ಉತ್ಖನನದಲ್ಲಿ ಸಿಕ್ಕ ಮನುಷ್ಯರ ಕಥೆ

ಗುರುವಾರ , ಏಪ್ರಿಲ್ 25, 2019
27 °C

ಉತ್ಖನನದಲ್ಲಿ ಸಿಕ್ಕ ಮನುಷ್ಯರ ಕಥೆ

Published:
Updated:
Prajavani

ಅಗೆದಷ್ಟೂ ನಕ್ಷತ್ರ

ಕಾದಂಬರಿ

ಲೇ: ಸುಮಂಗಲಾ

ಪುಟ 192

ಬೆಲೆ 160 ರೂಪಾಯಿ

ಪ್ರ: ಛಂದ ಪುಸ್ತಕ, ಬೆಂಗಳೂರು

‘ಅಗೆದಷ್ಟೂ ನಕ್ಷತ್ರ’ ಭೂಮಿಯ ಜೊತೆಗಿನ ಮನುಷ್ಯನ ಅನುಬಂಧವನ್ನು ಕುರಿತು ಆತ್ಮದ ಭಾಷೆಯಲ್ಲಿ ಮಾತನಾಡುವ ಅಪರೂಪದ ಕಾದಂಬರಿ. ಕಥಾನಾಯಕ ಮಹೇಶನದ್ದು ಭೂಮಿ ಅಗೆಯುವ ಕೆಲಸ, ಅರ್ಥಾತ್‌ ಭೂಗರ್ಭಶಾಸ್ತ್ರಜ್ಞ. ಬರಡುಭೂಮಿಯ ಉತ್ಖನನದಲ್ಲಿ ಸಹಸ್ರಾರು ವರ್ಷಗಳ ಹಿಂದಿನ ಮನುಷ್ಯ ರೋಮಾಂಚನಗಳನ್ನು ಹುಡುಕುವ ಹುಕಿಯ ಹುಡುಗ. ಈತನಿಗೊಬ್ಬ ಅಪ್ಪನಂತಹ ಆಪ್ತ ಪ್ರೊಫೆಸರ್‌. ಆತ ಗೈಡ್‌ ಮಾತ್ರವಲ್ಲ ಹಿರಿಯ ಸ್ನೇಹಿತನೂ ಹೌದು. ಮಹೇಶನ ಸುತ್ತ ಇಬ್ಬರು ಹುಡುಗಿಯರು– ಅನೂ ಮತ್ತು ನೀತಾ. ಪತ್ನಿ ತೀರಿದ ಬಳಿಕ ಪ್ರೊಫೆಸರ್‌ಗೆ ಆತ್ಮೀಯರಾದ ಜಲಜ ಮೇಡಂ, ಮನೆಕೆಲಸದ ಸೀತಮ್ಮ, ಮದುವೆಯೇ ಆಗದೆ, ಕುಟುಂಬದ ಸರ್ವಸದಸ್ಯರ ಸಂಸಾರದ ಸೇವೆಯಲ್ಲೇ ಸಾರ್ಥಕ್ಯ ಕಂಡ ಪದ್ದಜ್ಜಿ, ಮದುವೆಯಾಗಿ ಎರಡು ತಿಂಗಳಾದರೂ ಗಂಡನ ಸುಖ ಕಾಣದೆ ವಿಧವೆಯಾದ ರಾಜಿ, ಅಪ್ಪ, ಅಮ್ಮ, ಅಣ್ಣ– ಹೀಗೆ ಇನ್ನೊಂದಿಷ್ಟು ಪಾತ್ರಗಳು. ಪರಸ್ಪರ ಪಾತ್ರಗಳ ನಡುವಣ ಆಕರ್ಷಣೆ– ವಿಕರ್ಷಣೆಗಳು ಸಂಬಂಧಗಳನ್ನು ಶೋಧಿಸುತ್ತಾ ಕಾದಂಬರಿ ಮುಂದುವರಿಯುತ್ತದೆ.

ಇದಿಷ್ಟೇ ಆಗಿದ್ದರೆ ಕಾದಂಬರಿ ಹತ್ತರಲ್ಲಿ ಹನ್ನೊಂದಾಗಿಬಿಡುತ್ತಿತ್ತು. ಕಾದಂಬರಿಯ ನಿಜವಾದ ಉತ್ಖನನ ಆರಂಭವಾಗುವುದು ಮಂಡ್ಯ ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಐವರು ರೈತ ಪಾತ್ರಗಳ ಪ್ರವೇಶದೊಂದಿಗೆ. ಭೂಮಿತಾಯಿಯ ಮುನಿಸಿನೊಂದಿಗೆ ಸಾಲದ ಶೂಲಕ್ಕೆ ಸಿಕ್ಕು ಆತ್ಮಹತ್ಯೆ ಮಾಡಿಕೊಂಡ ರೈತರ ಪತ್ನಿಯರು ಮತ್ತು ಮಕ್ಕಳ ಜೊತೆಗಿನ ಮುಖಾಮುಖಿಯಲ್ಲಿ ನೀತೂ ಮಾಡಿಕೊಂಡ ಟಿಪ್ಪಣಿ ಇಡೀ ಕಾದಂಬರಿಯ ಬಂಧಕ್ಕೆ ಹೊಸ ಸ್ಪರ್ಶವನ್ನು ನೀಡುತ್ತದೆ.

ಬರಡುಭೂಮಿಯ ಒಣಶೋಧದಲ್ಲಿ ಮುಗಿದು ಹೋಗಬಹುದಾಗಿದ್ದ ಕಾದಂಬರಿ, ನಾಗರಿಕತೆ ಮತ್ತು ಮನುಷ್ಯತ್ವದ ನಡುವಣ ಜೀವಸ್ಪರ್ಶದ ಹೊಸಮುಖವನ್ನು ತಡಕಾಡುತ್ತದೆ. ಈ ಎಲ್ಲ ಪಾತ್ರಗಳು ಎಳ್ಳಷ್ಟೂ ಅಳ್ಳಕವಿಲ್ಲದಂತೆ ಕಾದಂಬರಿಯ ಬಂಧದಲ್ಲಿ ಒಂದಾಗುವ ಪರಿ, ಸುಮಂಗಲಾ ಅವರ ಕಥಾಕುಶಲತೆಗೆ ಕೈಗನ್ನಡಿಯಾಗಿದೆ. 

ನಾಗರಿಕತೆ ಹುಟ್ಟುವುದಕ್ಕೂ ಮುನ್ನವೇ ಈ ಭೂಮಿ– ಮನುಷ್ಯನ ಅನುಬಂಧ ಹುಟ್ಟಿದೆ. ವಿಜ್ಞಾನಿಗಳ ಪ್ರಕಾರ, ಭೂಮಿ ಹುಟ್ಟಿ ಸುಮಾರು 456 ಕೋಟಿ ವರ್ಷಗಳಾಗಿವೆಯಂತೆ. ಹುಟ್ಟಿದಾಗ ನಿಸರ್ಗದ ಜೊತೆಗೆ ಬದುಕಿದ್ದ ಮನುಷ್ಯ, ಮುಂದುವರಿದು ನಾಗರಿಕನಾಗುತ್ತಾ ಬೆಳೆದ. ಈ ನಾಗರಿಕತೆ ಎನ್ನುವುದು ನಿಜಕ್ಕೂ ಏನು? ಪ್ರಕೃತಿ ನೀಡಿರುವ ಸಂಪನ್ಮೂಲಗಳನ್ನು ಮಿತಿಮೀರಿ ಬಳಸುವ ಮನುಷ್ಯ, ಭೂಮಿಯನ್ನು ಎಷ್ಟರಮಟ್ಟಿಗೆ ಅರ್ಥೈಸಿಕೊಂಡಿದ್ದಾನೆ? ಬದುಕಿಗೆ ಸಹಜವಾಗಿದ್ದ ನೆಲ- ಜಲದ ಅರಿವು ಅನಂತಕಾಲದಲ್ಲಿ ಹೂತುಹೋದದ್ದು ಎಲ್ಲಿ? ಇವೇ ಮುಂತಾದ ಹಲವು ಪ್ರಶ್ನೆಗಳನ್ನು ವರ್ತಮಾನದ ಪಾತ್ರಗಳ ಮೂಲಕ ನಮ್ಮೆದುರು ಮಂಡಿಸುತ್ತಲೇ ಭೂಮಿಯನ್ನು ನೈಸರ್ಗಿಕವಾಗಿ ಪ್ರೀತಿಸಿ ಎಂದು ತಿಳಿವಳಿಕೆಗೆ ಹಚ್ಚುವ ಕೃತಿಯಿದು.

4000 ವರ್ಷಗಳ ಹಿಂದಿನ ನಾಗರಿಕತೆಯನ್ನು ಶೋಧಿಸಲು ಉತ್ಖನನ ನಡೆದ ಧೊಲಾವೀರಾ, ಲೋಥೆಲ್‌ ಮತ್ತು ರೈತರು ಆತ್ಮಹತ್ಯೆ ಮಾಡಿಕೊಂಡ ಮಂಡ್ಯದ ಬಳಿಯ ಹಳ್ಳಿಗಳಲ್ಲಿ ಓಡಾಡಿರುವ ಲೇಖಕಿ, ಕಂಡುಕೊಂಡ ಭೂತಾಯಿಯ ಕಟುಸತ್ಯಗಳನ್ನು ಕಥನ ರೂಪದಲ್ಲಿ ನೀಡಿದ್ದರೂ ವಾಸ್ತವದ ಕ್ರೌರ್ಯ ಮನಸ್ಸನ್ನು ತಟ್ಟುವಾಗ ಓದುಗ ಅಲ್ಲಲ್ಲಿ ಹನಿಗಣ್ಣಾಗುತ್ತಾನೆ. ಕಾದಂಬರಿಯಲ್ಲಿ ಪಾತ್ರಗಳು ಮಾತನಾಡುವ ಉತ್ತರ ಕನ್ನಡದ ಹವ್ಯಕ, ಧಾರವಾಡದ ಧಾಡಸೀ ಮತ್ತು ಮಂಡ್ಯದ ದೇಸೀ ಭಾಷೆ– ಈ ಕಾದಂಬರಿಗೆ ಕನ್ನಡತನದ ಹೊಸ ಚೌಕಟ್ಟನ್ನು ಕಲ್ಪಿಸಿದೆ. ಕಾದಂಬರಿಯಲ್ಲಿ ಮಿಂಚಂಚೆಯ ಟಿಪ್ಪಣಿಗಳಿಗೆ ಬಳಸಿರುವ ಫಾಂಟ್‌ಗಳು ಓದನ್ನು ನಿರಾತಂಕವೂ, ಆಪ್ತವೂ ಆಗಿಸಿವೆ. ಪುರಾತನ ನಾಗರಿಕತೆಯ ಶೋಧವನ್ನೇ ನೆಪವಾಗಿಟ್ಟುಕೊಂಡು ಏಕಕಾಲಕ್ಕೆ ಗಂಡು– ಹೆಣ್ಣು ಸಂಬಂಧಗಳ ಶೋಧವನ್ನೂ ನಡೆಸುವ ಕಥೆಗಾರ್ತಿ ಪಾತ್ರಗಳ ಮೂಲಕ ಹಲವೆಡೆ ಓದುಗನ ಒಳಗಣ್ಣು ತೆರೆಸುವ ಪರಿ ವಿಶಿಷ್ಟ. ‘ಅಂವ ಹೆಂಗೆ ಬೇಕೋ ಹಂಗ ತನ್ನ ವಾದ ಮಂಡಿಸ್ತಾನ. ಆ ಮಾತು ಬ್ಯಾರೆ ಬಿಡು. ಹರಪ್ಪಾ, ಮೊಹೆಂಜಾದಾರೋ ಪಾಕಿಸ್ತಾನಕ್ಕೆ ಸೇರಿದಾಗಿಂದ, ಇಲ್ಲೇನಾರ ಜರಾ ಸಿಕ್ಕರ ಸಾಕು, ನಮ್ಮ ನಾಕ್‌ ಸಾವಿರ ವರ್ಷದ ಸಂಸ್ಕೃತಿ ಅಂತ ಶುರು ಹಚ್ಚತಾರ. ವಾಸ್ತವ ಏನದ ಅದನ್ನಷ್ಟೇ ನೋಡೂಣಪ್ಪ ಅಂದ್ರ ಕೇಳಂಗಿಲ್ಲ’ ಎನ್ನುವ ಪ್ರೊಫೆಸರ್‌ ಮಾತು ಕಾದಂಬರಿಗೆ ಹೊಸ ಅರ್ಥವ್ಯಾಪ್ತಿಯನ್ನು ಒದಗಿಸುತ್ತದೆ.    

 ‘ವೇದಾಂತ ಹೇಳೂದು ಭಾಳ ಸರಳ ಅದ ನಿಜ. ಆದರ ಯಾತನೀಲಿದ್ದಾಗ ಒಂಟಿತನ ಕಾಡಿದಾಗ ಯಾವ ವೇದಾಂತನೂ ಕೈ ಹಿಡಿಯಂಗಿಲ್ಲ. ಮತ್ತ ಮನುಷ್ಯಾರ ಜತಿಗಿ ಬೇಕಾಗತಾರ’ ಎನ್ನುವ ಪ್ರೊಫೆಸರ್‌ರ ವ್ಯಕ್ತಿಗತ ಸಂಬಂಧ ಕುರಿತ ಮಾತು ಈ ಕಾದಂಬರಿಯ ಜೀವದ್ರವ್ಯವೂ ಹೌದು.

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !