ಹಾಂಗ್‌ಝೌ: ಭಾರತ ಪುರುಷ ಮತ್ತು ಮಹಿಳಾ ಸ್ಕ್ವಾಷ್ ತಂಡಗಳು ಸುಲಭ ಗೆಲುವಿನ ಮೂಲಕ ಏಷ್ಯನ್ ಗೇಮ್ಸ್‌ನಲ್ಲಿ ಶುಭಾರಂಭ ಮಾಡಿದವು.
ಮಹಿಳಾ ತಂಡದವರು 3–0 ಯಿಂದ ಪಾಕಿಸ್ತಾನ ತಂಡವನ್ನು ಮಣಿಸಿದರೆ, ಪುರುಷರು ಸಿಂಗಪುರ ಮತ್ತು ಕತಾರ್ ತಂಡಗಳ ವಿರುದ್ಧ ಇದೇ ಅಂತರದಿಂದ ಜಯ ಸಾಧಿಸಿದರು.
ಮಹಿಳೆಯರ ವಿಭಾಗದ ಪಂದ್ಯದ ಮೊದಲ ಸಿಂಗಲ್ಸ್‌ನಲ್ಲಿ 15 ವರ್ಷದ ಅನಾಹತ್ 11-6, 11-6, 11-3 ರಿಂದ ಪಾಕಿಸ್ತಾನದ ಸಾದಿಯಾ ಗುಲ್ ಅವರನ್ನು ಮಣಿಸಿ ಭಾರತಕ್ಕೆ ಮುನ್ನಡೆ ತಂದಿತ್ತರು.
ಅನುಭವಿ ಆಟಗಾರ್ತಿ ಜೋಶ್ನಾ ಚಿಣ್ಣಪ್ಪ 11-2, 11-5, 11-7 ರಿಂದ ನೂರ್ ಉಲ್ ಹುದಾ ಸಾದಿಕ್ ವಿರುದ್ದ; ತನ್ವಿ ಖನ್ನಾ 11–3, 11–6, 11–2 ರಿಂದ ನೂರ್ ಉಲ್ ಐನ್ ಇಜಾಜ್ ವಿರುದ್ಧ ಗೆದ್ದರು.
ಪುರುಷರ ವಿಭಾಗದಲ್ಲಿ ಸಿಂಗಪುರ ವಿರುದ್ಧದ ಪಂದ್ಯದಲ್ಲಿ ಹರೀಂದರ್ ಪಾಲ್ ಸಂಧು, ಸೌರವ್ ಘೋಷಾಲ್ ಮತ್ತು ಅಭಯ್ ಸಿಂಗ್ ಅವರು ತಮ್ಮ ಎದುರಾಳಿಗಳನ್ನು ಮಣಿಸಿದರು. ಸೌರವ್ ಮತ್ತು ಅಭಯ್ ನೇರ ಗೇಮ್‌ಗಳಿಂದ ಗೆದ್ದರೆ, ಹರೀಂದರ್ ಒಂದು ಗೇಮ್‌ಅನ್ನು ಎದುರಾಳಿಗೆ ಬಿಟ್ಟುಕೊಟ್ಟರು.