು ಕುದುರೆ ಗಾಡಿಯನ್ನು ಕರ್ಕೊಂಡು ಬನ್ನಿ.”

ಕುದುರೆ ಗಾಡಿ ಹೊರಟಿತು. ಎದುರು ರಸ್ತೆಯಲ್ಲಿ ಕುದುರೆ ಗಾಡಿಗಳು ನಿಂತಿದ್ದವು. ಕುದುರೆ ಮೆಲ್ಲ-ಮೆಲ್ಲನೆ ಸಾಗುತ್ತಿತ್ತು. ಕೈಲಾಸಿ ಪದೇ-ಪದೇ ರೇಗಿ ಗಾಡಿಯವನಿಗೆ ಹೇಳುತ್ತಿದ್ದಳು –“ಮಗಾ, ಬೇಗ-ಬೇಗ ಹೋಗು. ನಿನಗೆ ಸ್ವಲ್ಪ ಹೆಚ್ಚು ಹಣವನ್ನು ಕೊಡ್ತೀನಿ.” ಮಾರ್ಗದಲ್ಲಿ ಪ್ರಯಾಣಿಕರ ಗುಂಪನ್ನು ನೋಡಿ ಅವಳು ರೇಗುತ್ತಿದ್ದಳು; ಕುದುರೆಗೆ ರೆಕ್ಕೆ ಮೂಡಬಾರದೇ ಎಂದು ಮನಸ್ಸು ಬಯಸುತ್ತಿತ್ತು; ಆದರೆ ಇಂದ್ರಮಣಿಯವರ ಮನೆ ಸಮೀಪಕ್ಕೆ ಬರುತ್ತಿತ್ತು, ಕೈಲಾಸಿಯ ಹೃದಯ ಕುಣಿಯಿತು. ಪದೇ-ಪದೇ ರುದ್ರನಿಗಾಗಿ ಶುಭ-ಆಶೀರ್ವಾದವನ್ನು ಮಾಡುತ್ತಿದ್ದಳು. ದೇವರು ಎಲ್ಲವನ್ನೂ ಒಳಿತು ಮಾಡಲಿ. ಕುದುರೆ ಗಾಡಿ ಇಂದ್ರಮಣಿಯವರ ಗಲ್ಲಿಗೆ ಹೊರಳಿತು. ಅಕಸ್ಮಾತ್ ಕೈಲಾಸಿಯ ಕಿವಿಗೆ ರೋದನದ ಧ್ವನಿ ಕೇಳಿಸಿತು. ಅವಳ ಎದೆ ಬಾಯಿಗೆ ಬಂತು. ತಲೆ ಸುತ್ತಿತು. ನದಿಯಲ್ಲಿ ಮುಳುಗುತ್ತಿದ್ದೇನೆ ಎಂದು ಅನ್ನಿಸಿತು. ಕುದುರೆ ಗಾಡಿಯಿಂದ ಹಾರಲು ಮನಸ್ಸಾಯಿತು. ಆದರೆ ಕೆಲವೇ ಕ್ಷಣಗಳಲ್ಲಿ, ಮಹಿಳೆಯೊಬ್ಬಳು ತವರು ಮನೆಯಿಂದ ಬೀಳ್ಕೊಂಡು ಹೋಗುತ್ತಿರುವ ವಿಷಯ ತಿಳಿಯಿತು. ಕೈಲಾಸಳಿಗೆ ಆನಂದವಾಯಿತು. ಕಡೆಗೆ ಇಂದ್ರಮಣಿಯವರ ಮನೆ ಬಂತು. ಕೈಲಾಸಿ ಭಯದಿಂದ ಬಾಗಿಲೆಡೆಗೆ ನೋಡಿದಳು; ಮನೆಯಿಂದ ಓಡಿ ಹೋದ ಹುಡುಗನೊಬ್ಬ ಸಂಜೆಗೆ ಹಸಿದು ಮನೆಗೆ ಬಂದಾಗ ಬಾಗಿಲೆಡೆಗೆ, ಯಾರಾದರು ಕೂತಿಲ್ಲ ತಾನೇ ಎಂದು ಅವಳು ನೋಡುವಂತಿತ್ತು. ಬಾಗಿಲ ಬಳಿ ಮೌನ ಕವಿದಿತ್ತು. ಅಡುಗೆ ಭಟ್ಟ ಕೂತು ಹೊಗೆಸೊಪ್ಪನ್ನು ಹೊಸಗುತ್ತಿದ್ದ. ಕೈಲಾಸಿಗೆ ಸ್ವಲ್ಪ ಸಮಾಧಾನವಾಯಿತು. ಮನೆಯೊಳಗೆ ಹೋದಾಗ ಹೊಸ ದಾದಿ ಅಗಸೆ ಬೀಜದ ಲೇಪತ್ತಿರುವುದನ್ನು ನೋಡಿದಳು. ಮನಸ್ಸಿಗೆ ಧೈರ್ಯ ಬಂತು. ಸುಖದಾಳ ಕೋಣೆಗೆ ಹೋದಾಗ, ಅವಳ ಹೃದಯ, ಮಧ್ಯಾಹ್ನದ ಬಿಸಿಲಿನಂತೆ ಕಂಪಿಸುತ್ತಿತ್ತು. ಸುಖದಾ ರುದ್ರನನ್ನು ಮಡಿಲಿನಲ್ಲಿ ಮಲಗಿಸಿಕೊಂಡು ಎವೆಯಿಕ್ಕದೆ ಬಾಗಿಲೆಡೆಗೆ ನೋಡುತ್ತಿದ್ದಳು. ಅವಳು ಶೋಕ ಮತ್ತು ಕರುಣೆಯ ಮೂರ್ತಿಯೇ ಆಗಿದ್ದಳು.

ಕೈಲಾಸಿ ಸುಖದಾಳನ್ನು ಸುತರಾಂ ಕೇಳಲಿಲ್ಲ. ರುದ್ರನನ್ನು ಅವಳ ಮಡಿಲಿನಿಂದ ಎತ್ತಿಕೊಂಡು, ಮಗುವನ್ನು ತುಂಬಿ ಬಂದ ಕಣ್ಣೀರಿನಿಂದ ನೋಡುತ್ತಾ ಹೇಳಿದಳು –“ಮಗಾ ರುದ್ರ, ಕಣ್ಣುಗಳನ್ನು ಬಿಡು.”

ರುದ್ರ ಕಣ್ಣುಗಳನ್ನು ತೆರೆದ, ಕ್ಷಣ-ಕಾಲ ದಾದಿಯನ್ನು ಮೌನವಾಗಿ ನೋಡಿದ, ನಂತರ ಇದ್ದಕ್ಕಿದ್ದಂತೆ ದಾದಿಯನ್ನು ಅಪ್ಪಿಕೊಂಡು ಹೇಳಿದ –“ದಾದಿ-ದಾದಿ! ದಾದಿ ಬಂದಳು!”

ರುದ್ರನ ಬಾಡಿದ ಮುಖ, ಆರುತ್ತಿದ್ದ ದೀಪಕ್ಕೆ ಎಣ್ಣೆ ಹಾಕಿದಾಗ ಮತ್ತೆ ಉರಿದಂತೆ ಅರಳಿತು. ಅವನು ಸ್ವಲ್ಪ ಬೆಳೆದಿದ್ದಾನೆ ಎಂದು ತೋರಿತು.
ಒಂದು ವಾರ ಕಳೆಯಿತು. ಪ್ರಾತಃಕಾಲದ ವೇಳೆಯಾಗಿತ್ತು. ರುದ್ರ ಅಂಗಳದಲ್ಲಿ ಆಡುತ್ತಿದ್ದ. ಹೊರಗಿನಿಂದ ಬಂದ ಇಂದ್ರಮಣಿಯವರು ಅವನನ್ನು ಎತ್ತಿಕೊಂಡು ಪ್ರೀತಿಯಿಂದ ಹೇಳಿದಳು –“ನಿನ್ನ ದಾದಿಯನ್ನು ಹೊಡೆದು ಓಡಿಸೋಣವೇ?”

ರುದ್ರ –“ಇಲ್ಲಪ್ಪ, ಅವಳು ಅಳುವುದಿಲ್ಲ.”

ಕೈಲಾಸಿ -“ಮಗಾ, ನೀನು ನನಗೆ ಬದ್ರಿನಾಥಕ್ಕೆ ಹೋಗಲು ಬಿಡಲಿಲ್ಲ. ನನ್ನ ತೀರ್ಥಯಾತ್ರೆಯ ಪುಣ್ಯ-ಫಲವನ್ನು ನನಗೆ ಕೊಡುವವರು ಯಾರು?”

ಇಂದ್ರಮಣಿಯವರು ಮಗುಳ್ನಕ್ಕು ಹೇಳಿದರು –“ನಿನಗೆ ಅದಕ್ಕಿಂತ ಹೆಚ್ಚು ಪುಣ್ಯ ಸಿಕ್ಕಿದೆ. ಇದು ಮಹಾತೀರ್ಥವಾಗಿದೆ.”

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.