ಕಾಣದ್ದನ್ನು ಕಾಣಿಸುವ ಕಣ್ಣು

7

ಕಾಣದ್ದನ್ನು ಕಾಣಿಸುವ ಕಣ್ಣು

Published:
Updated:

ಪ್ರಶಾಂತ ಪರಿಸರ. ತಣ್ಣಗೆ ಹರಿಯುತ್ತಿರುವ ನದಿ. ನದಿಗೆ ಅಂಟಿಕೊಂಡಿರುವ ಮರ, ಬಳ್ಳಿ, ಕಲ್ಲು ಬಂಡೆಗಳು, ದಡ. ಆಗಸ ಸ್ವಚ್ಛಂದವಾಗಿದೆ. ಈ ಎಲ್ಲವೂ ಯಾವುದೋ ಒಂದನ್ನು ಕಾಯುತ್ತಿವೆ. ಏನೋ ಒಂದು ಘಟಿಸಲಿದೆ. ಆಕಾಶವೂ ಅಲ್ಲಿಂದನೇ ಎಲ್ಲವನ್ನು ಗಮನಿಸುತ್ತಿದೆ; ತಂದೆಯಂತೆ!

ಹೀಗೆ ನಮ್ಮೊಂದಿಗೆ ಸಂವಹಿಸುವ ಹಲವಾರು ಚಿತ್ರಗಳು ಕಂಡದ್ದು ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ. ಇದೇ 15 ವರೆಗೆ ಇಲ್ಲಿ ‘ಸೀ ದಿ ಅನ್ಸೀನ್‌’ ಚಿತ್ರಕಲಾ ಪ್ರದರ್ಶನ ನಡೆಯಲಿದೆ. ಮೂವರು ಕಲಾವಿದರ ಚಿತ್ರಗಳು ಇಲ್ಲಿ ಪ್ರದರ್ಶನಗೊಂಡಿವೆ; ಕೆ.ಮನೋ, ಆಶಾ ಭಟ್‌, ಪ್ರತಿಮಾ ಕುಮಾರ್‌.    

ಮೇಲೆ ವಿವರಿಸಿರುವ ಚಿತ್ರ ಕೆ. ಮನೋ ಅವರದ್ದು. ಮನೋ ಅವರ ಲ್ಯಾಂಡ್‌ಸ್ಕೇಪ್‌ ಚಿತ್ರಗಳನ್ನು  ಪ್ರದರ್ಶನದಲ್ಲಿ ಇಡಲಾಗಿದೆ. ಇವೆಲ್ಲವೂ ಅಮೂರ್ತ ಚಿತ್ರಗಳು. ‘ಅಮೂರ್ತ ಚಿತ್ರಗಳು ನಮಗೆ ಅರ್ಥವಾಗುವುದಿಲ್ಲ ಎಂದು ಹಲವರು ಹೇಳುತ್ತಾರೆ. ಈ ಚಿತ್ರಗಳೇ ಹಾಗೆ. ಈ ಚಿತ್ರಗಳು ಚಿತ್ರಕಾರನ ಭಾವನೆಗಳ ಒಟ್ಟು ಮೊತ್ತ. ಎಲ್ಲ ಚಿತ್ರಗಳೂ ಹಾಗೆಯೇ. ಆದರೆ, ಬೇರೆ ಚಿತ್ರ ಪ್ರಕಾರಗಳಿಗೆ ಒಂದು ನಿರ್ದಿಷ್ಟ ಗುರಿ ಇರುತ್ತದೆ. ಈ ಅಮೂರ್ತ ಚಿತ್ರಗಳು ನಮ್ಮನ್ನು (ಚಿತ್ರಕಾರ) ಅದರೊಟ್ಟಿಗೆ ತಾವೇ ಎಳೆದುಕೊಂಡು ಹೋಗುತ್ತವೆ. ಚಿತ್ರಗಳ ಬಣ್ಣಗಳ ನಿರ್ಧಾರವೂ ಹಾಗೆ. ನಮ್ಮ ಭಾವನೆಗಳ ಮೇಲೆ ಅವಲಂಬಿತ. ಕೋಪವಿದ್ದರೆ ಗಾಢ ಬಣ್ಣಗಳ ಬಳಕೆ ಹೀಗೆ ಬೇರೆ ಬೇರೆ ಭಾವನೆಗಳಿಗೆ ಒಂದೊಂದು ಬಣ್ಣ. ಆದ್ದರಿಂದಲೇ ಇದಕ್ಕೆ ಒಂದೇ ಅರ್ಥ ಎನ್ನುವುದಿಲ್ಲ. ಒಬ್ಬೊಬ್ಬರಿಗೆ ಒಂದೊಂದು ಭಾವವನ್ನು ಈ ಚಿತ್ರಗಳು ದಾಟಿಸುತ್ತವೆ. ಸಾವಧಾನವಾಗಿ ಚಿತ್ರಗಳನ್ನು ನೋಡಬೇಕಷ್ಟೆ’. ಇದು ಮನೋ ಅವರ ಅಭಿಪ್ರಾಯ.

ಹೀಗೆ ಒಂದೊಂದು ಚಿತ್ರ ಒಂದೊಂದು ಭಾವಗಳನ್ನು ಮೂಡಿಸಿ ಒಂದಿಷ್ಟು ಚಿಂತನೆಗೆ ಹಚ್ಚುತ್ತವೆ. ಮನೋ ಅವರು ಸಿವಿಲ್‌ ಎಂಜಿನಿಯರ್‌. ‘ಬಣ್ಣಗಳು ನನ್ನನ್ನು ಸೆಳೆದವು’ ಎನ್ನುವ ಅವರು, ವೃತ್ತಿಪರ ಚಿತ್ರಕಾರರು.  25 ವರ್ಷಗಳಿಂದ ಚಿತ್ರಕಲೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಪೊಟ್ರೇಟ್‌ ಚಿತ್ರಗಳು, ನಿರ್ದಿಷ್ಟ ಥೀಮ್‌ ಇಟ್ಟುಕೊಂಡ ಚಿತ್ರಗಳನ್ನು ಇವರು ಬಿಡಿಸುತ್ತಾರೆ. ಬುದುಕೇ ಅವರ ಚಿತ್ರಗಳಿಗೆ ‍ಪ್ರೇರಣೆ. ಇವರ ಚಿತ್ರಗಳು ಹಲವಾರು ಪ್ರದರ್ಶನಗಳನ್ನು ಕಂಡಿವೆ. ಇವರು ತೈಲವರ್ಣ, ಜಲವರ್ಣ, ಅಕ್ರಲಿಕ್‌ನಲ್ಲಿ ಚಿತ್ರ ಬಿಡಿಸುತ್ತಾರೆ.  

‘ಪ್ರದರ್ಶನಕ್ಕೆ ಬರುವ ಪ್ರತಿಯೊಬ್ಬರಿಗೂ ಪ್ರತಿ ಚಿತ್ರಗಳನ್ನು ವಿವರಿಸುತ್ತೇನೆ. ಗುರು ಇಲ್ಲದೆ ಚಿತ್ರಕಲೆ ಕಲಿಯುತ್ತಿರುವವರಿಗೆ ಈ ಪ್ರದರ್ಶನ ಸಹಾಯವಾಗಬೇಕು ಎನ್ನುವ ದೃಷ್ಟಿಯಿಂದ ಇದನ್ನು ಆಯೋಜಿಸಲಾಗಿದೆ. ಇಲ್ಲಿಗೆ ಬರುವ ಕೆಲವು ಉತ್ಸಾಹಿ ಯುವ ಚಿತ್ರಕಾರರು – ‘ನನ್ನ ಚಿತ್ರಗಳು ಹೆಚ್ಚು ಬೆಲೆಗೆ ಮಾರಾಟವಾಗಬೇಕು. ಜತೆಗೆ ನನ್ನ ಚಿತ್ರಗಳು ಹೆಚ್ಚು ಮಾರಾಟವಾಗಬೇಕು ಎಂದರೆ, ನನ್ನ ಚಿತ್ರಗಳು ಯಾವ ರೀತಿ ಇರಬೇಕು ಎಂದು ಕೇಳುತ್ತಿದ್ದಾರೆ’. ಇದು ಬೇಸರದ ಸಂಗತಿ’ ಎಂದರು.   

ಇನ್ನೊರ್ವ ಕಲಾವಿದೆ ಆಶಾ ಭಟ್‌, ಶಿರಸಿಯವರು. ಮಲೆನಾಡಿನಲ್ಲೇ ಹುಟ್ಟಿ ಬೆಳೆದ ಇವರ ಚಿತ್ರಗಳು ಕಾಡು, ಪ್ರಾಣಿ, ಗ್ರಾಮೀಣ ಭಾಗದ ಜನರ ಜೀವನಶೈಲಿಯ ಕಥೆ ಹೇಳುತ್ತವೆ. ಇವರ ಚಿತ್ರಗಳು ಚಿತ್ರಗಳಿಗಿಂತ ಹೆಚ್ಚು ಛಾಯಾಚಿತ್ರಗಳನ್ನು ಹೋಲುತ್ತದೆ. ರಮ್ಯ ತಾಣಗಳ ಛಾಯಾಚಿತ್ರದಂತೆ ಇವರ ಚಿತ್ರಗಳು ತೋರುತ್ತವೆ. ಅಷ್ಟರ ಮಟ್ಟಿಗೆ ಇವರ ಚಿತ್ರಗಳು ಇಂಚಿಂಚು ವಿವರ ನೀಡುವ ಶಕ್ತಿ ಇವಕ್ಕೆ ಇದೆ. ಜತೆಗೆ, ಚಿತ್ರಗಳು ಅಷ್ಟಕ್ಕೆ ಸೀಮಿತವಾಗುತ್ತವೆ ಕೂಡ. 

ಆಶಾ ಜೈವಿಕತಂತ್ರಜ್ಞಾನದಲ್ಲಿ ಉನ್ನತ ವ್ಯಾಸಂಗ ಮಾಡಿದ್ದಾರೆ. ‘ಚಿತ್ರಗಳಿಗೆ ಜೀವ ತುಂಬುವ ಪ್ರಯತ್ನ ನನ್ನದು. ನನ್ನ ಪರಿಸರಿವೂ ನನ್ನ ಚಿತ್ರಗಳಿಗೆ ಪ್ರೇರಣೆ ನೀಡಿವೆ. ಯಾವುದೇ ಗುರುವಿನಿಂದ ಚಿತ್ರಕಲೆ ಕಲಿತಿಲ್ಲ. ಸ್ವಂತ ಪ್ರಯತ್ನದಿಂದ ರೂಢಿಸಿಕೊಂಡಿದ್ದೇನೆ’ ಎನ್ನುತ್ತಾರೆ ಆಶಾ ಭಟ್‌. ಇವರು ಅಕ್ರಲಿಕ್‌ ಹಾಗೂ ತೈಲ ವರ್ಣಗಳಲ್ಲಿ ಚಿತ್ರ ಬಿಡಿಸುತ್ತಾರೆ.

ಮತ್ತೋರ್ವ ಚಿತ್ರಕಲಾವಿದೆ, ಪ್ರತಿಮಾ ಕುಮಾರ್ ಅವರದೂ ಸಹ ನಿಸರ್ಗವನ್ನು ತಮ್ಮ ಕ್ಯಾನ್‌ವಾಸ್‌ನಲ್ಲಿ ಹಿಡಿದಿಡುವ ಪ್ರಯತ್ನ. ‘ಹೂವುಗಳು, ಶಬ್ದ, ನೃತ್ಯ ಮಾಡುವ ಗಾಳಿ, ಬೆಟ್ಟ ಗುಡ್ಡಗಳು... ಇವು ನಮಗೆ ನಿಜದ ಸಂತೋಷ ಮತ್ತು ಖುಷಿಗಳನ್ನು ನೀಡುತ್ತವೆ. ಇವೇ ನನಗೆ ಪ್ರೇರಣೆ’ ಎನ್ನುತ್ತಾರೆ ಪ್ರತಿಮಾ. ಇವರು ಜಾರ್ಖಂಡ್‌ನ ರಾಂಚಿ ಅವರು. ಇವರು ಪೇಂಟಿಂಗ್‌ ನೈಫ್‌ ಮತ್ತು ಜಲವರ್ಣದಲ್ಲಿ ಚಿತ್ರ ಬಿಡಿಸುತ್ತಾರೆ. ಇವರ ಚಿತ್ರಗಳು ಈ ಇಬ್ಬರಿಗಿಂತೂ ಭಿನ್ನ. ಅಥವಾ ಇಬ್ಬರ ಸಂಯೋಜನೆ ಎನ್ನಬಹುದು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !