ನಿಸರ್ಗ ಸೌಂದರ್ಯದ ಕಲಾಕೃತಿ

7

ನಿಸರ್ಗ ಸೌಂದರ್ಯದ ಕಲಾಕೃತಿ

Published:
Updated:

ಕಲೆ ಹಾಗೂ ಪ್ರಕೃತಿಗೆ ಹತ್ತಿರದ ಸಂಬಂಧ. ಪ್ರಕೃತಿ ಸೌಂದರ್ಯವು ಚಿತ್ರ ಕಲಾವಿದರಿಗೆ ಸದಾ ಸ್ಫೂರ್ತಿ. ಸಾಮಾನ್ಯ ಜನರು ಪ್ರಕೃತಿಯ ಸೌಂದರ್ಯವನ್ನು ಕಣ್ತುಂಬಿಕೊಂಡರೆ, ಕಲಾವಿದರು ತಮ್ಮ ಬಣ್ಣ, ಕುಂಚಗಳಿಂದ ಅದನ್ನು ಅದ್ಭುತ ಕಲಾಕೃತಿಯನ್ನಾಗಿಸುತ್ತಾರೆ. ಜಕ್ಕೂರಿನ ಚೇತನಾ ರವಿ ಅವರ ಕಲಾಕೃತಿಗಳಲ್ಲಿ ಪ್ರಕೃತಿ, ಹೂವು, ಮರ– ಗಿಡಗಳು, ಪ್ರಾಣಿ, ಪಕ್ಷಿಗಳ ಸೌಂದರ್ಯವನ್ನು ಕಾಣಬಹುದು. ಅವರ ಕುಂಚದಲ್ಲಿ ಪ್ರಕೃತಿ ಸೌಂದರ್ಯವನ್ನು ಅನಾವರಣಗೊಳಿಸುವ ಕಲಾಕೃತಿಗಳು ಭಿನ್ನವಾಗಿದ್ದು, ಮನಸೆಳೆಯುತ್ತವೆ. 

ಯುಬಿ ಸಿಟಿಯ ಸಬ್‌ಲೈಮ್‌ ಗ್ಯಾಲರಿಯಲ್ಲಿ ಚೇತನಾ ರವಿ ಅವರ ಕಲಾಕೃತಿಗಳ ಪ್ರದರ್ಶನ ‘ಹ್ಯೂಸ್‌ ಆಫ್‌ ಸ್ಪೈಕ್ಸ್‌’ ನಡೆಯುತ್ತಿದೆ. ಅಕ್ರಿಲಿಕ್‌, ತೈಲವರ್ಣ, ಕ್ಯಾನ್ವಾಸ್‌ ಹೀಗೆ ವಿವಿಧ ಕಲಾಪ್ರಕಾರಗಳಲ್ಲಿ ಇವರು ಚಿತ್ರಗಳನ್ನು ಬಿಡಿಸಿದ್ದಾರೆ.

ಪುರಾತನ ದೇವಾಲಯಗಳಲ್ಲಿನ ಶಿಲಾಬಾಲಿಕೆಗಳ ಚಿತ್ರವನ್ನೂ ಚೇತನಾ ಕುಂಚದಲ್ಲಿ ಬಿಡಿಸಿದ್ದು, ಬಾಲಿಕೆ ರೂಪ ಸಹಜ ಸೌಂದರ್ಯದಿಂದ ಆಕರ್ಷಿಸುತ್ತದೆ. ಸುರುಳಿ ಆಕೃತಿಯಲ್ಲಿ ಬೇರೆ ಬೇರೆ ಪದರಗಳಲ್ಲಿ ಯುವತಿಯ ಮುಖಭಾವವನ್ನು ಚಿತ್ರಿಸಿದ್ದರೆ, ಬೃಹದಾದ ಮರದ ಬೇರಿನಡಿಯಲ್ಲಿ ಮಗುವಿನ ಚಿತ್ರವು ‘ತನಗೂ ಜೀವವಿದೆ, ತನ್ನನ್ನು ಮಗುವಿನಂತೆ ಜೋಪಾನ ಮಾಡಿ’ ಎಂಬ ಸಂದೇಶವನ್ನು ಮರ ರವಾನಿಸುವಂತೆ ಭಾಸವಾಗುತ್ತದೆ. ಮರದ ಮೇಲೆ ಗರಿಬಿಚ್ಚಿ ಕುಳಿತಿರುವ ನವಿಲನ್ನು ಕಂಡು, ಯುವತಿಯೂ ಅದರಂತೆ ನೃತ್ಯ ಮಾಡುವುದು, ಅಕ್ಕಪಕ್ಕ ನಿಂತ ಕಪ್ಪು – ಬಿಳಿ ಹೋರಿಗಳಲ್ಲಿ ಒಂದರ ಮುಖದಲ್ಲಿ ಕೋಪ, ಮತ್ತೊಂದರ ಮುಖದಲ್ಲಿ ಶಾಂತ ಸ್ವಭಾವವನ್ನು ಬಿಡಿಸಿರುವ ಕಲಾಕೃತಿಗಳು ವಿಭಿನ್ನವಾಗಿವೆ. ಕೆಲ ಕಲಾಕೃತಿಗಳು ಅಮೂರ್ತ ರೂಪದಲ್ಲಿದ್ದು, ನೋಡುಗರನ್ನು ದೃಶ್ಯ ಕಲಾಲೋಕಕ್ಕೆ ಕೊಂಡೊಯ್ಯುತ್ತವೆ. ಲ್ಯಾಂಡ್‌ಸ್ಕೇಪ್‌, ರಿಯಾಲಿಸ್ಟಿಕ್‌ ಪೇಟಿಂಗ್‌ಗಳೂ ಇಲ್ಲಿವೆ. 

ಚೇತನಾ ರವಿ ಅವರಿಗೆ ಬಾಲ್ಯದಿಂದಲೇ ಚಿತ್ರಕಲೆ ಮೇಲೆ ಆಸಕ್ತಿ. ಆದರೆ 10ನೇ ತರಗತಿ ನಂತರ ಓದಿನ ನಡುವೆ ಅವರಿಗೆ ಈ ಹವ್ಯಾಸವನ್ನು ಮುಂದುವರಿಸಲಾಗಲಿಲ್ಲ. 10–15 ವರ್ಷಗಳ ನಂತರ ಗುಲ್ಬರ್ಗದಲ್ಲಿದ್ದಾಗ ಆಚಾನಕ್ಕಾಗಿ ಅಲ್ಲಿನ ಫೈನ್‌ ಆರ್ಟ್ಸ್‌ ಕಾಲೇಜಿಗೆ ಕಾರ್ಯಕ್ರಮವೊಂದರ ಉದ್ಘಾಟನೆಗೆ ಹೋಗಿದ್ದರು. ಆಗ ತಾನೂ ಏಕೆ ಚಿತ್ರಕಲೆಯನ್ನು ಮುಂದುವರಿಸಬಾರದು ಎಂದುಕೊಂಡರಂತೆ. ಅಲ್ಲಿಂದ ಪುನಃ ಕುಂಚವನ್ನು ಕೈಗೆತ್ತಿಕೊಂಡು ಚಿತ್ರಕಲೆಯಲ್ಲಿ ತೊಡಗಿಸಿಕೊಂಡರು. ಸದ್ಯ ಜಕ್ಕೂರಿನಲ್ಲಿ ವಾಸವಿರುವ ಅವರು ಬಿಡುವಿನ ಅವಧಿಯನ್ನು ಚಿತ್ರಕಲೆಗಾಗಿ ಮೀಸಲಿಟ್ಟಿದ್ದಾರೆ. ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಎರಡು ಬಾರಿ ಅವರ ಕಲಾಕೃತಿಗಳ ಪ್ರದರ್ಶನವಾಗಿವೆ. 

‘ನನ್ನ ಎಲ್ಲಾ ಚಿತ್ರಗಳಿಗೂ, ಪ್ರಕೃತಿ ಹಾಗೂ ಸುತ್ತಮುತ್ತ ನಡೆಯುವ ಸಂಗತಿಗಳೇ ಪ್ರೇರಣೆ. ಮರ– ಗಿಡ, ಹೂವುಗಳು ಹೇಗೆ ನನ್ನನ್ನು ಆಕರ್ಷಿಸುತ್ತವೆಯೋ ಹಾಗೇ ಕಾರು, ಗಿಟಾರ್‌, ಶಿಲ್ಪಕಲಾಕೃತಿಗಳು ಸಹ ನನ್ನ ಕಲಾಕೃತಿಗೆ ವಸ್ತುಗಳಾಗುತ್ತವೆ’ ಎನ್ನುತ್ತಾರೆ ಚೇತನಾ. 

ಅವರ ಎಲ್ಲಾ ಚಿತ್ರಗಳಲ್ಲೂ ಅವರದೇ ಆದ ಶೈಲಿ ಹಾಗೂ ಪ್ರಯೋಗಶೀಲತೆಯನ್ನು ಕಾಣಬಹುದು. ನೀಲಿ, ಕೇಸರಿ, ಕೆಂಪು, ಹಳದಿ ಬಣ್ಣಗಳನ್ನು ಇವರ ಚಿತ್ರಗಳಲ್ಲಿ ಹೆಚ್ಚು ಬಳಸಿದ್ದಾರೆ. ಹಾಗೇ ದಟ್ಟಬಣ್ಣಗಳು ಹಾಗೂ ಅದರ ಬೇರೆ ಬೇರೆ ಛಾಯೆಗಳನ್ನು ಬಳಸಿ ಚಿತ್ರದ ತೀವ್ರತೆಯನ್ನು ಹೆಚ್ಚಿಸಿದ್ದಾರೆ.

* ಕಲಾವಿದರು: ಚೇತನಾ ರವಿ
* ಸ್ಥಳ: ಸಬ್‌ಲೈಮ್‌ ಗ್ಯಾಲರಿ, ಯುಬಿ ಸಿಟಿ, ವಿಠಲ್‌ ಮಲ್ಯ ರಸ್ತೆ. 
* ಸಮಯ: ಬೆಳಿಗ್ಗೆ 11ರಿಂದ ಸಂಜೆ 8
* ಕೊನೆಯ ದಿನಾಂಕ: ಅಕ್ಟೋಬರ್‌ 16

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !