‘ಈ ಹೊನ್ನಳ್ಳಿ ಎಂಗಿರ್ಬೋದೂ… ಆ ಶಿಮೋಗ ಅಂತಾರಲ್ಲಾ ಅದೆಂಗಿರ್ಬೋದು…?ʼ

ಅದು ಯೋಚಿಸುತ್ತಿರುವಾಗಲೇ…..

ಸೊಯ್ಯಂತ ಹೊನ್ನಾಳಿ ಬಸ್ಸು ಅದರ ಎದೆಮೇಲೆ ನಿಂತು ಸಣ್ಣಗೆ ಆಕಳಿಸಿ ಶಿವಮೊಗ್ಗೆ ಕಡೆ ರೊಯ್ಯಂತ ಹೋಯಿತು. ಒಂಚಣ ಪ್ರಾಣನೇ ಬಾಯಿಗೆ ಬಂದಾಗಾಯಿತು. ‘ಅದರೆಜ್ಜಡಗʼ ಅಂತ ಬಾಯಿತೆಗೆದಿದ್ದು ‘ಥೂ ಹಂಗನ್ನಬಾರ್ದು... ತಪ್ಪಾತು.. ತಪ್ಪಾತು..’ ಕಪಾಳಕ್ಕೆ ಬಡಿದುಕೊಂಡಿತು.

ಮತ್ತದೇ ಯೋಚನೆ.

ಒಂದ್ಪಟ ಆ ಎಲ್ಡೂ ಊರಾ ನೋಡ್ಕಂಬರಬೇಕಲ್ಲಾ ಶಿವನೇ…

ಬೇಡಿಕೊಳ್ಳುತ್ತಿರುವಾಗಲೇ….

ಊಳಿಡುತ್ತಾ ಲಾರಿಯೊಂದು ಶಿವಮೊಗ್ಗೆಯಿಂದ ಬಂದು ದಸಕ್ಕನೇ ಅದರ ಮೈಮೇಲೆ ಕುಂತು ಗಸಗಸ ಬೀಡಿಸೇದಿ ಬುಸುಬಸು ಹೊಂಟೇ ಹೋಯಿತು.

ಹೊಗೆಗೆ ಕೆಮ್ಮುತ್ತಾ ಏದುಸಿರು ಬಿಡುತ್ತಿದ್ದ ಇದ ಕಂಡು ಪಕ್ಕದ ‘ಹೊನ್ನಾಳಿ- ಶಿವಮೊಗ್ಗ ರಸ್ತೆ, ಸುರಹೊನ್ನೆʼ ಎಂಬ ಬೋರ್ಡು ಬಾಯಿಮುಚ್ಚಿ ನಗುತ್ತಾ ‘ಅಲ್ಲಣ್ಣಾ, ನಿನ್ನೆಸ್ರೇ ಹೊನ್ನಳ್ಳಿ-ಶಿಮೊಗ್ಗ ರೋಡ್ ಅಂತ. ಹಂಗಂತ ಒದ್ರಕ್ಕೇನೆ ನನ್ನಿಲ್ಲಿ ಗೂಟಾನೆಟ್ಟು ನಿಲ್ಲಸ್ಯಾರೆ. ಇಪ್ಪತ್ನಾಗಂಟೆ ಈ ಸುರಹೊನ್ಯಾಗೆ ಬಿದ್ದಿರೊ ನಿಂಗೆ ನಿನ್ನೆಸ್ರಿನ ಊರು ನೋಡಕೆ ಈ ಜನುಮದಾಗೆ ಆಗಂಗಿಲ್ಲಲ್ಲಾ … ಏನ್ ನಿನ್ ಹಣೆಬರ ಇದ್ದೀತು ನೋಡು…ʼ

‘ಹ್ಞಂ….ಹೌದು…ಹೊಕಳ್ಲಿ ಬಿಡ್ತಮ್ಮಾ… ಪಡುದುದ್ದು ಉಣ್ಬೇಕಲ್ಲಪ್ಪಾ… ಏನೋ ಈ ಪಾಪಿ ಕಣ್ಣಿಗೆ ಏನೇನೊ ಆಸೆ…ʼ

ಅಂತಿರುವಾಗಲೇ …

ಪಿಚಕ್ಕಂತ ಅದರ ಕಣ್ಣಿಗೆ ರಕ್ತಹಾರಿ ಒಂಚಣ ಕಣ್ಣೆಲ್ಲ ಮಂಜಾಗಿ ಎದೆಯೆಲ್ಲಾ ನಂಜಾಯಿತು.

ಅದೆಂಥ ಢಗಢಗ ನಡಿಗೆ!

ಬಸ್ಸ್ಯಾಂಡು ಎದುರಿನ ಸಾಲುಗಲ್ಲುಗಳು ಒಮ್ಮೆಕೆ ನಿಗುರಿ ನೋಡಿದವು. ‘ಅಯ್ಯೋ ಅವ್ನು ನಮ್ಮ ‘ಪೋಯʼ ಅಲ್ಲೇನು… ಅದ್ಯಾಕೆ ಹಂಗೆ ಹೊಯ್ಕಂತ ಹೋಗ್ತಾ ಐದಾನೆ ಶಿವನೇ… ದಿನಾ ನಮ್ ತಲಿಮ್ಯಾಲೆ ಬೀಡಿ ಸೇದ್ಕಂತ ಕುತ್ಕಂತಿದ್ನಲ್ಲಾ… ಅವ್ನ ಮೈಮೇಲೆ ಚಡ್ಡಿ ಬಿಟ್ರೆ ಏನೂ ಇಲ್ಲಲ್ಲಪ್ಪೋ… ಪೋಲಿಟೇಶನ್ ಕಡೀಕೆ ಓಡ್ತಾ ಐದನೇ…ʼ

‘ಓ ಹೌದಲ್ಲ ಅವ್ನು ನಮ್ಮ ಪೋಯ. ತಲ್ಯಾಗೆ ರಗ್ತ ಸುರಿತೈತೆ… ಏನ್ ಮಾಡ್ಕಂದ್ನಪ್ಪಾ ಇವ್ನುʼ ಅಂತ ರೋಡು ಕಣ್ಣುಜ್ಜುತ್ತಾ ಎದ್ದುನೋಡುತ್ತಿದ್ದಂತೆ ಭರ್ರಂತ ಬೈಕುಬಂದಿದ್ದು ನೋಡಿ ಹಾಗೆ ಅಡ್ಡಾಯಿತು. ‘ಮಂಜಾಳಾಗ… ಒಂದೀಟು ಸುಕದುಕ್ಕಾನ ಇಚಾರ್ಸನಾ ಅಂದ್ರೂನು ಆಗವಲ್ದುʼ. ಮತ್ತೆ ಭರ್ರಂತ ಸೌಂಡು. ಗಾಡಿಗಳ ಫಳಫಳ ಲೈಟು. ಇತ್ಲಿತ್ಲಗಂತೂ ರಾತ್ರೀನೂ ಜೀವುಕ್ಕೆ ನೆಮ್ದಿ ಇಲ್ಲ. ಯಾವ್ದೂನು ಒಂದ್ಕಡೆ ನಿಲ್ಲವಲ್ದಲ್ಲಪ್ಪಾ ಶಿವನೇ…. ಓಟ ಓಟ ಓಟ….

‘ಚಂಜಿಮುಂದೆ ಇಲ್ಲೇ ಅಡ್ಡಾಡ್ತಿದ್ದೋನು ಅದ್ಯಾವ ಮಾಯ್ದಾಗೆ ಅದೆಲ್ಲಿಗೋದ…. ಯಾರತ್ರ ಏನ್ ಮಾಡ್ಕಂದು ಬಂದ….ʼ ಬಸ್ಸ್ಟ್ಯಾಂಡ್ ಮೈಮುರಿಯುತ್ತಲೇ ಗುನಗುಟ್ಟಿತು.

ಮಬ್ಬಲ್ಲಿ ಯಾರ್ಯಾರ್ದೊ ಏನೇನೊ ಮಾತು. ಅವು ತನ್ನೊಳಗೆ ಪಿಸುಗುಟ್ಟಿದಂತಾಗಿ ಬಸ್ಸ್ಟ್ಯಾಂಡಿಗೆ ತಲೆಚಿಟ್ಟು ಹಿಡಿದಂಗಾಯಿತು. ಯಾರನ್ನೂ ಆಡ್ಕಳದಂಗೆ ಬಿಡವಲ್ದಲ್ಲಪ್ಪಾ ಶಿವನೇ….. ಮಾತು ಮಾತು ಮಾತು….

ಅದು ಪಾಸುಫೇಲು ದಿನ.

‘ಆನಂದ ಪಾಸು, ಬಸವರಾಜ ಪಾಸು, ದೇವಪ್ಪ ಪಾಸು…..ರಮೇಶ ಫೇಲು….ʼ

ಮೇಷ್ಟ್ರು ಓದುತ್ತಲೇ ಇದ್ದರು. ಹುಡುಗರ ಗುಂಪಿಂದ ರಮೇಶಿ ವಲ್ಲೂಕೆ ಹಿಂದಕ್ಕೆ ಸರಿದಿದ್ದು ಯಾರ ನೆದರಿಗೂ ಬರಲಿಲ್ಲ. ಸ್ಕೂಲ್ಗೇಟು ದಾಟಿದವನೇ ದಡಬಡ ಅಗಸೆಬಾಗಿಲಿಗೆ ಬಂದವನೆ ಅಲ್ಲಿಂದ ಮಂಡಿಕಲ್ಲು ರೋಡಿಗೆ ತಿರುಗಿ ನಡದೇ ನಡೆದ….. ಮಧ್ಯಾಹ್ನದ ನಿರ್ಜನಹಾದಿ ಭಯ ಹುಟ್ಟಿಸುತ್ತಿದ್ದರೂ ಅಪ್ಪನ ಮುಖದಷ್ಟು ರಾವಾಗಿರಲಿಲ್ಲ. ಹೊಲಕ್ಕೆ ಹೋಗೋರು, ಹೊಲದಲ್ಲಿ ಕೆಲಸ ಮಾಡೋರು ತೀರಾ ವಿರಳವಾಗಿದ್ದರಿಂದ ಕಣ್ತಪ್ಪಿಸುವುದು ಅಷ್ಟು ಕಷ್ಟವಾಗಿರಲಿಲ್ಲ. ರಜಾ ಬಂತೆಂದರೆ ಗೆಳಯರ ಜತೆ ಓಡೋಡಿ ಬರುತ್ತಿದ್ದ ಈ ಬಂಡಿಹಾದಿ ಇವತ್ಯಾಕೊ ಗಾಬರಿ ಹುಟ್ಟಿಸುತ್ತಿತ್ತು. ನಿಲ್ಲಲ್ಲಿಲ್ಲ. ನಡೆದ. ಅದೊ ಮುರೆಗೆಪ್ಪನ ಹೊಲ. ಯಾರೂ ಇಲ್ಲ. ಅಕ್ಕತಂಗೇರ ಹಣ್ಣು! ಗಿಡಕ್ಕೆ ಕೈಹಾಕಿ ಕಿತ್ತಿದ್ದೇ ಪಕ್ಕದ ಕಲ್ಲಿಗೆ ಕುಟ್ಟಿ ಹೋಳುಮಾಡಿ ಗಬಗಬ ತಿಂದ. ತೊಟ್ಟಿಯಲ್ಲಿ ಕೈಅದ್ದಿ ಬೊಗಸೆಯಲ್ಲಿ ನೀರು ಗಟಗಟ ಕುಡಿದ.

ಮತ್ತೆ ನಡೆದ…. ಕುದುರೆಕೊಂಡ ಸಿಕ್ಕಿತು. ಇನ್ನಷ್ಟು ನಡೆದ…. ಎದುರಿಗೆ ತುಪ್ಪದಗಿರಿ ಗುಡ್ಡ . ಹತ್ತೇಹತ್ತಿದ… ಅರ್ಧಗುಡ್ಡಕ್ಕೇ ಭಯವಾಗಿ ಮರವೊಂದರ ಬುಡದಲ್ಲಿ ಮುದರಿಕುಂತ. ಕತ್ತಲಾಯಿತು… ಎದೆ ಗಡಗಡ…. ಯಾವ ನರಪಿಳ್ಳಿಯೂ ಇಲ್ಲ. ವಿಚಿತ್ರ ನಿಶ್ಶಬ್ದದಲ್ಲಿ ವಿಚಿತ್ರ ಸದ್ದು…. ಬಾಯೆಲ್ಲ ಅಂಟರಿಸುತ್ತಿತ್ತು. ಮೈಯೆಲ್ಲ ಬಿಸಿಯಾಗಿತ್ತು. ಇಳಿಯಲೂ ತ್ರಾಣವಿರಲಿಲ್ಲ. ಲಾಡಿಯಿಂದ ಹೆಗಲಿಗೇರಿಸಿ ಕಟ್ಟಿದ ಚಡ್ಡಿಯಲ್ಲಿ ಬಳಬಳ ಉಚ್ಚೆ….

ಹೊಟ್ಟೆಯೆಲ್ಲ ಕಿವಿಚಿ ತಲೆಬೋಳು … ಕತ್ತಲೋ ಕತ್ತಲು…. ಯವ್ವಾ….

ಎದುರಿಗೆ ಯಾರ್ಯಾರದ್ದೊ ಮುಖಗಳು. ಮಸುಕಮಸುಕಾದ ಅಪ್ಪನ ಮುಖ…. ಅಸ್ಪಷ್ಟ ಮಾತುಗಳು…. ‘ಪಾಪ, ಹಸ್ಮಗಾʼ, ‘ಏಳ್ನೆ ಕ್ಲಾಸು ಫೇಲಾದ್ದುಕ್ಕೆ ಹಿಂಗೆ ಹೆದ್ರಕಂದೇತಿ ಪಾಪ…ʼ, ‘ಶಿವಬಸಪ್ಪಾ ಮಗ್ನಿಗೇನು ಹೊಡೆಯ್ಕೆ ಹೋಗ್ಬೇಡಪಾ…ʼ , ‘ಇರೋನೊಬ್ಬ ಮಗ… ಜೀವಿದ್ರೆ…ʼ

ಯಾರೊ ಎತ್ತಿನಗಾಡಿಗೆ ಹೊತ್ಕಂದುಬಂದು ಹಾಕಿದರು.

ಊರೆಗೆಲ್ಲ ರಮೇಶಿ ಶಿವಬಸಪ್ಪಗೆ ಹೆದರಿ ತುಪ್ಪದಗಿರಿಗೆ ಓಡೋಗಿದ್ದು, ಜ್ಞಾನತಪ್ಪಿ ಬಿದ್ಕಂದಿದ್ದು ಎಲ್ಲ ಗುಲ್ಲೆದ್ದಿತ್ತು.

ರಮೇಶಿ ಮತ್ತೆ ಏಳನೇ ಕ್ಲಾಸಿಗೆ ಹೋದ. ಮತ್ತೆ ಪಬ್ಲಿಕ್ಪರೀಕ್ಷೆ ಬಂತು, ಮತ್ತೆ ಫೇಲಾದ. ಮತ್ತೆ ಬರೆದ ಮತ್ತೆ ಫೇಲಾದ…..

ರಮೇಶಿಗೆ ತರಗತಿಯಲ್ಲಿ ಸಹಪಾಠಿಗಳು ಸಣ್ಣಗೆ ಕಾಣಿಸುತ್ತಾ ಕಾಣಿಸುತ್ತಾ ತೀರಾ ಸಣ್ಣವರೇ ಆಗಿಹೋದರು, ಪಾಸಾಗಲಿಲ್ಲ. ಸಣ್ಣಗೆ ಗಡ್ಡಮೀಸೆ ಬಂತು, ಪಾಸಾಗಲಿಲ್ಲ. ಧ್ವನಿ ಒಡೆಯಿತು, ಪಾಸಾಗಲಿಲ್ಲ. ಚೊಣ್ಣ ದೊಡ್ಡದಾಯಿತು ಪಾಸಾಗಲಿಲ್ಲ. ಸಣ್ಣಮಕ್ಕಳೆಲ್ಲ ಗೊಳ್ಳೆಂದರು ಪಾಸಾಗಲಿಲ್ಲ. ಅಪ್ಪನೂ ಶಾಲೆಗೆ ಕಳಿಸುವುದಾ ಬಿಡಲಿಲ್ಲ. ಹೀಗಿರುವಾಗ ಅವ್ವನಿಗೆ ಯಾವುದೊ ಕಾಯಿಲೆಬಂದು ಕಣ್ಮುಚ್ಚಿದಳು.

ಇಂದು ರಮೇಶಿಯ ಏಳನೆತರಗತಿ ಏಳನೆಬಾರಿ ಪರೀಕ್ಷೆಯ ರಿಜಲ್ಟ್. ಓದಿದರು ಮೇಷ್ಟ್ರು. ಮತ್ತದೇ ‘ಫೇಲುʼ ಶಬುದ. ತಲೆಕೆಟ್ಟು ಹೋಯಿತು. ಈ ಬಾರಿ ಕಳ್ಳನಂತೆ ಹಿಂದಕ್ಕೆ ಸರಿಯಲಿಲ್ಲ. ಮಕ್ಕಳ ಗುಂಪ ಸೀಳಿ ಮುಂದಕ್ಕೆ ನುಗ್ಗಿ ಮೇಷ್ಟ್ರು ಕಪಾಳಕ್ಕೆ ಬಾರಿಸಿ ಕೈಯಲ್ಲಿದ್ದ ಹಾಳೆಕಸಿದು ಪರಪರ ಹರಿದೆಸೆದ. ಏನಾತು ಅನ್ನುವಷ್ಟರಲ್ಲೆ ಶಾಲೆ ಕಾಂಪೌಂಡು ಹಾರಿ ಕನ್ನಪ್ಪನಂಗಡಿಯಲ್ಲಿದ್ದ. ಬೆಳಗ್ಗೆ ಅಪ್ಪನ ಜೇಬಿಂದ ಎತ್ತಿದ್ದ ದುಡ್ಡುಕೊಟ್ಟು ಸಿಗರೇಟು ಬೆಂಕಿಪೊಟ್ಟಣ ತೆಗೆದುಕೊಂಡ. ಹಿಡೀರಿ ಹೊಡೀರಿ ಅನ್ನುವಷ್ಟರಲ್ಲೆ ಛಂಗನೆ ಹಾರಿ ಹೊಲಗಳ ಅಡ್ಡದಾರಿ ಹಿಡಿದು ಮಾಯವಾದ. ಸಾಲುಬಾಳು ಸಿಕ್ಕಿತು ಅಲ್ಲಿಂದ ಮುಂದೆ ಸಿಕ್ಕ ಸವಳಂಗ ಸರ್ಕಲ್ಲಲ್ಲಿ ನಿಂತು ಹಿಂದೆ ನೋಡಿದ. ಆರೇಳು ಕಿಲೊಮೀಟರ್ ನಡೆದುಬಂದಿದ್ದ. ಬಸ್ಸೂ ಜನಾ… ಯಾಕೋ ಇಲ್ಲಿ ನಿಲ್ಲೋದು ಬೇಡವೆನಿಸಿ ಹಾಗೆ ಮುಂದೆ ಹೋದರೆ ಊರಾಚೆ ಒಂದು ಮೋರಿ ಸಿಕ್ಕಿತು. ಅಲ್ಲಿ ಕುಳಿತು ದಣಿವಾರಿಸಿಕೊಂಡ.

ಶಿವಮೊಗ್ಗೆ ಕಡೆಯಿಂದ ಒಂದು ಜೀಪು….

‘ಯಾರಾದ್ರೊಬ್ಬ ಚೂಟಿಹುಡುಗ ಸಿಗ್ತಾ ಇಲ್ಲಲ್ಲಪ್ಪಾʼ.

‘ನೋಡಿ ಸಾಹೆಬ್ರೆ ಅಲ್ಲಿ ಚೂಟಿಹುಡುಗ, ಸಿಗರೇಟು ಹಚ್ಕಂದು ಹೆಂಗೆ ಹೊಗೆ ಬಿಡ್ತಾ ಐದಾನೆ…ʼ

‘ಹೆ ಹೆ ಜೀಪು ನಿಲ್ಸುʼ.

‘ಹೇ ನೋಡು ತಮ್ಮಾ ನಮ್ಮ ಡಿಪಾರ್ಟಮೆಂಟ್ನಾಗೆ ಒಂದ್ಕೆಲ್ಸ ಇದೆ ನಮ್ಜತೆ ಬರ್ತೀಯಾ..?ʼ

‘ಇವತ್ತಾದ್ರೆ ಬರ್ತೀನಿ, ನಾಳೆ ಅಂದ್ರೆ ಬರಲ್ಲʼ.

‘ಅಲ್ಲಾ ನಿನ್ ಅಪ್ಪ ಅಮ್ಮಗಾದ್ರೂ ಹೇಳಿ…ʼ

‘ಅವರಿಬ್ರು ಜೊತಿಮ್ಯಾಲೆ ಕೈಲಾಸುಕೆ ಟೂರೋಗ್ಯಾರ, ಅಲ್ಲಿಗೋಗಿ ನೀವೇ ಹೇಳ್ಬರ್ರಿʼ.

ಏಳನೆ ತರಗತಿ ದಂಡಯಾತ್ರೆಗಳು ನಡೆಯುತ್ತಿರುವಾಗಲೆ ಜನರ ಬಾಯಲ್ಲಿ ರಮೇಶಿ ‘ಪೋಯ’ನಾಗಿ ಹೋಗಿದ್ದ. ಅಬ್ಬಲಗೆರೆ ರೇಷ್ಮೆಇಲಾಖೆಯಲ್ಲಿ ರೇಷ್ಮೆಹುಳುಗಳಿಗೆ ಸೊಪ್ಪು ಕತ್ತರಿಸಿ ಹಾಕೋದು ಪೋಯನಲ್ಲಿ ಹೊಸಹುರುಪು ತಂದಿತ್ತು. ಖಾಕಿಚಡ್ಡಿ ಖಾಕಿ ಅಂಗಿಯಿಂದ ತಾನೊಬ್ಬ ಸರ್ಕಾರಿ ನೌಕರ ಎಂಬ ಗತ್ತು ಬೇರೆ ಒಳಗೇ ಖುಷಿ ನೀಡಿತ್ತು. ಜೀಪಿನಲ್ಲಿ ಹತ್ತಿಸಿಕೊಂಡು ಬಂದ ಸಾಹೇಬ್ರ ಹಿಂದಿಂದೆ ಓಡಾಡುತ್ತಾ ಕಲಿತ ‘ಓಕೆ ಸಾರ್ ಡನ್ ಸಾರ್ ಗುಡ್ಮಾರ್ನಿಂಗ್ ಸಾರ್ʼ ಹೇಳುವುದೇ ಮಜ. ‘ದಿನಕ್ಕೆ ಒಂದೂವರೆ ರೂಪಾಯಿ ಸಂಬಳ ಊಟಬಿಟ್ಟುʼ ಅಂತ ಸಾಹೇಬ್ರು ಹೇಳಿದಾಗಂತೂ ಆರೆಕರೆ ಹೊಲವಿರುವ ಅಪ್ಪನೂ ತನ್ನ ಸಂಬಳದ ಮುಂದೆ ಜುಜುಬಿ ಅನಿಸಿಬಿಟ್ಟ.

ಸೀಮೆಎಣ್ಣೆ ಸ್ಟವ್ಹಚ್ಚಿ ಅನ್ನಸಾಂಬಾರು ಚಹಾ ಮಾಡುತ್ತಿದ್ದ ಹೊನ್ನಪ್ಪನ ಜತೆಸೇರಿ ರಾತ್ರಿ ಶಿಮೊಗ್ಗಕ್ಕೆ ಹೋಗಿ ಹೆಚ್ಪಿಸಿ ಮಲ್ಲಿಕಾರ್ಜುನ ಟಾಕೀಸುಗಳಲ್ಲಿ ನೋಡುತ್ತಿದ್ದ ಸಿನೆಮಾಗಳು… ಈಚಲು ಚಾಪೆಮೇಲೆ ಹೊನ್ನಪ್ಪನ ಜತೆ ಮಲುಗುತ್ತಿದ್ದಾಗ ಅವನೇಳುತ್ತಿದ್ದ ‘ಆʼ ಕತೆಗಳು… ರೇಷ್ಮೆ ಸಾಕಾಣಿಕೆ ಬಗ್ಗೆ ಸಾಹೇಬ್ರು ಲೆಕ್ಚರರ್ ಕೊಡುತ್ತಿದ್ದಾಗ ಅವರಿಗೆ ಹೆಲ್ಪರ್ರಾಗಿ ಆಗಾಗ ಅವರಜತೆ ಸಹ್ಯಾದ್ರಿ ಕಾಲೇಜಿನ ಸಿರಿಕಲ್ಚರ್ ಡಿಪಾರ್ಟಮೆಂಟಿಗೆ ಹೋದಾಗ ಕಣ್ಣಿಗೆ ರಾಚುತ್ತಿದ್ದ ಆ ಹುಡುಗಿಯರು…. ಅಕ್ಷರದ ಮುಖವೇ ನೋಡದ ಹೊನ್ನಪ್ಪನ ಎದರು ಇವನು ಬೀಡಿ ಸೇದುತ್ತಾ ಬಿಡುತ್ತಿದ್ದ ಅರೆಬರೆ ಇಂಗ್ಲಿಷ್ ಪದಗಳು…..

ಮೂರುತಿಂಗಳು ಕಳೆದಿದ್ದೇ ಗೊತ್ತಾಗಲಿಲ್ಲ. ತಂಬಿಗೆ ಹಿಡಿದು ಬಯಲಿಗೆ ಹೋಗಿಬಂದು ಆಫೀಸ್ಸಿನ ಹಿಂದೆ ಸ್ವಾರೆಯೆದುರು ಎಡಗೈಗೆ ಮಣ್ಣಚ್ಚಿ ಗಸಗಸ ತಿಕ್ಕುತ್ತಿರುವಾಗ ‘ಏ ರಮೇಶಿ ನಿಮ್ಮಪ್ಪ ಬಂದಾರೆ ಕಣ್ಳೇ ಒಳ್ಗೆ ಕುಂದ್ರಿಸೀನಿʼ ಹೊನ್ನಪ್ಪ ಅಂದಾಗ ಹೊಟ್ಯಾಗೆ ಕಾರ ಸುರಿದಂಗಾತು. ಅಪ್ಪಿಲ್ಲ ಅವ್ವಿಲ್ಲ ಅಂತ ಸಾಹೇಬ್ರಿಗೆ ಹೇಳಿದ್ದು ನೆಪ್ಪಿಗೆ ಬಂದು ಒಳಕುಂತ ಅಪ್ಪೂನ ಕುತ್ತಿಗಿ ಹಿಚುಕಬೇಕೆನಿಸಿತು.

ಮಗನ್ನ ನೋಡಿದ್ದೇ ಶಿವಬಸಪ್ಪ ಗಳಗಳ ಕಣ್ಣಿರು ಸುರಿಸಿದ. ಹೊನ್ನಪ್ಪ ಎಷ್ಟು ಸಮಾಧಾನ ಮಾಡಿದರೂ ಥಮ್ಮಣಿ ಆಗಲೊಲ್ಲದು. ಸಹ್ಯಾದ್ರಿ ಕಾಲೇಜಲ್ಲಿ ಕಲಿಯುತ್ತಿದ್ದ ಸುರಹೊನ್ನೆ ಆರತಿಯ ಅಪ್ಪನಿಂದ ವಿಷಯತಿಳಿದು ಶಿವಬಸಪ್ಪ ಮಗನ್ನ ಪತ್ತೆಹಚ್ಚಿದ್ದ. ಹೊನ್ನಪ್ಪ ತಂದುಕೊಟ್ಟ ಚಹಾ ಮುಟ್ಟದೆ ನಿಂತಕಾಲಮೇಲೆ ‘ಸುರಹೊನ್ನಿಗೆ ಹೊಂಡ್ರುʼ ಅಂತ ರಮೇಶಿಗೆ ದುಂಬಾಲುಬಿದ್ದ.

ಹೀಗೆ ಗೋಳಾಡುತ್ತಿರುವಾಗಲೆ ಬಂದ ಸಾಹೇಬ್ರೆಗೆ ಕೈಮುಗಿದು ‘ಇರೋನೊಬ್ಬ ಮಗನ್ನಾ ನನ್ನಿಂದ ದೂರಮಾಡಬ್ಯಾಡ್ರಿ, ತಾಯಿಲ್ಲುದ್ ಮಗನ್ನಾ ಕಣ್ಣಂಗೆ ನೋಡ್ಕಂದೀನಿ ಸಾಹೇಬ್ರೆ…ʼ

‘ಅಲ್ಲಪ್ಪಾ… ಹೀಗೆ ಸ್ವಲ್ಪವರ್ಷ ಮಾಡಿದ್ರೆ ಈ ದಿನಗೂಲಿ ಕೆಲ್ಸ ಖಾಯಂ ಆಗುತ್ತೆ. ಗೋರ್ಮೆಂಟ್ ಕೆಲ್ಸಾ…ʼ

‘ಇಲ್ಲ ಸಾಹೇಬ್ರೆ … ಇವನ್ಗೇನು ಕಮ್ಮಿಯಾಗೇತಿ ಕೂಲಿ ಮಾಡಾಕೆ… ಆರೆಕೆರ್ರೆ ಹೊಲಾ ಐತಿ…. ಇವ್ನೇ ಎಂಟತ್ತು ಜನೂಕೆ ಕೂಲಿ ಕೊಡಬೋದು… ಇನ್ಮುಂದೆ ಇವ್ನೇನು ಶಾಲಿಗೋಗುದು ಬ್ಯಾಡ ಹೊಲಮನಿ ನೋಡ್ಕಂದಿದ್ರೆ ಸಾಕು…ʼ

ಇಷ್ಟು ಕೇಳಿಸಿಕೊಂಡಿದ್ದೇ ಪೋಯನ ತಲೆಯಲ್ಲಿ ಬಿಳಿಪಂಚಿ ಬಿಳಿಯಂಗಿ ಉಟ್ಕಂದು ಕೂಲೇರಿಗೆ ‘ಅದು ಮಾಡೇ ಇದು ಮಾಡೋʼ ಅನ್ನುತ್ತಿದ್ದ ರಮೇಶಿ ಮೂಡಿಬಂದ. ತಕ್ಷಣ ‘ನೋಡ್ರೀ ಸಾಹೇಬ್ರೇ, ನೀವೆಷ್ಟು ಬಡ್ಕಂದ್ರು ಅಷ್ಟೆ… ನಮ್ಮಪ್ಪ ಹೇಳಿದ್ಮೇಲೆ ಮುಗೀತು… ಸುರವನ್ನಿಗೆ ಹೋಗೋದೆ….ನಿಮ್ ಒಂದೂವರೆ ಕೂಲಿ ಯಾವನಿಗೆ ಬೇಕ್ರಿ, ಇಚ್ಲು ಚಾಪೆಮ್ಯಾಲೆ ಮಲಗೋ ಕರ್ಮ ನಂಗೇನ್ರಿ…. ಆ ಹೊನ್ನನೂ ನಂಜತೆ ಬೇಕಾದ್ರೆ ಕಳಿಸ್ರಿ ಮನೆಯಾಳಾಗಿ ಇಟ್ಕಂತೀವಿ…ʼ ಪೋಯ ಉಲ್ಟಾ ಹೊಡೆದ.

ಸಾಹೇಬ್ರೆಗೆ ಪೋಯನ ಮಾತುಕೇಳಿ ಕಣ್ಣಲ್ಲಿ ನೀರು ಜಿನುಗಿತು. ಸಣ್ಣಗೆ ನಗುತಂದುಕೊಂಡು ತಲೆಯಾಡಿಸುತ್ತಾ ಅವನಿಗೆ ನೂರಾ ಮೂವತ್ತೈದು ರುಪಾಯಿ ಎಣಿಸಿಕೊಟ್ಟು ಫಾರಮ್ಮೇಲೆ ಸಹಿಹಾಕಿಸಿಕೊಂಡರು.

ಕೈಯಲ್ಲಿ ಬರ್ಕಲಿ ಸಿಗರೇಟಿಡಿದು ಬಿಳಿಬಟ್ಟೆಯಲ್ಲಿ ಹೋಗೋಬರೋ ಹೆಣ್ಣುಮಕ್ಕಳ ತಿನ್ನುವಂತೆ ನೋಡುತ್ತಾ ಕೂಲಿಯವರಿಂದ ಹೊಲದಲ್ಲಿ ಕೆಲಸಮಾಡಿಸೊ ಪೋಯನಿಗೆ ತನ್ನಬಗ್ಗೆ ತನಗೇ ಹೆಮ್ಮೆ. ಬೇಕೆಂದಾಗ ನ್ಯಾಮತಿ ಸಂಗಮ್ ಟಾಕೀಸ್ನಲ್ಲಿ ಪಿಚ್ಚರ್, ಕೆಲಸದವರು ‘ಅಣ್ಣʼ ಅನ್ನುತ್ತಿದ್ದದ್ದು, ಆ ಯಜಮಾನಿಕೆ ಗತ್ತು ಖುಷಿ ಕೊಡುತ್ತಿತ್ತು. ಹೀಗೆ ನಾಕೈದು ತಿಂಗಳು ನಡೆಯಿತು. ನಿಧಾನಕ್ಕೆ ಕಾಲುಗಳು ಭೋಳೇರಕೇರಿ ಯಾರ್ಯಾರೊ ಹೆಂಗಸರ ಮನೆಬಾಗಲಿಗೆ ಹೋದವು. ನಾಲಿಗೆ ಏನೇನೊ ಗಟಗಟ ಕುಡಿದು ಉಪ್ಪಿನಕಾಯಿ ನೆಂಚಿಕೊಂಡಿತು. ಕೈಗಳು ಅಂದರ್ಬಾಹರ್ನಲ್ಲಿ ಪಳಗಿದವು. ಅಲ್ಲಿಗೆ ಹೊಲ ಒಣಗಿ ಬಿರುಕುಬಿಟ್ಟಿತು. ಏನೆಲ್ಲಾ ಯಾರೆಲ್ಲರಿಂದ ಹೇಳಿಸಿದರೂ ಮಗ ಮಾತುಕೇಳದ್ದಕ್ಕೆ ಶಿವಬಸಪ್ಪನೇ ಮತ್ತೆ ಹೊಲದಕಡೆ ಹೊಂಟ.

ಹೆಂಡ್ತಿ ಕಳೆದುಕೊಂಡು ಒಂದುವರ್ಷವಾದ ಶಿವಬಸಪ್ಪಗೆ ಸರೀಕರು ಒಪ್ಪಿಸಿ ಹೆಣ್ಣೊಂದನ್ನು ಹುಡುಕಿ ಮದುವೆಮಾಡಿಸಿದರು. ‘ನಲವತ್ತೆಂಟ್ರು ಮುದುಕ್ಯಾಕ್ಲೆ ಬೇಕಿತ್ತು ಮದ್ವೆ…? ನಿಂಗೇ ಮಾಡಿದ್ರೆ ಆಗ್ತಿತ್ತಲ್ಲೋ…ʼ ಅಂತ ಗೆಳೆಯರು ಪೋಯನಿಗೆ ಕಿಚಾಯಿಸಿದಾಗ ಹಲ್ಲುಕಡಿಯುತ್ತಾ ಸರಾಯಿಬಾಟಲಿ ಎತ್ತಿ ಒಂದೇ ಗುಟುಕಿಗೆ ಕುಡಿದು ಕಟ್ ಅಂತ ಎಸೆದ.

ಮನೆಗೋಗದೆ ಸಂಗಮ್ ಟಾಕೀಸಿಗೆ ಸೆಕೆಂಡ್ ಶೋಗೆ ಹೋದ. ‘ಬಂಧನʼ ಫುಲ್ರಶ್. ಗಂಡಸರ ಕೌಂಟರನಲ್ಲಿ ಜನವೋಜನ. ಹೆಂಗಸರ ಕೌಂಟರತ್ತ ನೋಡಿದ್ರೆ ಅಲ್ಲೂ ಜಗಳ. ಫ್ರೆಂಡ್ಸು ಸನ್ನೆಮಾಡಿದ್ದೇ ಪೋಯ ಬಾಯಲ್ಲಿ ನೋಟು ಕಚ್ಚಿಕೊಂಡವನೆ ಹೆಂಗಸರ ತಲೆಮೇಲೆ ಸೊಯ್ಯಂತ ಹಾರಿದ. ಅಲ್ಲೋಲಕಲ್ಲೋಲ! ತಲೆಮೇಲೇನೋ ಬಿದ್ದಂಗಾಗಿ ಹೆಂಗಸರೆಲ್ಲಾ ಬೊಬ್ಬೆ. ʼಪಾಂಡಣ್ಣ ನಾಕು ಟಿಕೇಟು...ʼ ಅಂತ ಕೌಂಟರ್ಕಡೆ ಕೈಚಾಚಿದಾಗ ನುಣುಪುಬೆನ್ನು ಸೋಕಿದ್ದೇ ಕೈಗೆಸಿಕ್ಕ ಜಾಕೀಟಾ ಪರ್ರಂತ ಹರಿದೇ ಬಿಟ್ಟ! ಆ ಹೆಂಗಸು ಏನಾಯಿತು ಅಂತ ನೋಡುವಷ್ಟರಲ್ಲೇ ಅವಳ ಬೆನ್ನೆಲ್ಲಾ ಬೆತ್ತಲಾಗಿ ಜಾಕೀಟು ನೇತಾಡುತ್ತಿತ್ತು. ಆಕೆ ಸೆರಗುಮುಚ್ಚಿಕೊಂಡು ಹೊಯ್ಕೊಳ್ಳಲು ಹತ್ತಿದಳು ಅಷ್ಟೆ. ಪೋಲೀಸ್ಸ್ಟೇಷನ್ನಲ್ಲಿ ಪೋಯ….. ಬಂಧನ…!

ನಡುರಾತ್ರಿ ಒಂಚೂರು ವಾಹನಗಳು ಕಮ್ಮಿಯಾದಮೇಲೆ ರಸ್ತೆ ‘ಏನಂತೆ?ʼ ಅಂತ ಪೋಯನ ಬಗ್ಗೆ ಕೇಳಿತು.

‘ಅವ್ನ ಮಗ ಹೆಣ್ತಿನೇ ಅಂಗಿಯರ್ದು ಚಪಾಟಿಮಾಡಿ ತಲಿಗೆ ದೊಣ್ಣೆ ತಕಂದು ಹೊಡ್ದರಂತೆ. ಪೊಲಿಸ್ರಿಗೆ ಹೇಳೋಕೋದ್ರೆ ಪೋಯಗೇ ಒಂದೆರಡು ಬಿಗಿದು ಕಳಿಸಿದ್ರಂತೆʼ ತಾನು ಕೇಳಿಸಿಕೊಂಡಿದ್ದನ್ನ ಉಸುರಿತು ಬಸ್ಸ್ಟ್ಯಾಂಡ್.

‘‘ಮದ್ವೆ ಮಾಡ್ತೀಯೋ ನಿನ್ ಕುತ್ಗಿ ಹಿಚ್ಕಲಾʼ ಅಂತ ಅವರಪ್ಪನತ್ರ ಜಗಳಾಡಿ ಮದ್ವೆಯಾದ ಹೆಣ್ತಿತಕೇ ಹೊಡ್ತಾ ತಿಂದಾ ಅನ್ನುʼ ಅಂತು ರಸ್ತೆ.

‘ಹುಟ್ದಾಂಗಿಂದ ಒಂದ್ಕಡ್ಡಿನೆತ್ತಿ ಹಿಂಗಿಟ್ಟನ್ನಲ್ಲ ರುಣುದ್ಕೂಳು ತಿನ್ಕಂತನೇ ಜೀವ ಸವ್ಸದೋವ್ನಾ ಎಷ್ಟಂತ ಸಹಿಸ್ಕಂತಾರೆ ತಗಾʼ ಅಂತು ಬೋರ್ಡು. ‘ಮೊನ್ನೆಬಂದು ಹಲ್ಲುಕಿರಿದ. ನಂಗೇ ವಾಕರಿಕೆ ಬಂತು ವಾಸನೆಗೆ. ನಮ್ಮೆಜುಮಾನ ಹೊಡೆಹೊಡೆಯೋಕೆ ಹೋದ. ಇವ್ನೋಡಿ ಬರೋ ಗಿರಾಕಿಗಳೂ ಬರಂಗಿಲ್ಲಂತ. ಅದ್ರೂ ಕೇಳ್ಬೇಕಲ್ಲ ಕೈಚಾಚಿದ. ‘ಭಂಡ ನನ್ಮಗನೇʼ ಅಂತ ಬೈಯುತ್ತಾ ಕೇಕು ತುಂಡೊಂದ ಕೊಟ್ಟ. ತಗಂದನೇ ಛಂಗನ್ನಾರಿ ಮಾಯವಾದʼ ಮುಖ ಕಿವುಚಿಕೊಂಡಿತು ಸ್ವೀಟ್ಸ್ಟಾಲ್.

‘ಅದು ಬಿಡಪ್ಪಾ, ಯಾರೂ ನನ್ಮೇಲೆ ಕುಂತ್ಕಣಂಗಿಲ್ಲ ಧುತ್ತ ಅಂತ ಕೈಚಾಚ್ತಾನೆ ಬೀಡಿಗೆ. ಎಷ್ಟುಗಿದ್ರೂ ಅಲ್ಲಾಡಲ್ಲ ಕೊಡತಂಕ‘ ಅಂತು ಕಲ್ಲು.

‘ಅವರಪ್ಪ ಇರೋತಂಕ ಇವನ್ದೇನು ಗತ್ತು ಗೈರತ್ತು… ಮಲತಾಯ್ನಂತೂ ಗೋಳಾಡಿಸ್ಕಂದು ತಿಂದ…. ಪಾಪ ಹುಟ್ಟಿದೊಂದು ಮಗೂನ ಕಳ್ಕಂದು ಆ ಹೆಂಗ್ಸು ಏಟೊಂದು ಕಣ್ಣೀರಾಕ್ತು….ʼ ಬಸ್ಸ್ಟ್ಯಾಂಡ್ ಬೇಸರಿಸಿತು.

‘ಜನ್ಗೂಳ ಮಾತ್ ಕಟ್ಕಂದು ತಾಲೂಕ್ಪಂಚಾಯ್ತಿ ಎಲೆಕ್ಸನ್ನಿಗೆ ನಿಂತಂಗದಿದ್ನಲ್ಲಪ್ಪೋ…ʼ

‘‘ಬರೀ ಸಾಮು ತಕಂತನೇ ಇದ್ರೆ ಕುಸ್ತಿ ಆಡೋದ್ಯಾವಾಗ?ʼ ಅಂತ ಅವರಪ್ಪನತ್ರ ಜಗಳತಗ್ದು ಎಲೆಕ್ಸನ್ನಿಗೆ ನಿಂತ್ಕಂದೇಬಿಟ್ನಲ್ಲಪ್ಪಾʼ.

‘ಎಲೆಕ್ಸನ್ನಿಗಂತನೇ ಎಲ್ಡೆಕ್ರೆ ಹೊಲಮಾರಿ ಶಿವಬಸಪ್ಪ ದುಡ್ಡು ಕೊಟ್ನಲ್ಲಾ‘.

‘ಹತ್ವೋಟೂ ಬರ್ಲಿಲ್ಲಲ್ಲಾ’.

‘ಮಲ್ತಾಯಿ ಶಾಪ… ಗೆದ್ದಾರ ಗೆದ್ದನೇನು…. ಎಸ್ಟೊಂದು ಉರುದ... ಆಕಿಗೆ ಕಾಲ್ಕಾಲಾಗೆ ಒದ್ದʼ.

‘ಆ ಹೆಂಗ್ಸು ಎಲ್ಲೋದ್ಲೋ ಏನು ಶಿವಬಸಪ್ಪ ಸತ್ಮೇಲೆ….‘

-ಹೀಗೆ ಏನೇನೊ ಮಾತು, ರಸ್ತೆ ಕಲ್ಲು ಬಸ್ಸ್ಟ್ಯಾಂಡ್ ಅಂಗಡಿ ಬೋರ್ಡು ನಡುವೆ.

ಮಗನವಯಸ್ಸಿನ ತನ್ನ ಎರಡನೆ ಹೆಂಡತಿ ಕರಿಬಸಮ್ಮ ಕಣ್ಣೀರಾಗೆ ಕೈತೊಳೆಯುತ್ತಿದ್ದರೂ ಶಿವಬಸಪ್ಪ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಕೈಗೆ ಏನು ಸಿಗುತ್ತೊ ಅದನ್ನು ತೆಗೆದುಕೊಂಡು ಪೋಯ ಕರಿಬಸಮ್ಮನ ಮೇಲೇರಿಹೋಗುತ್ತಿದ್ದ. ‘ಸರಿಯಾಗೆ ಅಡ್ಗೆಮಾಡಿ ಅವ್ನಿಗೆ ಬಡಸಕ್ಕಾಗಲೇನು ನಿಂಗೆ? ಕತ್ತೆ ವಯಸ್ಸಾಗೇತಿ ಉಪ್ಪು ಹುಳಿ ಎಷ್ಟಾಕಬೇಕಂತ ತಿಳಿಯಲ್ಲೇನು?, ಸುಮ್ಕೆ ಅವ್ನಮೇಲೆ ತೀಟೆ ಹೇಳ್ತೀಯಾʼ ಶಿವಬಸಪ್ಪನೂ ಮೈಹಣ್ಣಾಗುವವರೆಗೂ ಕರಿಬಸಮ್ಮಗೆ ಹೊಡೆಯುತ್ತಿದ್ದ. ‘ಯಾವಾಗ ನೋಡಿದ್ರೂ ಆ ದರಿದ್ರ ಕೂಸ ಚಾಕರಿ ಮಾಡ್ಕಂದು ಕುಂತ್ಕಂತೀಯಾ…. ನಿಮ್ಮಪ್ಪೊಗೀತಾನ ನನ್ ಬಟ್ಟೇನಾ‘ ಅಂತ ಪೋಯ ಕಪಕಪಾಳಕ್ಕೆ ಹೊಡೆಯುತ್ತಿದ್ದ. ಶಿವಬಸಪ್ಪ ತುಟಿಪಿಟಕ್ ಅನ್ನುತ್ತಿರಲಿಲ್ಲ.

ಒಂದುಸಾರಿ ಮಗೂನ ಎತ್ಕಂದು ಚಟ್ನಹಳ್ಳಿಗೆ ನಡೆದುಕೊಂಡೇ ಹೋಗಿಬಿಟ್ಟಳು ಯಾರಿಗೂ ಹೇಳದೆ. ‘ನೋಡವ್ವಾ, ಇನ್ನೂ ನಿನ್ ನಾಕು ತಂಗೇರ ಮದ್ವೆ ಆಗ್ಬೇಕು. ನಿಂಗೆ ಗೋತ್ತಿರೋದೆ. ಇಲ್ಲೋ ಹೊಟ್ಟಿಗಿದ್ರೆ ಬಟ್ಟಿಗಿಲ್ಲ, ಬಟ್ಟಿಗಿದ್ರೆ ಹೊಟ್ಟೆಗಿಲ್ಲ. ನೀನು ಹಿಂಗೆ ಗಂಡೂನ ಬಿಟ್ಬಂದ್ರೆ ನಾವು ವಿಷ ಕುಡಿಬೇಕಾಕತಿʼ ಅಂತ ಅಪ್ಪ-ಅವ್ವ ಭಿಡೆಬಿಟ್ಟು ಹೇಳೆಬಿಟ್ಟರು. ಕರಿಬಸಮ್ಮಗೆ ಭೂಮಿಯೇ ಬಾಯಿಬಿಟ್ಟಂಗಾಯಿತು. ನೆಲದಮೇಲೆ ಬಿದ್ದು ರಾಪಾಡಿ ಹೊಯ್ಕಂದಳು.

ಕೊನೆಗೆ ಅಪ್ಪ-ಅವ್ವ ಸಮಾಧಾನಮಾಡಿ ಸುರಹೊನ್ನೆಗೆ ಕರೆದುಕೊಂಡು ಬಂದರು. ಶಿವಬಸಪ್ಪ ಪೋಯ ಕೆಂಡಾಮಂಡಲವಾಗಿದ್ದರು. ಒಳಗೆ ಕರೆದುಕೊಳ್ಳಲು ಒಪ್ಪುತ್ತಿಲ್ಲ. ಕರಿಬಸಮ್ಮನ ಅಪ್ಪ-ಅವ್ವ ಅವರಿಬ್ಬರ ಕಾಲಿಗೆಬಿದ್ದು ‘ತಪ್ಪಾತು, ಇನ್ನೊಂದ್ಪಟ ಆಕಿ ಏನಾರ ಹಿಂಗೆ ಮಾಡಿದ್ರೆ ನಾವೇ ಕಡ್ದಾಕ್ತೀವಿʼ ಅಂತ ಕಣ್ಣೀರುಗರೆದರು.

ಆಮೇಲಂತೂ ಪೋಯನ ಆಟೋಟೋಪ ಹೇಳತೀರದು. ಆ ಕೂಸೇನಾದ್ರು ಅತ್ತರೆ ಕೆನ್ನೆಗೆ ಪಟೀರ್ ಅಂತ ಬಾರಿಸುತ್ತಿದ್ದ. ಕೂಸಗೇನಾರ ಮಾಡಿಬಿಟ್ಟಾನು ಅಂತ ಅದು ಅಳುತ್ತಿದ್ದಂತೆ ಬಾಯಿಮುಚ್ಚಿ ಹಿತ್ತಲಿಗೆತ್ತಿಕೊಂಡು ಓಡುತ್ತಿದ್ದಳು ಕರಿಬಸಮ್ಮ.

‘ಪೋಯನ ಸೊಂಟ ಕಾಲು ಮುರಿಯಂಗೊಡ್ದು ‘ಮನೆಕಡೆ ಏನಾರ ಬಂದ್ರೆ ಕೈಕಾಲು ಕಡ್ದಾಕ್ತೀವಿʼ ಅಂತ ಮಚ್ಚು ತೋರಿಸಿದ್ರಂತಲ್ಲಪ್ಪೋ ಹೆಣ್ತಿ-ಮಗʼ.

‘ಹೂಂನಪ್ಪ ಮೊನ್ನೆಯಿಂದ ಕುಂಡ್ಯಾಗೆ ದೇಕಂತ್ತನೇ ರಸ್ತೆ ಮಗ್ಗಲಾಗಿನ ಆ ತಿಪ್ಪೆತಕೆ ಇರ್ಕತ್ತಾನಂತೆ, ಅಲ್ಲೇ ಮನ್ಕಂತ್ತಾನಂತೆʼ.

‘ಯಾರೊಬ್ರು ಏನು ಎತ್ತ ಅಂತ ತಿರುಗೂ ನೋಡ್ತಾ ಇಲ್ಲಂತೆʼ.

‘ನಾಕ್ವರ್ಷದಿಂದೆ ಮಾರಿಹಬ್ದಾಗೆ ಇವ್ನಿಂದೇನು ಅಬ್ರಪಾ… ಆರ್ಕೆಸ್ಟ್ರಾ ನಾಟಕದ ಹೆಂಗ್ಸ್ರು ….. ಕುಡಿಯೋಕೆ ತಿನ್ನೋಕೆ ಇವ್ನಿಂದೇನೆ ಓಡಾಡ್ತಿದ್ರಲ್ಲಾ ಅವ್ರೀಗ ಎಲ್ಲೋದ್ರೊ… ಹಂಗೆ ಜನೂಕೆ ತಿನ್ಸಿ ಉಣ್ಸಕೆ ಅಂತಾನೆ ಒಂದೆಕರೆ ಹೊಲ ಮಾರ್ಕಂದ್ನಲ್ಲಪ್ಪಾʼ.

‘ಅದಾದ್ಮೇಲ್ಲೇನು ಹೆಣ್ತಿ-ಮಗ ತಿರುಗಿಬಿದ್ದಿದ್ದು, ಇವ್ನಿಂಗೆ ಮಜಮಾಡಿಮಾಡಿ ಆರೆಕೆರೆಗೆ ಒಂದೆಕೆರೆ ಉಳಿಸ್ಯಾನೆ, ಅದ್ನೂ ಎಲ್ಲಿ ಮಾರಿ ನಮ್ಕೈಗೆ ಚಿಪ್ಪುಕೊಡ್ತಾನೆ ಅಂತ ಅವ್ನತ್ರ ಜಗಳಾಡಿ ತಮ್ಮೆಸ್ರಿಗೆ ಮಾಡಿಸ್ಕಂದಿದ್ದು..ʼ

-ಮತ್ತೆ ಮಾತಿಗೆ ಶುರುವಿಟ್ಟುಕೊಂಡವು ರಸ್ತೆ, ಬಸ್ಸ್ಟ್ಯಾಂಡ್ ಇತ್ಯಾದಿ.

ಮಿಲ್ಬಾಗಿಲು ತೆಗಿಸಿ ಕರಿಬಸಮ್ಮ ಹಿಟ್ಟು ಹಾಕಿಸಿಕೊಂಡ ಬರುವಹೊತ್ತಿಗೆ ರಾತ್ರಿ ಹತ್ತೂಕಾಲು. ಲಕ್ಷ್ಮಿ ಕಳಿಸಿ ಮಗೂನ್ನೆತ್ತಿಕೊಳ್ಳುತ್ತಿದ್ದಂತೆ ಶಿವಬಸಪ್ಪ ಬಂದಿದ್ದು ಸದ್ದಾಗಿ ಹಾಗೇ ಜೋಲಿಗೆಹಾಕಿ ಅಡುಗೆಮನೆಗೋಗಿ ಮುದ್ದೆಮಾಡಿ ಬಡಸಿ ಮುಸುರೆ ತಿಕ್ಕಿಬಂದಾಗ ಹನ್ನೊಂದುಕಾಲು.

ಜೋಲಿಯಲ್ಲಿ ನೋಡಿದರೆ ಕೂಸು ಹರಾ ಇಲ್ಲ ಶಿವಾ ಇಲ್ಲ…!

‘ಇಲ್ಲ ನನ್ ಕೂಸು ಬೆಳ್ಗೆಯಿಂದ ಪಾಡಾಗಿತ್ತು…. ಏನೊ ಆಗಬಾರ್ದಾಗೇತಿ…. ಚಂಜಿಮುಂದೆ ಕಿಲಕಿಲ ಅಂತ ಜೋಲ್ಯಾಗೆ ಆಡ್ತಾ ಇತ್ತು…. ಕೂಸು ಮೈಯೆಲ್ಲಾ ಸರಾಯಿವಾಸ್ನೆ ಬರಾಕತ್ತಾತಿ… ನಿನ್ಮಗನೇ ಏನೊ ಮಾಡ್ಯಾನೆ…..ʼ ಅಂತ ಕರಿಬಸಮ್ಮ ಕೂಸಿನ ಹೆಣದಮೇಲೆ ಬಿದ್ದು ಎದೆಎದೆ ಬಡ್ಕಂದು ಕರಳುಕಿತ್ತು ಬರುವಂತೆ ಅಬ್ಬರಿಸುತ್ತಿದ್ದಾಗ ಶಿವಬಸಪ್ಪ ಅವಳ ಬಾಯಿ ಅದುಮಿಡಿದು ʼಸುಮ್ಕಿರೆ ಭೋಸುಡಿ, ಈ ಸರವೊತ್ನಾಗ ಕೂಗಾಡಿ ಸರೀಕ್ರುನ್ನೆಲ್ಲಾ ಸೇರ್ಸಿ ನನ್ ಮಾನ ತಗೀಬ್ಯಾಡ…. ಸತ್ರೆ ಸಾಯ್ತು …. ಏನೋ ಬ್ಯಾನೆಬಂದು ಸತ್ತೋಗಿರ್ಬೇಕುʼ ಅಂದ.

ಕೈಸಡಿಲ ಆದುದ್ದೇ ಮತ್ತೆ ಕರಿಬಸಮ್ಮ ‘ನಿನೊಬ್ಬ ಗಂಡ್ಸಾ... ಹೊಟ್ಯಾಗುಟ್ಟಿದ್ಮಗ ಸತ್ರೆ ಒಂದೀಟು ಕರುಣೇ ಇಲ್ಲ.. ‘ಇವ್ನೊಬ್ಬುಟ್ಟಿದಾ ಹೊಲ್ದಾಗೆ ಪಾಲ್ಕೇಳಾಕೆʼ ಅಂತ ಪಟ್ಪಟ್ ಕೂಸಿಗೆ ಹೊಡೀತ್ತಿದ್ದ ನಿನ್ಮಗ… ಅವ್ನೆ…ʼ ಅಂತ ಬಾಯಿತೆಗೆಯುತ್ತಿದ್ದಂತೆ ಶಿವಬಸಪ್ಪ ಅವಳ ಬಾಯಿಬಾಯಿಗೆ ಬಾರಿಸಿ ಬಟ್ಟೆ ತುರುಕಿ ಕಂಬಕ್ಕೆ ಕಟ್ಟಿಹಾಕಿದ.

ಪೋಯ ರಾತ್ರಿ ಮೂರುಗಂಟೆಗೆ ಬಾಗಿಲುಬಡಿದ. ಫುಲ್ ಆಗಿದ್ದ. ಶಿವಬಸಪ್ಪನೇ ಬಾಗಿಲು ತೆಗೆದ. ಕರಿಬಸಮ್ಮ ಅವನನ್ನು ನೋಡಿದ್ದೇ ಕಂಬದಿಂದ ಸೀರೆ ಕಟ್ಟು ಬಿಚ್ಚಿಕೊಳ್ಳಲು ಯತ್ನಿಸಿ… ಏನೇನು ಮಾತಾಡಲು ಹೋದಳು…. ಪೋಯ ಬಂದವನೇ ಕ್ಯಾಕರಿಸಿ ಮುಖದಮೇಲೆ ಉಗಿದು ಅವಳೆದೆಗೆ ಒದ್ದು ‘ಏನ್ ಮಾ ಘನಂಧಾರಿ ಕೂಸು ಇಕೀದು…ಸೀಮೆಗಿಲ್ಲುದ್ದು….. ಹುಟ್ದಾಗಿಂದಾನೆ ಪೀಗುಟ್ತಿತ್ತು…. ಏನು ರೋಗಾನೊ ಏನು ಸೆಟ್ಕಂದೋತು….ʼ ಅಂತ ಒದರಿ, ಒಳಗೋಗಿ ಬಿದ್ದುಕೊಂಡ.

ಅಮಾವಾಸ್ಯೆ ರಾತ್ರಿ. ಸುರಹೊನ್ನೆ ಗಡಿಯಲ್ಲಿ ಮೇನ್ರೋಡು ಪಕ್ಕಕ್ಕೇ ಇರುವ ಐಟಿಐ ಕಾಲೇಜು ಕಾಂಪೌಂಡಿಗೆ ಊರಿನವರೆಲ್ಲಾ ಕಸತಂದು ಸುರಿಯೋ ತಿಪ್ಪೆಯಲ್ಲಿ ಪೋಯ ಕಸದಂತೆ ಬಿದ್ದುಕೊಂಡಿದ್ದ. ಬಟ್ಟೆ ಕರ್ರಗೆ ಕಿಟ್ಟಾಗಿಹೋಗಿತ್ತು. ಬಿಳಿಗಡ್ಡ ಮೀಸೆಯಲ್ಲಿ ರಾವು ಹೊಡೆದವನಂತೆ ಕಾಣುತ್ತಿದ್ದ. ಮೈಯೆಲ್ಲಾ ಗಾಯ, ರಸಿಯಾಡುತ್ತಿದ್ದವು. ಆ ರೋಡಲ್ಲಿ ಹೊಲಕ್ಕೋಗೋರು ಬುತ್ತಿಗಂಟುಬಿಚ್ಚಿ ಒಂದು ರೊಟ್ಟಿ ಇಟ್ಟು ಹೋದರೆ ಊಟ ಇಲ್ಲಂದ್ರೆ ಇಲ್ಲ. ಶಿಮೊಗ್ಗ ಕಡೆ ಹೋಗೊ ಬೈಕು ಕಾರಿನವರಿಗೆ ಕುಂತಲ್ಲೆ ಕೈಚಾಚುತ್ತಿದ್ದ. ಅವರೇನಾದ್ರು ಕೊಟ್ರೆ ಕುಂಡಿಯಲ್ಲಿ ಅರ್ಧಗಂಟೆ ದೇಕುತ್ತಲೇ ಬ್ರಾಂದಿ ಕದ್ದುಮಾರುತ್ತಿದ್ದ ಭಟ್ರು ಹೋಟೆಲ್ಲಿಗೆ ಬಂದು ಚಿಲ್ರೆಯನ್ನೆಲ್ಲ ಸುರಿದು ಗಟಗಟ ಕುಡಿದು ಮತ್ತೆ ಅದೇ ತಿಪ್ಪೆ ಸೇರುತ್ತಿದ್ದ.

ಕತ್ತಲು ಗಂವ್ ಅನ್ನುತ್ತಿತ್ತು. ಯಾರೊ ಮೂವರು ಕಾಲೇಜು ಕಾಂಪೌಂಡೊಳಗೇ ಬೈಕು ನುಗ್ಗಿಸಿದರು. ಪೋಯನಿಗೆ ಇವತ್ತು ಒಂದು ಗುಕ್ಕು ಕೂಳೂ ಸಿಕ್ಕಿರಲಿಲ್ಲ. ಮೈಕೈ ವೀಪರೀತ ನೋವು. ಯಾರೋ ಚಾಕು ತಗಂದು ಚುಚ್ಚಿದಂತೆ ಅನಿಸುತ್ತಿತ್ತು. ಬೈಕು ನಿಲ್ಲಿಸಿದ ಆ ಹುಡುಗರು ಕಟ್ಟಿಸಿಕೊಂಡು ಬಂದಿದ್ದ ಬ್ರಾಂದಿ ಬಾಟಲು ಪ್ಲಾಸ್ಟಿಕ್ ಲೋಟ ನೀರಿನ ಬಾಟಲು ಬಿರಿಯಾನಿ ಪೊಟ್ಟಣ ಬಿಚ್ಚಿಕೊಂಡು ಕುಂತರು. ನಿಧಾನಕ್ಕೆ ಕುಡಿಯುತ್ತಾ ತಿನ್ನುತ್ತಾ ಏನೇನೊ ಮಾತು ಕೇಕೆ. ಅವರು ಎದ್ದೋದ್ರೆ ಸಾಕು ಅಂತ ಪೋಯ ಇಲ್ಲಿ ಕಾಯುತ್ತಿದ್ದ. ಅವರು ಹೋಗಲೊಲ್ಲರು. ಮತ್ತೇರಿದಂತೆಲ್ಲಾ ಮಾತು ಎಲ್ಲೆಲ್ಲಿಗೊ ಹೋಗಿಬಂದವು. ಎಲ್ಲಾ ಮುಗಿಯುವುದೊರಳಗೆ ರಾತ್ರಿ ಮೂರಾಗಿತ್ತು. ಅದರೊಲ್ಲಬ್ಬ ಓಲಾಡುತ್ತಾ ಎದ್ದು ತಿಪ್ಪೆಯತ್ತಿರವೇ ಬಂದು ಜಿಪ್ಪೆಳೆದು ಚುರ್ ಅನಿಸಿಯೇಬಿಟ್ಟ. ಮಬ್ಬಲ್ಲಿ ಮತ್ತಲ್ಲಿ ಪೋಯನೆಲ್ಲಿ ಕಾಣಬೇಕು? ಮೈಯೆಲ್ಲಾ ಉಚ್ಚೆ!

ಕೊನೆಗೆ ಅವರ ಬೈಕು ಓಲಾಡುತ್ತಾ ಕಾಂಪೌಂಡು ದಾಟಿದಮೇಲೆ ಪೋಯ ದೇಕುತ್ತಾ ಅವರು ಕೂತಲ್ಲಿ ಹೋದವನೆ ಎಂಜಲೆಲ್ಲಾ ಬಳಿದು ಗಪಗಪ ತಿಂದವನೇ ನೀರಿಗಾಗಿ ತಡಕಾಡಿದ. ರಸ್ತೆಯಲ್ಲಿ ಯಾವುದೋ ವಾಹನದ ಬೆಳಕು. ನೋಡಿದ್ರೆ ಫುಲ್ ಒಂದು ಬ್ರಾಂದಿ ಬಾಟಲಿ! ಹೇಗೋ ಅವರ ಕುಡಿತಲೆಯಿಂದ ತಪ್ಪಿಸಿಕೊಂಡಿತ್ತು. ಮುಕ್ಕಾಗದ ಅದು ಇವನಿಗೆ ಕಣ್ಣೊಡೆದು ಇಪ್ಪತ್ತೈದು ವರ್ಷದ ಹಿಂದೆ ಆದಿನ ನಕ್ಕಂತೆಯೇ ಗಹಗಹಿಸಿ ನಗತೊಡಗಿತು…..

ರಾತ್ರಿ ಒಂಬತ್ತಾಗಿತ್ತು. ಕರಿಬಸಮ್ಮಗೆ ಬೆಳಗ್ಗೆ ರೊಟ್ಟಿಸುಡಲು ಹಿಟ್ಟಿಲ್ಲ ಎಂಬುಂದು ನೆನಪಾದದ್ದೇ ಹೌಹಾರಿದಳು. ರೋಟಿಯಿಲ್ಲ ಅಂದ್ರೆ ಅಪ್ಪ-ಮಗ ಜೀವನೇ ತೆಗೀತಾರೆ ಎಂದು ಕೈಯಲ್ಲಿದ್ದ ಕೂಸನ್ನು ಜೋಲಿಗೆಹಾಕಿ ಎದುರುಮನೆ ಹುಡುಗಿ ಲಕ್ಷ್ಮಿಗೆ ಕೂಸು ನೋಡಿಕೊಂಡಿರಲೇಳಿ ಕೆಳಗಿನಕೇರಿಯ ಹಿಟ್ಟಿನ ಗಿರಣಿಗೆ ಜೋಳದಡಬ್ಬ ದಣೇರೆ ಹೊತ್ಕಂಡು ಹೊಂಟಳು. ಶಿವಬಸಪ್ಪ ಹೊಲಕ್ಕೆ ಮೋಟಾರ್ ರಿಪೇರಿಮಾಡಿಸಲು ಹೋಗಿದ್ದ. ಸ್ವಲ್ಪಹೊತ್ತಿಗೆ ʼಹೇ ಹೊರಗ್ಯಾಗಿನೇ ನೀರೊಲಿಗೆ ಬೆಂಕಿಯಾಕಿ ಮುಸುರೆ ತಿಕ್ಕಿ ಹೋಗ್ಬಾʼ ಎಂದು ಅವ್ವ ಕೂಗಿದ್ದೇ ಲಕ್ಷ್ಮಿ ಕೂಸ ಜೋಲಿಯಲ್ಲಿ ಹಾಕಿ ಓಡಿದಳು.

ಪೋಯ ಯಾಕೋ ಮನೆಗೆಬಂದ. ಮನೆಯಲ್ಲಿ ಕೂಸು ಒಂದೆ…. ತಕ್ಷಣ ಏನೋ ತಲೆಗೆಬಂತು. ಬಕ್ಕಣದಲ್ಲಿ ಸರಾಯಿ ಬಾಟಲಿ ಗಹಗಹಿಸುತ್ತಿತ್ತು. ಅದರ ಮುಚ್ಚಳ ತೆಗದವನೇ ಕಿಲಕಿಲ ನಗಾಡುತ್ತಿದ್ದ ಕೂಸಿನ ಬಾಯಿಗಿಟ್ಟು ಗಟಗಟ ಕುಡಿಸಿಯೇಬಿಟ್ಟ! ಅದು ಉಸಿರುಗಟ್ಟಿ ಒದ್ದಾಡಿದರೂ ಬಾಯಿಂದ ಬಾಟಲಿ ತೆಗೆಯದೆ ಬಗ್ಗಿಸುತ್ತಲೇ ಇದ್ದ…. ಹ್ಞ ಹ್ಞ ಅಂತ ಅದು ಏದುಸಿರುಬಿಡುತ್ತಿರುವಾಗಲೆ ಮೂಗಿಡಿದು ಮತ್ತೆ ಬಗ್ಗಿಸಿದ. ಯಾವಾಗ ಹೊಟ್ಟೆತುಂಬಿ ಸರಾಯಿ ವಾಪಸ್ಸು ಬರಲತ್ತಿತೊ ಅವಾಗ ಬಿಟ್ಟ. ಬಾಟಲಿ ತೆಗೆದಿದ್ದೇ ಅದು ಚಿಟ್ಟನೆ ಚೀರಿ ಉಸಿರುಗಟ್ಟಿ ಅಳಲತ್ತಿತ್ತು… ಹೌಹಾರಿ ಮೇಲುಸಿರು ಮೇಲೆ ಕೆಳುಸಿರು ಕೆಳಗೆ ಮಾಡುತ್ತಿತ್ತು… ಪೋಯ ಮುಸುಡಿ ವಿಲಕ್ಷಣವಾಗಿ ವಾರೆಮಾಡಿಕೊಂಡು ಹಿತ್ತಲಕಡೆಯಿಂದ ಹೊರನಡೆದ. ಕೂಸು ಭಾರಿ ಅಳ್ತೈತಿ ಅಂತ ಲಕ್ಷ್ಮಿ ಓಡಿಬಂದು ನೋಡಿದರೆ ವಿಚಿತ್ರವಾಗಿ ಬಾಯಿತೆಗೆದು ಒಂದೇಸಮ ಅಳುತ್ತಿದೆ. ಎದೆಗೆ ಹಾಕೊಂಡು ಲಾಲಿ ಆಡಿ ಏನೆಲ್ಲ ಮಾಡಿದರೂ ಅದರ ಉರಿ ಥಮ್ಮಣಿ ಆಗಲೊಲ್ಲದು.

ಮತ್ತೇರಿದಂತೆಲ್ಲಾ ಅಳು ಕಮ್ಮಿಯಾಗುತ್ತಾ ಬಂದು ಕಣ್ಣ ಒಂಥರ ಮಾಡುತ್ತಾ ಗೋಣು ಒಂದುಕಡೆ ವಾಲಿಸಿದ್ದನ್ನ ನೋಡಿ ನಿದ್ದೆಬಂದಿರಬೇಕೆಂದು ಜೋಲಿಗಾಕಿ ತೂಗಲತ್ತಿದಳು. ಅಷ್ಟೆ ಮಲಗಿದ ಕೂಸು ಮತ್ತೆ ಏಳಲಿಲ್ಲ…!

ಬಾಟಲಿ ನಗುತ್ತಲೇ ಇತ್ತು. ಅದನ್ನು ತೆಗೆದುಕೊಂಡವನೇ ಪೋಯ ತನ್ನ ತಿಪ್ಪೆಯತ್ತಿರ ದೇಕುತ್ತಾ ಹೋದ. ತಿಪ್ಪೆಯೊಳಗಿಂದ ಹೆಂಗಸಿನ ಅಳು…..! ಮೈಯೆಲ್ಲಾ ಬೆವರಿತು. ಬಾಟಲಿ ಎತ್ತಿದವನೇ ಒಂದೇ ಉಸಿರಿಗೆ ಕುಡಿದ. ಬಾಟಲಿಯ ನಗು ಇನ್ನಷ್ಟು ಜೋರಾಯಿತು. ಕ್ರಮೇಣ ಆ ನಗು ಅಳುವಾಯಿತು, ಮಗುವಿನ ಆಕ್ರಂದನವಾಯಿತು. ಕೊನೆಗೆ ಬಾಟಲಿ ಆ ಕೂಸೇ ಆಯಿತು. ತಿಪ್ಪೆಯಲ್ಲಿ ಕರಿಬಸಮ್ಮ ಮೂಡಿಬಂದಂತಾಯಿತು… ಥಟ್ಟನೆ ಬಾಟಲಿಯನ್ನು ರಸ್ತೆಗೆ ಉರುಳಿಸಿದ. ಅಲ್ಲಲ್ಲ ಅವನನ್ನೇ ಅದು ರಸ್ತೆಗೆ ಉರುಳಿಸಿತು. ಆ ಬಾಟಲಿ ಯಾವುದೋ ಬರುತ್ತಿದ್ದ ಟ್ರಕ್ಕಿಗೆ ಕಣ್ಣೊಡೆಯಿತು. ಮತ್ತಲ್ಲಿದ್ದ ಡ್ರೈವರ್ ಕಣ್ಮಿಟುಕಿತು, ಅವನಕೈ ಈಕಡೆ ವಾಲಿತು…. ಮೈಮೇಲೆ ಗಾಲಿ ಹತ್ತಿತು…. ರಕ್ತ ಕರಳು ಪಚ್ಚುಕ್ಕೆಂದಿತು…. ಲಾರಿ ವಾಲುಡುತ್ತಾ ಮುಂದೆಸಾಗಿ ಮಾಯವಾಯಿತು.

ರಸ್ತೆ ನಿಟ್ಟುಸಿರುಟ್ಟಿತು- ‘ಪೋಯಾ ಪೋಯ….ʼ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.