ಆಯತವಾರ ಅಲ್ಲದೇ ಬೇರೆ ದಿನವಾಗಿದ್ದರೆ ನರಸಾಪುರದ ‘ಪ್ರಾಥಮಿಕ ಆರೋಗ್ಯ ಕೇಂದ್ರ’ ಇವತ್ತು ಹೀಗಿರುತ್ತಿರಲಿಲ್ಲ. ದಿನವಿಡೀ ಜನಜಂಗುಳಿಯಿಂದ ಕಿಕ್ಕಿರಿದಿರುತ್ತಿತ್ತು. ಜ್ವರ, ನೆಗಡಿ-ಕೆಮ್ಮು, ವಾಂತಿ-ಭೇದಿಯಂತಹ ಜಾಢ್ಯಗಳ ಇಲಾಜಿಗೆ ಒಳಪಡುವ ರೋಗಿಗಳು, ನಿಂತಲ್ಲೇ ನಿಲ್ಲದೇ ಕೂತಲ್ಲೇ ಕೂರದೇ ಅತ್ತಿಂದಿತ್ತ ಓಡಾಡುವ ಪೋಷಕರು, ವಿಧವಿಧದ ಚಿಕಿತ್ಸೆ ನೀಡುವ ಮೂಲಕ ರೋಗಿಗಳನ್ನ ಸಂಭಾಳಿಸುವ ವೈದ್ಯರು, ಇಂಜೆಕ್ಷನ್, ಗುಳಿಗೆ ನೀಡುವ ನರ್ಸುಗಳು, ಸಫಾಯಿ ಕೆಲಸದ ಆಯಾಗಳು, ಚಾಪಾನಿ ನೀಡಿ ಉಪಚರಿಸುವ ಸಿಪಾಯಿಗಳು- ಇನ್ನಿತ್ಯಾದಿ ಜನರ ದಂಡೇ ಇಲ್ಲಿರುತ್ತಿತ್ತು. ಈ ಪರಿಯ ಗೌಜುಗದ್ದಲದ ನಡುವೆಯೂ ಗಾಡಿಗಳ ದಟ್ಟಣೆಯೂ ಕೂಡ ಕಡಿಮೆ ಇರುತ್ತಿರಲಿಲ್ಲ. ಆದರೀಗ ಅದ್ಯಾವುದರ ಗೊಡವೆಯಿಲ್ಲದೇ ಆರೋಗ್ಯ ಕೇಂದ್ರ ದಿವ್ಯ ಪ್ರಶಾಂತತೆಯನ್ನು ಹೊದ್ದು ಪವಡಿಸುತ್ತಿತ್ತು. ಯಾರ ಅಧೀನಕ್ಕೂ ಒಳಪಡದೇ ಹೊಚ್ಚ ಹೊಸ ಪ್ರದೇಶವಾಗಿ, ಪ್ರಕಾಶಮಾನವಾಗಿ ಹೊಳೆಯುತ್ತಿತ್ತು. ಇಷ್ಟೊಂದು ನಿಶ್ಚಲ-ನಿರಾಳ ವಾತಾವರಣಕ್ಕೆ ತನ್ನಿಂದಲೇ ಧಕ್ಕೆವುಂಟಾದೀತೇನೋ ಎಂಬಂತೆ ಸುಹಾನಿ ಆರೋಗ್ಯ ಕೇಂದ್ರದಡೆಗೆ ಹಗೂರಕ್ಕೆ ಹೆಜ್ಜೆಯಿಡುತ್ತಿದ್ದಳು.

ಅಜಮಾಸು ಒಂದು ವಾರದಿಂದ ಆಕೆಗೆ ಸುರುವಾದ ತಲೆಸುತ್ತು, ವಾಕರಿಕೆ, ಆಯಾಸ ಆಕೆಯನ್ನ ಇನ್ನಿಲ್ಲದಂತೆ ಹೈರಾಣು ಮಾಡಿತ್ತು. ಈ ಎರಡು ದಿನಗಳಲ್ಲಂತೂ ಅದು ತೀರಾ ಅಸಾಧ್ಯವೆನಿಸತೊಡಗಿತ್ತು. ಏನೇ ತಿಂದರೂ, ಕುಡಿದರೂ ಕ್ಷಣಾರ್ಧದಲ್ಲಿ ಉಬ್ಬಳಿಕೆ ಬಂದು ವಾಂತಿಯಾಗುತ್ತಿತ್ತು. ಹೊಟ್ಟೆ ಯಾವುದೊಂದೂ ಸಹಿಸಲು ತಯಾರಿರಲಿಲ್ಲ. ಇಷ್ಟಾದರೂ ಸುಹಾನಿ ತನ್ನನ್ನ ದವಾಖಾನೆಗೆ ಒಯ್ಯಿರಿ ಅಂತಾಗಲಿ ಅಥವಾ ತಾನೇ ಖುದ್ದಾಗಿ ದವಾಖಾನಿಗೆ ಹೋಗಿ ಬರ್ತೀನಿ ಅಂತಾಗಲಿ ಹೇಳಿರಲಿಲ್ಲ. ಗಂಡ ಸುನೀಲ ಬೇರೆ ಹದಿನೈದು ದಿನಗಳಿಂದ ಮನೆಯಲ್ಲಿರಲಿಲ್ಲ. ಇಂಥ ಸಮಯದಲ್ಲಿ ದವಾಖಾನಿಗೆ ತೋರಿಸಿ ಎಂದು ಅತ್ತೆ ಅನಸೂಯಾಗೆ ಹೇಳುವುದು, ಆಕೆ ‘ಅಂಥದ್ದೇನಾಗೇತಿ ನಿನಗ ಧಾಡಿ’ ಎಂದು ಗದರುವುದು, ಅದರಿಂದ ತಾನು ಸಿಟ್ಟುಮಾಡಿಕೊಳ್ಳೋದು, ಜಗಳವಾಡೋದು, ನಂತರ ಜಗಳದ ಪರಿಣಾಮಗಳನ್ನು ಸಹಿಸಿ ಹೊತ್ತುಗಳೆಯುವುದು- ಖಾಲಿ ಉಪರಾಟಿ ಈ ರಗಳಿಯೇ ಬೇಡವೆನಿಸಿ ಸುಹಾನಿ ಗಪ್ಪಗಡದಾಗಿದ್ದಳು.

ಇಂಥದ್ದರಲ್ಲಿ ಆಕೆಯ ತ್ರಾಸು ನೋಡಲಾಗದ ಅನುಸೂಯಾ ‘ಏಯ್ ನಿನ್ ದುರ್ಗವ್ವ ನುಂಗ್ಲಿ. ಬಾಯಿಚಟಕ್ಕ ಹಾಳುಮೂಳು ತಿಂದ ವ್ಯಾಕ್.. ವ್ಯಾಕ್.. ಮಾಡಕೋತ ದಗದಾ-ಬಗಿಸಿ ಬಿಟ್ಟಗೋಟ ಕುಂತಿಯಲ್ಲಾ. ಜಲ್ಮಕ್ಕ ನಾಚ್ಗೆರ ಐತಿಲ್ಲೋ ನಿನಗ. ತುಗೋ ಇದನ್. ಬಿಡೂದುಬಿಟ್ಟು ಹೋಗಿ ದವಾಖಾನಿಗೆ ತೋರಿಸ್ಕೊಂಡ ಬಾ’ ಅಂತ ಜಬರಿಸಿ ತನ್ನ ಮಲಕಟ್ಟಿನಿಂದ ಎರಡು ನೂರರ ನೋಟು ತೆಗೆದು ಅವಳ ಕೈಗಿಟ್ಟಿದ್ದಳು. ಇದಾದಾಗಲೇ ಸುಹಾನಿ ದವಾಖಾನಿಗೆ ಹೋಗಿ ತೋರಿಸಿಕೊಂಡು ಬರಲು ಕಾಲುಕಿತ್ತದ್ದು. ಮನೆಯಲ್ಲಿನ ಕಸ-ಮುಸರಿ, ಅಡುಗೆ-ಅಂಬಲಿ ಅಂತ ಯಾವುದೊಂದೂ ತಲೆಕೆಡಿಸಿಕೊಳ್ಳದೇ ತಲೆಯ ಹಿಕ್ಕುಬಿಡಿಸಿ, ತಂಬಲಗೈಯಿಂದ ಮಾರಿ ಕೈಯಾಡಿಸಿಕೊಂಡು, ಹಣೆಗೆ ಕುಂಕುಮವಿಟ್ಟು, ತೊಟ್ಟಿದ್ದ ನೈಟಿಯ ಮೇಲೆ ಎದೆ ಮರೆಯಾಗುವಂತೆ ಚಂದದೊಂದು ವೇಲ್ ಇಳಿಬಿಟ್ಟು, ಮೊಬೈಲ್ನ ಚಾರ್ಜು ಪರೀಕ್ಷಿಸಿಕೊಂಡು, ಚಪ್ಪಲಿ ಮೆಟ್ಟಿ, ನರ್ಸ ಜಯಮ್ಮನಿಗೆ ಫೋನಾಯಿಸುತ್ತಲೇ ಆರೋಗ್ಯ ಕೇಂದ್ರದ ಅಂಗಳ ತುಳಿದಿದ್ದಳು.

ಆರೋಗ್ಯ ಕೇಂದ್ರದ ಮುಖ್ಯ ಬಾಗಿಲನ್ನು ಸಮೀಪಿಸುತ್ತಿದ್ದಂತೆ ಅದು ಇನ್ನಾದರೂ ತೆರೆಯದಿದ್ದದ್ದು ನಜರಿಗೆ ಬೀಳುತ್ತಿದ್ದಂತೆ ಎಂಥದೋ ಒಂದು ವಿಚಿತ್ರ ಪ್ಯಾಟರ್ನಿನ ಮೂಲಕ ಮೂಬೈಲ್ ಸ್ಕ್ರೀನ್ಲಾಕ್ ತೆರೆವುಗೊಳಿಸಿ ಜಯಮ್ಮನಿಗೆ ಪುನಃ ಫೋನಾಯಿಸಿದಳು.

‘ಐದ ಮಿನಿಟ ತಡಿ ಬಂದ್ಯ’ ಎಂದು ಸುಹಾನಿಯ ಉತ್ತರಕ್ಕೂ ಕಾಯದೇ ಆಕೆ ಕರೆ ತುಂಡರಿಸಿದಾಗ ಅಲ್ಲಿಯೇ ಇದ್ದ ಕಟ್ಟಿಗೆಯ ಬಾಕ್ಸ್ವೊಂದರ ಮೇಲೆ ಕುಳಿತಳು. ಮುಂಜಾವಾದ್ದರಿಂದ ಆ ಹೊನ್ನಬಿಸಿಲು ಆಹ್ಲಾದದ ಬಿಸಿ ಉಗಿಯುತ್ತಿತ್ತು. ಆಗಾಗ ಸುಳಿಯುವ ಸುಳಿಗಾಳಿ ಗಿಡಮರಗಳಿಗೆ ಸೋಕಿ ನೌಕು ಮಾಡುತ್ತಿತ್ತು. ಜನರ ಗಲಿಬಿಲಿ, ವಾಹನ ದಟ್ಟಣೆ ಯಾವುದೊಂದೂ ನಿಗ್ರಹವಿರಲಿಲ್ಲ. ಇದರಿಂದ ಮೈ-ಮನಸ್ಸಿಗೆ ನೆಮ್ಮದಿಯ ಸಣ್ಣ ಸೆಳಕು ಹಾಯ್ದಂತಾಗಿ ಹಿತವಾಗುವಂತೆ ಮೈ ಮುರಿಯುತ್ತಾ, ಚಳಕ್ ತೆಗೆದು ಆಕಳಿಸುತ್ತಾ, ಆಯಾಸ ಹೊರಹಾಕಿ, ಕಣ್ಮುಚ್ಚಿ ನಿಧಾನಕ್ಕೆ ಗೋಡೆಗೊರಗಿದಳು.

ಅರೆಕ್ಷಣ ಕಣ್ಮುಚ್ಚಿದ್ದೇ ತಡ ಕಳೆದ ಒಂದು ವಾರದಿಂದ ಬಸುರಿ ಹೆಂಗಸಿಗೆ ಕಾಣಿಸಿಕೊಳ್ಳುವ ದೈಹಿಕ ಲಕ್ಷಣಗಳೆಲ್ಲವೂ ಆಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದರಡೆಗೆ ಲಕ್ಷ್ಯ ಹರಿಯಿತು. ತಾನು ಬಸಿರಾಗಿದ್ದಿನೇನೋ.. ಹಾಗಾಗಿರಲಿಕ್ಕಿಲ್ಲವೇನೋ.. ಎಂಬ ತಳಮಳ ಇದ್ದಕ್ಕಿದ್ದಂತೆ ಶುರುವಾಯಿತು. ಈ ಮೊದಲು ಕಿರಿಯ ಮಗಳು ತಾನ್ಯಾ ಹೊಟ್ಟೆಯಲ್ಲಿದ್ದಾಗ ಹೀಗೆ ತಲೆಸುತ್ತು, ವಾಕರಿಕೆ, ಆಯಾಸ ಆಗಿದ್ದು ಬಿಟ್ಟರೆ ಮತ್ಯಾವತ್ತೂ ಮರುಕಳಿಸಿರಲಿಲ್ಲ. ಮುಟ್ಟಾಗದೇ ತಿಂಗಳ ಮೇಲೆ ಹತ್ತನ್ನೆರೆಡು ದಿನಗಳು ಕಳೆದಿದ್ದೇನೋ ನಿಜ. ಹಾಗಂತ ಈ ಸಂದರ್ಭದಲ್ಲಿ ಅದನ್ನ ಗರ್ಭನಿಂತಿರುವ ಲಕ್ಷಣವೆಂದು ಪರಿಗಣಿಸುವಂತಿರಲಿಲ್ಲ. ಯಾಕೆಂದರೆ ಒಂದು ಒಂದೂವರೆ ವರ್ಷದ ಹಿಂದೆ ತಾನ್ಯಾ ಹುಟ್ಟಿದ ಬೆನ್ನಲ್ಲೇ ಗಂಡ ಸುನೀಲ ತನ್ನ ಅವ್ವಳ ಅಪೇಕ್ಷೆಯ ವಿರುದ್ಧವಾಗಿ ಸುಹಾನಿಗೆ ಮಕ್ಕಳ ಆಪರೇಷನ್ ಮಾಡಿಸಿದ್ದ. ಹೀಗಿರುವಾಗ ಗರ್ಭ ನಿಂತಿದೆಯೆಂದು ಊಹಿಸಿಕೊಳ್ಳೋದು ಮುಠ್ಠಾಳತನದ ಪರಮಾವಧಿಯೇ ಎಂದು ತನ್ನಲ್ಲಿ ಮೊಳೆಯುತ್ತಿದ್ದ ಭ್ರಾಂತನ್ನು ಚಿವುಟಿಕೊಂಡಳು.

ಮೊಬೈಲ್ನ ಬಲಭಾಗದಲ್ಲಿರುವ ತನ್ನ ಬಲ ಹೆಬ್ಬೆರಳಿಗೆ ತಾಗುವ ಬಟನ್ ಅದುಮಿದಾಗ ಹತ್ತು ಗಂಟೆ ನಲವತ್ತೈದು ನಿಮಿಷ ಎಂದು ಮೊಬೈಲ್ ಸ್ಕ್ರೀನ್ ಟೈಮು ತೋರಿಸಿತು. ಐದೇ ಐದು ನಿಮಿಷದಲ್ಲಿ ಬರ್ತೀನಿ ಎಂದು ಹೇಳಿ ಇನ್ನಾದರೂ ಪತ್ತೆಯಿರದ ಜಯಮ್ಮಳ ಟೈಮ್ಸೆನ್ಸ್ಗೆ ಬೇಸತ್ತು ಎದ್ದು ಹೊರಡಲಣಿಯಾದಳು. ಮನಸ್ಸು ಹೊರಡಲು ಪುಟುವು ಹಾಕುತ್ತಿತ್ತಾದರೂ ದೇಹ ಅದಕ್ಕೆ ಸಾಥ್ ಕೊಡದಿದ್ದರಿಂದ ಮತ್ತದೇ ಜಾಗಕ್ಕೆ ಕುಳಿತಳು. ಅಷ್ಟಕ್ಕೂ ಹೀಗೆ ಏಕಾಏಕಿ ಯಾವ ಇಲಾಜಿಗೂ ಒಳಪಡದೇ ಮನೆಗೆ ಹೋದರೆ ಅನಸೂಯಾಳಿಂದ ತನಗೆ ಬೈಗುಳ ತಪ್ಪಿದ್ದಲ್ಲ. ಈ ದೈಹಿಕ ಯಾತನೆಯ ಜೊತೆಗೆ ಅವಳು ಮೊನಚು ಮಾತಗಳಿಂದಾಗುವ ನೋವು ಸೇರಿಕೊಂಡರೆ ಕತೆ ಮುಗಿದೇ ಹೋಯಿತು. ಇಡೀ ದಿನ ಹೊತ್ತುಗಳೆಯುವುದು ಒಜನಾದೀತು. ಆದದ್ದಾಗಲಿ ಜಯಮ್ಮಳಿಂದ ಚಿಕಿತ್ಸೆ ಪಡದೇ ಮನೆಯ ಹೊಸಲಿ ತುಳಿಯುವುದು ಲೇಸು ಅನ್ನಿಸಿ ವಾಟ್ಸಪ್ ಸ್ಟೇಟಸ್ಗಳ ಮೇಲೆ ಕೆಲಕಾಲ ಕಣ್ಣಾಡಿಸಿದಳು.

‘ಅಸಲಿಗೆ ದೇವರು ಮನುಷ್ಯರೆಲ್ಲರಿಗೂ ಎಲ್ಲವನ್ನೂ ಪ್ರಾಪ್ತಿಸಿ ಸಲುಹುವುದಿಲ್ಲ. ಅವರಿವರೆಂಬ ಭೇದವಿಲ್ಲದೇ ಒಬ್ಬೊಬ್ಬರಿಗೂ ಒಂದೊಂದು ಥರ ಕೊರತೆಯನ್ನು ಇಟ್ಟೇ ಇಟ್ಟಿರುತ್ತಾನೆ. ಕೊರತೆಯಿರದ ಬದುಕು ಮನುಷ್ಯನ ಬದುಕೇ ಅಲ್ಲ’ ಎಂಬ ವಾಟ್ಸಪ್ಪಿನ ಸ್ಟೇಟಸ್ ನೋಡಿದ ಸುಹಾನಿ ಅಂಥದ್ದೊಂದು ಕೊರತೆ ನನ್ನಲ್ಲಿಯೂ ಇದೆ ಅಂದುಕೊಂಡಳು. ಆ ಕೊರತೆ ಅಕ್ಷರಶಃ ನೆಮ್ಮದಿಯೇ ಹೊರತು ಮತ್ತೇನೂ ಅಲ್ಲ. ಗಂಡು ಸಂತಾನ ಇಲ್ಲದವರ್ಯಾರೂ ಈ ಭೂಮಿಯ ಮೇಲೆ ಬದುಕಿಯೇ ಇಲ್ಲ; ಬಾಳಿಯೇ ಇಲ್ಲ ಎನ್ನುವಷ್ಟು ಭ್ರಮೆಯಿಂದ ಬದುಕುತ್ತಿರುವ ಅನುಸೂಯಾ ನನ್ನ ನೆಮ್ಮದಿ ಕಿತ್ತುಕೊಂಡಿದ್ದಾಳೆ. ಆಕೆ ನಿಜಕ್ಕೂ ಒಂದು ಹೆಣ್ಣಲ್ಲ. ಹೆಣ್ಣಿನ ದೇಹಧಾರಣೆ ಮಾಡಿದ ವ್ಯಾಘ್ರ್ಯ ಪ್ರಾಣಿ. ತಾನೂ ಒಂದು ಹೆಣ್ಣಾಗಿ ಇನ್ನೊಂದು ಹೆಣ್ಣನ್ನೇ ದ್ವೇಷಿಸುವ ಅವಳಗುಣ ಇಡೀ ಹೆಣ್ಣಿನ ಕುಲಕ್ಕೇ ಶೋಭೆಯಲ್ಲ. ನಾನು ಬರೀ ಹೆಣ್ಣನ್ನೇ ಹೆತ್ತಿದ್ದೇನೆಂಬುದೇ ಆಕೆಗೆ ದೊಡ್ಡ ಅಸಮಾಧಾನ. ಆಕೆಯೋ.. ಆಕೆಯ ಇಚ್ಛೆಯೋ.. ನೆನಸಿಕೊಂಡರೆ ಎಂಥ ಚಳಿಯಲ್ಲೂ ದೇಹ ರೋಷದಿಂದ ಬೆವರೊಡೆಯುತ್ತದೆ. ನಾನು ಈ ಎಲ್ಲವನ್ನೂ ಸಹಿಸಿಕೊಂಡು ಉಗುಳು ನುಂಗುತ್ತಾ, ಪಾಲಿಗೆ ಬಂದಂತೆ ಬದುಕತೊಡಗಿದ್ದು ಗೌತಮಿ-ತಾನ್ಯಾರಿಗೋಸ್ಕರ, ಸುನೀಲನಿಗೋಸ್ಕರ ಅಂದುಕೊಳ್ಳುತ್ತಾ ಒಳಗೊಳಗೆ ಕುದ್ದಳು. ಒಳಗಿನ ಕುದಿ ತಣ್ಣಗಾಗುತ್ತಲೇ ದೀರ್ಘನಿಟ್ಟುಸಿರು ಬಿಟ್ಟಳು.

ಎಂಟ್ಹತ್ತು ವರ್ಷದ ಹಿಂದಿನ ಮಾತು. ಸುನೀಲ ಆಗಷ್ಟೇ ಸಮಾಜಶಾಸ್ತ್ರದಲ್ಲಿ ತನ್ನ ಸ್ನಾತಕೋತ್ತರ ಪದವಿ ಮುಗಿಸಿ ಕಾಲೇಜ್ವೊಂದಕ್ಕೆ ಅತಿಥಿ ಉಪನ್ಯಾಸಕನಾಗಿ ಸೇರಿಕೊಂಡಿದ್ದ. ಅದೇ ಕಾಲೇಜಿನಲ್ಲಿ ಸುಹಾನಿ ಪತ್ರಿಕೋದ್ಯಮ ಪದವಿ ಓದುತ್ತಾ ಕಾಲೇಜಿನ ವಿದ್ಯಾರ್ಥಿ ಬಳಗದ ಮುಖ್ಯಸ್ಥಳಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಳು. ಸುನೀಲ ದೇಶದ ಬಹುತ್ವ, ಸಾಮಾಜಿಕ ನ್ಯಾಯ, ಸಮಾನತೆ, ಪ್ರಜಾಪ್ರಭುತ್ವ, ಸೌಹಾರ್ದತೆಯ ವಿಷಯಗಳ ಕುರಿತಾಗಿ ಚೆನ್ನಾಗಿ ಮಾತಾಡೋನು. ಜೀವಪರ, ನಿರ್ಗತಿಕಪರ, ಶಾಂತಿಪರ ಮುಂತಾದ ಜಾಗತಿಕ ಸೈದ್ಧಾಂತಿಕ ವಿಚಾರಗಳನ್ನ ತನ್ನದೇ ನೆಲೆಯಲ್ಲಿ ಬಣ್ಣಿಸೋನು. ಉತ್ತಮ ಭಾಷಣ, ಹಾಡುಗಾರಿಕೆ, ನೃತ್ಯ ಹೀಗೆ ಇನ್ನಿತರ ಕಲೆಗಳು ಅವನಲ್ಲಿದ್ದವು. ಸುಹಾನಿಯೂ ಅಷ್ಟೇ; ಆಕೆ ಇಂಥ ಮೌಲಿಕ ಹವ್ಯಾಸಗಳತ್ತ ಯಾವತ್ತೋ ವಿಶೇಷ ಆಸಕ್ತಿ ಬೆಳಸಿಕೊಂಡು ಆಗಾಗ ತೊಡಗಿಸಿಕೊಳ್ಳುತ್ತಿದ್ದವಳು. ತತ್ಪರಿಣಾಮವಾಗಿ ಸುನೀಲ, ಸುಹಾನಿ ಸಹಜವಾಗಿಯೇ ಒಡನಾಡಲು ಅವಕಾಶ ಸಿಕ್ಕಂತಾಗಿತ್ತು.

ಸುನೀಲ ಒಬ್ಬ ವಿದ್ಯಾವಂತನಷ್ಟೇ ಅಲ್ಲದೇ ನೋಡಲು ಸಹ ತುಂಬಾ ಆಕರ್ಷಕವಾಗಿದ್ದ. ಅದೆಷ್ಟು ಆಕರ್ಷಕವೆಂದರೆ ಒಬ್ಬ ಕಟ್ಟುಮಸ್ತಾದ ಗಂಡಸು ಹೇಗಿರಬೇಕೋ ಹಾಗೆ ತಿದ್ದಿ-ತೀಡಿ, ಹೇಳಿಮಾಡಿಸಿದ ಗೊಂಬೆಯಂತಿದ್ದ. ದೇಹಕ್ಕೆ ಒಪ್ಪ ಓರಣದ ಎತ್ತರ, ತೂಕ, ಬಣ್ಣ, ಕೇಶ ಹೀಗೆ ಯಾವುದರಲ್ಲೂ ಅವನನ್ನು ತೆಗೆದು ಹಾಕುವಂತಿರಲಿಲ್ಲ. ಮೃದು ಮನುಸ್ಸು, ಮುಗ್ಧ ನಗು, ಸ್ನಿಗ್ಧಭಾವ, ವಿನಯಶೀಲ ನಡುವಳಿಕೆ, ಸ್ಫುಟವಾದ ಮಾತು, ಕರಾರುವಕ್ಕಾದ ಶಿಸ್ತು- ಊಫ್.. ಒಂದೇ, ಎರಡೇ.. ಅವನಷ್ಟು ಪರಿಪೂರ್ಣ ಗಂಡಸು ಮತ್ತೊಬ್ಬರಿಲ್ಲವೇನೋ ಅನ್ನಿಸಿತ್ತು ಸುಹಾನಿಗೆ. ಅವರಿಬ್ಬರ ಪರಿಚಯ ಸ್ನೇಹಕ್ಕೆ ತಿರುಗಿತ್ತು. ಸ್ನೇಹ ಮಾತಿನ ಸಲುಗೆ ಹೆಚ್ಚಿಸಿತ್ತು.

ಇದಾಗ್ಯೂ ಈರ್ವರೂ ಯಾವುದಾದರೂ ಒಂದು ಕಾರಣಕ್ಕೆ ಸೇರುವುದು, ಮಾತಾಡುವುದು, ಚರ್ಚಿಸುವುದು ನಡದೇ ಇತ್ತು. ಅನುದಿನವೂ ಪರಸ್ಪರ ಭೇಟಿ, ಮಾತುಕತೆಯಿಲ್ಲದೇ ಈ ಹಗಲು, ರಾತ್ರಿ, ಮಧ್ಯಾಹ್ನ, ಸಾಯಂಕಾಲಗಳು ಸವೆಯದಾದವು. ಒಬ್ಬರಿಗೊಬ್ಬರು ಅವರವರ ದಿನಚರಿಯ ಭಾಗವಾಗಿ ಬಿಟ್ಟಿದ್ದರು. ಹೀಗಾಗಿದ್ದೇ ಸುಹಾನಿಗೆ ಅಮೂಲಾಗ್ರವಾಗಿ ಸುನೀಲನನ್ನು ಅರಿತುಕೊಳ್ಳಲು ಸಾಧ್ಯವಾಗಿತ್ತು. ಸುನೀಲನ ಸೈದ್ಧಾಂತಿಕ ನಂಟಿನ ವ್ಯಾಪ್ತಿ ದೊಡ್ಡದಿತ್ತು. ಪತ್ರಿಕೆಯಲ್ಲೋ, ಟಿ.ವಿ ಸುದ್ದಿಯಲ್ಲೋ, ಓದುವ ಪಾಠದಲ್ಲೋ ಕೇಳಿ ತಿಳಿದ ಘನವ್ಯಕ್ತಿಗಳೊಂದಿಗಿನ ಅವನ ನಿಕಟ ಸಂಬಂಧ ಘನವಾಗಿತ್ತು. ಇದು ಸುಹಾನಿಯ ಅರಿವಿಗೆ ಬರುತ್ತಿದ್ದಂತೆ ಆಕೆಗಿದ್ದ ಅವನ ಮೇಲಿನ ಸೆಳೆತ ಮತ್ತಷ್ಟು ಹೆಚ್ಚಿತ್ತು. ಯಾವುದಾದರೊಂದು ಸಂದರ್ಭದಲ್ಲಿ ಅವನು ಅನ್ಯಾಯ, ಅಕ್ರಮಗಳ ವಿರುದ್ಧ ಆಕ್ರೋಶ ಭರಿತವಾಗಿ ಮಾತಾಡುತ್ತಿದ್ದರೆ ಇವಳಲ್ಲೊಂದು ಹೊಸ ಆವೇಶ ಜಿನುಗುತ್ತಿತ್ತು. ಅವನ ಸಮಾಜಮುಖಿ ಚಟುವಟಿಕೆ, ವ್ಯಕ್ತಿಗತ ಆಸಕ್ತಿ, ಅಭಿರುಚಿಗಳೆಲ್ಲವುದರಿಂದ ಯಥೇಚ್ಛವಾದ ಸ್ಪೂರ್ತಿ ಉತ್ಪತ್ತಿಯಾಗುತ್ತಿತ್ತು. ಸಣ್ಣದಾಗಿ ಮೊಳತಿದ್ದ ಬಂಧ ದೊಡ್ಡದಾಗುತ್ತಲೇ ತನ್ನದೆಲ್ಲವನ್ನೂ ಅವನಲ್ಲಿ ನಿವೇದಿಸಿಕೊಳ್ಳಲು ಹುಕಿ ಹೊಕ್ಕಾಗ ಆಕೆ ತಡಮಾಡಿರಲಿಲ್ಲ.

‘ನನಗ ನನ್ನದೆ ಆದಂತಹ ಸಿದ್ಧಾಂತ, ಆದರ್ಶ ಅದಾವು. ನಂದೊಂದು ಪೂರ್ವ ನಿರ್ಧರಿತ ಬದುಕ. ಈ ಸಂಸಾರಿಕ ಜಂಜಡದಾಗ ಸಿಕ್ಕೊಂಡ ಅದೆಲ್ಲಾ ಬಿಟ್ಟಗೋಟ ಬದಕಾಕ ಇಷ್ಟಾಯಿಲ್ಲ’ ಸುಹಾನಿಯ ನಿವೇದನೆಗೆ ಸುನೀಲನ ತಣ್ಣಗಿನ ಪ್ರತಿಕ್ರಿಯೆ ಹೀಗಿತ್ತು.

‘ರಿಜಿಸ್ಟರ್ ಆಫೀಸಿಗೆ ಬಂದ ಒಂದೇ ಒಂದು ಸೈನ್ ಮಾಡ. ನಿನ್ನ ಯಾವ ಆದರ್ಶಕ್ಕೂ ಚ್ಯುತಿ ಬರದ್ಹಂಗ ನಿನ್ನ ಜೊತಿ ಬದುಕಿ ತೋರಸ್ತೀನಿ ಅಂತ ಅವನ ಬಲಗೈಯನ್ನ ತನ್ನ ಎರಡೂ ಕೈಗಳಿಂದ ಗಟ್ಟಿಯಾಗಿ ಹಿಡಿದು, ಕುಲುಕಿ ಭರವಸೆ ತುಂಬಿದ್ದಳು. ಇದಿಷ್ಟೇ ಅವರಿಬ್ಬರ ಮದುವೆ ಬಗ್ಗೆ ಮಾತುಕತೆ ಅಂತಾದಿದ್ದು. ಇದಿಷ್ಟು ಬಿಟ್ಟರೆ ಎಲ್ಲವೂ ತನ್ನಿಂತಾನೇ ಸುರಳೀತವಾಗಿ ಸಾಗಿತ್ತು. ತಮ್ಮಿಬ್ಬರ ಪ್ರೀತಿಯ ಉನ್ಮಾದವನ್ನು ಸವಿಯುವ ಆಚರಣೆಗೆ ನಾಲ್ಕು ಗೋಡೆಯ ನಡುವಿನ ಪ್ರದೇಶವನ್ನು ಆಶ್ರಯಿಸತೊಡಗಿದರು. ಅವರಿಬ್ಬರ ನಡುವೆ ಸ್ಫೋಟಿಸಿ ಸಿಡಿದೇ ಬಿಡುತ್ತದೆ ಎಂಬಷ್ಟರ ಮಟ್ಟಿಗೆ ಅಸಹನೀಯ ಎಂಬಂತೆ ಬೆಳದು ಬಿಟ್ಟಿದ್ದ ಆ ದೈಹಿಕ ಸ್ಪರ್ಶದ ತುಡಿತ ಪರ್ಯವಸನದ ದಾರಿ ಕಂಡುಕೊಂಡಿತ್ತು. ಅಲ್ಲದೇ ಅದು ತೀರಾ ಸಹಜವೆಂಬಂತೆ ಅಧಿಕೃತವೋ.. ಅನಧಿಕೃತವೋ.. ಎಂಬ ಯಾವ ಪ್ರಜ್ಞೆಯ ಗರಜು ಇಲ್ಲದೇ ಜಾರಿಯಲ್ಲಿತ್ತು. ಯಾವಾಗ ಸುಖದ ಅಮಲಿನಲಿ ಮೈಮರೆತು ಸುಹಾನಿ ಮೂರು ತಿಂಗಳ ಗರ್ಭ ಹೊತ್ತಳೋ ಆಗ ತಮ್ಮಿಬ್ಬರ ಸಂಬಂಧವನ್ನ ರಿಜಿಸ್ಟರ್ ಮುಂದೆ ಅಧಿಕೃತವಾಗಿಸಿಕೊಂಡರು. ಸುನೀಲ ಆಕೆಯನ್ನ ತನ್ನೂರು ನರಸಾಪುರಕ್ಕೆ ಒಯ್ದು ತಾಯಿ ಅನಸೂಯಾಳ ಮುಂದೆ ತಲೆಬಾಗಿಸಿ ನಿಲ್ಲಿಸಿದ್ದ.

ಇವರಿಬ್ಬರ ಜೋಡಿಯನ್ನು ಕಂಡ ಅನಸೂಯಾ ನಖಶಿಖಾಂತ ಉರಿದುಕೊಂಡು ಕೆಂಡಾಮಂಡಲವಾಗಿದ್ದಳು. ಮಗ-ಸೊಸೆ ಅನ್ನೋದೂ ನೋಡದೇ ಇಬ್ಬರನ್ನೂ ಬಾಗಿಲ ಹೊರಗೇ ನಿಲ್ಲಿಸಿ ‘ಐಯ್ಯಯ್ಯೋ.. ನನ್ನ ಮನತಾನದ್ದ ಮಾನ, ಮರ್ಯಾದಿ ಎಲ್ಲಾ ಮಣ್ಣಪಾಲಾಗಿ ಹೋತ್ರೋ. ಯಾವ ಭಾಡ್ಯಾನ್ಮಕ್ಳ ಏನ ಮಾಟಾ-ಮಂತ್ರ ಮಾಡಿಸ್ಯಾರೋ ಏನೋ. ನಾ ಹಾಕಿದ್ದ ಗೆರಿ ದಾಟದ ಮಗಾ ನನ್ನ ಮಾತ ಕೇಳಲಾರದ್ಹಂಗ ಆಗ್ಯಾನ.. ಈ ಹೆಣ್ಣ ಯಾವ ಜ್ಯಾತೀದೋ ಏನೋ.. ಈಕಿ ಒಳಗ ಇಂವಾ ಏನ್ ಕಂಡಾನೇನೋ. ಶಿವಶಿವಾ.. ನನಗಿವತ್ತ ಈ ಜಲ್ಮಕ್ಕ ಮುಕ್ತಿ ಕೊಟ್ಟಬಿಡಪಾ.. ಇದನ್ನೆಲ್ಲಾ ಹ್ಯಾಂಗ್ ನಾ ನನ್ನ ಕಣ್ಣೀಲೆ ನೋಡ್ಲಿ’ ಅಂತ ಊರ ಜನೆರೆಲ್ಲರೂ ಮನೆಯ ಮುಂದೆ ಜಮಾಯಿಸುವಷ್ಟು ಎದೆಎದೆ ಬಡಿದುಕೊಂಡು ಬೋರಾಡಿ ಅತ್ತು ಬೊಬ್ಬಾಟು ಮಾಡಿದ್ದಳು.

ಸುಹಾನಿ ಸುನೀಲನಿಂದ ತಾಳಿ ಕಟ್ಟಿಸಿಕೊಂಡಿದ್ದಲ್ಲದೇ ಗರ್ಭಬೇರೆ ಧರಿಸಿದ್ದರಿಂದ ಊರು ತುಟಿಪಿಟಿಕ್ ಅನ್ನಲಿಲ್ಲ. ಬದಲಿಗೆ ಅನಸೂಯಾಳಿಗೇ ಸೊಸೆಯನ್ನ ಮನೆ ತುಂಬಿಸಿಕೊಳ್ಳುವಂತೆ ಬೈದು ಬುದ್ಧಿ ಹೇಳಿ ಒಂದುಮಾಡಿತ್ತು.

ಅನಸೂಯಾ ಬದುಕಿನುದ್ದಕ್ಕೂ ಕಷ್ಟಗಳನ್ನು ಎದುರಿಸಿದ ದಿಟ್ಟತನ, ವ್ಯವಹಾರಿಕ ಪ್ರಜ್ಞೆ, ಸಾಮಾಜಿಕ ಶಿಸ್ತು ಇಂದಿನ ಆಕೆಯ ಸುಖಮಯ ಜೀವನದ ಮೂಲಮಂತ್ರವಾಗಿತ್ತು. ಈ ಸುನೀಲ ಅನಸೂಯಾಳ ಮಡಿಲಲ್ಲಿ ಮಲಗಿಕೊಂಡು ಎದೆಯ ಹಾಲು ಕುಡಿಯುತ್ತಿದ್ದ ವಯಸ್ಸಿನಲ್ಲೇ ಆಕೆಯ ಗುಂಡುಕಲ್ಲಿನಂತ ಗಂಡ ಕೊನೆಯುಸಿರೆಳದಿದ್ದ. ಧೃತಿಗೆಡದ ಅವಳು ಎಲ್ಲರಿಗೂ ಎಪ್ಪಾಯಣ್ಣಾ ಅಂದು ರಮಿಸಿ ಕೆಲಸ ತೆಗೆದುಕೊಂಡು ತನ್ನ ಜಮೀನನ್ನ ಉತ್ತಿಬಿತ್ತಿ ಬೆಳೆ ತೆಗೆಯುತ್ತಾ ಬಂದಿದ್ದಳು. ಆಗಿನ ಕಾಲಕ್ಕೇ ಗಂಡಾಳಿನಂತೆ ದುಡಿದು ಎಲ್ಲವನ್ನೂ ನೀಗಿಸಿಕೊಂಡಿದ್ದಳು. ಅಷ್ಟೋ.. ಇಷ್ಟೋ ಹಣ ಖಮಾಯಿಸಿ ಸಣ್ಣಗೆ ಬಡ್ಡಿ ವ್ಯವಹಾರ ಸುರುಮಾಡಿದ್ದಳು. ಆವತ್ತಿನಿಂದ ಇವತ್ತಿನವರೆಗೂ ಆಕೆ ಆರ್ಥಿಕತೆಯ ವಿಚಾರದಲ್ಲಿ ಯಾವತ್ತೂ ತಿರುಗಿ ನೋಡಿದ ಉದಾಹರಣೆ ಇಲ್ಲ. ಅಷ್ಟೊಂದು ಪ್ರಗತಿ ಸಾಧಿಸಿದ್ದಳು. ಇದ್ದೊಬ್ಬ ಮಗನನ್ನೇ ರಾಜಕುಮಾರನಂತೆ ಸಾಕಿ, ಕಂಡಾಪಟಿ ಓದಿಸಿ, ಚೊಲೋ ನೌಕರಿ ಕೊಡಿಸಿ, ಗಿಣಿಯಂತ ಹೆಣ್ಣು ತೆಗೆದು ಮದುವೆ ಮಾಡುವ ತವಕದಲ್ಲಿದ್ದಳು. ಆದರೀಗ ಆಕೆಯ ಎಲ್ಲಾ ಆಲೋಚನೆಗಳು ಉಲ್ಟಾಹೊಡೆದಿದ್ದರಿಂದ ಮನನೊಂದು ನಿರಾಹಾರವಾಗಿ ಹಾಸಿಗೆಯಲ್ಲಿ ಮಲಗಿದ್ದವಳು ಮೂರ್ನಾಲ್ಕು ದಿನ ಎದ್ದಿರಲೇಯಿಲ್ಲ. ದಂಪತಿಗಳಿಬ್ಬರೂ ತಮ್ಮಿಂದ ತಪ್ಪಾಗಿದೆಯೆಂದು ಗಟ್ಟಿಯಾಗಿ ಆಕೆಯ ಕಾಲು ಹಿಡಿದು ಹಣೆಮಣೆದಿದ್ದರಿಂದ ಕೊಂಚಮಟ್ಟಿಗೆ ತನ್ನ ಬಿಗುವು ಸಡಿಲಿಸಿದ್ದಳು.

ಸುಹಾನಿ ತುಂಬು ಗರ್ಭಿಣಿಯಾಗಿ ಹೆರಿಗೆಗೆ ದಿನ ಸಮೀಪಿಸುತ್ತಿದ್ದಂತೆ ಆಕೆಯ ಮೇಲಿನ ಅನುಸೂಯಾಳ ಕೋಪ ತಿಳಿಯಾಗುತ್ತಲಿತ್ತು. ಆಗಮಿಸಲಿರುವ ವಂಶೋದ್ಧಾರಕನೊಂದಿಗೆ ಆಟವಾಡಿ ತನ್ನ ಮುಪ್ಪು ಸವೆಸುವುದೆಂದು ತೀರ್ಮಾನಿಸಿ ಆ ವಿಚಾರದ ಕಕ್ಷೆಯಲ್ಲಿಯೇ ಮನಸ್ಸು ಸಂಚರಿಸಲು ಬಿಟ್ಟು ಉಮೇದಿ ತುಂಬಿಕೊಂಡಿದ್ದಳು. ಊರವರೊಂದಿಗೆ, ಸರೀಕರೊಂದಿಗೆ ಮಗ-ಸೊಸೆಯನ್ನು ಕೊಂಡಾಡುತ್ತಾ ಸಂತಸದಲ್ಲಿದ್ದಳು. ಅಲ್ಲದೇ ಸುಹಾನಿಗೆ ಅಡುಗೆ ಮನೆಯಲ್ಲಿ ಸಹಕರಿಸುವುದು, ಇಂಥದ್ದೇ ಉಣ್ಣು-ತಿನ್ನು ಎಂದು ಕಾಳಜಿಯಿಂದ ಗದರುವುದು. ಗಂಡು ಮಗು ಹೆತ್ತು ವಂಶ ಬೆಳಗಿಸು ಎಂದು ಆಜ್ಞಾಪಿಸುವುದು ಮಾಡುತ್ತಿದ್ದಳು. ಆಗಷ್ಟೇ ಸುಹಾನಿ, ಸುನೀಲಗೆ ಒಂದು ಗುಲಗಂಜಿಯಷ್ಟು ವೈವಾಹಿಕ ಜೀವನದ ಎಲ್ಲ ಸುಖ ಸೋಕಿದ್ದು. ಅದನ್ನು ಬಿಟ್ಟರೆ ಇದುವರೆಗೂ ಅಂಥದೊಂದು ಸುಖ ಅವು ಕಂಡಿಲ್ಲ; ಕಾಣಲಾಗಿರಲಿಲ್ಲ. ಕಾರಣ ಸುಹಾನಿ ಮೊದಲ ಹೆರಿಗೆಯಲ್ಲಿ ಗೌತಮಿಯನ್ನ, ಎರಡನೇ ಹೆರಿಗೆಯಲ್ಲಿ ತಾನ್ಯಾಳನ್ನ ಹೆತ್ತದ್ದು. ಸುನೀಲ ಸುಹಾನಿಗಿಬ್ಬರಿಗೂ ತಾವು ಎರಡೂ ಹೆಣ್ಣನ್ನೇ ಹೆತ್ತಿದ್ದೇವೆ ಎಂಬ ದುಃಖವಾಗಲಿ, ಗಂಡು ಹುಟ್ಟುಬೇಕಿತ್ತೆಂಬ ಅಪೇಕ್ಷೆಯಾಗಲಿ ಇದ್ದಿರಲಿಲ್ಲ. ಆದರೆ ಅನೂಸುಯಾಗೆ ಇದರಿಂದ ಅಂಟಿದ ಅಸಮಾಧಾನ ಅಷ್ಟಿಷ್ಟಲ್ಲ.

ಮೊದಲು ಗೌತಮಿ ಹುಟ್ಟಿದಾಗ ಒಂದಷ್ಟು ಅಸಮಾಧಾನವೇ ಇತ್ತಾದರೂ ಎರಡನೇ ಹೆರಿಗೆಯಲ್ಲಾದರೂ ಗಂಡಾಗುತ್ತೆ ಎಂದು ನಿರೀಕ್ಷೆಯಿಟ್ಟುಕೊಂಡಿದ್ದಳು ಅನಸೂಯ. ಆ ಹೆರಿಗೆಯಲ್ಲೂ ತಾನ್ಯಾ ಹುಟ್ಟಿದ್ದರಿಂದ ಆಕೆಯ ನಿರೀಕ್ಷೆ ಹುಸಿಯಾಯಿತು. ಸುಹಾನಿ ಒಬ್ಬ ಹಸಿಬಾಣಂತಿ ಅನ್ನೋದು ನೋಡದೇ ‘ಅದ್ಯಾವ ಗಳಿಗಿಯೋಳಗ ನನ್ನಮನಿ ಹೊಕ್ಕಿಯೇನೋ ನೀನು. ನಿನ್ನ ಹೆಣಕ್ಕ ಹೆಂಟಗಾಲ ಏರಸ್ಲೀ.. ಮನಿದೀಪಾ ಹಚ್ಚಾಕ ಒಂದ ಗಂಡ ದಿಕ್ಕಿಲ್ಲದ್ಹಂಗ ಮಾಡೀದಿ’ ಅಂತ ಮೂಖಾಮೂತಿ ತಿವಿದಿದ್ದಳು. ಆಡಾಡಿಕೊಂಡು ಅತ್ತಿದ್ದಳು. ಅಲ್ಲದೇ ಎರಡನೇ ಹೆರಿಗೆಗೆ ಮಕ್ಕಳ ಆಪರೇಷನ್ ಮಾಡುವ ಒಪ್ಪಿಗೆ ಪತ್ರಕ್ಕೆ ಸುನೀಲ ಸಹಿ ಹಾಕುವುದನ್ನ ತಡೆದಿದ್ದಳು.

ಗಂಡುಮಗು ಆಗುವವರೆಗೂ ಆಪರೇಷನ್ ಬೇಡವೆಂದು ಪಟ್ಟು ಹಿಡಿದು ಕುಳಿತಿದ್ದಳು. ಹೆಣ್ಣಾಗಲಿ, ಗಂಡಾಗಲಿ ನನಗೆ ಎರಡೇ ಮಕ್ಕಳು ಸಾಕೆಂದು ಸುನೀಲ ಎಷ್ಟೇ ಅವಲತ್ತುಕೊಂಡರು ಆಕೆ ಸಮ್ಮತಿಸಿರಲಿಲ್ಲ. ರೋಸಿಹೋದ ಅವನು ತಾನೇ ಖುದ್ದಾಗಿ ಹೋಗಿ ವೈದ್ಯರನ್ನು ಸಂಪರ್ಕಿಸಿ ತನಗೇ ಆಪರೇಷನ್ (ವ್ಯಾಸೆಕ್ಟಮಿ) ಮಾಡಲು ವಿನಂತಿಸಿಕೊಂಡು ಬೆಡ್ ಮೇಲೆ ಮಲಗಿಕೊಂಡಿದ್ದ. ಇದು ತಿಳಿಯುತ್ತಿದ್ದಂತೆ ಅನುಸೂಯಾ ‘ಹೇ ಹಾಟ್ಯಾನ ಮಗನ ಸುಖದ ಜಲಮ ಯಾಕ ಹಾಳು ಮಾಡಕೋತಿ. ಹೋಗ ಅಕಿಗೆ ಮಾಡಸ್ಕೋ ಅಂತ್ಹೇಳ. ನಿನ್ನ ಹಣೆಬಾರ್ದಾಗ ಇದ್ಹಂಗಾಗಲಿ’ ಅಂದು ಆಸ್ಪತ್ರೆಯಿಂದ ಕಾಲ್ಕಿತ್ತಿದ್ದಳು.

ಇಷ್ಟಾದದ್ದು ಮತ್ತೇ ಅನಸೂಯಾ ಯಾವ ನೆಪಕ್ಕೂ ಮಗನೊಂದಿಗಾಗಲಿ, ಸೊಸೆಯೊಂದಿಗಾಗಲಿ ಪ್ರೀತಿಯಿಂದ ಎರಡು ಮಾತಾಡಲಿಲ್ಲ. ಕೊನೆಪಕ್ಷ ಮೊಮ್ಮಕ್ಕಳನ್ನಾದರೂ ಅಕ್ಕರೆಯಿಂದ ಕಂಡು ಎತ್ತಿ ಆಡಿಸಿ ಮುದ್ದಿಸಲಿಲ್ಲ. ಸದಾ ಇಲ್ಲದ ಸಂಕಟಗಳನ್ನ ಸೃಷ್ಟಿಸಿಕೊಂಡು ಒದರಾಡುವುದು, ಎಲ್ಲರ ಮೇಲೆ ಅಕಾರಣವಾಗಿ ಹರಿಹಾಯುವುದನ್ನ ಜಾರಿಯಲ್ಲಿರಿಸಿದ್ದಳು. ಇನ್ನು ಸುನೀಲ ತಾನಾಯ್ತು ತನ್ನ ಹೋರಾಟ, ಚಳವಳಿ ಅನ್ನೋ ಲೋಕವಾಯ್ತು ಅಂತ ಊರೂರು ತಿರುಗುತ್ತಾ ಮನೆಮಾರು ಮರೆತು ಇದ್ದುಬಿಡತೊಡಗಿದ. ಮನೆ, ಮಕ್ಕಳು, ಹೆಂಡತಿ, ಸಂಸಾರ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳಲು ಆತ ಸಿದ್ಧವಿರಲಿಲ್ಲ. ಅತ್ತೆ-ಸೊಸೆ ಎಷ್ಟೇ ಕೂಗಾಡಿದರೂ, ಕಿತ್ತಾಡಿದರೂ ಅವರನ್ನ ರಮಿಸದೇ, ಬೈಯ್ಯದೇ ತಾನು ಈ ಆಟದಲ್ಲೇ ಇಲ್ಲವೆಂಬಂತೆ ಅತ್ಯಂತ ಉದಾಸೀನತೆಯಿಂದ ಮೆರೆಯತೊಡಗಿದ.

ಸುನೀಲನ ಕೌಟುಂಬಿಕ ನಿರಾಸಕ್ತಿಯ ಕುರಿತಾಗಿ ಸುಹಾನಿ ಅವನೊಂದಿಗೆ ಮಾತಾಡುವಂತಿರಲಿಲ್ಲ. ಮದುವೆಗೆ ಮುಂಚೆಯೇ ಭಂಡ ಒಪ್ಪಂದಕ್ಕೆ ಸಿಲುಕಿ ತನ್ನ ಕೈ ತಾನೇ ಕಟ್ಟಿಕೊಂಡಿದ್ದಳು. ಒಂದು ವೇಳೆ ಮಾತಾಡಿದರೂ ಪ್ರಯೋಜನವಿಲ್ಲ ಎಂಬುದು ಆಕೆಗೆ ಅರಿಯದ ಸಂಗತಿಯೇನಾಗಿರಲಿಲ್ಲ. ಹೀಗಾಗಿ ಲೋಕದೃಷ್ಟಿಗೆ ಮಾತ್ರ ಅದೊಂದು ಮನೆ, ಕುಟುಂಬ, ಅಂತಾಯಿತೇ ಹೊರತು ಕಿಂಚಿತ್ತಾದರೂ ಸುಖ-ಶಾಂತಿ-ನೆಮ್ಮದಿ ಅನ್ನೋದು ನೆಲೆಸಿ ಮನೆ ಬೃಂದಾವನವಾಗಲಿಲ್ಲ. ಮನೆಯಲ್ಲಿ ಸದಾ ಸೂತಕದ ಹೊಗೆಯಾಡುತ್ತಲಿತ್ತು. ಸುಹಾನಿ ಇಂಥ ನರಕದಿಂದ ಹೇಗಾದರೂ ಮಾಡಿ ಹೊರಬರಬೇಕೆಂದು ಹಗಲಿರುಳು ಯೋಚಿಸಿದ್ದಳು. ಇನ್ನೊಂದು ಬಾರಿ ಬಸಿರು ಹೊತ್ತು, ಗಂಡು ಹೆತ್ತು ಅನಸೂಯಾ ಮಡಲಲ್ಲಿಡಬೇಕು; ಇಲ್ಲಾ ತನ್ನ ಮಕ್ಕಳೊಂದಿಗೆ ಗಂಟುಮೂಟೆ ಸಮೇತ ಮನೆತೊರೆದು ಕಣ್ಮರೆಯಾಗಬೇಕು. ಇವರೆಡೇ ಆಕೆಗೆ ಪರಿಹಾರವೆಂದು ತೋಚಿದ್ದು. ಆದರೆ, ಆಕೆ ಬಸಿರು ಹೊರಲು ಸಾಧ್ಯವಿರದೇ ಮನೆ ತೊರೆಯಲು ಧೈರ್ಯ ಸಾಲದೇ ಅದೇ ಅಸಹನೀಯ ವಾತವರಣದಲ್ಲೇ ಕೈಕಟ್ ಬಾಯಿಮುಚ್ಚ ಎಂಬಂತೆ ದಿನಗಳೆಯುತ್ತಿದ್ದಳು.

ಬಹಳ ಹೊತ್ತಿನತನಕ ಒಂದೇ ಜಾಗದಲ್ಲಿ ಕುಳಿತ ಸುಹಾನಿಗೆ ಅದ್ಯಾವಾಗ ಜಂಪು ಹತ್ತಿತ್ತೋ ಗೊತ್ತಿಲ್ಲ. ಜಯಮ್ಮ ಬಂದು ಭುಜಹಿಡಿದು ಅಲುಗಾಡಿಸಿದಾಗಲೇ ಯಾವುದೋ ಪ್ರಪಾತದಲ್ಲಿ ಬಿದ್ದಂತ ಆಘಾತಕ್ಕೆ ಒಳಗಾದಂತೆ ಬೆಚ್ಚಿ ವಾಸ್ತವ ಸನ್ನಿವೇಶಕ್ಕೆ ಹೊಂದಿಕೊಂಡಿದ್ದಳು. ಜಯಮ್ಮ ‘ನಿದ್ದಿ ಜೋರಿತ್ಕಾಣ್ಸತ್’ ಅಂತ ಅಣುಕಿಸಿ ಆರೋಗ್ಯ ಕೇಂದ್ರದ ಬೀಗ ತೆರೆಯಲು ಮುಂದಾದಾಗ ಈಕೆಯೂ ಸಹಕರಿಸಿದಳು. ತನ್ನ ಕೈಯಲ್ಲಿದ್ದ ಕರಿ ಹ್ಯಾಂಡ್ಬ್ಯಾಗನ್ನು ಜಯಮ್ಮ ಅಲ್ಲಿದ್ದ ಟೇಬಲ್ ಮೇಲೆ ಕುಕ್ಕಿದಂತಿಟ್ಟು ಮುಖಕ್ಕೆ ತಾಗುವಂತೆ ಸೆರಗಿನಿಂದ ಗಾಳಿ ಉತ್ಪಾದಿಸಿಕೊಳ್ಳತೊಡಗಿದಳು. ಆ ಗಾಳಿ ಸಾಲದಾದಾಗ ಸೀಲಿಂಗ್ ಫ್ಯಾನಿನ ಬಟನ್ ಅದುಮಿದಳು. ವೈದ್ಯರು ಕೂರುವ ಕುರ್ಚಿಯ ಮೇಲೆ ಕುಳಿತು ಫ್ಯಾನು ತೂರುತ್ತಿದ್ದ ಗಾಳಿಯನ್ನ ಆಹ್ಲಾದಿಸುತ್ತಾ ಕೆಲಕ್ಷಣ ದಣಿವಾರಿಸಿಕೊಂಡಳು. ಆ ಟೇಬಲ್ಲಿನ ಡ್ರಾನಲ್ಲಿ ಏನೇನೋ ತೆಗೆದು ಸಜ್ಜುಗೊಳಿಸುತ್ತಾ ಸನ್ನದ್ಧಳಾಗಿ ಸುಹಾನಿಯ ರೋಗದ ಮಾಹಿತಿ ಪಡೆಯತೊಡಗಿದಳು.

ಜಯಮ್ಮ ಇಪ್ಪತ್ತು ಇಪ್ಪತ್ತೈದು ವರ್ಷದಿಂದ ನರ್ಸಾಗಿದ್ದರೂ ನರಸಾಪುರದ ಪಾಲಿಗೆ ಆಕೆ ವೈದ್ಯೆಯೇ ಆಗಿದ್ದಳು. ಆರೋಗ್ಯ ಕೇಂದ್ರದ ಅಸ್ತವ್ಯಸ್ತತತೆ, ವೈದ್ಯರ ಅಲಭ್ಯತೆ, ರೋಗಿಗಳ ಅವಶ್ಯಕತೆ ಆಕೆಯನ್ನ ವೈದ್ಯೆಯಾಗಿಸಿದ್ದೆಂದರೆ ಅಚ್ಚರಿಯೇನಿಲ್ಲ. ಆರೋಗ್ಯ ಕೇಂದ್ರದ ಹಿಂದೆಯೇ ಆಕೆಯ ಮನೆಯಿದ್ದರಿಂದ ಜನರು ಎಂಥ ಅಪರಾತ್ರಿಯಲ್ಲೂ ಕರೆದರೂ ಆಕೆ ಒಲ್ಯ ಅನ್ನುತ್ತಿರಲಿಲ್ಲ. ಐವತ್ತು ಕೊಡವಲ್ಲಿ ಅರವತ್ತು ಕೊಡ್ತೀನಿ ಅಂದರಂತೂ ಸೀದಾ ಮುಗಿಲಿಗೇ ಕೈಕೊಡುತ್ತಿದ್ದಳು. ಯಾವುದೇ ರಜಾದಿನಗಳನ್ನು ತನಗೆ ಅನ್ವಯಿಸಿಕೊಳ್ಳದೇ ಎಂಥ ಸಂದರ್ಭದಲ್ಲಾದರೂ ಆರೋಗ್ಯ ಕೇಂದ್ರದ ಬೀಗ ತೆರೆದು ಎಂಥ ರೋಗಕ್ಕಾದರೂ ಇಲಾಜು ಮಾಡುತ್ತಿದ್ದಳು. ಹಾಗಂತ ಈಕೆಯ ಹತ್ತಿರ ದೊಡ್ಡದೊಡ್ಡ ಜಡ್ಡು-ಜಾಪತ್ತುಗಳಿಗೆ ಜನ ತೋರಿಸಿಕೊಳ್ಳುತ್ತಿರಲಿಲ್ಲ. ಸಣ್ಣ-ಪುಟ್ಟಜ್ವರ, ನೆಗಡಿ ಕೆಮ್ಮಿನಂತಹ ಜಾಡ್ಯಗಳಿಗೆ ಚಿಕಿತ್ಸೆ ಪಡೆಯದೇ ಇರುತ್ತಿರಲಿಲ್ಲ. ಆಕೆಯ ಸೇವೆ ಬಹುವರ್ಷಗಳಿಂದ ಹೀಗೆಯೇ ಸಾಂಗವಾಗಿ ಸಾಗಿತ್ತು.

ನಾಲಿಗೆ ಹೊರ ಚಾಚಿಸಿ, ಕಣ್ಣು ಅಗಲಿಸಿಸಿ, ನೋಡಿದಳು. ಕೈಯಲ್ಲಿನ ನಾಡಿ ಹಿಡಿದು ದೀರ್ಘವಾಗಿ ಲಕ್ಷ್ಯಗೊಟ್ಟು ಪರೀಕ್ಷಿಸುವಾಗ ಜಯಮ್ಮನಿಗೆ ಏನೋ ಹೊಳೆದಂತಾಗಿ ತಟ್ಟನೇ ಡ್ರಾನಲ್ಲಿದ್ದ ಆಲ್ ಟೈಮ್ ಪ್ರೆಗ್ನೆನ್ಸಿ ಟೆಸ್ಟ್ ಕಿಟ್ ತೆಗೆದು ಸುಹಾನಿಯ ಕೈಯಲ್ಲಿಟ್ಟಳು. ಅದನ್ನ ನೋಡುತ್ತಲೇ ಸುಹಾನಿ ಒಂದಕ್ಷಣ ಗಲಿಬಿಲಿಗೊಂಡು ತೊಡರುತೊಡರಾಗಿ ತನಗೆ ಆಪರೇಷನ್ ಆಗಿದ್ದರ ಕುರಿತಾಗಿ ಹೇಳಿಕೊಂಡಳು. ಆದರೂ ಜಯಮ್ಮ ಟೆಸ್ಟ್ ಮಾಡಿಕೊಂಡು ಬರಲೇಬೇಕೆಂದು ಒತ್ತಾಯಿಸಿದಳು.
ಒಲ್ಲದ ಮನಸ್ಸಿನಿಂದಲೇ ಹೋಗಿ ಶೌಚಾಲಯದಲ್ಲಿ ಕುಳಿತಿದ್ದ ಸುಹಾನಿಗೆ ಹೀಗಾಗುತ್ತೆ ಅಂತ ಆಕೆ ಕನಸು ಮನಸ್ಸಿನಲ್ಲೂ ಅಂದುಕೊಂಡಿರಲಿಲ್ಲ. ಆ ಟೆಸ್ಟ್ ಕಿಟ್ ಮೇಲೆ ಎರಡು ಹನಿಮೂತ್ರ ಬಿದ್ದಿದ್ದೇ ತಡ ಅದರಲ್ಲಿನ ಎರಡು ಪಾಸಿಟಿವ್ ಗೆರೆಗಳು ರಚ್ಚಾಗಿ ಮೂಡಿದ್ದವು! ಆಪರೇಷನ್ ಮಾಡಿಸಿಕೊಂಡ ನಂತರವೂ ಗರ್ಭ ನಿಲ್ಲುವುದೆಂದರೆ ಅದೆಂಥಾ ವಿಚಿತ್ರ ಅಂದುಕೊಳ್ಳುತ್ತಾ ವಿಲಕ್ಷಣ ತಳಮಳದಲ್ಲಿಯೇ ಜಯಮ್ಮನಲ್ಲಿಗೆ ದೌಡಾಯಿಸಿದಳು. ಗರ್ಭ ನಿಂತಿದ್ದಕ್ಕೆ ಖುಷಿಪಡುವುದೋ.. ದುಃಖಿಸುವುದೋ.. ಎಂಬ ದಂದುಗದಲ್ಲಿಯೇ ಆ ಟೆಸ್ಟ್ ಕಿಟ್ ಅನ್ನು ಜಯಮ್ಮನಿಗೆ ಕಾಣುವಂತೆ ಟೇಬಲ್ ಮೇಲಿಟ್ಟು ಜೊತೆಗೆ ಆ ಎರಡನೂರರ ನೋಟೂ ಇಟ್ಟು ದುರದುರನೇ ಹೊರನಡೆದೇ ಬಿಟ್ಟಳು. ‘ಸುಹಾನಿ. ಹೇ ಸುಹಾನಿ’ ಅಂತ ಎರಡ್ಮೂರು ಬಾರಿ ಜಯಮ್ಮ ಕೂಗಿದರೂ ಕೇಳಿಯೂ ಕೇಳಿಸದಂತೆ ಓಡುನಡಿಗೆಯಲ್ಲಿ ಆರೋಗ್ಯ ಕೇಂದ್ರದ ಗೇಟು ದಾಟಿದಳು.

ಸುಹಾನಿ ಮನೆಯಡೆಗೆ ಹೆಜ್ಜೆಯಿರಿಸುತ್ತಿದ್ದ ದಾರಿಯುದ್ದಕ್ಕೂ ಗರ್ಭ ನಿಂತಿದ್ದರ ಕುರಿತಾಗಿ ಯೋಚನೆಗಿಳಿದಿರಲಿಲ್ಲ. ಗಂಡಾಗುತ್ತೆ ಎನ್ನುವ ಧೈರ್ಯದಲ್ಲಿ ಗರ್ಭವನ್ನು ಉಳಿಸಿಕೊಳ್ಳುವುದೋ ಅಥವಾ ಹೆಣ್ಣಾದೀತು ಎಂಬ ಭಯದಲ್ಲಿ ಗರ್ಭ ತೊಳೆಸಿಕೊಳ್ಳುವುದೋ ಎಂದು ಚಿಂತೆಯ ಚಿತೆಯಲ್ಲಿ ಬೇಯುತ್ತಿದ್ದಳು. ಗಂಡಾದರೆ ಅನುಕೂಲ; ಇಲ್ಲವಾದರೆ ಅದೇ ನನಗೆ ಕೊನೆಗಾಲ. ಈಗಾಗಲೇ ಎರಡೂ ಹೆಣ್ಣನ್ನೇ ಹೆತ್ತು ಹೊತ್ತು ಸಂಭಾಳಿಸಿದ್ದೇ ಹೆಚ್ಚು. ಅಂಥದ್ರಲ್ಲಿ ಮೂರನೇಯದ್ದಾದರಂತೂ ಅನಸೂಯಾ ಅಲ್ಲ ಸುನೀಲನೂ ಬೇಸರಿಸಿಕೊಳ್ಳಬಹುದು ಅಂದುಕೊಳ್ಳುತ್ತಾ ನಡೆಯುತ್ತಲೇ ಇದ್ದಳು. ದಾರಿ ತೀರಾ ಅಪರಿಚಿತವೆನಿಸುತ್ತಿತ್ತು. ಎದುರುಗೊಳ್ಳುತ್ತಿದ್ದ ಜನ, ವಾಹನ, ಪ್ರಾಣಿ, ಪಕ್ಷಿ- ಎಲ್ಲವೂ ತನ್ನನ್ನೇ ದಿಟ್ಟಿಸುತ್ತಿದ್ದಂತೆ ಭಾಸವಾಗುತ್ತಿತ್ತು. ಗೊತ್ತಿಲ್ಲದ ಒಂದು ಊರಲ್ಲಿ ದಿಕ್ಕೆಟ್ಟು ಸಂಚರಿಸುತ್ತಿದ್ದೆನೇನೋ ಅನ್ನಿಸಿ ಮನಸ್ಸು ಸಂಕುಚಿತಗೊಳ್ಳುತ್ತಿತ್ತು. ತನ್ನ ಈ ಅತಂತ್ರ ಸ್ಥಿತಿಯನ್ನ ಹೇಗಾದರೂ ಸುಧಾರಿಸಿಕೊಳ್ಳಬೇಕು ಅನ್ನುವಷ್ಟರಲ್ಲಿ ಮೊಬೈಲ್ ರಿಂಗಣಿಸತೊಡಗಿತು. ಸುನೀಲ ಕರೆ ಮಾಡಿದ್ದ. ಫೋನ್ ಕಿವಿಗಿಟ್ಟುಕೊಂಡಾಗ ‘ಸುಹಾನಿ’ ಅನ್ನುವ ಸುನೀಲನ ಸ್ವರ ಸಾಂತ್ವಾನಿಸಿದಂತೆ ಭಾಸವಾಗಿ ಈವರೆಗಿನ ತನ್ನೆದೆಲ್ಲವನ್ನೂ ತೋಡಿಕೊಂಡಳು.

ಆಪರೇಷನ್ ಮಾಡಿಸಿದ ಮೇಲೆಯೂ ಗರ್ಭ ನಿಂತಿದೆಯೆಂದರೆ ಇದು ವೈದ್ಯರು ಎಸುಗಿದ ಮಹಾಮೋಸ. ಇದನ್ನ ಖಂಡಿಸಬೇಕು. ವೈದ್ಯರ ವಿರುದ್ಧ ಪ್ರತಿಭಟನೆ ಮಾಡಬೇಕು. ಆಸ್ಪತ್ರೆಗೆ ಮುತ್ತಿಗೆ ಹಾಕಬೇಕು. ದೊಡ್ಡ ಹೋರಾಟವನ್ನೇ ನಡೆಸಿ ನಮಗಾದ ಅನ್ಯಾಯಕ್ಕೆ ನ್ಯಾಯ ದೊರಕಿಸಿಕೊಳ್ಳಬೇಕು- ಎಂಬಿತ್ಯಾದಿ ಮಾತುಗಳನ್ನಾಡಿದನೇ ಹೊರತು ಸದ್ಯ ನಿಂತಿರುವ ಗರ್ಭವನ್ನು ಉಳಿಸಿಕೊಳ್ಳುವುದೋ, ತೆಗೆಸಿಕೊಳ್ಳುವುದೋ ಎಂಬುದನ್ನು ಸುನೀಲ ಹೇಳಲಿಲ್ಲ. ಸುಹಾನಿಗೆ ಯಾಕೋ ಅವನ ಆವೇಶಭರಿತ ಮಾತುಗಳು ಸಹ್ಯವೆನಿಸಲಿಲ್ಲ. ಇವನಂತೂ ಇಲ್ಲದ ಅವಾಂತರಗಳನ್ನ ಸೃಷ್ಟಿಸಿಕೊಂಡು ದೇಶ ಸಂಚರಿಸುತ್ತಾ ಇದ್ದುಬಿಡೋನು. ಇಲ್ಲಿ ಮಕ್ಕಳನ್ನು ಉಡಿಯಲ್ಲಿಟ್ಟುಕೊಂಡು ಅನುಸೂಯಾಳಿಗೆ ಹೊಂದಿಕೆಯಾಗಿ ಬಾಳುವೆ ಮಾಡಬೇಕಾದೋಳು ನಾನು. ಹೀಗಿರುವಾಗ ಅವಳ ಮತ್ತು ನನ್ನ ನಡುವೆ ಚಂದದೊಂದು ಬಾಂಧವ್ಯ ಏರ್ಪಡುವ ಅಗತ್ಯವಿದೆ. ಇಂಥದ್ದೊಂದು ಬಾಂಧವ್ಯಕ್ಕೆ ಹೊಟ್ಟೆಯಲ್ಲಿರುವ ಈ ಜೀವ ಬುನಾದಿ ಹಾಕಿಬಿಡಲಿ ಅಂದುಕೊಳ್ಳುತ್ತಾ ಮನೆಯನ್ನ ಸಮಿಪೀಸಿದ್ದಳು.

ಮನೆಯ ಪಡೆಸಾಲಿಯಲ್ಲಿ ಆಡುತ್ತಿದ್ದ ಗೌತಮಿ, ತಾನ್ಯಾರನ್ನ ‘ಇವುತರ ಮಾರ್ಯಾಗ ಮದ್ದರೀಲಿ. ನನ್ನಗೆಷ್ಟದಿನ ಜೋಡಾಗ್ಯಾವು ಇವು. ಸುಮ್ಮಿರ್ತಿರೋ ಇಲ್ಲೋ’ ಅಂತ ಒದರಾಡುತ್ತಾ ಕುಳಿತಿದ್ದ ಅನಸೂಯಾ ಸುಹಾನಿಯನ್ನ ಕಂಡವಳೇ ‘ಏನಂದ್ರವಾ?’ ಅಂದಳು.

ಈಗಾಗಲೇ ಮಾನಸಿಕ ಸ್ಥಿರತೆ ಕಾಯ್ದುಕೊಂಡಿದ್ದ ಸುಹಾನಿ ಇರವುದೆಲ್ಲವನ್ನೂ ತಾನಂದುಕೊಂಡಂತೆ ನಿರರ್ಗಳವಾಗಿ ಒದರಿಬಿಟ್ಟಳು. ಆಗ ಅನಸೂಯಾ ಮೂಲೆಯಲ್ಲಿದ್ದ ಕಡ್ಡಿಕಸಬರಿಗೆಯ ನಾಲ್ಕೈದು ಕಡ್ಡಿ ತೆಗೆದು, ಅದರ ತುದಿ ಸುಟ್ಟು ‘ನರಿಕಣ್ಣು, ನಾಯಿಕಣ್ಣು.. ಮನುಸೇರ ಕಣ್ಣು..’ ಮತ್ತಿನ್ನೇನೋ ಅನ್ನುತ್ತಾ ಮುಖಕ್ಕೆ ಮೂರುಬಾರಿ ನಿವಾಳಿಸಿ ಥೂ.. ಥೂ.. ಥೂ.. ಅಂತ ಮೂರು ಬಾರಿ ಉಗುಳಿ ನೆದರು ತೆಗೆದಳು. ತನ್ನ ಒರಟುಒರಟಾದ ಕೈಗಳಿಂದ ಅವಳ ಎರಡೂ ಕೋಮಲ ಗಲ್ಲಗಳನ್ನು ಸವರಿ ನೆಟಿಗೆ ಮುರಿದಳು. ಖುದ್ದು ತಾನೇ ಗಟ್ಟಿ ಹಾಲಿನಲ್ಲಿ ಚಹಾಮಾಡಿ ಉದ್ದನೆಯ ಲೋಟಕ್ಕೆ ಸೋಸಿ ಆಕೆಯ ಕೈಗಿಟ್ಟಳು. ಅತ್ತೆಯ ಈ ಪ್ರಮಾಣದ ಅಕ್ಕರೆಯನ್ನು ಕಂಡು ಸುಹಾನಿ ದಂಗುಬಡಿದಿದ್ದಳು. ಇಷ್ಟು ದಿನ ಆಕೆ ನಿಗ್ರಹಿಸಿ ನೀರು ಹೊಯ್ದಿದ್ದ ಆ ಎಲ್ಲ ಘಟನೆಯ ನೋವು ಈ ಸಂತಸದ ಸೆಳುವಿನಲ್ಲಿ ಕೊಚ್ಚಿಕೊಂಡು ಹೋಗಿತ್ತು. ಆ ಚಹಾದ ಪ್ರತಿಯೊಂದು ಬಿಂದುವೂ ಅಮೃತವೇ ಎಂದು ಭಾವಿಸಿ ಒಂದಿನಿತೂ ಬಿಡದಂತೆ ಪ್ರತಿ ಗುಟಕನ್ನು ಸವಿದು ಸಂಭ್ರಮಿಸಿದಳು.

‘ಟ್ಯೂಬಲ್ ಲಿಗೇಶನ್ ಎನ್ನುವುದು ಗರ್ಭಾವಸ್ಥೆಯನ್ನು ತಡೆಗಟ್ಟಲು ಮಹಿಳೆಯರ ಫಾಲೋಪಿಯನ್ ಟ್ಯೂಬ್ಗಳನ್ನ ನಿರ್ಬಂಧಿಸುವ ಶಸ್ತ್ರಚಿಕಿತ್ಸೆಯ ಕ್ರಿಯೆಯಾಗಿದೆ. ಆ ಟ್ಯೂಬ್ಗಳನ್ನ ದಾರದಿಂದ ಕಟ್ಟಬಹುದು, ಬ್ಯಾಂಡ್ ಅಥವಾ ಕ್ಲಿಪ್ಗಳಿಂದ ಬಂಧಿಸಬಹುದು, ಕಾಟರೈಸ್ಡ್ ವಿದ್ಯುತ್ ಪ್ರವಾಹದಿಂದ ಮುಚ್ಚಬಹುದು. ಆದರೆ ಪ್ರತಿಶತ ನೂರರಷ್ಟು ಇದು ಶಾಶ್ವತ ಜನನ ನಿಯಂತ್ರಣ ಚಿಕಿತ್ಸೆ ಎಂದು ಪರಿಗಣಿಸಲಾಗದು. ಇದು ವೈದ್ಯರ ಅಸಮರ್ಪಕ ಚಿಕಿತ್ಸೆಯಾಚೆಗೂ ಮಹಿಳೆಯರು ಚಿಕ್ಕವಯಸ್ಸು, ಪುರುಷ ಮತ್ತು ಮಹಿಳೆಯರ ಉತ್ತಮ ಆರೋಗ್ಯವೂ ಈ ಶಸ್ತ್ರಚಿಕಿತ್ಸೆಯ ವೈಫಲ್ಯಕ್ಕೆ ಕಾರಣವಾಗಬಹುದು’ ಎಂದು ಸುನೀಲ ಅಂತರ್ಜಾಲದ ನೆರವಿನಿಂದ ತೆಗೆದ ಈ ಮಾಹಿತಿಯನ್ನು ಸುಹಾನಿಗೆ ಕಳುಹಿಸಿ ತಾನು ಹೋರಾಟ ಮಾಡಲಾಗದ ಅಸಹಾಯಕತೆಯನ್ನ ಆಕೆಯ ಮುಂದಿಟ್ಟಿದ್ದ. ಇದರಿಂದ ಆಕೆ ಮತ್ತಷ್ಟು ಪುಳಕಿತಳಾದಳು.

ಸುಹಾನಿಗೆ ಎರಡು ತಿಂಗಳು ಮುಗಿದು ಮೂರು ತುಂಬುವ ಹೊತ್ತಿಗೆ ಸುನೀಲ ಮನೆಗಾಗಮಿಸಿದ್ದ. ಮನೆ ಮೊದಲಿನಂತಿರಲಿಲ್ಲ. ಗೌತಮಿ, ತಾನ್ಯಾ, ಅನಸೂಯಾ, ಸುಹಾನಿ ಎಲ್ಲರೂ ಅನ್ಯೋನ್ಯತೆಯಿಂದಿದ್ದು ಸಂತಸದಿಂದ ಜೀವನ ಸವೆಸುತ್ತಿದ್ದರು. ಅತ್ತೆ-ಸೊಸೆಯ ಸದ್ಯದ ಹೊಂದಾಣಿಕೆಯಂತೂ ಸುನೀಲನನ್ನ ದಂಗುಬಡಿಸಿತ್ತು. ಈ ವಾತಾವರಣ ಎಂದೂ ಕಲಕದಂತಿರಲಿ ಎಂದು ಆಶಿಸಿ ತಾನು ರೆಕ್ಕೆಪುಕ್ಕ ಬಲಿತ ಹಕ್ಕಿಯಂತೆ ದೇಶ ಸಂಚರಿಸುತ್ತಾ ಹೊರಟುಬಿಟ್ಟ.

ಅನಸೂಯಾಯಂತೂ ಈ ಬಾರಿ ಸೊಸೆ ಗಂಡು ಮಗವನ್ನು ಹೆತ್ತೇ ಹೆರುತ್ತಾಳೆಂದು ಕನಸಿನಗೂಡು ಕಟ್ಟಿಬಿಟ್ಟಿದ್ದಳು. ಗಂಡು ಹುಟ್ಟಲೆಂದು ದೇವರ-ದಿಂಡರು ಅಂತ ದಾಸಾನುದಾಸನಾಗಿ ಸೇವೆ ಗೈಯ್ಯುವುದನ್ನ ಸುರುವಿಟ್ಟದ್ದಳು. ಮೇಲಾಗಿ ಗಂಡು ಹೆರಲಿರುವ ಗರ್ಭಿಣಿಯರ ಲಕ್ಷಣಗಳ ಮೇಲೆ ಗಮನವಿರಿಸಿದ್ದಳು. ಮುಖದಲ್ಲಿ ಕಾಂತಿ ಮೂಡುವುದು, ಹೊಟ್ಟೆ ಅತಿಯಾಗಿ ಕಾಣದಿರುವುದು, ಬೆಳಗಿನ ಸಮಯದಲ್ಲಿ ವಾಕರಿಕೆ ಅಸ್ವಸ್ತತೆ ಹೆಚ್ಚುವುದು, ಮೂತ್ರವು ಮಂದ ಹಳದಿಯ ವರ್ಣದಲ್ಲಿರುವುದು, ಅಂಗಾಲುಗಳ ಸದಾ ತಂಪಾಗಿರುವುದು- ಇನ್ನಿತ್ಯಾದಿ ಲಕ್ಷಣಗಳನ್ನ ತೌಲನಿಕವಾಗಿ ಸುಹಾನಿಯಲ್ಲಿ ಕಾಣುತ್ತಾ, ಉಹಿಸುತ್ತಾ ತುಸು ಗೆಲುವಾಗುತ್ತಾ ತಾನು ಮಾಡಿರುವ ಆಸ್ತಿಗೆ ಒಬ್ಬ ಹಕ್ಕುದಾರ, ವಂಶೋದ್ಧಾರಕ ಬರುತ್ತಾನೆ ಅಂತೆಲ್ಲಾ ಸಂತಸ ಕಂಡುಕೊಂಡಿದ್ದಳು.

ಹೆರಿಗೆಯ ದಿನಗಳು ಹತ್ತಿರ ಬರುತ್ತಿದ್ದಂತೆ ಸುಹಾನಿಯ ಮೇಲಿನ ಅನಸೂಯಾಳ ಪ್ರೀತಿ ಪರಾಕಾಷ್ಟೆ ತಲುಪಿತ್ತು. ಅತ್ತೆಯ ಆ ಪರಿಯ ಕಕ್ಕುಲಾತಿಗೆ ಸುಹಾನಿಯ ಎದೆಯ ಬಡಿತ ಜೋರಾಗಿತ್ತು. ಅತ್ತೆಯ ಅಪೇಕ್ಷೆಯಂತೆ ಗಂಡು ಮಗುವೇ ಆಗಲಿ ದೇವರೆ ಎಂದು ತಾನು ನಾಸ್ತಿಕಳಾದರೂ ಆಸ್ತಿಕರಂತೆ ವರ್ತಿಸಿದ್ದಳು. ಆ ಹೆರಿಗೆಯ ದಿನ ಬಂದೇ ಬಿಟ್ಟಿತು. ಸಹಜ ಹೆರಿಗೆಯೂ ಆಯಿತು. ಆದರೆ ಮಗು ಮಾತ್ರ ಗಂಡಾಗಿರಲಿಲ್ಲ! ಡಾಕ್ಟರ್ ಸುನೀಲನ್ನ ಮುಂದೆಕೂರಿಸಿಕೊಂಡು ಮಕ್ಕಳ ಆಪರೇಶನ್ಗೆ ಸಹಿ ಹಾಕಿಸಿಕೊಳ್ಳುವಾಗ ಎಷ್ಟಮಕ್ಳ ನಿಮಗ? ಅಂತ ಕೇಳಿದ್ರು.
‘ಆಗಲೇ ಎರಡು ಹೆಣ್ಣಿವೆ ಇದು ಮೂರನೇಯದ್ದು’ ಅಂದ.
ಡಾಕ್ಟ್ರು ಹಣೆಗೆ ಕೈ ಹಚ್ಚಿಕೊಂಡು ‘ಆಯ್ತು, ಮೂರೇ ಸಾಕು’ ಅಂದ. ಸುನೀಲ ಗೋಣು ಅಲುಗಾಡಿಸಿದ.

ಸುಹಾನಿಗೆ ಶಸ್ತ್ರಚಿಕಿತ್ಸೆ ಮುಗಿದು ಪ್ರಜ್ಞೆ ಬಂದಾಗ ಸುನೀಲ, ಗೌತಮಿ, ಎದುರಿಗಿದ್ದರು. ಸುನೀಲ ಕೈಕಟ್ಟಿಕೊಂಡು ನಿಂತಿದ್ದ. ಗೌತಮಿ ಯಾವುದೋ ಹಣ್ಣನ್ನು ಸುಲಿಯುತ್ತಿದ್ದಳು. ಸುಹಾನಿ ಸುತ್ತಲೂ ನೋಡಿ ಗೊಗ್ಗರು ದನಿಯಲ್ಲಿ ‘ಅತ್ತಿಯಾರ?’ ಅಂದಳು. ಅನಸೂಯಾ ತಾನ್ಯಾಳನ್ನು ಕಂಕುಳಲ್ಲಿಟ್ಟುಕೊಂಡು ಅನತಿ ದೂರದಲ್ಲಿದ್ದ ಕಿಟಕಿಯ ಮುಂದೆ ನಿಂತು ಏನೇನೋ ತೋರಿಸುತ್ತಾ ಆಟವಾಡಿಸುತ್ತಿದ್ದನ್ನು ಸುನೀಲ ಕೈ ಮಾಡಿ ತೋರಿಸಿ ಆಕೆಯ ಗಮನಕ್ಕೆ ತಂದ. ಆಗ ಆಕೆಯ ಕಣ್ಣೀರು ಕೆನ್ನಗಿಳಿಯುತ್ತಿದ್ದವು. ಅದನ್ನು ಕಂಡು ಸುನೀಲ ತಕ್ಷಣವೇ ಕಣ್ಣೀರು ಒರೆಸಿ ‘ಅಳಬ್ಯಾಡ. ನಾವಿಬ್ಬರೂ ದೇಶಕ್ಕ ಒಳ್ಳೇದ ಮಾಡೀವಿ. ಲಿಂಗ ಸಮತೋಲನ ಕಾಯ್ದುಕೊಳ್ಳಕ ನೆರವು ಆಗೀವಿ’ ಎಂದು ರಮಿಸಿ ಆಕೆಯ ಹಣೆಗೆ ಒಂದು ಬೆಚ್ಚನೆಯ ಮುತ್ತಿಟ್ಟ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.