ನನಗಾಗ ಏಳು ವರ್ಷ. ಅದು ಮಣ್ಣೆತ್ತಿನ ಅಮವಾಸೆಯ ಸಮಯ, ಮಣ್ಣೆತ್ತು ಮಾಡಿ ಅವುಗಳಿಗೆ ಶೃಂಗಾರ ಗೈದು, ಪ್ರಮಾಣಕ್ಕೆ ತಕ್ಕಂತೆ ಮೇವು ಹಾಕಲು ದವಣ ತಯಾರಿಸಿ, ನಮ್ಮ ಮನೆಯ ಮುಂದಿನ ಮುಖ್ಯ ರಸ್ತೆಯ ದಂಡೆಗೆ ಹೊಂದಿಕೊಂಡ, ಕಟ್ಟೆಯ ಮೇಲೆ ನಾನು ಹಾಗೂ ನನ್ನ ಬಾಲ್ಯದ ಗೆಳೆಯ ಶಿವಯ್ಯನು ಕೂಡಿ ಮಣ್ಣೆತ್ತುಗಳೊಂದಿಗೆ ಆಟವಾಡುತ್ತಿದ್ದೇವು. ಮನೆಯ ಒಳಗೆ ನನ್ನವ್ವ ಹೋಳಿಗೆಗಾಗಿ ಬ್ಯಾಳಿ ಹಾಕಿ ಹೂರ್ಣ ಮಾಡುವ ತಯಾರಿಯಲ್ಲಿದ್ದಳು. ಜುಪರಿ ತಲೆಯ ಅಕ್ಕನ ಕೂದಲು ಹಿಕ್ಕಲು ದೊಡ್ಡಣ್ಣ ಹೇಳುತ್ತಿದ್ದುದು; ಗುಡ್ಡದ ಹೊಲದ ಕೆಲಸಕ್ಕೆ ಹೋಗಲು ಕುಡಿಯುವ ನೀರು ಒಯ್ಯುವ ಸಲುವಾಗಿ ಅಪ್ಪ ತತ್ರಾಣ ತುಂಬುವ; ಅದರ ಮೇಲೆ ತಂಬಲ ಅರಬಿ ಸುತ್ತುವ; ಸಣ್ಣಣ್ಣ, ಮುತ್ತ್ಯಾನ ರುಮಾಲು ನಗೆಚಾಟಿಕೆಗೆ ಸುತ್ತಿಕೊಂಡು ಪಿಸರ ಮಾಡುವ ಬೊಬ್ಬಾಟ, ನೆಲುವು ಮೇಲಿನ ಮೊಸರಿನ ಗಡಿಗೆ ಕೆಳಗೆ ಬಿದ್ದು ಒಡೆದು; ಹಿತ್ತಾಳೆ ಪರಾತದಲ್ಲಿ ಅದನ್ನು ಬಳಿದು ತುಂಬಿ ಚಲ್ಲುವ; ಕುದುರೆಗೆ ಥಡಿ ಹಾಕಿ ಬಿಗಿಯಲು ಅಪ್ಪ ದೊಡ್ಡಣ್ಣನಿಗೆ ಹುಕುಂ ನೀಡುವ ಮಾತುಗಳು, ಮನೆಯ ಒಳಗಿನಿಂದ ನನಗೆ ಕೇಳಿಬರುತ್ತಿದ್ದವು. ಇಷ್ಟೆಲ್ಲಾ ಪಡಸಾಲೆ, ಅಡಗಿ ಮನೆಯಲ್ಲಿ ನಡೆದರೂ ನನ್ನ ಆಟವು ಶಿವಯ್ಯನೊಂದಿಗೆ ಬಹಳ ಚಂದವಾಗಿ ಹೊರಗೆ ನಡದೇ ಇತ್ತು.
ಇದೆ ಕ್ಷಣದಲ್ಲಿ ಅಪ್ಪ ಹೊಲಕ್ಕೆ ಹೋಗಲು ಬುತ್ತಿಗಂಟು, ತತ್ರಾಣ , ಹಗ್ಗಗಳೊಂದಿಗೆ ಹೊರಬರುತ್ತ ಆಟವಾಡುತ್ತಿರುವ ನನ್ನ ನೋಡಿ, ‘ಏ ಶಂಕ್ರೂಗ ಕೊಂಚಗಿ ಕಟ್ಟು, ದನಾಬಿಡೂ ಹೊತ್ತಾದ್ರು ಎಷ್ಟು ತಣ್ಣಗದ ನೋಡು ಹರಿಶ್ಚಂದ್ರ ಸುಮಾರ ಗಾಳಿ’ ಎಂದ. ಕುದುರಿಗಿ ನಾಲ ಬಡಿಸಿ ನಾಕ ದಿನಾ ಆಗೇದಪಾ, ಮಡಗೊಂಡ್ರ ಕೆರ್ಯಾಗ ಹುದುಲ್ ಭಾಳ, ಕೆಸರ್‍ನ್ಯಾಗ ಸಾವಕಾಶ ಕುದುರಿ ಹೋಲಿ. ಎಂದು ದೊಡ್ಡಣ್ಣ ಅಪ್ಪನಿಗೆ ಒಳಗಿನಿಂದಲೆ ನೆನಪಿಸುವ ಮಾತು ಮನೆಯ ಹೊರಮೈ ಇರುವ ನಮ್ಮಿಬ್ಬರಿಗೂ ಕೇಳಿಸುತ್ತಿತ್ತು. ತಕ್ಷಣ ಅವ್ವ ಗಡಬಡಿಸಿ ಹೊರಬಂದು ‘ಅಯ್ಯ ನನ ಬಾಳಾ, ತಣ್ಣನ ಗಾಳ್ಯಾಗ ಕೊಂಚಿಗಿ ಇರಲಾರ್ದ ಆಡಾಕತ್ತಿದ್ಯಾ!’ ಎಂದು, ದೇವೂರಿನ ಸಿಂಪಿಗ್ಯಾ ಹೊಲಿದ ಇಪ್ಪತ್ತು ನಿರಿಗಿ ಹೊಯ್ದ, ಮಿಂಚ್‍ಮಿಂಚ್ ಟಿಕಳಿ ಹಚ್ಚಿದ, ಮ್ಯಾಗ ಹಸರ್ ಒಳಗ ಕೆಂಪ ಇದ್ದ ಮಳಕೈ ಉದ್ದ ಕೊಂಚಿಗಿ ತಂದು ನನಗ ಕಟ್ಟಿದಳು. ಮತ್ತ ಹಂಗ ಅಂವಸರ್ಲೆ ಒಳಗ್ಹೊಗಿ ಅಂತಾದ ಇನ್ನೊಂದು ಕೊಂಚಿಗಿ ತಂದು ನನ್ನ ಜೊಡಿ ಆಡುವ ಶಿವಯ್ಯನಿಗೂ ಕಟ್ಟಿದಳು. ‘ಹೆತ್ತ ಮಕ್ಕಳ್ನ ಹೆರವರಿಗಿ ಕೊಟ್ಟು ಖಾಲಿ ತೊಟ್ಲಾ ತೂಗಕ್ಕಿ’ ಅಯಗೊಳ ಬೌರವ್ವ, ಪಂಚಮಿ ಮಾಡಿ ಬರತಿನಂತ ತವ್ರಮನಿ ಶಿವಣ ಗಿಗಿ ಹ್ವಾದಕ್ಕಿ ಇನಾ ಅಲ್ಲೆ ಕುಂತಾಳ ಹುಚ್ಚಖೋಡಿ ಎಂದು ಶಿವಯ್ಯನ ತಾಯಿಯ ಇತಿಹಾಸ ಹೇಳಿದಳು. ನಮ್ಮನಿಗಿ ಹತಗೊಂಡೆ ಇರುವ ಮಠಪತಿ ಶಂಕ್ರಯ್ಯಸ್ವಾಮಿ ಹೆಂಡತಿ ಮಕ್ಕಳ ಮ್ಯಾಲ ಅದ್ಯಾಂತದ ಪ್ರೀತಿ ಅಂತಿನಿ. ಒಟ್ಟಿ ಗಂಡ ಶಂಕ್ರಯ್ನ ಸಂಗಾಟ ಬಾಳೆ ಮಾಡಾಗ ಸುಟ್ಟುಸುಟ್ಟು ಹಣ್ಣಾಗ್ಯಾಳ ಎಂಬುದು ಓಣ ಯವರಿಗೆಲ್ಲಾ ತಿಳಿದ ಸಂಗತಿಯಾಗಿತ್ತು.
ಹುಡುಗುರು ಆಡೂ ಬೆಂಡಿನ ಗಾಡಿ, ಸಣ್‍ಸಣ್ ಜ್ವಾಳದ ಚೀಲ, ಅರಿವೆಯಿಂದ ಹೊಲಿದು ಮಾಡಿ ಒಳಗ ಜ್ವಾಳಾ ತುಂಬಿರುವಂತವು ಗಾಡಿಯಲ್ಲಿ ಹೇರಿ, ಅವು ಬೀಳದಿರಲೆಂದು ಕಟ್ಟಿದ ಕೌದಿ ದಾರ, ಈ ಗಾಡಿಗಿ ಹಣೆಗ್ಗ ಹಚ್ಚಿ ಹೂಡಿದ ಮಣ್ಣೆತ್ತುಗಳು, ಅ ಚೀಲದ ಮ್ಯಾಲೊಂದು ರೈತನ ಡ್ರೆಸ್ಸಿನಲ್ಲಿರುವ ಪ್ಲ್ಯಾಸ್ಟಿಕ್ ಸಣ್ಣ ಗೊಂಬಿ, ಈ ಎಲ್ಲವೂ ಎತ್ತಿನ ಚಕ್ಕಡಿಯಲ್ಲಿ ರಾಶಿ ತರುವ ದೃಶ್ಯವನ್ನು ಹೋಲುತ್ತಿದ್ದವು. ‘ಹೀಗೆ ನಮ್ಮ ಮಣ್ಣೆತ್ತು ಹೂಡಿದ ಎತ್ತಿನ ಗಾಡಿ, ರಾಶಿ ಸಾಗಿಸುವ, ಅಲ್ಲೆ ಸ್ವಲ್ಪ ಅಡ್ಡಾಡಿಸಿ, ಚೀಲ ಕೆಳಗಿಳಿಸಿ, ನಿಟ್ಟು ಹಚ್ಚುವ, ಮಣ್ಣೆತ್ತು ಬಿಚ್ಚಿ ದವಣ ಗೆ ಕಟ್ಟಿ, ಹುಲ್ಲು ತಿನ್ನಿಸುವ ಆಟದ ಪ್ರಕ್ರೀಯೆ ಹಾಗೆ ನಡೆದಿತ್ತು. ಅಷ್ಟರಲ್ಲಿ ಇನ್ನೊಂದು ಮಗ್ಗಲು ಮನೆಯ ಒಕ್ಕಲಿಗೆರ ಮೈನವ್ವಾಯಿ ನಮ್ಮ ಮನೆ ಬಾಗಿಲಿಗೆ ಬಂದು ನಿಂತು, ಮನೆಯ ಪಡಸಾಲೆಯ ಒಂದು ಬದಿಗೆ ಇದ್ದ ವಳ್ಳನ್ನು ಗಮನಿಸುತ್ತ ‘ಹೂರ್ಣ ರುಬ್ಬುದು ಮುಗುದದಾ ಗಂಗಾಬಾಯಿ, ನಾನೂ ಒಂದ ಅದ್ನ ಬ್ಯಾಳಿಗಿ ಹಾಕಿನಿ ರುಬ್ಬಬೇಕು ವಳ್ಳ ಖಾಲಿ ಅದಲ್ಲ?’ ಎಂದು ನಮ್ಮ ಮನೆಯ ವಳ್ಳ ಖಾಲಿ ಇದ್ದ ಬಗ್ಗೆ ಗಮನಿಸುತ್ತ ಖಾತ್ರಿ ಮಾಡಿಕೊಂಡಳು. ಅಲ್ಲೆ ನಿಂತು ನಮ್ಮ ಕಡೆನೂ ದೃಷ್ಟಿ ಹರಿಸಿ ‘ಅಯ್ಯ ಎಷ್ಟ ಚಂದಗೆ ಮಣ್ಣೆತ್ತಿಗಿ ಬಣ್ಣ ಹಚ್ಚಾವು! ಗಾಡಿಮ್ಯಾಗ ರಾಶಿ ಜೋರದ ಬಿಡಪಾ, ಇದು ಯಾ ಹೊಲ್ದ ರಾಶಿ? ಗುಡ್ಡದ್ದ, ಡೋಣ ದ! ಇಲ್ಲಾಯಿ ಇದು ನೀರ್ಹಳ್ಳ ಹೊಲದ ರಾಶಿ, ಎರಡಿಪ್ಪತ್ತು ಚೀಲ ಆಗೆದ ಎಂದೆ.
ಯಕ್ಕಾ... ವಳ್ಳ ಖಾಲಿ ಅದ ರುಬ್ಬಕೊ. ಬ್ಯಾಳಿ ಭಾಳ ಕುದ್ದುಕುದ್ದು ಹೂರ್ಣ ಅಳಸಾಗೇದ ಹೋಳಿಗಿ ಜರಾ ಹೊತ್ತಾಕತ್ತ್ಯಾವು, ಎನ್ನುವ ಒಳಗಿನ ಅವ್ವನ ಮಾತು ಕೇಳಿ ನನ್ನ ಮನಸ್ಸು ಹೂರ್ಣದ ಕಡೆ ಹೋಯಿತು. ಉರಿಯುತ್ತಿರುವ ವಲಿ ಸಣ್ಣ ಮಾಡಿ, ಒಲ್ಯಾನ ಕಟಗಿ ಜರಾ ಹೊರಗ ಜಗ್ಗಿ, ನೀರ್ಹನಿ ಸಿಂಪಡಿಸಿದಳು ಅಂತ ಕಾಣಸ್ತದ, ಚುರ್‍ಚುರ್ ಅಂತು. ಅವ್ವ ತನ್ನ ಎರಡೂ ಕೈಯಲ್ಲಿ ಒಂದೊಂದು ಹೂರ್ಣದ ಉಂಡಿ ಕಟಗೊಂಡು, ಮುಟಗಿ ಆಕಾರ ಮಾಡಿ ಕೈಯಲ್ಲಿ ಹಿಡಿದುಕೊಂಡು ನಾವು ಆಟಾ ಆಡೂ ಜಾಗಾಕ ಹೊರಗ ಬಂದ್ಳು. ಶಿವಯ್ಯಗೂ, ನನಗೂ ಒಂದೊಂದು ತಿನ್ನಲು ಕೊಟ್ಟು, ತಿನಬ್ಯಾಡ್ರಿ ಒಂಜರಾ ತಡಿರಿ ಎಂದು ತಡೆಸಿದಳು. ಅಲ್ಲಿಯೆ ನನ್ನ ಸಂಗಡ ಆಟವಾಡುತ್ತಿದ್ದ ಶಿವಯ್ಯನನ್ನು ಕಟ್ಟೆಯ ಮೇಲೆ ಚಕ್ಕಳಮಕ್ಕಳ ಹಾಕಿ ಕುಡ್ರಿಸಿದಳು. ತನ್ನ ಕೊರಳೊಳಗಿನ ಲಿಂಗದಕಾಯಿ ಒಳಗಿದ್ದ, ಐದು ಪೈಸೆಯ ಕೆಂಪು ದುಡ್ಡನ್ನು ಹೊರ ತೆಗೆದು ನನ್ನ ಕೈಗೆ ಕೊಟ್ಟು ‘ಶಿವಯ್ಯನಿಗೆ ಈ ರೊಕ್ಕಾ ಕಾಣ ಕೆ ಅಂತ ಕೊಡು ಅವನ ಕಾಲಿಗಿ ನಮಸ್ಕಾರ ಮಾಡು, ಅಂವಾ ಹೂರ್ಣ ತಿಂದಿಂದ ನೀ ಹೂರ್ಣ ತಿನ್ನು’ ಎಂದಳು ನನ್ನವ್ವ. ಆ ಪ್ರಕಾರ ಅಂವಾ ಕುಂತಾ, ನಾ ಆಟ ಆಡುದು ಬಿಟ್ಟು ಎದ್ದು ನಿಂತು ಅಂವಗ ರೊಕ್ಕಾ ಕೊಟ್ಟು ಸಣಮಾಡಿದೆ. ನಂತರ ಅಂವಾ ಹೂರ್ಣ ತಿನ್ನಾಕ ಚಾಲೂ ಮಾಡದಿಂದ ನಾನು ಹೂರ್ಣ ತಿನ್ನಲು ಪ್ರಾರಂಭಿಸಿದೆ. ಅಲ್ಲೆ ನಿಂತಿದ್ದ ಮೈನವ್ವಾಯಿ “ಇಲ್ಲೆ ಐಗೊಳ್ನ ಕರಕೊಂಡೆನವಾ!” ಮುಗಿಸಿದಿ ಬಿಡೂ ಪೂಜಾ ಬೇಸಿ ಆತು, ದೂಳ್‍ಪದಕ ಇಟ ತೊಗೊ, ಎಂದು ನನ್ನವ್ವಗೆ ಹೇಳಿದಳು. ಐದು ಪೈಸೆಯ ದುಡ್ಡು ನೋಡಿದ ಶಿವಯ್ಯ ಅದನ್ನು ಎಡಗೈಯಲ್ಲಿ ಹಿಡಿದು, ಅರ್ದಮರ್ದ ಹೂರ್ಣ ಬಲಗೈಯಿಂದ ತಿನ್ನುತ್ತಾ, ಮೂಗಿನಲ್ಲಿ ಬಂದ ಸುಂಬಳವನ್ನು ವರಸಿಕೊಳ್ಳಲಾರದೆ ತಮ್ಮ ಮನೆಗೆ ಓಡಿದ. ನನ್ನ ಆಟ ಹಾಗೆ ಮುಂದುವರೆಯಿತು. ನನ್ನವ್ವ ಗಂಗಾಬಾಯಿ ಮನೆಯ ಒಳಗೆ ಹೋದಳು, ಮೈನವ್ವಾಯಿ ತನ್ನ ಮನೆಗೆ ಹೋಗಿ ಪುನಃ ಬಂದಳು. ಬರುವಾಗ ತಾನುಟ್ಟ ಹಳೆಯ ಇಲಕಲ್ಲ ಸೀರೆಯ ಚುಂಗಿನಲ್ಲಿ ಬ್ಯಾಳಿ ಕುದಿಸಿದ ಬೊಗೊಣ ಮುಚ್ಚಿಕೊಂಡು ತಂದು, ನಮ್ಮ ಪಡಸಾಲೆಯ ವಳ್ಳದ ಮಗ್ಗಲು ಕುಳಿತು ಬ್ಯಾಳಿ ರುಬ್ಬತೊಡಗಿದಳು.
ನಮ್ಮ ಮನೆಯ ಮುಂದಿನ ದೊಡ್ಡ ರಸ್ತೆಯಲ್ಲಿ ಎರಡು ಮೂರು ಜನ, ಬಲು ದಷ್ಟಪುಷ್ಟ ಬೆಳೆದ ತರುಣರು ಹೊರಟಿದ್ದರು. ಒಬ್ಬರ ಕೈಯೊಬ್ಬರು ಹಿಡಿದುಕೊಂಡು, ಒಂದೊಂದು ಸಲ ಪರಸ್ಪರ ಕುತ್ತಿಗೆಗೆ ಕೈ ಹಾಕಿ, ಇನ್ನೊಂದು ಸಲ ಕೊರಳಪಟ್ಟಿ ಜಗ್ಗ್ಯಾಡುತ್ತ, ಮತ್ತೊಂದು ಸಲ, ಅಂಗಿಯ ಒಳಗಿಂದ ಹೊಟ್ಟೆ, ಕಂಕುಳ, ಎದೆ, ಬೆನ್ನು ಸವರಿ ಕಚಗುಳಿ ಇಡುತ್ತ, ಇಡಿಸಿಕೊಳ್ಳುತ್ತ, ಕಳ್ಳಕಸು, ಸುಳ್ಳಕಸುಗಳನ್ನು ಪ್ರದರ್ಶಿಸುತ್ತ ಕೊಸರಾಡುತ್ತ ಪಯಣ ಸುತ್ತಿದ್ದರು. ಕ್ಷಣದಲ್ಲಿ ಪ್ರೀತಿ, ಗಳಿಗೆಯಲ್ಲಿ ಶೆಡವು, ಮರುಕ್ಷಣದಲ್ಲಿ ಕೃತಕ ನಗೆ, ರಮಿಸುವುದು, ಸಿಟ್ಟಾಗುವುದು, ಜೋರಾಗಿ ಗಹಗಹಿಸುವುದು, ಆವೇಶಗೊಳ್ಳುವುದು ರಸ್ತೆಯುದ್ದಕ್ಕೂ ನಡೆದಿತ್ತು. ಯಾಕೆಂದರೆ ಅದರಲೊಬ್ಬ ಕಾಲೇಂತ್ರದಿಂದ ಊರ ಪುರುಷರ ಮತ್ತು ಮಹಿಳೆಯರ ಬಟ್ಟೆ ಹೊಲೆದು ಕೊಡುವ ಸಿಂಪಿಗನಾಗಿದ್ದ. ಕುಡಚಿ ಮೌಲಾಸಾಬ್ ಎನ್ನುವ ವಿಶಿಷ್ಟ ವ್ಯಕ್ತಿತ್ವದ ಆತನಲ್ಲಿ ಸ್ವಲ್ಪ ತಾಟಗಿತ್ತಿ ಗುಣಗಳಿದ್ದವು. ಆದರೆ ಬಹಳ ಅನುಕುಲಸ್ತ ಟೇಲರ್ ಅವನಾಗಿದ್ದ.
ಮೂವರು ನಗೆಚಾಟಿಗೆ ಮಾಡುತ್ತ ಹೋದ ಒಂದು ಗಳಿಗೆಯಲ್ಲಿ ನಾನು ನನ್ನ ಆಟ ಮುಗಿಸಿ, ರಸ್ತೆದಾಟಿ ಮನೆಯೊಳಗೆ ಹೋಗುವಾಗ ಆ ರಸ್ತೆಯಲ್ಲಿ ಮಳಕೈಉದ್ದ ಅರಿಸಿಣ ಬಣ್ಣದ ಎರಡೆಳೆಯ ಸರಪಳಿ ಬಿದ್ದಿದ್ದು ಕಂಡಿತು. ಅದನ್ನು ಕೈಗೆತ್ತಿಕೊಂಡು ಮಣ್ಣೆತ್ತುಗಳು, ಬೆಂಡಿನಗಾಡಿ, ಸಿಕ್ಕ ಸರಪಳಿ ತೆಗೆದುಕೊಂಡು, ಮನೆಯ ಮೇಲಟ್ಟದ ಮಾಡದಲ್ಲಿ ತೆಗೆದಿಟ್ಟು ಊಟಕ್ಕೆ ಹೋದೆ. ಹೂರ್ಣ ತುಂಬಿದ ಹೋಳಿಗೆ, ನೆವಣ ಅನ್ನ, ಕಟ್ಟಿನ ಸಾರುಂಡು ನಾಲ್ಕಾರು ತಾಸ ಒಕ್ಕಲುತನದ ನನ್ನ ಆಟಕ್ಕೆ ಬಿಡುವು ಕೊಟ್ಟಿದ್ದೆ. ಪುನಃ ದೀಪಾ ಹಚ್ಚು ವ್ಯಾಳೆಕ್ಕೆ ನನ್ನ ಮಣ್ಣೆತ್ತಿನ ಆಟ ಪ್ರಾರಂಭವಾಯಿತು. ಮತ್ತೆ ಅದೇ ಜ್ವಾಲದ ಚೀಲ, ಬೆಂಡಿನ ಗಾಡಿ, ರಾಶಿ ಮಾಡುವುದು ನಡೆದಿತ್ತು. ಆದರೆ ಈ ಸಲ ಮಣ್ಣೆತ್ತುಗಳಿಗೆ ಕಟ್ಟಿದ ಹಣೆಗ್ಗಗಳು ದಾರದ್ದಾಗಿರಲಿಲ್ಲ, ಅರಿಸಿಣ ಬಣ್ಣದ ಸರಪಳಿಯ ಹಣೆಗ್ಗ ಕಟ್ಟಿದ್ದೆ. ಎತ್ತುಗಳು ನಾರಿನ ಹಗ್ಗ ಒಮ್ಮೊಮ್ಮೆ ಕಚ್ಚಿ ತಿನ್ನುತ್ತವೆ ಆದರೆ ಸರಪಳಿ ಕಡಿದು ತಿನ್ನಲು ಬರುವದಿಲ್ಲ ಎಂದು ಅಣ್ಣ ಹೇಳಿದ್ದು ನೆನಪಿತ್ತು. ಒಲೆಯಲ್ಲಿಯ ಬೆಂಕಿ ಪುಟು ಮಾಡಿ ಮನೆಯ ಚಿಮಣ ಹಚ್ಚಿದ ಅವ್ವ, ಬೂದಿಯಿಂದ ಕಂದಿಲ್ಲನ್ನು ಒರೆಸಿ, ಅದಕ್ಕೂ ದೀಪ ಮುಟ್ಟಿಸಿ ಮೇಲಟ್ಟದ ನಾಗೋಸಕ್ಕೆ ತೂಗಾಕಿದಳು. ಅಟ್ಟದಲ್ಲಿ ನನ್ನ ಜೊತೆಗಿದ್ದ ಮಣ್ಣೆತ್ತುಗಳ ಕೊರಳಲ್ಲಿದ್ದ ಅರಿಸಿಣ ಬಣ್ಣದ ಸರಪಳಿ ಬೆಳಕಿಗೆ ಪಳಪಳ ಹೊಳೆಯುವದನ್ನು ನೋಡಿದ ಅವ್ವ, ಒಮ್ಮೆಲೆ ದೌಡಾಯಿಸಿ ಅವುಗಳನ್ನು ಮುಟ್ಟಿ ಮುಟ್ಟಿ ನೋಡಿ, ಇವೇನು! ಎಲ್ಲಿದು ತಂದಿ? “ನಾರಿನ ಹಗ್ಗ ಎತ್ತು ಬಾಯಿಂದ ಕಡಿತಾವಂತ ಸರಪಳಿ ಹಣೆಗ್ಗಾ ಮಾಡಿನಿ ಎಂದೆ” ಶಂಕ್ರೂ ಇವುಕುರ್ನ ಹಿಂಗ ಮಣ್ಣೆತ್ತಿಗಿ ಕಟ್ಟಬಾರ್ದು ಇದು ಎತ್ತಗೊಳಿಗಿ ಕಟ್ಟು ಸರಪಳಿ ಅಲ್ಲಾ, ಇವೆಲ್ಲವೂ ತಂದಿ? ಇವು ಬಂಗಾರದ್ದು ಅದಾವು ಅಂದ್ಳು. ಬಂಗಾರ...! ಹಾಂಗಂದ್ರ ...! ನನಗೇನು ಗೊತ್ತ? ಮನ್ಯಾಗ ಎತ್ತಗೋಳ ಹಗ್ಗಾ ಕಡಿತಾವಂತ ಶಿವಪ್ಪಣ್ಣ ಎತ್ತಗೊಳಗಿ ಸರಪಳಿ ಕಟ್ಟತಿದ್ದ. ಅವು ಕರಿವು ದೊಡ್ಡ ಸರಪಳಿ, ಇವು ಅರಸಿಣ ಬಣ್ಣ, ಸಣ್ಣ ಸರಪಳಿ ಎಂದು ಹೇಳಿದೆ. ಇರಲಿ ಇವೆಲ್ಲವು ತಂದಿ? ಮುಂಜಾನೆ ಆಟ ಮುಗಿಸಿ ರಸ್ತಾ ದಾಟಿ ಬರತಿದ್ದ್ಯಾ ಅಲ್ಲಿ ಬಿದ್ದಿತ್ತು. ಅದನ್ನ ಕಲ್ಲ ತೊಗೊಂಡು ಕಟದು ಎರಡ ಸರಪಳಿ ಮಾಡಿ ಅರ್ದಅರ್ದ ಎರಡೂ ಮಣ್ಣೆತ್ತುಗೊಳಿಗೆ ಕಟ್ಟಿನಿ.
ನಿ ಮಧ್ಯಾಹ್ನದಾಗ ಭಾನಾ ಕೊಡಾಕ ನಿಮ್ಮಕ್ಕನ ಜೋಡಿ ಶಿವಾನಂದ ಮುತ್ತ್ಯೊರ ಮಠಕ್ಕ ಹೋಗಿದ್ದೆಲ್ಲ, ಅವಾಗ ಇದನ್ ಕಳಕೊಂಡ ಕುಡಚಿ ಮೌಲಾಸಾಬ ಓಣಾಗೆಲ್ಲಾ ಕೇಳಕೊಂತ ಬಂದಿದ್ನಂತ. ರಸ್ತಾದಾಗ ಅವ್ರು ಮುಂಜಾನೆ ನಗೆಚಾಟಿಗಿ ಮಾಡಕೊತ ಹಾಕ್ಯಾಡಕೋತ ಹೋದಾಗ ಕೊಳ್ಳಾಂದು ಹರಿದು ಬಿದ್ದದಂತ ಕಾಣಸ್ತದ. ಇದು ಬಂಗಾರದ್ದು ಮೂರು ತೊಲಿ, ಎರಡ ಎಳಿ ಚೈನ್ ಅದ. ಅಂಥ ಹೇಳಿದಳು ನನ್ನವ್ವ. ಓಣಿಯೊಳಗಿನ ದಾರಿದೀಪಾ ಹಚ್ಚುವ ಪಂಚಾಯತದ ರಾಜೇಸಾ ಖೊರಬುನ ಕರೆದು, ‘ಏ ಖೊರಬು ಆ ಕುಡಚಿ ಮೌಲಾಸಾಬ್ ಸಿಂಪಿಗ್ಯಾನ ಕರೆದುಕೊಂಡು ಬಾ’ ಎಂದು ಹೇಳಿ ಕಳಿಸಿದಳು.
ಈ ಮೊದಲು ಹೊಲಿದು ಕೊಟ್ಟ ಅರಿವೆಯ ಅಳತೆ ಸರಿಯಾಗಿರದ ಕಾರಣ ಸಂಶೆಯ ವ್ಯಕ್ತಪಡಿಸುತ್ತ ಅಂಜುತ್ತ ಅಳಕುತ್ತ ಮನೆಯೊಳಗೆ ಬಂದ ಕುಡಚಿ ಮೌಲಾಸಾಬ, ನಮ್ಮ ಮನೆಯ ಪ್ಯಾಟುಣಗಿ ಪೂರ್ತಿ ಏರದೆ ಅಲ್ಲೆ ಕುಳಿತು ಸ್ವಲ್ಪ ಅನುಮಾನಿಸುತ್ತ, ಏನಾದರೂ ಅರಿಬಿ ಹೊಲಿದಿತ್ರ್ಯಾ! ಅಥವಾ ಹಳಿವು ಬರಾಬರಿ ಆಗಿಲ್ಲೆನ್ರೀ ಸಾವಕಾರತಿ ಎಂದು ಸಣ್ಣ ದನಿಯಲ್ಲಿ ಮಾತನಾಡಿಸಿದ. ಬಂಗಾರದ ಚೈನ್ ಕಳಕೊಂಡು ಸೋತ ಮುಖ ಅವನದಾಗಿತ್ತಾದರೂ ಅದನ್ನು ಕಾಣಗೊಡದೆ ಇಡೀ ದಿನ ಹುಡುಕಾಡಿ ಅದರ ಆಸೆ ಬಿಟ್ಟಿದ್ದ.
ಅವನು ಮನೆಯ ಪಡಸಾಲೆಯ ಮೇಲೆ ಬರಲು ಒಪ್ಪದಿದ್ದರೂ, ಒತ್ತಾಯದಿಂದ ಕರೆಸಿ, ಮಂಚದ ಮೇಲೆ ಕೂಡ್ರಲು ಹೇಳಿ ಕೂಡ್ರಿಸಿದಳು ಅವ್ವ. ಅಪ್ಪ, ಅಣ್ಣ ಮತ್ತು ಅಕ್ಕ ಮನೆಯ ಇನ್ನೊಂದು ಪಕ್ಕದಲ್ಲಿ ಬೇರೆ ಕೆಲಸದಲ್ಲಿ ತಲ್ಲೀನರಾಗಿದ್ದರು. ನನ್ನ ಮಣ್ಣೆತ್ತಿನ ಹಣೆಗ್ಗವಾಗಿದ್ದ ಅವನ ಬಂಗಾರದ ಚೈನನ್ನು ಬಿಚ್ಚಿ, ಒಂದು ಕಡ್ಡಿ ವಸ್ತ್ರದ ಕೆಂಪು ಅರಿವೆಯಲ್ಲಿ ಹಾಕಿ ಕಟ್ಟಿ ನನ್ನ ಕೈಯಲ್ಲಿ ಕೊಟ್ಟಳು. ಮೌಲಾಸಾಬ್‍ಗೆ ನನ್ನ ಕೈಯಾರೆ ಅವುಗಳನ್ನು ಕೊಡಿಸಿ, ಅವನ ಕಾಲಿಗೆ ನಮಸ್ಕರಿಸಲು ಅವ್ವ ಹೇಳಿದಳು. ನಾನು ಅವುಗಳನ್ನು ಕೊಟ್ಟು ನಮಸ್ಕರಿಸಿದೆ.
ವಾರವಾಗಿದ್ದಿಲ್ಲ, ಜರದ ಮಿಂಚುಳ್ಳ ಎರಡು ಹೊಸ ಕೊಂಚಿಗೆಗಳು ಕುಡಚಿ ಮೌಲಾಸಾಬ್‍ನಿಂದ ತಯ್ಯಾರಾಗಿ ಕಾಣಿಕೆಯಾಗಿ ನನಗೆ ಬಂದವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.