ಗುರುವಾರ , ಜೂನ್ 17, 2021
24 °C

ಕಾಷ್ಠಶಿಲ್ಪಿಯ ಕಲಾ ಯಾನ

ಡಾ.ಶಿವರಾಜ ಯತಗಲ್ Updated:

ಅಕ್ಷರ ಗಾತ್ರ : | |

Prajavani

ಲಿಂಗಸುಗೂರಿನ ಕುರುಬರ ಓಣಿಯಲ್ಲಿರುವ ಬೆಣ್ಣಿ ಬಸಪ್ಪನವರದ್ದು ಏಳು ಅಂಕದ ಮನೆ. ಆ ಮನೆಯ ತೊಲೆಗಳ ಮೇಲೆ ಚಿತ್ತಾರಗಳ ಸೊಬಗು ಕಣ್ಸೆಳೆಯುತ್ತದೆ. ಇಪ್ಪತ್ತು ವರ್ಷಗಳ ಹಿಂದೆ ಕಟ್ಟಿದ ಮನೆ ಅದು. ಈ ಪಡಸಾಲೆ ಮನೆಯ ಮರಗೆಲಸ, ಅಂಕಗಳ ಮನೆಗಳಿಗೇ ಮಾದರಿ!

ಮರ(ಕಾಷ್ಠ)ಶಿಲ್ಪ ಕಲಾವಿದ ಕಾಳಪ್ಪ ಬಡಿಗೇರ, ರಾಯಚೂರು ಜಿಲ್ಲೆಯಲ್ಲಿ ಹಲವೆಡೆಗಳಲ್ಲಿ ಇಂಥ ನೂರಾರು ಮನೆಗಳಿಗೆ ಆಕರ್ಷಕವಾಗಿ ಮರಗೆಲಸ ಮಾಡಿಕೊಟ್ಟಿದ್ದಾರೆ. ವಂಶಪಾರ್ಯವಾಗಿ ಮರಶಿಲ್ಪ ಕಲೆ ಇವರಿಗೆ ಕರಗತವಾಗಿದೆ. ‘ಲಿಂಗ್ಸೂರ್ ಸುತ್ತ್ ಮುತ್ತಾ ಮೂರು, ಐದು, ಏಳು ಅಂಕದ ಪಡಸಾಲೆ ಮನೆಗಳಿಗೆ ಮರಗೆಲಸದ ಮಾಡಿದ್ದೀವ್ರಿ. ಈಗೀಗ ತಾರಸಿ ಮನೆ ಹೆಚ್ಚಾದ್ವು ನೋಡ್ರಿ, ನಮ್ ಕೆಲ್ಸ ಕಡಿಮೆಯಾಗೀತ್ರಿ...' ಎಂದು ಕಲಾ ಕೌಶಲ್ಯದ ಏಳುಬೀಳುಗಳನ್ನು ಕಾಳಪ್ಪ ಹೀಗೆ ತೆರೆದಿಡುತ್ತಾರೆ.

ಲಿಂಗಸುಗೂರು ತಾಲ್ಲೂಕಿನ ಕಸಬಾ ಲಿಂಗಸುಗೂರು ಗ್ರಾಮದ ಶಿಲ್ಪ ಕಲಾವಿದ ಕಾಳಪ್ಪ ಬಡಿಗೇರ ಅವರು ಮರಗೆಲಸದ ಕಲೆಯಲ್ಲಿ ಸಿದ್ಧ ಹಸ್ತರು. 70ರ ಹರೆಯದ ಇವರು, ತಮ್ಮ ಕೌಶಲವವನ್ನು ನಾಲ್ವರು ಮಕ್ಕಳಿಗೆ ಧಾರೆ ಎರೆದು, ಕಲಾ ಸೇವೆಯನ್ನು ಮುಂದುವರಿಸಿದ್ದಾರೆ.

ತಂದೆಯೇ ಗುರು
ಕಾಳಪ್ಪ ಅವರ ಕಲೆಗೆ ತಂದೆ ಮಾನಪ್ಪ ಅವರೇ ಗುರು, ಮಾರ್ಗದರ್ಶಕ. ಆರನೇ ತರಗತಿಗೇ ಔಪಚಾರಿಕ ಶಿಕ್ಷಣ ಮೊಟಕಾದರೂ, ಅನೌಪಚಾರಿಕವಾಗಿ ಶಿಲ್ಪಕಲಾ ಶಿಕ್ಷಣ ಮುಂದುವರಿಸಿದರು. ಪಕ್ಕದ ಆಮದಿಯಾಳ ಶಿಲ್ಪಿ ಮೋನಪ್ಪ ಬಡಿಗೇರ ಅವರಿಂದ ಕಲೆಯ ಒಳ ಸುಳಿವುಗಳನ್ನು ಕಲಿತರು.

ಕಾಳಪ್ಪ ಅವರ ನಿರ್ಮಾಣದ ಅಂಕದ ಮನೆಗಳಲ್ಲಿ ‘ತಲ ಬಾಗಿಲು’ವಿನಲ್ಲಿರುವ ಚಿತ್ತಾರಗಳು ಆಕರ್ಷಕ. ಇಲ್ಲಿಯವರೆಗೂ ಅವು ಐದು ಅಂಕಣದ 15 ಪಡಸಾಲೆಗಳನ್ನು ಮೂರು ಅಂಕಣದ 20 ಪಡಸಾಲೆಗಳನ್ನು ನಿರ್ಮಿಸಿದ್ದಾರೆ. ಏಳು ಅಂಕಣದ ಏಳು ಪಡಸಾಲೆಗಳ ಮನೆಗಳು ಇಲ್ಲಿವರೆಗೂ ಅವರು ನಿರ್ಮಿಸಿದ ಅತಿ ದೊಡ್ಡ ಅಂಕದ ಮನೆಗಳು.

‘ನಾವು ಕಣ್ಣಳತೆಯಲ್ಲೇ ಡಿಸೈನ್ ಮಾಡ್ಕೊತ್ತೀವಿ. ಮನೆ ಕಟ್ಟವುವವರನ್ನು ಎಂಥ ಡಿಸೈನ್ ಬೇಕು ಅಂತ ಕೇಳ್ತೀವಿ. ಅವರು ಹೇಳಿದಂಗೆ ಮಾಡಿಕೊಡುತ್ತೇವೆ’ ಎನ್ನುತ್ತಾರೆ ಕಾಳಪ್ಪ.

ದೇವರ ಮೂರ್ತಿಗಳು
ಕಾಳಪ್ಪ ಅವರು ಮರದಲ್ಲಿ ಕೆತ್ತಿರುವ ದೇವತಾ ಮೂರ್ತಿಗಳಂತೂ ಬಹಳ ಅಂದವಾಗಿವೆ. ಕಾಳಪ್ಪ ಅವರ ಕೈಯಿಂದ ಅರಳಿದ ಅದೆಷ್ಟೋ ದೇವರ ಮೂರ್ತಿಗಳು ನಾಡಿನ ಮೂಲೆ ಮೂಲೆಯ ಹಳ್ಳಿ, ಪಟ್ಟಣಗಳಲ್ಲಿ ಪೂಜಿಸಲ್ಪಡುತ್ತಿವೆ.

ಮೂರೂವರೆ ಅಡಿಯಿಂದ ಏಳು ಅಡಿ ಎತ್ತರದ ಹಾಗೂ ನಾಲ್ಕು ಅಡಿ ಅಗಲವುಳ್ಳ ಸಾಗುವಾನಿ, ರತ್ನಮಂಡಲ ಇತ್ಯಾದಿ ಬಗೆಯ ಕಟ್ಟಿಗೆಯಿಂದ ಸುಮಾರು 30 ಮೂರ್ತಿಗಳನ್ನು ಕೆತ್ತಿದ್ದಾರೆ. ಅವರ ಹುಟ್ಟೂರು ಕಸಬಾ ಲಿಂಗಸುಗೂರಿನ ಮಂದಿ ದುರ್ಗಾದೇವಿಯ ಮೂರ್ತಿ, ಅಂತರಗಂಗಿ ದುರಗಮ್ಮ ಮೂರ್ತಿಗಳು ಇವರ ಕಲಾ ಕೌಶಲ್ಯದ ಕೀರ್ತಿಗೆ ಸಾಕ್ಷಿಯಾಗಿವೆ.

ಅಡ್ಡಪಲ್ಲಕ್ಕಿ– ರಥಗಳ ಆಕರ್ಷಣೆ
ಸಹ ಶಿಲ್ಪಿಗಳೊಂದಿಗೆ ರಥಗಳ ನಿರ್ಮಾಣ ಮಾಡಿದ್ದಾರೆ. ಕಾಳಪ್ಪ. ಆ ರಥಗಳಲ್ಲಿ, ಆಮದಿಹಾಳದ ನೀಲಕಂಠೇಶ್ವರ, ಬೆಂಡೋಣಿಯ ಶಂಕರಲಿಂಗೇಶ್ವರ, ಐತಿಹಾಸಿಕ ಮುದಗಲ್ ಪಟ್ಟಣದ ನೀಲಕಂಠೇಶ್ವರ ರಥಗಳು ಪ್ರಮುಖವಾಗಿವೆ. ‌

ದೇವರ ಉತ್ಸವಕ್ಕೆ ಬಳಸುವ ಅಡ್ಡ ಪಲ್ಲಕ್ಕಿಗಳನ್ನು ಹೊಸ ಹೊಸ ವಿನ್ಯಾಸದಲ್ಲಿ ಕೆತ್ತನೆ ಮಾಡಿದ್ದಾರೆ. ಇಲ್ಲಿವರೆಗೂ 35ಕ್ಕೂ ಹೆಚ್ಚು ಪಲ್ಲಕ್ಕಿಗಳು ಇವರ ಕೈಯಿಂದ ಅರಳಿವೆ. ಬಹುತೇಕ ಪಲ್ಲಕ್ಕಿಗಳು ಸಾಗುವಾನಿ, ಹೊನ್ನೆ ಮರಗಳಿಂದ ಮಾಡಿರುವಂಥವು.

ಸೌಹಾರ್ದ ಸಂಬಂಧ
ಕೇವಲ ದೇವಸ್ಥಾನವಷ್ಟೇ ಅಲ್ಲ, ಮುಸ್ಲಿಂ ಸಮುದಾಯದ ಪ್ರಾರ್ಥನಾ ಸ್ಥಳಗಳಾದ ಮಸೀದಿಗಳಲ್ಲೂ ಮರಗೆತ್ತನೆ ಮಾಡಿ ಕೊಟ್ಟಿದ್ದಾರೆ. ಈ ಮೂಲಕ ಮುಸ್ಲಿಂ ಬಾಂಧವರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಂಡಿದ್ದಾರೆ.

ಇಂಥ ದೈತ್ಯ ಪ್ರತಿಭೆ ಹಲವಾರು ಶಿಷ್ಯರನ್ನು ತಮ್ಮ ಗರಡಿಯಲ್ಲಿ ಬೆಳೆಸಿದ್ದಾರೆ. ಇವರ ಪುತ್ರ ಯಮನಪ್ಪ ಶಿಲ್ಪಕಲಾ ಕ್ಷೇತ್ರದಲ್ಲಿ ತಂದೆಯ ಹಾದಿಯಲ್ಲೇ ಸಾಗಿದ್ದಾರೆ. ಸದ್ಯಕ್ಕೆ ಉತ್ತರ ಕರ್ನಾಟಕ ಭಾಗದಲ್ಲಷ್ಟೇ ತಮ್ಮ ಕಾರ್ಯಾಚರಣೆ ಮುಂದುವರಿಸಿದ್ದಾರೆ. ‘ರಾಜ್ಯದ ಯಾವ ಭಾಗದಲ್ಲಿ ಕರೆದರೂ ಹೋಗಿ ಕೆಲಸ ಮಾಡುತ್ತೇವೆ’ ಎಂದು ಉತ್ಸಾಹ ತೋರುತ್ತಾರೆ ಕಾಳಪ್ಪ.

ಪ್ರಶಸ್ತಿ – ಪುರಸ್ಕಾರ
ಕಾಳಪ್ಪನವರ ಸಾಧನೆ ಗುರುತಿಸಿ ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ‘ಶಿಲ್ಪಕಲಾ ಸಂಭ್ರಮ-20’ ಗೌರವ, ಕೋಲ್ಕತ್ತಾದ ಅಖಿಲ ಭಾರತೀಯ ವಿಶ್ವಕರ್ಮ ಮಹಾಸಭಾ ಸಂಸ್ಥೆಯಿಂದ ‘ಪ್ರತಿಭಾಪುರಸ್ಕಾರ’ ಲಭ್ಯವಾಗಿದೆ. 

ಸಗರನಾಡಿನ ಜಾನಪದ ಕಲೆಯ ರಸಗ್ರಹಣ ಶಿಬಿರದ ಸಂಚಾಲಕರಾಗಿ, ರಾಷ್ಟ್ರೀಯ, ರಾಜ್ಯಮಟ್ಟಶಿಲ್ಪಕಲಾ ಶಿಬಿರದಲ್ಲಿ ಭಾಗವಹಿಸಿ ತಮ್ಮ ಶಿಲ್ಪಕಲಾ ಕೃತಿಗಳನ್ನು ಪ್ರದರ್ಶಿಸಿ ಪ್ರಶಂಸೆಗೆ ಒಳಗಾಗಿದ್ದಾರೆ. ತಮ್ಮ ಶಿಲ್ಪಕಲಾ ಸಾಧನೆಗೆ ಸಹಕರಿಸಿದ ನಾಡಿನ ಶಿಲ್ಪಕಲಾವಿದರ, ಶಿಷ್ಯರ ಸಹಕಾರವನ್ನು ಸ್ಮರಿಸುತ್ತಾರೆ.

ಕಾಳಪ್ಪ ಅವರ ಸಂಪರ್ಕ ಸಂಖ್ಯೆ; 9945782167, ಮಲ್ಲಿಕಾರ್ಜುನ ಬಡಿಗೇರ-9380023096

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು