ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪ್ಪನ ನೆನಪು

Last Updated 22 ಡಿಸೆಂಬರ್ 2018, 19:44 IST
ಅಕ್ಷರ ಗಾತ್ರ

ನನ್ನ ತಂದೆಯವರು ಕಾರ್ಖಾನೆಯೊಂದರಲ್ಲಿ ನಗದು ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಕಾಲಘಟ್ಟ. ನಾವು ಮೂರೂ ಮಕ್ಕಳು ಇನ್ನೂ ಚಿಕ್ಕವರು. ಅಪ್ಪ ಬರುವುದರೊಳಗೆ ಮಲಗಿದ್ದೆವು. ಅಮ್ಮನ ಮಾತಿನಲ್ಲಿ ಹೇಳಬೇಕೆಂದರೆ ಓವರ್ ಟೈಮ್ ಮುಗಿಸಿ ರಾತ್ರಿ 10.30ಕ್ಕೆ ಮನೆಗೆ ಬಂದಿದ್ದಾರೆ. ಆದರೆ ಏನೋ ಆತಂಕ.

ಸಂಬಳ ಬಟವಾಡೆಯ ನಂತರ ನೂರು ರೂಪಾಯಿ ವ್ಯತ್ಯಾಸ! ರಾತ್ರಿ ಅದೆಷ್ಟು ಹೊತ್ತು ಅದರ ಬಗ್ಗೆ ಯೋಚಿಸಿದ್ದರೋ ತಿಳಿಯದು. ದುಡ್ಡು ಕೊಡಬೇಕಾದರೆ ಯಾರಿಗೋ ಜಾಸ್ತಿ ಹೋಗಿದೆ. ಎಷ್ಟು ಪ್ರಯತ್ನಿಸಿದರೂ ಯಾರಿಗೆ ಹೆಚ್ಚು ಕೊಟ್ಟೆ ಎಂದು ತಿಳಿಯದೆ ಕೊನೆಗೆ ತಮ್ಮಲ್ಲಿದ್ದ ದುಡ್ಡನ್ನು

ಹಾಕಿ ಅಕೌಂಟ್ ಕ್ಲೋಸ್ ಮಾಡಿದ್ದಾರೆ.

ಈ ಅಚಾತುರ್ಯ ಅವರ ತಲೆ ತಿನ್ನುತ್ತಲೇ ಇತ್ತು. ಕೊನೆಗೆ ನೆನಪಾದದ್ದು ಒಬ್ಬ ಕಾರ್ಮಿಕ. ಆತ ಬೆಳಗಿನ ಹೊತ್ತು ತನ್ನ ಮನೆಯಿಂದ ಹಾಲನ್ನು ವಾಡಿಕೆ ಮನೆಗಳಿಗೆ ಹಾಕಿ ನಂತರ ಕೆಲಸಕ್ಕೆ ಬರುತ್ತಿದ್ದನೆಂಬ ಮಾಹಿತಿ ಕಲೆಹಾಕಿದ್ದಾರೆ. ಅದಕ್ಕೇ ಬೆಳಕು ಹರಿಯುವ ಮೊದಲೇ ಆತನ ಮನೆಗೆ ಹೋಗಿ ಪರಿಸ್ಥಿತಿ ವಿವರಿಸಿದ್ದಾರೆ.

‘ಒಂದು ವೇಳೆ ಹೆಚ್ಚಿನ ಮೊತ್ತ ಕೈ ಸೇರಿತೆ?’ ಎಂದು ಆತನಿಗೆ ವಿಚಾರಿಸಿದಾಗ, ಆತ ‘ಸ್ವಾಮಿ ನಾನು ಸಂಬಳದ ಪಾಕೀಟು ತೆರೆದೇ ಇಲ್ಲ. ಇದೋ ಬಂದೆ’ ಎಂದು ಸಂಬಳವಿದ್ದ ಪ್ಯಾಕೆಟನ್ನು ಅಪ್ಪನ ಮುಂದೆ ತೆರೆದು ಎಣಿಸಿದರೆ ಏನಾಶ್ಚರ್ಯ! ತನಗೆ ಬರಬೇಕಾದ ಸಂಬಳಕ್ಕಿಂತ ಹೆಚ್ಚಿದೆ! ಸ್ವಾಮಿ ಇದು ನನಗೆ ಸೇರಬೇಕಾದದ್ದಲ್ಲ ಎಂದ ವಿನಮ್ರನಾಗಿ ಹಣ ಮರಳಿಸಿದ್ದಾನೆ. ಅಪ್ಪ ನಿರಾಳವಾಗಿ ಕೃತಜ್ಞತೆ ಸಲ್ಲಿಸಿ ಮನೆಗೆ ಬಂದರು. ಅದಕ್ಕೇ ಹೇಳೋದು ಪ್ರಾಮಾಣಿಕರಿಗೆ ಎಂದು ಮೋಸವಾಗೋಲ್ಲ. ಅಮ್ಮನ ನೀತಿಪಾಠ ಬೇರೆ.

***

ಈ ಘಟನೆ ನಡೆದಾಗ ನಾವು ಬೆಳೆದ ಮಕ್ಕಳು. ಹೈಸ್ಕೂಲ್, ಕಾಲೇಜಿನಲ್ಲಿ ಕಲಿಯುತ್ತಿದ್ದೆವು. ಅಪ್ಪನ ಒಂದು ಸ್ವಭಾವವೆಂದರೆ, ಅಂದಿನ ಖರ್ಚು, ವೆಚ್ಚ ಕಳೆದು ಕೈಯಲ್ಲಿರುವ ಹಣಕ್ಕೆ ತಾಳೆ ಹೊಂದಿಸುತ್ತಿದ್ದುದು ಅವರ ದಿನಚರಿಯ ಒಂದು ಭಾಗ. ಇದಕ್ಕೆಂದು, ಒಂದು ಡೈರಿಯನ್ನು ಇಟ್ಟಿದ್ದರು. ಆಯಾಯ ದಿನಾಂಕಕ್ಕೆ, ಹಿಂದಿನ ದಿನದಿಂದ ಕೈಹಣ, ಖರ್ಚು, ತಾಳೆ ಮಾಡಿ ಕೈಯಲ್ಲುಳಿದಿರಬೇಕಾದ ಹಣ ಲೆಕ್ಕ ಮಾಡಿ ಬೀರುವಿನಲ್ಲಿ ಇಡುತ್ತಿದ್ದರು.

ಯಥಾ ಪ್ರಕಾರ, ಅಂದಿನ ಲೆಕ್ಕಾಚಾರ ಮುಗಿದು ಹಣ ಎಣಿಸುವಾಗ ಇನ್ನೂರು ರೂಪಾಯಿ ಕಡಿಮೆ. ಮತ್ತೊಮ್ಮೆ, ಮಗದೊಮ್ಮೆ ಎಣಿಸಿದರೂ ವ್ಯತ್ಯಾಸ ಹಾಗೇ ಇದೆ. ಹಣ ಇಡುತ್ತಿದ್ದ ಒಳ ಕಪಾಟನ್ನು ಜಾಲಾಡಿದರೂ ಸಿಗಲಿಲ್ಲ. ಅಮ್ಮನನ್ನು ‘ಬೇರೆ ಯಾವುದಾದರೂ ಖರ್ಚು, ವೆಚ್ಚಕ್ಕೆ ಬಳಸಿದೆಯೇ, ಲೆಕ್ಕ ಬಿಟ್ಟು ಹೋಗಿದೆ’ ಎಂದಾಗ ನಕಾರಾತ್ಮಕ ಉತ್ತರ. ಅಪ್ಪನ ಚಡಪಡಿಕೆ ಹೇಳತೀರದು. ಎಪ್ಪತ್ತರ ದಶಕದಲ್ಲಿ ಇನ್ನೂರು ರೂಪಾಯಿ(ಅಪ್ಪನ ಸಂಬಳವೇ 800 ರೂಪಾಯಿ) ಬಲು ದೊಡ್ಡ ಮೊತ್ತ. ಎಷ್ಟು ನೆನಪಿಸಿಕೊಂಡರೂ ಖರ್ಚು ನೆನಪಾಗದು. ಉಳಿದ ಹಣ ಕಡಿಮೆಯಾಗಿರುವುದು ಖಾತ್ರಿಯಾಗಿದೆ.

ತಳಮಳ, ಅಸಹಾಯಕತೆಯು ಕೋಪವಾಗಿ ಮಾರ್ಪಟ್ಟು ಮಕ್ಕಳ ಮೇಲೆ ದನಿಯೇರಿಸಿದರು. ನಾವು ಹೆದರಿ ನಡುಗಿದ್ದೆವು. ‘ಹೋಗಲಿ, ಎಷ್ಟು ಖರ್ಚು ಮಾಡಿದ್ದೀರೋ ಗೊತ್ತಿಲ್ಲ. ಉಳಿದದ್ದಾದರೂ ಕೊಡಿ. ನಿಮ್ಮನ್ನು ಬಯ್ಯೋಲ್ಲ’ ಎಂದು ನಯವಾಗಿ ಹೇಳಿದರು. ಫಲಿತಾಂಶ ಸೊನ್ನೆ. ಮನೆಯಲ್ಲಿ ಉಸಿರುಗಟ್ಟಿದ ವಾತಾವರಣ. ಅಪ್ಪ, ಮಕ್ಕಳ ನಡುವೆ ಮಾತಿಲ್ಲ ಕತೆಯಿಲ್ಲ. ಇದಾದ ಎರಡು ದಿನಕ್ಕೆ ಅಪ್ಪನಿಗೆ ಬೀರುವಿನಲ್ಲಿ ತಮ್ಮ ಬಟ್ಟೆ ಹುಡುಕುವಾಗ ಅಚಾನಕ್ಕಾಗಿ ಕಣ್ಮರೆಯಾಗಿದ್ದ ನೂರರ ಎರಡು ಗರಿಗರಿ ನೋಟುಗಳು ಕಾಣಬೇಕೆ? ಹೌದು, ಅವಾಂತರಕ್ಕೆ ಕಾರಣವಾಗಿದ್ದ ಅದೇ ನೋಟುಗಳು!

ಅಪ್ಪ ನಾಚಿಕೆಯಿಂದ ತಲೆತಗ್ಗಿಸಿದರು. ಅನ್ಯಾಯವಾಗಿ ಮಕ್ಕಳನ್ನು ಬೈದೆನಲ್ಲ ಎಂಬ ಪಶ್ಚಾತ್ತಾಪದ ಸಂಕೇತ. ಅಂದು ಸಂಜೆ ಕೆಲಸದಿಂದ ವಾಪಸಾಗುವಾಗ ಕೈಯಲ್ಲಿ ನಮಗೆ ಅತ್ಯಂತ ಇಷ್ಟವಾಗಿದ್ದ ಚೌಚೌ ಪೊಟ್ಟಣಗಳು. ಹೆಪ್ಪುಗಟ್ಟಿದ್ದ ಮೌನ ಕರಗಿತ್ತು. ಮನೆಯಲ್ಲಿ ವಾತಾವರಣ ತಿಳಿಯಾಯಿತು. ಅಪ್ಪ ಕಾಲವಾಗಿ ಹದಿನಾಲ್ಕು ವರ್ಷಗಳು ಕಳೆದಿವೆ. ಅವರ ಪ್ರಾಮಾಣಿಕ, ಜೀವನಶೈಲಿ ಈಗಲೂ ನಮಗೆ ಆದರ್ಶಪ್ರಾಯ.

ಅದು, ಅಂದಿನ ಕಾಲ- ನೀತಿ ನಿಜಾಯತಿಯ ಕಾಲ. ಇಂದು... ಈ ಪದಗಳು ಮೌಲ್ಯವಿಲ್ಲದ ಸವಕಲು ನಾಣ್ಯಗಳಾಗಿ ಉಳಿದಿವೆಯಷ್ಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT