ಕಣ್ಮನ ಸೆಳೆಯುತ್ತಿರುವ ಕಲಾಕೃತಿಗಳು..!

7
ಭಾರತೀಯ ಸಂಸ್ಕೃತಿ ಉತ್ಸವದ ಅಂಗವಾಗಿ ಜನಪರ ಶಿಲಾ ಹಾಗೂ ಸಿಮೆಂಟ್‌ ಶಿಲ್ಪ ಶಿಬಿರ

ಕಣ್ಮನ ಸೆಳೆಯುತ್ತಿರುವ ಕಲಾಕೃತಿಗಳು..!

Published:
Updated:
Deccan Herald

ವಿಜಯಪುರ: ಶಿಲ್ಪಕಲಾ ಅಕಾಡೆಮಿ ಹಾಗೂ ಭಾರತ ವಿಕಾಸ ಸಂಗಮದ ಸಹಯೋಗದಲ್ಲಿ ಏರ್ಪಡಿಸಿರುವ, ಜನಪರ ಶಿಲಾ ಹಾಗೂ ಸಿಮೆಂಟ್‌ ಶಿಲ್ಪ ಕಲಾ ಶಿಬಿರದಲ್ಲಿ ಸಿದ್ಧಗೊಳ್ಳುತ್ತಿರುವ ಕಲಾಕೃತಿಗಳು, ಪೂರ್ಣಗೊಳ್ಳುವ ಮೊದಲೇ ನೋಡುಗರ ಕಣ್ಮನ ಸೆಳೆಯುತ್ತಿವೆ.

ವಿಜಯಪುರ ತಾಲ್ಲೂಕಿನ ಕಗ್ಗೋಡ ಗ್ರಾಮದ ರಾಮನಗೌಡ ಬಾಪುಗೌಡ ಪಾಟೀಲ (ಯತ್ನಾಳ) ಗೋರಕ್ಷಾ ಕೇಂದ್ರದ ಆವರಣದಲ್ಲಿ ಇದೇ 24ರಿಂದ 31ರವರೆಗೆ ನಡೆಯುವ ಭಾರತೀಯ ಸಂಸ್ಕೃತಿ ಉತ್ಸವಕ್ಕೆ ಸಿಮೆಂಟ್‌ ಹಾಗೂ ಕಲ್ಲಿನಲ್ಲಿ ಅರಳುತ್ತಿರುವ ಬಗೆ ಬಗೆಯ ಕಲಾಕೃತಿಗಳು ಹೆಚ್ಚಿನ ಮೆರುಗು ನೀಡಲಿವೆ.

‘ಶಿಲ್ಪಕಲಾ ಅಕಾಡೆಮಿ ವತಿಯಿಂದ ಆಯೋಜಿಸಿದ ಶಿಬಿರದಲ್ಲಿ ಅವಕಾಶ ಸಿಕ್ಕಿರುವುದಕ್ಕೆ ತುಂಬಾ ಖುಷಿಯಾಗಿದೆ. ದೇಶದ ವಿವಿಧೆಡೆಯಿಂದ ಉತ್ಸವಕ್ಕೆ ಲಕ್ಷಾಂತರ ಜನರು ಬರಲಿದ್ದು, ಪ್ರತಿಯೊಬ್ಬ ಕಲಾವಿದನ ಶ್ರಮಕ್ಕೆ ಪ್ರತಿಫಲ ಹಾಗೂ ಪ್ರೋತ್ಸಾಹ ದೊರೆಯಲಿದೆ’ ಎನ್ನುತ್ತಾರೆ ಕಲ್ಲಿನಲ್ಲಿ ಭಾರತೀಯ ಸಾಂಸ್ಕೃತಿಕ ಉತ್ಸವದ ಲಾಂಛನ ಕೆತ್ತಿರುವ ಕಲಾವಿದ ಗಂಗಾಧರ ಮಾಯಾಚಾರಿ.

‘ಇದೇ 3ರಿಂದ ಕಲಾಕೃತಿ ತಯಾರಿಕೆ ಆರಂಭಗೊಂಡಿದ್ದು, 17ಕ್ಕೆ ಪೂರ್ಣಗೊಳ್ಳಲಿದೆ. ವಿಜಯಪುರ, ಕಲಬುರ್ಗಿ, ಬಾಗಲಕೋಟೆ, ಚಿಕ್ಕಮಗಳೂರು, ಬಳ್ಳಾರಿ, ಬೆಳಗಾವಿ ಜಿಲ್ಲೆಗಳಿಂದ ತಲಾ 10 ಜನರು ಹಿರಿಯ ಕಲಾವಿದರು ಹಾಗೂ ಸಹಾಯಕರು ಸೇರಿ ಒಟ್ಟು 20 ಜನ ಕಲಾಕಾರರು ಪಾಲ್ಗೊಂಡಿದ್ದಾರೆ. ಇತರೆ ಶಿಬಿರಗಳಿಗಿಂತ ಇದು ವಿಶೇಷವಾಗಿದೆ. ಅದಕ್ಕೆ ತಕ್ಕಂತೆ ಮೂರ್ತಿ ತಯಾರಿಸುತ್ತಿದ್ದಾರೆ’ ಎಂದು ಶಿಬಿರ ಸಂಘಟಕ ಕಲಾವಿದ ಎಂ.ಕೆ.ಪತ್ತಾರ ತಿಳಿಸಿದರು.

‘ಲಕ್ಷ್ಮೀ, ಸರಸ್ವತಿ, ನಂದಿ, ಗೌತಮ ಬುದ್ಧ, ಭಾರತೀಯ ಸಂಸ್ಕೃತಿ ಉತ್ಸವ ಲಾಂಛನ, ಗಣಪತಿ, ಮಾರುತಿ ಮೂರ್ತಿಗಳನ್ನು ಕಲ್ಲಿನಲ್ಲಿ ಹಾಗೂ ವಿವಿಧ ತಳಿಯ ಆಕಳು, ಸಿದ್ಧರಾಮೇಶ್ವರ ದನ ಕಾಯುತ್ತಿರುವುದು, ಕಾವೇರಿ ವಿಗ್ರಹ, ರೈತ ಮಹಿಳೆ, ರೈತ ಮೂರ್ತಿಗಳನ್ನು ಸಿಮೆಂಟ್‌ನಲ್ಲಿ ತಯಾರಿಕೆ ಭರದಿಂದ ನಡೆಯುತ್ತಿದೆ. ಮೂರ್ತಿ ತಯಾರಿಕೆಗೆ ಮೈಸೂರಿನಿಂದ ಎರಡು ಅಡಿಯ ಕಲ್ಲುಗಳನ್ನು ತರಲಾಗಿದೆ. ಉತ್ಸವ ಮುಗಿದ ಮೇಲೆ ಮೂರ್ತಿಗಳನ್ನು ಮ್ಯೂಸಿಯಂನಲ್ಲಿ ಇಡಲಾಗುತ್ತದೆ’ ಎಂದು ಅವರು ಹೇಳಿದರು.

‘ಅಂತರರಾಷ್ಟ್ರೀಯ ಮಟ್ಟದ ಭಾರತೀಯ ಸಂಸ್ಕೃತಿ ಉತ್ಸವಕ್ಕೆ ತಮ್ಮ ಅಲ್ಪ ಕಾಣಿಕೆ ಸಲ್ಲಿಸಲು ಹಾಗೂ ಲಕ್ಷಾಂತರ ಜನರು ಸೇರುವ ನಿರೀಕ್ಷೆ ಇರುವುದರಿಂದ ಕಲಾವಿದರು ಬೆಳಿಗ್ಗೆ 7ರಿಂದ ರಾತ್ರಿ 12ರವರೆಗೆ ನಿರಂತರವಾಗಿ ಖುಷಿಯಿಂದ ಮೂರ್ತಿ ತಯಾರಿಕೆಯಲ್ಲಿ ತೊಡಗಿದ್ದಾರೆ. ಭಾರತಿಯ ವಿಕಾಸ ಸಂಗಮ ಮೂರ್ತಿ ತಯಾರಿಕೆಗೆ ಅವಶ್ಯವಿರುವ ಸಲಕರಣೆಗಳನ್ನು ಕಲ್ಪಿಸಿದ್ದು, ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಹಿರಿಯ ಕಲಾವಿದರಿಗೆ ₹ 35000, ಸಹಾಯಕರಿಗೆ ₹ 20000 ಗೌರವ ಧನ ನೀಡುತ್ತಿದೆ’ ಎಂದು ಅಕಾಡೆಮಿ ಸದಸ್ಯ ವಿಠ್ಠಲ ಬಡಿಗೇರ ತಿಳಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !