ಅಮೂರ್ತ ಕಲಾಕೃತಿಗಳ ಅನಾವರಣ

ಶುಕ್ರವಾರ, ಮೇ 24, 2019
26 °C

ಅಮೂರ್ತ ಕಲಾಕೃತಿಗಳ ಅನಾವರಣ

Published:
Updated:
Prajavani

ಪ್ರತಿಷ್ಠಿತ ಕಲಾಗ್ಯಾಲರಿಗಳಲ್ಲಿ ಮುಂಬೈನ ಜಹಂಗೀರ್ ಆರ್ಟ್ ಗ್ಯಾಲರಿಗೆ ಅಗ್ರಸ್ಥಾನ. ಜೀವಿತಾವಧಿಯಲ್ಲಿ ಒಮ್ಮೆಯಾದರೂ ಇಲ್ಲಿ ಚಿತ್ರಕಲಾ ಪ್ರದರ್ಶನ ಮಾಡಬೆಕೆಂಬುದು ಎಲ್ಲಾ ಕಲಾವಿದರ ಹೆಬ್ಬಯಕೆಯಾಗಿರುತ್ತದೆ. ಈ ಕಲಾಗ್ಯಾಲರಿಗೆ ಕಲಾವಿದರ ಕಾಶಿ, ಕಲಾವಿದರ ಮೆಕ್ಕಾ ಎನ್ನುತ್ತಾರೆ. ಏ.3ರಿಂದ ಮೇ 6ರ ವರೆಗೆ ನಡೆಯುತ್ತಿರುವ ಸಮೂಹ ಕಲಾಪ್ರದರ್ಶದಲ್ಲಿ ನಗರದ ವಿಠ್ಠಲರಡ್ಡಿ ಚುಳಕಿ ಅವರ ಕಲಾಕೃತಿಗಳು ಪ್ರದರ್ಶನಗೊಂಡಿವೆ.

ವಿಠ್ಠಲರಡ್ಡಿ ಚುಳಕಿಯವರು ಮೂಲತಃ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಕಗದಾಳದವರು. ತಾಯಿ ಪದ್ಮಾವತಿ, ತಂದೆ ಫಕೀರಡ್ಡಿ ಚುಳಕಿ, ಅಣ್ಣ, ಅತ್ತಿಗೆ ಎಲ್ಲರೂ ಶಿಕ್ಷಕರು. ಅವರ ಮಾರ್ಗದರ್ಶನದಂತೆ ತಾನು ಶಿಕ್ಷಕನಾಗಬೇಕೆಂಬ ಅಭಿಲಾಷೆಯೊಂದಿಗೆ ಹುಬ್ಬಳ್ಳಿಯ ವಿಜಯ ಮಹಾಂತೇಶ ಲಲಿತ ಕಲಾಶಾಲೆ ಹಾಗೂ ಧಾರವಾಡದ ಸರ್ಕಾರಿ ಕಲಾಶಾಲೆಯಲ್ಲಿ ಡ್ರಾಯಿಂಗ್ ಅಂಡ್ ಪೇಯಿಂಟಿಂಗ್ ಮತ್ತು ಆರ್ಟ್ ಮಾಸ್ಟರ್ ಡಿಪ್ಲೊಮಾ ಮುಗಿಸಿ, ಕನ್ನಡ ವಿ.ವಿ.ಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಉದ್ಯೋಗ ಹರಸಿ ಮೈಸೂರಿಗೆ ಬಂದು 25 ವರ್ಷಗಳಿಂದ ನಗರದ ಶ್ರೀಕಲಾನಿಕೇತನ ಸ್ಕೂಲ್ ಆಫ್ ಆರ್ಟ್‌ನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೈಸೂರಿನ ಕಲಾವಿದರ ಒಡನಾಟ ಮತ್ತು ಕಲಾಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಕಲಿಸುವ ಬೋಧನಾ ಕ್ರಮದಿಂದಾಗಿ ತಾನು ಸಹ ಉತ್ತಮ ಕಲಾವಿದನಾಗಲು, ನಿರಂತರವಾಗಿ ಚಿತ್ರಕಲಾರಚನೆಯಲ್ಲಿ ತೊಡಗಲು ನನ್ನ ವೃತ್ತಿ ತುಂಬ ಸಹಕಾರಿಯಾಗಿದೆ ಎನ್ನುವ ವಿಠ್ಠಲರಡ್ಡಿ ಚುಳಕಿಯವರು ಮೈಸೂರು ಸಾಂಪ್ರದಾಯಿಕ ಕಲಾಶೈಲಿ ಮತ್ತು ಸಮಕಾಲೀನ ಚಿತ್ರಕಲೆಯನ್ನು ಮೈಗೂಡಿಸಿಕೊಂಡಿದ್ದಾರೆ.

ನೈಜತೆಯಲ್ಲಿ ತಂತ್ರಗಾರಿಕೆಯನ್ನು ಹೊರಹೊಮ್ಮಿಸುವ ಪ್ರಯತ್ನದ ಜೊತೆಗೆ, ಸ್ಥಳಾವಕಾಶದ ಸದುಪಯೋಗ, ಅದರ ಆಳ, ಅಗಲ, ಎತ್ತರದ ಅಂಶಗಳನ್ನು ಕಲಾಕೃತಿಯಲ್ಲಿ ಬಳಸಿ ಅಮೂರ್ತ ರೂಪಕ್ಕೆ ತರುವಲ್ಲಿ ಶ್ರಮಿಸುತ್ತಿರುವುದು ನಿಜ, ಆದರೆ ಅಮೂರ್ತ ರೂಪದ ಕಲಾಕೃತಿಗಳು ನಿರ್ದಿಷ್ಟತೆಯನ್ನು ಹೊಂದಿ ಆಕಸ್ಮಿಕವೆಂಬಂತೆ ಸೃಜನಶೀಲ ಸಂವೇದನೆಗೆ ಒತ್ತುಕೊಟ್ಟು ಅರೆ ಮಾನವಾಕೃತಿಗಳನ್ನು ಪ್ರಾಕೃತಿಕವಾದ ಪ್ರಾಣಿ ಪಕ್ಷಿ, ಗಿಡ ಮರ, ಹೂಬಳ್ಳಿ, ಜಲಚರಗಳನ್ನು ಸಂಯೋಜಿಸಿಕೊಂಡು ಗುಣಮಟ್ಟದ ಮೂರ್ತರೂಪವು ಕ್ಯಾನ್ವಾಸ್‌ನಲ್ಲಿ ಆನಾವರಣಗೊಳ್ಳುತ್ತಿರುವುದು ವಿಠ್ಠಲರಡ್ಡಿ ಚುಳಕಿಯವರ ಕಲಾನೈಪುಣ್ಯತೆಯನ್ನು ತೋರಿಸುತ್ತದೆ.

ಈ ಅಂಶಗಳನ್ನೆ ಕರಗತ ಮಾಡಿಕೊಂಡು ನಿರ್ಮಿಸಿದ ಕಲಾಕೃತಿಗಳನ್ನು ಈಗ ಮುಂಬೈನ ಜಹಂಗೀರ್ ಆರ್ಟ್‌ ಗ್ಯಾಲರಿಯಲ್ಲಿ ಪ್ರದರ್ಶಿಸಲಾಗಿದೆ. ವಿಠ್ಠಲರಡ್ಡಿ ಚುಳಕಿ ಅವರೊಂದಿಗೆ ಹಾಸನದ ಬಿ.ಎಸ್.ದೇಸಾಯಿ, ವಿಜಾಪುರದ ಪಿ.ಎಸ್.ಕಡೆಮನಿ, ಬೆಂಗಳೂರಿನ ವೇಣುಗೋಪಾಲ ಹಾಗೂ ಮೈಸೂರಿನ ವೀರಣ್ಣ ಅರ್ಕಸಾಲಿಯವರು ಸೇರಿ ಸಮೂಹ ಕಲಾ ಪ್ರದರ್ಶನದಲ್ಲಿ ಪಾಲ್ಗೊಂಡಿರುವುದು ವಿಶೇಷವಾಗಿದೆ.

ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ಹಾಸನ, ಹಂಪಿ, ಬೆಂಗಳೂರು, ಮೈಸೂರಿನಲ್ಲಿ ಗುಂಪು ಮತ್ತು ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಏರ್ಪಡಿಸಿದ್ದಾರೆ. ಮೈಸೂರಿನ ಶ್ರೀಕಲಾನಿಕೇತನ ಕಲಾಶಾಲೆಯಲ್ಲಿ ನಡೆದ ಮೈಸೂರು ಸಾಂಪ್ರದಾಯಿಕ ಶೈಲಿ, ಕಿನ್ನಾಳ ಕಲಾಶೈಲಿ, ಕರಾವಳಿಯ ಕಾವಿ ಕಲಾಶೈಲಿ, ಮತ್ತು ರಾಜ್ಯ ಮಟ್ಟದ ಶಿಲ್ಪಕಲಾಶಿಬಿರದ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ಕೋಲ್ಕತ್ತ, ದೆಹಲಿ, ಬೆಂಗಳೂರು, ಚೆನ್ನೈಗಳಲ್ಲಿ ನಡೆದ ಕಲಾ ಮೇಳಗಳಲ್ಲಿ ಭಾಗವಹಿಸಿದ್ದಾರೆ.

ಕುಂದಾಪುರದ ಶಿವರಾಮ ಕಾರಂತರ ಸ್ಮಾರಕ ಕಲಾಶಿಬಿರ, ಕೊಲ್ಲಾಪುರದ ಭಾವಚಿತ್ರ ಶಿಬಿರ, ನಾಗಪುರದಲ್ಲಿ ನಡೆದ ಮೈಸೂರು ಸಾಂಪ್ರದಾಯಿಕ ಶೈಲಿ ಶಿಬಿರ, ಮಸ್ಸೂರಿ (ಡೆಹ್ರಾಡೂನ್), ತಂಜಾವೂರು, ಎಂ.ಎಂ.ಕೆ. ಕಾಲೇಜು ಕಲ್ಬುರ್ಗಿ, ನಿರಂತರ ಕಲಾಶಾಲೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಲಲಿತಕಲಾ ಅಕಾಡೆಮಿ, ಪರಂಪರೆ ಇಲಾಖೆ, ಪುರಾತತ್ವ ಪ್ರಾಚ್ಯವಸ್ತು ಸಂಗ್ರಹಾಲಯ, ಬೆಂಗಳೂರು, ಮೈಸೂರು, ಮೂಡುಬಿದರೆ, ಬಿ.ಆರ್. ಹಿಲ್ಸ್‌ನಲ್ಲಿ ನಡೆದ ರಾಜ್ಯ, ರಾಷ್ಟ್ರಮಟ್ಟದ ಹಲವು ಕಲಾಶಿಬಿರಗಳಲ್ಲಿ ಭಾಗವಹಿಸಿ ಚಿತ್ರ ರಚಿಸಿದ್ದಾರೆ.

1999ರಲ್ಲಿ ಜಾರ್ಖಂಡ್‌ನ ಕಲಾಸ್ಪರ್ಧೆಯಲ್ಲಿ ಚಿನ್ನದ ಪದಕ, ಬಿಸಿಎಂ ಇಲಾಖೆಯ ಕಲಾಪ್ರಶಸ್ತಿ, ಕ್ಯಾಮಿಲಿನ್ ಅವಾರ್ಡ್, 2005ರಲ್ಲಿ ಲಲಿತಕಲಾ ಅಕಾಡೆಮಿ ಪ್ರಶಸ್ತಿ, 7ನೇ ಕಲಾಮೇಳ ಪ್ರಶಸ್ತಿ, ನಾಲ್ಕು ಬಾರಿ ದಸರಾ ಪ್ರಶಸ್ತಿಯು ಲಭಿಸಿದೆ. ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಪತ್ನಿ ಜಯಶ್ರೀ ಚುಳಕಿ ಸಹ ಕಲಾವಿದರಾಗಿದ್ದು, ಇಬ್ಬರು ಮಕ್ಕಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !